Homeಕರ್ನಾಟಕ‘ಸ್ವಲ್ಪ ಯಾಮಾರಿದ್ದರೂ ನನ್ನ ಜೀವವನ್ನೇ ತೆಗೆಯುತ್ತಿದ್ದರು…’: ಗೊಲ್ಲರಿಂದ ಹಲ್ಲೆಗೊಳಗಾದ ಮಾರುತಿ ಹೇಳಿದ್ದೇನು?

‘ಸ್ವಲ್ಪ ಯಾಮಾರಿದ್ದರೂ ನನ್ನ ಜೀವವನ್ನೇ ತೆಗೆಯುತ್ತಿದ್ದರು…’: ಗೊಲ್ಲರಿಂದ ಹಲ್ಲೆಗೊಳಗಾದ ಮಾರುತಿ ಹೇಳಿದ್ದೇನು?

- Advertisement -
- Advertisement -

ಪರಿಶಿಷ್ಟ ಜಾತಿಗೆ ಸೇರಿದ ಜನರು ಪ್ರವೇಶಿಸಿದರೆ ಗ್ರಾಮ ಹಾಗೂ ದೇವಾಲಯ ಮೈಲಿಗೆಯಾಗುತ್ತಿದೆ ಎಂಬ ಕಾರಣಕ್ಕೆ ದಲಿತರ ಗ್ರಾಮ ಪ್ರವೇಶವನ್ನೇ ನಿಷೇಧಿಸಿದ್ದ ಗ್ರಾಮಕ್ಕೆ ರಾಜ್ಯದ ಪ್ರಮುಖ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಂದಾಯ, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದಲಿತರು ಗ್ರಾಮ ಪ್ರವೇಶಿಸಿದ್ದಲ್ಲದೇ, ಗ್ರಾಮದಲ್ಲಿದ್ದ ಕಂಬದ ರಂಗನಾಥಸ್ವಾಮಿ ದೇವಾಲಯದ ಬೀಗ ಒಡೆದು ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಮುಂಭಾಗ ಸಂವಿಧಾನ ಪೀಠಿಕೆ ಬೋಧಿಸಿ ಗೊಲ್ಲ ಸಮುದಾಯಕ್ಕೆ ಕಾನೂನಿನ ಸಂದೇಶ ರವಾನಿಸಿದ್ದಾರೆ.

ಘಟನೆ ಬಗ್ಗೆ ‘ನಾನುಗೌರಿ.ಕಾಂ’ ಜತೆಗೆ ಮಾತನಾಡಿದ ಹಲ್ಲೆಗೊಳಗಾದ ಯುವಕ ಮಾರುತಿ, ‘ಅಂದು ಸ್ವಲ್ಪ ಯಾಮಾರಿದ್ದರೂ ಅವರು ನನ್ನ ಜೀವವನ್ನೇ ತೆಗೆಯುತ್ತಿದ್ದರು…’ ಎಂದು ಉದ್ವೇಗದಲ್ಲೇ ಮಾತನಾಡಿದ್ದಾರೆ.

ಹಳೆ ಮನೆ ಕೆಡವಲು ಗೇರುಮರಡಿ ಗ್ರಾಮದ ಗೊಲ್ಲರಟ್ಟಿಗೆ ತೆರಳಿದ್ದ ದಲಿತ ಸಮುದಾಯದ ಜೆಸಿಬಿ ಆಪರೇಟರ್ ಮಾರುತಿ ಎಂಬ ಯುವಕನನ್ನು, ಗೊಲ್ಲ ಸಮುದಾಯದ ಜನರು ಅಮಾನವೀಯವಾಗಿ ಥಳಿಸಿ, ದಂಡ ಕಟ್ಟಿಸಿಕೊಂಡಿದ್ದ ಘಟನೆ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಗೊಲ್ಲ ಸಮುದಾಯದ ಸುಮಾರು 15ರಿಂದ 20 ಜನರು ದಲಿತ ಯುವಕನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದೂ ಅಲ್ಲದೆ, ಆತನ ಬಳಿ ಇದ್ದ 20 ಸಾವಿರ ರೂಪಾಯಿಯನ್ನು ದಂಡ ಎಂದು ಕಸಿದುಕೊಂಡಿದ್ದರು. ಘಟನೆ ನಡೆದ ಒಂಬತ್ತು ದಿನದ ನಂತರ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಮಾರುತಿ ರಂಗನಾಥ ಸ್ವಾಮಿ ದೇಗುಲ ಪ್ರವೇಶಿಸಿದ್ದಾರೆ. ತಾನೇ ತನ್ನ ಕೈಯಾರೆ ದೇವರಿಗೆ ಹೂವಿನ ಹಾರ ಹಾಕಿ, ಅಗರಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ಹೊಸ ವರ್ಷದ ದಿನದಂದೆ ದಲಿತ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆದಿತ್ತು. ಮರು ದಿನವೇ ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿ, ಗೊಲ್ಲರ ಬೀದಿಯಲ್ಲಿರುವ ಗ್ರಾಮದ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಒಂಬತ್ತು ದಿನಗಳ ನಂತರ ಅಧಿಕಾರಿಗಳೆ ಮುಂದೆ ನಿಂತು ದಲಿತರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ದೇವಸ್ಥಾನ ಪ್ರವೇಶದ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ಮಾರುತಿ, ‘ಈ ಊರಿನ ಜನ ನನ್ನನು ಹೊಡೆದು ಬಡಿದು ತುಂಬಾ ತೊದರೆ ಕೊಟ್ಟಿದ್ದಾರೆ. ಇಂದು ದೇವಸ್ಥಾನ ಪ್ರವೇಶ ಮಾಡಿ, ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ. ನಾನು ಅವರನ್ನು ದ್ವೇಷಿಸಲ್ಲ, ಪ್ರೀತಿ ಮಾಡುತ್ತೇನೆ’ ಎಂದು ಹೇಳುವ ಮೂಲಕ ಸೌಹಾರ್ದತೆ ಪ್ರತಿಪಾದಿಸಿದ್ದಾರೆ.

‘ಅಂದು ಹಲ್ಲೆ ನಡೆಸಿದ ಅವರು, ಚೀಟಿ ಕಟ್ಟುವುದಕ್ಕೆ ನಾನು ಜೇಬಲ್ಲಿ ಇಟ್ಟುಕೊಂಡಿದ್ದ 20 ಸಾವಿರ ರೂಪಾಯಿ ಹಣವನ್ನೂ ಹೊಡೆದು ಬಡಿದು ಕಿತ್ತುಕೊಂಡಿದ್ದಾರೆ. ದೇವಸ್ಥಾನ ಪ್ರವೇಶಿಸಿದ ನಂತರ ನೆಮ್ಮದಿ ಅನ್ನಿಸಿದೆ. ದೇವರು ಅವರಿಗೆಲ್ಲ ಒಳ್ಳೆಯದು ಮಾಡಲಿ. ಗ್ರಾಮದಿಂದ ಅಸ್ಪೃಶ್ಯತೆ ತೊಲಗಬೇಕು ಎಂದು ಬಯಸುತ್ತೇನೆ’ ಎಂದರು.

ಅಂದು ನಡೆದ ಘಟನೆ ಕುರಿತು ‘ನಾನುಗೌರಿ.ಕಾಂ’ ಜತೆಗೆ ದೂರವಾಣಿ ಮೂಲಕ ಮಾತನಾಡಿದ ಮಾರುತಿ, ಅಂದು ಅವರ ಮೇಲೆ ನಡೆದ ಹಲ್ಲೆಯ ಆಘಾತದಿಂದ ಇನ್ನೂ ಹೊರಬಂದಿಲ್ಲ. ಉದ್ವೇಗದಲ್ಲೇ ಮಾತು ಶುರು ಮಾಡಿದ ಅವರು, ‘ಅಂದು ಬೆಳಿಗ್ಗೆ ಹತ್ತೂವರೆಗೆ ಗೇರುಮರಡಿ ಗ್ರಾಮದಿಂದ ಬಂದಿದ್ದವರು, ನಾನು ಕೆಲಸ ಮಾಡುತ್ತಿದ್ದ ಜೆಸಿಬಿ ಮಾಲೀಕರ ಬಳಿ ಮಾತನಾಡಿದ್ದರು. ಅವರೇ ಡೀಸೆಲ್ ಹಾಕಿಸಿಕೊಂಡು ಕರೆದುಕೊಂಡು ಹೋಗಿದ್ದರು. ಗೇರು ಮರಡಿ ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನ ಪಕ್ಕದಲ್ಲಿದ್ದ ಹಳೆ ಮನೆಯೊಂದರ ಮಣ್ಣು ತೆರವುಗೊಳಿಸಲು ಹೇಳಿದ್ದರು. ಕೆಲಸ ಆರಂಭಿಸಿ ಇಪ್ಪತ್ತು ನಿಮಿಷ ಮಾತ್ರ ಆಗಿತ್ತು. ಅಲ್ಲಿಗೆ ಬಂದ ಸುಮಾರು ಹದಿನೈದರಿಂದ ಇಪ್ಪತ್ತು ಜನ, ‘ಕೆಲಸ ನಿಲ್ಲಿಸಪ್ಪ.. ಎಂದು ಹೇಳಿ, ನೀನು ಯಾವ ಜಾತಿ’ ಎಂದು ಕೇಳಿದರು. ನಾನು ಹೇಳುವಷ್ಟರಲ್ಲೇ ಅವರು ನೀನು ‘ಎಕೆ’ನಾ (ಆದಿ ಕರ್ನಾಟಕ) ಅಂದ್ರು, ನೀನು ಮಾದಿಗ ಜಾತಿ ಅಲ್ವಾ ಎಂದರು. ನಾನು ಹೌದು.. ಎನ್ನುತ್ತಿದ್ದಂತೆಯೇ ನನ್ನ ತಾಯಿಯ ಕುರಿತು ಕೆಟ್ಟ ಮಾತಿನಿಂದ ನಿಂದಿಸಿದರು. ಇಂದು ಹೊಸ ವರ್ಷ, ನಾವು ಪೂಜೆ ಇಟ್ಟುಕೊಂಡಿದ್ದೇವೆ, ಮಾದಿಗ ಜಾತಿಯವನು ನೀನು ಹೇಗೆ ಬಂದೆ? ಎಂದು ಕೋಪಗೊಂಡ ಸುಮಾರು ಹದಿನೈದಿಪ್ಪತ್ತು ಜನ, ಜೆಸಿಬಿ ಹತ್ತಿ ನನ್ನನ್ನು ಥಳಿಸಲು ಆರಂಭಿಸಿದರು’ ಎಂದು ವಿವರಿಸಿದರು.

ಗೇರುಮರಡಿ ಗ್ರಾಮದ ರಂಗನಾಥ ಸ್ವಾಮಿ ದೇಗುಲದ ಮುಂದೆ ದಲಿತ ಮುಖಂಡರು ಮತ್ತು ಅಧಿಕಾರಿಗಳು

‘ನಾನು ಮಾತನಾಡುವುದಕ್ಕೂ ಅವಕಾಶ ನೀಡಿದ ಜನರು, ಮನಸೋಇಚ್ಛೆ ಹೊಡೆದರು. ನನ್ನನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದವರನ್ನೂ ಬೈದರು. ಸಣ್ಣ ಮಕ್ಕಳು ಸೇರಿದಂತೆ ಅಲ್ಲಿನ ಮಹಿಯರಿಂದಲೂ ನನಗೆ ಹೊಡೆಸಿದ್ದಾರೆ. ನನ್ನ ಬಳಿ ಇದ್ದ ಇಪ್ಪತ್ತು ಸಾವಿರ ರೂಪಾಯಿ ಚೀಟಿ ದುಡ್ಡನ್ನೂ ಕಿತ್ತುಕೊಂಡು ದಂಡ ಎಂದು ಕಟ್ಟಿಸಿಕೊಂಡರು. ಇವನಿಂದ ಒಂದು ಲಕ್ಷ ರೂಪಾಯಿ ದಂಡ ಕಟ್ಟಿಸಿಕೊಳ್ಳಿ, ಶರ್ಟ್ ಬಿಚ್ಚಿಸಿ ಕಂಬಕ್ಕೆ ಕಟ್ಟಿ ಎಂದು ಕೆಲವರು ಹೇಳಿದ್ರು. ನನ್ನನ್ನು ಹೊಡೆಯುತ್ತಲೇ ಕರೆದುಕೊಂಡು ಬಂದು ರಸ್ತೆಗೆ ಎಸೆದರು. ತಿಪ್ಪೆಗೆಲ್ಲಾ ನನ್ನನ್ನು ಹಾಕಿ ತುಳಿದರು. ಒಬ್ಬನಂತೂ ಕುಡುಗೋಲಿನಿಂದ ನನ್ನ ಕುತ್ತಿಗೆಗೆ ಹಲ್ಲೆ ನಡೆಸಲು ಯತ್ನಿಸಿದ, ನಾನು ತಪ್ಪಿಸಿಕೊಂಡಿದ್ದರಿಂದ ಅದು ನನ್ನ ಬಟ್ಟೆಗೆ ತಾಗಿ ಹರಿಯಿತು. ನಾನು ತಕ್ಷಣ ದಲಿತ ಮುಖಂಡರಾದ ಸುನಿಲ್ ಅವರಿಗೆ ಕರೆ ಮಾಡಿದ್ದೆ; ಅವರು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದರು.

‘ನನ್ನನ್ನು ಹೊಡೆದದ್ದು ಮಾತ್ರವಲ್ಲ… ನಾನು ಗ್ರಾಮಕ್ಕೆ ಹೋಗಿದ್ದಕ್ಕೆ ಮೈಲಿಗೆ ಆಗಿದೆ ಎಂಬ ಕಾರಣಕ್ಕೆ ಮನೆಯಲ್ಲಿರುವ ನೀರನ್ನೆಲ್ಲಾ ನನ್ನ ಮುಂದೆಯೇ ಹೆಂಗಸರು ಚೆಲ್ಲಿದರು. ಒಂದು ಕಡೆ ನನಗೆ ಹೊಡೆಯುತ್ತಾ… ಮತ್ತೊಂದು ಕಡೆ ಹಣ ಕಿತ್ತುಕೊಂಡರು. ನಾನು ಆ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಬೇಕಾ? ಹಣ ಉಳಿಸಿಕೊಳ್ಳಬೇಕಾ ಎಂಬುದೆ ಗೊತ್ತಾಗಲಿಲ್ಲ. ನನ್ನ ದೇಹದ ಅತಿ ಸೂಕ್ಷ್ಮ ಜಾಗಗಳಿಗೆಲ್ಲಾ ಕಾಲಿನಿಂದ ಒದ್ದರು. ನಾನು ಹೋಗ್ತೀನಿ ಎಂದರೂ ಬಿಡಲಿಲ್ಲ; ಮಾದಿಗ …ಳೆ ಮಕ್ಕಳಿಂದಲೇ ನಮ್ಮ ಊರು ಹಾಳಾಗಿದೆ ಎಂದು ನಿಂದಿಸಿದರು. ಅಂದು ನಾನು ಸ್ವಲ್ಪ ಯಾಮಾರಿದ್ದರೂ ಅವರೆಲ್ಲಾ ನನ್ನ ಜೀವವನ್ನೇ ತೆಗೆಯುತ್ತಿದ್ದರು’ ಎಂದು ನಿಟ್ಟುಸಿರು ಬಿಟ್ಟರು ಮಾರುತಿ.

‘ನಾವು ಐದು ಜನ ಮಕ್ಕಳು, ತಂದೆ ಇಲ್ಲ; ಅಕ್ಕಂದಿರಿಗೆ ಮದುವೆ ಆಗಿದೆ. ನಾನು ನಮ್ಮ ಅಣ್ಣಂದಿರು, ನನ್ನ ತಾಯಿ ಎಲ್ಲರೂ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ’ ಎಂದರು.

ಘಟನೆ ಕುರಿತು ‘ನಾನುಗೌರಿ.ಕಾಂ’ ಜತೆಗೆ ಮಾತನಾಡಿದ ಕರ್ನಾಟಕ ರಾಜ್ಯ ಮಾದಿಗ ಸಮಾಜ ಸಂಘಟನೆಯ ತರೀಕೆರೆ ತಾಲೂಕು ಅಧ್ಯಕ್ಷ ಸುನೀಲ್ ಡಿಎನ್, ‘ಹೊಸ ವರ್ಷದ ದಿನದಂದು ಮಾದಿಗ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಮಾರುತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೊಡೆದಿದ್ದರು. ಘಟನೆ ನಡೆದ ಮರುದಿನವೆ 2ನೇ ತಾರೀಕು ಗ್ರಾಮದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆನಂತರವೂ ಗ್ರಾಮಸ್ಥರು ಹೇಳಿಕೆ ನೀಡಿ, ‘ಗ್ರಾಮಕ್ಕೆ ಯಾವ ಜಾತಿ ಜನರು ಬೇಕಾದರೂ ಬರಬಹುದು. ಆದರೆ, ಮಾದಿಗ ಜಾತಿಯ ಜನರು ಮಾತ್ರ ಬರುವಂತಿಲ್ಲ’ ಎಂದು ಹೇಳಿದ್ದಾರೆ. ಆ ಗ್ರಾಮದ ಗೊಲ್ಲ ಸಮುದಾಯದ ಮಕ್ಕಳು ಚಪ್ಪಲಿ ಹಾಕುವಂತಿಲ್ಲ, ಮುಟ್ಟಾದ ಹೆಣ್ಣು ಮಕ್ಕಳನ್ನು ಈಗಲೂ ಅವರು ಐದು ದಿನ ಹೊರಗಡೆ ಇಡುತ್ತಾರೆ. ನಮಗೆ ಮಾತ್ರವಲ್ಲ ಆ ಸಮುದಾಯದ ಹೆಣ್ಣು ಮಕ್ಕಳಿಗೂ ಅವರಿಂದ ಅನ್ಯಾಯ ಆಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರ ಜತೆಗೆ ಜ.9ರಂದು ಗ್ರಾಮಕ್ಕೆ ಭೇಟಿ ನೀಡಿದ್ದೇವೆ. ದೇವಸ್ಥಾನದ ಬೀಗ ಕೊಡುವಂತೆ ತಹಶೀಲ್ದಾರ್ ಕೇಳಿದರೂ ಅವರು ಕೊಟ್ಟಿಲ್ಲ. ಕೀ ಕೊಡದೇ ಇದ್ದಾಗ ಅನಿವಾರ್ಯವಾಗಿ ಬಾಗಿಲು ಹೊಡೆದು ಪೂಜೆ ಮಾಡಿದಸಿದ್ದೇವೆ. ಈವರೆಗೆ ನಾಲ್ಕು ಜನರನ್ನುಮಾತ್ರ ಬಂಧಿಸಿದ್ದಾರೆ; ಇನ್ನೂ 11 ಜನರು ತಲೆ ತಪ್ಪಿಸಿಕೊಂಡಿದ್ದಾರೆ. ಅವರನ್ನು ಬಂಧಿಸದಿದ್ದರೆ 15ನೇ ತಾರೀಕು ಮತ್ತೆ ಹೋರಾಟ ಮಾಡುತ್ತೇವೆ’ ಎಂದು ಸುನಿಲ್ ಎಚ್ಚರಿಕೆ ನೀಡಿದರು.

ಗೇರುಮರಡಿ ಗ್ರಾಮದ ಗೊಲ್ಲರ ಬೀದಿ

ದಲಿತ ಯುವಕ ಮಾರುತಿ ದೇವಸ್ಥಾನ ಪ್ರವೇಶದ ನೇತೃತ್ವ ವಹಿಸಿದ್ದ ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಮಂಗಳವಾರ ಮಾಧ್ಯಮಗಳ ಮುಂದೆ ಮಾತನಾಡಿ, ‘ಜೆಸಿಬಿ ಕೆಲಸಕ್ಕೆ ಬಂದಿದ್ದ ಮಾರುತಿ ಮೇಲೆ ಜಾತಿ ಕಾರಣಕ್ಕಾಗಿ ಹಲ್ಲೆ ನಡೆದಿದೆ. ಪೊಲೀಸರು ದೂರು ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದಾರೆ. ದೇವರ ಕಾರಣವನ್ನು ಇಟ್ಟುಕೊಂಡು ಜಾತಿ ಹೆಸರಿಇಂದ ನಿಂದಿಸಿ ಅವರು ಹಲ್ಲೆ ಮಾಡಿದ್ದರು. ದೇವರು ಈ ಜಾತಿಯವರನ್ನು ನಿರಾಕರಿಸುತ್ತಾರಾ ಎಂಬುದನ್ನು ನಾವು ನೋಡಬೇಕಿತ್ತು. ದೇವಸ್ಥಾನ ಪ್ರವೇಶ ಸಾಂವಿಧಾನಿಕ ಹಕ್ಕು, ನಮಗೆ ಪ್ರವೇಶ ನೀಡಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮನವಿ ಮಾಡಿದ್ದೆವು. ಅವರು ನಮ್ಮನ್ನು ಕರೆದುಕೊಂಡು ಬಂದಿದ್ದಾರೆ. ಯಾವ ದೇವರ ಕಾರಣಕ್ಕೆ ಹಲ್ಲೆ ಮಾಡಿದ್ದರೋ, ಅದೇ ದೇವರಿಗೆ ಹಲ್ಲೆಗೊಳಗಾದ ಯುವಕ ಮಾರುತಿ ತನ್ನ ಕೈಯಾರೆ ಹಾರ ಹಾಕಿ, ಕರ್ಪೂರ ಹಚ್ಚಿ ಕೈ ಮುಗಿದಿದ್ದಾನೆ. ದೇವರು ಹಾಗೂ ದೆವ್ವದ ಮುಂದೆ ಎಲ್ಲರೂ ಸಮಾನರು. ಅದನ್ನು ಹೇಳುವುದಕ್ಕಾಗಿಯೇ ನಾವು ಈ ಕೆಲಸ ಮಾಡಿದ್ದೇವೆ’ ಎಂದರು.

‘ಅಸ್ಪೃಶ್ಯತೆ ಎಂಬ ಜಾತಿ ರೋಗ ಆದಷ್ಟು ಬೇಗ ತೊಲಗಲಿ; ಮಾರುತಿ ಮಾದಿಗ ಜಾತಿಗೆ ಸೇರಿದವನು. ಮಾದಿಗರು ಇಲ್ಲಿಗೆ ಬಂದರೆ ನಿಮ್ಮ ಜಾತಿಯೇ ಕೆಡುತ್ತದೆ ಎಂದು ಗೊಲ್ಲರು ಹೇಳಿದ್ದಾರೆ. ಆದರೆ, ಶ್ರೀಕೃಷ್ಣನೆ ಮಾದಿಗ ಸಮುದಾಯದ ಜಾಂಭವತಿಯನ್ನು ಮದುವೆಯಾಗಿದ್ದಾರೆ. ಮಾದಿಗರ ಜಾಂಭವಂತನ್ನು ಮಾವನನ್ನಾಗಿ ಪಡೆದ ಶ್ರೀಕೃಷ್ಣ ಈ ಸಮುದಾಯವನ್ನು ಯಾಕೆ ಕಡೆಗಣಿಸ್ತಾನೆ? ಸಾಧ್ಯವಾದಷ್ಟು ಬೇಗ ನೀವು ಈ ಮೌಢ್ಯದಿಂದ ಹೊರಬನ್ನಿ. ಮೌಢ್ಯ ನಿಮ್ಮನ್ನು ಮಾತ್ರವಲ್ಲದೆ ಸಮಾಜವನ್ನೂ ಸುಡುತ್ತದೆ. ನಾವು ಇಲ್ಲಿಗೆ ಬರುವಾಗ ಪ್ರೀತಿಯ ಬೀಜವನ್ನು ನೆಟ್ಟು, ಹೂ ಅರಳಿಸಲು ಬಂದಿದ್ದೇವೆ ಎಂದು ಹೇಳಿದ್ದೆವು, ಗ್ರಾಮಸ್ಥರು ನಮ್ಮ ಜೊತೆಗೆ ಸೇರಬೇಕಿತ್ತು’ ಎಂದರು.

ಇದನ್ನೂ ಓದಿ; ಗೊಲ್ಲರ ಬೀದಿಗೆ ತೆರಳಿದ್ದ ದಲಿತ ಯುವಕನ ಮೇಲೆ ಹಲ್ಲೆ; ದಂಡ ಕಟ್ಟಿಸಿಕೊಂಡ ಮುಖಂಡರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...