HomeUncategorizedಒಳಮೀಸಲಾತಿಯು ಒಳಗೇ ಕುಯ್ಯದಂತಿರಲು.......

ಒಳಮೀಸಲಾತಿಯು ಒಳಗೇ ಕುಯ್ಯದಂತಿರಲು…….

- Advertisement -
- Advertisement -

* ಮೀಸಲಾತಿ ಒಪ್ಪುವವರೆಲ್ಲರೂ ಒಳ ಮೀಸಲಾತಿಯನ್ನೂ ಒಪ್ಪಬೇಕು
* ಮೀಸಲಾತಿಯನ್ನೇ ಒಪ್ಪದವರಿಗೆ ಒಳಮೀಸಲಾತಿಯ ಹೋರಾಟ ಸಹಾಯ ಮಾಡಬಾರದು
* ಒಳಮೀಸಲಾತಿಯ ವಿಚಾರದಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದನ್ನು ಖಚಿತವಾಗಿ ವಿರೋಧಿಸಬೇಕು; ಇನ್ನಷ್ಟು ವಿಳಂಬ ಮಾಡಲು ನೆಪಗಳನ್ನು ಒದಗಿಸಬಾರದು
* ಮೀಸಲಾತಿಯು ಹಕ್ಕೇ ಹೊರತು, ಇನ್ನಾರಿಗೋ ಆಗುತ್ತಿರುವ ಅನ್ಯಾಯವಲ್ಲವೆಂಬುದನ್ನು ಸಮರ್ಥವಾಗಿ ಪ್ರತಿಪಾದಿಸಬೇಕು
* ಹಂಚಿಕೆಯ ಪ್ರಶ್ನೆ ಬಂದಾಗ ವಿಸ್ತರಣೆಯ ವಿಚಾರವನ್ನು ಮುಂದೆ ನಿಲ್ಲಿಸಬಾರದು; ಆದರೆ, ವಿಸ್ತರಣೆಯ ವಿಷಯವನ್ನು ಮರೆಯಬಾರದು
* ಮೀಸಲಾತಿಯು ವಂಚಿತ ಸಮುದಾಯಗಳಿಗೆ ಕೊಟ್ಟಿದ್ದು ಅತ್ಯಲ್ಪವಾದ್ದರಿಂದ, ನಿಜವಾದ ಸಮಾನತೆಯ ಕಡೆಗೆ ಸಾಗಲು ಸ್ಥಿತಿ ಮತ್ತು ಅವಕಾಶಗಳೆರಡರಲ್ಲೂ ಸಮಾನತೆಯನ್ನು ಖಾತರಿಪಡಿಸಿಕೊಳ್ಳಬೇಕು

ದೇಶವು ಪ್ರಜಾಪ್ರಭುತ್ವವೇ ಆಗಿದ್ದರೆ ಮೀಸಲಾತಿಯನ್ನು ಒಪ್ಪಿಕೊಳ್ಳಬೇಕು. ಜಾತಿ ಶೋಷಣೆಯು ದೇಶದ ವಾಸ್ತವವಾದ್ದರಿಂದ, ಜಾತಿ ಆಧಾರಿತ ಮೀಸಲಾತಿಯನ್ನೂ ಜಾತಿಗ್ರಸ್ತ ದೇಶದ ಎಲ್ಲಾ ಬಾಂಧವರೂ ಒಪ್ಪಿಕೊಳ್ಳಬೇಕು. ಇದು ಎಷ್ಟು ಸಹಜವೋ, ಒಳಮೀಸಲಾತಿ ಸಹಾ ಅಷ್ಟೇ ಸಹಜವಾದದ್ದು. ಏಕೆಂದರೆ, ಮೀಸಲಾತಿಯನ್ನು ವಿಂಗಡಿಸುವಾಗ ಬಿಡಿ ಜಾತಿಗಳಿಗಲ್ಲದೇ ಜಾತಿಗಳ ಗುಂಪುಗಳಿಗೆ ನೀಡಲಾಗಿದೆ ಮತ್ತು ಆ ಗುಂಪುಗಳು ಏಕರೂಪವಾಗಿಲ್ಲ. ಇದರಿಂದ, ಮತ್ತೆ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಒಳಮೀಸಲಾತಿಯು ಅನಿವಾರ್ಯವಾದುದು. ಮೀಸಲಾತಿ ಒಪ್ಪುವವರ್ಯಾರೂ ಇದನ್ನು ತಾತ್ವಿಕವಾಗಿ ವಿರೋಧಿಸಲು ಸಾಧ್ಯವೇ ಇಲ್ಲ. ಮೀಸಲಾತಿಯನ್ನು ಒಪ್ಪಿಕೊಂಡು ಅದರ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವವರಲ್ಲಿ ಯಾರಾದರೂ ತತ್ವಶಃ ಒಳಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆಂದರೆ, ಅವರು ಆಷಾಢಭೂತಿಗಳೂ, ತತ್ವಹೀನರೂ, ಅವಕಾಶವಾದಿಗಳು ಅಷ್ಟೇ ಆಗಿರಲು ಸಾಧ್ಯ.
ಹಾಗಾದಲ್ಲಿ ಇಂದು ಒಳಮೀಸಲಾತಿಯು ಇಷ್ಟೆಲ್ಲಾ ಗೊಂದಲಗಳಿಗೆ, ವಿವಾದಕ್ಕೆ ಏಕೆ ಕಾರಣವಾಗುತ್ತಿದೆ? ಇದಕ್ಕೆ ಮೂರು ಕಾರಣಗಳಿವೆ. ನಿಜಕ್ಕೂ ಗುಂಪಾಗಿ ಮೀಸಲಾತಿ ಪಡೆದುಕೊಂಡಾಗ ಅದರಿಂದ ಸಾಪೇಕ್ಷವಾಗಿ ಹೆಚ್ಚು ಲಾಭ ಪಡೆದ ಕೆಲವು ಜಾತಿಗಳ ಸ್ಥಾಪಿತ ಹಿತಾಸಕ್ತಿಗಳಿಂದ ವಿರೋಧ ಬರುತ್ತಿದೆ. ಸಾಮಾನ್ಯವಾಗಿ ಅಸ್ಪøಶ್ಯ ಸಮುದಾಯಗಳು ಮಾತ್ರ ಇರುವ ಎಸ್‍ಸಿ ಪಟ್ಟಿಯೊಳಗೆ ಕರ್ನಾಟಕದಲ್ಲಿ ಕೆಲವು ಸ್ಪøಶ್ಯ ಸಮುದಾಯಗಳೂ ಸೇರಿರುವುದರಿಂದ ಇದು ಮತ್ತಷ್ಟು ಸಮಸ್ಯೆಯಾಗಿದೆ. ಆ ಸ್ಪøಶ್ಯ ಜಾತಿಗಳೂ ಸಹ ಶೋಷಿತ ಜಾತಿಗಳೇ ಆಗಿರುವುದರಿಂದ ಅವೆಲ್ಲದರ ನಡುವೆ ಅತ್ಯುತ್ತಮವಾದ ಸೋದರೀ ಸಂವಾದ ನಡೆದು ‘ಹಂಚಿಕೊಳ್ಳುವ ಮಾತುಕತೆ’ ಸಾಧ್ಯವಾಗಬೇಕಿತ್ತು. ಅದು ಅಸಾಧ್ಯವಲ್ಲ; ಕಷ್ಟಸಾಧ್ಯ.
ಎರಡನೆಯದಾಗಿ, ಮೀಸಲಾತಿಯನ್ನೇ ವಿರೋಧಿಸುವ ಶಕ್ತಿಗಳು ಒಳಮೀಸಲಾತಿಯ ವಿಚಾರವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ. ಪ್ರಜಾತಂತ್ರ, ಸಮಾನತೆ, ಜಾತಿವಿನಾಶ, ಸೋದರತೆ ಎಲ್ಲಕ್ಕೂ ವಿರುದ್ಧವಾಗಿರುವ ಶಕ್ತಿಗಳು ದೇಶದ ಬೀದಿಗಳನ್ನು ಮತ್ತು ಸಂಸತ್ತನ್ನು ಆಳಲು ತೊಡಗಿರುವ ಸಂದರ್ಭದಲ್ಲಿ ಇದು ಅತ್ಯಂತ ಘಾತುಕವಾದದ್ದು. ಯಾರು ಮೀಸಲಾತಿಯನ್ನೇ ವಿರೋಧಿಸುತ್ತಿದ್ದಾರೆ, ಅವರೊಂದಿಗೆ ಹೋದರೂ ಪರವಾಗಿಲ್ಲ; ಅತ್ಯಂತ ಶೋಷಿತ ಸಮುದಾಯದ ಕೆಲವು ಮುಖಂಡರು ‘ಒಳಮೀಸಲಾತಿಯ ಕಥನ’ವನ್ನು ಕಟ್ಟುವಾಗ ನಮ್ಮ ಶತ್ರುಗಳು ನಮ್ಮ ಸೋದರರೇ ಎಂದು ಬಹಿರಂಗವಾಗಿ ಹೇಳಲೂ ಹಿಂಜರಿಯಲಿಲ್ಲ. ಜೊತೆಗೆ ಯಾರೆಲ್ಲಾ ಈ ಸಂದರ್ಭದಲ್ಲಿ ನಮ್ಮೊಂದಿಗೆ ನೇರವಾಗಿ ಕೈ ಜೋಡಿಸುತ್ತಿಲ್ಲ ಅವರೆಲ್ಲರೂ ನಮ್ಮ ವಿರೋಧಿಗಳು ಎಂಬ ಸಾರಾಸಗಟು ತೀರ್ಮಾನವನ್ನೂ ಕೆಲವರು ಮಾಡಿದರು. ಇಲ್ಲಿ ಮೀಸಲಾತಿಯ ವಿರೋಧಿಗಳೆಂದರೆ ಬಿಜೆಪಿ ಮತ್ತು ಆರೆಸ್ಸೆಸ್ ಮಾತ್ರವಾಗಿರದೇ, ಅಸಹನೆಯಿಂದ ಇರುವ ದೊಡ್ಡ ಮೇಲ್ಜಾತಿ ಸಮೂಹಗಳೂ ಇವೆ.
ಅಂತಹ ಸಮೂಹಗಳೂ ಇಂದು ಬಿಕ್ಕಟ್ಟಿಗೆ ಬಿದ್ದಿವೆ. ಯಾವ ಸಮುದಾಯಗಳನ್ನು ಭೂಒಡೆತನ, ಗ್ರಾಮೀಣ ಭಾಗದ ಅಧಿಕಾರ ಚಲಾವಣೆ ಮತ್ತು ಆರ್ಥಿಕ ಮೇಲ್ಚಲನೆಯ ಕಾರಣದಿಂದ ಬಲಾಢ್ಯವೆಂದು ಗುರುತಿಸಲಾಗುತ್ತಿತ್ತೋ, ಅವರಲ್ಲಿ ಭೂವಿಘಟನೆ, ಕೃಷಿ ಬಿಕ್ಕಟ್ಟು ಇತ್ಯಾದಿಗಳ ಕಾರಣದಿಂದ ಆರ್ಥಿಕ ಸಮಸ್ಯೆಗೆ ಗುರಿಯಾಗಿವೆ. ಅದೇ ಸಾಮಾಜಿಕ ಅಸಹನೆಯಾಗಿಯೂ ಬೆಳೆಯುತ್ತಿದೆ; ತಮಗೂ ಮೀಸಲಾತಿ ಬೇಕೆಂದು ‘ಭಾರೀ’ ಹೋರಾಟಗಳನ್ನೂ ನಡೆಸುತ್ತಿವೆ. ಎಲ್ಲರಿಗೂ ಜನಸಂಖ್ಯೆಯಾಧಾರಿತ ಮೀಸಲಾತಿ ಕೊಡಲಿ ಎಂದು ಶೋಷಿತ ಸಮುದಾಯಗಳೂ ಹೇಳುತ್ತಿವೆ. ಒಟ್ಟಿನಲ್ಲಿ ಮೀಸಲಾತಿಯು ಹಲವು ರೀತಿಯ ಕ್ಷೋಭೆಗಳಿಗೆ ಕಾರಣವಾಗಿದೆ.
ಎಲ್ಲಾ ಸಮುದಾಯಗಳೊಳಗೂ ಒಂದು ಸಣ್ಣ ವಿಭಾಗವು ಮೇಲ್ಚಲನೆ ಪಡೆದುಕೊಂಡಿರುವುದು ವಾಸ್ತವವಾದರೂ, ಈ ದೇಶದ ಶೋಷಿತ ಜಾತಿಗಳು ಇಡಿಯಾಗಿ ಪ್ರಜಾತಂತ್ರದ ಫಲವನ್ನು ಇನ್ನೂ ಉಂಡೇ ಇಲ್ಲ. ಅಸಮಾನತೆಯಾಗಲೀ, ಜಾತಿ ಕ್ರೌರ್ಯದ ದಬ್ಬಾಳಿಕೆಯಾಗಲೀ ನಿಂತಿಲ್ಲ. ಕೆಲವು ವಿಧಗಳಲ್ಲಿ ಹೆಚ್ಚೂ ಆಗುತ್ತಿದೆ. ಹೀಗಿರುವ ಸಂದರ್ಭದಲ್ಲಿ ಮೀಸಲಾತಿ ಮಾತ್ರವಲ್ಲದೇ ಇನ್ನೂ ಹಲವು ಆಯಾಮಗಳ ವಿಸ್ತರಣೆಯನ್ನು ಪ್ರಜಾಪ್ರಭುತ್ವ ಸಮಾಜ ಹಾಗೂ ಸರ್ಕಾರಗಳು ಯೋಜಿಸಿ ಜಾರಿ ಮಾಡಬೇಕಿತ್ತು. ಆದರೆ, ಶೋಷಿತ ಜಾತಿಗಳೂ ಸೇರಿದಂತೆ ಎಲ್ಲರೂ ಪರಸ್ಪರ ಕಿತ್ತಾಡುವಂತಹ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಾತಾವರಣ ಎಂದು ಬೆಳೆದು ನಿಂತಿದೆ.
ಇದರಿಂದ ಆರ್ಥಿಕ ನೀತಿ ಮತ್ತು ಸಾಮಾಜಿಕ ರಾಜಕೀಯ ರಚನೆಯಲ್ಲಿನ ಸಮಸ್ಯೆಯೆಂದು ಬಗೆದು ನಿಜವಾದ ‘ಶತ್ರು’ಗಳ ವಿರುದ್ಧ ಹೋರಾಟ ನಡೆಸಬೇಕಿದ್ದ ಸಂದರ್ಭದಲ್ಲಿ ದಾರಿ ತಪ್ಪುವಂತಾಗಿದೆ. ಮೀಸಲಾತಿಯ ವಿಸ್ತರಣೆ ಹೋಗಲಿ, ಸರ್ಕಾರೀ ವಲಯದಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಅವಕಾಶಗಳು ಹೆಚ್ಚಾಗುವ ಬದಲು ಕಡಿಮೆಯಾಗುತ್ತಿವೆ. ಗುತ್ತಿಗೆ ಪದ್ಧತಿಯ ಹೆಸರಿನಲ್ಲಿ ಇದುವರೆಗೆ ಇದ್ದ ಅವಕಾಶಗಳೂ ಕಿತ್ತುಕೊಂಡು ಹೋಗುತ್ತಿವೆ. ಹಾಗಾಗಿ ಮೀಸಲಾತಿಯಿಂದ ಅನುಕೂಲ ಪಡೆದುಕೊಂಡಿರುವ ಮತ್ತು ಪಡೆದುಕೊಳ್ಳುವ ಸಾಧ್ಯತೆಯಿರುವ ಎಲ್ಲಾ ಸಮುದಾಯಗಳೂ ಸೇರಿ ಆ ನಿಟ್ಟಿನಲ್ಲಿ ಆಂದೋಲನ ರೂಪಿಸಬೇಕಿದೆ. ದುರಂತವೆಂದರೆ, ‘ಶಾಂತಿಕಾಲದಲ್ಲಿ’ ಅಂತಹ ಯಾವ ಪ್ರಯತ್ನಗಳನ್ನೂ ಮಾಡದೇ, ‘ಈಗೆಷ್ಟು ಸಿಗುತ್ತಿದೆಯೋ ಅದರಲ್ಲಿ ಹಂಚಿಕೊಳ್ಳೋಣ’ ಎಂದು ಒಳಮೀಸಲಾತಿ ಹೋರಾಟಗಾರರು ಕೇಳಿದಾಗ ಇಂಥವೆಲ್ಲಾ ಮುಂದೆ ಬರುತ್ತವೆ. ಇದು ಮೀಸಲಾತಿ ವಂಚಿತ ದಮನಿತ ಜಾತಿಗಳಲ್ಲಿ ಸಿನಿಕತೆಯನ್ನು ಹುಟ್ಟಿಸುತ್ತದೆ.
ಮುಂದಿನದ್ದು, ಒಳಮೀಸಲಾತಿಯು ಸಾಂವಿಧಾನಿಕವಾಗಿ ಸಾಧುವೇ ಎಂಬ ಪ್ರಶ್ನೆ. ಮೀಸಲಾತಿಯನ್ನು ಸಂವಿಧಾನ ಜಾರಿ ಮಾಡಬೇಕೆಂದು ಹೇಳುವಾಗ, ಒಳಮೀಸಲಾತಿಯು ಅಸಾಂವಿಧಾನಿಕವಾಗಲು ಸಾಧ್ಯವಿಲ್ಲ. ಹೆಚ್ಚೆಂದರೆ, ತಾಂತ್ರಿಕ ಕಾರಣಗಳಿಗಾಗಿ ಸಂವಿಧಾನ ತಿದ್ದುಪಡಿಯೊಂದರ ಅಗತ್ಯ ಬೀಳಬಹುದು ಅಷ್ಟೇ. ಅದಕ್ಕಾಗಿ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ (ಅಖಿಲ ಭಾರತ ಮಟ್ಟದ ಚಳವಳಿಯೊಂದನ್ನು ರೂಪಿಸುವುದು ಅಷ್ಟು ಸುಲಭವಲ್ಲದ್ದರಿಂದಲೂ ರಾಜ್ಯ ಸರ್ಕಾರಗಳೇ ಗುರಿಯಾಗಿವೆ), ಕೇಂದ್ರಕ್ಕೆ ಶಿಫಾರಸ್ಸನ್ನು ಕಳಿಸಲು ವಿವಿಧ ರಾಜ್ಯಗಳಲ್ಲಿ ಆಂದೋಲನಗಳು ನಡೆಯುತ್ತಿವೆ. ಅಂತಹ ಆಂದೋಲನವು ಕರ್ನಾಟಕದಲ್ಲಿ ನಡೆದು ಜಸ್ಟೀಸ್ ಸದಾಶಿವ ಆಯೋಗ ರಚನೆಯಾಗಿ, ವರದಿಯು ಸರ್ಕಾರಕ್ಕೂ ಸಲ್ಲಿಕೆಯಾಗಿದೆ ಮತ್ತು ವರದಿಯ ‘ಸೋರಿಕೆ’ಯೂ ಆಗಿದೆ.
ವಿವಿಧ ಜಾತಿಗಳನ್ನು ಧ್ರುವೀಕರಣ ಮಾಡುವ ಮತ್ತು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವ ರಾಜಕಾರಣವು, ಬಿಜೆಪಿಯ ಬೆಳವಣಿಗೆಯ ಜೊತೆಗೆ ಮತ್ತಷ್ಟು ಬೆಳೆದಿದೆ. ಹಾಗಾಗಿ ಸಲ್ಲಿಕೆಯಾದ ವರದಿಯ ಸೋರಿಕೆಯು ಅಂತಹ ಎತ್ತಿಕಟ್ಟುವ ರಾಜಕಾರಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಇದರಲ್ಲೇನಿದೆ ಎಂಬ ಸುಳಿವೇ ಸಾಕಷ್ಟು ವಿರೋಧಕ್ಕೆ ಕಾರಣವಾಗಿರುವಾಗ, ಅದೆಷ್ಟೇ ವೈಜ್ಞಾನಿಕ ಮತ್ತು ಪ್ರಜಾತಾಂತ್ರಿಕವಾಗಿದ್ದರೂ, ಸಂಪೂರ್ಣ ಹೊರಬಿದ್ದಾಗಲೂ ಮತ್ತಷ್ಟು ವಿರೋಧಕ್ಕೇ ಎಡೆ ಮಾಡಿಕೊಡುತ್ತದೆ. ಹಾಗೆಂದು ಸಾರ್ವಜನಿಕ ಚರ್ಚೆ ಮಾಡದೇ ಅಂಗೀಕರಿಸಿ ಎಂದು ಹೇಳುವುದು, ಯಾರಿಗೆ ಅದು ತಮ್ಮ ಪರವಾಗಿದೆ ಎಂದು ಖಚಿತವಾಗಿದೆಯೋ ಅವರಿಗೆ ಮಾತ್ರ ಸರಿಯೆನಿಸುತ್ತದೆ. ಸಾರ್ವಜನಿಕ ಚರ್ಚೆ ಆಗಲಿ ಎಂದು ಹೇಳುತ್ತಿರುವವರು ವಿಳಂಬಕ್ಕೆ ಮತ್ತು ಮತ್ತಷ್ಟು ಗೋಜಲಿಗೆ ಕಾರಣವಾಗಲಿ ಎಂಬ ಕಾರಣಕ್ಕೇ ಹೇಳುತ್ತಿದ್ದಾರೆಂದು ಅನಿಸಲೂ ಕಾರಣವಿದೆ.
ಒಳಮೀಸಲಾತಿಯು ನ್ಯಾಯಬದ್ಧವೆಂದು ಒಪ್ಪಿದ್ದರೆ, ಅದಕ್ಕಾಗಿಯೇ ಸದಾಶಿವ ಆಯೋಗ ರಚನೆಯಾಗಿದ್ದರೆ, ಆ ವರದಿಯಲ್ಲೇನಿದೆಯೆಂದು ಪರಿಶೀಲಿಸಿ, ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕ ಮುಂದುವರೆದು ಒಳಮೀಸಲಾತಿಯ ಜಾರಿಯ ಮುಂದಿನ ಹೆಜ್ಜೆಯ ಕಡೆಗೆ ಹೋಗಬೇಕು. ಅವ್ಯಾವನ್ನೂ ಮಾಡದೇ ಸುಮ್ಮನೇ ಕೂರುವ ಕೆಲಸವನ್ನೂ ಯಾವ ಪಕ್ಷವೂ ಮಾಡಬಾರದು. ಇದರ ಹೆಚ್ಚಿನ ಲಾಭವನ್ನು ಬಿಜೆಪಿಯು ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಉಳಿದವರಿಗೆ ಇದು ಉಗುಳಲೂ ಆಗದ, ನುಂಗಲೂ ಆಗದ ತುತ್ತು. ವಿಳಂಬವನ್ನು ಅಥವಾ ಧ್ರುವೀಕರಣವನ್ನು ಯಾರು ಬಯಸುತ್ತಿದ್ದಾರೋ ಅವರನ್ನು ಎಲ್ಲರೂ ಸೇರಿ ವಿರೋಧಿಸಬೇಕು.
ಈ ಬರಹದ ಆರಂಭದಲ್ಲೇ ಹೇಳಿರುವ ಮಾತುಗಳನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಒಂದನ್ನು ಇನ್ನೊಂದಕ್ಕೆ ಪೂರ್ವಶರತ್ತು ಮಾಡುತ್ತಾ, ಒಬ್ಬೊಬ್ಬರು ಒಂದೊಂದಕ್ಕೆ ಹೆಚ್ಚಿನ ಒತ್ತು ಕೊಡುತ್ತಾ ಸಾಗುವುದರಿಂದ ಸಮಸ್ಯೆ ಹೆಚ್ಚಾಗಿದೆ. ‘ಮೀಸಲಾತಿಯ ಹಂಚಿಕೆಯ ವಿಚಾರದ ಚರ್ಚೆ ಇದ್ದಾಗ, ಮಿಕ್ಕೆಲ್ಲವನ್ನೂ ತಂದು ನಿಲ್ಲಿಸುವುದು ಸರಿಯೇ?
ಮಿಕ್ಕ ವಿಚಾರಗಳಿಗೆ ಒಟ್ಟಿಗೆ ಫೈಟ್ ಮಾಡೋಣ, ಈ ಸದ್ಯ ಇದರ ಬಗ್ಗೆ ಹೇಳಿ. ಇಲ್ಲವಾದರೆ ನಮಗೆಂದಿಗೂ ಸಿಗದ ಮೀಸಲಾತಿಗಾಗಿ ನಾವ್ಯಾಕೆ ನಿಮ್ಮ ಜೊತೆ ಫೈಟಿಗೆ ಬರಬೇಕು?’ ಎಂಬ ಮಾತಿನಲ್ಲಿ ತಪ್ಪೇನಿಲ್ಲ. ಹಾಗಾದರೆ ಮೀಸಲಾತಿಯ ವಿಸ್ತರಣೆಯ, ಮೀಸಲಾತಿಯಾಚೆಗೂ ಮಾಡಬೇಕಿರುವ ಸಮಾನತೆಯ ಹೋರಾಟದ ಮುಂಚೂಣಿ ಪಾತ್ರ ವಹಿಸಬೇಕಾದವರು ಯಾರು? ಇನ್ಯಾರೋ ಮುಂಚೂಣಿ ಪಾತ್ರ ವಹಿಸಲಿಲ್ಲವೆಂದು ದೂರಿಕೊಂಡು ನಮ್ಮ ನಮ್ಮ ಆದ್ಯತೆಗಳಿಗೆ ಸೀಮಿತವಾಗುವುದೂ ಸಹಾ ಒಳಗೊಳಗೇ ಕುಯ್ಯಲು ಕಾರಣವಾಗಿದೆ.
ಸರ್ಕಾರೀ ವಲಯದ ಮೀಸಲಾತಿಯಿಂದ ಹೆಚ್ಚೇನೂ ಪ್ರಯೋಜನವಿಲ್ಲ; ಖಾಸಗೀಕರಣ ಹೆಚ್ಚಾಗುತ್ತಿದೆ; ಹಾಗಾಗಿ ಖಾಸಗಿ ರಂಗದಲ್ಲಿ ಮೀಸಲಾತಿಯೇ ನಮ್ಮ ಆದ್ಯತೆಯಾಗಬೇಕು ಎನ್ನುವವರೂ ಇದ್ದಾರೆ. ಖಾಸಗಿ ರಂಗದಲ್ಲಿ ಮೀಸಲಾತಿ ಸಿಕ್ಕರೂ, ಇಂದಿಗೂ ಅತೀ ದೊಡ್ಡ ಸಂಘಟಿತ ವಲಯದ ಉದ್ಯೋಗದಾತ ಸರ್ಕಾರವೇ ಆಗಿದೆ. ಖಾಸಗಿ ರಂಗದಲ್ಲೂ ಸಂಘಟಿತ ವಲಯವನ್ನು ಬೆಳೆಸುವ ಕಡೆಗೆ ನಾವು ಹೋರಾಡಬೇಕು. ವಾಸ್ತವ ಹೇಗಿದೆಯೆಂದರೆ, ಸರ್ಕಾರೀ ಗುತ್ತಿಗೆ ನೌಕರಿಯಲ್ಲಿ ಇರುವ ಹೆಚ್ಚಿನವರು ಶೋಷಿತ ಸಮುದಾಯಗಳಿಗೆ ಸೇರಿದವರೇ ಆಗಿದ್ದಾರೆ. ಅವರನ್ನು ಕಿತ್ತುಹಾಕಿ, ನೇರ ನೇಮಕಾತಿ ಮಾಡಿಕೊಳ್ಳಿ ಎಂದು ವಾದಿಸುವವರು, ಗುತ್ತಿಗೆಯ ಸಮಸ್ಯೆಯಲ್ಲಿ ಬಳಲಿ ಬೆಂಡಾದವರ ಹಕ್ಕನ್ನು ಮರೆಯುತ್ತಾರೆ. ಈ ರೀತಿಯ ಪಾಕ್ಷಿಕ ಒತ್ತಿನ, ಸೀಮಿತ ಆದ್ಯತೆಗಳ ಆಂದೋಲನಗಳು ಒಳಗಿನವರನ್ನೇ ಕುಯ್ಯತೊಡಗುತ್ತವೆ.
ಸಮಗ್ರವಾದ ಹೋರಾಟದ ಕಡೆಗೆ ಎಲ್ಲರೂ ಜೊತೆಗೂಡಿ ಸಾಗಬೇಕು; ಆದರೆ ಯಾರೂ ಯಾವುದನ್ನೂ ಪೂರ್ವಷರತ್ತು ಮಾಡದೇ, ವಿಳಂಬಕ್ಕೆ ಎಡೆಮಾಡಿಕೊಡದೇ, ಶೋಷಿತ ಸಮುದಾಯಗಳ ಹಕ್ಕಿನ ಪ್ರತಿಪಾದನೆಯನ್ನೂ ಸಮರ್ಥವಾಗಿ ಮಾಡುತ್ತಾ ಮುಂದಕ್ಕೆ ಹೋಗುವುದಷ್ಟೇ ದಾರಿ. ಮೀಸಲಾತಿಗೇ ವಿರುದ್ಧ ಇರುವವರಿಗೆ ಒಳಮೀಸಲಾತಿಯ ಹೋರಾಟವು ನೆರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಎಲ್ಲರೂ ಹೊರಬೇಕೆಂಬ ಒಂದು ಪೂರ್ವಷರತ್ತನ್ನು ಮಾತ್ರ ಹಾಕಿಕೊಳ್ಳಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ವರೆಗೂ ಎಲ್ಲಾ ರಾಜಕಾರಣಿಗಳು ಒಳಮೀಸಲಾತಿಯ ವರದಿಗೆ ಜಾಣ ಕುರುಡುತನ ತೋರಿರುವುದು ಎಡಗಯ್ ಗುಂಪಿನ ಬಗೆಗೆ ಇರುವ ಅಸಡ್ಡೆತನವನ್ನು ಬಯಲು ಮಾಡಿದೆ.

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...