Homeಮುಖಪುಟಮಾನವ ನಿರ್ಮಿತ ಪಿಡುಗಿಗೆ 75 ವರ್ಷ: ಹಿರೋಶಿಮಾ ಬಾಂಬ್ ದಾಳಿಯಿಂದ ಜಗತ್ತು ಕಲಿತ ಪಾಠವೆಷ್ಟು?

ಮಾನವ ನಿರ್ಮಿತ ಪಿಡುಗಿಗೆ 75 ವರ್ಷ: ಹಿರೋಶಿಮಾ ಬಾಂಬ್ ದಾಳಿಯಿಂದ ಜಗತ್ತು ಕಲಿತ ಪಾಠವೆಷ್ಟು?

ಜುಲೈ 1945ರಲ್ಲಿ ಬಾಂಬ್‍ನ ಯಶಸ್ವಿ ಪ್ರಯೋಗ ಆದಾಗ ಆ ಯೋಜನೆಯ ನೇತೃತ್ವ ವಹಿಸಿದ್ದ ವಿಜ್ಞಾನಿ ಆಪೆನ್‍ಹೈಮರ್ ಭಗವದ್ಗೀತೆಯ ಒಂದು ಸಾಲನ್ನು ನೆನಪಿಸಿಕೊಂಡು ‘ನಾನು ಈಗ ಸಾವಾಗಿದ್ದೇನೆ, ವಿಶ್ವಗಳ ವಿನಾಶಕಾರಿ’ ಎಂದಿದ್ದನಂತೆ.

- Advertisement -
- Advertisement -

ವಿಶ್ವದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ಪಿಡುಗು ತನ್ನ ಬಾಹುಗಳನ್ನು ಚಾಚಿ, ಮನುಷ್ಯನ, ಸಮಾಜಗಳ, ಪ್ರಭುತ್ವಗಳ ಬಗೆಗಿನ ಎಲ್ಲ ಚಿಂತನೆಗಳನ್ನು ಮತ್ತೆ ನಿಶ್ಕರ್ಷಕ್ಕೆ ಒಡ್ಡಿದೆ. ಇದೇ ವರ್ಷ ಮಾನವ ನಿರ್ಮಿತ ಪಿಡುಗೊಂದರ ಯಶಸ್ವಿ ಪರೀಕ್ಷೆ – ವಿನಾಶಕಾರಿ ಅನ್ವೇಷಣೆ ಮತ್ತು ಅದರ ವಿನಾಶಕಾರಿ ಪ್ರಯೋಗ ಸೃಷ್ಟಿಸಿದ ಮನುಷ್ಯತ್ವದ ಬಿಕ್ಕಟ್ಟಿನ (ಹಿರೋಶಿಮಾ, ನಾಗಸಾಕಿ ಮೇಲೆ ಅಣುಬಾಂಬ್) 75ನೇ ವರ್ಷದ ಮೈಲಿಗಲ್ಲಿಗೂ ಸಾಕ್ಷಿಯಾಗುತ್ತಿದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಪ್ರಭುತ್ವಗಳ, ಜನರ ತಪ್ಪು ಧೋರಣೆಗಳೇ ಕೊರೊನಾ ಬಿಕ್ಕಟ್ಟು ತೀವ್ರಗೊಳ್ಳುವುದಕ್ಕೆ, ಅದಕ್ಕೂ ಪೂರ್ವದ ಕೃತಕ ಪಿಡುಗಿನ ಸೃಷ್ಟಿಗೆ ಕಾರಣ. ಇಂದು ಬಿಕ್ಕಟ್ಟು ಉಲ್ಬಣಗೊಂಡಿರುವುದಕ್ಕೆ ಹಿಂದಿನ ಬಿಕ್ಕಟ್ಟಿನಿಂದ ಕಲಿಯದ ಪಾಠವೂ ಒಂದು ಕಾರಣ.

ಇದನ್ನು ಬರೆಯುವ ಹೊತ್ತಿಗೆ ಅಮೆರಿಕಾದಲ್ಲಿ ಸುಮಾರು 45 ಲಕ್ಷ ಜನ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಸುಮಾರು 1.5 ಲಕ್ಷ ಜನ ಸಾವನಪ್ಪಿದ್ದಾರೆ. ಕೊರೊನಾ ವೈರಸ್ ಬಗ್ಗೆ ಇನ್ನೂ ವಿಜ್ಞಾನಿಗಳು, ವೈದ್ಯರು ಸೋಂಕುತಜ್ಞರ ನಡುವೆಯೇ ಹಲವು ಗೊಂದಲಗಳು, ಭಿನ್ನಾಭಿಪ್ರಾಯಗಳು ಇದ್ದರೂ ಪ್ರಾಥಮಿಕ ಸಾರ್ವಜನಿಕ ಅರೋಗ್ಯವನ್ನು ದೇಶಗಳು ಕಡೆಗಣಿಸದೆ ಹೋಗಿದ್ದರೆ, ಆರೋಗ್ಯವನ್ನು ಲಾಭದ ಲೆಕ್ಕಾಚಾರದಲ್ಲಿ ಅಳೆಯದೆ ಎಲ್ಲರಿಗೂ ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರಕುವಂತೆ ಆಗಿದ್ದರೆ ಬಹುಶಃ ಇಂದಿನ ಪರಿಸ್ಥಿತಿ ಬಿಗಡಾಯಿಸಿ ಇಷ್ಟು ಭೀಕರವಾಗುತ್ತಿರಲಿಲ್ಲ; ಕೊರೊನಾ ಇಂದ ಉಂಟಾದ ಸಾವು ನೋವನ್ನು ಅಪಾರ ಮಟ್ಟದಲ್ಲಿ ತಗ್ಗಿಸಬಹುದಾಗಿತ್ತು ಎಂಬ ವಿಷಯದಲ್ಲಿ ಎಲ್ಲ ರೀತಿಯ ತಜ್ಞರಲ್ಲಿ ಸಹಮತವಿದೆ. ಆದರೆ ಪ್ರಭುತ್ವಗಳು ಮಿಲಿಟರಿಗೆ ಕೊಟ್ಟ ಮಹತ್ವವನ್ನು ಆರೋಗ್ಯಕ್ಕೆ ಕೊಡದೆ ಹೋದವು!

ಅಂದಹಾಗೆ ಇವತ್ತಿಗೂ ಜಗತ್ತಿನ ಹಲವು ದೇಶಗಳು ತಮ್ಮ ಜಿಡಿಪಿಯ ಬೃಹತ್ ಭಾಗವನ್ನು ಮಿಲಿಟರಿ-ಶಸ್ತ್ರಾಸ್ತ್ರ ಅಭಿವೃದ್ಧಿ ಕಾರಣಗಳಿಗೆ ಬಳಸುತ್ತವೆ. ಇದು ಇವತ್ತಿನ ವಿದ್ಯಮಾನ ಏನಲ್ಲ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಮ್ಯಾನ್‍ಹಟನ್ ಪ್ರಾಜೆಕ್ಟ್ ಎಂದು ಕರೆಯಲಾದ ಅಣುಬಾಂಬ್ ಅಭಿವೃದ್ಧಿಗೆ ಅಮೆರಿಕಾ 1939-45ರ ನಡುವೆ ಸುಮಾರು 2 ಬಿಲಿಯನ್ ಡಾಲರ್‍ಗಳನ್ನು ವ್ಯಯಿಸಿತ್ತು. ಅಂದು ದೇಶಗಳ ನಡುವೆ ವಿವಾದ-ದ್ವೇಷ ತುತ್ತತುದಿಯಲ್ಲಿ ಇದ್ದ ಸಮಯ. ಹಿಟ್ಲರ್‍ನ ದೌರ್ಜನ್ಯಕ್ಕೆ, ಸಾಮ್ರಾಜ್ಯ ವಿಸ್ತರಣೆಯ ದಾಹಕ್ಕೆ ಎಲ್ಲೆ ಇರದಿದ್ದ ಸಮಯ. ಎಲ್ಲ ದೇಶಗಳೂ ವಿನಾಶಕಾರಿಯಾದ ಇಂತಹ ಯುದ್ಧ ಬಾಂಬ್‍ಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದ ಸಮಯ. ಇನ್ನೂ ದೇಶ ದೇಶಗಳ ನಡುವೆ ಸಮನ್ವಯ ಸಾಧಿಸಲಾಗಿರದ ವಿಷಮ ಪರಿಸ್ಥಿತಿ ಅದಾಗಿತ್ತು ಅಂದುಕೊಂಡರೂ, ಇವತ್ತಿಗೂ ಯಾವುದೇ ಎರಡು ದೇಶಗಳ ನಡುವೆ ಯಾವುದಾದರೂ ಭಿನ್ನಾಭಿಪ್ರಾಯ ತಾರಕಕ್ಕೇರಿದಾಗ ಮೊದಲು ಚರ್ಚೆಗೆ ಬರುವುದು ಆ ದೇಶಗಳಲ್ಲಿ ಇರುವ ನ್ಯೂಕ್ಲಿಯರ್ ಬಾಂಬ್‍ಗಳ ಸಂಖ್ಯೆಯ ಹೋಲಿಕೆ. ಇದಕ್ಕೆ ಭಾರತ- ಪಾಕಿಸ್ತಾನದ ನಡುವಿನ ವಿವಾದ ಕೂಡ ಹೊರತೇನಲ್ಲ. ಎರಡೂ ದೇಶಗಳ ಮತಿಗೇಡಿ ರಾಜಕಾರಣಿಗಳು ಅಣು ಶಸ್ತ್ರಾಸ್ತ್ರವನ್ನು ಬಳಸುವ ಬೆದರಿಕೆಯನ್ನು ಆಗಾಗ ಒಡ್ಡುತ್ತಾರೆ. ಇದು ಎಷ್ಟೋ ಬಾರಿ ಸಾಮಾನ್ಯ ಜನರೂ ಪುನರುಚ್ಚರಿಸುವ ಹಂತಕ್ಕೆ ಬಂದು ನಿಂತಿದೆ. ಅಣುಬಾಂಬ್‍ಗಳು ಇಡೀ ಮನುಕುಲಕ್ಕೆ ಒಡ್ಡಬಹುದಾದ ಅಪಾಯಗಳು ಜನರ ಮನಸ್ಸಿಗೆ ಇಂದಿಗೂ ಇಳಿಯದೆ ಇರುವುದು ಆತಂಕಕಾರಿ.

ಇಂತಹ ಮೊದಲ ಬಾಂಬ್‍ನ ಯಶಸ್ವಿ ಪರೀಕ್ಷೆಗೆ (ಜುಲೈ 15) ಮತ್ತು ಅದು ಯುದ್ಧದಲ್ಲಿ ಬಳಕೆಯಾಗಿದ್ದಕ್ಕೆ ಈ ಆಗಸ್ಟ್‌ಗೆ 75 ವರ್ಷ ತುಂಬುತ್ತದೆ. ಅಮೆರಿಕಾ ಮೊದಲ ಅಣುಬಾಂಬ್ (ಅದಕ್ಕೆ ‘ಲಿಟಲ್ ಬಾಯ್’ ಎಂದು ಹೆಸರಿಸಿದ್ದರು) ಪ್ರಯೋಗಿಸಿದ್ದು ಆಗಸ್ಟ್ 6, 1945 ರಂದು. ಹಿರೋಶಿಮಾದ ಮೇಲೆ ನಡೆದ ಈ ದಾಳಿಗೆ ಅತಿ ಕಡಿಮೆ ಸಮಯದಲ್ಲಿ 60 ಸಾವಿರ ಜನ ಮೃತಪಟ್ಟರು. ಸುಮಾರು 1 ಲಕ್ಷ ಜನ ಗಾಯಗೊಂಡರು. ರೇಡಿಯೋ ಆಕ್ಟಿವ್ ವಸ್ತುಗಳು ವಾತಾವರಣದಲ್ಲಿ ಉಳಿದಿದ್ದರಿಂದ ಎಷ್ಟೋ ಜನ ಅದೆಷ್ಟೋ ವರ್ಷಗಳ ಕಾಲ ಖಾಯಂ ಖಾಯಿಲೆಗಳಿಗೆ ತುತ್ತಾಗುತ್ತಾ ಹೋದರು.

75 ವರ್ಷ ಕಳೆದರೂ ಅಣುಬಾಂಬಿನ ಮೇಲಿನ ಪ್ರಭುತ್ವಗಳ ಮೋಹ ಇನ್ನೂ ಕಮ್ಮಿಯಾಗಿಲ್ಲ. ಅಣು ನಿಶಸ್ತ್ರೀಕರಣ ಯೋಜನೆ ಯಶಸ್ಸು ಕಂಡಿಲ್ಲ. ಅಣುಬಾಂಬ್ ಪ್ರಯೋಗದ ವಿರುದ್ಧ ವಿಶ್ವ ಇನ್ನೂ ಒಗ್ಗೂಡಿಲ್ಲ. ಸೂಪರ್ ಪವರ್‍ಗಳು ಎಂದು ಹೇಳಿಕೊಳ್ಳುವ ದೇಶಗಳ ದುರಾಸೆಗಳಿಗೆ, ಸಣ್ಣತನಗಳಿಗೆ ಇಡೀ ವಿಶ್ವ ಬೃಹತ್ ಮಟ್ಟದ ವಿನಾಶವನ್ನು ಕ್ಷಣಗಣನೆಯಲ್ಲಿ ಸಾಧಿಸುವ ಶಕ್ತಿ ಹೊಂದಿರುವ ಅಣುಬಾಂಬ್‍ಗಳ ಅಪಾಯದಿಂದ ದೂರವಾಗಲು ಸಾಧ್ಯ ಆಗಿಲ್ಲ.

ಕೆಲವು ವರ್ಷಗಳ ಹಿಂದೆ ಅಮೆರಿಕಾದ ಸಂಶೋಧನಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ, ಅಮೆರಿಕಾ ನಡೆಸಿದ ಬಾಂಬ್ ದಾಳಿಗೆ 1945ರಲ್ಲಿ 85% ಜನಕ್ಕೆ ಒಪ್ಪಿಗೆ ಇದ್ದರೆ, 2015ರಲ್ಲಿ ಅಂತಹ ಕೆಲಸಕ್ಕೆ ಒಪ್ಪಿಗೆ ನೀಡುವವರ ಸಂಖ್ಯೆ 57%ಗೆ ಇಳಿದಿದೆಯಂತೆ. ಬಾಂಬ್ ದಾಳಿಯ ನಂತರ ಆದ ವಿನಾಶದ ಬಗ್ಗೆ ತಿಳಿದ ಮೇಲೆ 1991ರಲ್ಲಿ ಆ ದಾಳಿಯನ್ನು 63% ಜನ ಸಮರ್ಥಿಸಿಕೊಂಡಿದ್ದರೆ, 2015ರಲ್ಲಿ ಸಮರ್ಥಕರ ಸಂಖ್ಯೆ 56%ಗೆ ಇಳಿದಿದೆ ಎನ್ನುತ್ತದೆ. ಆದರೂ ಇದು ಅಪಾಯಕಾರಿ ಸಂಖ್ಯೆಯಾಗಿಯೇ ಕಾಣಿಸುತ್ತದೆ. ಜನಸಾಮಾನ್ಯರು ಈ ವಿನಾಶಕಾರಿ ಅಣ್ವಸ್ತ್ರಗಳ ವಿರುದ್ಧ ನಿಲುವು ತಳೆದು ತಮ್ಮ ಪ್ರಭುತ್ವಗಳು ನೀತಿಗಳನ್ನು ಬದಲಿಸಿಕೊಳ್ಳುವಂತೆ ಜನಾಂದೋಲನಕ್ಕೆ ಅಣಿಯಾಗುವುದು ಇನ್ನೂ ಯಾವ ಕಾಲಕ್ಕೆ? ಮತ್ತೊಂದು ವಿನಾಶಕ್ಕೆ ಮನುಕುಲ ಸಿದ್ಧವಾಗಿದೆಯೇ? ಜನಸಾಮಾನ್ಯರಿಗೆ ದೊಡ್ಡ ಮಟ್ಟದಲ್ಲಿ ಮನಸ್ಸಿಗೆ ತಟ್ಟುವಂತಹ, ಅಭಿಪ್ರಾಯ ರೂಪಿಸುವಂತಹ ಅಣ್ವಸ್ತ್ರ ವಿರೋಧಿ ಸಾಹಿತ್ಯ ಮತ್ತು ಇತರ ಜನಪ್ರಿಯ ಕಲಾಭಿವ್ಯಕ್ತಿ ಸಾಧ್ಯ ಆಗಿಲ್ಲವೇ? ಎಂಬ ಪ್ರಶ್ನೆಗಳೂ ಮುನ್ನಲೆಗೆ ಬರುತ್ತವೆ.

ಜಾನ್ ಹರ್ಸೆಯವರ “ಹಿರೋಶಿಮಾ” – ಇಂದಿಗೂ ಪತ್ರಕರ್ತರಿಗೆ ದಿಟ್ಟ ಪಾಠ ಹೇಳುತ್ತಿರುವ ವರದಿ

ಸಾಂಕ್ರಾಮಿಕ ಪಿಡುಗಿನಿಂದ ಜಗತ್ತು ನರಳುತ್ತಿರುವ ಈ ಸಮಯದಲ್ಲಿ, ಅಮೆರಿಕಾ ಜಪಾನಿನ ಮೇಲೆ ಬಾಂಬ್ ಹಾಕಿ ಅಪಾರ ಸಾವು ನೋವಿಗೆ ಕಾರಣವಾದ ಒಂದು ವರ್ಷದ ನಂತರ ನ್ಯೂಯಾರ್ಕರ್ ವಾರಪತ್ರಿಕೆ ಪ್ರಕಟಿಸಿದ ವರದಿಯನ್ನು ನೆನಪಿಸಿಕೊಳ್ಳುವುದು ಸೂಕ್ತ. ಈ ವರದಿ 20ನೇ ಶತಮಾನದಲ್ಲಿ ಮೂಡಿದ ಅತ್ಯುತ್ತಮ ವರದಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇವತ್ತಿಗೂ ಇದನ್ನು ಪುಸ್ತಕ ರೂಪದಲ್ಲಿ ಸಾವಿರಾರು ಜನ ಓದುತ್ತಾರೆ. ಅಂದು ಅಮೆರಿಕಾದಲ್ಲಿ ಕೆಲವರಿಗಾದರೂ (ಮ್ಯಾನ್‍ಹಟನ್ ಪ್ರಾಜೆಕ್ಟ್‍ನಲ್ಲಿ ಭಾಗಿಯಾದ ಕೆಲವು ವಿಜ್ಞಾನಿಗಳನ್ನೂ ಸೇರಿಸಿ) ಪಾಪಪ್ರಜ್ಞೆ ಹುಟ್ಟಿಸಿ, ವ್ವವಸ್ಥೆಯ ಭಾಗವಾಗಿ ತಾವು ಮಾಡಿದ ತಪ್ಪು ತಿಳಿದುಕೊಳ್ಳಲು ಕೂಡ ಈ ವರದಿ ಸಹಕರಿಸಿತ್ತು.

ಜಾನ್ ಹರ್ಸೆ

ಚೈನಾ ಮೂಲದ ಜಾನ್ ಹರ್ಸೆ ಈ ವರದಿ ಬರೆಯುವುದಕ್ಕೂ ಮುಂಚಿತವಾಗಿ ಟೈಮ್-ಲೈಫ್ ಪತ್ರಿಕೆಯಲ್ಲಿ ಯುದ್ಧ ವರದಿಗಾರರಾಗಿ ಕೆಲಸ ಮಾಡಿದ್ದವರು. ಮೇ 1945ರಲ್ಲಿ ಹಿರೋಶಿಮಾಗೆ ತೆರಳಿ ವರದಿ ಮಾಡುವಂತೆ ನ್ಯೂಯಾರ್ಕರ್ ಪತ್ರಿಕೆ ಜಾನ್ ಹರ್ಸೆ ಅವರಿಗೆ ನಿಯೋಜಿಸುತ್ತದೆ. ಒಂದು ತಿಂಗಳು ಸುತ್ತಾಡಿ ಹಲವು ಪ್ರತ್ಯಕ್ಷದರ್ಶಿಗಳನ್ನು ಸಂದರ್ಶಿಸಿ ಸಿದ್ಧಪಡಿಸಿದ ವರದಿಯನ್ನು ಹಲವು ಕಂತುಗಳಲ್ಲಿ ಪ್ರಕಟಿಸಬೇಕೆಂದು ಪೂರ್ವ ನಿಶ್ಚಿತವಾಗಿದ್ದರೂ, ಆ ವರದಿಯ ವಸ್ತುನಿಷ್ಟತೆ ಮತ್ತು ನಿಖರತೆಗೆ ಮಾರುಹೋಗಿ ಮತ್ತು ಅಂದು ಅಮೆರಿಕಾ ಸಮಾಜಕ್ಕೆ ಆ ವರದಿಯ ಅಗತ್ಯತೆಯ ಬಗ್ಗೆ ಅರಿವಿದ್ದ ಪತ್ರಿಕೆಯ ಸಂಪಾದಕರು ಆಗಸ್ಟ್ ಕೊನೆ ವಾರದ ಸಂಚಿಕೆಯಲ್ಲಿ 30 ಸಾವಿರ ಪದಗಳ ಇಡೀ ವರದಿಯನ್ನು ಪ್ರಕಟಿಸುತ್ತಾರೆ. ಬೇರೆ ಯಾವ ಲೇಖನವೂ ಇರದೇ ಒಂದೇ ಲೇಖನ ಇಡೀ ಪತ್ರಿಕೆಯಲ್ಲಿ ಪ್ರಕಟ ಆಗಿದ್ದು ಆ ಪತ್ರಿಕೆ ಇತಿಹಾಸದಲ್ಲಿ ಇದೇ ಮೊದಲು. ಅದು ಓದುಗ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿ, ಪತ್ರಿಕೆಯ ಎಲ್ಲ ಪ್ರತಿಗಳು ಕೆಲವೇ ದಿನಗಳಲ್ಲಿ ಬಿಕರಿಯಾಗುತ್ತವೆ. ಬಾಂಬ್ ದಾಳಿ ತಡೆಯಲು ಪ್ರಯತ್ನಿಸಿದ್ದವರಲ್ಲಿ ಒಬ್ಬರಾದ ಖ್ಯಾತ ಮಾನವೀಯ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್ (ಇವರು ನಂತರದ ದಿನಗಳಲ್ಲಿ ಗಣಿತಜ್ಞ-ತತ್ವಶಾಸ್ತ್ರಜ್ಞ ಬರ್ಟ್ರಾಂಡ್ ರಸಲ್ ಅವರು ಸಿದ್ದಪಡಿಸಿದ್ದ ಅಣ್ವಸ್ತ್ರ ಯುದ್ಧವಿರೋಧಿ ಹೇಳಿಕೆಗೂ ಸಹಿ ಹಾಕಿದ್ದರು) ಪತ್ರಿಕೆಯ ಒಂದು ಸಾವಿರ ಪ್ರತಿಗಳನ್ನು ಕೊಂಡು ಹಂಚಿದರೆಂದು ದಾಖಲಾಗಿದೆ.

ವರದಿಯಲ್ಲಿ ಏನಿತ್ತು?

ಜಾನ್ ಹರ್ಸೆ ಹಲವು ಜನರನ್ನು ಸಂದರ್ಶನ ಮಾಡಿದ್ದರೂ, ಬಾಂಬ್ ದಾಳಿಯಿಂದ ಬದುಕುಳಿದ ಅಂದಿನ ಆರು ಹಿರೋಶಿಮಾ ನಿವಾಸಿಗಳ ಮಾತುಗಳಲ್ಲಿ ಬಾಂಬ್ ದಾಳಿಯ ಕ್ಷಣದಿಂದ ಹಿಡಿದು ಐದಾರು ದಿನಗಳ ಸಂಗತಿಗಳನ್ನು ವಸ್ತುನಿಷ್ಟ ಶೈಲಿಯಲ್ಲಿ ಹಿಡಿದಿಟ್ಟಿದ್ದಾರೆ. ಈ ವರದಿಯ ಕಥಾನಕ ತನ್ನ ವಿವರಗಳಿಂದ ಆ ದಿನಗಳ ಭೀಕರತೆಯನ್ನು ಕಟ್ಟಿಕೊಡುವ ಶೈಲಿ ಎಂಥ ಓದುಗನನ್ನು, ರಾಷ್ಟ್ರೀಯವಾದದಲ್ಲಿ ಮಿಂದೆದ್ದ ಕಲ್ಲು ಹೃದಯದ ವ್ಯಕ್ತಿಯನ್ನೂ ಒಂದು ಕ್ಷಣ ಬಾಧಿಸದೆ ಇರದು.

ಶಬ್ದವೇ ಕೇಳಿಸಿದ ಸೂರ್ಯನ ಪ್ರಭೆಯಂತೆ ಹೊಳೆದ ಬಾಂಬ್ ದಾಳಿಯ ನೆನಪುಗಳಿಂದ ಶುರುವಾಗುವ, ಜಗತ್ತು ಹಿಂದೆಂದೂ ಕಂಡಿರದ ಭೀಕರ ಮಾನವ ವೇದನೆಯ ಈ ನಿಜಕಥೆಯಲ್ಲಿ, ಬೆಂಕಿಗೆ ಆಹುತಿಯಾಗಿ ಸುಡುತ್ತಿರುವ ಮನೆಗಳು, ರಸ್ತೆಗಳಲ್ಲಿ ಹರಿಯುತ್ತಿರುವ ರಕ್ತ, ಕಪ್ಪುಗಟ್ಟಿದ ನದಿ, ಸತ್ತ ಹಸುಗೂಸನ್ನು ನಾಲ್ಕು ದಿನಗಳ ಕಾಲ ಎದೆಗೆ ಅವಚಿಕೊಂಡು ತನ್ನ ಗಂಡನಿಗೆ ತೋರಿಸಲು ಹವಣಿಸುತ್ತಿರುವ ಮಹಿಳೆ, ತಾಯಿಯನ್ನು ಕಳೆದುಕೊಂಡು ಆಕ್ರಂದಿಸುತ್ತಿರುವ ಮಕ್ಕಳು, ಅವರನ್ನು ಸಂತೈಸಲು ಸೋಲುವ ಒಬ್ಬ ಕ್ರಿಶ್ಚಿಯನ್ ಧಾರ್ಮಿಕ ವ್ಯಕ್ತಿ ಟನಿಮೊಟೊನ ನೋವು, ಅದೇ ವ್ಯಕ್ತಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸಲು ಹಗಲು ರಾತ್ರಿ ನೋಡದೆ ತನ್ನ ಜೀವದ ಹಂಗು ತೊರೆದು ಶ್ರಮಿಸುವುದು-ದೋಣಿ ನಡೆಸುವುದು, ರೆಡ್‍ಕ್ರಾಸ್ ಆಸ್ಪತ್ರೆಯಲ್ಲಿ ಕೇವಲ ಒಂದು ಘಂಟೆ ಮಾತ್ರ ವಿರಮಿಸಿ ಮೂರು ದಿನಗಳ ಕಾಲ ನಿರಂತರ ಸೇವೆ ಒದಗಿಸುವ ಡಾ.ಸಸಾಕಿ, ಅಪಾರ ಸಾವು ನೋವಿನ ನಡುವೆ ಜನಸೇವೆಗೆ ಮುಂದಾಗುವ ಪಾದ್ರಿ ಕ್ಲೀನ್‍ಸೋರ್ಜ – ಹೀಗೆ ಆರು ಜನರು ನೆನಪಿಸಿಕೊಳ್ಳುವ ದಾರುಣ ಘಟನೆಗಳ ಸರಮಾಲೆ ಇಡೀ ಮನುಕುಲದ ಬಿಕ್ಕಟ್ಟಿನ ಕಥೆಯಾಗಿ ಮನಕಲಕುತ್ತದೆ. ಇಂತಹ ಅನ್ವೇಷಣೆಯ ದುರಂತದ ಬಗ್ಗೆ ಒಂದು ಮಾತನ್ನೂ ಆಡದೆ, ಖಂಡಿಸದೆ ಜನರಿಗೆ ಆ ದುರಂತವನ್ನು ತಿಳಿಸುವ ಶಕ್ತಿ ಹೊಂದಿರುವ ವರದಿ ಇದು.

ಈ ವರದಿ ಪ್ರಕಟ ಆದ ಮೇಲೆ ಹಲವು ಮೂಲೆಗಳಿಂದ ಪ್ರಶಂಸೆ ಹರಿದು ಬರುವುದರ ಜೊತೆಗೆ, ನೇರವಾಗಿ ಬಾಂಬ್ ದಾಳಿಯನ್ನು ಖಂಡಿಸದ ವರದಿಗಾರನ ಶೈಲಿಯ ಬಗ್ಗೆ ಆರೋಪಗಳು ಕೂಡ ಕೇಳಿಬರುತ್ತವೆ. ಆದರೆ ಇದನ್ನು ಓದಿದ ಕೆಲವು ವಿಜ್ಞಾನಿಗಳು ಮನುಕುಲಕ್ಕೆ ವಿನಾಶ ತರಬಲ್ಲ ಇಂತಹ ಅನ್ವೇಷಣೆಯ ಬಗ್ಗೆ ಜಿಗುಪ್ಸೆ ತಳೆದ ಉದಾಹರಣೆಗಳು ಕೂಡ ಇವೆ. ಇದನ್ನು ವಿಶ್ವದ ಹಲವು ಮೂಲೆಗಳಲ್ಲಿ ಪ್ರಕಟಿಸಲಾಗುತ್ತದೆ. ಕನ್ನಡದಲ್ಲಿಯೂ ಕೃಷ್ಣಮೂರ್ತಿ ಎಂಬುವವರು ಈ ವರದಿಯನ್ನು ಅನುವಾದಿಸಿದ್ದು, ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಇದರ ಸುತ್ತ ಸಾಕ್ಷ್ಯಚಿತ್ರಗಳು ಕೂಡ ನಿರ್ಮಾಣಗೊಂಡಿವೆ.

ಇಷ್ಟೆಲ್ಲಾ ದುರಂತದ ಇತಿಹಾಸದ ನೆನಪು ಜಗತ್ತಿನ ಎಲ್ಲರನ್ನೂ ಎಚ್ಚರದಲ್ಲಿ ಇಡಬೇಕಿತ್ತು. ಅಂದು ಜುಲೈ 1945ರಲ್ಲಿ ಬಾಂಬ್‍ನ ಯಶಸ್ವಿ ಪ್ರಯೋಗ ಆದಾಗ ಆ ಯೋಜನೆಯ ನೇತೃತ್ವ ವಹಿಸಿದ್ದ ವಿಜ್ಞಾನಿ ಆಪೆನ್‍ಹೈಮರ್ ಭಗವದ್ಗೀತೆಯ ಒಂದು ಸಾಲನ್ನು ನೆನಪಿಸಿಕೊಂಡು ‘ನಾನು ಈಗ ಸಾವಾಗಿದ್ದೇನೆ, ವಿಶ್ವಗಳ ವಿನಾಶಕಾರಿ’ ಎಂದಿದ್ದನಂತೆ. ಆದರೆ ಅದೇ ಸಮಯದಲ್ಲಿ ಆ ಪ್ರಯೋಗದ ನಿರ್ದೇಶಕ ಕೆನೆತ್ ಟಿ ಬೇನ್‍ಬಿಡ್ಜ್ ಎಂಬ ವಿಜ್ಞಾನಿ ‘ಈಗ ನಾವೆಲ್ಲಾ ಬಿಚ್‍ಗಳ ಮಕ್ಕಳು’ ಅಂದಿದ್ದರಂತೆ. ತದನಂತರ ಆಪೆನ್‍ಹೈಮರ್ ಕೂಡ ತಾನೇ ಅಪಾರವಾಗಿ ಕೊಡುಗೆ ನೀಡಿದ್ದ ಈ ಅಣುಬಾಂಬ್ ಪ್ರಾಜೆಕ್ಟ್ ಬಗೆಗೆ ಅದು ಸೃಷ್ಟಿಸಬಹುದಾದ ಜಗತ್ತಿನ ಬಗೆಗೆ ಸಂದೇಹಗಳನ್ನು ತಳೆದಿದ್ದರು ಎಂದು ಕೆಲವರು ದಾಖಲಿಸಿದ್ದಾರೆ.

ಇರಾಕ್‍ನಲ್ಲಿ ಸಮೂಹನಾಶ ಶಸ್ತ್ರಾಸ್ತ್ರಗಳಿವೆ ಎಂದು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಅಲ್ಲಿ ಯುದ್ಧ ಮಾಡಿದ ನಂತರ ಅಲ್ಲಿ ಅಂತಹ ಯಾವ ಶಸ್ತ್ರಾಸ್ತ್ರಗಳು ಸಿಕ್ಕದೆ ಹೋದಾಗ, ಅಮೆರಿಕಾ ಜಗತ್ತಿಗೆ ಒಂದು ಕ್ಷಮೆಯನ್ನು ಕೂಡ ಕೇಳಲಿಲ್ಲ. ಅಣುಬಾಂಬ್ ಅಭಿವೃದ್ಧಿ ವೇಳೆಯಲ್ಲಿ ಕೂಡ ಕ್ರೂರಿ ಹಿಟ್ಲರ್‍ನ ವಿಜ್ಞಾನಿಗಳು ಅಣುಬಾಂಬ್ ಆಗಲೇ ಅಭಿವೃದ್ಧಿಪಡಿಸಿದ್ದಾರೆ ಎಂಬ ಸುಳ್ಳನ್ನು ಅಮೆರಿಕಾ ಪ್ರಭುತ್ವ ಪ್ರಚಾರ ಮಾಡಿರುತ್ತದೆ. ಅದು ಕೂಡ ನಿಜವಲ್ಲ ಎಂಬ ವಿಷಯ ಹಲವು ವಿಜ್ಞಾನಿಗಳಿಗೆ ಕಸಿವಿಸಿ ಉಂಟುಮಾಡುತ್ತದೆ. ನಂತರ ಹಿರೋಶಿಮಾ-ನಾಗಾಸಾಕಿ ಮೇಲೆ ನಡೆಸಿದ ಈ ದಾಳಿಗಳಿಗೂ ಅಮೆರಿಕಾ ಹೊಣೆ ಹೊತ್ತು ಕ್ಷಮೆ ಕೇಳಿದ್ದು ಇಲ್ಲ. ಅದರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆಯೂ ಆಗಿಲ್ಲ.

ಈ ಕರಾಳ ಹಿರೋಶಿಮಾ, ನಾಗಸಾಕಿ ಇತಿಹಾಸದ 75ನೇ ವರ್ಷದ ನೆನಪಿನಲ್ಲಿಯಾದರೂ, ಅಣುಶಸ್ತ್ರಾಸ್ತ್ರದ ಅಭಿವೃದ್ಧಿ, ಶೇಖರಣೆ ಮತ್ತು ಬಳಕೆಯ ವಿರುದ್ಧ ಜಗತ್ತು ಒಗ್ಗೂಡಿ ಹೋರಾಡಬೇಕಿದೆ. ಅಂದು ಈ ಅನ್ವೇಷಣೆಗೆ ಬೆಂಬಲ ಸೂಚಿಸಿ ಕೊಡುಗೆ ನೀಡಿದ್ದ ಡ್ಯಾನಿಶ್ ಭೌತಶಾಸ್ತ್ರ ವಿಜ್ಞಾನಿ ನೀಲ್ಸ್ ಭೋರ್ ಅಂದಿನ ದಿನಗಳಲ್ಲಿ ನೀಡಿದ್ದ ಈ ಹೇಳಿಕೆಯಲ್ಲಿ ಇದ್ದ ದ್ವಂದ್ವವೇ ಅಪಾಯವನ್ನು ಅಡಕ ಮಾಡಿಕೊಂಡಿತ್ತು: “ಅಣು ಶಸ್ತ್ರಾಸ್ತ್ರಗಳು ಕೆಲವು ರಾಷ್ಟ್ರಗಳ ಸ್ವತ್ತಾದರೂ, ರಾಷ್ಟ್ರದ ಸಾರ್ವಭೌಮತೆಯ ರಕ್ಷಣೆಗೆ ಅವುಗಳನ್ನು ಬಳಸಲು ತಮಗೆ ಹಕ್ಕು ಇದೆ ಎಂದು ಅವು ಪ್ರತಿಪಾದಿಸುತ್ತವೆಯಾದರೂ, ವಿವೇಚನೆಯಿಲ್ಲದ ವಿನಾಶಕಾರಿತನದ ಸ್ವಭಾವ, ಸಾಂಕ್ರಾಮಿಕ ಪಿಡುಗಿನಂತೆ ಎಲ್ಲರಿಗೂ ಸಾಮಾನ್ಯವಾದ ಅಪಾಯವನ್ನು ಒಡ್ಡುತ್ತವೆ ಮತ್ತು ಸಾಂಕ್ರಾಮಿಕ ಪಿಡುಗುಗಳಂತೆ ರಾಷ್ಟ್ರೀಯ ಗಡಿಗಳನ್ನು, ವಿವಾದಗಳನ್ನು ಮತ್ತು ಸಿದ್ದಾಂತಗಳನ್ನು ಮೀರುತ್ತವೆ”.

ಇಂತಹ ವಿನಾಶಕಾರಿ ಅಣ್ವಸ್ತ್ರಗಳನ್ನು ಹದ್ದುಬಸ್ತಿನಲ್ಲಿ ಇಡುವ ಮಾತು ಅಸಾಧ್ಯ. ಅವುಗಳು ಸಿಡಿಯಲು, ಯಾವುದೋ ಒಂದು ಪ್ರಭುತ್ವದ ಯಾವನೊ ಒಬ್ಬ ನಾಯಕನಿಗೆ ತಲೆತಿರುಗಿದರೆ ಸಾಕು. ಆದುದರಿಂದ ಅವುಗಳ ಸಂಪೂರ್ಣ ನಿಶಸ್ತ್ರ-ನಿಷ್ಕ್ರಿಯತೆ ಒಂದೇ ಸರಿಯಾದ ದಾರಿ. ಇಂತಹ ಜನಾಂದೋಲನಕ್ಕೆ ಜಾನ್ ಹರ್ಸೆ ಅವರು ಬರೆದಂತಹ ವರದಿಗಳು ದಾರಿದೀಪವಾಗಲಿ. ಅಂತಹ ಹತ್ತಾರು ಅಭಿವ್ಯಕ್ತಿಗಳು ಮೂಡಿ ಜನಸಾಮಾನ್ಯರಿಗೆ ತಲುಪಲಿ. ಇವತ್ತು ಜಾರಿಯಲ್ಲಿರುವ ಪಿಡುಗನ್ನು ವರದಿ ಮಾಡುವಾಗಲೂ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಅದನ್ನು ಸರಿಪಡಿಸಿಕೊಳ್ಳುವುದಕ್ಕೂ ಜಾನ್ ಹರ್ಸೆ ಅವರ ‘ಹಿರೋಶಿಮಾ’ ಓದು ಮಾಧ್ಯಮ ಬಳಗದವರಿಗೆ ಚುರುಕು ಮುಟ್ಟಿಸಬಲ್ಲುದು.


ಇದನ್ನು ಓದಿ: `ಹಾರಲೆ ಅಂದ್ರ ಹಾರೋದ ಬಿಟ್ಟು ಬರೇ ಓಡತದ ನೋಡ್ರಿ ಈ ಬೈಕು?’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read