ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ (ಏ.14) ಸದಾಶಿವನಗರದ ತಮ್ಮ ಮನೆ ಹಾಗೂ ಕೆಪಿಸಿಸಿ ಕಚೇರಿ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಸೀರ್ ಅಹ್ಮದ್ ಅವರಿಗೆ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಹೋಗಿ ಬಂಡಾಯ ಅಭ್ಯರ್ಥಿ ಹಿಂದೆ ಸರಿಯುವಂತೆ ಮಾಡಲು ಪಕ್ಷ ಸೂಚಿಸಿತ್ತು. ಅವರು ಈ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲಿ ಏನಾಗಿದೆ ಎಂದು ನನಗೆ ಇನ್ನು ವರದಿ ಬರಬೇಕಿದೆ ಎಂದಿದ್ದಾರೆ.
ಯಾವುದೇ ಪಕ್ಷವಾದರೂ ಶಿಸ್ತು ಬಹಳ ಮುಖ್ಯ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ನಂತರ ನಾವು ಎಲ್ಲಾ ನಾಯಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆವು. ನಮ್ಮ ನಾಯಕರ ವರದಿಗಳ ಆಧಾರದ ಮೇಲೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ನೀವು ಶಾಕರನ್ನು ಒಬ್ಬೊಬ್ಬರಾಗಿ ಕರೆದು ಮಾತನಾಡುತ್ತಿದ್ದಂತೆ ಹೌದಾ? ಎಂದು ಕೇಳಿದ್ದಕ್ಕೆ, ರಾಜಕಾರಣ ಮಾಡುವಾಗ ನಾವು ನಮ್ಮ ಶಾಸಕರ ಜೊತೆ ಭವಿಷ್ಯ ರೂಪಿಸುವ ಬಗ್ಗೆ ಚರ್ಚೆ ಮಾಡಬೇಕಲ್ಲವೇ. ಯಾರಿಗೆ ಏನು ಹೇಳಬೇಕು, ಯಾರಿಗೆ ಯಾವ ಮಾರ್ಗದರ್ಶನ ನೀಡಬೇಕು ನೀಡುತ್ತೇವೆ. ಪಾಲಿಕೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಚರ್ಚೆ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ. ಈ ಕೆಲಸ ನಾನು ಮಾಡದೇ ಬೇರೆ ಯಾರು ಮಾಡುತ್ತಾರೆ? ಎಂದರು.


