Homeಮುಖಪುಟಪರಿಸರ ಬಿಕ್ಕಟ್ಟಿಗೆ ಕಾರಣವೇನು? ಪರಿಸರದ ಶತ್ರುಗಳು ಯಾರು? ಮಿತ್ರರು ಯಾರು?

ಪರಿಸರ ಬಿಕ್ಕಟ್ಟಿಗೆ ಕಾರಣವೇನು? ಪರಿಸರದ ಶತ್ರುಗಳು ಯಾರು? ಮಿತ್ರರು ಯಾರು?

- Advertisement -
- Advertisement -

ದೇಶಾದ್ಯಂತ ಪರಿಸರ ರಕ್ಷಣೆಯ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ದಿನ ದಿನಕ್ಕೂ ತೀವ್ರ ಗೊಳ್ಳುತ್ತಿರುವ ಪರಿಸರ ಬಿಕ್ಕಟ್ಟು ಜೀವ ಜಗತ್ತಿನ ಅಸ್ಥಿತ್ವದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರವಾದಿಗಳ ಒಂದು ವಿಭಾಗ, ಕೆಲ ಎನ್‌‌ಜಿಒ ಗಳು ನಾಡಿನ ರೈತಾಪಿ-ಆದಿವಾಸಿ ಜನಸಮುದಾಯವನ್ನು ಪರಿಸರದ ಶತ್ರುಗಳು ಎಂಬಂತೆ ಬಿಂಬಿಸುತ್ತಿವೆ. ಅದಕ್ಕೆ ಅನುಗುಣವಾಗಿ ಸರ್ಕಾರಗಳು ಹಲವಾರು ಜನ ವಿರೋಧಿ ಪರಿಸರ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆ ಮೂಲಕ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಮೇಲೆ ಪ್ರಹಾರ ನಡೆಸತೊಡಗಿದೆ.

ನಮ್ಮ ಮಲೆನಾಡಿನಲ್ಲಿ ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು, ರಕ್ಷಿತಾರಣ್ಯಗಳು, ಕಸ್ತೂರಿ ರಂಗನ್ ವರದಿ, ಸೆಕ್ಷನ್ 4-17 ಇತ್ಯಾದಿ ಯೋಜನೆಗಳ ಜಾರಿಯಿಂದ ರೈತಾಪಿ-ಆದಿವಾಸಿ ಜನರ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ. ಸರ್ಕಾರ & ಕೆಲವು ಡೋಂಗಿ ಪರಿಸರವಾದಿಗಳ ಅವೈಜ್ಞಾನಿಕ ಧೋರಣೆಯಿಂದ ನಿಜವಾದ ಪರಿಸರ ರಕ್ಷಕರನ್ನು ಗುರಿಮಾಡಲಾಗುತ್ತಿದೆ. ಇದರ ಹಿಂದಿನ ಸಂಚೇನು? ಪರಿಸರ ನಾಶಕ್ಕೆ ನಿಜವಾದ ಕಾರಣವೇನು? ಮತ್ತು ನಿಜಾರ್ಥದಲ್ಲಿ ಪರಿಸರ ರಕ್ಷಣೆ ಹೇಗೆ ಸಾಧ್ಯವೆಂಬುದನ್ನು ನೋಡೋಣ.

ಮಾನವನು ಸಾವಿರಾರು ವರ್ಷಗಳ ಕಾಲ ಕಾಡಿನಲ್ಲೇ ಜೀವಿಸಿದ್ದರೂ ಅರಣ್ಯ ನಾಶದ ಚರಿತ್ರೆ ನಮಗೆ ಕಾಣುವುದಿಲ್ಲ ಆದರೆ, ವರ್ಗ ಸಮಾಜದ ಉಗಮದೊಂದಿಗೆ ವ್ಯಕ್ತಿಗತ ಆರ್ಥಿಕ ಬೆಳವಣಿಗೆ ಹೊಂದಿ ಈ ಆರ್ಥಿಕ ಹಿತಾಸಕ್ತಿಯೂ ಅರಣ್ಯ ಪರಿಸರದ ಮೇಲೆ ಹಸ್ತಕ್ಷೇಪ ಮಾಡಿದಾಗ ಅದು ಮೊದಲ ಬಾರಿಗೆ ಪರಿಸರ ನಾಶಕ್ಕೂ ನಾಂದಿಯಾಯಿತು. ಈ ನಾಶ ಇತಿಹಾಸದ ಪುಟಗಳಲ್ಲಿ ನಾಶವೆಂದು ದಾಖಲಿಸುವಂತಹ ಅಪಾಯಕಾರಿ ಹಂತ ತಲುಪಿರಲಿಲ್ಲ.

ಮಾನವನ ಇತಿಹಾಸದ ಇತ್ತಿಚೀನ 250-300 ವರ್ಷಗಳ ಅವಧಿಯಲಿ ಸಮಾಜದಲ್ಲಿ ಬಂಡವಾಳಶಾಹಿ ವರ್ಗ ಬೆಳವಣಿಗೆ ಹೊಂದಿ ಅದು ಇಡೀ ಭೂಮಂಡಲವನ್ನೇ ತನ್ನ ನಿಯಂತ್ರಣಕ್ಕೆ ತಂದುಕೊಳ್ಳಲು ಜೀವ ಜಗತ್ತಿನ ಪ್ರತಿಯೊಂದು ವಸ್ತುವನ್ನು ಸರಕಾಗಿಸಿ ಬಂಡವಾಳದ ಲೂಟಿಯಲ್ಲಿ ತೊಡಗುತ್ತದೆ ಅದರ ಭಾಗವಾಗಿ ಕೈಗಾರಿಕಾ ಬೆಳವಣಿಗೆಯ ಕ್ರಮಗತಿಯಲ್ಲಿ ವಿವಿದ ನಿರ್ಮಾಣಗಳ ಕಚ್ಚಾವಸ್ತುಗಳಿಗಾಗಿ ಅರಣ್ಯ ಪ್ರದೇಶಗಳಿಗೆ ಕೊಡಲಿ ಬೀಸಲಾರಂಭಿಸಿತು. ನಿಕ್ಷೇಪಗಳಿಗಾಗಿ ಭೂಗರ್ಭವನ್ನು ಬಗೆಯಲಾಂಭಿಸಿತು ಈ ರೀತಿಯ ನಿರಂತರ ಲೂಟಿ ಭೂಮಿಯ ಮೇಲೆ ಜೀವಿಗಳು ಬದುಕಲಾರಂದತಹ ಅತ್ಯಂತ ಭೀಕರ ಪರಿಸರ ಬಿಕ್ಕಟ್ಟಿಗೆ ಕಾರಣವಾಗಿದೆ.

ನಮ್ಮ ದೇಶಕ್ಕೆ ಬ್ರಿಟಿಷರು ಬಂದ ನಂತರ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶದ ಪ್ರಕ್ರಿಯೆ ಆರಂಭವಾಯಿತು. 1400 ಕಿ.ಮಿ. ಉದ್ದದ, 140 ಸಾವಿರ ಚ.ಕಿ.ಮಿ ಪ್ರದೇಶವನ್ನು ಆವರಿಸಿರುವ ಪಶ್ಚಿಮಘಟ್ಟದ ಪರ್ವತ ಶ್ರೇಣಿ ದಕ್ಷಿಣ ಭಾರತದಲ್ಲಿ ವಾಸಿಸುವ ಎಲ್ಲಾ ಜನ ಸಮುದಾಯಗಳ ಜೀವನಾಡಿಯಾಗಿದೆ. ಪಶ್ಚಿಮ ಕರಾವಳಿ ಪ್ರದೇಶದುದ್ದಕ್ಕೂ ಗೋಡೆಯಂತಿರುವ ಈ ಘಟ್ಟ ಪ್ರದೇಶ ಸಾವಿರಾರು ಅಡಿ ಎತ್ತರದ ಗುಡ್ಡಗಳು ಶೋಲಾ ಪರ್ವತ ಸಾಲನ್ನು ಹೊಂದಿದ್ದು ಅರಬ್ಬಿ ಸಮುದ್ರದಿಂದ ಬೀಸುವ ಮಳೆಯ ಮಾರುತವನ್ನು ತಡೆದು ಹೇರಳವಾಗಿ ಮಳೆ ಸುರಿಸಿ, ನೀರನ್ನು ತನ್ನ ಒಡಲಾಳದಲ್ಲಿ ಹಿಡಿದಿಟ್ಟುಕೊಂಡು ವರ್ಷ ಪೂರ್ತಿ ಹಳ್ಳ ಹೊಳೆ, ನದಿಗಳ ಮೂಲಕ ಪೂರ್ವ ಪಶ್ಚಿಮಾಭಿಮುಖವಾಗಿ ಹರಿಸಿ ಕೋಟಿ ಕೋಟಿ ರೈತರ, ಜನರ ಜೀವನಾಡಿಯಾಗಿದೆ ಇಂತಹ ಮಹತ್ವ ಹೊಂದಿರುವ ಈ ಅರಣ್ಯ ಪ್ರದೇಶದಲ್ಲಿ ಅಮೂಲ್ಯ ಮತ್ತು ಅಪರೂಪದ ಸಾವಿರಾರು ಜಾತಿಯ ಮರಗಳು, ಸಸ್ಯ ಸಂಪತ್ತು, ಜೀವ ವೈವಿಧ್ಯತೆಗಳು ಪ್ರಾಣಿ ಪಕ್ಷಿ ಇತ್ಯಾದಿಗಳು ಮಾತ್ರವಲ್ಲದೇ ವಿನಾಶದ ಅಂಚಿನಲ್ಲಿರುವ ಹಲವು ಆದಿವಾಸಿ ಬುಡಕಟ್ಟುಗಳೂ ಇವೆ.

ದೇಶದ ಸಂಪತ್ತೆಲ್ಲವನ್ನು ಲೂಟಿ ಹೊಡೆದ ಬ್ರಿಟೀಷರು ಪಶ್ಚಿಮಘಟ್ಟಕ್ಕೂ ಲಗ್ಗೆ ಇಟ್ಟರು. ರೈಲ್ವೇ ಸ್ಲೀಪರ್‌ಗಾಗಿ, ಎಲೆಕ್ಟ್ರಿಕ್ ಪೋಲ್ಸ್ಗಾಗಿ, ಕಟ್ಟಡ, ಕೈಗಾರಿಕಾ ನಿರ್ಮಾಣಗಳಿಗಾಗಿ ಇಲ್ಲಿನ ಅಮೂಲ್ಯ ಮತ್ತು ಗಟ್ಟಿಜಾತಿಯ ತೈಲ ಭರಿತ ಮರಮುಟ್ಟುಗಳನ್ನು ಲೋಡ್ ಗಟ್ಟಲೇ ಕಡಿದು ಸಾಗಿಸಿದರು. ಅದಕ್ಕಾಗಿ ಈ ಪ್ರದೇಶದುದ್ದಕ್ಕೂ ಕಾಡಿನ ನಡುವೆ ಎಲ್ಲೆಂದರಲ್ಲಿ ರಸ್ತೆ ನಿರ್ಮಾಣ ಮಾಡಿದರು. ಆ ಮೂಲಕ ಮಳೆ ಕಾಡಿನ ಲಕ್ಷಾಂತ ಎಕರೆ ದಟ್ಟ ಅರಣ್ಯ ಪರಿಸರ ನಾಶವಾಯಿತು.

1947ರಲ್ಲಿ ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾದ ನಂತರ ಕಾಡಿನ ನಾಶದ ಪ್ರಮಾಣ ಮತ್ತಷ್ಟು ಹೆಚ್ಚಿತು. ಪೇವುಡ್ ಕಂಪನಿಗೆ, ರೆಯಾನ್, ಕಾಗದ, ಕಡ್ಡಿಪೆಟ್ಟಿಗೆ, ಇತ್ಯಾದಿ ಕಂಪನಿಗಳಿಗೆ 1990ರ ದಶಕದ ಆರಂಭದವರೆಗೂ, ನಾನಾ ಬಗೆಯ ಗಣಿಗಾರಿಕೆಗಳು ಅಣೆಕಟ್ಟುಗಳು, ಅದರ ಸಂತ್ರಸ್ತರ ಪುನರ್ವಸತಿಗಾಗಿ, ವಿದ್ಯುತ್ ಲೈನ್‌ಗಾಗಿ, ರಸ್ತೆಗಳಿಗಾಗಿ ಸಾವಿರಾರು ಹೆಕ್ಟೇರ್ ಕಾಡು ನಾಶವಾಗಿದೆ. ಇದಲ್ಲದೇ ಖಾಸಗಿ ಬಂಡವಾಳಶಾಹಿಗಳ ನಾಟಕಳ್ಳ ಸಾಗಾಣಿಕೆ, ಕಾಫಿ, ಟೀ, ರಬ್ಬರ್, ಗೋಡಂಬಿ ಇತ್ಯಾದಿ ಎಸ್ಟೇಟ್ ತೋಟಗಳಿಗಾಗಿ ಸಾವಿರಾರು ಎಕರೆ ಕಾಡು ನಾಶ ಮಾಡಲಾಗಿದೆ. ಅದು ನಾನಾ ರೂಪ ಪಡೆದು ಇಂದಿಗೂ ಮುಂದುವರಿಯುತ್ತಿದೆ.

1990ರ ದಶಕದ ಜಾಗತೀಕರಣದ ನಂತರದ ದಿನಗಳಲ್ಲಿ ಪರಿಸರ ಲೂಟಿಯ ವಿಧಾನ ಬದಲಾಗಿದೆ. ರಕ್ಷಣೆಯ ಹೆಸರಲ್ಲಿ ರಾಷ್ಟ್ರೀಯ ಉದ್ಯಾನವನಗಳು, ಅಭಯಾರಣ್ಯಗಳು, ರಕ್ಷಿತಾರಣ್ಯಗಳು, ಜೀವ ಪರಿಸರಾತ್ಮಕ ಸೂಕ್ಷ್ಮ ಪ್ರದೇಶದಂತಹ (ಕಸ್ತೂರಿರಂಗನ್ ವರದಿ) ಯೋಜನೆಗಳು ನಮ್ಮ ಅತ್ಯಮೂಲ್ಯ ಜೀವ ವೈವಿಧ್ಯತೆಗಳನ್ನು ಸಾಮ್ರಾಜ್ಯಶಾಹಿ ಲೂಟಿಗೆ ಮತ್ತು ಪ್ರವಾಸೋದ್ಯಮದ ಗಳಿಕೆಯ ಪರಿಸರ ವಿನಾಶಕಾರಿ ಉದ್ದೇಶವನ್ನು ಹೊಂದಿದ್ದು, ಅರಣ್ಯದ ಭಾಗವಾಗಿರುವ ಆದಿವಾಸಿಗಳನ್ನು ಮತ್ತು ಪರಿಸರ ಸ್ನೇಹಿ ರೈತಕೂಲಿಗಲನ್ನು ಹೊರದಬ್ಬಲಾಗುತ್ತಿದೆ.

ಮತ್ತೊಂದೆಡೆ ಅರಣ್ಯ ಇಲಾಖೆಯ ಕಾಡು ಬೆಳೆಸುವ ಕಾರ್ಯಕ್ರಮಗಳೂ ಅತ್ಯಂತ ಅವೈಜ್ಞಾನಿಕ ಮತ್ತು ಪರಿಸರ ವಿರೋಧಿಯಾಗಿದೆ. ಅಕೇಶಿಯ ನಡುತೋಪುಗಳನ್ನು ಎಲ್ಲೆಡೆ ನಿರ್ಮಿಸಿರುವ ಪರಿಣಾಮ ನೈಸರ್ಗಿಕ ಪರಿಸರದ ಮೇಲೆ ಗಂಭೀರ ಹಾನಿಯುಂಟಾಗಿದೆ. ಅಲ್ಲಿದ್ದ ಜೀವ ವೈವಿಧ್ಯತೆಗಳು ವಿನಾಶದೆಡೆಗೆ ಸಾಗುತ್ತಿದೆ. ಅದೆಷ್ಟೋ ಜಾತಿಯ ಹೂ ಬಿಡುವ ಸಸ್ಯಗಳು ನಾಶಗೊಂಡ ಪರಿಣಾಮ ಮಲೆನಾಡಿನಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಹಲವು ಬಗೆಯ ಜೇನಿನ ಸಂತತಿ ವಿನಾಶದ ಅಂಚಿಗೆ ತಲುಪಿವೆ. ಅಕೇಶಿಯಾ ಬೆಳೆದ ಜಾಗದಲ್ಲಿ ಹುಲ್ಲು ಕೂಡಾ ಬೆಳೆಯದ ಕಾರಣ ಹುಲ್ಲು ಮೇಯುವ ಕಾಡು ಪ್ರಾಣಿಗಳು ಮತ್ತು ಜಾನುವಾರುಗಳು ಗಂಭೀರ ಆಹಾರ ಕೊರತೆಯಿಂದಾಗಿ ಅವುಗಳ ಸಂಖ್ಯೆಯೂ ಕ್ಷಿಣಿಸುತ್ತದೆ.

ಪರಿಸರ ವಿರೋಧಿ ಅಕೇಶಿಯಾ ಪ್ಲಾಂಟೇಷನ್‌ಗಳಲ್ಲಿ ನೈಸರ್ಗಿಕ ಸಹಜ ಗಿಡಗಳು, ಹುಲ್ಲುಗಾವಲು ನಾಶಗೊಂಡಿರುವ ಪರಿಣಾಮ ಮಣ್ಣಿನ ಸವಕಳಿ ಹೆಚ್ಚಾಗಿ ಮಳೆಗಾಲದಲ್ಲಿ ಭೂಮಿಯ ಮೇಲ್ಪದರದ ಮಣ್ಣು ಕೊಚ್ಚಿ ಹೋಗಿ ಅಂತರ್ಜಲ ಮಟ್ಟ ಕುಸಿದು ಬೇಸಿಗೆಯಲ್ಲಿ ಹಳ್ಳ ಹೊಳೆಗಳು ಜೀವಂತಿಕೆ ಕಳೆದುಕೊಂಡು ಹರಿಯಲಾರದ ಸ್ಥಿತಿ ತಲುಪಿದ್ದಲ್ಲದೇ ಮಳೆಗಾಲದಲ್ಲಿ ನದಿಗಳಲ್ಲಿ ಮತ್ತು ಡ್ಯಾಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಳು ತುಂಬಲು ಕಾರಣವಾಗಿದೆ.

ಸರ್ಕಾರ ಅಥವಾ ಖಾಸಗಿ ಬಂಡವಾಳಶಾಹಿಗಳ ಆರ್ಥಿಕ ಹಿತಾಸಕ್ತಿ ಹೊಂದಿರುವ ಯಾವುದೇ ಪ್ಲಾಂಟೇಷನ್‌ಗಳನ್ನು (ಅಕೇಶಿಯಾ, ನೀಲಗಿರಿ, ಸಾಗುವಾನಿ, ಕಾಫಿ, ಟೀ, ರಬ್ಬರ್, ಸಿಲ್ವರ್ ಇತ್ಯಾದಿ) ಹಸಿರು ಕಾಡೆಂದಾಗಲಿ. ಪರಿಸರ ಸ್ನೇಹಿ ಎಂದಾಗಲಿ ನೋಡುವುದು ವೈಜ್ಞಾನಿಕವಾಗಿ ತಪ್ಪಾದ ತಿಳುವಳಿಕೆಯಾಗುತ್ತದೆ. ಈ ತಪ್ಪಾದ ದೃಷ್ಠಿಕೋನವೇ ಇಂದು ದೊಡ್ಡ ಮಟ್ಟದ ಪರಿಸರ ನಾಶಕ್ಕೆ ಪರಿಸರ ಬಿಕ್ಕಟ್ಟಿಗೆ ಕಾರಣವಾಗಿರುವುದೇ ಹೊರತು ಹೆಚ್ಚುತ್ತಿರುವ ಜನಸಂಖ್ಯೆಯಲ್ಲ. ಬದಲಿಗೆ ಬಂಡವಾಳಶಾಹಿ ಲೂಟಿಯ ಹಿತಾಸಕ್ತಿ ಕಾರಣವಾಗಿದೆ.

ಪಶ್ಚಿಮಘಟ್ಟದ ಮಲೆನಾಡು ಕರಾವಳಿ ಪ್ರದೇಶದಲ್ಲಿ ಸರ್ಕಾರಗಳ ವಿವಿಧ ಯೋಜನೆಗಳಿಂದ ಹಾಗೂ ಖಾಸಗಿ ಬಂಡವಾಳಶಾಹಿಗಳ ಗಣಿಗಾರಿಕೆಗಳು ದೊಡ್ಡ ದೊಡ್ಡ ಕಂಪನಿ ಎಸ್ಟೇಟ್‌ಗಳು, ದೊಡ್ಡ ಭೂಮಾಲಿಕರ ಕಾಫಿ, ಟೀ, ರಬ್ಬರ್ ಇತ್ಯಾದಿ ತೋಟ ಎಸ್ಟೇಟ್‌ಗಳು, ಅರಣ್ಯ ಇಲಾಖೆಯ ಅಕೇಶಿಯಾ, ಸಾಗುವಾನಿ, ನೀಲಗಿರಿ ಇತ್ಯಾದಿ ಪ್ಲಾಂಟೇಷನ್‌ಗಳಿಂದ ಲಕ್ಷಗಟ್ಟಲೆ ಎಕರೆ ಸಹಜ ಅರಣ್ಯ ಪರಿಸರ ಆದಿವಾಸಿ ಬುಡಕಟ್ಟುಗಳು ಒಳಗೊಂಡು, ನಾಶಕ್ಕೆ ಕಾರಣವಾಗಿದೆ.ಅಧ್ಯಯನವೊಂದರ ಪ್ರಕಾರ ಈ ಪ್ರದೇಶದಲ್ಲಿರುವ ಶೇ.28% ಬಂಡವಾಳಶಾಹಿಗಳು ಮತ್ತು ದೊಡ್ಡ ಭೂಮಾಲಿಕರ ಹಿಡಿತದಲ್ಲಿ ಶೇ 70%ರಷ್ಟು ಭೂಮಿಯಿದ್ದು ಶೇ 72%ರಷ್ಟು ಬಡವರು, ದಲಿತರು, ರೈತರ ಕೈಯಲ್ಲಿ ಶೇ 30% ರಷ್ಟು ಅತ್ಯಂತ ಕಡಿಮೆ ಭೂಮಿಯಿದೆ.

ಕಾರ್ಮಿಕರ ಲೈನ್ ಮನೆಗಳು

ಇಂದಿಗೂ ಒಂದು ದೊಡ್ಡ ಸಂಖ್ಯೆಯ ಜನ ವಿಭಾಗಕ್ಕೆ ವಾಸಕ್ಕೆ ಸ್ವಂತ ಸೂರೂ ಇಲ್ಲದೇ ಎಸ್ಟೇಟ್‌ಗಳ ಲೈನ್‌ಗಳಲ್ಲಿ ಭೂ ಮಾಲೀಕರ ಒಕ್ಕಲುಗಳಾಗಿ ಬದುಕುತ್ತಿದ್ದಾರೆ. ಇದರಿಂದ ನಮಗೆ ಅರ್ಥವಾಗುವ ಸತ್ಯವೆಂದರೆ ಆದಿವಾಸಿಗಳಾಗಲಿ, ದಲಿತ-ರೈತ-ಕೂಲಿಗಳಾಗಲಿ ಸಣ್ಣ ಬಡ ಮದ್ಯಮ ರೈತರಾಗಲಿ ಅವರ ಸಂಖ್ಯೆ ಹೆಚ್ಚುತ್ತಿದ್ದರೂ ಪರಿಸರ ನಾಶಕ್ಕೆ ಕಾರಣವಾಗಿಲ್ಲ ಎಂಬುದು. ಅದೇ ಸಂದರ್ಭದಲ್ಲಿ ಇವರೆಲ್ಲರೂ ತಮ್ಮ ಪ್ರಾಣದ ಹಂಗು ತೊರೆದು ಭೂಮಿ ಮತ್ತು ಪರಿಸರದ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಎಂಬ ಸತ್ಯವನ್ನು ಮರೆಯಬಾರದು.

ಒಟ್ಟಾರೆಯಾಗಿ ಅರಣ್ಯ ಪರಿಸರ ನಾಶಕ್ಕಾಗಲಿ, ಮಾಲಿನ್ಯಕ್ಕಾಗಲಿ, ಸಮಾಜದಲ್ಲಿನ ಬಡತನ ಅಸಮಾನತೆಗಾಗಲಿ, ಆಹಾರ ಮತ್ತು ಕೃಷಿ ಬಿಕ್ಕಟ್ಟಿಗಾಗಲಿ ಕಾರಣವಾಗಿರುವುದು ಶೋಷಕ ವರ್ಗಗಳಾದ ಸಾಮ್ರಾಜ್ಯಶಾಹಿಗಳು, ಅವರ ದಲ್ಲಾಳಿಗಳಾದ ಈ ದೇಶದ ದೊಡ್ಡ ಬಂಡವಾಳಶಾಹಿಗಳು ಮತ್ತು ದೊಡ್ಡ ಭೂಮಾಲಿಕರುಗಳು ಆದ್ದರಿಂದ ಪರಿಸರ ಪ್ರಶ್ನೆಯೂ ಸಹ ಸಾರಂಶದಲ್ಲಿ ವರ್ಗ ಪ್ರಶ್ನೆಯ ಭಾಗವೇ ಆಗಿದೆ. ಈ ಮೂಲಭೂತ ಪ್ರಶ್ನೆಯನ್ನು ಬಗೆಹರಿಸದೇ ಒಂದು ದಿನ ವನಮಹೋತ್ಸವ ಆಚರಿಸಿ ಸಾಂಕೇತಿಕವಾಗಿ ಒಂದೆರಡು ಕಡೆ ಗಿಡನೆಟ್ಟು ಮಾಧ್ಯಮಗಳಿಗೆ ಪೋಸ್ ಕೊಡುವ ಡೋಂಗಿ ಪರಿಸರ ಕಾಳಜಿಯಿಂದ ಈ ಗಂಭೀರ ಪರಿಸರ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದುದರಿಂದ ಎಲ್ಲಾ ನೈಜ್ಯ ಪರಿಸರ ಪ್ರೇಮಿಗಳು, ಆದಿವಾಸಿಗಳ ಬಗ್ಗೆ ಕಾಳಜಿ ಇರುವವರು ಹೋರಾಟಗಾರರು ಈ ಮೂಲಭೂತ ವಿಚಾರದ ಬಗ್ಗೆ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಬೇಕಾದ ಅಗತ್ಯ ಇಂದಿನ ತುರ್ತಾಗಿದೆ.


ಓದಿ: ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...