Homeಮುಖಪುಟದೇಶಾದ್ಯಂತ ನಡೆಯುವ ದಲಿತರ ಮೇಲಿನ ಹಲ್ಲೆಗಳಲ್ಲಿ ಶೇ.25 ಯುಪಿಯೊಂದರಲ್ಲಿ ವರದಿಯಾಗುತ್ತವೆ!

ದೇಶಾದ್ಯಂತ ನಡೆಯುವ ದಲಿತರ ಮೇಲಿನ ಹಲ್ಲೆಗಳಲ್ಲಿ ಶೇ.25 ಯುಪಿಯೊಂದರಲ್ಲಿ ವರದಿಯಾಗುತ್ತವೆ!

ವಾಸ್ತವವಾಗಿ ಕಳೆದ 15 ವರ್ಷಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದಂತೆ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧದಲ್ಲಿ ಇಳಿಕೆಯಾದಂತಹ ಒಂದೇ ಒಂದು ವರ್ಷವೂ ಕಾಣಲು ಸಿಗುವುದಿಲ್ಲ.

- Advertisement -
- Advertisement -

ಕುಖ್ಯಾತ ಹಾಥ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕಳೆದ ಶನಿವಾರ ಕೇಂದ್ರ ತನಿಖಾ ದಳ(ಸಿಬಿಐ)ಗೆ ಒಪ್ಪಿಸಲಾಗಿದೆ. ಇದು 2013ರಲ್ಲಿ ಸುಪ್ರೀಂಕೋರ್ಟ್ “ಪಂಜರದ ಗಿಳಿ” ಎಂದು ಕರೆದಿದ್ದ ಅದೇ ಕೇಂದ್ರ ತನಿಖಾ ಸಂಸ್ಥೆಯಾಗಿದೆ. ಇಬ್ಬರು ಹದಿಹರೆಯದ ಸಹೋದರಿಯರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆದ ಬದಾಯೂನ್ ಪ್ರಕರಣದಲ್ಲಿ “ಆಮೂಲಾಗ್ರ ತನಿಖೆ”ಯ ಬಳಿಕ “ಅತ್ಯಾಚಾರ ನಡೆದಿಲ್ಲ” ಎಂಬ ತೀರ್ಮಾನಕ್ಕೆ ಬಂದದ್ದು ಇದೇ ಸಂಸ್ಥೆ.

ಇದು ಕಳೆದು ಏಳು ವರ್ಷಗಳು ಸಂದಿವೆ. ಆದರೆ, ಘಟನೆಗಳ ಕಾಲಾನುಕ್ರಮಣಿಕೆಯ ಹೊರತಾಗಿ ಬೇರೇನೂ ಬದಲಾಗಿರುವಂತೆ ಕಾಣುವುದಿಲ್ಲ. ಹಾಥ್ರಸ್ ಪ್ರಕರಣದಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯ ವಿಧಿವಿಜ್ಞಾನ ವರದಿಯು ಕೂಡಾ ಅತ್ಯಾಚಾರ ನಡೆದಿಲ್ಲ ಎಂದು ವರದಿ ನೀಡಿದ ಬಳಿಕ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಬದಾಯೂನ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಂತಿಮವಾಗಿ ಸಿಬಿಐ ಅತ್ಯಾಚಾರ ನಡೆದಿಲ್ಲ ಎಂದು ಹೇಳಿತ್ತು.

ಎರಡೂ ಪ್ರಕರಣಗಳ ಹೋಲಿಕೆ ಮಾಡಿದಲ್ಲಿ ಏಳು ವರ್ಷಗಳ ನಂತರ ಈಗ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರಕಾರ ಇರುವುದು ಮತ್ತು 2013ರಲ್ಲಿ ಎರಡೂ ಕಡೆ ಬಿಜೆಪಿಯೇತರ ಅಥವಾ ತಥಾಕಥಿತ ಜಾತ್ಯತೀತ ಸರಕಾರಗಳಿದ್ದದ್ದು ಮತ್ತು ದಲಿತರ ವಿರುದ್ಧದ ಅಪರಾಧಗಳ ಕಾರ್ಯವಿಧಾನ ಹೆಚ್ಚುಕಡಿಮೆ ಒಂದೇ ರೀತಿ ಆಗಿರುವುದನ್ನು ಗಮನಿಸಬಹುದು. ಇಲ್ಲಿ ಮೊತ್ತಮೊದಲಾಗಿಯೇ ನಾವು ಕೆಲವು ತಳಮಳಕಾರಿ ಪ್ರಶ್ನೆಗಳನ್ನು ಕೇಳುವ ಅಗತ್ಯವಿದೆ.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರವನ್ನು ನಿರ್ದಿಷ್ಟವಾಗಿ “ದಲಿತ ವಿರೋಧಿ” ಸರಕಾರ ಎಂದು ಕರೆಯುವುದು ಏಕೆ? ಆರೋಪ ಮಾಡುವುದರಲ್ಲಿ ಯಾವಾಗಲು ಮುಂದಿರುತ್ತಿದ್ದ ಆತನ ಬೆಂಬಲಿಗರು ಈಗ ಈ ಆರೋಪವನ್ನು “ಆಯ್ದ ಆಕ್ರೋಶ” ಎಂದು ತಿರಸ್ಕರಿಸುತ್ತಿರುವುದು ಏಕೆ? 2017ರಲ್ಲಿ ಅಧಿಕಾರ ಬದಲಾವಣೆ ನಡೆದ ಬಳಿಕ ದಲಿತ ಸಂತ್ರಸ್ತರಿಗೆ ಸಂಬಂಧಿಸಿದಂತೆ ಕಾನೂನು ಮತ್ತು ನ್ಯಾಯಪ್ರದಾನ ವ್ಯವಸ್ಥೆಯಲ್ಲಿ ಯಾವುದೇ ಗುಣಾತ್ಮಕ ಬದಲಾವಣೆಗಳು ಆಗಿವೆಯೆ? ಹೌದಾದಲ್ಲಿ ಈ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಜಾತಿ ಸಂಬಂಧಿ ಅಪರಾಧಗಳ ವಿಷಯದಲ್ಲಿ ಏನು ಬದಲಾವಣೆಗಳಾಗಿವೆ?

ಎನ್‌ಸಿಆರ್‌ಬಿ ಅಂಕಿಅಂಶಗಳು

ಸಾಮಾನ್ಯವಾಗಿ ಮಾಧ್ಯಮ ಮತ್ತು ನಾಗರಿಕ ಸಮಾಜ ತನ್ನ “ದಲಿತ ವಿರೋಧಿ” ಪರಿಕಲ್ಪನೆಯನ್ನು ಅಂಕಿಅಂಶಗಳ ಆಧಾರದಲ್ಲಿ ಕಟ್ಟುತ್ತದೆ. ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳ ಕುರಿತ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ- ಎನ್‌ಸಿಆರ್‌ಬಿ)ಯ ಅಂಕಿಅಂಶಗಳ ಆಧಾರದಲ್ಲಿ ನೋಡಿದಲ್ಲಿ, ರಾಜ್ಯದ ಗುಣಸ್ವಭಾವವನ್ನು ಅರ್ಥ ಮಾಡಿಕೊಳ್ಳಲು ಬೇರೆಯೇ ದೃಷ್ಟಿಕೋನವನ್ನು ಬಯಸುವ ಹೆಚ್ಚಿನದೇನೋ ಕಂಡುಬರುತ್ತದೆ. ಮೊದಲಿಗೆ ನಾವು 2006ರಿಂದ 2019ರ ತನಕದ ಎನ್‌ಸಿಆರ್‌ಬಿ ಅಂಕಿಅಂಶಗಳನ್ನು ಪರಿಶೀಲಿಸೋಣ.

2016ಕ್ಕೆ ಮುಂಚಿನ ದಶಕದಲ್ಲಿ (2006-16) ದಲಿತರ ವಿರುದ್ಧದ ಅಪರಾಧಗಳಲ್ಲಿ, 2006ರಲ್ಲಿ ದಾಖಲಾದ ಪ್ರತಿ 1,00,000 ದಲಿತರಿಗೆ 16.3 ಅಪರಾಧದ ಮಟ್ಟದಿಂದ 2016ರಲ್ಲಿ 20.3ರ ಮಟ್ಟಕ್ಕೆ, ಅಂದರೆ 25 ಶೇಕಡಾ ಏರಿಕೆಯಾಗಿದೆ ಎಂದು ಎನ್‌ಸಿಆರ್‌ಬಿ ದಾಖಲೆಗಳ “ಇಂಡಿಯಾಸ್ಪೆಡ್” ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಅದೇ ಹೊತ್ತಿಗೆ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳ ಸಂಖ್ಯೆಯಲ್ಲಿ 2006ರಲ್ಲಿದ್ದ 20,495 ರಿಂದ 2016ರಲ್ಲಿ 14,615ಕ್ಕೆ, ಅಂದರೆ 28 ಶೇಕಡಾ ಇಳಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ 33,455 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವುದರೊಂದಿಗೆ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. 2016ರಲ್ಲಿ ಪರಿಶಿಷ್ಟ ಜಾತಿಗಳ ಮೇಲೆ ನಡೆದ ಅಪರಾಧಗಳಲ್ಲಿ ಅತ್ಯಂತ ಹೆಚ್ಚು, ಅಂದರೆ 25.6 ಶೇಕಡಾ ಪ್ರಕರಣಗಳು (10,426) ಉತ್ತರ ಪ್ರದೇಶದಲ್ಲಿ ದಾಖಲಾಗಿವೆ ಎಂದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು.

ಅಕ್ಟೋಬರ್ 21, 2019ರಂದು ಎನ್‌ಆರ್‌ಸಿಬಿ “ಭಾರತದಲ್ಲಿ ಅಪರಾಧ” ಕುರಿತ ಅವರ 2017ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತು. 2015ರಿಂದ 2017ರ ವರೆಗೆ ಪರಿಶಿಷ್ಟ ಜಾತಿಗಳ ಮೇಲೆ ನಡೆದ ದೌರ್ಜನ್ಯಗಳ ರಾಜ್ಯವಾರು ಅಂಕಿಅಂಶಗಳನ್ನು ಒಳಗೊಂಡ ವರದಿ ಇದು. ಈ ವರದಿಯಲ್ಲಿ ಒಳಗೊಂಡಿರುವಂತಹ ಎಲ್ಲಾ ಮೂರೂ ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ಭಾರೀ ಪ್ರಮಾಣದ ಪರಿಶಿಷ್ಟ ಜಾತಿ ವಿರೋಧಿ ಅಪರಾಧಗಳು ದಾಖಲಾಗಿದ್ದು, ಈ ಸಂಖ್ಯೆ 2015 ರಲ್ಲಿ 8,357, 2016ರಲ್ಲಿ 10,46 ಮತ್ತು 2017ರಲ್ಲಿ 11,444 ಇತ್ತು. ಇದರ ಅರ್ಥ ದೇಶದಲ್ಲಿ ನಡೆದ ಜಾತಿ ಸಂಬಂಧಿ ಅಪರಾಧಗಳಲ್ಲಿ ಕಾಲು ಭಾಗಕ್ಕೂ ಹೆಚ್ಚು ಅಪರಾಧಗಳು ಉತ್ತರ ಪ್ರದೇಶದಲ್ಲಿಯೇ ನಡೆದಿವೆ. ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 2014 ರಿಂದ 2018ರವರೆಗೆ ದಲಿತರ ಮೆಲಿನ ಅಪರಾಧ ಪ್ರಕರಣಗಳಲ್ಲಿ 47 ಶೇಕಡಾ ಹೆಚ್ಚಳವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಎನ್‌ಸಿಆರ್‌ಬಿ ವರದಿಯ ಅಂಕಿಅAಶಗಳ ಪ್ರಕಾರ 2018ರಿಂದ 2019ಕ್ಕೆ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳಲ್ಲಿ ಏಳು ಶೇಕಡಾ ಏರಿಕೆಯಾಗಿದೆ. 2019ರಲ್ಲಿ ಇಡೀ ದೇಶದಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ ನಡೆದ ಅಪರಾಧಗಳಲ್ಲಿ 25.8 ಶೇಕಡಾ ಅಂದರೆ, 11,829 ಪ್ರಕರಣಗಳು ಉತ್ತರ ಪ್ರದೇಶದಲ್ಲಿಯೇ ದಾಖಲಾಗಿವೆ. ಇದು ಮತ್ತೆ ದೇಶದಲ್ಲೇ ಹೆಚ್ಚಿನ ಸಂಖ್ಯೆಯಾಗಿದೆ. ಇದು ಉತ್ತರ ಪ್ರದೇಶದ ನಿರ್ದಯ ಚಿತ್ರಣವನ್ನು ನೀಡುತ್ತದೆ ಮಾತ್ರವಲ್ಲ; ಈ ಚಿತ್ರಣವು ಶಾಶ್ವತವಾಗಿರುವ ಸಮಸ್ಯೆಯಂತೆ ಕಾಣುತ್ತದೆ.

ವಾಸ್ತವವಾಗಿ ಕಳೆದ 15 ವರ್ಷಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದಂತೆ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧದಲ್ಲಿ ಇಳಿಕೆಯಾದಂತಹ ಒಂದೇ ಒಂದು ವರ್ಷವೂ ಕಾಣಲು ಸಿಗುವುದಿಲ್ಲ. ಅದು ನಿರಂತರವಾಗಿ ಹೆಚ್ಚುತ್ತಿದೆ. 2017ಕ್ಕೆ ಮೊದಲು ಸತತ ನಾಲ್ಕು ಬಿಜೆಪಿಯೇತರ ಸರಕಾರಗಳನ್ನು ಕಂಡಿರುವ ಉತ್ತರ ಪ್ರದೇಶದಲ್ಲಿ ಈ ವಿದ್ಯಮಾನವನ್ನು ಗಮನಿಸಿದಾಗ “ಆಯ್ದ ಆಕ್ರೋಶ”ದ ಆರೋಪದಲ್ಲಿ ಹುರುಳಿರುವುದರಲ್ಲಿ ಒಂದಂಶ ಸತ್ಯವೂ ಇದೆ.

ಎಸ್‌ಪಿ-ಬಿಎಸ್‌ಪಿಯ ಜಾತಿ ರಾಜಕೀಯ
ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಗತ್ಯವಾಗಿ ಮತ್ತು ಅಧಿಕೃತವಾಗಿಯೇ ಜಾತಿ ಆಧರಿತ ಪಕ್ಷಗಳು ಹಾಗೂ ಬಿಜೆಪಿ ಹಾಗೆ ಹೇಳಿಕೊಳ್ಳುವುದೂ ಇಲ್ಲ, ಹಾಗೆ ಆಗಿಯೂ ಇಲ್ಲ. ಬಿಜೆಪಿ ಒಂದು ಹಿಂದೂ ಬಹುಸಂಖ್ಯಾತವಾದಿ ಪಕ್ಷ. ಅದು ಮಂಡಲ್ ಆಂದೋಲನದ ಬಳಿಕ ಪ್ರತಿಯೊಂದು ಜಾತಿಗುಂಪನ್ನೂ ಹಿಂದುತ್ವದ ಹೆಸರಿನಲ್ಲಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದ ಪಕ್ಷ.

ಜಾತಿ ಆಧಾರಿತ ಪಕ್ಷವೊಂದು ಅಧಿಕಾರದಲ್ಲಿ ಇರುವುದರ ಪರಿಣಾಮವನ್ನು ಬಿಎಸ್‌ಪಿ ನೇತೃತ್ವದ ಸರಕಾರವಿದ್ದ ಕಾಲದಲ್ಲಿ ಮತ್ತು ಎಸ್‌ಪಿ ನೇತೃತ್ವದ ಸರಕಾರವಿದ್ದ ಕಾಲದಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಮೇಲಿನ ದೌರ್ಜನ್ಯಗಳ ನಕಲಿ ಪ್ರಕರಣಗಳ ಸಂಖ್ಯೆಯಿಂದ ಸುಲಭವಾಗಿ ಕಾಣಬಹುದು. ಉತ್ತರ ಪ್ರದೇಶದಲ್ಲಿ ಬಿಜೆಪಿಯೇತರ ಸರಕಾರಗಳಿದ್ದ ಒಂದೂವರೆ ದಶಕದ ಅವಧಿಯಲ್ಲಿ ಆಳುವ ಪಕ್ಷದ ಜಾತಿ ಸ್ವರೂಪದ ಪರಿಣಾಮವಾಗಿ ಹುಟ್ಟಿಕೊಂಡ ಮೂಲಭೂತ ಸಾಮಾಜಿಕ ವಿಭಜನೆಯನ್ನು ಕಾಣಬಹುದು. ಅದೆಂದರೆ, ದಲಿತ ವಿರುದ್ಧ ಓಬಿಸಿ; ಅದರಲ್ಲೂ ಮುಖ್ಯವಾಗಿ ದಲಿತ ವಿರುದ್ಧ ಯಾದವ ವಿಭಜನೆಗಳು. ಈ ಸಂಘರ್ಷವು ಎಷ್ಟು ತೀವ್ರವಾಯಿತೆಂದರೆ, ಕಳೆದ ಲೋಕಸಭಾ ಚುನಾವಣೆಯ ವೇಳೆ ಎಸ್‌ಪಿ ಮತ್ತು ಬಿಎಸ್‌ಪಿ ಜೊತೆಗೆ ಸೇರಲು ಸಾಧ್ಯವಾಗಲೇ ಇಲ್ಲ.

ಅಜಯ ‘ಸಿಂಗ್’ ಬಿಷ್ತ್ ಅಂಶ
2017ರಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದಾಗ, ಹಿಂದೆ ಚಂದ್ರಶೇಖರ್ ಅವರ ಅಧಿಕಾರ ಉರುಳಿದ ನಂತರ ಮತ್ತು ರಾಜನಾಥ್ ಸಿಂಗ್ ಕೇಂದ್ರಕ್ಕೆ ಸ್ಥಾನಾಂತರಗೊಂಡ ಬಳಿಕ ಇಷ್ಟು ವರ್ಷಗಳ ಕಾಲ ಮಸುಕಾಗಿದ್ದ ರಾಜಪೂತ್ ಅಸ್ಮಿತೆಯು ಮತ್ತೆ ಎದ್ದೇಳುತ್ತಿರುವುದನ್ನು ನಾವು ನೋಡಬಹುದು.

ಈ ಪುಟ್ಟ ಸಮುದಾಯದ ರಾಜಕೀಯ ಪ್ರಭಾವವನ್ನು ಅವರ ಸಂಖ್ಯೆಗಳನ್ನು ನೋಡಿಯೇ ಊಹಿಸಬಹುದಾದರೂ, ಜನಸಂಖ್ಯೆ ಕೇವಲ 7% ಇರುವ ಈ ಸಮುದಾಯದಿಂದ 2 ಪ್ರಧಾನಿಗಳು ಮತ್ತು 5 ಮುಖ್ಯಮಂತ್ರಿಗಳು ಹೊರಹೊಮ್ಮಿದ್ದಾರೆ. ಸಿಎಸ್‌ಡಿಎಸ್‌ನ ಒಂದು ವರದಿ ಹೇಳುವುದೇನೆಂದರೆ, 2009 ರಲ್ಲಿ ಮತ್ತು 2014ರಲ್ಲಿ ಬಿಜೆಪಿಯು ಪಡೆದ ಹೆಚ್ಚಿನ ಮತಗಳು ಯುಪಿಯಲ್ಲಿನ ಈ ಸಮುದಾಯದಿಂದಲೇ.

ಇದೊಂದೇ ಕಾರಣದಿಂದ ಬಿಜೆಪಿಯು ಒಬ್ಬ ರಜಪೂತನಾದ ಅಜಯ್ ಸಿಂಗ್ ಬಿಷ್ತ್ ಅಥವಾ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಿದ್ದು, ಸುಲ್ಕಾನ್ ಸಿಂಗ್ ಅವರನ್ನು ಡಿಜಿಪಿಯನ್ನಾಗಿ ನೇಮಿಸಲಾಯಿತು ಹಾಗೂ ರಾಘವೇಂದ್ರ ಸಿಂಗ್ ಅವರನ್ನು ಅಡ್ವೋಕೇಟ್ ಜನರಲ್ ಆಗಿ ನೇಮಿಸಲಾಯಿತು. ಇಬ್ಬರೂ ರಾಜಪೂತರು. ರಾಜ್ಯದ ಕ್ಯಾಬಿನೆಟ್‌ನಲ್ಲಿ 7 ರಾಜಪೂತ ಸಚಿವರಿದ್ದು, ಯುಪಿಯ ವಿಧಾನಸಭೆಯಲ್ಲಿ ಒಟ್ಟಾರೆ 56 ರಾಜಪೂತರು ಶಾಸಕರಾಗಿ ಪ್ರವೇಶಿಸಿದರು.

ಇದು ಸೇಡಿಗೆ ತಕ್ಕ ಸಮಯವಾಗಿತ್ತು. ಎಸ್‌ಸಿ-ಎಸ್‌ಟಿ ಜನರ ರಕ್ಷಕನಂತೆ ಇದ್ದ, 1990 ರಲ್ಲಿ ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿದ ವಿಶ್ವನಾಥ್ ಪ್ರತಾಪ್ ಸಿಂಗ್ ಅವರಿಂದ ತಮ್ಮ ರಾಜಪೂತ ಸಮುದಾಯಕ್ಕೆ ಆದ ಕಳಂಕವನ್ನು ತೆಗೆಯಲು, ಅದರ ಸೇಡು ತೀರಿಸಿಕೊಳ್ಳಲು ಸಮಯ ಸರಿಯಾಗಿತ್ತು. ‘ಎರಡು ಸಲ ಹುಟ್ಟಿದ’ (ದ್ವಿಜರು) ಕಾರಣದಿಂದ ಸಿಗುವ ಸ್ವಾಭಾವಿಕ ಸವಲತ್ತುಗಳನ್ನು ಕಸಿದುಕೊಂಡದ್ದಕ್ಕೆ (ಮೀಸಲಾತಿಯ ಕಾರಣದಿಂದ) ವಿ.ಪಿ. ಸಿಂಗ್ ಅವರು ಸ್ವಾಭಾವಿಕವಾಗಿಯೇ ಈ ಮೇಲ್ಜಾತಿಯ ಜನರ ಕಣ್ಣಲ್ಲಿ ಖಳನಾಯಕರಾಗಿದ್ದರು.

ರಾಜಪೂತಾನಾ ಕರೆ
ಮಾಚ್ 17, 2017ರಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಹಾರನ್‌ಪುರದಲ್ಲಿ ಏಪ್ರಿಲ್ 20 ರಂದು ರಾಜಪೂತ್ ಮತ್ತು ದಲಿತ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿದ್ದು ಕಾಕತಾಳೀಯವಲ್ಲ ಎಂಬುದು ಎಲ್ಲರಿಗೂ ತಿಳಿದ ಸತ್ಯ.

ಈ ಹಿಂಸಾಚಾರ ಆಕಸ್ಮಿಕವೂ ಅಲ್ಲ ಮತ್ತು ಒಂದೇ ಸಲ ಆಗುವಂತಹ ಹಿಂಸಾಚಾರವಲ್ಲ. ಅಲ್ಲಿ ನಿರ್ದಿಷ್ಟವಾದ ಯೋಜನೆಯಿತ್ತು, ಎಲ್ಲವನ್ನೂ ಪರಿಗಣಿಸಿ ಯೋಜನೆಯನ್ನು ಮಾಡಲಾಗಿತ್ತು. ಈ ಯೋಜನೆಯ ಪೋಸ್ಟರ್ ಬಾಯ್ ಆಗಿದ್ದವನು, ಶೇರ್ ಸಿಂಗ್ ರಾಣಾ. ಇವನೇ ಫೂಲನ್ ದೇವಿಯ ಕೊಲೆಗಾರ ಹಾಗೂ ಈಗ ಪರೋಲ್‌ನಲ್ಲಿ ಹೊರಗಿರುವವನು. ಇವರ ಪರಿಕಲ್ಪನೆ ಮತ್ತು ಉದ್ದೇಶ ರಾಜಪೂತಾನವನ್ನು ಮರುಪಡೆಯುವುದು ಆಗಿತ್ತು. ಅಂದರೆ, ರಾಜಸ್ಥಾನದಿಂದ ಪಶ್ಚಿಮ ಉತ್ತರ ಪ್ರದೇಶದ ತನಕ ರಾಜಪೂತ ಸಮುದಾಯದ ಆಡಳಿತವನ್ನು ಮರುಕಳಿಸುವುದು. ಈ ಯೋಜನೆಯ ಮುಖ್ಯ ಕೇಂದ್ರ, ರಾಜಸ್ಥಾನದಿಂದ ಯುಪಿಯ ತನಕದ ಎಲ್ಲಾ ರಾಜಪೂತರು ತಮ್ಮ ಕುಲದೇವಿ ಎಂದು ಪೂಜಿಸುವ ಸಹಾರನ್‌ಪುರದ ಶಾಕುಂಬರಿ ದೇವಸ್ಥಾನವಾಗಿತ್ತು.

ಶಬ್ಬೀರಪುರ್ ಎಂಬ ಗ್ರಾಮದಲ್ಲಿ 60 ದಲಿತರ (ಕೇವಲ ಜಾಟವ್ ಮನೆಗಳನ್ನೇ ಗುರಿ ಮಾಡಲಾಗಿತ್ತು, ವಾಲ್ಮಿಕಿ ಮನೆಗಳನ್ನಲ್ಲ) ಮನೆಗಳನ್ನು ಸುಟ್ಟುಹಾಕಲಾದ ಸಹಾರನ್‌ಪುರ ದಲಿತ ವಿರೋಧಿ ಹಿಂಸಾಚಾರ ನಂತರ ಈ ಲೇಖಕ ಆ ಪ್ರದೇಶಕ್ಕೆ ಭೇಟಿ ನೀಡಿ, ರಾಣಾನನ್ನು ಬೇಟಿ ಮಾಡಿದ ನಂತರ ಒಂದು ದೀರ್ಘ ವರದಿಯನ್ನು ಸಲ್ಲಿಸಿದರು. ಎಲ್ಲವು ಘಂಟಾಘೋಷವಾಗಿತ್ತು; ರಾಜಪೂತಾನಾ ಕಟ್ಟುವ ಕರೆಗೆ ಸಹಚರನಷ್ಟೇ ಅಲ್ಲ ಪೋಷಕ ಕೂಡ ಮುಖ್ಯಮಂತ್ರಿಯೇ ಆಗಿದ್ದರು. ಸಹಾರನ್‌ಪುರದಲ್ಲಿ 2017ರ ಮೇ 5ರಂದು ಸಹಾರನ್‌ಪುರದಲ್ಲಿ ಸೆರೆ ಹಿಡಿದ ಚಿತ್ರಗಳು ಏನನ್ನೂ ಮರೆಮಾಚುವುದಿಲ್ಲ.

ಆ ಸಮಯದಲ್ಲಿ ಈ ರಾಜಪೂತಾನಾದ ವಾದವನ್ನು ಕೆಲವು ಮಾಧ್ಯಮಗಳು ವರದಿ ಮಾಡಿದರೂ ಅದರ ಫಾಲೋ ಅಪ್ ಯಾರೂ ಮಾಡಲಿಲ್ಲ. ಸರಿಯಾಗಿ 2019ರ ಲೋಕಸಭೆ ಚುನಾವಣೆಗಳ ಮುಂಚೆಯೇ ತನ್ನ ಚುನಾವಣಾ ಪ್ರಚಾರವನ್ನು ಶುರು ಮಾಡಲು ಯೋಗಿ ಆದಿತ್ಯನಾಥ ಸಹಾರನ್‌ಪುರದ ಶಾಕುಂಬರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಶೇರ್ ಸಿಂಗ್ ರಾಣ ಇನ್ನೂ ಜೈಲಿನ ಹೊರಗೆಯೇ ಇದ್ದು, ದಲಿತರು ಮತ್ತು ಬಹುಜನರ ವಿರುದ್ಧ ದ್ವೇಷವನ್ನು ಬಿತ್ತುವ ಕೆಲಸವನ್ನು ಜೋರಾಗಿ ಮಾಡುತ್ತಿದ್ದ. ಇದು ಮತ್ತೊಮ್ಮೆ ಯೋಗಿ ಆದಿತ್ಯನಾಥ ಒಬ್ಬ ಜಾತಿಯ ನಾಯಕನಾಗಿ ಸಕ್ರಿಯವಾಗಿದ್ದದ್ದನ್ನು ಸಾಬೀತುಪಡಿಸುತ್ತದೆ ಹಾಗೂ ತನ್ನ ರಾಜಪೂತಾನಾ ಯೋಜನೆಯಲ್ಲಿ ಸಹಚರನಾಗಿದ್ದ ಎಂಬುದನ್ನೂ ತೋರಿಸುತ್ತದೆ.

ಸಂದೇಶ ಸ್ಪಷ್ಟವಾಗಿತ್ತು ಮತ್ತು ಅಬ್ಬರದಿಂದ ಕೂಡಿತ್ತು; ರಾಜಪೂತ ಸಮುದಾಯವು ಯಾರಿಗೆ ಬೇಕಾದರೂ, ಯಾವಾಗ ಬೇಕಾದಾಗ ಏನಾದರು ಮಾಡಬಹುದು ಹಾಗೂ ಅವರಿಗೆ ಶಿಕ್ಷೆ ಆಗಬಹುದು ಎಂಬುವ ಭಯ ಎಳ್ಳಷ್ಟೂ ಇರಲಿಲ್ಲ.

ಆತ್ಮವಿಶ್ವಾಸ
ಹಾಥ್ರಸ್ ಘಟನೆಗೆ ಬಂದರೆ, ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂಬ ಕರೆಗಳ ಮಧ್ಯೆ ಒಂದು ಮಹತ್ವದ ಬೆಳವಣಿಗೆ ಹೆಚ್ಚಿನವರ ಕಣ್ಣಿಗೆ ಬೀಳಲಿಲ್ಲ. ಮಾಧ್ಯಮಗಳು ಬೂಲಗರ‍್ಹಿ ಗ್ರಾಮವನ್ನು ಪ್ರವೇಶ ಮಾಡಲು ಯತ್ನಿಸುತ್ತಿದ್ದಾಗ, ಎರಡು ದಿನ ಮುಂಚೆ ಹಾಥ್ರಸ್‌ನಲ್ಲಿ ರಾಜಪೂತ ಸಮುದಾಯ ಒಂದು ಪಂಚಾಯತಿ ಕರೆದಿದ್ದರು. ಈ ಪಂಚಾಯತಿ ಸಭೆಯ ವಿಡಿಯೋವನ್ನು ಕೆಲವು ಆಯ್ದ ಫೇಸ್‌ಬುಕ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿತ್ತು ಮತ್ತು ಕೆಲವು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡಿತ್ತು ಆದರೆ ಯಾವ ಮಾಧ್ಯಮಗಳು ಅದನ್ನು ಬಿತ್ತರಿಸುವ ಗೋಜಿಗೆ ಹೋಗಲಿಲ್ಲ.

ಅಲ್ಲಿ ಮಾತನಾಡುವ ವ್ಯಕ್ತಿ ಮತ್ತು ನೆರೆದ ಜನರು ಎಫ್‌ಎಸ್‌ಎಲ್ ವರದಿಯನ್ನು ಉಲ್ಲೇಖಿಸಿ, ತಮ್ಮ ಹುಡುಗರು ಅತ್ಯಾಚಾರಿಗಳಲ್ಲ ಎಂದು ಹೇಳುತ್ತಿದ್ದರು. ಕೇಸರಿ ಜುಬ್ಬಾ ಧರಿಸಿದ ನಾಯಕ ಹೇಳುತ್ತಿದ್ದ: “ನಾವು ಈ ದೇಶಕ್ಕೇ ಆಧಾರ. ನಾವು ಎದ್ದುನಿಂತರೆ ಇಡೀ ದೇಶಕ್ಕೇ ತೊಂದರೆಯಾಗಲಿದೆ” ಎಂದು.

ಕಳೆದ ವಾರ ಇಡೀ ಮಾಧ್ಯಮಗಳು ಹೇಳಿದ್ದಕ್ಕಿಂತ ಹೆಚ್ಚು ಈ ಒಂದು ವಿಡಿಯೋ ಹೇಳುತ್ತದೆ. ರಾಜ್ಯದ ಮುಖ್ಯಮಂತ್ರಿ ತಮ್ಮ ಜಾತಿಯ ವ್ಯಕ್ತಿಯಾಗಿರುವ ಕಾರಣಕ್ಕೆ ಇಂತಹ ಆತ್ಮವಿಶ್ವಾಸ ಕಾಣಿಸಿಕೊಳ್ಳುತ್ತದೆ. ಮುಖ್ಯಮಂತ್ರಿಗಳಿಗೆ ಕೂಡ ಈ ಜಾತಿ- ಆತ್ಮವಿಶ್ವಾಸದ ಬಗ್ಗೆ ಹಾಗೂ ತನ್ನ ಮೇಲೆ ಇಟ್ಟಿರುವ ವಿಶ್ವಾಸದ ಬಗ್ಗೆ ಅರಿವಿದೆ. ಹಾಗಾಗಿ ಅವರು ರಹಸ್ಯಗಳನ್ನು ಮುಚ್ಚಿಡಲು ಏನು ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಇಡೀ ಹಳ್ಳಿಗೆ ಬ್ಯಾರಿಕೇಡ್ ಹಾಕುವುದು, ಮಾಧ್ಯಮದ ವ್ಯಕ್ತಿಗಳ ಬಾಯಿ ಮುಚ್ಚಿಸುವುದು, ಸುಳ್ಳು ಹೇಳುವುದು, ಸಂತ್ರಸ್ತೆಯ ಕುಟುಂಬದ ವ್ಯಕ್ತಿಗಳ ಮೇಲೆಯೇ ನಾರ್ಕೋ ಪರೀಕ್ಷೆ ಮಾಡಿಸುವುದು ಇತ್ಯಾದಿ.

ಯುಪಿಯ ಮಹಾಂತ್
ಇಲ್ಲಿ ಮುಖ್ಯಮಂತ್ರಿಯು ಮುಲಾಯಮ್ ಸಿಂಗ್ ಯಾದವ್ ಅಥವಾ ಮಾಯಾವತಿಯಂತಹ ಸರಳ ಜಾತಿ ನಾಯಕರಾಗಿಲ್ಲ. ಮುಲಾಯಮ್ ಸಿಂಗ್ ಆಗಿರಲಿ, ಮಾಯಾವತಿ ಆಗಿರಲಿ ಅಥವಾ ಇನ್ನಾವುದೋ ಸಮುದಾಯ ಯಾವುದೇ ನಾಯಕರಾಗಿರಲಿ, ಅವರ ಏಕೈಕ ಉದ್ದೇಶ; ತಮ್ಮ ಪಾಲನ್ನು ಸರಿಯಾಗಿ ಪಡೆಯುವುದು. ಈ ದೇಶದಲ್ಲಿ ಸಾಮಾಜಿಕ ನ್ಯಾಯ ಎಂದು ಕರೆಯಲಾಗುವ ರಾಜಕೀಯ ಬಯಸುವುದೇನೆಂದರೆ ತಮ್ಮ ಪಾಲು ಮತ್ತು ಪ್ರಾತಿನಿಧಿತ್ವದ ಅವಕಾಶ. ಯೋಗಿ ಆದಿತ್ಯನಾಥ ಜಾತಿ ನಾಯಕರ ಈ ವಿಭಾಗಕ್ಕೆ ಸೇರಿದವರಲ್ಲ.

ಯೋಗಿ ಆ ನಿಟ್ಟಿನಲ್ಲಿ ಭಿನ್ನ ಏಕೆಂದರೆ, ಈ ‘ವ್ಯವಸ್ಥೆ’ಯಲ್ಲಿ ಬದಲಾವಣೆಯ ಪುನಶ್ಚೇತನ ಯೋಜನೆಯ ನಾಯಕತ್ವ ವಹಿಸಿಕೊಂಡಿದ್ದಾರೆ; ರಾಜಪೂತರ ಜಾತಿ-ಪೋಷಕ ಎಂದು ತನ್ನನ್ನು ತಾನು ಬಿಂಬಿಸಿಕೊಂಡು, ಒಂದು ರಾಜಪೂತಾನಾ ಊಳಿಗಮಾನ್ಯ ವ್ಯವಸ್ಥೆಯನ್ನು ತರಲು ಅಂದರೆ ರಾಜಪೂತರ ಆಳ್ವಿಕೆಯನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯನ್ನು ರಾಜ್ಯ ಗಡಿಯನ್ನು ಪ್ರವೇಶಿಸದಂತೆ ತಡೆಯಲು ದೆಹಲಿ-ನೊಯ್ಡಾ  ಪ್ಲೈವೇ ಮೇಲೆ ಸಾವಿರಾರು ಪೊಲೀಸರನ್ನು ನಿಲ್ಲಿಸುವಂತಹ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಾರೆ.

ಉತ್ತರಪ್ರದೇಶದಲ್ಲಿ ಜಾತಿ ಸಂಬಂಧಿತ ಅಪರಾಧಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಅಂಕಿಅಂಶಗಳು ಬೇಕಿಲ್ಲ, ಬೇಕಾಗಿರುವುದು ಒಂದು ದೃಷ್ಟಿಕೋನ. ಅಂಕಿಅಂಶಗಳು ತಪ್ಪುದಾರಿ ತೋರಿಸುತ್ತವೆ ಆದರೆ ದೃಷ್ಟಿಕೋನ ಸ್ವಯಂ ವಿವರಣೆ ನೀಡುತ್ತವೆ. ಕೆಲವು ಅನುಕೂಲಕರವಾಗಿ ಆಯ್ದ ಘಟನೆಗಳ ಆಧಾರದ ಮೇಲೆ ಹಾಗೂ ಅಂಕಿಅಂಶಗಳ ಆಧಾರದ ಮೇಲೆ ಯೋಗಿ ಆದಿತ್ಯನಾಥ ಅವರನ್ನು ಟೀಕಿಸುವುದು ಎಂದಿಗೂ ಜನಪ್ರಿಯ ಅಂಶವಾಗಲು ಸಾಧ್ಯವಿಲ್ಲ. ಇಲ್ಲಿರುವ ಅಂಶವೇನೆಂದರೆ, ಭಾರತದ ಅತಿದೊಡ್ಡ ರಾಜ್ಯದಲ್ಲಿ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿ, ಜಾತಿ-ಯೋಜನೆಯ ಮುಂದಾಳತ್ವ ವಹಿಸುವುದನ್ನು ವಿವರಿಸಬೇಕಿದೆ.

ಮೊದಲು ಎತ್ತಲಾದ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು, ಯುಪಿಯ ನಾಯಕತ್ವದ ಲಕ್ಷಣದಲ್ಲಿ ಆದ ಬದಲಾವಣೆಗಳನ್ನು ಗ್ರಹಿಸುವ ಅಗತ್ಯವಿದೆಯಷ್ಟೆ. ಅಜಯ್ ಸಿಂಗ್ ಬಿಷ್ತ್ ಎಂಬ ರೂಪದಲ್ಲಿರುವ ನಾಯಕತ್ವ ಮೊದಲ ಬಾರಿಗೆ ‘ಒಂದು ವ್ಯವಸ್ಥೆಯ ಮುಖ್ಯಸ್ಥ’ ಅರ್ಥಾತ್ ಪೀಠಾಧೀಶ್ವರ ಮಹಂತ್. ಈ ಮುಂಚೆ ಈ ವ್ಯಕ್ತಿ ಒಂದು ಮಠದ ಮಹಂತನಾಗಿದ್ದ, ಈಗ ಇಡೀ ಉತ್ತರಪ್ರದೇಶ ಇವರ ಮಠವಾಗಿ ಪರಿವರ್ತನೆಗೊಂಡಿದೆ. ಆತನಿಗೆ ಈ ವ್ಯವಸ್ಥೆಯನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಲೇಬೇಕಾಗಿದೆ, ಕ್ಷೇತ್ರ ಎಷ್ಟು ದೊಡ್ಡದಾಗಿದ್ದರೂ ಆಗಿರಲಿ!

ಅಭಿಷೇಕ್ ಶ್ರೀವಾಸ್ತವ

(ಹಿರಿಯ ಪತ್ರಕರ್ತ, junputh.comನ ಕಾರ್ಯನಿರ್ವಾಹಕ ಸಂಪಾದಕ, ಉತ್ತರ ಪ್ರದೇಶ)

ಅನುವಾದ: ನಿಖಿಲ್ ಕೋಲ್ಪೆ, ರಾಜಶೇಖರ್ ಅಕ್ಕಿ


ಇದನ್ನೂ ಓದಿ: ಹತ್ರಾಸ್ ಸಂತ್ರಸ್ತೆಯನ್ನೇ ಬಲಿಪಶುಮಾಡುವ ಹುನ್ನಾರ: ಸುಪ್ರೀಂ ಮೆಟ್ಟಿಲೇರಿದ ಸಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...