HomeಮುಖಪುಟExplainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?

Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?

ಸುಧಾ ನಾರಾಯಣನ್ ಮತ್ತು ಅರಿಂದಮ್ ಬ್ಯಾನರ್ಜಿ ಅವರೊಡನೆ ವಿಕಾಸ್ ಧೂತ್ ನಡೆಸಿದ ಸಂದರ್ಶನವನ್ನು ಚಿಂತಕರಾದ ನಾ ದಿವಾಕರರವರು ಕನ್ನಡಕ್ಕೆ ಅನುವಾದಿಸಿದ್ದಾರೆ.

- Advertisement -
- Advertisement -

ಮೂಲ : ದ ಹಿಂದೂ – 25-9-2020

ಅನುವಾದ : ನಾ ದಿವಾಕರ

ಕೇಂದ್ರ ಸರ್ಕಾರ ಇತ್ತೀಚೆಗೆ ಕೃಷಿ ಸಂಬಂಧಿತ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿ, ವಿರೋಧ ಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ ಧ್ವನಿ ಮತ ಚಲಾಯಿಸುವ ಮೂಲಕ ರಾಜ್ಯಸಭೆಯ ಅಂಗೀಕಾರವನ್ನೂ ಪಡೆದಿದೆ. ಅವಶ್ಯ ವಸ್ತು/ಪದಾರ್ಥಗಳ (ತಿದ್ದುಪಡಿ) ಕಾಯ್ದೆ, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಕರ್ಯ) ಮಸೂದೆ ಮತ್ತು ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಆಶ್ವಾಸನೆ ಮತ್ತು ಕೃಷಿ ಸೇವಾ ಒಪ್ಪಂದ ಮಸೂದೆ, ಈ ಮೂರು ಕಾಯ್ದೆಗಳಿಗೂ ಸಂಸತ್ತಿನ ಅನುಮೋದನೆ ದೊರೆತಿದೆ. ಈ ಮಸೂದೆಗಳನ್ನು ಕುರಿತು ಸುಧಾ ನಾರಾಯಣನ್ ಮತ್ತು ಅರಿಂದಮ್ ಬ್ಯಾನರ್ಜಿ ಅವರೊಡನೆ ವಿಕಾಸ್ ಧೂತ್ ನಡೆಸಿದ ಸಂದರ್ಶನದ ಸಂಪಾದಿತ ರೂಪ. (ಸುಧಾ ನಾರಾಯಣನ್ ಇಂದಿರಾಗಾಂಧಿ ಅಭಿವೃದ್ಧಿ ಸಂಶೋಧನಾ ಸಂಸ್ಥೆಯಲ್ಲಿ ಸಹಯೋಗಿ ಪ್ರೊಫೆಸರ್ ಆಗಿದ್ದಾರೆ, ಅರಿಂದಮ್ ಬ್ಯಾನರ್ಜಿ ಅಂಬೇಡ್ಕರ್ ವಿಶ್ವವಿದ್ಯಾಲಯದ ಉದಾರವಾದಿ ಅಧ್ಯಯನ ಶಾಲೆಯಲ್ಲಿ ಸಹಯೋಗಿ ಪ್ರೊಫೆಸರ್ ಆಗಿದ್ದಾರೆ )

ವಿಕಾಸ್ : ಈ ಮಸೂದೆಗಳನ್ನು ಕುರಿತು ಇರುವ ಆತಂಕಗಳೇನು ? ಈ ಆತಂಕಗಳು ನೈಜವೇ ?

ಸುಧಾ : ಕೆಲವೊಮ್ಮೆ ನಾವು “ ನೀವು ಏನನ್ನು ಬಯಸುತ್ತೀರಿ ಎನ್ನುವುದರ ಬಗ್ಗೆ ಎಚ್ಚರದಿಂದಿರಿ, ನಿಮಗೆ ಅದು ಒದಗಲೂಬಹುದು” ಎಂದು ಹೇಳುತ್ತಿರುತ್ತೇವೆ. ಮಾರುಕಟ್ಟೆ ನಿಯಂತ್ರಣದ ನೀತಿಗಳಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಈ ಮಸೂದೆಯ ಮೂಲಕ ಮಾಡಲಾಗುತ್ತಿದೆ. ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ವ್ಯವಸ್ಥೆಯಲ್ಲಿದ್ದ ಹಲವು ಲೋಪದೋಷಗಳ ಹಿನ್ನೆಲೆಯಲ್ಲಿ ಕಾಯ್ದೆಯ ತಿದ್ದುಪಡಿ ಮಾಡಲು ಆಗ್ರಹ ಹೆಚ್ಚುತ್ತಿದ್ದುದೂ ಹೌದು. ಆದರೆ ಇದೇ ವೇಳೆ, ಈ ಮಾರ್ಪಾಡುಗಳು ಎರಡು ಕಾರಣಗಳಿಗಾಗಿ ಚಿಂತೆಗೀಡುಮಾಡುವಂತಿವೆ. ಮೊದಲನೆಯದಾಗಿ ಈ ಮಸೂದೆಗಳಲ್ಲಿ ಸಾಕಷ್ಟು ಕೊರತೆಗಳಿವೆ. ನಿಯಂತ್ರಣದ ಕೊರತೆ, ನಿಯಂತ್ರಣದಲ್ಲಿ ಮತ್ತು ವರದಿ ಮಾಡುವಲ್ಲಿ ಸೂಕ್ತ ರೀತಿಯ ಗಮನ ನೀಡದಿರುವುದು. ಈ ನಿಯಮಗಳು ಪಾರದರ್ಶಕವಾಗಿಲ್ಲ ಎನ್ನುವ ಆರೋಪವೂ ಇದೆ. ಇದನ್ನು ಅವರು ಗುರುತಿಸುತ್ತಾರೆ. ಎರಡನೆಯದಾಗಿ ಅವರು ಗುರುತಿಸದೆ ಇರುವ ಸಂಗತಿ ಎಂದರೆ, ಕೃಷಿ ಕ್ಷೇತ್ರದಲ್ಲಿ ಹಾಗೂ ಕೃಷಿ ನೀತಿಯಲ್ಲಿ ಸರ್ಕಾರದ ಮಧ್ಯಸ್ತಿಕೆ ಇಲ್ಲದಿರುವ ಮಸೂದೆಯನ್ನು ಒಪ್ಪಲಾಗುವುದಿಲ್ಲ.

ವಿಕಾಸ್ : ನೀವು ಒಂದೆರಡು ಉದಾಹರಣೆಗಳನ್ನು ಉಲ್ಲೇಖಿಸಬಹುದೇ?

ಸುಧಾ : ಎಪಿಎಂಸಿ ಬೈಪಾಸ್ ಮಸೂದೆ ಅತ್ಯಂತ ವಿವಾದಾಸ್ಪದವಾಗಿದೆ. ಎಪಿಎಂಸಿ ವ್ಯವಹಾರಗಳಲ್ಲಿ ಖಾಸಗಿ ಉದ್ಯಮಿಗಳು ಯಾರೂ ಇಲ್ಲವೇ ಇಲ್ಲ ಮತ್ತು ಎಪಿಎಂಸಿ ಏಕಸ್ವಾಮ್ಯ ಹೊಂದಿದೆ ಎಂದು ಈ ಮಸೂದೆ ಭಾವಿಸುತ್ತದೆ. ಈ ಪರಿಕಲ್ಪನೆ ಮೂಲತಃ ದೋಷಪೂರಿತವಾದದ್ದು. ಖಾಸಗಿ ಉದ್ಯಮಿಗಳು ತಮ್ಮ ವ್ಯಾಪಾರ ವ್ಯವಹಾರಗಳನ್ನು ನಡೆಸಲು ದರ ನಿಗದಿಗಾಗಿ ಎಪಿಎಂಸಿಯನ್ನು ಗಮನಿಸುತ್ತಾರೆ. ಈಗ ಎಪಿಎಂಸಿಯಿಂದ ಹೊರಗೆ ಒಂದು ಪರ್ಯಾಯ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ಇದು ಖಾಸಗಿ ವ್ಯಾಪಾರಿಗಳಿಗೆ ಲಾಭದಾಯಕವಾಗಿದ್ದು, ಮಂಡಿ ಶುಲ್ಕ ಅಥವಾ ತೆರಿಗೆ ಪಾವತಿಸುವ ಹಾಗಿರುವುದಿಲ್ಲ. ಇದರಿಂದ ಎರಡು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಮೊದಲನೆಯದಾಗಿ ಎಪಿಎಂಸಿ ಮೂಲತಃ ಉಲ್ಲೇಖ ಬೆಲೆಯನ್ನು ನಿಗದಿಪಡಿಸುತ್ತದೆ. ಖಾಸಗಿ ವ್ಯಾಪಾರಿಗಳು ಬೆಲೆ ನಿಗದಿಪಡಿಸಲು ಇನ್ನು ಮುಂದೆಯೂ ಎಪಿಎಂಸಿಯ ಬೆಲೆಯತ್ತಲೇ ನೋಡುವುದಾದರೆ, ದಕ್ಷತೆಯಿಲ್ಲದ ಎಪಿಎಂಸಿಯನ್ನು ತೆಗೆದುಹಾಕುವ ಚಿಂತನೆಯೇ ಅರ್ಥಹೀನವಾಗುತ್ತದೆ. ಎಪಿಎಂಸಿ ಮಂಡಿಗಳಿಂದ ಹೊರಗೆ ವ್ಯಾಪಕವಾದ ವ್ಯಾಪಾರ ವಹಿವಾಟು ನಡೆಯುತ್ತದೆ. ಏಕೆಂದರೆ ಹೊಸ ವ್ಯಾಪಾರಿಗಳು ಶುಲ್ಕಗಳಿಂದ ತಪ್ಪಿಸಿಕೊಳ್ಳಲು ಎಪಿಎಂಸಿಯಿಂದ ಹೊರಗೆ ತಮ್ಮ ವ್ಯಾಪಾರವನ್ನು ನಡೆಸಲು ಬಯಸುತ್ತಾರೆ. ಇದೇ ಕಾರಣಕ್ಕಾಗಿಯೇ ಎಪಿಎಂಸಿ ವರ್ತಕರೂ ಸಹ ಮಂಡಿಯಿಂದ ಹೊರಗೆ ತಮ್ಮ ವ್ಯಾಪಾರ ನಡೆಸಲು ಇಚ್ಚಿಸುತ್ತಾರೆ. ಹಾಗಾಗಿ,. ಒಂದು ವೇಳೆ ಎಪಿಎಂಸಿ ವ್ಯವಸ್ಥೆಯೇ ಕುಸಿದು ಹೋದರೆ, ಬೆಲೆಗಳನ್ನು ನಿಗದಿಪಡಿಸುವ ಈ ಒಂದು ಬೃಹತ್ ಮಾರುಕಟ್ಟೆಗೆ ಪರ್ಯಾಯ ಏನು ಎನ್ನುವುದನ್ನು ಮಸೂದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿಲ್ಲ. ಆದ್ದರಿಂದ ರಾಷ್ಟ್ರೀಯ ಮಾರುಕಟ್ಟೆಯನ್ನು ಏಕೀಕೃತಗೊಳಿಸುವ ಬದಲು ಸರ್ಕಾರ ಬೆಲೆಗಳನ್ನು ನಿಗದಿ ಪಡಿಸಲು ಅವಕಾಶವಿರುವ ಹಲವು ಚೌಕಾಸಿ ಮಾರುಕಟ್ಟೆಗಳನ್ನು ಸೃಷ್ಟಿಸುತ್ತಿದೆ. ಇದು ರೈತರ ಹಿತಾಸಕ್ತಿಗೆ ಮಾರಕವಾಗಬಹುದು. ಈ ಹೊಸ ವ್ಯಾಪಾರ ವಲಯದಲ್ಲಿ, ಯಾವುದೇ ನಿಯಂತ್ರಣವಾಗಲೀ, ಮಾಹಿತಿಯಾಗಲೀ ಇರುವುದಿಲ್ಲ ಮತ್ತು ವಹಿವಾಟುಗಳು ಅಗೋಚರವಾಗಿಯೇ ಇರುತ್ತವೆ. ಹಾಲಿ ಎಪಿಎಂಸಿ ವ್ಯವಸ್ಥೆಯಲ್ಲಿ ತನ್ನದೇ ಆದ ಲೋಪದೋಷಗಳಿದ್ದರೂ, ಕುಂದುಕೊರತೆಗಳ ನಿವಾರಣೆಗೆ ಅವಕಾಶವಿದ್ದು , ಮಾಹಿತಿಗಳು ಲಭ್ಯವಾಗುತ್ತವೆ. ಪ್ರಸಕ್ತ ಮಸೂದೆಯ ಪರಿಣಾಮ, ರೈತರಿಗೆ ಸೂಕ್ತ ನ್ಯಾಯಯುತ ಬೆಲೆ ದೊರೆಯುವುದು ಖಾಸಗಿ ವರ್ತಕರ ಔದಾರ್ಯವನ್ನು ಅವಲಂಬಿಸಿರುತ್ತದೆ.

ಅರಿಂದಮ್: ಕೃಷಿ ಉತ್ಪನ್ನಗಳಲ್ಲಿ ಖಾಸಗಿ ವ್ಯಾಪಾರ ಇರುವುದು ಭಾರತಕ್ಕೇನೋ ಹೊಸತಲ್ಲ. ಆದರೆ ಈ ಸಂದರ್ಭದಲ್ಲಿ ಹಾಲಿ ಮಸೂದೆಯ ಸಮರ್ಥನೆಯ ಹಿಂದಿರುವ ಉದ್ದೇಶವೆಂದರೆ, ಕೃಷಿ ಕ್ಷೇತ್ರದಲ್ಲಿ ಖಾಸಗಿ ವಲಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು. ಇದಕ್ಕೆ ಹಲವು ಕಾರಣಗಳಿವೆ. ರೈತರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗುವುದರಿಂದ, ತಮ್ಮ ಉತ್ಪನ್ನಗಳಿಗೆ ರೈತರು ಹೆಚ್ಚಿನ ಬೆಲೆ ಪಡೆಯುತ್ತಾರೆ ಎನ್ನುವುದ ಸರ್ಕಾರದ ಸಮರ್ಥನೆಗೆ ಒಂದು ಕಾರಣ. ಈಗ ರೈತರು, ಕನಿಷ್ಟ ಪಕ್ಷ ದೊಡ್ಡ ರೈತರು ಮತ್ತು ಹೆಚ್ಚುವರಿ ಬೆಳೆಯುವ ರೈತರು ಸರ್ಕಾರದ ಸಮರ್ಥನೆಯಿಂದ ತೃಪ್ತರಾಗಿಲ್ಲ. ಕಾರಣ ಏನೆಂದರೆ, ರೈತರ ಆದಾಯ ಮತ್ತು ಮಾರುಕಟ್ಟೆ ದರಗಳು ಕೇವಲ ಮಾರುಕಟ್ಟೆಯ ರಚನೆಯನ್ನೇ ಅವಲಂಬಿಸಿರುವುದಿಲ್ಲ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತಾಪಿ ಎದುರಿಸುವ ಸಮಸ್ಯೆಗಳು ಮತ್ತು ಈ ನಿಟ್ಟಿನಲ್ಲಿ ರೈತ ಸಂಘಟನೆಗಳು ಮುಂದಿಟ್ಟಿರುವ ಬೇಡಿಕೆಗಳು ಪ್ರಸ್ತುತ ಮಸೂದೆಯಲ್ಲಿ ನಿರ್ಲಕ್ಷಿಸಲ್ಪಟ್ಟಿವೆ ಎಂದು ರೈತ ಸಮುದಾಯ ಆರೋಪಿಸುತ್ತಿದೆ. ಬೇಡಿಕೆಯಲ್ಲಿ ಕುಸಿತ ಇರುವುದರಿಂದ ಮಾರುಕಟ್ಟೆ ದರಗಳಲ್ಲೂ ಕುಸಿತ ಕಾಣುತ್ತಿದೆ. ರೈತರ ಆದಾಯ ಬಹುಪಾಲು ಜಡವಾಗಿರುವ ಅವಧಿಯನ್ನು ನಾವು ಎದುರಿಸುತ್ತಿದ್ದೇವೆ. ರೈತರ ಮತ್ತೊಂದು ಆತಂಕ ಇರುವುದು ಕೃಷಿ ಉಪಕರಣಗಳ ಮತ್ತು ಇತರ ವಸ್ತುಗಳ ಬೆಲೆಗಳು ನಿಯಂತ್ರಣವಿಲ್ಲದೆ ಹೆಚ್ಚಾಗುತ್ತಿರುವುದು. ಒಂದೆಡೆ ವ್ಯವಸಾಯ ವೆಚ್ಚದಲ್ಲಿ ತೀವ್ರ ಹೆಚ್ಚಳ ಮತ್ತೊಂದೆಡೆ ಕುಸಿಯುತ್ತಿರುವ ಬೆಲೆಗಳ ನಡುವೆ ರೈತರು ಪರದಾಡುವಂತಾಗಿದೆ. ರೈತರ ಈ ಆತಂಕಗಳನ್ನು ನಿವಾರಿಸಲು ಸರ್ಕಾರ ಆಹಾರ ಧಾನ್ಯಗಳನ್ನು ಖರೀದಿಸುವ ಮೂಲಕ ಮತ್ತು ಸಹಾಯಧನ ನೀಡುವ ಮೂಲಕ ಹಸ್ತಕ್ಷೇಪ ಮಾಡಬಹುದು. ಕನಿಷ್ಟ ಬೆಂಬಲ ಬೆಲೆ ಮತ್ತು ಸರ್ಕಾರದ ಖರೀದಿಯ ವ್ಯವಸ್ಥೆ ಜಾರಿಯಲ್ಲಿದೆ, ಆದರೆ ಈ ಮಸೂದೆಯನ್ನು ಮಂಡಿಸುವುದಕ್ಕೂ ಮುಂಚಿತವಾಗಿಯೇ ಸರ್ಕಾರಕ್ಕೆ ಸಲ್ಲಿಸಲಾಗಿರುವ ಕೆಲವು ಕೃಷಿ ನೀತಿಯ ಶಿಫಾರಸುಗಳ ಪ್ರಕಾರ ಭಾರತೀಯ ಆಹಾರ ನಿಗಮ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕೈಬಿಟ್ಟು, ನೇರ ನಗದು ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ. ಕೃಷಿ ಕ್ಷೇತ್ರದಲ್ಲಿ ದೊಡ್ಡ ವರ್ತಕರಿಗೆ, ಉದ್ಯಮಿಗಳಿಗೆ ಅವಕಾಶ ಕಲ್ಪಿಸುವ ಪರಿಣಾಮ ಏನಾಗಬಹುದೆಂದರೆ, ಕೆಲವು ರೈತರಿಗೆ ಉತ್ತಮ ಆಯ್ಕೆಗಳು ಲಭ್ಯವಾಗುತ್ತದೆ ಮತ್ತು ದೊಡ್ಡ ರೈತರು ತಮ್ಮ ಫಸಲನ್ನು ಖಾಸಗಿ ವರ್ತಕರಿಗೇ ಮಾರಾಟ ಮಾಡಲಾರಂಭಿಸುತ್ತಾರೆ. ಕಾಲ ಕಳೆದಂತೆ ಎಪಿಎಂಸಿ ಮತ್ತು ಸರ್ಕಾರ ಕೃಷಿ ಉತ್ಪನ್ನಗಳನ್ನು ಖರೀದಿಸುವ ವ್ಯವಸ್ಥೆ ಕ್ರಮೇಣ ಇಲ್ಲವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದು ಎಲ್ಲರಿಗೂ ಆತಂಕ ಮೂಡಿಸುವಂತಹ ವಿಚಾರ.

ಇದನ್ನೂ ಓದಿ: ರೈತರು ಮೋದಿ ಸರ್ಕಾರದ ಅಹಂಕಾರವನ್ನು ಮಟ್ಟ ಹಾಕುತ್ತಾರೆ: ಪ್ರತಿಭಟನಾ ನಿರತ ರೈತರು

ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ

ವಿಕಾಸ್ : ಕೃಷಿ ವ್ಯಾಪಾರದಲ್ಲಿ ಕಾರ್ಪೋರೇಟ್ ಉದ್ದಿಮೆಗಳು ಮತ್ತು ದೊಡ್ಡ ಪ್ರಮಾಣದ ಚಿಲ್ಲರೆ ವರ್ತಕರು ಏಕಸ್ವಾಮ್ಯ ಸಾಧಿಸುತ್ತಾರೆ , ಪರಿಣಾಮ ಇದು ರೈತರಿಗೆ ಮಾರಕವಾಗುತ್ತದೆ ಎನ್ನುವ ಆತಂಕವೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ನಾವು ಕಲಿಯಬಹುದಾದಂತಹ ಅಂಶಗಳೇನಾದರೂ ದೊರೆಯಬಹುದೇ?

ಸುಧಾ : ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಹಲವು ಕಾರ್ಟೆಲ್ (ನಿಯಂತ್ರಣ ಕೂಟಗಳನ್ನು) ನೋಡಿದ್ದೇವೆ. ಫ್ರಾನ್ಸ್ ನ ಡೈರಿ ಉತ್ಪಾದಕರು ಮತ್ತು ಅಮೆರಿಕದ ರೈತರ ಸಹಕಾರ ಸಂಘಗಳು ಬೃಹತ್ ವರ್ತಕ ಕೂಟಗಳಾಗಿ ಪರಿಣಮಿಸಿವೆ. ಖರೀದಿ ಮಾಡುವ ಬೃಹತ್ ಕಾರ್ಟೆಲ್ ಗಳು ಬೆಲೆ ನಿಗದಿಪಡಿಸುತ್ತವೆ. ಈ ಕಾರಣದಿಂದಲೇ ಯೂರೂಪ್ ಒಕ್ಕೂಟ ಮತ್ತು ಅಮೆರಿಕದ ದೇಶಗಳು ಕ್ರೋಢೀಕರಣದ ಪ್ರಾಬಲ್ಯವನ್ನು ನಿಯಂತ್ರಿಸಲು ಸದಾ ತಮ್ಮದೇ ಮಾರುಕಟ್ಟೆಗಳ ಸರಬರಾಜು ವ್ಯವಸ್ಥೆಯನ್ನು ಗಮನಿಸುತ್ತಿರುತ್ತವೆ. ಭಾರತದಲ್ಲಿ ಇದನ್ನು ಮುಂಚಿತವಾಗಿ ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಇಲ್ಲಿ ಬೃಹತ್ ವರ್ತಕರೇ ವೆಚ್ಚ ಕಡಿಮೆ ಮಾಡಲು ಕಾತರದಿಂದಿರುತ್ತಾರೆ. ಇಲ್ಲಿನ ಸಾಂಪ್ರದಾಯಿಕ ಮಾರುಕಟ್ಟೆಯ ವಾಹಿನಿಗಳು ಹೆಚ್ಚಿನ ಸ್ಥಿತಿಸ್ಥಾಪಕತ್ವ ಹೊಂದಿವೆ. ರೈತನೊಬ್ಬ ವರ್ತಕನ ಬಳಿ ಹೋಗುವುದಕ್ಕೆ ಹಲವು ಕಾರಣಗಳಿರುತ್ತವೆ. ಕೇವಲ ತನ್ನ ಫಸಲು ಮಾರುವುದೊಂದೇ ಕಾರಣವಾಗಿರುವುದಿಲ್ಲ. ವರ್ತಕರು ಸಾಲ ಒದಗಿಸುತ್ತಾರೆ. ರೈತ ಮತ್ತು ವರ್ತಕರ ನಡುವೆ ಗಾಢವಾದ ವಿಶ್ವಾಸಪೂರ್ಣ ಸಂಬಂಧ ಏರ್ಪಟ್ಟಿರುತ್ತದೆ. ಎಲ್ಲ ಗುಣಮಟ್ಟದ ಫಸಲನ್ನೂ ವರ್ತಕರು ಖರೀದಿಸುತ್ತಾರೆ. ಆದರೆ ಬೃಹತ್ ಉದ್ಯಮಿಗಳೊಡನೆ ವ್ಯವಹರಿಸುವಾಗ ರೈತರು ಸಾಕಷ್ಟು ಅಪಾಯಗಳನ್ನು ಎದುರಿಸುತ್ತಾರೆ. ಈ ರೀತಿ ಬೃಹತ್ ವರ್ತಕರು ಬರುತ್ತಾರೆ, ತಮ್ಮ ಮಳಿಗೆಗಳನ್ನು ತೆರೆಯುತ್ತಾರೆ, ಇತರ ಸಣ್ಣ ವರ್ತಕರನ್ನು ಹೊರಹಾಕುತ್ತಾರೆ ಎಂದು ನಿಶ್ಚಿತವಾಗಿ ಹೇಳಲಾಗುವುದಿಲ್ಲ. ಆದರೆ ಒಂದು ವೇಳೆ ಬೃಹತ್ ಉದ್ಯಮಿಗಳು ನೆಲೆ ಕಂಡುಕೊಂಡರೆ ಅವರು ಎರಡು ವಿಧಾನಗಳನ್ನು ಅನುಸರಿಸುವುದನ್ನು ನಾನು ಕಂಡಿದ್ದೇನೆ. ಮೊದಲನೆಯದು , ಪೈಪೋಟಿಯನ್ನು ಕೊನೆಗೊಳಿಸುವುದು ಮತ್ತು ಎರಡನೆಯದು ಸಣ್ಣ ವರ್ತಕರನ್ನೂ ತಾವೇ ವಶಪಡಿಸಿಕೊಳ್ಳುವುದು. ಬೃಹತ್ ಉದ್ಯಮಿಗಳ ಬಳಿ ಕಾರ್ಯಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಇರುವುದರಿಂದ ಹೆಚ್ಚಿನ ಸಂಖ್ಯೆಯ ರೈತರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಆದರೆ ಅಂತಿಮವಾಗಿ ಈ ಬೃಹತ್ ಉದ್ಯಮಿಗಳು ರೈತರ ಸಹಕಾರ ಸಂಘಗಳನ್ನು ಹಾಗೂ ಈ ಸಹಕಾರ ಸಂಘಗಳಿಗಾಗಿ ಉತ್ಪನ್ನವನ್ನು ಕ್ರೋಢೀಕರಿಸುವ ಎಲ್ಲರನ್ನೂ ವಶಪಡಿಸಿಕೊಳ್ಳುವ ಮೂಲಕ ಸುಭದ್ರ ನೆಲೆ ಕಂಡುಕೊಳ್ಳುತ್ತವೆ. ಹಾಗಾಗಿ, ಈ ಮಸೂದೆಯಿಂದ ರೈತರೊಡನೆ ನೇರ ವಹಿವಾಟು ನಡೆಸಬಹುದು ಎಂದು ನಾವೆಷ್ಟೇ ಹೇಳಿದರೂ ನಾವು ವಾಸ್ತವವಾಗಿ ಕಾಣುತ್ತಿರುವುದು ಮಧ್ಯವರ್ತಿಗಳ ನಿರ್ಮೂಲನೆಯಲ್ಲ ಬದಲಾಗಿ ಮಧ್ಯವರ್ತಿಗಳ ಮರು ಆಗಮನ. ಹೆಚ್ಚಿನ ಸಂಖ್ಯೆಯ ರೈತರೊಡನೆ ವ್ಯವಹಾರ ನಡೆಸುವುದು ದುಬಾರಿಯಾಗುತ್ತದೆ ಎಂದು ಗ್ರಹಿಸುವ ಕಂಪನಿಗಳು ತಮಗಾಗಿ ಆಹಾರ ಪದಾರ್ಥಗಳ ದಾಸ್ತಾನನ್ನು ಕ್ರೋಢೀಕರಿಸುವ ಮಧ್ಯವರ್ತಿಗಳಿಗಾಗಿ ಹುಡುಕಾಡುತ್ತಲೇ ಇರುತ್ತವೆ.

ಅರಿಂದಮ್ : ನೀವು ಜಾಗತಿಕ ಅನುಭವವನ್ನು ಗಮನಿಸಿದರೆ, ಕಾರ್ಪೋರೇಟ್ ಆಹಾರ ಮಾರುಕಟ್ಟೆ ಎಂದರೆ ಏಕಸ್ವಾಮ್ಯತೆ ಅಥವಾ ದ್ವಿ ಸಾಮ್ಯತೆಯೇ ಎದ್ದು ಕಾಣುತ್ತದೆ. ಹಾಗಾಗಿ ಭಾರತದಲ್ಲೂ ಇದನ್ನೇ ಕಾಣುತ್ತೇವೆ ಎಂದು ನಿರೀಕ್ಷಿಸಬಹುದು. ಆದರೆ ನನ್ನ ಆತಂಕವೇ ಬೇರೆ. ಭಾರತದಲ್ಲಿ ಹಲವಾರು ವರ್ಷಗಳಿಂದಲೇ ಕೃಷಿ ಉತ್ಪನ್ನಗಳು ಖಾಸಗಿ ವ್ಯಾಪಾರದ ಒಂದು ಭಾಗವಾಗಿವೆ. ಅಂದಮೇಲೆ ಬೃಹತ್ ಬಂಡವಾಳದ ದೃಷ್ಟಿಯಿಂದ ಹೊಸ ಉಪಯೋಗಗಳೇನು ಎನ್ನುವುದು ನನ್ನ ಪ್ರಶ್ನೆ. ಪೆಪ್ಸಿ ಕಂಪನಿ ಆಲೂಗಡ್ಡೆಯ ಮೌಲ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗುತ್ತಿಗೆ ಕೃಷಿಯ ಅನೇಕ ಉದಾಹರಣೆಗಳು ನಮ್ಮ ನಡುವೆ ಇದೆ. ಈಗ ಹೆಚ್ಚು ಪ್ರಾಶಸ್ತ್ಯ ಪಡೆಯಲಿರುವುದು ಧಾನ್ಯಗಳ ವ್ಯಾಪಾರ ವಲಯ. ಈ ವಲಯದಲ್ಲೇ ಸರ್ಕಾರವೂ ಉತ್ಪನ್ನವನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ತೊಡಗಿರುತ್ತದೆ. ಜಾಗತಿಕ ಕಾರ್ಪೋರೇಟ್ ಉದ್ದಿಮೆಗಳು ಬಹುಶಃ ಈ ಧಾನ್ಯಗಳ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿವೆ ಎಂದು ಭಾವಿಸುತ್ತೇನೆ. ಭಾರತದಲ್ಲಿ ಆಹಾರ ಧಾನ್ಯಗಳ ಒಟ್ಟು ದಾಸ್ತಾನು 90 ದಶಲಕ್ಷ ಟನ್ ಗಿಂತಲೂ ಹೆಚ್ಚಾಗಿದೆ. ಹಾಗಾಗಿ ಇದರ ಸುತ್ತ ವ್ಯಾಪಕವಾದ ಮಾರುಕಟ್ಟೆಯೂ ಸದಾ ಮುಕ್ತವಾಗಿರುತ್ತದೆ. ಈ ಮುಕ್ತ ವ್ಯಾಪಾರಕ್ಕೆ ನೆರವಾಗಲೆಂದೇ ಸರ್ಕಾರದ ನಿಯಂತ್ರಣವನ್ನು ಸಡಿಲಗೊಳಿಸಿ ಖಾಸಗಿ ವರ್ತಕರಿಗೆ ವರ್ಗಾಯಿಸಬೇಕಾಗುತ್ತದೆ. ಕೋವಿದ್ 19 ಸಂದರ್ಭದಲ್ಲಿ ಕೈಗೊಂಡ ಯೋಜನೆಗಳ ಹೊರತಾಗಿಯೂ ದಾಸ್ತಾನು ಪ್ರಮಾಣ ಕಡಿಮೆಯಾಗಿಲ್ಲ. ಕೋವಿದ್ 19 ಪರಿಣಾಮ ವಿಶ್ವದಾದ್ಯಂತ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಉದ್ಯೋಗ ನಷ್ಟವೂ ತೀವ್ರವಾಗಿದೆ. ಇದರ ಪರಿಣಾಮ ಬಂಡವಾಳ ಮತ್ತು ಲಾಭಗಳಿಕೆಯ ಮೇಲೆಯೂ ಋಣಾತ್ಮಕ ಪ್ರಭಾವವನ್ನು ಕಾಣಬಹುದಾಗಿದೆ. ಕೃಷಿ ಉತ್ಪನ್ನಗಳು ಬಳಕೆಯ ಬುಟ್ಟಿಯಲ್ಲಿ ಅವಶ್ಯ ವಸ್ತುಗಳಾಗಿರುವುದರಿಂದ ಹೆಚ್ಚು ಬಾಧಿತವಾಗಿಲ್ಲ. ಕೈಗಾರಿಕಾ ಉತ್ಪನ್ನಗಳ ಮತ್ತು ಸೇವೆಗಳ ಬೇಡಿಕೆಯಲ್ಲಿ ಕೋವಿದ್ ಪೂರ್ವ ಹಂತದ ಮಟ್ಟಿಗೆ ಸುಧಾರಣೆಯಾಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಆದ್ದರಿಂದಲೇ ಬೃಹತ್ ಬಂಡವಾಳ ಕೃಷಿ ಉತ್ಪನ್ನ ವ್ಯಾಪಾರದಲ್ಲಿ ದೊಡ್ಡಮಟ್ಟದಲ್ಲಿ ಪ್ರವೇಶಿಸಲು ಕಾತರದಿಂದಿದೆ. ಇದರಿಂದ ಬೃಹತ್ ಬಂಡವಾಳ ತನಗಾಗಿರುವ ನಷ್ಟವನ್ನೂ ಸರಿದೂಗಿಸಲು ಸಾಧ್ಯವಾಗುತ್ತದೆ.

ಪಂಜಾಬ್ ರೈತರ ಹೋರಾಟ PC:Hindustan Times

ವಿಕಾಸ್ : ಈ ಮಸೂದೆ ರೈತರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ, ಹಾಗೆಯೇ ರೈತರು ನಿರೀಕ್ಷಿಸಬಹುದಾದ ವಾಣಿಜ್ಯ ನೀತಿಗಳನ್ನೂ ಅಪೇಕ್ಷಿಸಬಹುದಲ್ಲವೇ ? ಈಗ ಈರುಳ್ಳಿಯ ವ್ಯಾಪಾರದಲ್ಲಾಗುತ್ತಿರುವಂತೆ ಬೆಲೆ ಹೆಚ್ಚಳವಾದಾಗಲೆಲ್ಲಾ ರಫ್ತು ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ.

ಸುಧಾ : ನೀವು ಬಹಳ ಮುಖ್ಯವಾದ ಅಂಶವನ್ನು ಪ್ರಸ್ತಾಪಿಸಿದ್ದೀರಿ. ಈ ಮಸೂದೆಗಳನ್ನು ಜಾರಿಗೊಳಿಸಿದ ನಂತರ ಏನಾಯಿತು ಎಂಬುದನ್ನು ಗಮನಿಸಿ. ನಾವು ಈರುಳ್ಳಿಯ ರಫ್ತು ನಿಷೇಧಿಸಿದೆವು. ಅಂದರೆ ಈ ಮಸೂದೆಗಳು ರೈತ ಕೇಂದ್ರಿತ ಎಂಬ ಸೂಚನೆಯೂ ರೈತರಿಗೆ ಸಿಗಲಿಲ್ಲ. ಇನ್ನು ಮುಂದೆ ಸರ್ಕಾರ ಆಹಾರ ಧಾನ್ಯಗಳನ್ನು ಖರೀದಿಸುವ ಪ್ರಕ್ರಿಯೆ ಜಾರಿಯಲ್ಲಿರುವುದೋ ಇಲ್ಲವೋ ಎಂದು ಮಸೂದೆಯಲ್ಲಿ ಎಲ್ಲಿಯೂ ಪ್ರಸ್ತಾಪಿಸಲಾಗಿಲ್ಲ. ಸಾಮಾನ್ಯವಾಗಿ ನಿಮಗೆ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ಇಚ್ಚೆ ಇದ್ದರೆ , ರೈತರ ಹಿತಾಸಕ್ತಿಯನ್ನು ಕಡೆಗಣಿಸದೆಯೇ, ಒಟ್ಟಾಗಿ ಕಾರ್ಯನಿರ್ವಹಿಸುವಂತಹ ಹಲವಾರು ನೀತಿಗಳನ್ನು ಜಾರಿಗೊಳಿಸಬಹುದಿತ್ತು. ನಾವು ಅವಶ್ಯ ವಸ್ತುಗಳ ಕಾಯ್ದೆಯ ಬಳಕೆ ಮಾಡುವುದಿಲ್ಲ ಎಂದು ಹೇಳುತ್ತಲೇ ರೈತರಿಗೆ ಮಾರಕವಾಗುವಂತಹ ನೀತಿಯ ಮೂಲಕ ಗ್ರಾಹಕ ಬೆಲೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುವುದು ಸರಿಯಾದ ನೀತಿ ಎನಿಸುವುದಿಲ್ಲ.

ಇದನ್ನೂ ಓದಿ: ರೈತ ವಿರೋಧಿ ಕಾಯ್ದೆ ವಿರುದ್ದ ರಾಜ್ಯದಾದ್ಯಂತ ಪ್ರತಿಭಟನೆ; ಹೋರಾಟದ ಝಲಕ್

ವಿಕಾಸ್ : ಕನಿಷ್ಟ ಬೆಂಬಲ ಬೆಲೆಯ ನೀತಿಯನ್ನು ಕಾನೂನು ಚೌಕಟ್ಟಿನಲ್ಲಿ ಅಳವಡಿಸಿದರೆ ಕನಿಷ್ಟ ಬೆಲೆಯನ್ನಾದರೂ ಅಪೇಕ್ಷಿಸಬಹುದು ಎಂದು ರೈತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಹೇಳುತ್ತಿವೆ. ಈ ಸಂದರ್ಭದಲ್ಲಿ ಇದು ಪರಿಹಾರ ಒದಗಿಸಬಹುದೇ ?

ಅರಿಂದಮ್ : ಭಾರತೀಯ ಆಹಾರ ನಿಗಮವನ್ನು 1965ರಲ್ಲಿ ಸ್ಥಾಪಿಸಲು ಮೂಲ ಕಾರಣ ದೇಶದಲ್ಲಿ ಆಹಾರದ ಕೊರತೆ ತೀವ್ರವಾಗಿದ್ದುದು. ಅಂದಿನಿಂದ ನಾವು ಆಹಾರ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದ್ದೇವೆ. 1990ರ ದಶಕದ ಮೊದಲಾರ್ಧದಲ್ಲಿ ನಮ್ಮಲ್ಲಿ ಆಹಾರ ಕೊರತೆ ಇರಲಿಲ್ಲ. ಹಾಗೆಂದ ಮಾತ್ರಕ್ಕೆ ಹಸಿವಿನ ಸಮಸ್ಯೆ ನಿವಾರಿಸಲಾಗಿತ್ತು ಎನ್ನಲಾಗುವುದಿಲ್ಲ. ಆಹಾರ ಧಾನ್ಯಗಳ ವಿತರಣೆಯನ್ನು ನಿರ್ವಹಿಸುವಲ್ಲಿ ಸಾಕಷ್ಟು ಲೋಪದೋಷಗಳಿದ್ದು, ವಿಫಲವಾಗಿರುವುದರಿಂದ ಹಸಿವು ಭಾರತವನ್ನು ಇಂದಿಗೂ ಕಾಡುತ್ತಲೇ ಇದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಜಾರಿಯಲ್ಲಿದ್ದೂ ಸಹ ಇದು ಕಂಡುಬರುತ್ತಿದೆ. ಇಲ್ಲಿ ಆಹಾರ ನಿಗಮವನ್ನು ಸ್ಥಾಪಿಸಿದ ಸಂದರ್ಭದಲ್ಲಿದ್ದ ಸರ್ಕಾರಕ್ಕಿಂತಲೂ ವಿಭಿನ್ನ ರಾಜಕೀಯ-ಆರ್ಥಿಕ ನಿಲುಮೆಯ ಸರ್ಕಾರ ಅಧಿಕಾರದಲ್ಲಿರುವುದನ್ನು ಗಮನಿಸಬಹುದಾಗಿದೆ. ಉದಾರೀಕರಣದ ನಂತರದಲ್ಲಿ ಖಾಸಗಿ ಉದ್ಯಮಿಗಳು ಮತ್ತು ಬಂಡವಾಳದ ಜೋಡಿ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದನ್ನು ಸ್ವಾಗತಿಸೋಣ. ಆದರೆ ಈ ಉದ್ದಿಮೆಗಳನ್ನು ನಿಯಂತ್ರಿಸುವ ನಿಯಮಗಳನ್ನೂ ಸರ್ಕಾರ ರೂಪಿಸಬೇಕಾಗುತ್ತದೆ. ಹಾಗಾಗಿ, ಇಂದು ಸರ್ಕಾರದ ಸಾರ್ವಜನಿಕ ಆಹಾರ ಖರೀದಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಆತಂಕವೇನಾದರೂ ಕಂಡುಬಂದರೆ, ನೂತನ ಮಸೂದೆಯಲ್ಲಿ ಈ ವ್ಯವಸ್ಥೆಯ ಬಗ್ಗೆ ಪ್ರಸ್ತಾಪ ಇರಬೇಕು ಎಂಬ ಆಗ್ರಹ ನ್ಯಾಯಯುತವಾದದ್ದು. ಇಲ್ಲವಾದಲ್ಲಿ ರೈತರಲ್ಲಿ ಮಡುಗಟ್ಟಿರುವ ಭೀತಿಯನ್ನು ಹೋಗಲಾಡಿಸಲು ಮತ್ತೊಂದು ಕಾನೂನು ಜಾರಿಮಾಡಬೇಕಾಗುತ್ತದೆ.

ಸುಧಾ : ಈ ಮಸೂದೆಗಳು ಸಾಕಷ್ಟು ಸಮಸ್ಯಾತ್ಮಕವಾಗಿರುವುದರಿಂದ ಈಗಿನ ಸ್ವರೂಪದಲ್ಲಿ ಕನಿಷ್ಟ ಬೆಂಬಲ ಬೆಲೆಯ ನಿಯಮವನ್ನು ಸೇರಿಸುವುದನ್ನು ನಾನು ಒಪ್ಪುವುದಿಲ್ಲ. ಈ ಮಸೂದೆಗಳು ದೋಷಪೂರಿತವಾಗಿದ್ದರೆ ಅವುಗಳನ್ನು ಸರಿಪಡಿಸುವುದತ್ತ ಗಮನಹರಿಸಬೇಕು. ಕನಿಷ್ಟ ಬೆಂಬಲ ಬೆಲೆಯ ಪ್ರಶ್ನೆ ಇನ್ನೂ ಹೆಚ್ಚಿನ ವ್ಯಾಪ್ತಿಯುಳ್ಳದ್ದು. ಅಷ್ಟೇ ಸಂಕೀರ್ಣವಾದದ್ದು . ಹಾಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಗಂಭೀರವಾದ ಸಲಹಾ ಪ್ರಕ್ರಿಯೆಗಳನ್ನು ಒಳಗೊಳ್ಳಬೇಕಾಗುತ್ತದೆ. ಈ ವಿಚಾರಕ್ಕೇ ಸೀಮಿತವಾದ ಕಾಯ್ದೆಯನ್ನೂ ಜಾರಿಗೊಳಿಸುವುದು ಉಚಿತ. ಈಗ ಎರಡೂ ಮಸೂದೆಗಳು ಪರಸ್ಪರ ಹೊಂದಾಣಿಕೆಯಾಗಲಾರವು. ಏಕೆಂದರೆ, ಖಾಸಗಿ ವ್ಯಾಪಾರಿಗಳಿಗೆ ಪ್ರವೇಶ ನೀಡಿ ಬೆಲೆಯನ್ನೂ ನೀವೇ ನಿಗದಿಪಡಿಸಲಾಗುವುದಿಲ್ಲ. ಈ ರೀತಿ ಮಾಡುವುದರಿಂದ ಕನಿಷ್ಟ ಬೆಂಬಲ ಬೆಲೆ ನೀತಿಯೂ ವಿಫಲವಾಗುತ್ತದೆ, ಖಾಸಗಿ ವ್ಯಾಪಾರಿಗಳಿಗೂ ನಷ್ಟವಾಗುತ್ತದೆ. ಕನಿಷ್ಟ ಬೆಂಬಲ ಬೆಲೆ ನಿರ್ವಹಿಸಲು ಪ್ರತ್ಯೇಕ ಕಾಯ್ದೆ ಏಕೆ ಬೇಕೆಂದರೆ, ಪಂಜಾಬ್ ಪ್ರಾಂತ್ಯದ ರೈತರು ಬಿಹಾರದ ರೈತರು ಪಡೆಯುವ ಬೆಲೆಯನ್ನು ಒಪ್ಪುವುದಿಲ್ಲ. ಹೀಗಿರುವಾಗ ಕನಿಷ್ಟ ಬೆಂಬಲ ಬೆಲೆಯನ್ನು ಹೇಗೆ ಜಾರಿಗೊಳಿಸುತ್ತೀರಿ ? ಈ ನಿಟ್ಟಿನಲ್ಲಿ ಹಲವಾರು ಅಮೂಲ್ಯ ಸಲಹೆಗಳು ಕೇಳಿಬಂದಿವೆ. ಒಂದು ಪ್ರಮುಖ ಸಲಹೆಯೆಂದರೆ, ಹಳೆಯ ಕಾಯ್ದೆಯ ಅನ್ವಯವೇ ಎಪಿಎಂಸಿಗಳು ಕಾರ್ಯ ನಿರ್ವಹಿಸುವುದಾದರೆ, ಎಲ್ಲ ಹರಾಜು ಪ್ರಕ್ರಿಯೆಯಲ್ಲೂ ಕನಿಷ್ಟ ಬೆಂಬಲ ಬೆಲೆಯೇ ಮೂಲ ದರವಾಗಿ ಪರಿಗಣಿಸಲ್ಪಡುತ್ತದೆ. ಇದರಿಂದ ಕನಿಷ್ಟ ಬೆಂಬಲ ಬೆಲೆ ಮೂಲ ದರದಿಂದಲೇ ಆರಂಭವಾಗುತ್ತದೆ. ಈಗ ಇಂತಹ ಉತ್ತಮ ಅವಕಾಶವನ್ನು ನಾವು ಕಳೆದುಕೊಂಡಿದ್ದೇವೆ. ಏಕೆಂದರೆ ಎಪಿಎಂಸಿಯಲ್ಲಿ ಕನಿಷ್ಟ ಬೆಂಬಲ ಬೆಲೆ ಜಾರಿಯಲ್ಲಿರುತ್ತದೆ ಆದರೆ ಇದರಿಂದ ಹೊರಗಿನ ವಹಿವಾಟಿನಲ್ಲಿ ಯಾವುದೇ ಕನಿಷ್ಟ ಬೆಲೆ ಇರುವುದಿಲ್ಲ ಎಂದು ಹೇಳಿದರೆ ಇದು ಅರ್ಥಹೀನವಾಗುತ್ತದೆ.

ಉತ್ತರ ಪ್ರದೇಶದ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ. Photo Courtesy: NDTV

ಒಂದು ವೇಳೆ ಸರ್ಕಾರ ತಾನು ನಿಗದಿಪಡಿಸಿದ ಬೆಂಬಲ ಬೆಲೆಯ ಪರಿಣಾಮ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಹೆಚ್ಚಿನ ಆಹಾರ ಧಾನ್ಯವನ್ನು ಖರೀದಿಸುವಂತಾದರೆ (ಚೀನಾ ಒಂದು ದಶಕದ ಹಿಂದೆ ಹೀಗೆಯೇ ಮಾಡಿ, ಅದನ್ನು ಆಂತರಿಕವಾಗಿಯೂ ವಿತರಿಸಲಾಗದೆ, ರಫ್ತು ಮಾಡಲಾಗದೆ ನಷ್ಟ ಅನುಭವಿಸಿತ್ತು), ದೇಶದಲ್ಲಿ ಸುಸಜ್ಜಿತವಾದ , ಸುವ್ಯವಸ್ಥಿತವಾದ ವಿತರಣಾ ವ್ಯವಸ್ಥೆ ಇಲ್ಲದೆ ಹೋದರೆ, ಸರ್ಕಾರದ ಆರ್ಥಿಕ ದಕ್ಷತೆಯೇ ಪ್ರಶ್ನಾರ್ಹವಾಗುತ್ತದೆ. ಇಲ್ಲಿ ಜವಾಬ್ದಾರಿ ಹೊರುವವರು ಯಾರು, ಎಲ್ಲ ಬೆಳೆಗಳನ್ನು , ದೇಶದ ಎಲ್ಲ ರಾಜ್ಯಗಳಲ್ಲಿ ಹೇಗೆ ವಿತರಣೆ ಮಾಡುವುದು ಎನ್ನುವ ಪ್ರಶ್ನೆಯೂ ಕಾಡುತ್ತದೆ. ಆದ್ದರಿಂದ ಸರ್ಕಾರ ಒಂದೊಮ್ಮೆ ಕನಿಷ್ಟ ಬೆಂಬಲ ಬೆಲೆಯ ಪ್ರತ್ಯೇಕ ಶಾಸನವನ್ನು ಜಾರಿಗೊಳಿಸಿದರೂ ಈ ಎಲ್ಲ ವಿಭಿನ್ನ ವಿಷಯಗಳ ಬಗ್ಗೆ ಆಳವಾದ ಚರ್ಚೆ ನಡೆಯಬೇಕಿರುವುದು ಅವಶ್ಯಕ.

ವಿಕಾಸ್ : ಈ ಮಸೂದೆಗಳನ್ನು ಸರಿಪಡಿಸಲು ಅವಕಾಶವೇನಾದರೂ ಇದೆಯೇ?

ಅರಿಂದಮ್ : ಸಣ್ಣ ಪುಟ್ಟ ತಿದ್ದುಪಡಿಗಳು ಸಾಲುವುದಿಲ್ಲ. ದೊಡ್ಡ ಮಟ್ಟದಲ್ಲೇ ಸರಿಪಡಿಸಬೇಕಾಗುತ್ತದೆ. ನಮ್ಮ ಒಕ್ಕೂಟ ವ್ಯವಸ್ಥೆಯ ರಚನೆಯಲ್ಲಿ ಮಾಯವಾಗಿದ್ದ ಸಲಹಾ ಪ್ರಕ್ರಿಯೆಯನ್ನು ಕೊಂಚ ಮಟ್ಟಿಗಾದರೂ ಪುನರಾರಂಭಿಸಬೇಕು. ಇದು ಎಚ್ಚರಿಕೆಯ ಮಾತು ಎನಿಸಬಹುದು. ಆದರೆ ವಸ್ತುನಿಷ್ಟವಾಗಿ ಹೇಳುವುದಾದರೆ, ಈ ಮಸೂದೆಗಳು ಆಹಾರ ಧಾನ್ಯ ಖರೀದಿಸುವ ವ್ಯವಸ್ಥೆಯನ್ನು ಕಡೆಗಣಿಸಿದರೆ, ಈ ದೇಶ ಹೋಳಾಗುವ ಸಂಭವವೇ ಹೆಚ್ಚು.


ಇದನ್ನೂ ಓದಿ: ಸೆ.28ಕ್ಕೆ ಕರ್ನಾಟಕ ಬಂದ್: ಪಂಜಾಬ್‌ನಲ್ಲಿ ಸೆ. 29ರವರೆಗೆ ’ರೈಲ್ ರೋಕೋ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಜಗನ್ನಾಥ ನರೇಂದ್ರ ಮೋದಿಯ ಭಕ್ತ’ ಎಂದ ಸಂಬಿತ್ ಪಾತ್ರ; ವಿರೋಧದ ನಂತರ ಕ್ಷಮೆಯಾಚನೆ

0
ಸದಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ದೇಶದಾದ್ಯಂತ ಟ್ರೋಲ್‌ಗೆ ಗುರಿಯಾಗುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಂಬಿತ್ ಪಾತ್ರ, ಒಡಿಶಾದ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುವಾಗ "ಜಗನ್ನಾಥ ಪ್ರಧಾನಿ ನರೇಂದ್ರ...