Homeಮುಖಪುಟಅಂಬೇಡ್ಕರ್ ಕನಸಿನ ಭೂ ಹಂಚಿಕೆ ಜಾರಿಯಾಗಲಿ: ನೂರ್ ಶ್ರೀಧರ್

ಅಂಬೇಡ್ಕರ್ ಕನಸಿನ ಭೂ ಹಂಚಿಕೆ ಜಾರಿಯಾಗಲಿ: ನೂರ್ ಶ್ರೀಧರ್

ದೇವರಾಜ ಅರಸುರವರು ಜಾರಿಗೆ ತಂದಿದ್ದ ಭೂ ಸುಧಾರಣೆ ಕಾಯ್ದೆಯ ಕಣ್ಣು, ಮಿದುಳು, ಬಾಯಿ ಎಲ್ಲವನ್ನೂ ಕಿತ್ತುಕೊಂಡಾಗಿದೆ. ಈಗ ಜಠರಕ್ಕೆ ಕೈ ಹಾಕಿದೆ. ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೇ, ನಮಗೆ ಉಳಿಗಾಲವಿಲ್ಲ” ಎಂದು ಆರ್ ಮಾನಸಯ್ಯ ತಿಳಿಸಿದರು.

- Advertisement -
- Advertisement -

ಭೂಮಿಗಾಗಿನ ಈ ಹೋರಾಟ ಇಂದು ನಿನ್ನೆಯದಲ್ಲ. ಇದಕ್ಕೆ 100 ವರ್ಷಗಳ ಹೋರಾಟದ ಪರಂಪರೆಯಿದೆ. 1932 ರಲ್ಲಿ ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭೂಸುಧಾರಣೆಯ ನಿರ್ಧಾರವನ್ನು ಕೈಗೊಂಡು, ಉಳುವವನೇ ಭೂ ಒಡೆಯ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಇಡೀ ಭೂಮಿಯನ್ನು ರಾಷ್ಟ್ರೀಕರಣಗೊಳಿಸಿ, ಬಡಜನರಿಗೆ ಸಮಾನವಾಗಿ ಹಂಚಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅದಕ್ಕಾಗಿ ಇಂದಿಗೂ ಹೋರಾಟ ಮುಂದುವರೆದಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್ ಶ್ರೀಧರ್ ತಿಳಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ಐಕ್ಯ ಹೋರಾಟದ ಎರಡನೇ ದಿನವಾದ ಇಂದು ಪರ್ಯಾಯ ಜನತಾ ಅಧಿವೇಶನದಲ್ಲಿ ಅವರು, ‘ರಾಜ್ಯದ ಬಡಜನರ ಭೂಮಿ ಮತ್ತು ವಸತಿ ಸಮಸ್ಯೆ’ ಎಂಬ ವಿಷಯದ ಕುರಿತು ಮಾತನಾಡಿದರು.

“ಇಂದು ಅಥವಾ ನಾಳೆಯೊಳಗೆ ಭೂಸುಧಾರಣಾ ತಿದ್ದುಪಡಿ ಕಾಯ್ದೆಯಂತಹ ಬಡಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಲು ಸರ್ಕಾರ ಹೊರಟಿದೆ. ಆದರೆ ವಿರೋಧ ಪಕ್ಷಗಳು ಇದನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿವೆ. ಜೊತೆಗೆ ಈ ಕಾಯ್ದೆಗಳನ್ನು ಜಾರಿಗೆ ತರಕೂಡದು ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಪರ್ಯಾಯ ಅಧಿವೇಶನ ನಡೆಸುತ್ತಿದ್ದೇವೆ. ಹಾಗಾಗಿ ಇದು ಅತ್ಯಂತ ಮಹತ್ವವುಳ್ಳದ್ದಾಗಿದೆ” ಎಂದು ನೂರ್ ಶ್ರೀಧರ್ ಹೇಳಿದ್ದಾರೆ.

ಸಂವಿಧಾನದಲ್ಲಿ ದೇಶದ ಬಡವರಿಗೆ ಭೂಮಿ ನೀಡಬೇಕು ಎಂದು ಹೇಳಲಾಗಿದೆ. ಪ್ರತಿ ಕುಟುಂಬಕ್ಕೆ ಶಕ್ತ್ಯಾನುಸಾರ ಭೂಮಿ ಕೊಡಬೇಕು ಎಂಬ ವಿಷಯವನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಆದರೆ ಆಳುವ ಸರ್ಕಾರಗಳ ಹುನ್ನಾರದಿಂದ ಇದು ಇಂದಿಗೂ ನೆರೆವೇರಲ್ಲ. ಆದರೂ  ಭೂಮಿ ಬಂಡವಾಳಶಾಹಿಗಳ ಕೈಗೆ ಹೋಗಬಾರದು ಎಂದು ನಿರ್ಣಯಿಸಲಾಗಿತ್ತು. ಇದರ ನಂತರ ದೇಶದಾದ್ಯಂತ ಸಾಕಷ್ಟು ಹೋರಾಟ ನಡೆದು, ದೇವರಾಜ ಅರಸು ಕಾಲದಲ್ಲಿ ಭೂ ಸುಧಾರಣೆಗಳ ಪರ್ವ ಆರಂಭವಾಯಿತು ಎಂದರು.

ಅರಸುರವರ ಕಾಲದಲ್ಲಿ ಎರಡು ಪ್ರಮುಖ ವಿಷಯಗಳನ್ನು ಜಾರಿಗೆ ತರಬೇಕು ಎಂದು ಯೋಜನೆ ರೂಪಿಸಲಾಯಿತು. ಮೊದಲನೆಯದು, ಗೇಣಿಪದ್ದತಿಯನ್ನ ರದ್ದು ಮಾಡಿ, ಉಳುವವನಿಗೆ ಭೂಮಿ ನೀಡಬೇಕು ಎನ್ನುವುದು. ಎರಡನೆಯದು ಭೂ ಒಡೆತನಕ್ಕೆ ಮಿತಿಯನ್ನು ತಂದು, ಹೆಚ್ಚುವರಿ ಭೂಮಿ ವಶಪಡಿಸಿಕೊಂಡು ಇಲ್ಲದವರಿಗೆ ಕೊಡಬೇಕು ಎಂಬುದು. ಆದರೆ ಮೊದಲನೆಯದು ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ಹಾಗಾಗಿ ಇತರೆ ಹಿಂದುಳಿದವರಿಗೆ ಸ್ವಲ್ಪ ಭೂಮಿ ಸಿಕ್ಕಿತು. ಎರಡನೆಯದು ಯಶಸ್ವಿಯಾಗಲಿಲ್ಲ. ಹಾಗಾಗಿ ದಲಿತರಿಗೆ, ಆದಿವಾಸಿಗಳಿಗೆ ಭೂಮಿ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭೂ ಸುಧಾರಣಾ ಚಳುವಳಿಯಲ್ಲಿದ್ದ ಕಾಗೋಡು ತಿಮ್ಮಪ್ಪರವರಿಂದಲೂ ಜನರಿಗೆ ಭೂಮಿ ಕೊಡಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಆರಂಭವಾಯಿತು. ಇದಕ್ಕೆ ಎಚ್.ಎಸ್ ದೊರೆಸ್ವಾಮಿಯವರು ನೇತೃತ್ವ ವಹಿಸಿದರು. 2016ರಲ್ಲಿ ಅಂದು ಈ ಹೋರಾಟ ನಡೆದಿದ್ದು, ಬಿಜೆಪಿ ಪಕ್ಷದ ವಿರುದ್ದವಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ವಿರುದ್ದ. ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ. ಜನವಿರೋಧಿ ನೀತಿಯ ವಿರುದ್ದ. ಆದರೂ ಇಂದು ನಾವು ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ಪರ ಎಂದು ಹಲವರು ಬಿಂಬಿಸುತ್ತಿದ್ದಾರೆ. ನಾವು ಯಾವಾಗಲೂ ಆಳುವವರ ವಿರುದ್ಧವೇ ಹೊರತು ಪರವಲ್ಲ ಎಂಬುದಕ್ಕೆ ನಮ್ಮ ಹಿಂದಿನ ಮತ್ತು ಇಂದಿನ ಹೋರಾಟಗಳೇ ಸಾಕ್ಷಿ ಎಂದರು.

ಇಂದು ನಾವು 4 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜನತಾ ಅಧಿವೇಶನದ ಮೂಲಕ ಒತ್ತಾಯಿಸುತ್ತೇವೆ. ಬಡವರಿಗೆ ಭೂಮಿ ಮತ್ತು ಪಟ್ಟಾ ನೀಡಬೇಕು, ಭೂಮಿಯ ಲೆಕ್ಕ ಮಾಡಿ, ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಂಡು ಬಡವರಿಗೆ ಹಂಚಬೇಕು. ಭೂಮಿಗಾಗಿ ಹೊಸ ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು ಮತ್ತು ಭೂಮಿ ವಸತಿ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಸ್ಸು ಪಡೆಯಬೇಕು” ಎಂದು ಒತ್ತಾಯಿಸಿದರು.

ಜನತಾ ಅಧಿವೇಶನದಲ್ಲಿ ಹಿರಿಯ ಕಾರ್ಮಿಕ ಮುಖಂಡರಾದ ಆರ್‌.ಮಾನಸಯ್ಯನವರು “ಕಂದಾಯ ಭೂಮಿ ಮತ್ತು ಬಗರ್ ಹುಕುಂ ಸಮಸ್ಯೆ” ಎಂಬ ವಿಷಯದ ಕುರಿತು ಮಾತನಾಡಿ “ಸರ್ಕಾರ ಈಗ ಭೂಮಿ ಖಾಸಗೀಕರಣ ಮಾಡಲು ಹೊರಟಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಕರ್ನಾಟಕದ ಸಮಸ್ತ ಭೂಮಿಯನ್ನು ಉಳಿಸದ ಹೊರತು, ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರೀ ಉದ್ಯಮಗಳ ಖಾಸಗೀಕರಣ ಆಯ್ತು, ವಿಮಾನ ನಿಲ್ದಾಣದ ಖಾಸಗೀಕರಣ ಆಯ್ತು, ರೈಲು ಖಾಗೀಕರಣ ಆಯ್ತು. ಈಗ ಸರ್ಕಾರ ಭೂಮಿಯ ಖಾಸಗೀಕರಣ ಮಾಡಲು ಹೊರಟಿದೆ. ಎಲ್ಲರಿಗೂ ಸೇರಿದ ಭೂಮಿಯನ್ನು ಕೆಲವೇ ಜನರ ಕೈಗೆ ಕೊಡಲು ಕಾನೂನು ಮಾಡುತ್ತಿರುವ ಸರ್ಕಾರದ ಮತ್ತು ಆಳುವ ವರ್ಗದ ನೀಚಾತಿ ನೀಚ ಕೆಲಸ ಇದು” ಎಂದು ಕಿಡಿಕಾರಿದರು.

ನಮಗೆ ಭೂಮಿಯೆಂದರೆ ನಮಗೆ ಕೇವಲ ನಿವೇಶನವಲ್ಲ, ಹೊಲವಲ್ಲ, ಮನೆಯಲ್ಲ, ಅದು ನಮ್ಮ ಬದುಕು. ಹಾಗಾಗಿ ಈ ಹೋರಾಟ ರೈತಾಪಿ ವರ್ಗಕ್ಕೆ ಸ್ವಾತಂತ್ರ ಚಳುವಳಿ ಇದ್ದಂತೆ. ರೈತರಿಗೆ ಸ್ವಾತಂತ್ರ ಚಳುವಳಿಯೆಂದರೆ ಭೂ ಚಳುವಳಿಯೇ ಆಗಿದೆ. ಸ್ವಾತಂತ್ರ ಎಂದರೆ ಏನು, ರೈತರಿಗೆ ಭೂಮಿ ಸಿಗುವುದೇ ಅಲ್ಲವೇ” ಎಂದು ಅವರು ಹೇಳಿದರು.

ದೇವರಾಜ ಅರಸುರವರು ಜಾರಿಗೆ ತಂದಿದ್ದ ಭೂ ಸುಧಾರಣೆ ಕಾಯ್ದೆಯ ಕಣ್ಣು, ಮಿದುಳು, ಬಾಯಿ ಎಲ್ಲವನ್ನೂ ಕಿತ್ತುಕೊಂಡಾಗಿದೆ. ಈಗ ಜಠರಕ್ಕೆ ಕೈ ಹಾಕಿದೆ. ನಾವು ಇನ್ನೂ ಎಚ್ಚೆತ್ತುಕೊಳ್ಳದಿದ್ದರೇ, ನಮಗೆ ಉಳಿಗಾಲವಿಲ್ಲ” ಎಂದು ಆರ್ ಮಾನಸಯ್ಯ ತಿಳಿಸಿದರು.

ಜನತಾ ಅಧಿವೇಶನದ ಸ್ಥಳಕ್ಕೆ ಮಾಜಿ ಸಚಿವರುಗಳಾದ ಹೆಚ್.ಡಿ.ರೇವಣ್ಣ, ಡಿ ಆರ್ ಪಾಟೀಲ್ ಮತ್ತು ಬಿ ಆರ್ ಪಾಟೀಲ್ ಭೇಟಿ ನೀಡಿ
ರೈತ ವಿರೋಧಿ ಸುಗ್ರೀವಾಜ್ಞೆಗಳ‌ ವಿರುದ್ದ ಸದನದಲ್ಲಿ‌ ಮಾತನಾಡುವುದಾಗಿ ಹಾಗೂ ಈ ಹೋರಾಟದಲ್ಲಿ ಜೊತೆಗೂಡುವುದಾಗಿ ಭರವಸೆ ನೀಡಿದರು.


ಇದನ್ನೂ ಓದಿ: ಈ ಸುಗ್ರೀವಾಜ್ಞೆಗಳು ಅಸಾಂವಿಧಾನಿಕವಾಗಿದ್ದು, ರೈತರ ಗುರುತನ್ನೇ ಅಳಿಸಿಹಾಕಲಿವೆ: ಜಸ್ಟೀಸ್ ನಾಗಮೋಹನ್ ದಾಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ತಾನು ಜೈವಿಕ ಅಲ್ಲ, ನನ್ನನ್ನು ದೇವರು ಕಳುಹಿಸಿದ್ದಾನೆ’ ಎಂದು ಹೇಳಿ ಅಪಹಾಸ್ಯಕ್ಕೀಡಾದ ಪ್ರಧಾನಿ ಮೋದಿ

0
'ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ, ಈ ರೀತಿಯ ಶಕ್ತಿಯು ಜೈವಿಕ ದೇಹದಿಂದ ಬರಲು ಸಾಧ್ಯವಿಲ್ಲ, ದೇವರು ಮಾತ್ರ ಅಂತಹ ಶಕ್ತಿಯನ್ನು ನೀಡಬಲ್ಲನು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ನೀಡಿದ್ದು,...