| ನಾನುಗೌರಿ ಡೆಸ್ಕ್ |
ಶನಿವಾರ ನಡೆದ ಆಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ 29 ಒವರ್ ನಲ್ಲಿ ಜಸ್ಪ್ರಿತ್ ಬೂಮ್ರ ಎಸೆದ ಬಾಲ್ ಆಫ್ಘನ್‍ನ ಬ್ಯಾಟ್ಸ್‍ಮನ್ ರಹಮತ್ ಶಾ ಅವರ ಪ್ಯಾಡ್‍ಗೆ ಬಡಿದಿತ್ತು. ಔಟ್‍ಗೆ ಮನವಿ ಮಾಡಿದಾಗ ಅಂಪೈಲ್ ಅಲಿಮ್‍ದರ್ ಔಟ್ ನೀಡಲಿಲ್ಲ. ಇದರಿಂದ ಕುಪಿತನಾದ ಭಾರತದ ಕ್ಯಾಪ್ಟನ್ ಕೊಹ್ಲಿ ಅಂಪೈರ್‍ರತ್ತ ಧಾವಿಸಿದ್ದಲ್ಲದೇ ಮತ್ತಷ್ಟು ಆಕ್ರೋಶದಿಂದ ಡಿ.ಆರ್.ಎಸ್ ಅಪೀಲ್ ಮಾಡಿದರು.
ಪಂದ್ಯದ ನಂತರ ಕೊಹ್ಲಿಗೆ ಐಸಿಸಿ ಪಂದ್ಯದ ಶೇ.25ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದಲ್ಲದೇ ಅವರಿಗೆ ಒಂದು ಅನರ್ಹತಾ ಅಂಕ ನೀಡಲಾಗಿದೆ. 18 ತಿಂಗಳ ಅವಧಿಯಲ್ಲಿ ಇದು ಅವರು ಪಡೆಯುತ್ತಿರುವ ಎರಡನೇ ಅನರ್ಹತಾ ಅಂಕವಾಗಿದೆ. ಎರಡು ವರ್ಷದ ಅವಧಿಯಲ್ಲಿ ನಾಲ್ಕು ಅನರ್ಹತಾ ಅಂಕಗಳು ಬಂದರೆ ಒಂದು ಅಮಾನತು ಅಂಕ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಎರಡು ಅಮಾನತು ಅಂಕ ಪಡೆದಲ್ಲಿ ಅವರು 2 ಏಕದಿನ ಅಥವಾ ಒಂದು ಟೆಸ್ಟ್ ಪಂದ್ಯದಿಂದ ಅಮಾನತ್ತಾಗುವ ಅಪಾಯವಿರುತ್ತದೆ.
ಕಳೆದ ವರ್ಷ ಜನವರಿ 16ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಳೆ ಮತ್ತು ಮಂದಬೆಳಕಿನ ಕಾರಣದಿಂದ ಪಂದ್ಯವನ್ನು ಸ್ಥಗಿತಗೊಳಿಸಲು ಅಂಪೈಲ್ ಮುಂದಾದರು. ಆಗ ಕೊಹ್ಲಿ ಬೇಸರದಿಂದ ತನ್ನ ಕೈಲಿದ್ದ ಬಾಲ್ ಅನ್ನು ನೆಲಕ್ಕೆ ಜೋರಾಗಿ ಎಸೆದಿದ್ದಲ್ಲದೇ ಅಂಪೈರ್ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರು. ಆಗ ಐಸಿಸಿ ಪಂದ್ಯದ ಶೇ.25ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದರು.
ತಂಡದ ಕ್ಯಾಪ್ಟನ್ ಆಗಿ ಗೆಲುವಿಗಾಗಿ ಹಂಬಲಿಸುವ ವೇಳೆ ಅವರಿಗೆ ಸಾಕಷ್ಟು ಒತ್ತಡ ಇರುತ್ತದೆ. ಹಾಗಾಗಿ ಈ ರೀತಿಯಾಗಿ ಕೊಹ್ಲಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಆರ್‍ಎಸ್ ಬಗ್ಗೆ ನಿಮಗೆ ಗೊತ್ತೆ?
ಡಿಆರ್‍ಎಸ್ ಡಿಸಿಷನ್ ರಿವ್ಯೂ ಸಿಸ್ಟಮ್ ಅನ್ನು ಕ್ರಿಕೆಟ್‍ನಲ್ಲಿ ಪರಿಚಯಿಸಲಾಗಿದೆ. ಪ್ರತಿ ತಂಡಕ್ಕೆ ಬ್ಯಾಟಿಂಗ್‍ನಲ್ಲೊಂದು ಮತ್ತು ಬೌಲಂಗ್ ವಿಭಾಗದಲ್ಲೊಂದು ರಿವ್ಯೂ ಕೇಳಲು ಅವಕಾಶ ಡಿಆರ್‍ಎಸ್ ನಲ್ಲಿ ಅವಕಾಶವಿದೆ. ಆ ರಿವ್ಯೂ ಯಶಸ್ವಿಯಾದಲ್ಲಿ ರಿವ್ಯೂ ಉಳಿದುಕೊಂಡಿರುತ್ತದೆ. ಒಂದು ವೇಳೆ ರಿವ್ಯೂ ವಿಫಲವಾದಲ್ಲಿ ಆ ತಂಡ ರಿವ್ಯೂ ಕಳೆದುಕೊಳ್ಳಲ್ಲಿದ್ದು ನಂತರ ಅಂಪೈರ್ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಎಲ್.ಬಿ.ಡಬ್ಲೂ, ಕ್ಯಾಚ್ ಮುಂತಾದವುಗಳಿಗೆ ಅಂಪೈರ್ ಔಟ್ ನೀಡಿದೀಗ ಬ್ಯಾಟ್ಸ್‍ಮನ್ ಗಳ ಕಡೆಯಿಂದಲೂ, ಒಂದು ವೇಳೆ ನಾಟೌಟ್ ನೀಡಿದರೆ ಬೌಲರ್‍ಗಳ ಕಡೆಯಿಂದಲೂ ಡಿ.ಆರ್.ಎಸ್ ಕೇಳಬಹುದಾಗಿದೆ.
ಮೊನ್ನೆಯ ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಐದು ಬಾರಿ ಡಿಆರ್‍ಎಸ್ ಕೇಳಿ ಯಶಸ್ವಿಯಾಗಿದೆ. ಕೆಲವೊಂದು ತಂಡಗಳು ಮೊದಲ ಪ್ರಯತ್ನದಲ್ಲಿಯೇ ವಿಫಲವಾಗಿ ಡಿಆರ್‍ಎಸ್ ಕಳೆದುಕೊಂಡ ಉದಾಹರಣೆಗಳು ಇವೆ. ಬೌಲ್ ಆದ 15 ಸೆಕೆಂಡ್ ಒಳಗೆ ರಿವ್ಯೂ ಕೇಳಲು ಅವಕಾಸವಿರುತ್ತದೆ.