Homeಮುಖಪುಟನಟ, ಡಿಎಂಡಿಕೆ ನಾಯಕ ವಿಜಯಕಾಂತ್ ನಿಧನ

ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ನಿಧನ

- Advertisement -
- Advertisement -

ತಮಿಳುನಾಡಿನ ಹಿರಿಯ ನಟ, ರಾಜಕಾರಣಿ, ಮಾಜಿ ಶಾಸಕ ವಿಜಯಕಾಂತ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಕುರಿತು ಆಸ್ಪತ್ರೆ ಮೆಡಿಕಲ್‌ ಬುಲೆಟಿನ್‌ ಬಿಡುಗಡೆ ಮಾಡಿದೆ.

71 ವರ್ಷದ ವಿಜಯಕಾಂತ್ ದೀರ್ಘಕಾಲದವರೆಗೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಕರೋನಾ ಸೋಂಕು ಪತ್ತೆಯಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯುಮೋನಿಯಾ ಕಂಡು ಬಂದ ಹಿನ್ನೆಲೆ ವೆಂಟಿಲೇಟರ್‌ ಬೆಂಬಲದಲ್ಲಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.  ವಿಜಯಕಾಂತ್ ಅವರು ಪತ್ನಿ ಪ್ರೇಮಲತಾ ಮತ್ತು ಪುತ್ರರಾದ ಷಣ್ಮುಗ ಪಾಂಡಿಯನ್ ಮತ್ತು ವಿಜಯ ಪ್ರಭಾಕರನ್ ಅವರನ್ನು ಅಗಲಿದ್ದಾರೆ.

ಈ ಕುರಿತು ಚೆನ್ನೈನ ಖಾಸಗಿ ಆಸ್ಪತ್ರೆ ಮೆಡಿಕಲ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದು, ವೈದ್ಯಕೀಯ ಸಿಬ್ಬಂದಿಗಳ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಡಿಎಂಡಿಕೆ ನಾಯಕ ವಿಜಯಕಾಂತ್ ಅವರು ಇಂದು ಬೆಳಿಗ್ಗೆ ನಿಧನರಾದರು ಎಂದು ತಿಳಿಸಿದೆ.

71 ವರ್ಷ ವಯಸ್ಸಿನ ವಿಜಯಕಾಂತ್ ನಟರಾಗಿ ಬಳಿಕ ರಾಜಕಾರಣಿಯಾಗಿ ಸಕ್ರಿಯರಾಗಿದ್ದರು. ಅವರ ಅನುಯಾಯಿಗಳು ಮತ್ತು ಸಿನಿಪ್ರಿಯರು ಅವರನ್ನು ಪ್ರೀತಿಯಿಂದ ‘ಕ್ಯಾಪ್ಟನ್’ ಎಂದು ಕರೆಯುತ್ತಾರೆ.  ವಿಜಯಕಾಂತ್ ದಕ್ಷಿಣ ಭಾರತೀಯ ಕಲಾವಿದರ ಸಂಘದ ಮಾಜಿ ಅಧ್ಯಕ್ಷರು ಕೂಡ ಆಗಿದ್ದರು.

150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ನಟನೆಯಲ್ಲಿ ಯಶಸ್ವಿ ವೃತ್ತಿಜೀವನ ನಡೆಸಿದ್ದ ವಿಜಯಕಾಂತ್‌ ಅವರು 2005ರಲ್ಲಿ ತಮ್ಮ ಹುಟ್ಟೂರಾದ ಮಧುರಿಯಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (DMDK) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಅವರು 2006 ರಲ್ಲಿ ವಿರುಧಾಚಲಂ ಮತ್ತು 2011ರಲ್ಲಿ ರಿಷಿವಂದಿಯಂ ಕ್ಷೇತ್ರಗಳನ್ನು ಪ್ರತಿನಿಧಿಸುವ ಮೂಲಕ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ವಿಜಯಕಾಂತ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದು ಸಕ್ರಿಯ ರಾಜಕೀಯದಿಂದ ಅವರನ್ನು ದೂರ ಉಳಿಯುವಂತೆ ಮಾಡಿತ್ತು. ಡಿ.14ರಂದು ಅವರು ಡಿಎಂಡಿಕೆಯ ಕಾರ್ಯಕಾರಿ ಮತ್ತು ಸಾಮಾನ್ಯ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರನ್ನು ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಘೋಷಿಸಲಾಗಿತ್ತು.

ತಮಿಳು ಚಿತ್ರರಂಗದ ವಿಕ್ರಮ್, ಖುಷ್ಬು ಸುಂದರ್, ಆರ್ ಶರತ್ ಕುಮಾರ್ ಸೇರಿ ಹಲವರು ವಿಜಯಕಾಂತ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದುವರೆಗಿನ ಅತ್ಯಂತ ಪ್ರೀತಿಯ ಮತ್ತು ಕಾಳಜಿಯುಳ್ಳ ಜೀವಿಗಳಲ್ಲಿ ಒಬ್ಬರ ನಿಧನವನ್ನು ಕೇಳಿ ದುಃಖವಾಯಿತು. ನಾವು ನಿಮ್ಮನ್ನು ಕಳೆದುಕೊಳ್ಳುತ್ತೇವೆ ಕ್ಯಾಪ್ಟನ್ ಎಂದು ವಿಕ್ರಮ್ ಬರೆದಿದ್ದಾರೆ.

ಖುಷ್ಬು ಸುಂದರ್ ಈ ಕುರಿತು ಪೋಸ್ಟ್‌ ಮಾಡಿದ್ದು, ನಾವು ರತ್ನವನ್ನು ಕಳೆದುಕೊಂಡಿದ್ದೇವೆ. ಚಿನ್ನದ ಹೃದಯವುಳ್ಳ ವ್ಯಕ್ತಿ. ನಮ್ಮ ಪ್ರೀತಿಯ ಕ್ಯಾಪ್ಟನ್, ನಮ್ಮ ವಿಜಯಕಾಂತ್ ಸರ್, ನೀವು ಅಂತಿಮವಾಗಿ ಶಾಂತಿಯಿಂದ ಇರುತ್ತೀರಿ ಎಂದು ಭಾವಿಸುತ್ತೇವೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ನಿಷ್ಠಾವಂತ ಪಕ್ಷದ ಕಾರ್ಯಕರ್ತರಿಗೆ ದುಃಖವನ್ನು ಭರಿಸುವ ಶಕ್ತಿ ಇರಲಿ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಟ-ರಾಜಕಾರಣಿ 1952ರಲ್ಲಿ ಮಧುರೈನಲ್ಲಿ ಜನಸಿದ್ದರು. ಅವರಿಗೆ ವಿಜಯರಾಜ್ ಅಲಗರಸ್ವಾಮಿ ಎಂದು ಹೆಸರಿಡಲಾಗಿತ್ತು. ಬಳಿಕ ಅವರು ನಟನಾ ವೃತ್ತಿಯನ್ನು ಮುಂದುವರಿಸಲು ಪ್ರಾರಂಭಿಸಿದ ನಂತರ ತನ್ನ ಹೆಸರನ್ನು ವಿಜಯಕಾಂತ್ ಎಂದು ಬದಲಾಯಿಸಿದರು.

ವಿಜಯಕಾಂತ್ 1979ರಲ್ಲಿ ಇನಿಕ್ಕುಂ ಇಳಮೈ ಚಿತ್ರದ ಮೂಲಕ ಸಿನಿ ಲೋಕ್ಕೆ ಪಾದಾರ್ಪಣೆ ಮಾಡಿದ್ದರು.  1981ರಲ್ಲಿ ಬಿಡುಗಡೆಯಾದ ಚಿತ್ರ ‘ಸತ್ತಂ ಒರು ಇರುತ್ತರೈ’  ಅವರಿಗೆ ಹೆಚ್ಚು ಹೆಸರನ್ನು ತಂದುಕೊಟ್ಟಿತ್ತು. ನಂತರ ಅವರು 1980ರ ದಶಕದ ಹಲವಾರು ಪ್ರಸಿದ್ಧ ತಮಿಳು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ನೂರವತು ನಾಲ್, ವೈಧೇಗಿ ಕಾತಿರುಂತಾಲ್, ಅಮ್ಮನ್ ಕೋವಿಲ್ ಕಿಝಾಕಲೆ, ಊಮೈ ವಿಝಿಗಲ್, ಪೂನ್ತೋಟ್ಟಾ ಕಾವಲ್ಕಾರನ್, ಸೆಂದೂರ ಪೂವಾ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ವಿಜಯಕಾಂತ್ 2010ರಲ್ಲಿ ವಿರುಧಗಿರಿ ಎಂಬ ಸಾಹಸಮಯ ಚಿತ್ರದ ನಿರ್ದೇಶನದೊಂದಿಗೆ ನಿರ್ದೇಶಕರಾಗಿಯು ಗುರುತಿಸಿಕೊಂಡಿದ್ದರು.

ಇದನ್ನು ಓದಿ: ‘ಮುಸ್ಲಿಂ ಲೀಗ್ ಜಮ್ಮು-ಕಾಶ್ಮೀರ’ ಸಂಘಟನೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...