Homeಮುಖಪುಟಸಂಸತ್ ಅಧಿವೇಶನ: ಪ್ರಶ್ನೆಯ ಸಮಯ ರದ್ದುಗೊಳಿಸಿದ ಕೇಂದ್ರದ ವಿರುದ್ಧ ಆಕ್ರೋಶ

ಸಂಸತ್ ಅಧಿವೇಶನ: ಪ್ರಶ್ನೆಯ ಸಮಯ ರದ್ದುಗೊಳಿಸಿದ ಕೇಂದ್ರದ ವಿರುದ್ಧ ಆಕ್ರೋಶ

ಈ ಸರ್ಕಾರವು ಸಂಸತ್ತನ್ನು ನೋಟಿಸ್-ಬೋರ್ಡ್‌ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ. ಜೊತೆಗೆ ಅದರ ಬಹುಮತವನ್ನು ರಬ್ಬರ್-ಸ್ಟಾಂಪ್ ಆಗಿ ಬಳಸಿಕೊಳ್ಳಲು ಬಯಸುತ್ತದೆ - ಶಶಿ ತರೂರ್

- Advertisement -
- Advertisement -

ಕೊರೊನಾ ಬಿಕ್ಕಟ್ಟಿನ ನಡುವೆ ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಪ್ರಶ್ನೆಯ ಸಮಯವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷದ ಸಂಸದರು ಸೇರಿದಂತೆ ಅನೇಕರು ವಿರೋಧಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಓ’ಬ್ರಿಯೆನ್, “ಸಂಸದರು ಅಧಿವೇಶನದಲ್ಲಿ ಕೇಳುವ ಪ್ರಶ್ನೆಗಳನ್ನು 15 ದಿನಗಳ ಮುಂಚಿತವಾಗಿ ಸಲ್ಲಿಸಬೇಕಾಗಿದೆ. ಅಧಿವೇಶನ ಸೆಪ್ಟೆಂಬರ್ 14 ರಿಂದ ಪ್ರಾರಂಭವಾಗುತ್ತದೆ. ಆದರೆ, ಪ್ರಶ್ನೆಯ ಸಮಯ ರದ್ದುಗೊಂಡಿದೆ? ಪ್ರತಿಪಕ್ಷದ ಸಂಸದರು ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು 1950 ರ ನಂತರ ಮೊದಲನೆಯ ಬಾರಿ ಕಳೆದುಕೊಂಡಿದ್ದಾರೆ? ಸಂಸತ್ತಿನ ಒಟ್ಟಾರೆ ಕೆಲಸದ ಸಮಯ ಬದಲಾಗಿಲ್ಲ, ಆದರೆ ಪ್ರಶ್ನೆಯ ಸಮಯವನ್ನು ಏಕೆ ರದ್ದುಗೊಳಿಸಲಾಗಿದೆ? ಪ್ರಜಾಪ್ರಭುತ್ವದ ಕಗ್ಗೋಲೆಗೆ ಸಾಂಕ್ರಾಮಿಕ ರೋಗದ ನೆಪ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರದ ಪ್ರಭಾವ ಹೆಚ್ಚುತ್ತಿದೆ: ಸೋನಿಯಾ ಗಾಂಧಿ

ಕಾಂಗ್ರೆಸ್ ಸಂಸದ ಶಶಿ ತರೂರ್, “ಸರ್ಕಾರವನ್ನು ಪ್ರಶ್ನಿಸುವುದು ಸಂಸದೀಯ ಪ್ರಜಾಪ್ರಭುತ್ವದ ಆಮ್ಲಜನಕ. ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಬಲ ನಾಯಕರು ಸಾಂಕ್ರಾಮಿಕ ರೋಗದ ನೆಪವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನಾನು ನಾಲ್ಕು ತಿಂಗಳ ಹಿಂದೆ ಹೇಳಿದ್ದೆ. ವಿಳಂಬವಾದ ಸಂಸತ್ತಿನ ಅಧಿವೇಶನದ ಅಧಿಸೂಚನೆಯು ‘ಪ್ರಶ್ನೆಯ ಸಮಯ’ ಇರುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದೆ. ನಮ್ಮ ಸುರಕ್ಷತೆಯ ಹೆಸರಿನಲ್ಲಿ ಇದನ್ನು ಸಮರ್ಥಿಸಿಕೊಂಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

“ಈ ಸರ್ಕಾರವು ಸಂಸತ್ತನ್ನು ನೋಟಿಸ್-ಬೋರ್ಡ್‌ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತದೆ. ಜೊತೆಗೆ ಅದರ ಬಹುಮತವನ್ನು ರಬ್ಬರ್-ಸ್ಟಾಂಪ್ ಆಗಿ ಬಳಸಿಕೊಳ್ಳಲು ಬಯಸುತ್ತದೆ” ಎಂದು ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಅವರು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನವು ಪ್ರತ್ಯೇಕ ಸಮಯದಲ್ಲಿ ನಡೆಯಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಂಸದರಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.

ಲೋಕಸಭೆಯ ಅಧಿವೇಶನ ಮೊದಲ ದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದ್ದು, ಅಧಿವೇಶನ ಮುಗಿಯುವ ಅಕ್ಟೋಬರ್ 1 ರವರೆಗೆ ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನಡೆಯಲಿದೆ. ರಾಜ್ಯಸಭೆಯ ಅಧಿವೇಶನ ಮೊದಲ ದಿನ ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ಮತ್ತು ಉಳಿದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ವಾರಾಂತ್ಯಗಳು ಕೆಲಸದ ದಿನಗಳಾಗಿವೆ.

ಯಾವುದೇ ಖಾಸಗಿ ಸದಸ್ಯರ ವ್ಯವಹಾರ ಇರುವುದಿಲ್ಲ. ಸಂಸದರಿಂದ ಕಳುಹಿಸಲಾಗುವ ಬಿಲ್‌ಗಳಿಗೆ ಸಮಯ ನಿಗದಿಪಡಿಸಲಾಗಿದೆ. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಚರ್ಚಿಸಲು ಸದಸ್ಯರಿಗೆ ಶೂನ್ಯ ವೇಳೆ ಇರುತ್ತದೆ. ಆದರೆ ಅದನ್ನು 30 ನಿಮಿಷಗಳಿಗೆ ಕಡಿತಗೊಳಿಸಲಾಗಿದೆ. ಸದನದ ಮೊದಲ ಗಂಟೆಯನ್ನು(ಪ್ರಶ್ನೆ ಸಮಯ) ಸಂಸದರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಅನುವು ಮಾಡಿಕೊಡಬೇಕಾಗಿದೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.

ಇದರ ಬಗ್ಗೆ ಟ್ವಿಟರ್ ನಲ್ಲಿ #Question Hour ಎಂದು ಟ್ರೆಂಡಿಂಗ್ ಆಗುತ್ತಿದ್ದು, ಈ ವರದಿ ಬರೆಯುವ ವೇಳೆಗೆ ಈ ಹ್ಯಾಶ್ ಟ್ಯಾಗ್ ಬಳಸಿ ಸುಮಾರು 13 ಸಾವಿರಕ್ಕೂ ಹೆಚ್ಚು ಟ್ವೀಟ್ ಗಳನ್ನು ಮಾಡಲಾಗಿದೆ. ವಿರೋಧ ಪಕ್ಷಗಳು ಸೇರಿದಂತೆ ಅನೇಕರು ಪ್ರಶ್ನೆಯ ಸಮಯವನ್ನು ರದ್ದುಗೊಳಿಸಿರುವುದಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವ ಪಾಕಿಸ್ತಾನಕ್ಕಿಂತ ದುರ್ಬಲವಾಗಬಾರದು: ಒಂದು ಆಶಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read