Homeಮುಖಪುಟಆಂಧ್ರ ಪ್ರದೇಶ ಕಾಂಗ್ರೆಸ್​ನ ನೂತನ ಅಧ್ಯಕ್ಷೆಯಾಗಿ ವೈಎಸ್ ಶರ್ಮಿಳಾ ನೇಮಕ

ಆಂಧ್ರ ಪ್ರದೇಶ ಕಾಂಗ್ರೆಸ್​ನ ನೂತನ ಅಧ್ಯಕ್ಷೆಯಾಗಿ ವೈಎಸ್ ಶರ್ಮಿಳಾ ನೇಮಕ

- Advertisement -
- Advertisement -

ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರನ್ನು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷ (ವೈಎಸ್‌ಆರ್‌ಟಿಪಿ) ವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಮೂಲಕ ಜನವರಿ 4ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಆಂಧ್ರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗಿಡುಗು ರುದ್ರರಾಜು ಅವರು ರಾಜೀನಾಮೆ ನೀಡಿದ ಒಂದು ದಿನದ ನಂತರ ಶರ್ಮಿಳಾ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ನಿರ್ಗಮಿತ ಅಧ್ಯಕ್ಷ ರುದ್ರರಾಜು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ಶರ್ಮಿಳಾ ಅವರು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರಿಗೆ ಲಾಭವಾಗಬಹುದಾದ ಮತಗಳ ವಿಭಜನೆಯನ್ನು ತಡೆಯಲು ಚುನಾವಣಾ ಕಣದಿಂದ ಹೊರಗುಳಿದಿದ್ದರು. ಈ ಮೂಲಕ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ನವೆಂಬರ್ 30ರಂದು ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶರ್ಮಿಳಾ ಅವರ ವೈಎಸ್‌ಆರ್‌ಟಿಪಿ ಪಕ್ಷ ಬೇಷರತ್ ಬೆಂಬಲ ನೀಡಿತ್ತು.

ಶರ್ಮಿಳಾ ಅವರ ರಾಜಕೀಯ ಹಿನ್ನೆಲೆ :

ಶರ್ಮಿಳಾ ಅವರು ಸಹೋದರ ಜಗನ್‌ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಕಾಲಿಟ್ಟವರು. ಜೂನ್ 2012ರಿಂದ ಆಂಧ್ರ ಪ್ರದೇಶದಲ್ಲಿ ಜಗನ್‌ಮೋಹನ್ ರೆಡ್ಡಿ ಅನುಪಸ್ಥಿತಿಯಲ್ಲಿ ತಾಯಿ ವೈಎಸ್ ವಿಜಯಮ್ಮ ಅವರೊಂದಿಗೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುವ ಮೂಲಕ ಅವರು ಸುದ್ದಿಯಾಗಿದ್ದರು.

ಶರ್ಮಿಳಾ ಅವರು 18 ಅಕ್ಟೋಬರ್ 2012 ರಂದು ಅಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಇಡುಪುಲಪಾಯದಿಂದ ಪಾದಯಾತ್ರೆ ಆರಂಭಿಸಿ 3 ಸಾವಿರ ಕಿ.ಮೀ ದೂರು ಕ್ರಮಿಸಿ, 4 ಆಗಸ್ಟ್ 2013 ರಂದು ಇಚ್ಚಾಪುರದಲ್ಲಿ ಕೊನೆಗೊಳಿಸಿದ್ದರು. ಪಾದಯಾತ್ರೆ ವೇಳೆ ಶರ್ಮಿಳಾ ಅವರು ಅಂಧ್ರ ಪ್ರದೇಶದ 14 ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಚಾಲಕಿಯಾಗಿದ್ದರು.

ಬಳಿಕ ನಡೆದ ಉಪ ಚುನಾವಣೆಯಲ್ಲಿ 18 ವಿಧಾನಸಭಾ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಮತ್ತು 1 ಸಂಸತ್ ಸ್ಥಾನವನ್ನು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಗೆದ್ದುಕೊಂಡಿತ್ತು. ಇದರಲ್ಲಿ ಶರ್ಮಿಳಾ ಅವರ ಯಾತ್ರೆ ಪ್ರಮುಖ ಪಾತ್ರ ವಹಿಸಿತ್ತು.

2019ರ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲು ಶರ್ಮಿಳಾ ಅವರು ಸಹೋದರನ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಪರವಾಗಿ ರಾಜ್ಯಾದ್ಯಂತ “ಬೈಬೈ ಬಾಬು- ಪ್ರಜಾ ತೀರ್ಪು” ಎಂಬ 11 ದಿನಗಳ ಬಸ್ ಯಾತ್ರೆ ಕೈಗೊಂಡಿದ್ದರು. ಈ ಯಾತ್ರೆಯಲ್ಲಿ ಶರ್ಮಿಳಾ ಅವರು ರಾಜ್ಯಾದ್ಯಂತ 1,553 ಕಿ.ಮೀ ದೂರ ಸಂಚರಿಸಿ 39 ಸಾರ್ವಜನಿಕ ಸಭೆಗಳನ್ನು ಹಮ್ಮಿಕೊಂಡಿದ್ದರು. ಈ ವೇಳೆ ತಮ್ಮ ಹಸ್ತಾಕ್ಷರದ 20 ಸಾವಿರ ಕ್ಯಾಪ್‌ಗಳನ್ನು ಸಾರ್ವಜನಿಕರಿಗೆ ಹಂಚಿದ್ದರು.

ವೈಎಸ್‌ಆರ್‌ ತೆಲಂಗಾಣದ ಪಕ್ಷದ ಸ್ಥಾಪನೆ : 

ಫೆಬ್ರವರಿ 2021ರಲ್ಲಿ, ಶರ್ಮಿಳಾ ಅವರು ಸಹೋದರ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ರಾಜಕೀಯ ಭಿನ್ನಾಭಿಪ್ರಾಯದ ಕಾರಣ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದದಿಂದ ಹೊರ ಬಂದಿದ್ದರು. ಈ ವೇಳೆ ತೆಲಂಗಾಣದಲ್ಲಿ ವೈಎಸ್‌ಆರ್‌ಪಿ ಪಕ್ಷಕ್ಕೆ ಯಾವುದೇ ಅಸ್ತಿತ್ವವಿಲ್ಲ ಎಂದು ಅವರು ಹೇಳಿದ್ದರು.

9 ಏಪ್ರಿಲ್ 2021 ರಂದು  ಸುದ್ದಿಗೋಷ್ಠಿ ನಡೆಸಿದ್ದ ಶರ್ಮಿಳಾ ಅವರು, ತೆಲಂಗಾಣದಲ್ಲಿ 8 ಜುಲೈ 2021 ರಂದು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ತಮ್ಮ ತಂದೆ ಆಂಧ್ರದ ಮಾಜಿ ಸಿಎಂ ರಾಜಶೇಖರ ರೆಡ್ಡಿ ಅವರ ಜನ್ಮದಿನವಾದ ಕಾರಣ ಅವರು ಆ ದಿನಾಂಕವನ್ನು ಆಯ್ಕೆ ಮಾಡಿದ್ದರು. ಪಕ್ಷವನ್ನು ಪ್ರಾರಂಭಿಸುವ ಮೊದಲು, ಅವರು ಕೆಸಿಆರ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಸರ್ಕಾರದ ವಿರುದ್ಧ ಪ್ರಚಾರ ಪ್ರಾರಂಭಿಸಿದ್ದರು. ಬಳಿಕ 8 ಜುಲೈ 2021 ರಂದು ವೈಎಸ್‌ಆರ್ ತೆಲಂಗಾಣ ಪಕ್ಷವನ್ನು ಘೋಷಿಸಿದ್ದರು.

ಪಕ್ಷ ಘೋಷಣೆ ಮಾಡಿದ ಬೆನ್ನಲ್ಲೇ 2023ರ ತೆಲಂಗಾಣದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ತಿಳಿಸಿದ್ದರು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದ್ದರು. ಅದರಂತೆ ಅವರು ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು.

ಇದನ್ನೂ ಓದಿ : ಸ್ಪೀಕರ್‌ ನಿಲುವಿಗೆ ಶಿವಸೇನೆಯ ಎರಡು ಬಣಗಳಿಂದ ಆಕ್ಷೇಪ: ಸುಪ್ರೀಂ ಕದ ತಟ್ಟಿದ ಉದ್ಧವ್‌, ಹೈಕೋರ್ಟ್‌ ಮೆಟ್ಟಿಲೇರಿದ ಶಿಂಧೆ ಬಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read