Homeಚಳವಳಿಪಠ್ಯಕ್ರಮ ನಿರ್ಧರಿಸಲಿರುವ ಕೇಂದ್ರ: ಒಕ್ಕೂಟ ಕಲ್ಪನೆಗೇ ಅನ್ಯಾಯ ಎಂದ ಶಿಕ್ಷಣ ತಜ್ಞರು

ಪಠ್ಯಕ್ರಮ ನಿರ್ಧರಿಸಲಿರುವ ಕೇಂದ್ರ: ಒಕ್ಕೂಟ ಕಲ್ಪನೆಗೇ ಅನ್ಯಾಯ ಎಂದ ಶಿಕ್ಷಣ ತಜ್ಞರು

ಬಿಜೆಪಿ ಸರಕಾರವು ತನ್ನ ಮತೀಯವಾದಿ ನೀತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಇದು ಸಂಪೂರ್ಣವಾಗಿ ಸಹಕಾರಿಯಾಗುತ್ತದೆ.  ಅವರ ಉದ್ದೇಶವೂ ಸಹ ಇದೇ’ ಎಂದು ಶ್ರೀಪಾದ ಭಟ್‍ ಅಭಿಪ್ರಾಯ ಪಡುತ್ತಾರೆ.

- Advertisement -
- Advertisement -

ಎಲ್ಲವನ್ನೂ ನಿಯಂತ್ರಿಸಲು ಹೊರಟಿರುವ ಮೋದಿ ನೇತೃತ್ವದ ಸರ್ಕಾರ ಈಗ ರಾಜ್ಯಗಳ ಶಿಕ್ಷಣ ಕ್ಷೇತ್ರಕ್ಕೂ ಕೈ ಹಾಕಿದೆ. ಅದು ನಮ್ಮ ಮಕ್ಕಳ ಶಾಲಾ ಪುಸ್ತಕದಲ್ಲಿ ಏನಿರಬೇಕು ಎಂಬುದನ್ನು ತಾನೇ ನಿರ್ಧರಿಸಲು ಹೊರಟಿದ್ದು, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ತಜ್ಞ, ಜನಪರ ಚಿಂತಕ ಬಿ. ಶ್ರೀಪಾದ ಭಟ್‍, ‘ಇನ್ನು ಮುಂದೆ ರಾಜ್ಯ ಸರಕಾರಗಳು ರಚಿಸಿದ ಪಠ್ಯಪುಸ್ತಕಗಳನ್ನು, ಪಠ್ಯಕ್ರಮವನ್ನು ಕೇಂದ್ರ ಸರಕಾರವು ಸೆನ್ಸಾರ್‌ಶಿಪ್ ಮಾಡಲು ಬಿಜೆಪಿ ನೇತೃತ್ವದ ಆಡಳಿತವು ನಿರ್ಧರಿಸಿದೆ…..’ ಎನ್ನುತ್ತಾರೆ.

‘ಈ ಮೂಲಕ ತನಗೆ ಸರಿ ಕಾಣದ, ಸೈದ್ದಾಂತಿಕವಾಗಿ ಭಿನ್ನ ಪಠ್ಯಗಳಿರುವ ಸಿಲಬಸ್‍ ಅನ್ನು ತೆಗೆದು ಹಾಕಿ ತನ್ನದೇ ಹೊಸ ಪಠ್ಯಗಳನ್ನು ಸೇರಿಸುವ ಪರಮಾಧಿಕಾರ ಹೊಂದಲು ನಿರ್ಧರಿಸಿದೆ…. ಈ ಹಿನ್ನೆಲೆಯಲ್ಲಿ ಎನ್‍ಸಿಇಆರ್‌ಟಿ (ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ) ತಮ್ಮ ಶಿಫಾರಸ್ಸುಗಳನ್ನು ಸಲ್ಲಿಸಬೇಕೆಂದು ರಾಜ್ಯಗಳಿಗೆ ಕೇಳಿದೆ. ಎನ್‍ಸಿಇಆರ್‌ಟಿಟಿ ಈ ರೀತಿಯ ನಿರ್ದೇಶನ ನೀಡುತ್ತಿರುವುದು ಇದೇ ಮೊದಲು’ ಎನ್ನುತ್ತಾರೆ ಶ್ರೀಪಾದ ಭಟ್‍.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು ‘ಇದಕ್ಕೂ ಮುಂಚೆ  ಕೇಂದ್ರವು ಕೊಡುವ ಸ್ಥೂಲ ವಿವರಣೆ ಒಳಗೊಂಡಂತೆ ರಾಜ್ಯಗಳು  ಸಲ್ಲಿಸುವ ದಸ್ತಾವೇಜು ಆಧರಿಸಿ ‘ರಾಷ್ಟ್ರೀಯ ಪಠ್ಯಕ್ರಮ’ ರಚನೆಯಾಗುತ್ತಿತ್ತು. ರಾಜ್ಯಗಳು ಕಳುಹಿಸಿದ ಪಠ್ಯಕ್ರಮದಲ್ಲಿ ಕೆಲ ಭಾಗಗಳನ್ನು ತೆಗೆದು ತನ್ನ ಪಠ್ಯವನ್ನು ಸೇರಿಸಲು ಕೇಂದ್ರಕ್ಕೆ ಅಧಕಾರವಿದೆ. ಇದು ಕೂಡ ರಾಜ್ಯಗಳ ಸ್ವಾಯತ್ತತೆ ಮತ್ತು ಒಕ್ಕೂಟ ತತ್ವಕ್ಕೆ ವಿರೋಧ ನೀತಿಯಾಗಿದೆ. ಆದರೆ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ಇದು ಸಾಮಾನ್ಯವಾದ ವಾಡಿಕೆಯಾಗಿದೆ. ಈವರೆಗೂ ಕೇಂದವು ರಾಜ್ಯಗಳ ಪಠ್ಯವಸ್ತು ರಚನೆ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಆದರೆ ಈ ರೂಢಿಯನ್ನು ಬದಲಿಸಲು ಬಿಜೆಪಿ ನಿರ್ಧರಿಸಿದೆ. ಇದರ ಅನುಸಾರ ಇನ್ನು ಮುಂದೆ ರಾಜ್ಯಗಳು ತಾವು ಶಾಲಾ ಸಿಲಬಸ್‍ ರಚನೆ ಮಾಡುವುದಕ್ಕೂ ಮುಂಚೆ ಕೇಂದ್ರಕ್ಕೆ ಅದರ ಎಲ್ಲಾ ರೂಪುರೇಷೆಗಳ, ಪಠ್ಯಗಳ ಮಾಹಿತಿ ಒದಗಿಸಬೇಕು. ನಂತರ ಕೇಂದ್ರ ಸರಕಾರವು ಅದರಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತೆಗೆಯಬೇಕು ಎಂದು ನಿರ್ಧರಿಸುತ್ತದೆ. ಅದರ ಆದಾರದಲ್ಲಿ ರಾಜ್ಯಗಳು ಮರಳಿ ಪಠ್ಯಕ್ರಮ ರಚಿಸಿ ಕೇಂದ್ರಕ್ಕೆ ಕಳುಹಿಸಬೇಕು. ಇದು ಸರ್ವಾಧಿಕಾರದ ಲಕ್ಷಣವೇ ಆಗಿದ್ದು, ಒಕ್ಕೂಟ ವ್ಯವಸ್ಥೆಯನ್ನೇ ಧ್ವಂಸ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಕ್ರಮಗಳ ಮಗದೊಂದು ಭಾಗವೇ ಆಗಿದೆ’ ಎನ್ನುತ್ತಾರೆ.

‘2007ರಲ್ಲಿ ರಾಜ್ಯಗಳು ಸಿದ್ದಪಡಿಸಿದ್ದ ಪಠ್ಯಕ್ರಮ ಅಥವಾ ಸಿಲಬಸ್‍ ಅನ್ನು 2013ರಲ್ಲಿ ಪರಿಷ್ಕರಿಸಲಾಯಿತು. ಆಗ ಕೇಂದ್ರವು ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ಈಗ ರಾಜ್ಯಗಳು ಪಠ್ಯಕ್ರಮ ಅಥವಾ ಸಿಲಬಸ್‍ ರಚನೆಗೆ ಮುಂಚೆ ಕೇಂದ್ರಕ್ಕೆ ಅದರ ವಿವರಗಳನ್ನು ಒದಗಿಸಬೇಕು. ಇದು ವಿಕೇಂದ್ರಿಕರಣ ನೀತಿಗೆ ತದ್ವಿರುದ್ಧ’ ಎಂದರು.

‘ಚುನಾವಣೆಗಳೇ ಬೇಡ ಬಿಡಿ. ಕೇಂದ್ರ ಸರ್ಕಾರವೇ ಮುಖ್ಯಮಂತ್ರಿಗಳನ್ನು ಮತ್ತು ರಾಜ್ಯ ಸರ್ಕಾರಗಳನ್ನು ನೇಮಿಸಿ ಬಿಡಲಿ. ಇದು ತೀರಾ ಅತಿಗೆ ಹೋಗುತ್ತಿದೆ. ಹೊಸ ಶಿಕ್ಷಣ ನೀತಿಯೇ ಒಂದು ಅಧ್ವಾನ.. ಎಲ್ಲ ರಾಜ್ಯ ಸರ್ಕಾರಗಳು ಇದನ್ನು ತಿರಸ್ಕರಿಸುವ ನಿರ್ಣಯ ಮಂಡಣೆ ಮಾಡಬೇಕು’ ಎಂದು ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಒಂದು ಪಠ್ಯ ಚೌಕಟ್ಟನ್ನು ಒದಗಿಸಬೇಕು ಅಷ್ಟೇ. ಅದರ ಅನ್ವಯ ರಾಜ್ಯಗಳು ತಮ್ಮ ಸ್ಥಳೀಯತೆಯ ಆಧಾರದಲ್ಲಿ ಪಠ್ಯ  ರಚನೆ ಮಾಡಿಕೊಳ್ಳುತ್ತವೆ. ಆದರೀಗ ತಾನು ಸೂಚಿಸಿದ ಪಠ್ಯಗಳನ್ನೇ ಅಥವಾ ಪಠ್ಯಕ್ರಮವನ್ನೇ ಎಲ್ಲರೂ ಪಾಲಿಸಬೇಕು ಎನ್ನುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣಕ್ಕೆ ಮೊದಲು ಅನುದಾನ ನೀಡುವ ಕೆಲಸವನ್ನು ಕೇಂದ್ರ ಮಾಡಲಿ. ಅದು ಬಿಟ್ಟು ಇಂತಹ ಅನಾಹುತ ಕೆಲಸ ಮಾಡುವುದನ್ನು ಕೈ ಬಿಡಲಿ. ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡಲು ಹೊರಟ ಕೇಂದ್ರದ ವಿರುದ್ಧ ಎಲ್ಲ ರಾಜ್ಯಗಳ ಜನ ಪ್ರತಿರೋಧ ತೋರಬೇಕಾಗಿದೆ’ ಎಂದು ನಿರಂಜನಾರಾಧ್ಯ ಹೇಳಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಸಹ ಶಿಕ್ಷಣದ ಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ. ಈಗ ಪಠ್ಯದಲ್ಲೂ ತಲೆ ಹಾಕುವ ನಿರ್ಧಾರ ಪ್ರಜಾಪ್ರಭುತ್ವದ ಆಶಯಗಳಿಗೆ, ಸಂವಿಧಾನದ ನೀತಿಸಂಹಿತೆಗಳಿಗೆ ವಿರೋಧಿಯಾಗಿದೆ. ಬಿಜೆಪಿ ಸರಕಾರವು ತನ್ನ ಮತೀಯವಾದಿ ನೀತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಇದು ಸಂಪೂರ್ಣವಾಗಿ ಸಹಕಾರಿಯಾಗುತ್ತದೆ.  ಅವರ ಉದ್ದೇಶವೂ ಸಹ ಇದೇ’ ಎಂದು ಶ್ರೀಪಾದ ಭಟ್‍ ಅಭಿಪ್ರಾಯ ಪಡುತ್ತಾರೆ.

‘ಇದರಿಂದ ರಾಜ್ಯಗಳು ಪಠ್ಯಕ್ರಮ ಸಿದ್ದಪಡಿಸುವ ಸಂಬಂಧಿತ ತಮಗಿರುವ ಅಲ್ಪ ಸ್ವಲ್ಪ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ. ಕೇರಳ, ತಮಿಳುನಾಡು ರಾಜ್ಯಗಳು ಮಾತ್ರ ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿವೆ. ವಿರೋಧ ಪಕ್ಷ ಆಡಳಿತವಿರುವ ಮಿಕ್ಕ 12 ರಾಜ್ಯಗಳು ದಿವ್ಯ ಮೌನದಲ್ಲಿವೆ. ಕರ್ನಾಟಕ ಬಿಡಿ, ಜಿಎಸ್‍ಟಿ ಪಾಲು, ಅತಿವೃಷ್ಟಿ ಪರಿಹಾರ ಕೊಡದಿದ್ದರೂ ತೆಪ್ಪಗಿರುತ್ತದೆ, ಎಲ್ಲ ಬಿಜೆಪಿ ಆಳ್ವಿಕೆಯ ಸರ್ಕಾರಗಳಂತೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಇಬ್ಬರು ಶಿಕ್ಷಣ ತಜ್ಞರು ಹೊಸ ಶಿಕ್ಷಣ ನೀತಿಯೇ ಅಪಾಯಕಾರಿ ಎನ್ನುತ್ತಾರೆ. ‘ಆ ಶಿಕ್ಷಣ ನೀತಿಯ ಕರಡುವಿನಲ್ಲಿ ಬಸವ, ಅಂಬೇಡ್ಕರ್, ಪೆರಿಯಾರ್, ತಿರುವಳ್ಳುವರ್ ಮುಂತಾದ ಸಮಾನತೆಯ ಹರಿಕಾರರ ಪ್ರಸ್ತಾಪವೇ ಇಲ್ಲ. ಚರಕ, ಶುಶ್ರೂತ ಇತ್ಯಾದಿ ವೈದಿಕ ಹೆಸರುಗಳೇ ತುಂಬಿವೆ. ಎಲ್ಲ ರಾಜ್ಯ ಸರ್ಕಾರಗಳೂ ಮೊದಲು ಹೊಸ ಶಿಕ್ಷಣ ನೀತಿಯನ್ನು ತಿರಸ್ಕರಿಸಬೇಕು. ಸಂವಿಧಾನ ಆ ಅವಕಾಶವನ್ನೂ ನೀಡಿದೆ’ ಎಂದು ಪ್ರೊ. ನಿರಂಜನಾರಾಧ್ಯ ನಾನುಗೌರಿ.ಕಾಂಗೆ ತಿಳಿಸಿದರು.


ಇದನ್ನೂ ಓದಿ: ಪದವಿ ಶಿಕ್ಷಣ ನಾಲ್ಕು ವರ್ಷಕ್ಕೆ ಏರಿಸುವುದಕ್ಕೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವಿರೋಧ   

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಚಲೋ’ ಮೆರವಣಿಗೆಗೆ 100 ದಿನ; ಶಂಭು-ಖಾನೌರಿ ಗಡಿ ಬಿಂದುಗಳಲ್ಲಿ ಜಮಾಯಿಸಿದ ಸಾವಿರಾರು ಅನ್ನದಾತರು

0
ಬೆಳೆಗಳಿಗೆ ಎಂಎಸ್‌ಪಿ ಕಾನೂನು ಖಾತರಿಯೂ ಸೇರಿದಂತೆ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ನಡೆಯುತ್ತಿರುವ ಪ್ರತಿಭಟನೆಯು 100 ದಿನಗಳನ್ನು ಪೂರ್ಣಗೊಳಿಸುತ್ತಿದ್ದು, ಶಂಭು ಮತ್ತು ಖನೌರಿ ಗಡಿ ಬಿಂದುಗಳಲ್ಲಿ...