Homeಕರ್ನಾಟಕಶಿರಾ: ಹಣದ ಹೊಳೆ! ನೆಲೆ ಕಾಣುವುದೇ ಕಮಲ, ಬಲಗೊಳ್ಳುವುದೇ ತೆನೆ, ಒಲವು ಗಳಿಸುವುದೇ ಹಸ್ತ?

ಶಿರಾ: ಹಣದ ಹೊಳೆ! ನೆಲೆ ಕಾಣುವುದೇ ಕಮಲ, ಬಲಗೊಳ್ಳುವುದೇ ತೆನೆ, ಒಲವು ಗಳಿಸುವುದೇ ಹಸ್ತ?

1000 ರೂ. ಹೊಡೆಯುವವರು ಕೆಸರಲ್ಲಿ ಹೂತರೆ, 500 ರೂ ಕೊಡುವವರು ಕೈಚೆಲ್ಲಿದರೆ, 300 ರೂ ನೀಡುವವರು ಹೊರೆ ಇಳಿಸಿದರೆ ಎಂಬಂತೆ ರಹಸ್ಯ ಭಾಷೆಯಲ್ಲಿ ಮಾತನಾಡುತ್ತಾರೆ ಮತದಾರ.

- Advertisement -
- Advertisement -

ಕಡಲೆಗಿಡ ಕೀಳಲು ಕೂಲಿ ಆಳುಗಳು ಸಿಗುತ್ತಿಲ್ಲ. ಯಾರನ್ನು ಕೇಳಿದರೂ ಬರುವುದಿಲ್ಲ ಎಂದು ಹೇಳುವವರೇ ಹೆಚ್ಚು. ಕೈಯಲ್ಲಿ ಕಾಸು ನಾಟ್ಯವಾಡಬೇಕಾದರೆ ಯಾರಿಗೆ ಬೇಕು ಸಣ್ಣ ಮೊತ್ತದ ಕೂಲಿ. ಬರದ ನಾಡೆಂದು ಹೆಸರಾದ ಶಿರಾ ಕ್ಷೇತ್ರದಲ್ಲಿ ಈಗ ಚುನಾವಣೆಯ ಸಮಯ ಆಗಿರುವುದರಿಂದ ಹಣ ಮಾಡುವವರ ಚಿತ್ತ ಎಲ್ಲ ಪಕ್ಷಗಳತ್ತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಮಾಡದೆಯೇ ಕೈತುಂಬ ಹಣ ಸಿಗುವಾಗ ಕೂಲಿಯ ಹಣ ಬೇಕೇನು? ಬೆಳಗ್ಗೆಯಿಂದ ಸಂಜೆವರೆಗೆ ದುಡಿದರೂ ಸಿಗುವ ಕೂಲಿ ಅಷ್ಟಕ್ಕೇ ಇದೆ. ಓಡಾಡಿಕೊಂಡು ಜೈಕಾರ ಹಾಕುತ್ತ ಕೈತುಂಬ ಗರಿಗರಿ ನೋಟುಗಳನ್ನು ಎಣಿಸಬಹುದೆಂಬ ಅವಕಾಶವನ್ನು ಕಸುಬುದಾರರು ಕಲಿತುಕೊಂಡಿದ್ದಾರೆ.

ಶಿರಾ ಕ್ಷೇತ್ರದ ಮತದಾನಕ್ಕೆ 12 ದಿನ ಬಾಕಿ ಇದೆ. ಮೂರು ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ಮಗ್ನವಾಗಿವೆ. ಗೆಲ್ಲಬೇಕೆಂಬ ಹಟಕ್ಕೆ ಬಿದ್ದಂತಿರುವ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎನ್ನುತ್ತಾರೆ ಮತದಾರ. ಒಮ್ಮೆ ಬಿಸಿಲು, ಮತ್ತೊಮ್ಮೆ ಮೋಡಗಳ ರಾಶಿ. ಇದರಿಂದ ನೆರಳು, ಇನ್ನೊಂದು ಕಡೆ ಸೋನೆ ಮಳೆ, ಮಳೆ ಬೀಳುವಂತಹ ವಾತಾವರಣದಲ್ಲಿ ನಾಯಕರಷ್ಟೇ ಅಲ್ಲದೇ ಬೆಂಬಲಿಗರೂ ಬೆವರು ಹರಿಸುತ್ತಿದ್ದಾರೆ. ಇದಕ್ಕಾಗಿ ಕೈತುಂಬ ಹಣವು, ಮೂರು ಹೊತ್ತು ಊಟವೂ, ಜೊತೆಗಿಷ್ಟು ಎಣ್ಣೆಯ ನೈವೇದ್ಯವೂ ಆಗುತ್ತದೆ. ಇಷ್ಟಾದ ಮೇಲೆ ಯಾರ ಉಸಾಬರಿಯೂ ಬೇಡ. ಹಣ-ಹೆಂಡದ ಅಮಲಿನಲ್ಲಿ ತೇಲುವಂತಹ ಸನ್ನಿವೇಶಗಳು ಸೃಷ್ಟಿಯಾಗಿವೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ

ಹೌದು, ಹಣದ ಹರಿವು ಜೋರಾಗಿದೆ. ಸಾಮರ್ಥ್ಯಕ್ಕೆ ತಕ್ಕ ಹಾಗೆ ಹಣ ಖರ್ಚು ಮಾಡುತ್ತಿದ್ದಾರೆ. ಒಂದು ಪಕ್ಷ ಮತದಾರರಿಗೆ 1000 ರೂ. ನೀಡಿದರೆ, ಮತ್ತೊಂದು ಪಕ್ಷ 500 ರೂ. ಕೊಡುತ್ತಿದೆ. ಮೂರನೇ ಪಕ್ಷ 300 ರೂ. ನೀಡುತ್ತಿದೆ. ದುಡ್ಡು ಹೆಚ್ಚು ಕೊಡುವವರ ಪರವಾಗಿ ಹೆಚ್ಚು ಮಂದಿ ಕಾರ್ಯಕರ್ತರು ಕಂಡು ಬರುತ್ತಾರೆ. ಹಣ ಪಡೆದುಕೊಂಡರೂ ಓಟು ಯಾರಿಗೆ ಎಂಬುದನ್ನು ನಿಶ್ಚಯ ಮಾಡಿಕೊಂಡಿದ್ದಾರೆ. ಆದರೆ ಹಣ ಮಾಡುವುದಷ್ಟೇ ಪ್ರಚಾರಕರ ಉದ್ದೇಶ ಎನ್ನುತ್ತವೆ ಹಣ ಹಂಚುತ್ತಿರುವುದನ್ನು ಪ್ರತ್ಯಕ್ಷವಾಗಿ ನೋಡಿದ ಮೂಲಗಳು.

ದೇವಾಲಯಗಳಿಗೆ ಹಣ ಹಂಚಿದ್ದು ಇತಿಹಾಸದ ಪುಟಗಳನ್ನು ಸೇರಿದೆ. ಈಗ ನೇರ ಮತದಾರರ ಕೈಗೆ ಹಣ ತಲುಪುತ್ತಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಮತ್ತು ಚುನಾವಣೆಯ ಉಸ್ತುವಾರಿ ವಹಿಸಿಕೊಂಡವರು ಬೆಂಬಲಿಗರಿಗೆ ಮತ್ತು ಪ್ರಚಾರ ಕೈಗೊಳ್ಳುವ ಮತದಾರ ತಂಡಗಳಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಕುರಿತು ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ದುಡ್ಡು ಮಾಡಲು ಹೋದವರು ಮೂರು ಪಕ್ಷಗಳಿಂದಲೂ ಹಣ ತೆಗೆದುಕೊಳ್ಳುತ್ತಾರೆ. ಆದರೆ ತಮ್ಮ ಮತ ಯಾರಿಗೆ ಎಂಬುದನ್ನು ಗೌಪ್ಯವಾಗಿಯೇ ಇಟ್ಟಿದ್ದಾರೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಪ್ರತಿಷ್ಠೆಯ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಮುಂದು?

ಕಮಲ ಕೈಯಲ್ಲಿ ಹಿಡಿದವರೂ ಇದ್ದಾರೆ. ಕೈಯಲ್ಲಿ ಕಮಲವೂ ರಾರಾಜಿಸುತ್ತಿದೆ. ತೆನೆಯಲ್ಲಿ ಕಮಲ, ತೆನೆಯನ್ನು ಕೈಯಲ್ಲಿ ಹಿಡಿದವರೂ ಕಂಡುಬರುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವವರು ಬೇರೆ ಪಕ್ಷದಲ್ಲಿಯೂ ಇರುತ್ತಾರೆ. ಹಾಗಾಗಿ ಯಾರು ಯಾವ ಪಕ್ಷಕ್ಕೆ ಮತ ಹಾಕುತ್ತಾರೆನ್ನುವುದು ನಿಗೂಢವಾಗಿಯೇ ಉಳಿದಿದೆ. ಆದರೆ ಮೂರು ಪಕ್ಷಗಳಿಂದಲೂ ಹಣ ಪಡೆಯುವವರು ಮಾತ್ರ ಗೆಲುವಾಗಿಯೇ ಓಡಾಡುತ್ತಾರೆ. ಇದರಿಂದ ಕಡಲೆಗಿಡಗಳನ್ನು ಕೀಳುವ ಕೆಲಸಕ್ಕೆ ಕೂಲಿ ಆಳುಗಳು ಸಿಗುತ್ತಿಲ್ಲ ಎನ್ನುತ್ತಾರೆ ರೈತರು.

1000 ರೂ. ಹೊಡೆಯುವವರು ಕೆಸರಲ್ಲಿ ಹೂತರೆ, 500 ರೂ ಕೊಡುವವರು ಕೈಚೆಲ್ಲಿದರೆ, 300 ರೂ ನೀಡುವವರು ಹೊರೆ ಇಳಿಸಿದರೆ ಎಂಬಂತೆ ರಹಸ್ಯ ಭಾಷೆಯಲ್ಲಿ ಮಾತನಾಡುತ್ತಾರೆ ಮತದಾರ. ನೆಲೆ ಇಲ್ಲದ, ಬಲವಿಲ್ಲದ, ಒಲವಿಲ್ಲದ ಕುರಿತು ಚರ್ಚೆ ನಡೆಯುತ್ತಿದ್ದರೂ ನೆಲೆ-ಬಲ-ಒಲವುಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಮತದಾರರಿಗೆ ಅನಿವಾರ್ಯವಾಗಿದೆ. ನೆಲೆ ಇಲ್ಲದವರು 1000, ಒಲವಿಲ್ಲದವರು 300 ಮತ್ತು ಬಲವಿಲ್ಲದವರು 500 ರೂಗಳು ಮಾತ್ರ ಮತದಾರರ ಜೇಬುಗಳನ್ನು ಸೇರುತ್ತಿವೆ.


ಇದನ್ನೂ ಓದಿ: ಶಿರಾ ಉಪಚುನಾವಣೆ : ಹೊಸ ನಾಣ್ಯ ನಡೆಯೋಲ್ಲ ಅಂತಾರೆ ಜನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಕಡಿಮೆ ಪ್ರಾತನಿಧ್ಯ ನೀಡಿದ ರಾಜಕೀಯ ಪಕ್ಷಗಳು

0
ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ 2019ಕ್ಕೆ ಹೋಲಿಕೆ ಮಾಡಿದರೆ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಕಡಿಮೆ ಪ್ರಾತಿನಿಧ್ಯ ನೀಡಿರುವುದು ಕಂಡು ಬಂದಿದೆ. ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಕೇವಲ ಓರ್ವ ಮುಸ್ಲಿಂ...