– ವಿ. ಎಸ್. ಶ್ರೀಧರ

“ನಿನ್ನನ್ನು ಹೇಗೆ ಸುಮ್ಮನಾಗಿಸಲು ಸಾಧ್ಯವಿಲ್ಲವೋ
ನಿನ್ನ ಕಾಮ್ರೇಡುಗಳನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ
ಹಾಗೆಯೇ, ನನ್ನನ್ನು ಸುಮ್ಮನಾಗಿಸಲು ಸಾಧ್ಯವಾಗದಿರಲಿ,
ಗೌರಿ ಚಿಯರ್ಸ್”
(ಕವಿತಾ ಲಂಕೇಶ್ ಅವರ ಕವನದಿಂದ)

ಗೌರಿ ಹಂತಕರ ಗುಂಡು ಆಕೆಯ ಪುಟ್ಟ ದೇಹವನ್ನು ಸೇರಿ ಈಗ 7 ತಿಂಗಳಾಗಿವೆ. ಆ ದಿನ ಆಕೆಗೆ ಗುಂಡಿಟ್ಟವರು ಯಾರೆಂಬುದು ಇನ್ನೂ ನಿಖರವಾಗಿ ಪತ್ತೆಯಾಗಿಲ್ಲ. ಅವರು ಯಾರೆ ಇರಲಿ, ಈ ಅಮಾನುಷ ಹತ್ಯೆಯ ಹಿಂದೆ ಯಾವ ಶಕ್ತಿಗಳ ಕೈವಾಡ ಇರಬಹುದು ಎನ್ನುವುದು ಜನಮಾನಸದಲ್ಲಿ ಸ್ಪಷ್ಟವಾಗಿ, ಒಂದು ಜನಪದದಂತೆ ಹರಡಿಹೋಗಿದೆ; ಇದು ಕೇವಲ ಅನುಮಾನವಲ್ಲ. ಗೌರಿ ಹತ್ಯೆಗೂ ಮುಂಚೆ ನಡೆದ ಪನ್ಸಾರೆ, ಧಾಬೋಲ್ಕರ್, ಕಲಬುರ್ಗಿಯವರ ಸರಣಿಹತ್ಯೆಗಳು ಇದೇ ಸಂಚುಕೂಟದಿಂದ ಆಗಿರಬಹುದೆಂಬ ಮಾತು ಇಂದು ಎಲ್ಲೆಡೆ ಕೇಳಿಬರುತ್ತಿದೆ. ಈ ಘಟನೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶ ವಿದೇಶಗಳಲ್ಲೂ ಮಾರ್ದನಿಗೊಂಡಿರುವುದು ಇದೇ ಕಾರಣಕ್ಕಾಗಿ. ಆಕೆಯ ಸಾವಿಗೆ ಕಂಬನಿ ಮಿಡಿದವರೆಷ್ಟೋ; ಆ ದುಷ್ಕೃತ್ಯವನ್ನು ಖಂಡಿಸಿ ಪ್ರತಿಭಟನೆಗಳು ನಡೆದದ್ದು ಎಷ್ಟೋ. ಪ್ರಜಾತಂತ್ರದ ಬಗ್ಗೆ, ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ, ಅಧಿಕಾರದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಬಗ್ಗೆ ಗೌರವ, ಬದ್ಧತೆ ಇರುವ ಎಲ್ಲರೂ ಗೌರಿ ಹತ್ಯೆಯನ್ನು ವಿರೋಧಿಸಿದ್ದಾರೆ. ಆ ಸಾವು ತಮ್ಮ ಮನೆಯ ಸೂತಕವೆಂಬಂತೆ ಮರುಗಿದ್ದಾರೆ.

ಕರ್ನಾಟಕದ ಹೊರಗೆ, ಉತ್ತರ ಭಾರತದ ವಿವಿಧೆಡೆ ಹಾಗೂ ನೆರೆ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳ ಪುಟ್ಟ ಊರುಗಳಿಂದ ಹಿಡಿದು, ವಿಶ್ವಸಂಸ್ಥೆಯವರೆಗೂ ಗೌರಿ ಹತ್ಯೆಯನ್ನು ಪ್ರತಿಭಟಿಸಿ, ಸಾತ್ವಿಕ ಭಿನ್ನಮತವನ್ನು ಅತ್ಯಂತ ಕ್ರೂರವಾಗಿ ಮತ್ತು ಬಹಿರಂಗವಾಗಿ ಹತ್ತಿಕ್ಕುವ ಇಂದಿನ ಫ್ಯಾಸಿಸ್ಟ್ ಬೆಳವಣಿಗೆಯನ್ನು ಖಂಡಿಸಿ ಅನೇಕ ಸಭೆಗಳಾಗಿವೆ; ಈಗಲೂ ಆಗುತ್ತಲಿವೆ.

ಗೌರಿಯ ಧ್ವನಿಯನ್ನು ಅಡಗಿಸಲು ಇವರುಗಳು ಮಾಡಿದ ಪ್ರಯತ್ನ ಇಂದು ಅವರಿಗೇ ತಿರುಗುಬಾಣವಾಗಿದೆ. ಗೌರಿ ಈಗ ಸಾವಿರಾರು ಗೌರಿಯರಾಗಿ ಎಲ್ಲೆಡೆ ಹರಡಿಹೋಗಿದ್ದಾರೆ; ಸಾವಿರಾರು ಧ್ವನಿಗಳ ಪ್ರತಿನಿಧಿಯಾಗಿದ್ದಾರೆ. ಎಲ್ಲರಿಗೂ `ನಮ್ಮ ಗೌರಿ’ಯಾಗಿದ್ದಾರೆ. ಹತ್ಯೆಯಾದ ಮಾರನೇ ದಿನ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸೇರಿದ್ದ ಜನಸಮೂಹದೊಳಗಿಂದ `ನಾನು ಗೌರಿ’, `ನಾವೆಲ್ಲರೂ ಗೌರಿ’ ಎಂಬ ಘೋಷಣೆ ಮೂಡಿಬಂತು. ಇದು ಯಾರೋ ಕೆಲವು ವ್ಯಕ್ತಿಗಳಿಂದ ಟಂಕಿಸಲ್ಪಟ್ಟ ಘೋಷಣಾ ವಾಕ್ಯವಾಗಿರಲಿಲ್ಲ; ಬದಲಿಗೆ ನೋವಿಗೆ ಮಿಡಿವ ಜನಸಮುದಾಯದ ಒಡಲಾಳದ ಕೂಗಾಗಿತ್ತು. ಅಲ್ಲಿ ಚಿರನಿದ್ರೆಯಲ್ಲಿ ಮಲಗಿದ್ದ ಗೌರಿ, ಅಂದೇ, ಆಗಲೇ, ಜನರೊಳಗೆ, ಜನರ ಮೂಲಕ ಮರುಹುಟ್ಟು ಪಡೆದಿದ್ದರು.

ಸೆಪ್ಟೆಂಬರ್ 12: ಪ್ರತಿರೋಧ ಸಮಾವೇಶ

ದಾರುಣ ದುರಂತದ ಕಗ್ಗತ್ತಲ ಕೂಪದಿಂದಲೇ ಹೊಸ ಬದುಕಿನ ಜೀವ ಸೆಲೆಯೊಂದು ಮೂಡುವ ನಿಗೂಢ ವಿದ್ಯಮಾನದಿಂದಾಗಿಯೇ ಈ ಜಗತ್ತು ತನ್ನನ್ನು ತಾನು ಇಲ್ಲಿಯವರೆಗೆ ಪೋಷಿಸಿಕೊಂಡು ಬಂದಿದೆ. ಎಲ್ಲ ಮಹಾಕಾವ್ಯಗಳ ಲೋಕದರ್ಶನವೂ ಇದನ್ನೇ ಧ್ಯಾನಿಸಿವೆ. ಇದು ಮಹಾ ವಿಪರ್ಯಾಸ ಎಂದನಿಸಿದರೂ, ಎಲ್ಲರ ಜೀವನಾನುಭವಕ್ಕೆ ಹೊರತಾದುದೇನಲ್ಲ. ಬಹುಶಃ ಈ ವಿದ್ಯಮಾನವನ್ನು, ಆಕೆಯನ್ನು ಕೊಂದವರು ಇರಲಿ, ಆಕೆಯ ಸಂಗಾತಿಗಳೂ ಕೂಡ ಊಹಿಸಿರಲಿಲ್ಲ. ಇವೆಲ್ಲವನ್ನೂ ನೋಡಿ ಆಕೆ, `ನೋಡಿದ್ರೇನ್ರೋ, ಈಗಲಾದರೂ ತಿಳೀತೇನ್ರೋ, ನಾನು ಯಾರು ಅಂತ!’ ಎಂದು ಕಣ್ಣುಮಿಟುಕಿಸಿ ನಕ್ಕಂತೆ ಭಾಸವಾಗುತ್ತದೆ. ಗೌರಿಯನ್ನು ಮೌನವಾಗಿಸಲು ಸಂಚು ಹೂಡಿದವರೇ ಈಗ ಮೌನವಹಿಸುವಂತಾಗಿದೆ.

ಹೀಗೆ ಗೌರಿ ಈಗಲೂ ನಮ್ಮೊಡನಿದ್ದಾರೆ. ಇದು ಕೇವಲ ಆ ಕ್ಷಣದ ಅನಿಸಿಕೆಯಲ್ಲ ಅಥವಾ ಸದ್ಯಕ್ಕೆ ಒದಗುವ ಸಮಾಧಾನದ ಮಾತಲ್ಲ. ಬದಲಿಗೆ ನಿರಂತರವಾದ, ಆಳದಲ್ಲಿ ಬಿತ್ತಿದಂತಹ ಭಾವನೆಯಾದ್ದರಿಂದಲೇ, ಒಂದೇ ವಾರದಲ್ಲಿ, ಸೆಪ್ಟಂಬರ್ 12ರಂದು ನಾನಾ ಧಾರೆಯ ಜನರೆಲ್ಲರೂ ಸೇರಿ ಗೌರಿ ಶ್ರದ್ಧಾಂಜಲಿ ಮೆರವಣಿಗೆ ಮತ್ತು ಸಭೆಯನ್ನು ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ನಡೆಸಲು ಸಾಧ್ಯವಾಯಿತು. ಸಾವಿರಾರು ಜನರು ಸೇರಿದ್ದ ಈ ಸಭೆ ಕೇವಲ ಶ್ರದ್ಧಾಂಜಲಿ ಸೂಚಕ ಕಾರ್ಯಕ್ರಮವಾಗಿರಲಿಲ್ಲ. ಬದಲಿಗೆ ಅದು ನಮ್ಮ ಮುಂದೆ ಇರುವ ಸವಾಲುಗಳನ್ನು ಎದುರಿಸುವ, ರಾಜಿರಹಿತ ಹೋರಾಟಕ್ಕೆ ಮತ್ತೊಮ್ಮೆ ಸನ್ನದ್ಧರಾಗುವ ಸಂಕಲ್ಪತೊಡುವ ಮಹತ್ವದ ದಿನವಾಗಿತ್ತು.

ಹಿರಿಯ ಹೋರಾಟಗಾರ ಶ್ರೀ ದೊರೆಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆ ಸಭೆಯಲ್ಲಿ ಅಂದು ಮಾತನಾಡಿದ ತೀಸ್ತಾ ಸೆಟಲ್‍ವಾದ್, ಸಾಗರಿಕ ಘೋಶ್, ಪಿ.ಸಾಯಿನಾಥ್, ದೇವನೂರು, ಪ್ರಶಾಂತ ಭೂಷಣ್, ಜಿಗ್ನೇಶ್ ಮೇವಾನಿ, ಚಂಪಾ, ಎಚ್.ಎಸ್.ದೊರೆಸ್ವಾಮಿ, ಬರಗೂರು, ಗಿರೀಶ್ ಕಾರ್ನಾಡ್, ಕವಿತಾ ಕೃಷ್ಣನ್, ಸಿದ್ಧಾರ್ಥ್ ವರದರಾಜನ್, ಸ್ವಾಮಿ ಅಗ್ನಿವೇಶ, ನಿಜಗುಣಾನಂದ ಸ್ವಾಮಿ, ಮುರುಘಾ ಶರಣರು, ನಿಡುಮಾಮಿಡಿ ಸ್ವಾಮೀಜಿ, ಜಯ ಮೃತ್ಯುಂಜಯ ಸ್ವಾಮೀಜಿ ಮುಂತಾದ ಎಲ್ಲರೂ ಗೌರಿ ಹತ್ಯೆ ಹೇಗೆ ಈ ದೇಶದ ಪ್ರಜಾತಂತ್ರ ಎದುರಿಸುತ್ತಿರುವ ಅಪಾಯಕ್ಕೆ ಸಂಕೇತವಾಗಿದೆ ಎನ್ನುವುದನ್ನು ತಮ್ಮ ತಮ್ಮ ರೀತಿಯಲ್ಲಿ ವಿವರಿಸುತ್ತಾ, ಪ್ರಜಾಪ್ರಭುತ್ವವನ್ನು ಮತ್ತು ಅದರ ಬೆನ್ನೆಲುಬಾದ ಸಂವಿಧಾನವನ್ನು ಉಳಿಸುವುದಕ್ಕೆ ಹೋರಾಟಮಾಡುವುದರ ಮೂಲಕವೇ ನಾವು ಗೌರಿಯ ಆಶಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾದ ಕರ್ತವ್ಯದ ಬಗ್ಗೆ ಮಾತನಾಡಿದರು. ಗೌರಿ ಪತ್ರಿಕೆಯನ್ನು ನಡೆಸಿಕೊಂಡು ಹೋಗುವ ಜತೆಯಲ್ಲಿ, ಗೌರಿಯ ಆಶಯಗಳನ್ನೂ ಮುನ್ನಡೆಸಿಕೊಂಡು ಹೋಗಬೇಕೆನ್ನುವುದು ಆ ಸಮಾವೇಶದ ಒಟ್ಟಾರೆ ಕರೆಯಾಗಿತ್ತು.

ಡಿಸೆಂಬರ್ 4: ಸ್ಮಾರಕ ಟ್ರಸ್ಟ್ (ರಿ) ಉದ್ಘಾಟನೆ

ಆ ನಂತರದ ದಿನಗಳಲ್ಲಿ ಗೌರಿ ಬಳಗದ ಗೆಳೆಯರು ಸೇರಿ, ಗೌರಿ ಆಶಯಗಳನ್ನು ಕೈಗೂಡಿಸುವುದಕ್ಕೆ ಬೇಕಾದ ಮಾರ್ಗೋಪಾಯಗಳನ್ನು ಕುರಿತು ಚರ್ಚಿಸಿದರು. ಇದಕ್ಕೆ ಒಂದು ಸಾಂಸ್ಥಿಕ ರೂಪ ಕೊಡುವುದರ ಮೂಲಕÀ ಗೌರಿಯನ್ನು ಒಂದು ನೆನಪಾಗಿ ಮಾತ್ರವಲ್ಲದೆ, ಒಂದು ನಿರಂತರವಾದ ಹಾಗೂ ಅರ್ಥಪೂರ್ಣ ಚಟುವಟಿಕೆಯ ಕೇಂದ್ರವನ್ನಾಗಿಸಬೇಕೆಂದು ತೀರ್ಮಾನಿಸಲಾಯಿತು. ಇದರ ಫಲವಾಗಿ, ಶ್ರೀ ದೊರೆಸ್ವಾಮಿ ಅವರ ಅಧ್ಯಕ್ಷತೆಯಲ್ಲಿ `ಗೌರಿ ಸ್ಮಾರಕ ಟ್ರಸ್ಟ್’ ಅನ್ನು ಡಿಸೆಂಬರ್ 4ರಂದು ನೋಂದಾಯಿಸಲಾಯಿತು. ಅದೇ ದಿನ ಸಂಜೆ ಸೆಂಟ್ರಲ್ ಕಾಲೇಜಿನ ಸೆನೇಟ್ ಹಾಲಿನಲ್ಲಿ ಟ್ರಸ್ಟಿನ ಉದ್ಘಾಟಿಸಲಾಯಿತು. ಇದರಲ್ಲಿ ನಾಡಿನ ಮತ್ತು ದೇಶದ ವಿವಿಧ ಸಾಮಾಜಿಕ ವಲಯಗಳಲ್ಲಿ ಹಾಗೂ ಪತ್ರಿಕಾ ರಂಗದಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ 19ಮಂದಿ ಸದಸ್ಯರಿದ್ದಾರೆ. ಇದರಲ್ಲಿ ಇರಬಹುದಾದ ಆಸಕ್ತರು ಹಲವಾರು ಜನ ಇದ್ದಾರಾದರೂ, ಟ್ರಸ್ಟಿನ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಸಂಖ್ಯಾಮಿತಿ ಅನಿವಾರ್ಯ. ಹೀಗಾಗಿ ಟ್ರಸ್ಟಿನ ಧ್ಯೇಯೋದ್ಧೇಶಗಳಿಗೆ ಬದ್ಧರಾಗಿರುವ ಇನ್ನೂ ಕೆಲವು ಗಣ್ಯರನ್ನು ಅದರ ಪೋಷಕರನ್ನಾಗಿ ಮಾಡಿಕೊಳ್ಳಬಹುದೆಂದು ತೀರ್ಮಾನಿಸಲಾಗಿದೆ. ಒಟ್ಟಿನಲ್ಲಿ ಇದು ಎಲ್ಲರೂ ಸೇರಿ ನಡೆಸಿಕೊಂಡು ಹೋಗಬೇಕಾದ ಕೆಲಸ.

ಗೌರಿ ನೆನಪಿನಲ್ಲಿ ಪತ್ರಿಕೆಯನ್ನು ಮುಂದುವರೆಸಲು ಬೇಕಾದ ನೆರವು ನೀಡುವುದು, ಗೌರಿ ಹೆಸರಿನಲ್ಲಿ ವಾರ್ಷಿಕ ಉಪನ್ಯಾಸ, ವಿಚಾರ ಸಂಕಿರಣ, ರಾಜ್ಯ/ರಾಷ್ಟ್ರಮಟ್ಟದಲ್ಲಿ `ಗೌರಿ ಪ್ರಶಸ್ತಿ’ಯನ್ನು ಕೊಡುವುದು, ಆಯ್ದ ಪತ್ರಕರ್ತರಿಗೆ ನಿರ್ದಿಷ್ಟ ಅಧ್ಯಯನಕ್ಕೆ ಪ್ರೋತ್ಸಾಹ ವೇತನ, ತಳಸಮುದಾಯಗಳ ಆಯ್ದ ಪತ್ರಕರ್ತರಿಗೆ ತರಬೇತಿ, ವಿವಿಧ ಸಾಮಾಜಿಕ, ಆರ್ಥಿಕ ಆಯಾಮಗಳ ಕಿರು ಸಂಶೋಧನೆಗೆ ನೆರವು ನೀಡುವುದು, ವಿವಿಧ ಚಳವಳಿಗಳ ನಡುವೆ ಸಂವಾದಗಳನ್ನು ಏರ್ಪಡಿಸುವುದು – ಹೀಗೆ ಗೌರಿ ಆಶಯಗಳನ್ನು ಪ್ರತಿನಿಧಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 29: ಗೌರಿ ದಿನ

ಈ ನಡುವೆ ಗೌರಿ ಹುಟ್ಟಿದ ಜನವರಿ 29ರ ದಿನವನ್ನು `ಗೌರಿ ದಿನ’ ಎಂದು ಆಚರಿಸಲಾಯಿತು. `ಗೌರಿಯ ಕನಸು : ಭವಿಷ್ಯದ ಭಾರತ’ ಎಂಬ ಆ ಸ್ಪೂರ್ತಿದಾಯಕ ಕಾರ್ಯಕ್ರಮದಲ್ಲಿ ಕನ್ನಯ್ಯ, ಜಿಗ್ನೇಶ್, ಉಮರ್ ಖಾಲಿದ್, ರೀಚಾ ಸಿಂಗ್, ಶೆಹ್ಲಾ ರಷೀದ್ ಮುಂತಾದ ವಿದ್ಯಾರ್ಥಿ ಯುವಜನರ ಕಣ್ಮಣಿಗಳು, ಖ್ಯಾತ ಚಿತ್ರನಟ ಪ್ರಕಾಶ್ ರೈ ಮುಂತಾದವರು ಭಾಗವಹಿಸಿದ್ದರು. ಆ ಕಾರ್ಯಕ್ರಮ ದೊರೆಸ್ವಾಮಿಯಂಥ ಹಿರಿಯರು ಹಾಗೂ ಈ ದೇಶದ ಆಶಾಕಿರಣದಂತಿರುವ ಕಿರಿಯ ಹೋರಾಟಗಾರರ ಚಾರಿತ್ರಿಕ ಸಮಾಗಮವಾಗಿತ್ತು. ಆ ದಿನ ಪತ್ರಿಕೆ ಹೊರಬರುವ ಸಂಭಾವ್ಯ ದಿನಾಂಕವೊಂದನ್ನು ಘೋಷಿಸುವುದರ ಮೂಲಕ ಒಂದು ಕಾಲಮಿತಿಯನ್ನು ಹಾಕಿಕೊಳ್ಳಬೇಕೆಂಬ ಸಲಹೆ ಮೇರೆಗೆ ಮಾರ್ಚ್ 8ರಂದು ಪತ್ರಿಕೆಯನ್ನು ಹೊರತರಲು ಎಲ್ಲಾ ಪ್ರಯತ್ನಗಳನ್ನು ಹಾಕುವ ಭರವಸೆಯನ್ನು ಜನವರಿ 29ರ ಸಭೆಯಲ್ಲಿ ನೀಡಲಾಯಿತು, ಈ ದಿಕ್ಕಿನಲ್ಲಿ ತೀವ್ರಗತಿಯಲ್ಲಿ ಪ್ರಯತ್ನಗಳನ್ನು ಮಾಡಲಾಯಿತಾದರೂ, ಕೆಲವು ತಾಂತ್ರಿಕ ತೊಡಕುಗಳಿಂದಾಗಿ ಪತ್ರಿಕೆ ಹೊರಬರುವುದು ತಡವಾಯಿತು. `ಗೌರಿ ಲಂಕೇಶ್’ ಪತ್ರಿಕೆ ಹೆಸರಿನಲ್ಲಿ ಹಳೆಯ ಉದ್ಯೋಗಿಗಳಾರೂ ಪತ್ರಿಕೆಯನ್ನು ನಡೆಸಬಾರದೆಂದು ನ್ಯಾಯಾಲಯದಲ್ಲಿ ದಾವೆಯೊಂದನ್ನು ಹೂಡಿದ್ದು, ಒಂದು ತಾತ್ಕಾಲಿಕ ತಡೆಯಾಜ್ಞೆಯನ್ನೂ ತರಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಚಾಲ್ತಿಯಲ್ಲಿದೆ.

ಪತ್ರಿಕೆಗಾಗಿ ಹೊಸ ಟೈಟಲ್ ನೋಂದಣಿಯನ್ನು ಕುಂಟುನೆಪಗಳನ್ನೊಡ್ಡಿ ತಿರಸ್ಕರಿಸಲಾಗಿದೆ. ಗೌರಿಯ ಧ್ವನಿಯನ್ನು ಹೇಗಾದರೂ ಮಾಡಿ ಅಡಗಿಸಬೇಕು ಎಂಬ ಶಕ್ತಿಗಳ ಕೈವಾಡ ಇದರ ಹಿಂದಿರುವ ದಟ್ಟ ಅನುಮಾನವಿದೆ. ಆದರೆ ಗೌರಿಯನ್ನು ಮೌನವಾಗಿಸಲು ನಾವು ಬಿಡಬಾರದು. ಹೊಸ ಪತ್ರಿಕೆಯನ್ನು ಹೊರತರುವುದರ ಮೂಲಕ ಗೌರಿಯ ಮರು ಹುಟ್ಟನ್ನು ಘೋಷಿಸಲೇಬೇಕಾಗಿದೆ.
ಈ ನಿಟ್ಟಿನಲ್ಲಿ ನಿಮ್ಮ ಸಲಹೆ, ಸೂಚನೆಗಳಿಗೆ ಸ್ವಾಗತ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here