Homeಅಂತರಾಷ್ಟ್ರೀಯಇರಾನ್‌ನ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ಮೊಹಮ್ಮದ್ ಮೊಖ್ಬರ್ ಯಾರು?

ಇರಾನ್‌ನ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ಮೊಹಮ್ಮದ್ ಮೊಖ್ಬರ್ ಯಾರು?

- Advertisement -
- Advertisement -

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತಪಟ್ಟ ಬೆನ್ನಲ್ಲಿ ಇರಾನ್‌ನ ಹಂಗಾಮಿ ಅಧ್ಯಕ್ಷರಾಗಿ 68 ವರ್ಷದ ಮೊಹಮ್ಮದ್ ಮೊಖ್ಬರ್ ಅವರನ್ನು ನೇಮಿಸಲಾಗಿದೆ. ಮೊಖ್ಬರ್, ಇರಾನ್‌ನ ಮೊದಲ ಉಪಾಧ್ಯಕ್ಷರಾಗಿದ್ದಾರೆ. ಇವರು ಈಗ 50 ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿರುವ ಮೂವರ ಮಂಡಳಿಯನ್ನು ಮುನ್ನಡೆಸುತ್ತಿದ್ದಾರೆ.

ಇರಾನ್‌ನ ಹಂಗಾಮಿ ಅಧ್ಯಕ್ಷ ಮೊಹಮ್ಮದ್ ಮೊಖ್ಬರ್, ಸಂಸತ್ತಿನ ಸ್ಪೀಕರ್ ಮತ್ತು ನ್ಯಾಯಾಂಗದ ಮುಖ್ಯಸ್ಥರು ಮೂವರು ವ್ಯಕ್ತಿಗಳ ಸದಸ್ಯತ್ವದ ಮಂಡಳಿಯ ಭಾಗವಾಗಿದ್ದಾರೆ. ಸಮಿತಿಯು ಅಧ್ಯಕ್ಷರ ಮರಣದ 50 ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆಯನ್ನು ಆಯೋಜಿಸಲಿದೆ.

1955ರ ಸೆ.1ರಂದು ಜನಿಸಿದ ಮೋಖ್ಬರ್, ರೈಸಿಯಂತೆಯೇ ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ನಿಕಟವರ್ತಿಯಾಗಿದ್ದಾರೆ. 2021ರಲ್ಲಿ ರೈಸಿ ಇರಾನ್‌ನ ಅಧ್ಯಕ್ಷರಾಗಿ ಆಯ್ಕೆಯಾದಾಗ ಮೊಖ್ಬರ್ ಮೊದಲ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮೊಖ್ಬರ್ ಅಕ್ಟೋಬರ್‌ನಲ್ಲಿ ಮಾಸ್ಕೋಗೆ ಭೇಟಿ ನೀಡಿದ ಇರಾನ್ ಅಧಿಕಾರಿಗಳ ತಂಡದ ಭಾಗವಾಗಿದ್ದರು ಮತ್ತು ರಷ್ಯಾದ ಮಿಲಿಟರಿಗೆ ಕ್ಷಿಪಣಿಗಳು ಮತ್ತು ಹೆಚ್ಚಿನ ಡ್ರೋನ್‌ಗಳನ್ನು ಪೂರೈಸಲು ಒಪ್ಪಿಕೊಂಡ ಸಮಿತಿಯ ಭಾಗವಾಗಿದ್ದರು. ತಂಡದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿಯೂ ಇದ್ದರು.

ಮೊಖ್ಬರ್ ಈ ಹಿಂದೆ ಸರ್ವೋಚ್ಚ ನಾಯಕನಿಗೆ ಸಂಬಂಧಿಸಿರುವ ಹೂಡಿಕೆ ನಿಧಿಯಾದ ಸೆಟಾಡ್‌ನ ಮುಖ್ಯಸ್ಥರಾಗಿದ್ದರು. 2010ರಲ್ಲಿ ಯುರೋಪಿಯನ್ ಒಕ್ಕೂಟವು “ಪರಮಾಣು ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿದ್ದಕ್ಕಾಗಿ ಮೊಖ್ಬರ್‌ನ್ನು ತನ್ನ ಪಟ್ಟಿಯಲ್ಲಿ ಸೇರಿಸಿತ್ತು. ಇದಾದ ಎರಡು ವರ್ಷಗಳ ನಂತರ ಅವರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್‌ ಅಮೀರ್ ಅಬ್ದುಲ್ಲಾಹಿ ಇದ್ದ ಹೆಲಿಕಾಪ್ಟರ್‌ ನಿನ್ನೆ ಪತನವಾಗಿತ್ತು. ಆದರೆ ಹೆಲಿಕಾಪ್ಟರ್‌ನಲ್ಲಿದ್ದವರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್‌ ಅಮೀರ್ ಅಬ್ದುಲ್ಲಾಹಿ ದುರಂತದಲ್ಲಿ ಮೃತಪಟ್ಟಿರುವ ಆಘಾತಕಾರಿ ಸುದ್ದಿಯನ್ನು ಇರಾನ್‌ನ ಅಧಿಕಾರಿಗಳು ಇಂದು ಬಹಿರಂಗಗೊಳಿಸಿದ್ದಾರೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್‌ ಅಮೀರ್ ಅಬ್ದುಲ್ಲಾಹಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಅಧಿಕಾರಿಗಳು ಪರ್ವತ ಭೂಪ್ರದೇಶದ ಹಿಮಾವೃತ ವಾತಾವರಣದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಯೊಬ್ಬರು ಸೋಮವಾರ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದ ನಂತರ ತಿಳಿಸಿದ್ದಾರೆ.

ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಾವನ್ನು ದೃಢಪಡಿಸಿದೆ. ಇರಾನ್ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರನ್ನು ಹೊತ್ತ ಹೆಲಿಕಾಪ್ಟರ್‌ನ ಎಲ್ಲಾ ಪ್ರಯಾಣಿಕರು ಹುತಾತ್ಮರಾಗಿದ್ದಾರೆ ಎಂದು ವರದಿ ಮಾಡಿದೆ.

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಇರಾನ್‌ನ ತಬ್ರೀಝ್‌ ನಗರದಲ್ಲಿ ಆಝರ್‌ಬೈಜಾನ್‌ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆಗೂಡಿ ಖಿಝ್‌ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಹಾರಾಟ ಆರಂಭಿಸಿದ ಸುಮಾರು 30 ನಿಮಿಷಗಳಲ್ಲಿ ಹೆಲಿಕಾಪ್ಟರ್‌ ಸಂಪರ್ಕ ಕಳೆದುಕೊಂಡಿತ್ತು. ಇರಾನ್‌ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ನಾಪತ್ತೆಯಾಗಿದೆ ಎಂಬ ಸುದ್ದಿ ಬೆನ್ನಲ್ಲಿ 60ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕೆಟ್ಟ ಹವಾಮಾನ ಪರಿಸ್ಥಿತಿಗಳ ನಡುವೆ ಶೋಧ ನಡೆಸಿದ್ದವು.

ಇದನ್ನು ಓದಿ: ದಲಿತ-ಬಂಡಾಯ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಲಕ್ಕೂರು ಆನಂದ ನಿಧನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಕಂಪನಿಗೆ ಕೇಂದ್ರದ ನೆರವು: ಮಾತು ಬದಲಿಸಿದ ಸಚಿವ ಕುಮಾರಸ್ವಾಮಿ

0
ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿರುವ ಕಂಪನಿಗೆ ನೀಡುತ್ತಿರುವ ಸಹಾಯಧನದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಮಾತು ಬದಲಿಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ...