Homeನ್ಯಾಯ ಪಥಕಥೆ-ಕಾದಂಬರಿಗಳ ಗಟ್ಟಿ ಸ್ತ್ರೀಪಾತ್ರಗಳು ಮತ್ತು ಸ್ತ್ರೀಚಾತುರ್ಯದ ಕಥನಗಳು

ಕಥೆ-ಕಾದಂಬರಿಗಳ ಗಟ್ಟಿ ಸ್ತ್ರೀಪಾತ್ರಗಳು ಮತ್ತು ಸ್ತ್ರೀಚಾತುರ್ಯದ ಕಥನಗಳು

- Advertisement -
- Advertisement -

ತನ್ನ ಯುದ್ಧತಂತ್ರಗಳಿಗೆ ಖ್ಯಾತನಾದ ಚಾಣಕ್ಯನ ಕುರಿತು ಒಂದು ಕತೆಯಿದೆ. ಒಮ್ಮೆ ಆತ ಅಡಗೂಲಜ್ಜಿ ಮನೆಯಲ್ಲಿ ಉಳಿದುಕೊಂಡಿರುತ್ತಾನೆ. ಅವನಿಗೆ ಆಕೆ ಬಿಸಿ ಪಾಯಸ ಬಡಿಸುತ್ತಾಳೆ. ಅವನು ಅದನ್ನು ನಡುಭಾಗದಿಂದ ತಿನ್ನಲು ಯತ್ನಿಸಿ ಕೈಸುಟ್ಟುಕೊಳ್ಳುತ್ತಾನೆ. ಆಗಾಕೆ ಅಂಚಿನಿಂದ ತಿನ್ನಲು ಆರಂಭಿಸಬೇಕೆಂದೂ, ಇಲ್ಲದಿದ್ದರೆ ಶತ್ರುಗಳ ನಡುವೆ ನಿಂತು ಯುದ್ಧ ಮಾಡುವ ಚಾಣಕ್ಯನಂತೆ ಮೂರ್ಖತನ ಆಗುತ್ತದೆಂದೂ ನುಡಿಯುತ್ತಾಳೆ. ಆತ ಅಲ್ಲಿಂದ ರಾಜನೀತಿಯ ಪಾಠವನ್ನು ಕಲಿತು ಮರಳಿ ಬಂದು ಯುದ್ಧವನ್ನು ಗೆಲ್ಲುತ್ತಾನೆ. ಯುದ್ಧಸಂಸ್ಕೃತಿಯೇ ಸ್ತ್ರೀವಿರೋಧಿಯಾಗಿದ್ದು ಮತ್ತು ಕೊಲೆಗಡುಕ ಯುದ್ಧ ಗೆಲ್ಲಲು ಹೆಣ್ಣೊಬ್ಬಳು ಸಲಹೆ ನೀಡುವುದೇ ಒಂದು ವೈರುಧ್ಯ. ಆದರೆ ಇಂತಹ ಕತೆಗಳನ್ನು ಸ್ತ್ರೀಜಾಣ್ಮೆಯ ಪ್ರತೀಕಗಳಾಗಿ ಗ್ರಹಿಸಬೇಕು. ಇದರಂತೆಯೇ, ಅಡುಗೂಲಜ್ಜಿಯೊಬ್ಬಳು, ತರುಣನೊಬ್ಬನಿಗೆ ರಾಜಕುಮಾರಿ ಒಡ್ಡಿದ ಪಂಥವನ್ನು ಗೆಲ್ಲಲು ಬೇಕಾದ ಗುಟ್ಟು ತಿಳಿಸುವ, ಕಳ್ಳರನ್ನು ಹಿಡಿಯಲಾಗದೆ ಅಸಹಾಯಕನಾದ ತಳವಾರನಿಗೆ ಅವನ ಹೆಂಡತಿ ಉಪಾಯ ಹೇಳುವ, ರಾಜನಿತ್ತ ಸಮಸ್ಯೆ ಬಿಡಿಸಲಾಗದೆ ಒದ್ದಾಡುತ್ತಿರುವ ಮಂತ್ರಿಗೆ ಮಗಳು ನೆರವಾಗುವ ಕತೆಗಳು ಇವೆ. ಇಲ್ಲಿರುವ ಸಾಮಾನ್ಯ ಅಂಶವೆಂದರೆ, ಅಧಿಕಾರ ಕೇಂದ್ರವು ಒಡ್ಡಿದ ಸವಾಲು, ಬಿಡಿಸಲು ವಿಫಲರಾದ ಪುರುಷರು ಮತ್ತು ನೆರವಾಗುವ ಮಹಿಳೆಯರು.

ಸ್ತ್ರೀಜಾಣ್ಮೆಯ ಕತೆಗಳು ಆಧ್ಯಾತ್ಮಿಕ ಜಗತ್ತಿನಲ್ಲಿ ಇನ್ನೊಂದು ತೆರನಾಗಿವೆ. ತಮ್ಮ ಬೌದ್ಧಿಕ ಪ್ರಖರತೆಯಿಂದ ಪ್ರತಿವಾದಿಗಳನ್ನೂ ಸೋಲಿಸುತ್ತ ತಿರುಗುತ್ತಿದ್ದ ಶಂಕರರನ್ನು ಮಣಿಸಿದ ವಿದ್ಯಾಭಾರತಿ; ಕಲ್ಯಾಣದ ಶರಣರಿಗೆ
ಗುರುವಿನಂತಿದ್ದ ಅಲ್ಲಮನಿಗೆ ಮಾತಿನಲ್ಲಿ ಕಟ್ಟಿಹಾಕುವ ಮುಕ್ತಾಯಕ್ಕ; ಸಾಧನೆಯಿಂದ ಸೊಕ್ಕಿ ತಿರುಗುತ್ತಿದ್ದ ಚಾಂಗದೇವನಿಗೆ ನಿಜವಾದ ಆಧ್ಯಾತ್ಮವಿದ್ಯೆ ಹೇಳಿಕೊಡುವ ಮುಕ್ತಾಬಾಯಿ; ನವಲಗುಂದದ ನಾಗಲಿಂಗಪ್ಪನವರಿಗೆ ಜ್ವರಬಂದಾಗ, ತನ್ನೆದೆ ಹಾಲು ಕುಡಿಸಿ ಲೌಕಿಕದ ಮಹತ್ವವನ್ನು ತಿಳಿಸಿಕೊಡುವ ಸಮಗಾರ ಭೀಮವ್ವ; ಉನ್ನತ ವಿದ್ಯೆ ಕೊಡಬಲ್ಲ ಗುರುವಿಗಾಗಿ ಹುಡುಕುತ್ತ ಅಲೆಯುತ್ತಿದ್ದ ಬೌದ್ಧಯೋಗಿ ಸರಪಹಾದ, ಬಾಣಮಾಡುವ ಬೇಡರ ಮಹಿಳೆಯನ್ನು ಗುರುವಾಗಿ ಒಪ್ಪಿಕೊಳ್ಳುವುದು-ಹೀಗೆ ಪಟ್ಟಿ ಬೆಳೆಸುತ್ತ ಹೋಗಬಹುದು. ತುಳಸಿದಾಸ-ಪುರಂದರದಾಸರ ದಾಸತ್ವದ ಹಿಂದೆಯೂ ಬುದ್ಧಿಕಲಿಸಿದ ಮಡದಿಯರ ಕತೆಗಳಿವೆ.

ಪ್ರಶ್ನೆಯೆಂದರೆ, ಒಂದು ಸಂಸ್ಕೃತಿ ಇಂತಹ ಕತೆಗಳನ್ನು ಯಾಕಾಗಿ ಸೃಷ್ಟಿಸುತ್ತದೆ? ಪ್ರತಿಭೆ ಚಾತುರ್‍ಯ ವಿವೇಕ ವಿಶೇಷಾನುಭವಗಳು ಮಹಿಳೆಯರಲ್ಲಿ ಇರುವುದನ್ನು ಸಹಜವಾಗಿ ಇವು ಚಿತ್ರಿಸುತ್ತಿವೆಯೊ, ಮಹಿಳೆಯಲ್ಲಿರುವ ಜ್ಞಾನವನ್ನು ಪರಿಗಣಿಸಿದ ಗಂಡಹಮಿಕೆಯ ಚಿಂತನ ಕ್ರಮವನ್ನು ಚುಚ್ಚಿ ಬುದ್ಧಿ ಹೇಳುವುದಕ್ಕೆಂದು ಹುಟ್ಟಿವೆಯೋ? ಹೆಣ್ಣನ್ನು ತಾಯಾಗಿ, ದೇವಿಯಾಗಿ ಆರಾಧಿಸುತ್ತ, ಅದೇ ಕಾಲಕ್ಕೆ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರವೇಶಿಸಿದಂತೆ ಇಡುವ ಗಂಡಾಳಿಕೆಯು, ಹೆಣ್ವಿಜಯದ ಕಥೆಗಳನ್ನು ಸಾಂಕೇತಿಕವಾಗಿ
ಉಳಿಸಿಕೊಂಡಿದೆಯೇ? ಹೆಣ್ಣಿನ ದೈಹಿಕ ಚೆಲುವನ್ನು ಆತ್ಯಂತಿಕ ಮಾನದಂಡ ಮಾಡಿಕೊಂಡಿರುವ ಎಲ್ಲ ಆಲೋಚನ ಕ್ರಮಗಳು, ಅಂತಿಮವಾಗಿ ಅವಳ ಬೌದ್ಧಿಕ ಪ್ರತಿಭೆ ಮತ್ತು ಕುಶಲತೆಗಳನ್ನು
ನಿರಾಕರಿಸುತ್ತಿರುತ್ತವೆ.

ಈ ದಿಸೆಯಲ್ಲಿ ಎರಡು ಸಾಧ್ಯತೆಗಳಿವೆ. ಮೊದಲನೆಯದಾಗಿ-ಗಂಡಾಳಿಕೆಯ ಸಮಾಜಗಳು ಸ್ತ್ರೀಜಾಣ್ಮೆಯ ಕಥನಗಳನ್ನು ಗಂಡಹಮಿಕೆಗೆ ಪೆಟ್ಟು ಕೊಡಲೆಂದೇ ಸೃಷ್ಟಿಸಿಕೊಂಡಿರುವುದು. ಹೀಗೆ ಉದ್ದೇಶಪೂರ್ವಕವಾಗಿ ಸೃಷ್ಟಿಯಾದ ಪಾತ್ರವೆಂದರೆ, ಕುಸುಮಾಕರ ದೇವರಗೆಣ್ಣೂರರ ‘ನಿರಿಂದ್ರಿಯ’ದ ಬೃಂದಾ. ಕುಟುಂಬದ ಚರಾಚರಗಳ ಮೇಲೆ ತನ್ನ ಹಿಡಿತ ಸಾಧಿಸಿದ್ದ ಆಕೆಯ ಗಂಡ ರೊಳ್ಳಿಗೆ, ಬಾಳಿನ ಕೊನೆಯಲ್ಲಿ ತಾನು ವ್ಯರ್ಥವಾದ ಬದುಕು ನಡೆಸಿದೆ ಎನಿಸಿ ಪರಿತಾಪದಲ್ಲಿ ಕುಸಿಯುತ್ತಾನೆ. ಆಗ ಬೃಂದಾ ಕರುಣೆಯಿಂದ ತಾಯಂತೆ ಗೆಳತಿಯಂತೆ ಜತೆಗೆ ನಿಂತು ತನ್ನ ವಿವೇಕವನ್ನೂಡಿ ತಿದ್ದಿ ಅವನಿಗೆ ಹೊಸಬದುಕನ್ನು ಕೊಡುತ್ತಾಳೆ. ಶಾಕ್ತಪಂಥದಲ್ಲಿರುವ ಬಹುತೇಕ ಕಥನಗಳು ಕೂಡ ಹೀಗೆ ಪ್ರಜ್ಞಾಪೂರ್ವಕವಾಗಿ ಪುರುಷರಿಗೆ ಕಲಿಸಲೆಂದೇ ಹುಟ್ಟಿದವು. ಶಾಕ್ತ ದರ್ಶನದಲ್ಲಿ ಸ್ತ್ರೀ ಸಮಸ್ತ ವಿದ್ಯೆಯ ಕೇಂದ್ರ. ಅವಳಿಲ್ಲದೆ ಶಿವ ಶವಕ್ಕೆ ಸಮಾನ. ಆದರೆ ವರ್ತಮಾನದ ಸಾಮಾಜಿಕ ವಾಸ್ತವವು ಇದಕ್ಕೆ ವಿರುದ್ಧವಾಗಿದೆ. ಮಾತೃಪ್ರಧಾನ ಸಮಾಜವು ಕಳೆದುಹೋದ ತನ್ನ ಸ್ಥಾನವನ್ನು ಮರಳಿಪಡೆದುಕೊಳ್ಳಲು ಕಾಲ್ಪನಿಕವಾಗಿ ಹುಟ್ಟಿಸಿಕೊಂಡ ಸಾಂಕೇತಿಕ ಕಥನಗಳೆಲ್ಲವೂ, ಪುರುಷರನ್ನು ಸೋಲಿಸುವ ಆಶಯವುಳ್ಳವು. ಮೆರೆವ ಗಂಡಸರನ್ನು ಸೋಲಿಸಿ ಹೆಣ್ಣನ್ನಾಗಿಸಿ ತನ್ನ ಭಕ್ತರಾಗಿಸಿಕೊಳ್ಳುವ ಎಲ್ಲಮ್ಮನ ಕಥನಗಳನ್ನು ಗಮನಿಸಬಹುದು.

ಸಾಮಾನ್ಯವಾಗಿ ಬದುಕಿದ ಸ್ತ್ರೀಯರ ಪಾತ್ರವನ್ನು, ಕೀರ್ತಿವೆತ್ತ ಪುರುಷರ ವಿರಾಟ್ ದಿಗ್ವಿಜಯಗಳ ಮುಂದಿಟ್ಟು ಮೌಲ್ಯಮಾಪನ ಮಾಡುವ ವಿಧಾನವುಳ್ಳ ಕೃತಿಗಳೆಲ್ಲವೂ ಈ ಉದ್ದೇಶಪೂರ್ವಕತೆ ಹೊಂದಿವೆ. ಇದಕ್ಕೆ ಚೀನಾದ ಬೌದ್ಧ ಚರಿತ್ರೆಕಾರ್ತಿ ಸುಶುಯೆನ್, ತಮ್ಮ ಆತ್ಮಚರಿತ್ರಾತ್ಮಕ ಪ್ರವಾಸಕಥನದಲ್ಲಿ ಚಿತ್ರಿಸುವ ಅಜ್ಜಿಯ ಪಾತ್ರ ನೆನಪಾಗುತ್ತದೆ. ಮಾವೊ ತನ್ನ ಸಾಂಸ್ಕೃತಿಕ ಕ್ರಾಂತಿಯ ಭರದಲ್ಲಿ ಜನರ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿದ ಕಾಲದಲ್ಲಿ, ಅಜ್ಜಿ ಹೇಗೆ ತನ್ನ ನಂಬಿಕೆ ಮತ್ತು ಆಚರಣೆಗಳನ್ನು ಕಾಪಾಡಿಕೊಂಡಳು ಮತ್ತು ಅವು ಅವಳ ಜೀವನಶ್ರದ್ಧೆ ಮತ್ತು ಕುಟುಂಬಪ್ರೀತಿಯ ಭಾಗವಾಗಿದ್ದವು ಎಂಬುದನ್ನು ಶುಯೆನ್ ತೀವ್ರವಾಗಿ ಚಿತ್ರಿಸುತ್ತಾರೆ. ಇದೊಂದು ಉದ್ದೇಶಪೂರ್ವಕ ತಾತ್ವಿಕ ಮುಖಾಮುಖಿ ಮತ್ತು ಬೆಲೆಗಟ್ಟುವ ಚಾರಿತ್ರಿಕ ವಿನ್ಯಾಸ. ಸಮಾಜವನ್ನು ಬದಲಿಸಲು ಹೊರಟ ಅಗಾಧ ಅಧಿಕಾರವುಳ್ಳ ಬಲಿಷ್ಠ ನಾಯಕನ ಕೃತ್ಯಗಳೆದುರು, ಅಜ್ಞಾತವಾಗಿದ್ದ ಮುದುಕಿಯ ಬದುಕನ್ನು ಮುಖಾಮುಖಿಸುವ ಮೂಲಕ, ಸಮಾಜದಲ್ಲಿ ಮಾನವ ಸಂಬಂಧಗಳು ಉಳಿದಿರುವುದು ಅಜ್ಜಿಯಂತಹ ಜೀವಗಳಿಂದ ಎಂದು ಅವರ ಕೃತಿ (‘ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್) ಧ್ವನಿಸುತ್ತದೆ.

ಬಲಿಷ್ಠ ವ್ಯಕ್ತಿ ಅಥವಾ ಸಮಾಜ ವ್ಯವಸ್ಥೆಗಳ ಎದುರು ಧೀಮಂತರಾದ ಸಾಮಾನ್ಯ ಮಹಿಳೆಯರನ್ನು ನಿಲ್ಲಿಸುವ ವಿನ್ಯಾಸದ ಕಾದಂಬರಿಗಳು ಕನ್ನಡದಲ್ಲೂ ಇವೆ. ಲಂಕೇಶರ ‘ಮುಸ್ಸಂಜೆ ಕಥಾಪ್ರಸಂಗ’ದ ರಂಗವ್ವನ ಪಾತ್ರ ಇಂತಹುದು. ಆಕೆ ತೆಗೆದುಕೊಳ್ಳುವ ಕ್ರಾಂತಿಕಾರಕ ನಿರ್ಧಾರಗಳು ತುಸು ನಾಟಕೀಯ ಎನಿಸುತ್ತವೆ. ತಮ್ಮ ಹಿಂದಿನ ಬರೆಹದಲ್ಲಿ ಸ್ತ್ರೀಯರ ಪಾತ್ರಗಳನ್ನು ಅಡಿಟಿಪ್ಪಣಿಗಳಾಗಿ ಚಿತ್ರಿಸಿದ ಲೇಖಕರು, ತಮ್ಮ ಮಾಗಿದ ಹಂತದಲ್ಲಿ, ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಮಾಡಿದ ಯತ್ನಗಳಂತೆಯೂ ಇವು ಗೋಚರಿಸುತ್ತವೆ. ಇದು ಕೆಲವೊಮ್ಮೆ ಗಂಡನ್ನು ಕ್ಷುದ್ರೀಕರಿಸುವಷ್ಟು ಸ್ತ್ರೀಪಾತ್ರಗಳನ್ನು ಉಜ್ವಲವಾಗಿ ಕಾಣಿಸುವಲ್ಲಿಗೂ ಹೋಗುತ್ತದೆ. ಈ ವಿನ್ಯಾಸವು ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಕಾದಂಬರಿಯಲ್ಲಿದೆ.

ಗಾರ್ಕಿಯ ‘ಮದರ್ನಲ್ಲೂ ಹೆಣ್ಣಲ್ಲಿ ಕ್ರಾಂತಿಕಾರಕ ಕರ್ತೃತ್ವಶಕ್ತಿಯನ್ನು ಪ್ರಜ್ಞಾಪೂರ್ವಕವಾಗಿ ತುಂಬುವ ಯತ್ನವಿದೆ. ಸಮಸ್ಯೆಯೆಂದರೆ, ಸ್ತ್ರೀಚೈತನ್ಯವನ್ನು ಕಾಣಿಸುವ ಬಹುತೇಕ ಪಾತ್ರಗಳು ತಾಯಂದಿರಾಗಿರುವುದು; ಜೀವನಸಂಗಾತಿಗಳಾಗದೆ ಇರುವುದು. ತಾಯ ಮಹತ್ವವನ್ನು ಉಮೇದಿನಿಂದ ಕಾಣಿಸುವ ಬಹಳಷ್ಟು ಲೇಖಕರು ಸಂಗಾತಿ ಪಾತ್ರಗಳ ವಿಷಯಕ್ಕೆ ಬಂದರೆ ನಿಗೂಢ ಮೌನಕ್ಕೆ ಇಲ್ಲವೇ ಕೃಪಣತೆಗೆ ಸಂದುಬಿಡುತ್ತಾರೆ. ದ್ರೌಪದಿಯನ್ನು ಧೀಮಂತಿಕೆಯ ಪ್ರತೀಕವೆಂದು ಬಣ್ಣಿಸಿದ ಲೋಹಿಯಾ ಅವರ ಚಿಂತನೆಯಿಂದ ಪ್ರಭಾವಿತರಾದ ಕೆಲವು ಲೇಖಕರಲ್ಲಿಯೇ ಈ ದ್ವಂದ್ವ ಇರುವುದು ಸೋಜಿಗ.

ಎರಡನೆಯದು-ಕೆಲವು ಕಾದಂಬರಿಗಳು ಸ್ತ್ರೀಯರ ಪಾತ್ರಗಳನ್ನು ಸ್ತ್ರೀವಾದಿ ಹಟದಿಂದ ಅಥವಾ ಪ್ರಜ್ಞಾಪೂರ್ವಕ
ಪ್ರತಿರೋಧ ಪ್ರಜ್ಞೆಯಿಂದ ಕಟ್ಟಿಕೊಡದೆ, ದೈನಿಕದಲ್ಲಿ ಬದುಕಿನ ಹಕೀಕತ್ತು ಇರುವುದೇ ಹೀಗೆ ಎಂಬ ಸಹಜ ಭಾವದಲ್ಲಿ ತರುತ್ತವೆ. ‘ಒಡಲಾಳ’ದ ಸಾಕವ್ವ, ಸಾಕವ್ವಳ ಅಕ್ಕನೊ ತಂಗಿಯೊ ಆಗಿರುವ ಪುಣೇಕರರ ‘ಗಂಗವ್ವ ಗಂಗಾಮಾಯಿ’ಯ ಗಂಗವ್ವ ಇಂತಹವರು. ವಿಧವೆಯರಾದ ಈ ಮುದುಕಿಯರು ತಮ್ಮ ಜೀವನಪ್ರೀತಿ, ಹೋರಾಟ, ಜಿಪುಣತನಗಳ ಸಮೇತ ಸಹಜ ಆಕಾರದಲ್ಲಿ ಮೈದಳೆದವರು. ಕಮೂನ ‘ಪ್ಲೇಗ್ನಲ್ಲೂ ಇಂತಹ
ಮುದುಕಿಯರಿದ್ದಾರೆ. ಒಬ್ಬಾಕೆ ಊರಿಗೆ ಅಮರಿಕೊಂಡಿರುವ ಪ್ಲೇಗಿನ ವಿರುದ್ಧ ಸೈನಿಕನಂತೆ ಮುಂಚೂಣಿಯಲ್ಲಿ ನಿಂತು ಸೆಣಸುತ್ತಿರುವ ಡಾ. ರಿಯೂನ ತಾಯಿ. ಮಗನ ತಲ್ಲಣದ ಗಳಿಗೆಗಳಲ್ಲಿ ನೈತಿಕ ಬೆಂಬಲವಾಗಿ ನಿಲ್ಲುವವಳು; ಅವನ ಆಪ್ತಸ್ನೇಹಿತರು ಪ್ಲೇಗಿನಿಂದ ನರಳುವಾಗ ಅವರನ್ನು ಮನೆಯಲ್ಲಿಟ್ಟು ಉಪಚರಿಸುವವಳು; ಮೃತ್ಯುಭೀತಿ ಗೆದ್ದ ಜಗತ್ತಿನ ಮಾನವೀಯ ಸ್ಪಂದನೆಗಳ ಮೂರ್ತಿಯಂತಿರುವವಳು. ಇನ್ನೊಬ್ಬಾಕೆ ಧರ್ಮಶ್ರದ್ಧೆಯುಳ್ಳ ಸಾಮಾನ್ಯ ಮುದುಕಿ. ಊರಿಗೆ ಪ್ಲೇಗು ಬಂದಿರುವುದು ದೇವರು ಜನರ ಪಾಪಕ್ಕೆ ವಿಧಿಸಿದ ಶಿಕ್ಷೆಯೆಂದೂ ಚರ್ಚಿನಲ್ಲಿ ಆವೇಶದಿಂದ ಪ್ರವಚನ ನೀಡಿದ ಪಾದ್ರಿಯು, ಪ್ಲೇಗಿಗೆ ತುತ್ತಾದಾಗ, ಮನೆಯಲ್ಲಿಟ್ಟು ಉಪಚರಿಸುವವಳು. ಪಾದ್ರಿಯು ತನ್ನ ಧಾರ್ಮಿಕ ಹಠದಿಂದ ಔಷಧಿ ಸ್ವೀಕರಿಸದೆ ಸಾಯುವುದನ್ನು ತಣ್ಣಗೆ ನೋಡುವ, ಅವನ ಧಾರ್ಮಿಕ ಜ್ಞಾನ ವ್ಯರ್ಥವೆಂಬ ನಿರ್ಲಿಪ್ತ ಮತ್ತು ವಿಷಾದ ಭಾವದಲ್ಲಿ ವರ್ತಿಸುವವಳು. ಈ ಇಬ್ಬರೂ ಮುದುಕಿಯರು ತಮ್ಮ ಕಸುವಿನಿಂದ, ವಾಸ್ತವ ಪ್ರಜ್ಞೆಯಿಂದ, ವಿಪತ್ತನ್ನು ಎದುರಿಸುವ ದಿಟ್ಟತನದಿಂದ ಘನತೆವೆತ್ತ ಪಾತ್ರಗಳಾಗಿವೆ. ಕನ್ನಡದಲ್ಲಿ ಹೀಗೆ ಧೀಮಂತ ಚಿತ್ರ ಇರುವುದು ಲಂಕೇಶರ ‘ಅವ್ವ ಕವಿತೆಯ ನಾಯಕಿಯಲ್ಲಿ. ನನ್ನ ಪ್ರಕಾರ, ಇದು ಅವರ ಕಾದಂಬರಿಯ ‘ರಂಗವ್ವನಿಗಿಂತ ಹೆಚ್ಚು ಜೀವಂತವಾದ ಸಹಜವಾದ ಪಾತ್ರ. ಆದರೂ ಕನ್ನಡ ಕಾವ್ಯಕ್ಕೆ ಹೋಲಿಸಿದರೆ, ಕತೆ ಕಾದಂಬರಿಗಳು ಹೆಚ್ಚಾಗಿ ಸ್ತ್ರೀವಿವೇಕವನ್ನು ಶೋಧಿಸುವ ಕಥನಗಳಾಗಿವೆ.

ಇದು ಕನ್ನಡದ ಪ್ರಥಮ ಕಾದಂಬರಿ ‘ಇಂದಿರಾಬಾಯಿ’ ಯಿಂದಲೇ ಶುರುವಾಯಿತು. ಇದಕ್ಕೆ ಕಾರಣ, ವಾಸ್ತವ ಬದುಕಿಗೆ ಹೆಚ್ಚು ಸಮೀಪ ನಿಂತು ಪ್ರತಿಬಿಂಬಗಳನ್ನು ಕಟ್ಟಿಕೊಡಬೇಕಾದ ಅವುಗಳ ರಚನಾವಿನ್ಯಾಸದ ಅನಿವಾರ್ಯತೆಯೂ ಇದ್ದೀತು.

ಕಲಾಲೋಕದಲ್ಲಿ ಕಾಣುವ ಇಂತಹ ಧೀಮಂತ ಸ್ತ್ರೀಚಿತ್ರಗಳು, ನಮಗೆ ನಮ್ಮ ಸಾಮಾಜಿಕ
ರಾಜಕೀಯ ಧಾರ್ಮಿಕ ಪರಿಸರವನ್ನು ಪರಿಶೀಲಿಸಲು ಪ್ರಚೋದಿಸುತ್ತವೆ. ಆಗ ಶಾಂತಿ ಕರುಣೆಯಂತಹ ಮೌಲ್ಯಗಳನ್ನು ಉಗ್ಗಡಿಸುತ್ತಲೇ ಮಹಿಳೆಯರನ್ನು ಧಾರ್ಮಿಕ ಸ್ವಾತಂತ್ರ್ಯದಿಂದ ಹೊರಗಿಟ್ಟಿರುವ ಧರ್ಮಗಳು; ಪ್ರಜಾಪ್ರಭುತ್ವವೆಂದು ಕರೆದುಕೊಂಡರೂ ಅಧಿಕಾರ ಕೇಂದ್ರಗಳಿಂದ ಸ್ತ್ರೀಯರನ್ನು ದೂರವಿಟ್ಟಿರುವ ರಾಜಕಾರಣ; ನಾವು ವಿಶ್ವಕ್ಕೆ ಮಾದರಿಯಾಗಬಲ್ಲೆವು ಎಂಬ ಉಬ್ಬಿನಲ್ಲಿದ್ದು ಸಾರ್ವಜನಿಕ ಬದುಕಿನಿಂದ ಮಹಿಳೆಯರನ್ನು ಹೊರಗಿಡಲು ಕಷ್ಟಪಡುವ ಸಮಾಜಗಳು ಕಾಣತೊಡಗುತ್ತವೆ. ಭಾರತದ ಕತೆಯಿರಲಿ, ಮುಕ್ತ ಸಮಾಜ ಎಂದು ಕರೆಯಲಾಗುವ ಅಮೆರಿಕಾದಲ್ಲಿ, ಅದರ ಡೆಮಾಕ್ರಸಿಯ ಎರಡೂವರೆ ಶತಮಾನಗಳ ಚರಿತ್ರೆಯಲ್ಲಿ, ಇದುವರೆವಿಗೂ ಒಬ್ಬ ಹೆಣ್ಣು ಅಧ್ಯಕ್ಷ ಸ್ಥಾನಕ್ಕೆ ಹೋಗಲು ಸಾಧ್ಯವಾಗಿಲ್ಲ ಎನ್ನುವುದು, ಇದೇ ವಾಸ್ತವದ ಭಾಗ. ದೇಶವೊಂದರಲ್ಲಿ ಮಹಿಳೆಯರು ಪ್ರಧಾನಿಯೊ ಅಧ್ಯಕ್ಷರೊ ಆಗುವುದು, ಸಾಂಪ್ರದಾಯಿಕ ಸಮಾಜದ ಆಲೋಚನಾ ಕ್ರಮದಲ್ಲಿ ಮಹತ್ವದ ಪಲ್ಲಟಗಳನ್ನು ತರಬಲ್ಲದು. ಆದರೆ ಮಹಿಳೆಯರು ಆಳ್ವಿಕೆ ಮಾಡಿದ ದೇಶಗಳಲ್ಲೂ, ಸಾಮಾಜಿಕವಾಗಿ ಮಹಿಳೆ ದಮನಿತವಾಗಿಯೇ ಇರುವ ವೈರುಧ್ಯವನ್ನೂ ಮರೆಯುವಂತಿಲ್ಲ. ಯಾರೊ ಒಬ್ಬ ಮಹಿಳೆ ಪೈಲಟಾದರೆ, ಲಾರಿ ಡ್ರೈವರಾದರೆ, ಪರ್ವತಾರೋಹಣ ಮಾಡಿದರೆ ನಾವು ಪಡುವ ಸಂಭ್ರಮವು, ಪರೋಕ್ಷವಾಗಿ ಸಮಾನತೆ ಇನ್ನೂ ಸಾಧ್ಯವಾಗಿಲ್ಲದ ಕಹಿಸತ್ಯವನ್ನೇ ಬಿಂಬಿಸುತ್ತಿರುತ್ತದೆ ಎಂಬುದನ್ನು ಮರೆತುಬಿಡುತ್ತದೆ.

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...