HomeUncategorizedಕರಾವಳಿ: ಉಲ್ಟಾ ಹೊಡೆಯುತ್ತಿದೆ ಧರ್ಮಕಾರಣದ ಸಮೀಕರಣ!!

ಕರಾವಳಿ: ಉಲ್ಟಾ ಹೊಡೆಯುತ್ತಿದೆ ಧರ್ಮಕಾರಣದ ಸಮೀಕರಣ!!

- Advertisement -
ಕಡಲತಡಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚುನಾವಣಾ ಆಖಾಡದಲ್ಲಿ ಧರ್ಮಕಾರಣ ಹದಗೊಳ್ಳುತ್ತಿದೆ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ 2013ರ ಕದನ ಕಾರಣಗಳಿಗೂ ಈ ಬಾರಿ ರಣೋತ್ಸಾಹಕ್ಕೂ ಅಂಥ ವ್ಯತ್ಯಾಸವೇನೂ ಕಾಣಿಸದು. ಅದೇ ಹಿಂದೂತ್ವದ ಹರಾಕಿರಿ, ಹಿಂದೂ ಹೆಣ್ಣಿನ ಮಾನ-ಗೋಪ್ರಾಣ ಸಬೂಬಿನ ಅನೈತಿಕ ಪೊಲೀಸ್‍ಗಿರಿ ಚುನಾವಣೆ ತೆವಲಿಗೆ ನೆಪವಾಗಿದೆ. ಬಿಜೆಪಿ ಪಾರುಪತ್ಯವಿದ್ದಾಗ ಚರ್ಚ್-ಪಬ್ ಮೇಲೆ ದಾಳಿ, ಜಾನುವಾರು ವ್ಯಾಪಾರಿ ಸಾಬಿಗಳ ಜೀವ ತೆಗೆದಂಥ ಭೀಭತ್ಸ ಹಲ್ಲೆ, ಅನ್ಯಧರ್ಮೀಯ ಪ್ರೇಮಿಗಳ ಮಾನಹರಾಜು ಹಾಕುವ ಪೈಶಾಚಿಕತೆ ಅನಿಯಂತ್ರಿತವಾಗಿ ನಡೆದಿತ್ತು. ಕಾಂಗ್ರೆಸ್ ಕಾಲಕೀರ್ದಿಯಲ್ಲಿ ಚರ್ಚ್ ದಾಳಿ ಒಂದನ್ನು ಬಿಟ್ಟರೆ ಉಳಿದೆಲ್ಲ ಧರ್ಮಗೇಡಿ ಗಂಡಾಗುಂಡಿ ಕರಾವಳಿಯ ಉದ್ದಗಲಕ್ಕೆ ಅದೆಷ್ಟೋ ಆಗಿಹೋಗಿದೆ! ರಕ್ತದ ಕೋಡಿಯೇ ಹರಿದಿದೆ.
1990ರ ದಶಕದಾರಂಭದಲ್ಲಿ ಭರ್ತಿ ಒಂದು ವರ್ಷ ಉತ್ತರ ಕನ್ನಡದ ಭಟ್ಕಳದಲ್ಲಿ ಕೋಮುದಳ್ಳುರಿ ಭುಗಿಲೆದ್ದಿತ್ತು. ಇಂದಿನ ಕೇಂದ್ರ ಸರ್ಕಾರದ ಹಿಂಸೋನ್ಮಾದ ಕೌಶಲ್ಯಾಭಿವೃದ್ಧಿ ಮಂತ್ರಿ ಅನಂತ್ಮಾಣಿ ಯಾನೆ ಅನಂತಕುಮಾರ್ ಹೆಗಡೆಯೇ ಅಂದಿನ ಭಟ್ಕಳ ಭಾನ್ಗಡಿಯ ರೂವಾರಿಯಾಗಿದ್ದಾತ! ಆ ಅಮಾನುಷ ಕಾಲಘಟ್ಟದಲ್ಲಿ ಹಲವು ಮುಸಲ್ಮಾನರ ಹೆಣ ಬಿದ್ದಿತ್ತು; ಹಿಂದುತ್ವದ ಹರಿಕಾರನಂತಿದ್ದ ಡಾ. ಚಿತ್ತರಂಜನ್, ತಿಮ್ಮಪ್ಪ ನಾಯ್ಕನಂಥವರೂ ಬಲಿಯಾಗಿದ್ದರು. ಗುರುರಂಜನ್ ಡಾಕ್ಟರ್‍ರ ಆಹುತಿ ಶಿಷ್ಯ ಅನಂತ್ಮಾಣಿಯನ್ನು ಅರ್ಹತೆಯಿಲ್ಲದಿದ್ದರೂ ಸತತವಾಗಿ ಎಂಪಿಯಾಗಿ ಮಾಡಿತು. ಬುತ್ತಿ ಮಾಣಿಯಾಗಿದ್ದ ಅನಂತ್ಮಾಣಿ ಸಂಸದನಾಗುತ್ತಲೇ ಬರೀ ಭೀಷಣ ಭಾಷಣಕ್ಕಷ್ಟೇ ಹಿಂದೂತ್ವ ಸೀಮಿತ ಮಾಡಿಕೊಂಡು ಸ್ವಜೀರ್ಣೋದ್ಧಾರ ಮಜಬೂತಾಗಿ ಮಾಡಿಕೊಂಡಿದ್ದಾನೆ. ಡಾ. ರಂಜನ್, ತಿಮ್ಮಪ್ಪ, ನಾಯ್ಕರ ಕಗ್ಗೊಲೆಗಳು ಪತ್ತೆಯಾಗದ ಪ್ರಕರಣವೆಂದು ಸಿಬಿಐ ಹೇಳಿದರೂ ಮಾಣಿ ತಲೆ ಕೆಡಿಸಿಕೊಳ್ಳಲಿಲ್ಲ.
ಆ ನಂತರದ ಸುಮಾರು ಎರಡು ದಶಕ ಉತ್ತರಕನ್ನಡ ತಣ್ಣಗಿತ್ತು. ಅನಂತ್ಮಾಣಿ ಹಿಂದೂತ್ವ ಬಿಟ್ಟು ಧನತ್ವಕ್ಕೆ ಮಹತ್ವ ಕೊಟ್ಟಿದ್ದರಿಂದ ಉತ್ತರ ಕನ್ನಡ ನೆಮ್ಮದಿಯಿಂದಿತ್ತು. ಯಾವಾಗ ಅಯೋಗ್ಯ ಅನಂತ್ಮಾಣಿಯನ್ನು ಮೋದಿ ಮಹಾತ್ಮ ಕೇಂದ್ರ ಮಂತ್ರಿ ಮಾಡಿದರೋ ಆಗ ಜಿಲ್ಲೆ ಆತಂಕದ ಮಡುವಿಗೆ ಬಿತ್ತು. ಉತ್ತರ ಕನ್ನಡ ಬಿಜೆಪಿಯನ್ನು ಕಬ್ಜಾ ಮಾಡಿಕೊಂಡಿರುವ ಅನಂತ್ಮಾಣಿಗೆ ಲೀಡರಿಕೆ ಖದರು ಕುದುರಿಸಿಕೊಳ್ಳಲು ಕೋಮು  ಸಂಘರ್ಷ ಬೇಕಾಗಿತ್ತು. ಜಿಲ್ಲೆಯ ಎಲ್ಲ ಆರು ಅಸೆಂಬ್ಲಿ ಕ್ಷೇತ್ರದಲ್ಲಿ ಆರೆಂಟು ಕುಂಕುಮಧಾರಿ ಪುಂಡರಿಗೆ ಬಿಜೆಪಿ ಟಿಕೆಟ್‍ನ ಮದ ತುಂಬಿ ಮತಾಂಧ ಮಸಲತ್ತಿಗೆ ಅಣಿಗೊಳಿಸತೊಡಗಿದ್ದ. ಪರಿಣಾಮ ಹೊನ್ನಾವರದ ಪರೇಶ್ ಮೇಸ್ತ್ ಎಂಬ ಪಾಪದ ಮೀನುಗಾರರ ಪೋರನ ಸಂಶಯಾಸ್ಪದ ಸಾವು ಮುಂದಿಟ್ಟುಕೊಂಡು ಇಡೀ ಜಿಲ್ಲೆಗೆ ಮಾಣಿ ಪುಂಡು ಪಡೆ ಒಂದು ರೌಂಡು ಬೆಂಕಿಯಿಟ್ಟು ಹುತ್ತ ಸೇರಿಕೊಂಡಿದೆ!  ಇಷ್ಟು ದಿನ ಪಕ್ಕದ ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾವಳಿ ಮಾಡುತ್ತಿದ್ದ ಮಲೇಯ ವಿದ್ವೇಷ ಈಗ ಉತ್ತರ ಕನ್ನಡವನ್ನು ಇಡಿಯಾಗಿ ಆವರಿಸಿದೆ. ಇಷ್ಟಾದರೂ ಬುರ್ನಾಸ್ ಬುದ್ಧಿಯ ಅನಂತ್ಮಾಣಿಗೆ ಇಡೀ ಜಿಲ್ಲೆ ಪ್ರಭಾವಿಸುವ ಆ್ಯಂಟಿ ಹೀರೋ ಕೂಡ ಆಗಲಾಗದ ಎಡವಿ ಬಿದ್ದಿದ್ದಾನೆ. ಸಂವಿಧಾನ, ದಲಿತರು, ಅಂಬೇಡ್ಕರ್ ಬಗ್ಗೆ ಬಾಯಿಗೆ ಬಂದಂತೆ ಬೊಗಳುವ ಮಾಣಿ ಈಗ ಬಿಜೆಪಿಗೆ ಅನಿವಾರ್ಯ ಅನಿಷ್ಟದಂತಾಗಿದ್ದಾನೆ!!
ಅತ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಅವಳಿ ಜಿಲ್ಲೆಯ ಕೇಸರಿ ಪಾಳೆಯವೂ ಅಧಃಪತನದ ದುಃಸ್ವಪ್ನದಿಂದ ಬೆಚ್ಚಿಬಿದ್ದಿದೆ! ಜನ ಸಮೂಹವನ್ನು ಸಾತ್ವಿಕವಾಗಿ ಸೆಳೆಯುವ  ಮುಖಂಡ ಮಣಿಗಳ್ಯಾರೂ ಕೇಸರಿ ಬಿಡಾರದಲ್ಲಿ ಅವತರಿಸುತ್ತಿಲ್ಲ. ಹೊಡಿ, ಬಡಿ, ಕೊಚ್ಚು, ಕೊಲ್ಲು ನೀತಿಯ ಧನದಾಹಿ ನೇತಾರರಿಂದ ಎರಡೂ ಜಿಲ್ಲೆಯ ಬಿಜೆಪಿ ಎಂದರೆ ಜನರಿಗೆ ವಾಕರಿಕೆ ಬರುವಂತಾಗಿದೆ. ಡಾ. ವಿ.ಎಸ್. ಆಚಾರ್ಯನಂಥ ನಾಜೂಕಯ್ಯನ ನಿರ್ಗಮನದ ನಂತರ ಉಡುಪಿ ಬಿಜೆಪಿ ಸೂತಕದ ಛಾಯೆಯಿಂದ ಹೊರಗೇ ಬಂದಿಲ್ಲ. ಕೂಗು ಮಾರಿ ಕುಖ್ಯಾತಿಯ ಬೇಬಿಯಕ್ಕ ಯಾನೆ ಶೋಭಾ ಕರಂದ್ಲಾಜೆಗೆ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತನೂ ಕೇರ್ ಮಾಡುವುದಿಲ್ಲ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಪಾಲಿಗೆ ಚೆಡ್ಡಿ ಚಮತ್ಕಾರಿ ಕಲ್ಲಡ್ಕ ಪ್ರಭಾಕರ ಭಟ್ಟ ಮಾತ್ರವಲ್ಲ ಸ್ವಯಂಘೋಷಿತ ಏಕಮೇವಾದ್ವಿತೀಯ ನಾಯಾಕಗ್ರೇಸ!  ಒಂದು ಕೈಲಿ ಟಿಕೆಟ್, ಮತ್ತೊಂದು ಕೈಲಿ ಗೇಟ್‍ಪಾಸ್ ಹಿಡಿದುಕೊಂಡು ರಿಂಗ್ ಮಾಸ್ತರಿಕೆ ಗತ್ತಿನಲ್ಲಿ ಬಿಜೆಪಿಗಳ ಆಟ ಆಡಿಸುವ ಕಲ್ಲಡ್ಕ ಭಟ್ರೂ ಹಿಂದಿನ ಹಿಡಿತ ಉಳಿಸಿಕೊಳ್ಳಲಾಗಿಲ್ಲ. ಹಾಲಾಡಿ ಶ್ರೀನಿವಾಸ್ ಶೆಟ್ಟಿ, ನಳಿನ್ ಕುಟೀಲು, ಸದಾ ಗೌಡನಂಥ ಲಾಟ್-ಪುಟ್‍ಗಳೇ ಭಟ್ರಿಗೆ ತಿರುಗಿ ನಿಂತು ಗುರಾಯಿಸುವ ಮಟ್ಟ ಮುಟ್ಟಿದ್ದಾರೆ.
ಅಭ್ಯರ್ಥಿಗಳ ಆಯ್ಕೆಗೆ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಭೂಪರು ನಡೆಸಿ ಸಮೀಕ್ಷೆಗಳೇ ಗಂಡಾಂತರಕಾರಿ ಆಗಿರುವುದು ಮಜಾ ಆಗಿದೆ. ಸ್ಥಳೀಯ ಕೋರ್ ಕಮಿಟಿ ಶಿಫಾರಸು ಮಾಡಿದ ಹೆಸರುಗಳಿಗೂ ಸಮೀಕ್ಷಾ ಚಾಂಪಿಯನ್‍ಗಳು ಲಿಸ್ಟ್‍ಗೂ ತಾಳೆಯೇ ಆಗುತ್ತಿಲ್ಲ. ಸಮೀಕ್ಷೆಯಲ್ಲಿ ಮುಂದಿರುವವರ ಕಾಲು ಹಿಡಿದು ಎಳೆಯುತ್ತಿದ್ದಾರೆ. ಕಲ್ಲಡ್ಕ, ಕಟೀಲು, ಶೋಭಕ್ಕ, ಅನಂತ್ಮಾಣಿ, ಸದಾಗೌಡ ವಗೈರೆ ಬಿಜೆಪಿ ಮಾಂಡಲೀಕರು. ತಮ್ಮ ಅಡಿಯಾಳುಗಳಷ್ಟೇ ಶಾಸಕರಾಗಬೇಕೆಂಬ ದೂ(ದು)ರಾಲೋಚನೆ ಈ ಪಟ್ಟಭದ್ರ ಪರಾಕ್ರಮಿಗಳದು. ಮೂಡಬಿದರೆ, ಪುತ್ತೂರು, ಭಟ್ಕಳ, ಶಿರಸಿಯಂಥ ಮೂರ್ನಾಲ್ಕು ಕ್ಷೇತ್ರದ ಸಮಸ್ಯೆ ಬಿಟ್ಟರೆ ಕಾಂಗ್ರೆಸ್ ಟಿಕೆಟ್ ಕಮಿಟಿಗೆ ಅಂಥ ತಲೆ ನೋವೇನೂ ಇಲ್ಲ. ಆದರೆ ಹಾಲಿ ಶಾಸಕರಲ್ಲಿ ಕೆಲವರು ಬಣ್ಣಗೆಟ್ಟಿದ್ದಾರೆ. ಕರಾವಳಿಯ ಒಟ್ಟು 19 ಕ್ಷೇತ್ರಗಳ ಪೈಕಿ ಹಿಂದಿನ ಬಾರಿ ಬರೀ ಮೂರರಲ್ಲಿ ಗೆದ್ದಿದ್ದ ಬಿಜೆಪಿ ಈ ಸಲ ಆಡಳಿತ ವಿರೋಧಿ ಅಲೆಯೇರಿ ಇನ್ನೊಂದೆರಡು ಮೂರು ಸ್ಥಾನ ಹೆಚ್ಚಿಗೆ ಪಡೆಯುವ ಸಾಧ್ಯತೆಯಿದೆ.
ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಪರಿಸರ, ಜೀವಸಂಕುಲ ಪೀಡಿಸುವ ಹತ್ತಾರು ಸಮಸ್ಯೆಗಳಿವೆ. ಮತೋನ್ಮಾದಿ ಬಿಜೆಪಿಗಳಿಗೆ, ಹೇತ್ಲಾಂಡಿ ಕಾಂಗ್ರೆಸಿಗರಿಗೆ ಇದ್ಯಾವುದರ ಖಬರೇ ಇಲ್ಲ. ಮರಳು ಸಮಸ್ಯೆ, ಬುಡಕಟ್ಟು ಸಮುದಾಯದ ಸಂಕಷ್ಟ, ಅರಣ್ಯ ಅತಿಕ್ರಮಣ-ಖುಷ್ಕಿ ಜಮೀನಿನ ಒಡೆತನದ ತೊಂದರೆ, ಎತ್ತಿನ ಹೊಳೆ ಯೋಜನೆಯ ಅವಾಂತರ, ಅಡಿಕೆ ಮಾನದ ಪ್ರಶ್ನೆ, ಮೀನುಗಾರರ ಗೋಳು…. ಇದ್ಯಾವುದೂ ಬಿಜೆಪಿ-ಕಾಂಗ್ರೆಸ್ ಭಂಡರ ಬಾಧಿಸುತ್ತಿಲ್ಲ. ಕರ್ಮಗೇಡಿ ಧರ್ಮಕಾರಣ ಸೂತ್ರ-ಸಿದ್ಧಾಂತ-ಸಮೀಕರಣ ಮಾತ್ರ ಪುಢಾರಿಗಳ ಓಟು ಬೇಟೆಯ ಅಸ್ತ್ರವಾಗಿದೆ. ಈ ಧರ್ಮಸೂಕ್ಷ್ಮ ಬಿಜೆಪಿಗೆ ಉಲ್ಟಾ ಹೊಡೆಯುತ್ತಿದ್ದರೆ, ಕಾಂಗ್ರೆಸ್‍ಗೆ ವರವಾಗಿ ಪರಿಣಮಿಸಿದೆ. ಕರಾವಳಿಗರು ಧರ್ಮಾಂಧ ರಾಜಕಾರಣ ಹಾವಳಿಗೆ ಬೇಸತ್ತುಹೋಗಿದ್ದಾರೆ. ಚುನಾವಣೆಯಲ್ಲಿ ಬಂಪರ್ ಕೊಯ್ಲು ಮಾಡುವ ಲೆಕ್ಕಾಚಾರದಿಂದ ಕೇಸರಿ ಗ್ಯಾಂಗು ಕೋಮುಗಲಭೆ ಎಬ್ಬಿಸಿದಾಗೆಲ್ಲ ಸಂಘ ಸರದಾರರಿಗೆ ಭರ್ಜರಿ ಹಾನಿಯೇ ಆಗಿದೆ. ಈ ಸಲವೂ ಬಂಟ್ವಾಳ, ಕಲ್ಲಡ್ಕ, ಸುರತ್ಕಲ್, ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಭುಗಿಲೆದ್ದ ಸಂಘೀ ಪ್ರಣೀತ ಸಂಘರ್ಷ ಬಿಜೆಪಿಗೆ ಬೂಮ್‍ರಾಂಗ್ ಆಗುವ ಸಂಕೇತ ಕಾಣಿಸುತ್ತಿದೆ. ಕರಾವಳಿಯ ತ್ರಿವಳಿ ಜಿಲ್ಲೆಯಲ್ಲಿ ಒಂದು ರೌಂಡು ಹೊಡೆದಾಗ ಕಂಡುಬಂದ ವಸ್ತುನಿಷ್ಠ ಚಿತ್ರಣ ಇಲ್ಲಿದೆ…
ದಕ್ಷಿಣ ಕನ್ನಡ
ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ 2013ರಲ್ಲಿ ಸುಳ್ಯ ಒಂದರಲ್ಲಷ್ಟೇ ಸೋತಿತ್ತು. ಡಾ. ರಘು ಎಂಬ ಪ್ರಜ್ಞಾವಂತ, ಜನಾನುರಾಗಿ ದಲಿತ ಮುಂದಾಳು ತೀರಾ ಸಣ್ಣ ಅಂತರದಲ್ಲಿ ಎಡವಿದ್ದರು. ಬಿಜೆಪಿಯ ಜನಿವಾರಿಗಳ ಗುಲಾಮನಂತಿರುವ ಅಂಗರ ಮೇರ ಸತತ 6 ಬಾರಿ ಗೆದ್ದರೂ ಕನಿಷ್ಠ ದಲಿತ ಪ್ರಜ್ಞೆ, ಮನುಷ್ಯ ಪ್ರಜ್ಞೆಯನ್ನೂ ಬೆಳೆಸಿಕೊಂಡಿಲ್ಲ. ಈತ ಹೆಸರಿಗಷ್ಟೇ ಶಾಸಕ. ದರ್ಬಾರೆಲ್ಲ ಬಿಜೆಪಿಯ ಬ್ರಾಹ್ಮಣ ಮತ್ತು ಗೌಡ ಪಾಳೇಗಾರರದು ಈ ಸಲ ಅಂಗಾರರ ಮನೆಗೆ ಕಳಿಸಲು ಸುಳ್ಯರ ಜನ ತೀರ್ಮಾನಿಸಿದಂತಿದೆ. ಬಿಜೆಪಿಯ ಭಂಡಾಟದ ಜನರಿಗೆ ಬೇಸರ ಮೂಡಿಸಿದೆ.
ಬಿಜೆಪಿ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಈ ಅಂಗಾರ ಒಬ್ಬರ ಹೆಸರು ಮಾತ್ರ ಇದೆ. ಉಳಿದ ಏಳು ಕಡೆ ಟಿಕೆಟ್ ಹಂಚಿಕೆ ಮಾಡಲಾಗದೆ ಕಲ್ಲಡ್ಕ, ಕಟೀಲು, ಶೋಭಾ, ಸದಾಗೌಡ ಕಚ್ಚಾಡುತ್ತಿದ್ದಾರೆ. ಬಿಜೆಪಿ ಎರಡೆರಡು ಸಮೀಕ್ಷೆ ನಡೆಸಿದರೂ ಅಭ್ಯರ್ಥಿ ಫಿಕ್ಸ್ ಮಾಡಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಸಮೀಕ್ಷಾ ಪಟ್ಟಿ ಮತ್ತು ಸಂಭಾವ್ಯರ ಲಿಸ್ಟ್, ನಡುವಿನ ಹಿತಾಸಕ್ತಿ ಸಂಘರ್ಷ. ಮಂಗಳೂರು ದಕ್ಷಿಣದಿಂದ ವೇದವ್ಯಾಸ ಕಾಮತ್, ಮಂಗಳೂರು ಉತ್ತರದಿಂದ ದನ ಹಿಡಿಯುವವರ ಕ್ಯಾಪ್ಟನ್ ಡಾ. ಭರತ್ ಶೆಟ್ಟಿ, ಉಳ್ಳಾಲದಿಂದ ಹುಬ್ಬಳ್ಳಿ ಈದ್ಗಾದಲ್ಲಿ ಝಂಡಾ ಹಾರಿಸಿದ ಕುಖ್ಯಾತಿಯ ಹುಂಬ ಸತ್ಯಜಿತ್, ಮೂಡಬಿದರೆ ಕ್ಷೇತ್ರದಿಂದ ಉಮಾನಾಥ್ ಕೋಟ್ಯನ್, ಬೆಳ್ತಂಗಡಿಯಿಂದ ಮಾಜಿ ಮಂತ್ರಿ ಗಂಗಾಧರ ಗೌಡರ ಪುತ್ರರತ್ನ ರಂಜನ್ ಗೌಡ ಮತ್ತು ಪುತ್ತೂರಿಂದ ಕೇಂದ್ರ ಮತ್ತು ಸದಾಗೌಡರ ಸಂಬಂಧಿ ಸಂಜೀವ ಮಠಂ ದೂರುಗಳಿಗೆ ಟಿಕೆಟ್ ಕೊಡಲು ಸಂಭಾವ್ಯರ ಪಟ್ಟಿ ತಯಾರಿಸಿದ ಕಲ್ಲಡ್ಕ ಕಮಾಂಡ್ ನಿರ್ಧರಿಸಿತ್ತು. ಇದು ಕುಟೀಲು, ಕಲ್ಲಡ್ಕ, ಸದಾಗೌಡರ ನೈಚ್ಯಾನುಸಂಧಾನದ ಲಿಸ್ಟ್ ಆಗಿತ್ತು. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ನಿಷ್ಠಾವಂತ ಚೆಡ್ಡಿಗಳು ಬೆಂಕಿಬಿದ್ದಂತೆ ಬೊಬ್ಬೆ ಹೊಡೆಯತೊಡಗಿವೆ. ಇದರಿಂದ ಕಂಗಾಲಾದ ಬಿಜೆಪಿ ದೊಡ್ಡವರು ಮೂರನೇ ಸಮೀಕ್ಷೆಗೆ ‘ತಜ್ಞ’ರನ್ನು ಫೀಲ್ಡಿಗೆ ಬಿಟ್ಟಿದ್ದಾರೆ.
ಮಂಗಳೂರು ಉತ್ತರದಲ್ಲಿ ಜೆಡಿಎಸನ ಅಮರನಾಥ ಶೆಟ್ಟರ ಅಳಿಮಯ್ಯ ಡಾ. ಭರತ್‍ಗೆ ಟಿಕೆಟ್ ಕೊಡಲು ಸತ್ಯಜಿತ್ ಪಡೆಯ ದೊಡ್ಡ ವಿರೋಧವಿದೆ. ಇದು ಸತ್ಯಜಿತ್ ‘ಕರ್ಮ’ಭೂಮಿ. ಆತನಿಗೆ ಸಾಬರೆ ಹೆಚ್ಚಿರುವ ಉಳ್ಳಾಲಕ್ಕೆ ಸಾಗಹಾಕಿ ಸೋಲಿಸುವ ತಂತ್ರ ಕಲ್ಲಡ್ಕ ಭಟ್ಟರು. ಮೂಡಬಿದರೆಯಲ್ಲಿ ಕಳೆದ ಬಾರಿ ಸಣ್ಣ ಅಂತರದಲ್ಲಿ ಸೋತಿದ್ದ ಉಮಾನಾಥ ಕೋಟ್ಯಾನ ಈ ಬಾರಿ ಗೆದ್ದರೆ ತನ್ನ ಪಾರುಪತ್ಯಕ್ಕೆ ಹೊಡೆತ ಬೀಳುತ್ತದೆಂಬ ಭಯ ಸಂಸದ ಕಟೀಲ್‍ಗೆ. ಹಾಗಾಗಿ ಆತ ನೆಲೆ-ಬೆಲೆಯಿಲ್ಲದ ತನ್ನ ಹಿಂಬಾಲಕ ಈಶ್ವರ ಕಟೀಲ್ ಪರ ಲಾಬಿ ನಡೆಸಿದ್ದಾನೆ. ವೇದವ್ಯಾಸ ಕಾಮತ್‍ಗೆ ಮಂಗಳೂರು ದಕ್ಷಿಣದಲ್ಲಿ ಟಿಕೆಟ್ ಕೊಡಲು ಮಾಜಿ ಶಾಸಕ ಯೋಗೇಶ್ ಭಟ್ಟ ಅಡ್ಡಗಾಲು ಹಾಕಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗರ ವೈಕುಂಠಕ್ಕೆ ಕಳಿಸಿದ ಆರೋಪದ ನರೇಶ್ ಶೆಣೈನ ಸಂಗಾತಿ ಈ ವೇದವ್ಯಾಸ ಕಾಮತ್.
ಈ ಜಗಳದಲ್ಲೀಗ ಹಳೆ ಹಲಿ ಯೋಗೀಶಭಟ್ಟರ ಹೆಸರು ರಾಜಿ ಅಭ್ಯರ್ಥಿಯಾಗಿ ಪರಿಗಣನೆಗೆ ಬಂದಿದೆ. ಸುರತ್ಕಲ್‍ನಿಂದ ಸತ್ಯಜಿತ್ ಸ್ಪರ್ಧಿಸುವುದಿದ್ದರೆ ತಾನು ಹಿಂದೆ ಸರಿಯುವುದಾಗಿ ಬ್ಲ್ಯೂಬಾಯ್ ಕೃಷ್ಣ ಪಾಲೆಮಾರ್ ಹೇಳುತ್ತಿದ್ದಾರೆ. ಈಗ ಕಾಂಗ್ರೆಸ್‍ನ ಮಂತ್ರಿ ಖಾದರ್ ವಿರುದ್ಧ ಸ್ಪರ್ಧಿಸಲು ಸಂತೋಷ್ ಕುಮಾರ್ ಬೋಳಿಯಾರ್ ಅಥವಾ ಸತೀಶ್ ಕುಂಪಲರಲ್ಲಿ ಒಬ್ಬರ ತಯಾರು ಮಾಡಬೇಕಾಗಿದೆ. ಬಿಜೆಪಿ ಟಿಕೆಟ್ ಕಮಿಟಿ ಕಿಂಗ್‍ಗಳು. ಬೆಳ್ತಂಗಡಿಯಲ್ಲಿ ತನ್ನ ಮಗನಿಗೆ ಅಭ್ಯರ್ಥಿ ಮಾಡದಿದ್ದರೆ ಪಕ್ಷ ಬಿಡುವ ಬೆದರಿಕೆ ಗಂಗಾಧರ ಗೌಡ ಹಾಕುತ್ತಿದ್ದಾರೆ. ಕಳೆದ ಬಾರಿ ಸೋತಿರುವ ಆತನ ಮಗನಿಗಿಂತ ಗಟ್ಟಿ ಕ್ಯಾಂಡಿಡೇಟಿಂಗ್ ಬಿಜೆಪಿಯಲ್ಲಿದ್ದಾರೆಂಬುದು ಚೆಡ್ಡಿ ಚೆತುರರ ವಾದ. ಪುತ್ತೂರಿನಲ್ಲಿ ಸಂಜೀವ್ ಮಠಂದೂರ್‍ಗಿಂತ ಶಕ್ತಿಶಾಲಿ ಅಶೋಕ್‍ಕುಮಾರ್ ರೈ ಎಂಬ ಬಂಟರ ಭೂಪನೆಂಬುದು ಕೇಂದ್ರ ಮಂತ್ರಿ ಸದಾಗೌಡರ ವಿರೋಧಿ ಬಣದ ತರ್ಕ. ಆದರೆ ಈ ರೈ ಕಂಡರೆ ಸಂಸದ ಕುಟೀಲ್‍ಗೆ ಆಗದು. ಆತನಿಗೆ ಕಾಂಗ್ರೆಸ್‍ನ ಶಾಸಕಿ ಶಕುಂತಲಾ ಶೆಟ್ಟಿ ಎಂದರೆ ಭಯ-ಭಕ್ತಿ ಜಾಸ್ತಿ.
ಕಾಂಗ್ರೆಸ್ ಎಲ್ಲ ಏಳು ಶಾಸಕರಿಗೆ ಟಿಕೆಟ್ ಪಕ್ಕಾ ಆಗಿದೆ! ಬಂಟ್ವಾಳದ ಮಂತ್ರಿ ರಮಾನಾಥ ರೈ ಮತ್ತು ಉಳ್ಳಾಳದ ಯು.ಟಿ. ಖಾದರ್‍ರ ಸೋಲಿಸಲು ಕಲ್ಲಡ್ಕ ಭಟ್ರು ತಿಪ್ಪರಲಾಗ ಹಾಕುತ್ತಿದ್ದಾರೆ. ಆದರೆ ಆತನಿಗೆ ಖಾದರ್ ಎದುರು ನಿಲ್ಲಿಸಲು ತಾಕತ್ತಿನ ಹುರಿಯಾಳು ಸಿಗದೇ ಒದ್ದಾಡುತ್ತಿದ್ದಾರೆ; ಬಂಟ್ವಾಳದಲ್ಲಿ ರಮಾನಾಥ ರೈ ಎದುರು ನಿಲ್ಲುವ ರಾಜೇಶ್ ನಾಯಕ್ ಎಂಬ ಪರಿವಾರ ಬಂಟನ ಹಣದ ಗಂಟಿನ ಮೇಲೆ ಕಲ್ಲಡ್ಕನ ಕಣ್ಣು ಎಂದು ಚೆಡ್ಡಿಗಳೇ ಗೇಲಿ ಮಾಡುತ್ತಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿಗೆ ಶಾಸಕಿ ಶಕುಂತಲಾ ಶೆಟ್ಟಿ ಎಂದರಾಗದು. ಆತನ ತಂಡದ ತರಲೆ ಬಿಟ್ಟರೆ ಶಕುಂತಲಾಗೆ ಯಾವ ವಿರೋಧವೂ ಇಲ್ಲ. ಜನರೂ ಈಕೆ ಪರವಾಗಿಲ್ಲ ಎಂದೇ ಹೇಳುತ್ತಾರೆ. ಸದ್ಯದ ಸ್ಥಿತಿ ನೋಡಿದರೆ ಹಿಂದೂತ್ವದ ಹಿಂಸೋನ್ಮಾದ ಬಿಜೆಪಿಗೆ ವರ್ಕ್‍ಔಟ್ ಆದಂತಿಲ್ಲ. ಕೇಸರಿ ಪಡೆ ತಂತ್ರಗಳೆಲ್ಲ ಅದಕ್ಕೆ ತಿರುಗುಬಾಣವಾಗುತ್ತಿದೆ.
ಒಳಜಗಳದಿಂದ ಬಿಜೆಪಿ ತತ್ತರಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಬಹುತೇಕ ಕಡೆ ಸುರಕ್ಷಿತ ವಲಯದಲ್ಲಿರುವಂತೆ ಕಾಣಿಸುತ್ತದೆ. ಮುಲ್ಕಿ ಮೂಡಬಿದರೆ ಕಾಂಗ್ರೆಸ್ ಟಿಕೆಟ್‍ಗೆ ಈ ಬಾರಿ ಪೈಪೋಟಿ ನಡೆದಿದೆ. ಸಿಎಂ ಸಿದ್ದು ಹತ್ತಿರದ ಎಮ್ಮೆಲ್ಸಿ ಐವಾನ್ ಡಿಸೋಜಾ, ಯುವ ಕಾಂಗ್ರೆಸ್‍ನ ಜಿಲ್ಲಾ ಅಧ್ಯಕ್ಷ ಮಿಥುನ್ ರೈ ಮತ್ತು ಹಾಲಿ ಶಾಸಕ ಅಭಯ್‍ಚಂದ್ರ ಜೈನ್ ಟಿಕೆಟ್ ಕಸರತ್ತು ನಡೆಸಿದ್ದಾರೆ. ಜನಾಕ್ರೋಶಕ್ಕೆ ತುತ್ತಾಗಿರುವ ಅಭಯ ಯುವ ಕಾಂಗ್ರೆಸ್ ಹುಡುಗ ಮಿಥುನ್ ಪರ ವಾದ ಮಂಡಿಸುತ್ತಿದ್ದಾರೆ. ಇದು ಐವಾನ್‍ನ ಹಣಿಯಲು ಮೂಡುವ ತಂತ್ರವಷ್ಟೇ. ಐವಾನ್ ಖೂಡ ಇಲ್ಲಿ ಗೆಲ್ಲಲಾರರು ಎಂಬುದು ಕಾಂಗ್ರೆಸ್ ಕಿಂಗ್‍ಗಳಿಗೆ ಗೊತ್ತಿದೆ. ಅಂತಿಮವಾಗಿ ಅಭಯ ಟಿಕೆಟ್ ಪಡೆದಿದ್ದಾರೆ.
ಉಡುಪಿ
ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಭಿನ್ನಮತದಿಂದ ಬಸವಳಿದಿದೆ. ಕುಂದಾಪುರದ ಅಭ್ಯರ್ಥಿಯೆಂದು ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ಬಿಜೆಪಿ ಮೊದಲ ಪಟ್ಟಿಯಲ್ಲಿ ಘೋಷಿಸಿದೆ. ಇದು ಸ್ಥಳೀಯ ನಿಷ್ಠಾವಂತ ಚೆಡ್ಡಿಗಳ ಕೆರಳಿಸಿದೆ. ಶೋಭಕ್ಕ-ಯಡ್ಡಿ ನಂಬಿ ಬಿಜೆಪಿ ಸೇರಿದ್ದ ಹಾಲಾಡಿಗೆ ಟಿಕೆಟ್ ಕೊಡಬಾರದೆಂದು ಸಾಕ್ಷಾತ್ ಕಲ್ಲಡ್ಕ ಭಟ್ರೆ ಸೆಟೆದುನಿಂತಿದ್ರು. ಇದು ತಿಳಿದು ಹಾಲಾಡಿ ಜೆಡಿಎಸ್ ಸೇರಲು ತಯಾರಿ ಕಲ್ಲಡ್ಕ ಭಟ್ರೆ ಸೆಟೆದು ನಿಂತಿದ್ರು. ಇದು ತಿಳಿದು ಹಾಲಾಡಿ ಜೆಡಿಎಸ್ ಸೇರಲು ತಯಾರಿ ನಡೆಸಿದ್ದರು. ಈ ಬೆದರಿಕೆಗೆ ಮಣಿದ ಯಡ್ಡಿ ಕಲ್ಲಡ್ಕ-ಶೋಭಾ ಹಾಲಾಡಿಗೇ ಮಣೆ ಹಾಕಿದ್ದಾರೆ. ಆದರೆ ಮೊದಲಿನಷ್ಟು ಸಲೀಸಾಗಿ ಹಾಲಾಡಿ ಗೆಲ್ಲಲಾರರು. ಆತನಿಗೆ ಎದುರಾಗಿ ಭೂಗತ ಲೋಕದ ನಂಟಿನ-ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಪುಢಾರಿ ರಾಕೇಶ್ ಮಲ್ಲಿ ಅಭ್ಯರ್ಥಿ ಆಗೋದು ಗ್ಯಾರಂಟಿ. ಕಳೆದಾರು ತಿಂಗಳಿಂದ ಬಂಟ್ವಾಳದಿಂದ ಕುಂದಾಪುರಕ್ಕೆ ವಲಸೆ ಬಂದಿರುವ ಮಲ್ಲಿ ಕಬಡ್ಡಿ, ಮದುವೆ, ಮುಂಜಿ, ಪ್ರಸ್ಥ, ಸೋಬ್ನಕ್ಕೆ ಹಣ ಹರಿಸುತ್ತಿದ್ದಾರೆ.
ಹೈವೋಲ್ಟೇಜ್ ಕ್ಷೇತ್ರ ಉಡುಪಿಯಲ್ಲಿ ಮಂತ್ರಿ ಪ್ರಮೋದ್ ಮಧ್ವರಾಜ್ ನಡೆಯಿನ್ನೂ ನಿಗೂಢವಾಗೇ ಇದೆ. ದುಡ್ಡಿನ ದುರಹಂಕಾರದ ಪ್ರಮೋದ್‍ಗೆ ಯಾವ ತತ್ವಾದರ್ಶವೂ ಇಲ್ಲ. ಎಲ್ಲಾ ಗೋಲ್‍ಮಾಲ್ ವ್ಯವಹಾರ ಆತನ ಮೀನು ಎಣ್ಣೆ ಮಿಲ್, ಪೆಟ್ರೋಲ್ ಬಂಕ್, ಪ್ಲಾಟ್ ನಿರ್ಮಾಣ ದಂಧೆಗಳ ‘ಅಕ್ರಮ’ದ ದೌರ್ಬಲ್ಯ ಹಿಡಿದು ಕೇಂದ್ರದ ಬಿಜೆಪಿ ಸರ್ಕಾರ ಪ್ರಮೋದ್‍ಗೆ ಬ್ಲಾಕ್‍ಮೇಲ್ ಮಾಡುತ್ತಿದೆ. ಬಿಜೆಪಿ ಬರುವಂತೆ ಕಾಡುತ್ತಿದೆ. ನಿಯತ್ತಿಲ್ಲದ ಪ್ರಮೋದ್ ಕೂಡ ಹಿಂದೂತ್ವ ಪಕ್ಷ ಸೇರಲು ರೆಡಿಯಿದ್ದಾರೆ. ಆದರೆ ಮಾಜಿ ಶಾಸಕ ರಘುಪತಿ ಭಟ್ಟ, ಜಯಪ್ರಕಾಶ್ ಹೆಗ್ಡೆ, ಉದಯ್‍ಕುಮಾರ್ ಶೆಟ್ಟಿಗಳು ತಿರುಗಿ ನಿಂತಿದ್ದಾರೆ. ನಾಮಪತ್ರ ಕೊಡುವ ಕೊನೆಯ ದಿನದವರೆಗೂ ಪ್ರಮೋದ್ ನಿಲುವು ಗೊತ್ತಾಗದಂತಾಗಿದೆ. ಪ್ರಮೋದ್ ತೊಲಗಿದರೆ ಮಾಜಿ ಶಾಸಕ ಸಭಾಪತಿಗೆ ಆಸ್ಕರ್ ಟಿಕೆಟ್ ಕೊಡಲಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಸಾಲಿನಲ್ಲಿ ರಂಗೀಲಾ ರಘುಪತಿ ಭಟ್ಟ, ಪಕ್ಷಾಂತರಿ ಪಿಂಡ ಜಯಪ್ರಕಾಶ್ ಹೆಗ್ಡೆ, ಬೆತ್ತಲೆ ಕುಖ್ಯಾತಿಯ ಯಶಪಾಲ ಸುವರ್ಣ, ನಯನಾ ಗಣೇಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬರ ಹೆಸರಲ್ಲೂ ಚೆಡ್ಡಿ ಬೆಟ್ಟಿಂಗ್ ನಡೆಯುತ್ತಿದೆ. ಟಿಕೆಟ್ ಕಮಿಟಿ ಸೂಕ್ತ ನಿರ್ಧಾರಕ್ಕೆ ಬರಲಾಗದೇ ಚಡಪಡಿಸುತ್ತಿದೆ.
ಕಾಪು ಕ್ಷೇತ್ರದಲ್ಲಿ ಮಾಜಿ ಮಂತ್ರಿ ಸೊರಕೆಯೇ ಕಾಂಗ್ರೆಸ್ ಹುರಿಯಾಳು. ಒಂದಿಷ್ಟು ಜನಪರ ಕೆಲಸ ಮಂತ್ರಿಗಿರಿ ಕಾಲದಲ್ಲಿ ಮಾಡಿರುವ ಈತ ಬೇರುಗಳನ್ನು ಕ್ಷೇತ್ರದಾದ್ಯಂತ ಇಳಿಸಿದ್ದಾರೆ. ಸ್ವಜಾತಿ ಬಿಲ್ಲವರ, ಅಲ್ಪಸಂಖ್ಯಾತರ ದೊಡ್ಡ ಮೊತ್ತದ ಓಟು ಸಿಗಲಿರುವುದರಿಂದ ಗೆಲ್ಲುವ ಕುದುರೆ ಸೊರಕೆ ಬಿಜೆಪಿ ಅಭ್ಯರ್ಥಿಯಾಗಲು ಮತ್ತದೇ ಬೆತ್ತಲೆ ಭೂಪ ಯಶಪಾಲ ಸುವರ್ಣ, ಮಾಜಿ ಶಾಸಕ ಲಾಲಾಜಿ ಮೆಂಡನ್ ಎಂಬ ಮೊಗವೀರ ಸಮುದಾಯದ ಕಲಿಗಳು, ಬಂಟರ ಭೂಪ-ಗಣಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ನಡುವೆ ಅಹೋರಾತ್ರಿ ಹೋರಾಟ ನಡೆದಿದೆ. ಕಾರ್ಕಳದಲ್ಲಿ ಹಾಲಿ ಶಾಸಕ, ಅರೆಬಿಲ್ಲವ-ಅರೆ ಬ್ರಾಹ್ಮಣ ಸುನಿಲ್‍ಕುಮಾರ್ ಕೇಸರಿ ಕ್ಯಾಂಡಿಡೇಟ್ ಅವ್ಯವಹಾರ, ಪರ್ಸೇಂಟೇಜ್ ದಂಧೆಯಿಂದ ಕ್ಷೇತ್ರದಲ್ಲಿ ಹೆಸರು ಕೆಡಿಸಿಕೊಂಡಿರುವ ಸುನಿಲ್ ಎದುರು ನಿಲ್ಲಲು ಕಾಂಗ್ರೆಸ್‍ನ ಹಿರಿಯ ತಲೆಯಾಳು ವೀರಪ್ಪ ಮೊಯ್ಲಿ ಮಗ ಹರ್ಷ ಮೊಯ್ಲಿ ಎಂಬ ಮುಖೇಡಿ ಕಿತಾಪತಿ ನಡೆಸಿದ್ದರು. ಸ್ವ-ಪಕ್ಷದ ವಿರುದ್ಧವೇ ಟ್ವೀಟಾಯಿಸಿ ಸಿಕ್ಕಿಬಿದ್ದು ಟಿಕೆಟ್ ಕಿತ್ತಾಟದಲ್ಲಿ ಔಟ್ ಆಗಿಹೋದರು.
ಈಗ ಮಾಜಿ ಶಾಸಕ ಸರಳಸಜ್ಜನ ಗೋಪಾಲ ಭಂಡಾರಿ ಮತ್ತು ಕಳಪೆ ಕಂಟ್ರಾಕ್ಟರ್ ಖ್ಯಾತಿಯ ಉದಯಕುಮಾರ್ ಶೆಟ್ಟಿ ನಡುವೆ ಸ್ಪರ್ಧೆ ನಡೆದಿದೆ. ಮುನಿಯಾಲು ಉದಯ ಹಣದ ಹೊಳೆಯೇ ಹರಿಸುತ್ತಿದ್ದಾರೆ. ಅಂತಿಮವಾಗಿ ಜನಾನುರಾಗಿ ಭಂಡಾರಿಗೆ ಟಿಕೆಟ್ ಸಿಕ್ಕಿದೆ. ಸುನಿಲ್‍ಗೆ ಗಂಡಾಂತರ ಕಾದಿದೆ. ಬೈಂದೂರಲ್ಲಾದರೂ ತನಗೆ ಟಿಕೆಟ್ ಕೊಡಿಯೆಂದು ಎಡಬಿಡಂಗಿಯಂತಾಗಿರುವ ಜಯಪ್ರಕಾಶ್ ಹೆಗ್ಡೆ ಕಲ್ಲಡ್ಕ ಭಟ್ಟರ ಎದುರು ಮಂಡಿಯೂರಿ ಕುಳಿತು ಅಳುವುದು ಮೋಜಾಗಿದೆ. ಸುಕುಮಾರ ಶೆಟ್ಟಿ ಪ್ರತಿವಾದ ಕೊಲ್ಲೂರು ಮೂಕಾಂಬಿಕೆ ಪ್ರಸಾದ ಯಡ್ಡಿಗೆ ತಲುಪಿಸಿ ಕಾಪಾಡುವಂತೆ ಕೇಳುತ್ತಲೇ ಇದ್ದಾರೆ. ಕಳೆದ ಬಾರಿ ಸೋತ ಸುಕುಮಾರ ಶೆಟ್ಟಿ, ಜೆ.ಪಿ. ಹೆಗ್ಡೆಗೆ ಬೈಂದೂರಲ್ಲಿ ಕಾಂಗ್ರೆಸ್‍ನ ಗೋಪಾಲ ಪೂಜಾರಿ ಎದುರಿಸುವ ತಾಕತ್ತು ಇಲ್ಲ. ಪೂಜಾರಿ ಮುದಿ ಕಾಲದ ಒಂದಷ್ಟು ಖಯಾಲಿ ಬಿಟ್ಟರೆ ಒಳ್ಳೆಯ ಕೆಲಸಗಾರ ಎನ್ನುತ್ತಾರೆ ಕ್ಷೇತ್ರದ ಮಂದಿ. ಸುಕುಮಾರ ಶೆಟ್ಟಿಯ ದರ್ಪ-ದುರಹಂಕಾರ ಆತನ ಎಮ್ಮೆಲ್ಲೆ ಕನಸಿಗೆ ಕಲ್ಲು ಹಾಕುತ್ತಿದೆ!
ಉತ್ತರ ಕನ್ನಡ
ಉತ್ತರ ಕನ್ನಡದ ಆರೂ ಕ್ಷೇತ್ರದ ಬಿಜೆಪಿ ಟಿಕೆಟ್ ಬಿಕರಿಗೆ ಇಡಲಾಗಿದೆ ಎಂಬ ಸ್ಫೋಟಕ ಸುದ್ದಿ ಚೆಡ್ಡಿ ಬಿಡಾರದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿಬಿಟ್ಟಿದೆ. ಕೇಂದ್ರ ಮಂತ್ರಿ ಅನಂತ್ಮಾಣಿ ಟಿಕೆಟ್ ಹರಾಜಿಗೆ ಹಾಕಿ ಹೆಚ್ಚು ಹಣ ಕೊಟ್ಟವರ ಪರ ಕರಾಮತ್ತು ನಡೆಸಿದ್ದಾರೆಂದು ನಿಷ್ಠಾವಂತರು ಗೋಗರೆಯುತ್ತಿದ್ದಾರೆ. ಬಿಜೆಪಿಯ ಮೊದಲ ಪಟ್ಟಿಯಲ್ಲೇ ಟಿಕೆಟ್ ಭಾಗ್ಯ ಕಂಡಿರುವ ಕಾರವಾರದ ರೂಪಾಲಿ ನಾಯ್ಕ ಹಣವಂತ ಪುಢಾರಿಣಿ. ಟಿಕೆಟ್‍ಗಾಗಿ ಆಕೆಗೆ ಪೈಪೋಟಿ ನೀಡಿದವರೆಲ್ಲರಿಗೂ ಅನಂತ್ಮಾಣಿ ಹತ್ತಿರಕ್ಕೂ ಹೋಗಲಾಗಲಿಲ್ಲ. ಕಾರಣ ರೂಪಾಲಿಯಷ್ಟು ಕಾಸಿನ ಕಸುವು ಇಲ್ಲದಿರುವುದಾಗಿತ್ತು. ರೂಪಾಲಿಗೆ ರಾಜಕೀಯ ದೀಕ್ಷೆ ನೀಡಿದ ಗುರು ಆನಂದ ಅಸ್ನೋಟಿಕರ್ ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್‍ನಿಂದ ಹಾಲಿ ಶಾಸಕ ಸತೀಶ್ ಸೈಲ್ ಪಕ್ಕಾ ಈ ಐರಾಯಣ-ಮೈರಾಯಣ ಕಾಳಗದಲ್ಲಿ ರೂಪಾಲಿ ಗೆಲ್ಲುವುದು ಕಷ್ಟ!
ಕುಮಟಾ ಬಿಜೆಪಿ ಟಿಕೆಟ್‍ಗಾಗಿ ಬರೋಬ್ಬರಿ ಎರಡು ಡಜನ್ ಮಂದಿ ಕಳೆದಾರೆಂಟು ತಿಂಗಳಿಂದ ಹಾರಾಡಿದ್ದರು. ಹಣ ಹರಿಸಿದ್ದರು. ಮಾಜಿ ಶಾಸಕ ದಿನಕರ ಶೆಟ್ಟಿ ಜೆಡಿಎಸ್ ಬಿಟ್ಟು ಯಡ್ಡಿ-ಶೋಭಾ ಪಾದತಲದಲ್ಲಿ ಕುಳಿತಿದ್ದರು. ಈಗ ಹಣವಂತ ಯಶೋಧರ ನಾಯ್ಕ ಎಂಬ ನಿಗೂಢ ದಂಧೆದಾರನ ಪರ ಅನಂತ್ಮಾಣಿ ಲಾಬಿ ನಡೆಸಿದ್ದಾನೆ. ಒಂದು ಮೂಲದ ಪ್ರಕಾರ ಯಶೋಧರ ನಾಯ್ಕ ಬರೋಬ್ಬರಿ ಕೋಟಿ ಕೊಟ್ಟು ಟಿಕೆಟ್ ಖರೀದಿಗೆ ಹವಣಿಸುತ್ತಿದ್ದಾನೆ. ದಿನಕರ ಶೆಟ್ಟಿ ಕಂಗಾಲಾಗಿದ್ದಾನೆ. ಕೌಬಾಯ್ ಸೂರಜ್ ನಾಯ್ಕ್‍ಗೆ ಬಿಜೆಪಿ ಸಹವಾಸ ಸಾಕಾಗಿದೆ. ಕಾಂಗ್ರೆಸ್‍ನಿಂದ ಹಾಲಿ ಶಾಸಕಿ ಶಾರದಾ ಶೆಟ್ಟಿ ಸ್ಪರ್ಧಿಸುತ್ತಾರೆ. ಜೆಡಿಎಸ್‍ನಿಂದ ಕಳ್ಳ ಚಾಪ್ಸಿ ಉದ್ಯಮಿ ಪ್ರದೀಪ್ ನಾಯ್ಕ್ ಅಭ್ಯರ್ಥಿ ತ್ರಿಕೋನ ಸ್ಪರ್ಧೆ ಖಂಡಿತ.
ಭಟ್ಕಳ ಉಡುಪಿ ಹುರಿಯಾಳಾಗಲು ಐದಾರು ಮಂದಿ ಹೋರಾಡಿದ್ದರು. ಅಂತಿಮ ಹಣಾಹಣಿಗೆ ಕಾಂಗ್ರೆಸ್ ವಲಸಿಗ ಮಾಜಿ ಶಾಸಕ ಜೆ.ಡಿ. ನಾಯ್ಕ ಮತ್ತು ನಾಗಬನದಲ್ಲಿ ದನದ ಮಾಂಸ ಹಾಕಿ ಗಲಭೆ ಎಬ್ಬಿಸಿ ಲೀಡರ್ ಆಗಲು ಪಾತಕ ಮಾಡಿದ್ದ ಅನಂತ್ಮಾಣಿ ಶಿಷ್ಯ ಸುನಿಲ್ ನಾಯ್ಕ ಬಂದಿದ್ದಾರೆ. ಸುನಿಲ್‍ನಿಂದ ಆರ್ಥಿಕ ಲಾಭ ಮಾಡಿಕೊಂಡಿರುವ ಅನಂತ್ಮಾಣಿಗೆ ಜೆ.ಡಿ.ನಾಯ್ಕ್ ಜತೆ ಅನಾದಿಕಾಲದ ನಂಟಿದೆ. ಹೀಗಾಗಿ ಮಾಣಿಗೆ ಈ ಇಬ್ಬರಲ್ಲಿ ಯಾರು ಹಿತವರೆಂದು ತಿಳಿಯಲು ನಾಮಪತ್ರ ಸಲ್ಲಿಕೆಯ ಕೊನೆಯ ದಿನವೇ ಬರಬೇಕು. ಕಾಂಗ್ರೆಸ್ ಪೀಕಲಾಟ ಮತ್ತೂ ಮಜಾ ಆಗಿದೆ. ಹಾಲಿ ಶಾಸಕ ಮಂಕಾಳು ವೈದ್ಯನಿಗೆ ಅಭ್ಯರ್ಥಿ ಮಾಡಲು ಸಿದ್ದು-ಪರಮ್ ಸಿದ್ಧವಿದ್ದಾರೆ. ಆದರೆ ದೇಶಪಾಂಡೆಗೆ ಈತ ಬೇಕಾದ ಪೀಡೆ. ಪೆಟ್ರೋಲ್ ಟ್ಯಾಂಕರ್ ದರೋಡೆ ಕೇಸು ಮಂಕಾಳು ಮೇಲಿದೆ. ನ್ಯಾಯಾಲಯದಲ್ಲೂ ಆ ಕೇಸು ಕೊನೆ ಹಂತಕ್ಕೆ ಬಂದಿದೆ. ಮಂಕಾಳು ಇದರಲ್ಲಿ ಸಿಕ್ಕಿಬಿದ್ದರೆ ಕಾಂಗ್ರೆಸ್‍ಗೆ ಗಂಡಾಂತರ. ಹೀಗಾಗಿ ಬದಲಿ ಅಭ್ಯರ್ಥಿಯಾಗಿ ‘ಬಂ’ರ ಕೆಸಿಪಿಯಿಂದ ಹಿಂದೊಮ್ಮೆ ಸ್ಪರ್ಧಿಸಿದ್ದ ಲಕ್ಷ್ಮಣ ನಾಯ್ಕ ಎಂಬವರ ಅಳಿಯನೂ ವಕೀಲನೂ ಆಗಿರುವ ಸಂತೋಷ ನಾಯ್ಕನನ್ನು ದೇಶಪಾಂಡೆ ರೆಡಿ ಮಾಡಿದ್ದಾರೆ.
ಶಿರಸಿಯಲ್ಲಿ ಕಾಗೇರಿ ಬಿಜೆಪಿ ಅಭ್ಯರ್ಥಿ. ಜೆಡಿಎಸ್ ರಾಮಕೃಷ್ಣ ಹೆಗಡೆಯ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಅಖಾಡಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್ ಟಿಕೆಟ್‍ಗಾಗಿ ದೇಶಪಾಂಡೆ ಚೇಲಾ ಭೀಮಣ್ಣ ನಾಯ್ಕ ಮತ್ತು ಮ್ಯಾಗಿ ಮಗ ನಿವೇದಿತ್ ಆಳ್ವಾ ನಡುವೆ ಮೇಲಾಟ ನಡೆದಿತ್ತು. ಈ ನಿವೇದಿತ್ ತಂದೆಯ ಸಾವಿನ ಕಾರಣ ಮುಂದೊಡ್ಡಿ ಹಿಂದೆ ಸರಿದಿದ್ದಾರೆ. ಭೀಮಣ್ಣನ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿದೆ. ಯಲ್ಲಾಪುರದಲ್ಲಿ ಯಡ್ಡಿ ಗ್ಯಾಂಗಿನ ಮಾಜಿ ಶಾಸಕ ವಿ.ಎಸ್. ಪಾಟೀಲ್ ಮತ್ತು ಅನಂತ್ಮಾಣಿ ಪಟಾಲಮ್‍ನ ಎಲ್.ಟಿ. ಪಾಟೀಲು ಮಧ್ಯೆ ಬಿಜೆಪಿ ಹುರಿಯಾಳಿಕೆಗೆ ಜಿದ್ದಾಜಿದ್ದಿ ನಡೆದಿದೆ. ಅನಂತ್ಮಾಣಿಗೆ ಮಾಜಿ ಶಾಸಕ ಪಾಟೀಲರ ಕಂಡರಾಗದು. ಹಾಗಾಗಿಯೇ ಆತ ಕಾಂಗ್ರೆಸ್‍ನ ಜಿಪಂ ಸದಸ್ಯನಾದ ಮರಾಠ ಮನುಷ್ಯ ಎಲ್.ಟಿ. ಪಾಟೀಲ್‍ನ ಎಳೆದು ತಂದಿದ್ದಾನೆ. ಕಾಂಗ್ರೆಸ್‍ನಿಂದ ಸ್ಪರ್ಧೆಗಿಳಿದ ಹಾಲಿ ಶಾಸಕ ಶಿವರಾಮ ಹೆಬ್ಬಾರ್‍ನ ಸೋಲಿಸುವ ಹಠಕ್ಕೆ ಬಿದ್ದಿರುವ ದೇಶಪಾಂಡೆ ಶಿಷ್ಯ ಎಲ್ಟಿಗೆ ರಹಸ್ಯವಾಗಿ ನೆರವಾಗುವ ಸ್ಕೆಚ್ ಹಾಕಿದ್ದಾರೆ. ಮಾಜಿ ಪತ್ರಕರ್ತ ಹರಿಪ್ರಕಾಶ್ ಕೋಣೆ ಮನೆ ಈ ಇಬ್ಬರ ಜಗಳದಲ್ಲಿ ತನಗೆ ಲಾಭವಾದೀತೆಂದು ಕಾದಿದ್ದಾರೆ. ಆದರೆ ಅನಂತ್ಮಾಣಿಗೆ ಹರಿಪ್ರಸಾದ್ ಎಂದರೆ ಅದ್ಯಾಕೋ ಉರಿದು ಬೀಳುತ್ತಾರೆ.
ಹಳಿಯಾಳ ರಾಜ್ಯದ ಪವರ್‍ಫುಲ್ ಮಂತ್ರಿ ಆರ್.ವಿ. ದೇಶಪಾಂಡೆ ಕ್ಷೇತ್ರ ಆತನಿಗೆ ಕಾಂಗ್ರೆಸಲ್ಲಿ ಎದುರಾಳಿಯಿಲ್ಲ. ಬಿಜೆಪಿ ಟಿಕೆಟ್‍ಗಾಗಿ ಮಾಜಿ ಶಾಸಕ ಸುನಿಲ್ ಹೆಗಡೆ ಮತ್ತು ನಿವೃತ್ತಿ ಪೊಲೀಸ್ ಅಧಿಕಾರಿ ಜಿ.ಆರ್. ಪಾಟೀಲು ನಡುವೆ ಪೈಪೋಟಿ ನಡೆದಿದೆ. ಅನಂತ್ಮಾಣಿ ಸುನಿಲ್‍ಗೆ ಕೈಕೊಟ್ಟು ಪಾಟೀಲ್‍ನ ಹಣದ ಚೀಲದತ್ತ ಚಿತ್ತ ಹರಿಸಿದ್ದಾನೆಂದು ಹಳಿಯಾಳದಾದ್ಯಂತ ಗುಲ್ಲೆದ್ದಿದೆ. ಕ್ಷೇತ್ರದ ಬಹುಸಂಖ್ಯಾತ ಮರಾಠ ಸಮುದಾಯದ ಪಾಟೀಲ್‍ಗೆ ಟಿಕೆಟ್ ಕೊಡುವಂತೆ ಒತ್ತಡಗಳು ಜೋರಾಗಿದೆ. ಮರಾಠರು ಒಂದಾಗಿ ಪಾಟೀಲು ಪರ ಪ್ರಯತ್ನ ನಡೆಸಿರುವುದು ಸುನಿಲ್ ಹೆಗಡೆಯನ್ನು ಕಂಗಾಲಾಗಿಸಿದೆ. ಜೆಡಿಎಸ್‍ನಿಂದ ರಮೇಶ್ ಎಂಬಾತ ಅಭ್ಯರ್ಥಿ. ಪೈಪೋಟಿ ಏನಿದ್ದರೂ ಕಾಂಗ್ರೆಸ್ v/s ಬಿಜೆಪಿ.
– ನಹುಷ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -