ಪದವಿ ಕೋರ್ಸ್ ಅನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಕೆ ಮಾಡಬೇಕೆಂಬ ಹೊಸ ಶಿಕ್ಷಣ ನೀತಿ (NEP2020)ಯ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಹೊರಟಿರುವುದಕ್ಕೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.

ಅದಕ್ಕಾಗಿ ಸಮಿತಿಯೊಂದನ್ನು ರಚಿಸಿ ಕೇವಲ ಹತ್ತು ದಿನದಲ್ಲಿಯೇ ವರದಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕೋವಿಡ್ ಸಂದರ್ಭದಲ್ಲಿ ಗಡಿಬಿಡಿಯಲ್ಲಿ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಂಡು ಸಮಿತಿಗಳನ್ನು ರಚಿಸಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಆಘಾತವನ್ನು ಉಂಟುಮಾಡಿದೆ ಎಂದು ಕೆವಿಎಸ್ ಸಂಚಾಲಕ ಸರೋವರ್ ಬೆಂಕಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಭವಿಷ್ಯವನ್ನೇ ರೂಪಿಸುವ ಉನ್ನತ ಶಿಕ್ಷಣದ ನೀತಿಯನ್ನು ಕೇವಲ ಹತ್ತು ದಿನದಲ್ಲಿ ವರದಿಯನ್ನು ತರಿಸಿಕೊಂಡು ಅನುಷ್ಠಾನ ಮಾಡಲು ಹೇಗೆ ಸಾಧ್ಯ? ಇದನ್ನು ಕನಿಷ್ಠ ನಾಲ್ಕು ತಿಂಗಳಿಗಾದರೂ ವಿಸ್ತರಿಸಬೇಕು. ಕೋವಿಡ್ ಸಂದರ್ಭದಲ್ಲಿ ಕಳೆದ ಬಾರಿ ಶೆ.30 ರಷ್ಟು ವಿದ್ಯಾರ್ಥಿಗಳ ಕಲಿಕೆಯೇ ಆಗಿಲ್ಲವೆಂದು ಸರ್ಕಾರವೇ ಹೇಳುತ್ತಿರುವಾಗ ಇದರ ಪರಿಹಾರಕ್ಕೆ ಸರ್ಕಾರ ನಿರ್ಧಾರ ತಗೆದುಕೊಳ್ಳದೆ ಪದವಿಯ ಅವಧಿಯನ್ನು ವಿಸ್ತರಿಸುವ ಕಾರ್ಯ ಸೂಕ್ತವೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಮಿತಿಯಲ್ಲಿ ಶಿಕ್ಷಣದ ಭಾಗೀದಾರರಾದ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು, ಪಠ್ಯೇತರ ಚಟುವಟಿಕೆಯ ತಜ್ಞರು, ಪೋಷಕರು ಇಲ್ಲದಿರುವುದು ಸರಿಯಲ್ಲ. ಈ ಎಲ್ಲಾ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ಅದು ತನ್ನ ಚರ್ಚೆ ಮತ್ತು ಪಾರದರ್ಶಕ ಸಂವಾದದ ಮೂಲಕ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೆವಿಎಸ್ ಒತ್ತಾಯಿಸಿದೆ.

ದಶಕಗಳಿಂದ ಸಮಾನ ಶಿಕ್ಷಣಕ್ಕಾಗಿ, ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಸುದೀರ್ಘವಾಗಿ ಹೋರಾಟಗಳು ನಡೆಯುತ್ತಲೇ ಬಂದಿವೆ. ಇನ್ನು ಶಿಕ್ಷಣಕ್ಕಾಗಿ ಜಿಡಿಪಿಯ ಶೆ.6% ಅಥವಾ ರಾಜ್ಯ ಬಜೆಟ್ ನ ಶೇ. 24 ಅನ್ನು ಮೀಸಲಿಡಬೇಕು ಎಂದು ಶಿಕ್ಷಣ ಅಯೋಗಗಳು, ಶಿಕ್ಷಣ ತಜ್ಞರು ಶಿಫಾರಸು ಮಾಡುತ್ತಿದ್ದಾರಲ್ಲದೆ NEP 2020 ಕೂಡ ಹೇಳುತ್ತಿದೆ. ಇವುಗಳಿಗಾಗಿ ಯಾವುದೇ ಸರ್ಕಾರಗಳಾಗಲಿ, ಸಚಿವರಾಗಲಿ ತುರ್ತು ಸಮಿತಿಗಳು ರಚಿಸಿ ವರದಿ ಕೇಳಲಿಲ್ಲ, ಅನುಷ್ಠಾನಕ್ಕೆ ಉತ್ಸುಕರಾಗಿಲ್ಲ ಏಕೆ ಎಂದು ಕೆವಿಎಸ್ ಪ್ರಶ್ನಿಸಿದೆ.


ಇದನ್ನೂ ಓದಿ: ನಾಲ್ಕು ವರ್ಷಗಳ ಪದವಿ ಕೋರ್ಸ್‌ನಲ್ಲಿ ಕನ್ನಡಕ್ಕೆ ಕುತ್ತು: ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹಲವರ ವಿರೋಧ

LEAVE A REPLY

Please enter your comment!
Please enter your name here