NEP
Image Courtesy: Medium

ಹಲವಾರು ರಾಜ್ಯಗಳ ವಿರೋಧ, ಶಿಕ್ಷಣ ತಜ್ಞರ ಅಸಮಾಧಾನದ ನಡುವೆಯೂ ಕೇಂದ್ರ ಸರ್ಕಾರ ತನ್ನ ಮಹತ್ವಕಾಂಕ್ಷೆಯ 2020ರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಹೊರಟಿದೆ. ಸರ್ಕಾರದ ಈ ನಡೆಯಿಂದ ಕನ್ನಡ ಭಾಷೆಗೆ ಕುತ್ತು ಬಂದೊದಗಲಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವಾರು ಸಾಹಿತಿಗಳು, ಪ್ರಾಧ್ಯಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸ ಶಿಕ್ಷಣ ನೀತಿ ಅನುಷ್ಠಾನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಭಿನ್ನ ಬಗೆಯ ಬಹುಶಿಸ್ತೀಯ 4 ವರ್ಷಗಳ ಸಾಮಾನ್ಯ ಪದವಿ ಮತ್ತು ಶಿಕ್ಷಕ ಪದವಿ ಕೋರ್ಸುಗಳನ್ನು ರೂಪಿಸಿದ್ದು, ಅದಕ್ಕಾಗಿ ಅನುಷ್ಠಾನ ಕಾರ್ಯಪಡೆಯನ್ನು ರಚಿಸಲಾಗಿದೆ. ಉನ್ನತ ಶಿಕ್ಷಣ ಪಠ್ಯಕ್ರಮ ರಚನೆಗೆ ನೇಮಿಸಲಾಗಿದ್ದ ಕಾರ್ಯಪಡೆ ಉಪ ಸಮಿತಿಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕನ್ನಡವನ್ನೂ ಒಳಗೊಂಡಂತೆ ಎಲ್ಲಾ ಭಾಷಾ ಪಠ್ಯ ವಿಷಯವನ್ನು ಕೇವಲ ಎರಡು ಸೆಮಿಸ್ಟಾರ್‌ಗಳಿಗೆ ಅಂದರೆ ಒಂದೇ ವರ್ಷಕ್ಕೆ ಮಿತಿಗೊಳಿಸಲಾಗಿದೆ. ಇದರ ವಿರುದ್ದ ಹಲವಾರು ಸಾಹಿತಿಗಳು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಮೂರು ವರ್ಷಗಳ ಪದವಿಯಲ್ಲಿ ಮೊದಲ ಎರಡು ವರ್ಷ ಅಂದರೆ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡಾದಿಯಾಗಿ ಭಾಷಾ ವಿಷಯ ಬೋಧನೆಗೆ ಅವಕಾಶವಿತ್ತು. ಈಗ ನಾಲ್ಕು ವರ್ಷಗಳ ಪದವಿಯಲ್ಲಿ ಎರಡು ವರ್ಷಗಳ ಭಾಷಾ ಬೋಧನೆಯನ್ನು ಮೂರು ವರ್ಷಗಳಿಗೆ ವಿಸ್ತರಿಸಬೇಕಾಗಿತ್ತು. ಕಡೇ ಪಕ್ಷ ಹಿಂದೆ ಇದ್ದಂತೆ ಎರಡು ವರ್ಷಗಳ ಅವಧಿಯನ್ನಾದರೂ ಉಳಿಸಿಕೊಳ್ಳಬೇಕಿತ್ತು. ಅದರ ಬದಲು ಒಂದು ವರ್ಷಕ್ಕೆ ಮಿತಿಗೊಳಿಸಿರುವುದು ಇದು ಭಾಷಾ ವಿಷಯಗಳಿಗೆ ಅದರಲ್ಲೂ ವಿಶೇಷವಾಗಿ ಕನ್ನಡಕ್ಕೆ ಆಗಿರುವ ಅನ್ಯಾಯ. ಇದು ಖಂಡನೀಯ ಎಂದು ಬರಗೂರು ರಾಮಚಂದ್ರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.

ಯಾವುದೇ ವಿಶೇಷ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುವವರಿಗೆ ಕನ್ನಡ ಭಾಷೆ, ಸಾಹಿತ್ಯದ ಸಾಮಾನ್ಯ ಪರಿಚಯ ಕಡ್ಡಾಯವಾಗಬೇಕು. ಇದು ಕೇವಲ ಕನ್ನಡಾಭಿಮಾನದ ಪ್ರಶ್ನೆಯಲ್ಲಿ, ಯಾವುದೇ ವ್ಯಾಸಂಗಗಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸಿ ಮಾನವೀಯ ಮೌಲ್ಯಗಳನ್ನು ನೆಲೆಗೊಳಿಸಲು ಕನ್ನಡ ಭಾಷೆ, ಸಾಹಿತ್ಯಗಳ ಸಂಕ್ಷಿಪ್ತ ಸಾಮಾನ್ಯ ಪರಿಚಯವು ಪೂರಕವಾಗುತ್ತದೆ. ಶಿಕ್ಷಣವನ್ನು ಸಾಂಸ್ಕೃತಿಕ ಜನಪರ ಪ್ರಜೆಯ ನೆಲೆಯಲ್ಲೂ ಪರಿಭಾವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಪಠ್ಯ ವಿಷಯವನ್ನು ನಾಲ್ಕು ವರ್ಷಗಳ ಪದವಿಯಲ್ಲಿ ಮೂರು ವರ್ಷ ಬೋಧಿಸುವ ತೀರ್ಮಾನ ಕೈಗೊಳ್ಳಬೇಕು. ಒಂದೇ ವರ್ಷಕ್ಕೆ ಮಿತಿಗೊಳಿಸಿದರೆ ಖಂಡಿತ ಸಂಘಟಿತ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಒಂದು ವರ್ಷ ಮಾತ್ರ ಭಾಷಾ ಕೌಶಲ್ಯ, ಭಾಷಾ ಸಾಮರ್ಥ್ಯಗಳನ್ನು ಕಲಿತು ಆನಂತರ ಅವರು ಬೇರೆ ಏನನ್ನಾದರೂ ಭಾಷೆಯ ಸಹಾಯವಿಲ್ಲದೆ ಕಲಿಯಬಹುದು ಎಂಬ ಕಲ್ಪನೆಯೇ ಅವೈಜ್ಞಾನಿಕವಾದುದು. ಮೌಲ್ಯಾಧಾರಿತ, ಕೌಶಲ್ಯಾಧಾರಿತ, ವೃತ್ತಿಪರ ಶಿಕ್ಷಣವನ್ನು ರೂಪಿಸುವ ನೆಲೆಯಲ್ಲಿ ಭಾಷೆಯನ್ನು ಕಡೆಗಣಿಸಲು ಆದೀತೆ ಎಂದು ಹಲವು ಪ್ರಾಧ್ಯಾಪಕರು, ಸಾಹಿತಿಗಳು ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ್‌ನಾರಾಯಣ್‌ರವರನ್ನು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಶಿಕ್ಷಣ ನೀತಿಯನ್ನಾಗಿ ಪರಿವರ್ತಿಸಿಕೊಂಡು ನಮ್ಮ ಅಸ್ತಿತ್ವಕ್ಕೆ ಮತ್ತು ಅನನ್ಯತೆಗೆ ಧಕ್ಕೆ ಬಾರದ ಹಾಗೆ ಶಿಕ್ಷಣವನ್ನು ನಾವಿಲ್ಲಿ ರೂಪಿಸಿಕೊಳ್ಳಬೇಕಲ್ಲವೆ? ಎಂದು ಡಾ.ರಾಮಲಿಂಗಪ್ಪ ಟಿ.ಬೇಗೂರು, ಡಾ.ನಟರಾಜ ಬೂದಾಳು, ಡಾ. ಮೀನಾಕ್ಷಿ ಬಾಳಿ, ಡಾ.ಡಿ.ಎಸ್.ಚೌಗಲೆ, ಡಾ. ಜಯಪ್ರಕಾಶ್ ಶೆಟ್ಟಿ, ಡಾ. ವಿನಯಾ ವಕ್ಕುಂದ, ಡಾ.ಅಮೃತಾ ಕಟಕೆ, ಡಾ.ಚಂದ್ರಶೇಕರ ನಂಗಲಿ, ಡಾ. ಬೈರಮಂಗಲ ರಾಮೇಗೌಡ, ಡಾ. ತಿಮ್ಮೇಗೌಡ, ಡಾ. ದಾದಾಪೀರ್ ನವಿಲೆಹಾಳ್, ಡಾ. ತಿಮ್ಮಯ್ಯ ಕೆ., ಡಾ.ಜಾಜಿ ದೇವೇಂದ್ರಪ್ಪ, ಡಾ. ಬಿ. ಕರಿಯಣ್ಣ, ಡಾ. ಗೀತಾ ವಸಂತ, ಡಾ. ಶಿವನಂಜಯ್ಯ ಮುಂತಾದವರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಚರ್ಚೆ ಇಲ್ಲದೇ NEP 2020 ಜಾರಿಗೆ ಮುಂದಾದ ಕೇಂದ್ರ: ಶಿಕ್ಷಣ ತಜ್ಞರ ಆಕ್ರೋಶ

1 COMMENT

  1. ಕನ್ನಡವನ್ನು ಮೂಲೆಗುಂಪು ಮಾಡಿರುವ ಹೊಸ ಶಿಕ್ಷಣ ನೀತಿಯನ್ನು ಕನ್ನಡಿಗರೆಲ್ಲರೂ ಒಕ್ಕೋರಲಿನಿಂದ ವಿರೋಧಿಸಬೇಕು.

LEAVE A REPLY

Please enter your comment!
Please enter your name here