Homeಕರ್ನಾಟಕಕನ್ನಡದ ಹಿರಿಯ ವಿಮರ್ಶಕ ಜಿ.ಎಚ್.ನಾಯಕ ನಿಧನ

ಕನ್ನಡದ ಹಿರಿಯ ವಿಮರ್ಶಕ ಜಿ.ಎಚ್.ನಾಯಕ ನಿಧನ

- Advertisement -
- Advertisement -

ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕ, ನೇರ ನಿಷ್ಠುರ ಮಾತುಗಳಿಗೆ ಹೆಸರಾದ ಪ್ರೊ. ಗೋವಿಂದರಾಯ ಹಮ್ಮಣ್ಣ ನಾಯಕ (ಜಿ.ಎಚ್.ನಾಯಕ) ಅವರು ಶುಕ್ರವಾರ ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಬಹುಕಾಲದಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಲ್ಲಿದ್ದ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದ ಜಿ.ಎಚ್‌.ನಾಯಕ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿದ್ದಾರೆ.

ಉತ್ತರ ಕನ್ನಡದ ಅಂಕೋಲ ತಾಲ್ಲೂಕಿನ ಸೂರ್ವೆಯಲ್ಲಿ 1935, ಸೆಪ್ಟೆಂಬರ್‌ 18ರಂದು ಜನಿಸಿದ್ದ ಜಿ.ಎಚ್‌.ನಾಯಕ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನಲ್ಲಿಯೇ ನೆಲೆಸಿದ್ದ ಅವರು ಮೈಸೂರು ಸಾಂಸ್ಕೃತಿಕ ಪ್ರಪಂಚ ಮತ್ತು ಪ್ರಗತಿಪರ ಚಳವಳಿಗಳ ಭಾಗವಾಗಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ನಾಯಕರ ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾನಾಯಕ. ಪುತ್ರಿ ದೀಪಾ.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಹುಕಾಲ ಅಧ್ಯಾಪಕರಾಗಿದ್ದ ಅವರು ವಿಮರ್ಶೆ ಜತೆಗೆ ಸಂಪಾದನೆ, ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳನ್ನೂ ರಚಿಸಿದ್ದರು. ‘ಬಾಳು’ ಹೆಸರಲ್ಲಿ ಆತ್ಮಕಥೆಯನ್ನು ಬರೆದಿದ್ದಾರೆ.

ಇದನ್ನೂ ಓದಿರಿ: ಅಂಬೇಡ್ಕರ್‌‌ ನಿಂದನೆ; ಸಿಮ್ಸ್‌ ನಿರ್ದೇಶಕರ ವಿರುದ್ಧ ತನಿಖೆಗೆ ಸಮಿತಿ ರಚನೆ

ಸಮಕಾಲೀನ (1973 ), ಅನಿವಾರ್ಯ (1980), ನಿರಪೇಕ್ಷೆ (1984), ನಿಜದನಿ (1988), ವಿನಯ ವಿಮರ್ಶೆ (1991), ಸಕಾಲಿಕ (1995), ಗುಣ ಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ಕೃತಿ ಸಾಕ್ಷಿ (2006), ಸ್ಥಿತಿ ಪ್ರಜ್ಞೆ (2007), ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009), ಉತ್ತರಾರ್ಧ (2011) ಅವರ ಬಹುಮುಖ್ಯ ಕೃತಿಗಳು.

ಉತ್ತರಾರ್ಧ ಕೃತಿಗೆ 2019ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಪೇಕ್ಷ ವಿಮರ್ಶಾ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ ದೊರೆತಿವೆ. ನಿಜದನಿ ವಿಮರ್ಶಾ ಕೃತಿಗೆ ‘ವಿ.ಎಂ.ಇನಾಂದಾರ ಸ್ಮಾರಕ’ ಪ್ರಶಸ್ತಿ ಜಿ.ಎಚ್‌.ನಾಯಕ ಅವರಿಗೆ ಲಭಿಸಿದೆ.

ಅಡಿಗರ ಗೌರವ ಗ್ರಂಥ ಸಂವೇದನೆ , ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ, ಶತಮಾನದ ಕನ್ನಡ ಸಾಹಿತ್ಯ 1, 2ನೇ ಸಂಪುಟಗಳಿಗೆ ಸಂಪಾದಕರೂ ಆಗಿ ಜಿ.ಎಚ್.ನಾಯಕ ಸೇವೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂತಾಪ ಸೂಚಿಸಿದ್ದು, “ಪ್ರಸಿದ್ಧ ಸಾಹಿತಿ ಪ್ರೊ. ಜಿ.ಎಚ್.ನಾಯಕ್ ಅವರ ಅಗಲಿಕೆ ನನಗೆ ಆಘಾತವನ್ನುಂಟು‌ ಮಾಡಿದೆ. ನನ್ನ ಆತ್ಮೀಯರು ಮತ್ತು ಹಿತಚಿಂತಕರಾಗಿದ್ದ ಜಿ.ಎಚ್.ನಾಯಕ್ ಬರವಣಿಗೆಯ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಹೊಸ ತಲೆಮಾರನ್ನು ಪ್ರಭಾವಿಸಿದವರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ” ಎಂದಿದ್ದಾರೆ.

ಚಿಂತಕರಾದ ಶ್ರೀಪಾದ್ ಭಟ್ ಪ್ರತಿಕ್ರಿಯಿಸಿ, “ಅರವತ್ತರ ದಶಕದ ನವ್ಯ ಕಾಲದ ವಿಮರ್ಶ ವಲಯವು ಲೀವಿಸ್ ಮತ್ತು ಎಂ.ಜಿ.ಕೆ. ನಿಷ್ಠತೆಯಲ್ಲಿ ತನ್ನ ಭಕ್ತಿಯನ್ನು ಪ್ರದರ್ಶಿಸುತ್ತಾ ಪಕ್ಕಾ ಬ್ರಾಹ್ಮಣರ ಒಡ್ಡೋಲಗದಂತಿತ್ತು. ಈ ವಿಪ್ರವೃಂದವು ಬ್ರಾಹ್ಮಣೇತರ ಲೇಖಕ/ಲೇಖಕಿಯರೊಂದಿಗೆ ‘ನೀ ಒಳಗೆ ಬಾ, ಆದರೆ ನಿನ್ನ ಆಸ್ತಿತ್ವವನ್ನು ನಾವು ನಿರ್ಧರಿಸುತ್ತೇವೆ’ ಎಂಬಂತೆ ವರ್ತಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ತಮ್ಮ ಖಚಿತ ನಿಲುವು ಮತ್ತು ಆಳವಾದ ಒಳನೋಟಗಳ ಮೂಲಕ ವಸ್ತುನಿಷ್ಠ ವಿಮರ್ಶೆಯ ಹೊಸ ದಿಕ್ಕನ್ನು ರೂಪಿಸಿದ ಜಿ. ಎಚ್. ನಾಯಕರು ನಿಷ್ಠುರತೆ ಮತ್ತು ಅಗಾಧ ಓದನ್ನು ಒಳಗೊಂಡ ಬಹು ಮುಖ್ಯ ಪರಂಪರೆಯನ್ನು ಕಟ್ಟಿದ್ದಾರೆ” ಎಂದು ನೆನೆದಿದ್ದಾರೆ.

“ಆಗ ಬ್ರಾಹ್ಮಣ ವಿಮರ್ಶಕರ ಅಸಡ್ಡೆಗೆ ಒಳಗಾಗಿದ್ದ ಕುವೆಂಪು ಸಾಹಿತ್ಯದ ಆ ಶಕ್ತಿ, ವೈಚಾರಿಕತೆ, ಸೃಜನಶೀಲತೆಯನ್ನು ತಮ್ಮದೇ ಶೈಲಿಯಲ್ಲಿ ಕನ್ನಡದ ಓದುಗರ ಮುಂದೆ ಕಟ್ಟಿಕೊಟ್ಟ ನಾಯಕರನ್ನು ಮರೆಯಲು ಸಾಧ್ಯವಿಲ್ಲ. ಇಲ್ಲಿ ತೇಜಸ್ವಿಯವರ ಕೊಡುಗೆಯೂ ಸಹ ಮುಖ್ಯ. ನಿಷ್ಠುರವಾದಿಯಾಗಿದ್ದ ನಾಯಕರು ಮೈಸೂರಿನ ಒಕ್ಕಲಿಗ ಅಕಾಡೆಮಿಕ್ ವಲಯದಿಂದಲೂ ಕಿರಿ ಕಿರಿ ಅನುಭವಿಸಿದರು. ಆದರೆ ತಮ್ಮ ‘ನಿಜದನಿ’ಯನ್ನು ಬದಲಿಸಲಿಲ್ಲ. ಕನ್ನಡ ವಿಮರ್ಶೆಗೆ ಹೊಸ ಪರಿಭಾಷೆ ಬರೆದ ನಾಯಕರಿಗೆ ನಮನಗಳು” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...