Homeಮುಖಪುಟಕಾಂಗ್ರೆಸ್‍ಗೆ ಇತಿಹಾಸವಿದೆ, ಬಿಜೆಪಿಗಿಲ್ಲ; ಹಾಗಾಗಿ ಅವರು ಸುಳ್ಳನ್ನ ಆಶ್ರಯಿಸಿದ್ದಾರೆ - ಡಿಕೆಶಿ ಸಂದರ್ಶನ

ಕಾಂಗ್ರೆಸ್‍ಗೆ ಇತಿಹಾಸವಿದೆ, ಬಿಜೆಪಿಗಿಲ್ಲ; ಹಾಗಾಗಿ ಅವರು ಸುಳ್ಳನ್ನ ಆಶ್ರಯಿಸಿದ್ದಾರೆ – ಡಿಕೆಶಿ ಸಂದರ್ಶನ

ನಮ್ಮ ಪಕ್ಷಕ್ಕೆ ಒಂದು ಜೋಲ್ಟ್ ಆಗಿರುವುದು ನಿಜ. ಆದರೆ ಪಕ್ಷವೇನೂ ಸಂಕಷ್ಟದಲ್ಲಿಲ್ಲ. ಅಧಿಕಾರ ಇಲ್ಲ ಅಷ್ಟೇ. ನಮಗೆ ಒಂದು ಸಿದ್ಧಾಂತ, ಕಾರ್ಯಕ್ರಮ, ಬಲ ಇದ್ದೇ ಇದೆ. ಹಾಗಾಗಿ ನಾವು ತಿರುಗಿ ಮೇಲೇಳುತ್ತೇವೆ.

- Advertisement -
- Advertisement -

ಜುಲೈ ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡಿದ ಡಿ.ಕೆ ಶಿವಕುಮಾರ್‌ರವರನ್ನು ನ್ಯಾಯಪಥ, ನಾನುಗೌರಿ.ಕಾಂ ಸಂದರ್ಶಿಸಿತು. ಕರ್ನಾಟಕದಲ್ಲಿ ಕಾಂಗ್ರೆಸ್‌ ಕಷ್ಟಕಾಲದಲ್ಲಿರುವ ಜವಾಬ್ದಾರಿ ಹೊತ್ತ ಅವರು ಮಾತುಗಳು ಇಲ್ಲಿವೆ.

ಪ್ರಶ್ನೆ: ಕರ್ನಾಟಕದ ಜನ ಮತ್ತು ನಿಮ್ಮ ಪಕ್ಷ ಎರಡೂ ಸಂಕಷ್ಟದಲ್ಲಿರುವಾಗ ಕೆಪಿಸಿಸಿ ಅಧ್ಯಕ್ಷರಾಗಿದ್ದೀರಿ. ನಿಮ್ಮ ಆದ್ಯತೆಗಳೇನು?

ಡಿ.ಕೆ.ಶಿವಕುಮಾರ್: ನಮ್ಮ ಪಕ್ಷಕ್ಕೆ ಒಂದು ಜೋಲ್ಟ್ ಆಗಿರುವುದು ನಿಜ. ಆದರೆ ಪಕ್ಷವೇನೂ ಸಂಕಷ್ಟದಲ್ಲಿಲ್ಲ. ಅಧಿಕಾರ ಇಲ್ಲ ಅಷ್ಟೇ. ನಮಗೆ ಒಂದು ಸಿದ್ಧಾಂತ, ಕಾರ್ಯಕ್ರಮ, ಬಲ ಇದ್ದೇ ಇದೆ. ಹಾಗಾಗಿ ನಾವು ತಿರುಗಿ ಮೇಲೇಳುತ್ತೇವೆ. ತಳಮಟ್ಟದ ಜನರ ಸಮಸ್ಯೆಗಳಿಗೆ ನಾವು ಕಿವಿ ಕೊಟ್ಟರೆ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೆ ಮತ್ತೆ ಅಧಿಕಾರಕ್ಕೆ ಬರುತ್ತದೆ.

ಪ್ರಶ್ನೆ: 2014ರ ನಂತರ ದೇಶ ಮತ್ತು ರಾಜಕಾರಣ ದೊಡ್ಡದಾಗಿ ಬದಲಾಗಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷ ಇನ್ನೂ ಹಿಂದಿನ ರೀತಿಯಲ್ಲೇ ರಾಜಕಾರಣ ಮಾಡುತ್ತಿದೆ. ಇದು ಪ್ರಯೋಜನಕ್ಕೆ ಬರುತ್ತಾ?

ಡಿ.ಕೆ.ಶಿ: ಈ ರೀತಿ ದ್ವೇಷದ ರಾಜಕಾರಣ ದೇಶಕ್ಕೆ ಹೊಸತೇ. ಇಂದಿರಾಗಾಂಧಿಯವರ ವಿರುದ್ಧ ಚಿಕ್ಕಮಗಳೂರಿನಲ್ಲಿ ಸ್ಪರ್ಧೆ ಮಾಡಿದ್ದ ವೀರೇಂದ್ರ ಪಾಟೀಲರನ್ನು ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಗೊಂಡು ಕ್ಯಾಬಿನೆಟ್‍ನಲ್ಲೂ ಸೇರಿಸಿಕೊಂಡಿದ್ದ ಇತಿಹಾಸ ಈ ದೇಶಕ್ಕೆ ಇದೆ. ಆದರೆ, ಈಗಿನ ರೀತಿ ಬೇರೆ ಇದೆ. ವಿರೋಧ ಪಕ್ಷಗಳೇ ಇರಬಾರದು, ಅವರನ್ನು ಮುಗಿಸಿಬಿಡಬೇಕು ಎನ್ನುವ ರಾಜಕಾರಣ ಇವತ್ತು ಮಾಡ್ತಿದಾರೆ.

ಆದರೆ ನೋಡಿ, ದೇಶದಲ್ಲಿ ಎನ್‍ಆರ್‍ಸಿ, ಸಿಎಎ ವಿರೋಧಿ ಹೋರಾಟ ಹೇಗೆ ನಡೀತು? ಯಾವ ಪಕ್ಷವೂ ಅದಕ್ಕೆ ಬೆಂಬಲ ಕೊಡಲಿಲ್ಲ. ಜನರೇ ಮೇಲೆದ್ದರು. ಸ್ವಾತಂತ್ರ್ಯ ಬಂದಿರುವ ದೇಶದಲ್ಲಿ ನಾನು ಭಾರತೀಯ ಅಂತ ಪ್ರೂವ್ ಮಾಡಬೇಕಲ್ಲಾ ಅಂತ ತಕ್ಷಣ ಜನ ಬೀದಿಗೆ ಬಂದರು. ಇಂಥವು ದೇಶದಲ್ಲಿ ನಡೆಯುತ್ತಿದೆ.

ಇನ್ನು ನಮ್ಮ ಪಕ್ಷಕ್ಕೆ ಬಂದರೆ, ಸಂಖ್ಯೆ ಕಡಿಮೆ ಆಗಿರುವುದರಿಂದ ಕುಗ್ಗಿದಂತೆ ಕಾಣುತ್ತದೆ. ಆದರೆ ನಾವು ಧೈರ್ಯದಿಂದ ನುಗ್ಗಿದರೆ A courageous man makes majority ಅಂತ ಮಾತಿದೆ. ಹಾಗಾಗುತ್ತೇವೆ. ನಾನೊಬ್ಬನೇ ಅಲ್ಲ. ಒಬ್ಬನೇ ಏನೂ ಮಾಡೋಕೆ ಆಗಲ್ಲ. ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಅದನ್ನು ಮಾಡಿ ತೋರಿಸ್ತೀವಿ.

ಪ್ರಶ್ನೆ: ಆದರೆ ನಿಮ್ಮ ಪಕ್ಷದ ನಾಯಕರುಗಳೇ ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. ಈಗಲೂ ಸಚಿನ್ ಪೈಲಟ್ ಹೋದಂತೆ ಕಾಣ್ತಿದೆ.

ಡಿಕೆಶಿ: ಅವರೆಲ್ಲಾ ಅಧಿಕಾರಕ್ಕೆ ಬಹಳ ಆತುರದಲ್ಲಿದ್ದಾರೆ. ಅವರಿಗೆ ಚಾಕ್ಲೇಟ್ ತೋರಿಸಿದ್ದಾರೆ. ಆದರೆ, ಇದೆಲ್ಲಾ ಬಹಳ ನಡೆಯಲ್ಲ. ನೋಡಿ, ಇಲ್ಲಿಂದ – ನಮ್ಮ ಪಕ್ಷದಿಂದ – ಹೋಗಿರೋರು ಇದ್ದಾರಲ್ಲಾ ಅವರೇ ಸಾಕು ಅವರನ್ನ ಕ್ಲೋಸ್ ಮಾಡ್ತಾರೆ.

ಪ್ರಶ್ನೆ: ಕೊರೊನಾ ನಿಭಾಯಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ್ದು ದೊಡ್ಡ ಭ್ರಷ್ಟಾಚಾರ ನಡೆದಿದೆ ಅಂತ ಆಪಾದಿಸ್ತಾ ಇದ್ದೀರಾ? ಅದನ್ನು ಹೊರಗೆ ತರೋದ್ರಲ್ಲಿ ನಿಮ್ಮ ಯೋಜನೆ ಏನು? ಹೋರಾಟದ ರೂಪುರೇಷೆ ಏನಿರುತ್ತೆ?

ಡಿಕೆಶಿ: 21 ಕೋಟಿಗೆ ಖರೀದಿಸಬಹುದಾಗಿದ್ದ ವಸ್ತುಗಳಿಗೆ 200 ಕೋಟಿ ಕೊಡೋಕೆ ಹೋಗಿದ್ದರು. ಅದು ಹೊರಗೆ ಬಂದ ತಕ್ಷಣ ಈಗ ಯಡಿಯೂರಪ್ಪನವರು ಬೇಡ ಅಂದಿದ್ದಾರೆ. ಇವರ ಅನುಮತಿ ಇಲ್ಲದೇ ಆಫೀಸರ್‍ಗಳು ಅದನ್ನ ಮಾಡ್ತಾರಾ? ನಾನು ಇವತ್ತೂ ಪತ್ರಿಕಾಗೋಷ್ಠಿಯ ಮೂಲಕ ಕೇಳಿದೆ – ಯಡಿಯೂರಪ್ಪನವರೇ, ಕರ್ನಾಟಕ ರಾಜ್ಯ ಇಡೀ ಪ್ರಪಂಚಕ್ಕೆ ಡಾಕ್ಟರ್‍ಗಳನ್ನ ಎಕ್ಸ್‍ಪೋರ್ಟ್ ಮಾಡಿದೆ. ನೀವು ಅವರಿಗೆ ಹೆದರಿಸಿ ಕೆಲಸ ಮಾಡ್ತೀರಾ? ಆಶಾ ಕಾರ್ಯಕರ್ತೆಯರು ಮೂರು ದಿನದಿಂದ ಧರಣಿ ಕೂತಿದ್ದಾರೆ. ಅವರನ್ನ ಹೋಗಿ ಮಾತಾಡಿಸಿದ್ದೀರಾ? ಹೌದು ಡಾಕ್ಟರ್‍ಗಳು ಸರಿಯಾಗಿ ಟ್ರೀಟ್‍ಮೆಂಟ್ ಕೊಡದೇ ನರ್ಸ್ ಕೈಲಿ ಕೊಡಿಸ್ತಾರೆ ಅಂದ್ರೆ… ನೀವ್ಯಾರಾದ್ರೂ ಹೋಗಿ ನೋಡಿದ್ರಾ? ಏನೂ ಇಲ್ಲ. ಅಸಹಾಯಕರಾದ ಜನರ ಜೊತೆಗೆ ಸರ್ಕಾರ ನಿಲ್ಲಬೇಕು. ಅವರ ಚಿಕಿತ್ಸೆ ಖರ್ಚು ವೆಚ್ಚ ಸರ್ಕಾರ ತುಂಬಬೇಕು.

ಪ್ರಶ್ನೆ: ಸರ್ಕಾರದ ವಿರುದ್ಧ ನೀವು ಮಾತಾಡ್ತಿದ್ದೀರಿ ಹೌದು. ಆದರೆ ಯಡಿಯೂರಪ್ಪನವರ ಬಗ್ಗೆ ನೀವು ಸಾಫ್ಟ್ ಆಗಿದ್ದೀರ, ನೀವು ಅವರ ಜೊತೆ ಹೊಂದಾಣಿಕೆಯಲ್ಲಿದ್ದೀರಿ ಅನ್ನೋ ಮಾತಿದೆ.

ಡಿಕೆಶಿ: ಯಾವ ಹೊಂದಾಣಿಕೆಯೂ ಇಲ್ಲ. ಅವರ ವಯಸ್ಸಿಗೆ ಗೌರವ ಕೊಡೋದು ಬಿಟ್ಟರೆ, ಎಷ್ಟು ಹೋರಾಟ ಮಾಡ್ತಿದೀನಿ ಅಂತ ನನಗೆ ಗೊತ್ತು. ನನ್ನ ವಿರುದ್ಧ ಸಿಬಿಐಗೆ ತನಿಖೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಿರಬೇಕಾದ್ರೆ ಹೊಂದಾಣಿಕೆ ಹೇಗೆ ಆಗುತ್ತೆ.

ಪ್ರಶ್ನೆ: ಮುಂದಿನ ಸಾರಿ ಅಧಿಕಾರಕ್ಕೆ ಬಂದರೆ ನೀವು ಮತ್ತು ಸಿದ್ದರಾಮಯ್ಯನವರ ಮಧ್ಯೆ 2 ವರ್ಷ ಒಬ್ಬರು, 3 ವರ್ಷ ಇನ್ನೊಬ್ಬರು ಸಿಎಂ ಅಂತ ಮಾತುಕತೆ ಆಗಿದೆಯೆಂಬ ಸುದ್ದಿ ಇದೆ. ನಿಜವೇ?

ಡಿಕೆಶಿ: ನಮ್ಮ ಪಕ್ಷದಲ್ಲಿ ಹೈಕಮ್ಯಾಂಡ್ ಇದೆ. ಅದೇನು ಹೇಳುತ್ತೋ ಅದಾಗುತ್ತದೆ. ಬಿಜೆಪಿಯನ್ನ ಸೋಲಿಸ್ಬೇಕು, ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರಬೇಕು ಅಷ್ಟೇ ತಲೇಲಿರೋದು. ಚೀಫ್ ಮಿನಿಸ್ಟರ್ ಭ್ರಮೆ ನನ್ ತಲೇಲಿಲ್ಲ. ನಾನು ಆಗ್ಲೇ ಹೇಳಿದ್ದೀನಿ. ವಿಧಾನಸೌಧದ ಮೆಟ್ಟಿಲಿಗೆ ಚಪ್ಪಡಿ ಕಲ್ಲು ಆಗ್ತೀನಿ ಅಂತ. ಚಿಕ್ಕ ಹುಡುಗ್‍ನಲ್ಲೇ ಪವರ್ ನೋಡಿದ್ದೀನಿ ನಾನು. ಗಾಂಧಿ ಫ್ಯಾಮಿಲಿ ಜೊತೆ ಒಂದು ಅಟ್ಯಾಚ್‍ಮೆಂಟ್ ಇದೆ. 8-9 ಸಾರಿ (ಕೈ ತೋರುತ್ತಾ) ಈ ಚಿಹ್ನೆ ಕೊಟ್ಟಿದಾರೆ. ಸಾಕು.

ಪ್ರಶ್ನೆ: ನಿಮ್ಮ ಮೇಲಿರುವ ಕೇಸುಗಳೆಲ್ಲಾ ರಾಜಕೀಯ ದುರುದ್ದೇಶದಿಂದಾನೇ ಮಾಡಿರೋದಾ? ಅವುಗಳಲ್ಲಿ ಏನೂ ಹುರುಳಿಲ್ಲವಾ?

ಡಿಕೆಶಿ: ನೋಡಿ, ಅದೇನು ಮಾಡ್ತಾರೋ ಮಾಡ್ಲಿ. ನೀವು ಎಕ್ಸಾಂ ಬರೆದಾಗ ಮೇಷ್ಟ್ರು ನಿಮ್ಮನ್ನ ಫೇಲ್ ಮಾಡಲೇಬೇಕು ಅಂತ ತೀರ್ಮಾನ ಮಾಡಿಬಿಟ್ರೆ ಏನು ಮಾಡೋಕಾಯ್ತದೆ? ಹಾಗಿದು. ಕತ್ತಲಾದ ಮೇಲೆ ಬೆಳಕು ಬರುತ್ತೆ, ಅವರು ಏನೇನು ಮಾಡಬೇಕು ಅಂತ ಇದ್ದಾರೋ ಮಾಡ್ಲಿ ಅಂತ ಇರೋನು ನಾನು.

ಪ್ರಶ್ನೆ: ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮದೇ ಒಂದು ಗುಂಪು ಕಟ್ತಾ ಇದ್ದದ್ದು ಕಾಣ್ತಿತ್ತು. ರಮೇಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಅವರ ಜೊತೆಗೆ ಕಾಂಟ್ರಡಿಕ್ಷನ್ ಇತ್ತು. ಈಗ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಮಾತನಾಡುತ್ತಿದ್ದೀರಿ.

ಡಿಕೆಶಿ: ಹಾಗೇನೂ ಇಲ್ಲ. ನನ್ನದು ಮಿಸ್‍ಟೇಕೆನ್ ಐಡೆಂಟಿಟಿ. ಆ ಥರಾ ನಾನು ಯಾರನ್ನೂ ದ್ವೇಷಿಸಿಲ್ಲ. ಎಂ.ಬಿ.ಪಾಟೀಲ್ ನನ್ನ ಕೊಲೀಗ್. ಮಿಕ್ಕವರ ಹೆಸರು ನಾನು ಹೇಳೋಕೆ ಹೋಗಲ್ಲ. ಇದು ಐದು ಬೆರಳು ಸೇರಿದರೆ ಆಗುವ ಕೆಲಸ. ನನ್ನೊಬ್ಬನಿಂದಲೇ ಆಗೋದಲ್ಲ.

ಪ್ರಶ್ನೆ: ಬಿಜೆಪಿಯ ಸಿದ್ಧಾಂತವನ್ನ, ಅವರು ನಿಮ್ಮ ಪಕ್ಷದ ಮೇಲೆ ಮಾಡುತ್ತಿರುವ ಆರೋಪಗಳನ್ನ ಹೇಗೆ ಎದುರಿಸ್ತೀರ?

ಡಿಕೆಶಿ: ನೋಡ್ರೀ, ನಮ್ಮ ದೇಶದ ಸಂಸ್ಕೃತಿಯಲ್ಲಿ ಅಪ್ಪ ಅಮ್ಮನ್ನ ಗೌರವಿಸ್ತಾರೆ. ಅಮೆರಿಕಾ ಥರದ ದೇಶದಲ್ಲಿ ಹಾಗಲ್ಲ. 17-18 ವರ್ಷಕ್ಕೇ ಅಪ್ಪ ಅಮ್ಮನ್ನ ಬಿಟ್ಟು ಹೋಗ್ಬಿಡ್ತಾರೆ. ಅಂದರೆ ನಮ್ಮಲ್ಲಿ ಇತಿಹಾಸವನ್ನ ಗೌರವಿಸ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಅಂತಹ ಇತಿಹಾಸವಿದೆ. ಅವರಿಗೇನು, ಬಿಜೆಪಿಯವ್ರಿಗೆ? ಅವ್ರಿಗೆ ಇತಿಹಾಸ ಇಲ್ಲ. ಹಾಗಾಗಿ ಅವರು ಗೊಬೆಲ್ಸ್ ಸೂತ್ರ ಹಿಡ್ಕಂಡಿದಾರೆ. ಸುಳ್ಳನ್ನು ನೂರು ಸಲ ಹೇಳಿದ್ರೆ ನಿಜ ಆಗುತ್ತೆ ಅಂತ. ಹಾಗಾಗಲ್ಲ.

ನಿಮ್ಮದೇ ನೋಡಿ, ಲಂಕೇಶ್ ಅವರು ಇದ್ದಾಗ ನಾವೆಲ್ಲಾ ಸ್ಟೂಡೆಂಟ್ ಲೀಡರ್ಸ್. ಆದರೆ ಚಿಕ್ಕದೊಂದು ಪತ್ರಿಕೆ ಸರ್ಕಾರಾನೇ ತೆಗೆದುಬಿಡೋ ಮಟ್ಟಕ್ಕೆ ಇತ್ತು. ಈಗೇನಾಗಿದೆ ಅಂದ್ರೆ ಇಷ್ಟೊಂದು ಮೀಡಿಯಾಗಳು ಬಂದಾಗ ಸರ್ಕಾರ ಅವರನ್ನ ಕಂಟ್ರೋಲ್ ಮಾಡ್ತಿದೆ.

ಹೀಗಿರುವಾಗ ನಾವ್ಹೇಗೆ ಮಾಡ್ತೇವೆ ಅನ್ನೋದನ್ನ ಚಿಂತನೆ ಮಾಡ್ತಾ ಇದ್ದೇವೆ.

ಪ್ರಶ್ನೆ: ಕನಕಪುರದಲ್ಲಿ ಏಸುಬೆಟ್ಟದ ಕುರಿತೇ ಸುಳ್ಳುಗಳನ್ನು ಹೇಳೋದನ್ನ ನೀವು ಕೌಂಟರ್ ಮಾಡೋಕೆ ಆಗಲಿಲ್ಲವಲ್ಲಾ?

ಡಿಕೆಶಿ: ಹೌದು. ಅವರು ಹೇಳುತ್ತಿರುವ ಮುನೇಶ್ವರ ಬೆಟ್ಟ ಅಲ್ಲಿಂದ 4-5 ಕಿ.ಮೀ ದೂರದಲ್ಲಿದೆ. ಆದರೆ ಅವರು ದ್ವೇಷ ಹುಟ್ಟಿಸೋಕೆ ಏನೇನೋ ಹೇಳ್ತಾರೆ. ಹಿಂದೂ ಧರ್ಮ ದ್ವೇಷ ಮಾಡೋಕೆ ಹೇಳಿಕೊಡುತ್ತಾ? ಮುಸ್ಲಿಂ ಧರ್ಮದಲ್ಲಿದೆಯಾ? ಕ್ರೈಸ್ತ ಧರ್ಮದಲ್ಲಿದೆಯಾ? ಇದೆಲ್ಲಾ ಸೃಷ್ಟಿ ಮಾಡೋದು. ಹಾಗಾದ್ರೆ ಈಗ ಅವರ ಕೈಯ್ಯಲ್ಲೇ ಸರ್ಕಾರ ಇದೆಯಲ್ವಾ? ಅವ್ರು ಆ ಪ್ರತಿಮೆಗೆ ಕೊಟ್ಟಿರೋ ಅನುಮತಿಯಲ್ಲಿ ತಪ್ಪಿದ್ರೆ ಕಿತ್ತಾಕಬಹುದು ಅಲ್ವಾ? ಇದೆಲ್ಲಾ ತಪ್ಪು ಕಣ್ರೀ.

ಪ್ರಶ್ನೆ: ಕಡೆಯ ಪ್ರಶ್ನೆ. ಉದ್ಯಮಿ ಕಾಫಿಡೇ ಸಿದ್ಧಾರ್ಥ ಅವರ ಆತ್ಮಹತ್ಯೆಯು ಇಡೀ ದೇಶದಲ್ಲಿ ತಲ್ಲಣ ಮೂಡಿಸ್ತು. ನೀವು ಅವರಿಗೆ ಹತ್ತಿರವಿದ್ದವರು. ವಾಸ್ತವದಲ್ಲಿ ಏನಾಯಿತು? ಇದರಲ್ಲಿ ನೀವು ಮಾತಾಡೋದೇನೂ ಇಲ್ವಾ?

ಡಿಕೆಶಿ: ಖಂಡಿತಾ ಇದನ್ನು ನಾನು ಮಾತಾಡ್ಲೇಬೇಕು. ಮಾತಾಡೋಕೆ ಬಹಳ ವಿಚಾರಗಳೂ ಇವೆ. ಆದರೆ ಆ ನೋವಿನಲ್ಲಿ ನಾನೂ ಭಾಗಿ. ಈಗ ಆ ವಿಚಾರ ನನ್ನ ಮನೆ ವಿಚಾರ ಆಗಿಬಿಟ್ಟಿದೆ. 50 ಸಾವಿರ ಜನರಿಗೆ ಕೆಲಸ ಕೊಟ್ಟ ಒಬ್ಬ ಉದ್ಯಮಿ ಯಾಕೆ ಸತ್ತ ಅನ್ನೋದನ್ನು ಸರ್ಕಾರ ಪಕ್ಕಕ್ಕೆ ಸರಿಸಿಬಿಡ್ತು. ನಾನು ಮಾತಾಡಿದ್ರೆ ತಪ್ಪಾಗುತ್ತೆ. ಆದರೆ ಆತ ತಾನು ಸತ್ತಿರುವುದರ ಕುರಿತು ತಾನೇ ಬರೆದು ಹೇಳಿರುವುದರಿಂದ ನಾನು ಮಾತಾಡೋಕೆ ಹೋಗಲ್ಲ.


ಇದನ್ನು ಓದಿ: ಸಿದ್ದರಾಮಯ್ಯ ವಿಶೇಷ ಸಂದರ್ಶನ: ನಾನು ಸಿಎಂ ಆಗಿದ್ದಿದ್ದರೆ ಈ ಜನದ್ರೋಹಿ ಸುಗ್ರೀವಾಜ್ಞೆ ತರಲ್ಲ ಅಂತ ಕೇಂದ್ರದ ಮುಖಕ್ಕೆ ಹೇಳ್ತಿದ್ದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. #Atrocities A Dalit family in Guna MP tried to commit suicide in front of the police administration. Raju and Savitri requested the police not to run JCB on their crops. After police refuse to stop they drink the pesticides. Their children are seen crying,1/n
    @_ambedkarite

    Google investing billions in Reliance is celebrated as #GoogleForIndia

    But a poor Dalit farmer couple trying to save their land, consuming pesticide in front of their children and police officers thrashing them is not even reported

    Dalits not for India?

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪ| ತಾನು ನಿರ್ದೋಷಿ ಎಂದ ಬ್ರಿಜ್ ಭೂಷಣ್ ಸಿಂಗ್: ವಿಚಾರಣಾ ಹಂತ...

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ...