Homeಅಂಕಣಗಳುನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..

ರಾಜ್ಯದ ಹೈಯರ್ ಎಜುಕೇಷನ್ ಮಿನಿಸ್ಟರ್ ‘ಜಟ್ಟಿ ದೆವ್ವೇಗೌಡ’ರ ಕಡೆಯಿಂದ ಕಾಲೇಜು ಸ್ಟೂಡೆಂಟುಗಳಿಗೆ ಬಿಸಿಬಿಸಿ ಸುದ್ದಿಯೊಂದು ಲಭ್ಯವಾಗಿದ್ದು, ಶಿಕ್ಷಣ ಮಂತ್ರಿಯ ಹೊಸ ಹೇಳಿಕೆಗೆ ಹುಡುಗ ಹುಡುಗಿಯರು ಕೆಂಡಾಮಂಡಲರಾಗಿದ್ದಾರೆ. ಆದರೆ ಈ ಮಂತ್ರಿಯ ಹೇಳಿಕೆ ಬ್ಲೂಜೆಪಿ ವಯೋವೃದ್ಧರಿಗೆ ರೋಮಾಂಚನ ಉಂಟುಮಾಡಿದೆ. ‘ಕಾಲೇಜಲ್ಲಿ ಓದೋ ಹುಡುಗ ಹುಡುಗೀರು ಲವ್ವುಗಿವ್ವು ಮಾಡ್ಬೇಡಿ, ಪಾರ್ಕು ಥೇಟ್ರು ಸುತ್ತಬೇಡಿ, ನಿಮ್ಮಪ್ಪ ಅಮ್ಮ ನೋಡಿದವ್ರನ್ನ ಕಣ್ಮುಚ್ಕಂಡು ಮದ್ವೆ ಆಗ್ಬುಡಿ’ ಅಂತ ಜಟ್ಟಿ ದೆವ್ವೇಗೌಡರು ಫತ್ವಾ ಹೊರಡಿಸಿದ್ದಾರೆ. ಇದರಿಂದ ಕನಲಿ ಕೆಂಡವಾಗಿರೋ ಕಾಲೇಜು ಯುವಕ ಯುವತಿಯರು “ನಾವು ಲವ್ವಾದ್ರೂ ಮಾಡ್ಕೋತೀವಿ, ಡವ್ವಾದ್ರು ಮಾಡ್ಕೋತೀವಿ, ಮೊದಲು ತಾವು ವಯಸ್ಕರ ಶಿಕ್ಷಣ ಶಾಲೆಗೆ ಸೇರ್ಕೊಂಡು ಹೈಸ್ಕೂಲ್ ಪಾಸಾಗೋದು ನೋಡಿ, ಎಸೆಸೆಲ್ಸಿಯೂ ಪಾಸಾಗದ ಟಪಾಸ್ ಗಿರಾಕಿಗಳು ನಮಗೆ ಬುದ್ದಿವಾದ ಹೇಳೋ ಅವಶ್ಯಕತೆ ಇಲ್ಲ, ಇನ್ನೊಂದ್ಸಲ ಅದು ಮಾಡ್ಬೇಡಿ, ಇದು ಮಾಡ್ಬೇಡಿ ಅಂತ ನಮಗೆ ರೂಲ್ಸ್ ಮಾಡೋಕೆ ಬಂದ್ರೆ ಭಾಷಣ ಮಾಡ್ತಿರೋ ಸ್ಟೇಜಲ್ಲೇ ನಿಮ್ಮ ಪೈಜಾಮ ಎಳೆದು ಅರೆಬೆತ್ತಲೆ ನಿಲ್ಲಿಸ್ತೀವಿ“ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.

******

ABP ನ್ಯೂಸ್ ಚಾನೆಲ್ ಇತ್ತೀಚೆಗೊಂದು ಕುಟುಕು ಕಾರ್ಯಾಚರಣೆ ನಡೆಸಿ ಗೋರಕ್ಷಕರ ಹೆಸರಿನಲ್ಲಿ ಕೊಲೆ ದರೋಡೆ ಮಾಡುತ್ತ ಹಫ್ತಾ ವಸೂಲಿ ದಂಧೆ ನಡೆಸುತ್ತಿದ್ದ ಹೋಪ್ಲೆಸ್ ಹೇತ್ಲಾಂಡಿಗಳನ್ನು ಜನರ ಮುಂದೆ ಬೆತ್ತಲು ಮಾಡಿದೆ. ಮನೆಯಲ್ಲಿ ಹೆಂಡ್ತಿಮಕ್ಕಳಿಗೆ ಎರಡೊತ್ತಿನ ಅನ್ನ ಹಾಕಲು ಯೋಗ್ಯತೆಯಿಲ್ಲದ ಚಿಳ್ಳೆಪಿಳ್ಳೆಗಳೆಲ್ಲ ಗಂಟಲಿಗೊಂದು ಬಾವುಟ ಹೆಟ್ಟಿಕೊಂಡು “ಜೈ ಶ್ರೀ ಮಾಮ್” ಎನ್ನುತ್ತ ಹಸು ದನ ಸಾಕಿದವರ ಮೇಲೆ ಬಿದ್ದು ಸಾಯ ಹೊಡೆದು ಕೊಂದು ಜೈಲು ಸೇರುತ್ತಿವೆ. ಇಂಥದ್ದೇ ಹೀನಾಯ ಸಾಹಸದಲ್ಲಿ ಇಬ್ಬರನ್ನು ಕೊಂದು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದ ಎರಡು ಹೇತ್ಲಾಂಡಿ ವೀರರನ್ನು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಬಾಯಿ ಬಿಡಿಸಿದೆ. ಇವರು ಕೋರ್ಟಿನಲ್ಲಿ ‘ನಮಗೇನೂ ಗೊತ್ತಿಲ್ಲ, ಆ ಕೊಲೆಗಳು ನಡೆದ ದಿನ ನಾವು “ಅಂತರರಾಷ್ಟ್ರೀಯ ಗೋಮೂತ್ರ ಸೇವಕರ ದಿನಾಚರಣೆ”ಯಲ್ಲಿ ಭಾಗವಹಿಸಿ ಬಕೇಟಿನಲ್ಲಿ ಗೋಮೂತ್ರ ಕುಡಿಯುತ್ತಿದ್ದೆವು, ಈ ಕೊಲೆಗೂ ನಮಗೂ ಸಂಬಂಧವಿಲ್ಲ’ ಎಂದಿದ್ದರು. ಜಾಮೀನು ಪಡೆದು ಹೊರಬಂದ ಕೂಡಲೆ ಇದ್ದಕ್ಕಿದ್ದಂತೆ ಗಂಡಸರಾದ ಈ ಕೊಲೆಗಡುಕರು ಓಆಖಿಗಿ ರಹಸ್ಯ ಕ್ಯಾಮೆರಾದೆದುರು ಆ ಕೊಲೆಗಳನ್ನು ಮಾಡಿದ್ದು ನಾವೇ, ನಮ್ ಸಪೋರ್ಟಿಗೆ ಪಿಳ್ಳಜುಟ್ಟು ಪಾರ್ಟಿಯವ್ರು ಇದ್ದಾರೆ, ಇನ್ನೊಂದೆರಡು ಕೊಲೆ ಮಾಡಿ ನೀವು ಸಾಯೋಮಟ ಜೈಲಿಗೆ ಹೋಗಿ, ನಿಮ್ಮ ಮನೆಮಂದಿ ಬಾಯಿಗೆ ಮಣ್ಣು ಹಾಕೋ ಜವಾಬ್ದಾರಿ ನಮ್ದು ಅಂತ ಪಿಳ್ಳಜುಟ್ಟು ಪಾರ್ಟಿಯ ಪುಟಗೋಸಿಗಳು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ. ತಮ್ಮ ಮನೆಮಕ್ಕಳನ್ನು ಹೈಯರ್ ಎಜುಕೇಷನ್ನಿಗೆ ಹೊರದೇಶಕ್ಕೆ ಕಳಿಸಿ ಅವರ ಬಾಳು ಬಂಗಾರ ಮಾಡುವ ಈ ಪಿಳ್ಳಜುಟ್ಟು ಪುಟಗೋಸಿಗಳು, ತಳ ಸಮುದಾಯದ ಜನರ ಬದುಕಿನ ಮೇಲೆ ಚಪ್ಪಡಿಕಲ್ಲು ಎಳೆದು ಅದರ ಮೇಲೆ ಬಾಳೆಎಲೆ ಹಾಸಿಕೊಂಡು ಪಾಯಸ ನೆಕ್ಕಿಕೊಂಡು ಕುಳಿತುಬಿಡುತ್ತಾರೆಂಬುದು ಬಡ ಸಮುದಾಯಗಳಿಗೆ ಇನ್ನೂ ಅರಿವಾಗಿಲ್ಲವೆಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ‘ಗ್ಯಾಂಗ್ಸ್ ಆಫ್ ವಾಸ್ಸೆಪುರ್’ ಎಂಬ ಚಿತ್ರ ತೆಗೆದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಈ ಭಡವ ರಾಸ್ಕಲ್‍ಗಳ ಬಗ್ಗೆ “ ಗ್ಯಾಂಗ್ಸ್ ಆಫ್ ಗಂಜಳಾಪುರ್” ಎಂಬ ಚಿತ್ರ ತೆಗೆಯಲಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

******

‘ಹಾಳೂರಿಗೆ ಉಳಿದೋನೆ ಐಲುಗಿರಾಕಿ’ ಎನ್ನೋ ಗಾದೆಗೆ ಕರೆಕ್ಟಾಗಿ ಫಿಟ್ ಆಗುವ ‘ಅನಂತ್ ಗಮಾಡ್ ಹೆಗಡೆ’ ಹೋದಲ್ಲಿ ಬಂದಲ್ಲೆಲ್ಲ ಕಯ್ಯಯ್ಯೋ ಕಯ್ಯಯ್ಯೋ ಅನ್ನುತ್ತ ಅತ್ತ ಪಕ್ಷದಿಂದಲೂ, ಇತ್ತ ಜನರಿಂದಲೂ ಸಮಪ್ರಮಾಣದಲ್ಲಿ ಉಗಿಸಿಕೊಂಡು ತಿರುಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. ಹೊಸಾ ವಿಷ್ಯ ಏನಪ್ಪ ಅಂತಂದ್ರೆ.. “ ಬ್ಲೂಜೆಪಿ”ಯವ್ರು ಹುಲಿ ಇದ್ದಂಗೆ ಮಿಕ್ಕಿದೋರೆಲ್ಲ ಜಿಂಕೆ ಪಂಕೆ ಇದ್ದಂಗೆ, ನಮ್ದು ಹಂಗೈತೆ-ಹಿಂಗೈತೆ, ಲೊಟ್ಟೆ-ಲೊಸಕು, ಮಣ್ಣು ಮಸಕು ಅಂತೆಲ್ಲ ಕಯ್ಯಯ್ಯೋ ಅಂದಿದೆ. ಇವೆಲ್ಲವನ್ನು ‘ಅನಿಮಲ್ ಪ್ಲಾನೆಟ್’ ಚಾನೆಲ್‍ನ ನೇರಪ್ರಸಾರದಲ್ಲಿ ನೋಡಿದದವರು ಈ ಟೈಗರ್ ಸ್ಟೋರಿಗೆ ಥರಾವರಿ ಟ್ವಿಸ್ಟುಗಳನ್ನು ಕೊಡುತ್ತಿದ್ದಾರೆ. ಬ್ಲೂಜೆಪಿಯವರು ಟೈಗರ್‍ಗಳಾದರೆ ಮೊದಲು ಬಟ್ಟೆ ಬಿಚ್ಚಿ ಬರೇಬೆತ್ತಲೆ ಓಡಾಡಬೇಕು, ಯಾಕಂದ್ರೆ ಟೈಗರ್‍ಗಳು ಬಟ್ಟೆ ಹಾಕ್ಕಳಲ್ಲ ಅಂತ ಒಬ್ರು ಅಂದಿದ್ದಾರೆ. ತೊಡೆ ಸಂದಿಯಿಂದ ಮೂರಡಿ ಬಾಲ ನೇತಾಡ್ತಿದ್ರೆ ಮಾತ್ರ ಅದು ಟೈಗರ್ ಅನಿಸಿಕೊಳ್ತದೆ, ಆದ್ರಿಂದ ಗಮಾಡ್ ಹೆಗಡೆಗೂ ಒಂದು ಬಾಲ ಸಿಗಿಸಿ ಅದನ್ನವನು ಲಳ ಲಳ ಅಲ್ಲಾಡಿಸಿಕೊಂಡು ಓಡಾಡಬೇಕು, ಅವಾಗಷ್ಟೇ ಟೈಗರ್ ಅಂತ ಕನ್ಸಿಡರ್ ಮಾಡಬಹುದೆಂದು ಮತ್ತೊಬ್ಬರು ಅಂದಿದ್ದಾರೆ. ಇಲ್ಲ, ಇಲ್ಲ, ಟೈಗರ್‍ಗಳು ಹಸಿವಾದರೆ ಪುದೀನ ಕೊತ್ತಂಬರಿ ಸೊಪ್ಪು ತಿನ್ನೋದಿಲ್ಲ, ಅವಕ್ಕೆ ಹಸೀಮಾಂಸವೇ ಆಗಬೇಕು, ಆದ್ದರಿಂದ ಅನಂತ್ ಗಮಾಡ್ ಹೆಗಡೆ ಪಕ್ಷದೋರು ಊರಲ್ಲಿರೋ ಕೋಳಿ ಅಂಗಡಿ, ಮಟನ್ ಅಂಗಡಿಗಳಿಗೆ ಹುಲಿಗಳಂತೆ ಮಂಡಿ ಕೈಗಳನ್ನು ನೆಲಕ್ಕೂರಿ ನಾಲಿಗೆ ಹೊರಚಾಚಿ ನಡೆದುಕೊಂಡು ಹೋಗಿ ಅಲ್ಲಿ ವೇಸ್ಟ್ ಎಂದು ಎಸೆಯುವ ತ್ಯಾಜ್ಯಮಾಂಸವನ್ನು ಕಸದಡಬ್ಬಿಗೆ ಬಾಯಿ ಹಾಕಿ ಕಚಪಚನೆ ತಿನ್ನಬೇಕು, ಆಗಷ್ಟೇ ಇವರೆಲ್ಲ ಹುಲಿಗಳಾಗಲು ಸಾಧ್ಯ ಎಂದು ಜನರು ತರಾವರಿ ಐಡಿಯಾಗಳನ್ನು ಅನಂತ್ ಗಮಾಡ್ ಹೆಗಡೆಗೆ ಕೊಡುತ್ತಿದ್ದಾರೆ. ಅಗಣಿ ಹಾಕೋಕೆ ಹೋಗಿ ಇನ್ನೇನೋ ಸಿಗಿಸಿಕೊಂಡಂತಾಯ್ತಲ್ಲ ಎಂದು ಗಾಬರಿಯಾಗಿರೋ ಗಮಾರ್ ಹೆಗಡೆ ತನ್ನ ರಷ್ಯನ್ ಹೇರ್ ಸ್ಟೈಲ್ ತಲೆಗೂದಲಿಗೆ ಕೇಸರಿ ಕಲರ್ ಹೊಡೆಸಿಕೊಳ್ಳಲು ಕಟಿಂಗ್ ಶಾಪ್‍ಗೆ ಹೋದವರು ಇನ್ನೂ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...