ದೊಡ್ಡಿಪಾಳ್ಯ ನರಸಿಂಹಮೂರ್ತಿ |

ಕರ್ನಾಟಕದ ರಾಜಕಾರಣಕ್ಕೆ ಕಳಂಕ ಹಚ್ಚಿ. ಕರ್ನಾಟಕದವರು ನಾಚಿಕೆಯಿಂದ ತಲೆತಗ್ಗಿಸಬೇಕಾದ ಸ್ಥಿತಿ ನಿರ್ಮಿಸಿದ್ದ ಕೂಟ ಮತ್ತೆ ತಲೆಯೆತ್ತಿ ರಾಜಾರೋಷವಾಗಿ ಮೆರೆಯುತ್ತಿದೆ. ಆದರೆ ಈ ಬಾರಿ ಒಂದು ವ್ಯತ್ಯಾಸವಿದೆ. 5 ವರ್ಷಗಳ ಹಿಂದೆ ಕನ್ನಡ ನಾಡಿಗೆ ಮಸಿ ಬಳಿದದ್ದು ಯಡ್ಡಿ-ರೆಡ್ಡಿ ಕೂಟವಾಗಿತ್ತು. ಆದರೆ ಈ ಬಾರಿ ಈ ಯಡ್ಡಿ-ರೆಡ್ಡಿ ಕೂಟವನ್ನೂ ಮೀರಿಸಿ, ಗುಜರಾತಿ ತ್ರಿವಳಿ ಕೂಟವೊಂದು ಕರ್ನಾಟಕದ ಮೇಲೆ ಅಮರಿಕೊಂಡಿದೆ.

ಅಮಿತ್ ಶಾ, ವಜುಭಾಯ್ ವಾಲಾ, ನರೇಂದ್ರಭಾಯ್ ಮೋದಿ – ಈ ತ್ರಿವಳಿ ಗುಜ್ಜುಗಳು ಶತಾಯ ಗತಾಯ ಕರ್ನಾಟಕವನ್ನು ತಮ್ಮ ಕಪಿಮುಷ್ಠಿಯಲ್ಲಿ ತೆಗೆದುಕೊಳ್ಳಲು ತೀರ್ಮಾನಿಸಿ ಆಗಿದೆ. ಆದಕ್ಕಾಗಿ ತಾವು ಕಲಿತಿರುವ ಎಲ್ಲ ಕಾನೂನುಬಾಹಿರ ತಂತ್ರಗಳನ್ನೂ ನಮ್ಮ ಮೇಲೆ ಪ್ರಯೋಗಿಸುತ್ತಿದ್ದಾರೆ. ಕರ್ನಾಟಕದ ರಾಜಕಾರಣದ ಮೇಲೆ ಕಾರ್ಗತ್ತಲು ಕವಿದಂತಾಗಿದೆ. ಕನ್ನಡಿಗರ ದುರಾದೃಷ್ಟ ನೋಡಿ; ಈ ತ್ರಿವಳಿ ಕೂಟದಲ್ಲಿ ಒಬ್ಬರು ರಾಜ್ಯಪಾಲನ ಪೀಠದಲ್ಲಿ ಕುಳಿತು ನಮ್ಮ ಮೇಲೆ ಸವಾರಿ ಮಾಡುತ್ತಿದ್ದರೆ, ಮತ್ತೊಬ್ಬರು ಈ ದೇಶದ ಪ್ರಧಾನಿ ಹುದ್ದೆಯನ್ನೇ ಅಲಂಕರಿಸಿದ್ದಾರೆ. ಇನ್ನೊಬ್ಬರು ಇಡೀ ದೇಶವನ್ನು ತಮ್ಮ ಕಬ್ಜಾದಡಿ ತರಬೇಕೆಂದು ಬಯಸಿರುವ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು. ಕನ್ನಡ ನಾಡಿನ ಗದ್ದುಗೆ ಹಿಡಿಯಲು ಕಳೆದ ಎರಡು ದಿನಗಳಿಂದ ಈ ತ್ರಿವಳಿ ಕೂಟ ಹೂಡುತ್ತಿರುವ ಷಡ್ಯಂತ್ರಗಳ ಬಗ್ಗೆ ಕಣ್ಣಾಡಿಸೋಣ.

ದೃಶ್ಯ 1
ಇದೇ 15ರಂದು ಮಧ್ಯಾಹ್ನ 12ರವೇಳೆಗೆ ಚುನಾವಣೆಯ ಫಲಿತಾಂಶಗಳ ಟ್ರೆಂಡ್ ಗಮನಿಸುತ್ತಿದ್ದ ಯಾರಿಗಾದರೂ ಇದು ಅತಂತ್ರ ಸ್ಥಿತಿಯತ್ತ ಹೋಗುತ್ತಿದೆ ಎಂಬುದು ನಿಚ್ಚಳವಾಗಿತ್ತು. ಆದರೆ ನಮ್ಮ ಟಿವಿ ಚಾನೆಲ್‍ಗಳು ಸುಮ್ಮನಿರಬೇಕಲ್ಲಾ. ತಮ್ಮ ನಿರೀಕ್ಷೆಗೂ ಮೀರಿ ತಮ್ಮ ನೆಚ್ಚಿನ ಪಕ್ಷ ಹೆಚ್ಚಿನ ಸೀಟುಗಳನ್ನು ಬಂದಿದ್ದನ್ನು ಕಂಡು ಉತ್ತೇಜಿತರಾಗಿ ;ಭರ್ಜರಿ ಬಹುಮತದತ್ತ ಬಿಜೆಪಿ’, ‘ಚಾಣಕ್ಯನ ರಣ ತಂತ್ರಕ್ಕೆ ಕೊಚ್ಚಿ ಹೋದ ಕಾಂಗ್ರೆಸ್’, ‘ಜೆಡಿಎಸ್‍ನ ಹಂಗಿಲ್ಲದೇ ಸುಸ್ಥಿರ ಬಿಜೆಪಿ ಸರ್ಕಾರ’ ಇತ್ಯಾದಿ ಬ್ರೇಕಿಂಗ್ ನ್ಯೂಸ್‍ಗಳನ್ನು ಮಾಡಿ, ಕುಣಿದು ಕುಪ್ಪಳಿಸತೊಡಗಿದರು. ಬಿಜೆಪಿ 115 ರಿಂದ 120 ಸ್ಥಾನಗಳನ್ನು ತಲುಪುವ ಸಾಧ್ಯತೆ ಇದೆಯೆಂದೂ ಕೆಲವು ಮಹಾನುಭಾವರು ಪುಂಗಿಬಿಟ್ಟರು. ಇದರಿಂದ ಉತ್ತೇಜಿತರಾದ ಯಡ್ಯೂರಪ್ಪನವರು 17ನೇ ತಾರೀಕು ನಾನು ಪ್ರಮಾಣ ವಚನ ಸ್ವೀಕರಿಸುವುದು ಶತಸಿದ್ಧ ಎಂದು ಘೋಷಿಸಿಯೇ ಬಿಟ್ಟರು. ಅಷ್ಟರಲ್ಲಾಗಲೇ ಯಡ್ಯೂರಪ್ಪನಿಗೆ ದೆಹಲಿಯಿಂದ ಅಮಿತ್ ಶಾ ಬುಲಾವ್ ಬಂದುಬಿಡ್ತು. ಮಧ್ಯಾಹ್ನ 3 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗುತ್ತಾರೆಂಬ ಸುದ್ದಿಯೂ ಬಿತ್ತರವಾಯ್ತು.

ಇತ್ತ ಕುಮಾರಸ್ವಾಮಿಯವರು ತಮ್ಮ ಪಕ್ಷಕ್ಕೆ ನಿರೀಕ್ಷಿತ ಸ್ಥಾನಗಳು ಸಿಗದ ಬೇಸರ ಒಂದುಕಡೆಯಾದರೆ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿಕೊಳ್ಳುತ್ತಾರೆ, ಸಮ್ಮಿಶ್ರ ಸರ್ಕಾರದಲ್ಲಿ ತಾನೇ ಮುಖ್ಯಮಂತ್ರಿಯಾಗುವ ಕನಸು ಕೈಗೂಡುವುದಿಲ್ಲವೆಂಬ ಚಿಂತೆ ಶುರುವಾಗಿತ್ತು. ಆಗ ಅನಿರೀಕ್ಷಿತವಾಗಿ ದೆಹಲಿಯಿಂದ ಬಂದ ಫೋನ್ ಕರೆಯೊಂದು ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ದೇವೇಗೌಡರಿಗೆ ಕರೆಮಾಡಿ ಜೆಡಿಎಸ್‍ಗೆ ತಮ್ಮ ಪಕ್ಷ ಬೇಷರತ್ ಬೆಂಬಲ ಕೊಡುವುದಾಗಿಯೂ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ 5 ವರ್ಷಗಳ ಪೂರ್ಣ ಅವಧಿಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿರಬಹುದೆಂಬ ಬಂಪರ್ ಆಫರ್ ಕೊಟ್ಟುಬಿಟ್ಟರು. ಇಂದಿನ ಸಂಕೀರ್ಣ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‍ನ ಈ ನಡೆ ನಿಜಕ್ಕೂ ಒಂದು ಮಾಸ್ಟರ್ ಸ್ಟ್ರೋಕ್. ಈ ಆಫರ್‍ಗೆ ದೇವೇಗೌಡರು ಮತ್ತು ಕುಮಾರಣ್ಣ ಚಾಣಾಕ್ಷತನದಿಂದ ಸ್ಪಂದಿಸಿದರು. ಸೋಮಾರಿತನ, ನಿಷ್ಕ್ರಿಯತೆಗಳಲ್ಲೇ ಎಲ್ಲೆಡೆ ಅಧಿಕಾರ ಕಳೆದುಕೊಂಡು ಬಸವಳಿದಿದ್ದ ಕಾಂಗ್ರೆಸ್ ಪಕ್ಷದ ಈ ಚಾಣಾಕ್ಷ ನಡೆ ಕರ್ನಾಟಕ ರಾಜಕೀಯ ಆಟದ ನಿಯಮಗಳನ್ನೇ ಬದಲಿಸಿಬಿಟ್ಟಿತ್ತು. ಆದರೆ ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸಬೇಕು. ಹೀಗೆ ಅತಂತ್ರದ ಸನ್ನಿವೇಶದಲ್ಲಿ ಮೈತ್ರಿ ಏರ್ಪಾಡಾಗುವುದು ಮಾಮೂಲು. ಅದರಲ್ಲಿ ಕಾನೂನುಬಾಹಿರ ಅಥವ ಸಂವಿಧಾನಬಾಹಿರವಾದುದು ಏನೂ ಇಲ್ಲ.

ದೃಶ್ಯ 2
ಸಂಜೆಯಾಗುತ್ತಿದ್ದಂತೆ ಫಲಿತಾಂಶದ ಅಂತಿಮ ಚಿತ್ರಣದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್+ 38 ಹಾಗೂ ಇಬ್ಬರು ಪಕ್ಷೇತರರು ಎಂಬುದು ಹೊರಬಿದ್ದ ನಂತರ ಬೇರೆ ಗತಿಯಿಲ್ಲದೆ ಬಿಜೆಪಿ ನಾಯಕರು ಮತ್ತೆ ಜೆಡಿಎಸ್ ನಾಯಕರ ಮನವೊಲಿಸಿ ಅವರನ್ನು ಸೆಳೆದುಕೊಳ್ಳುವ ಪ್ರಯತ್ನ ನಡೆಸಿದರು. ಉಹೂಂ, ಅದು ಗಿಟ್ಟಲಿಲ್ಲ. ಅಲ್ಲಿಗೆ ತಾವು ಅಧಿಕಾರದಿಂದ ಹೊರಗುಳಿಯುವುದು ಖಾಯಂ ಆಗುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಯಡ್ಡಿ-ರೆಡ್ಡಿ ಕೂಟ, ಅತ್ತ ದೆಹಲಿಯಲ್ಲಿದ್ದ ಗುಜರಾತಿ ಕೂಟ ಜೊತೆಗೂಡಿ ಹೊಸ ಷಡ್ಯಂತ್ರಗಳನ್ನೇ ಹೂಡಿದ್ದಾರೆ. ಆ ಷಡ್ಯಂತ್ರದ ಕೇಂದ್ರವ್ಯಕ್ತಿ ರಾಜ್ಯಪಾಲ ವಜುಭಾಯ್ ವಾಲಾ.

ಈ ಷಡ್ಯಂತ್ರದ ಮೊದಲ ದಾಳವನ್ನು ಉರುಳಿಸಿದ್ದು ಸ್ವತಃ ಪ್ರಧಾನಿ ಮೋದಿ. ತಮ್ಮ ಪಕ್ಷದ ಕೇಂಧ್ರ ಕಚೇರಿಯ ಮುಂಭಾಗದಲ್ಲಿ ಭಾಷಣ ಮಾಡಿದ ಮೋದಿ ‘ಅತ್ಯುತ್ತಮ ರಣನೀತಿಯ ಕಾರಣದಿಂದ ಕರ್ನಾಟಕದಲ್ಲಿ ನಾವು ಗೆದ್ದಿದ್ದೇವೆ. ಕರ್ನಾಟಕದ ಗೆಲುವು ಅಭೂತಪೂರ್ವವಾದುದು, ಕರ್ನಾಟಕವನ್ನು ನಮ್ಮ ಕೈಯಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಬಿಜೆಪಿ ಹಿಂದೆ ಸರಿಯೋಲ್ಲ ಎಂಬ ಭರವಸೆ ಕೊಡುತ್ತೇನೆ. ಕರ್ನಾಟಕದ ಅಭಿವೃದ್ಧಿ ಯಾತ್ರೆಯಲ್ಲಿ ಬಿಜೆಪಿಯನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ’ ಎಂದು ಅಧಿಕಾರ ಹಿಡಿಯಲು ಯಾವುದೇ ಹಂತಕ್ಕೆ ಹೋಗಲು ಸಿದ್ಧ ಎಂಬ ಸಂದೇಶ ರವಾನಿಸಿದರು.

ಇದೀಗ ಚೆಂಡು ರಾಜ್ಯಪಾಲರ ಅಂಗಳದಲ್ಲಿತ್ತು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಸಂದರ್ಭದಲ್ಲಿ ಕಾನೂನುಬದ್ಧವಾಗಿ ಬಹುಮತ ಹೊಂದಿರುವ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬೇಕಿದ್ದ ರಾಜ್ಯಪಾಲ ಕಾನೂನನ್ನು ಗಾಳಿಗೆ ತೂರಿ ಯಾವ ರೀತಿಯಲ್ಲಿ ಲೆಕ್ಕ ಹಾಕಿದರೂ ಬಹುಮತ ಸಾಧ್ಯವೇ ಇಲ್ಲದ ಬಿಜೆಪಿ ನಾಯಕ ಯಡ್ಯೂರಪ್ಪನವರಿಗೆ ಸರ್ಕಾರ ರಚಿಸಲು ಪತ್ರ ಕೊಟ್ಟುಬಿಟ್ಟರು. ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ, ರಾಜ್ಯಪಾಲ ಈ ತೀರ್ಮಾನ ಪ್ರಕಟಿಸುವುದಕ್ಕೆ ಮುಂಚೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕ್ರಮಬದ್ಧವಾಗಿ ತಮಗಿರುವ ಒಟ್ಟು 118 ಶಾಸಕರ ಪಟ್ಟಿಯನ್ನು, ಶಾಸಕರ ಸಹಿಗಳೊಂದಿಗೆ ರಾಜ್ಯಪಾಲರಿಗೆ ಸಲ್ಲಿಸಿಯಾಗಿತ್ತು. ಸರ್ಕಾರ ರಚನೆಯ ಹಕ್ಕುಮಂಡನೆ ಮಾಡಿಯಾಗಿತ್ತು. ಕಾನೂನು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ನಿರ್ಣಯ ತೆಗೆದುಕೊಳ್ಳುವ ಭರವಸೆಯೂ ರಾಜ್ಯಪಾಲರಿಂದ ಸಿಕ್ಕಿತ್ತು. ಆದರೆ ರಾಜ್ಯಪಾಲನ ಸ್ಥಾನದಲ್ಲಿ ಕುಳಿತಿದ್ದ ಸಂಘಿ ವಜುಭಾಯ್‍ವಾಲಾ ಈ ದೇಶದ ಕಾನೂನಿಗೆ, ಸಂವಿಧಾನಕ್ಕೆ ಬದ್ದರಾಗಿರುವುದಕ್ಕಿಂತಲೂ ನಾನು ತನ್ನ ಕೇಸರಿ ಕೂಟಕ್ಕೆ ಬದ್ಧ ಎಂದು ಸಾರಿಬಿಟ್ಟಿದ್ದರು. ಯಡ್ಯೂರಪ್ಪ ಬಹುಮತ ಸಾಬೀತು ಮಾಡಲು ಒಂದು ವಾರದ ಕಾಲಾವಕಾಶ ಕೇಳಿದರೆ ಈ ಸಂಘಿ ದಯಪಾಲಿಸಿದ್ದು ಬರೋಬ್ಬರಿ 15 ದಿನಗಳ ಕಾಲಾವಕಾಶ!

ಬಿಜೆಪಿ ವಕ್ತಾರರು ಹಾಗೂ ಅವರ ಪರ ತುತ್ತೂರಿ ಊದುತ್ತಿರುವ ಮಾಧ್ಯಮಗಳು ನಾನಾ ರೀತಿಯ ಕುಂಟು ನೆಪಗಳನ್ನು ಹುಡುಕಿ ಸಮರ್ಥನೆಗೆ ತೊಡಗಿದ್ದರೂ ಕೂಡ ಅವರ ವಾದಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದು ಶಾಲಾ ಬಾಲಕರಿಗೂ ಅರ್ಥವಾಗುವ ವಿಚಾರ ಇರಲಿ, ಬಿಜೆಪಿಯ 104ನ್ನು ಹೊರತುಪಡಿಸಿ ಉಳಿದ ಎಲ್ಲಾ 118 ಶಾಸಕರೂ ಸಹಿ ಹಾಕಿ, ಸ್ವತಃ ರಾಜಭವನದ ಮುಂದೆ ಹಾಜರಾಗಿ ಹಕ್ಕೊತ್ತಾಯ ಮಂಡಿಸಿರುವಾಗ, ಬಹುಮತ ಸಾಬೀತು ಮಾಡಲು ಬೇಕಾಗಿರುವ ಉಳಿದ 8 ಶಾಸಕರು ಬಿಜೆಪಿಗೆ ಎಲ್ಲಿಂದ ಬರುತ್ತಾರೆ? ಆಕಾಶದಿಂದ ಉದುರುತ್ತಾರಾ?

ವಿಷಯ ಸ್ಪಷ್ಟ. ರಾಜ್ಯಪಾಲರೇ ನೇರವಾಗಿ ಕುದುರೆ ವ್ಯಾಪಾರಕ್ಕೆ ಅಧಿಕೃತವಾಗಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದನ್ನು ಬಿಟ್ಟು ಇದಕ್ಕೆ ಬೇರೆ ಯಾವುದೇ ಅರ್ಥವಿಲ್ಲ. ಒಂದು ವಾರ ಅವಕಾಶ ಕೇಳಿದರೆ 15 ದಿನಗಳ ಕಾಲಾವಕಾಶ ಕೊಟ್ಟಿದ್ದೂ ಕೂಡ ಅದಕ್ಕಾಗಿಯೇ. ಮಾನ್ಯ ಮೋದಿಯವರ ಆಡಳಿತದಲ್ಲಿ ನಮ್ಮ ಪ್ರಜಾತಂತ್ರ ಎಲ್ಲಿಗೆ ಬಂದು ನಿಂತಿದೆ ನೋಡಿ.

ಕಾನೂನು, ಸಂವಿಧಾನಗಳು ಏನು ಹೇಳುತ್ತವೆ? ಅಥವ ಕಳೆದ ಒಂದೆರಡು ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಾಗ ಏನು ನಡೆದಿದೆ?

ಗೋವಾದ ಉದಾಹರಣೆ ನೋಡೋಣ: 40 ಸ್ಥಾನಗಳ ಗೋವಾ ವಿಧಾನಸಭೆಗೆ 2017ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷ 17 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 13 ಸ್ಥಾನಗಳನ್ನು ಗಳಿಸಿದ್ದರೂ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಯಿತು. ಮುಖ್ಯಮಂತ್ರಿಯಾಗಿ ಬಿಜೆಪಿಯ ಮನೋಹರ್ ಪಾರಿಕ್ಕರ್ ಪ್ರಮಾಣ ವಚನಕ್ಕೆ ಅವಕಾಶ ಮಾಡಿರುವ ರಾಜ್ಯಪಾಲರ ತೀರ್ಮಾನವನ್ನು ರದ್ದುಪಡಿಸಬೇಕೆಂಬ ಕೋರಿ ಕಾಂಗ್ರೆಸ್ ಸುಪ್ರಿಂ ಕೋರ್ಟ್ ಮೆಟ್ಟಲೇರಿತು. ಆದರೆ ಕೋರ್ಟ್ ಕಾಂಗ್ರೆಸ್ ವಾದವನ್ನು ಮಾನ್ಯ ಮಾಡದೆ ಕೂಡಲೇ ಸದನದಲ್ಲಿ ಬಹುಮತ ಪರೀಕ್ಷೆ ನಡೆಸುವಂತೆ ಆದೇಶಿಸಿತು. ಹೀಗೆ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಾಗದೆ, ªಬಹುಮತ ಹೊಂದಿರುವ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಯಾಯ್ತು.

ಮಣಿಪುರದ ಉದಾಹರಣೆ ನೋಡೋಣ. ಇಲ್ಲಿನ ವಿಧಾನಸಭೆಯ ಶಾಸಕ ಸ್ಥಾನಗಳು ಒಟ್ಟು 60. ಇಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು, ಬಿಜೆಪಿ 21 ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿ ಇತರೆ ಪಕ್ಷಗಳ ಜೊತೆ ಸೇರಿಕೊಂಡು ಚುನಾವಣೋತ್ತರ ಮೈತ್ರಿ ಮಾಡಿಕೊಂಡರು. ಗವರ್ನರ್ ನಜ್ಮಾ ಹೆಫ್ತುಲ್ಲಾ ಅವರು ಈ ಹೊಸ ಮೈತ್ರಿಕೂಟದ ಬಹುಮತಕ್ಕೆ ಮಾನ್ಯತೆ ಕೊಟ್ಟು ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದರು.

ಮೇಘಾಲಯದ ಉದಾಹರಣೆ ಮತ್ತಷ್ಟು ಕುತೂಹಲಕಾರಿ. ಅಲ್ಲಿ ಬಿಜೆಪಿ ಗಳಿಸಿದ್ದು ಕೇವಲ 2 ಸ್ಥಾನಗಳು. ಆದರೆ ಅಲ್ಲಿಯೂ ಅತಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್‍ಅನ್ನು ಬದಿಗೊತ್ತಿ ಬಿಜೆಪಿ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿದೆ. ಹೀಗೆ ದೇಶಾದ್ಯಂತ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಇಂಥದೇ ತಂತ್ರಗಳನ್ನು ಬಳಸಲಾಗಿದೆ.

ಇಂಥದೊಂದು ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳಿದ ಮಾತನ್ನು ಕೇಳೋಣ. “ಅÀತಂತ್ರ ವಿಧಾನಸಭೆ ಉಂಟಾದ ಸಂದರ್ಭದಲ್ಲಿ ಬಹುಸಂಖ್ಯಾತ ಚುನಾಯಿತ ಶಾಸಕರು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಹಕ್ಕು ಮಂಡಿಸಿದಾಗ ರಾಜ್ಯಪಾಲರು ಆ ಬಹುಸಂಖ್ಯಾತ ಮೈತ್ರಿಯ ನಾಯಕನನ್ನು ಸರ್ಕಾರ ರಚಿಸುವಂತೆ ಆಹ್ವಾನಿಸುವುದು ಮತ್ತು ಒಂದು ನಿಗದಿತ ಅಲ್ಪಾವಧಿಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸುವುದು ಸಾಂವಿಧಾನಿಕವಾಗಿ ಸರಿಯಾದ ನಡೆಯಾಗುತ್ತದೆ.” ಹೌದು, ಈ ದೇಶದ ಕಾನೂನು ಅದನ್ನೇ ಹೇಳುತ್ತದೆ. ಸ್ವತಃ ಹಿರಿಯ ವಕೀಲರಾಗಿರುವ ಜೈಟ್ಲಿ ಹೇಳಿದ್ದರಲ್ಲಿ ಎಳ್ಳಷ್ಟೂ ತಪ್ಪಿಲ್ಲ.

ಆದರೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿದೆಯೆಂಬುದು ಆಧಾರಸಹಿತವಾಗಿ ನಿಚ್ಚಳವಾಗಿರುವಾಗ ಇವರೇ ವಾದಿಸಿದ ಈ ನಿಯಮ ಇಲ್ಲಿ ಯಾಕೆ ಅನ್ವಯವಾಗುವುದಿಲ್ಲ? ಯಾಕೆಂದರೆ ಈ ಕೂಟ ತಮ್ಮ ಅನುಕೂಲಕ್ಕೆ ಕಾನೂನು ಬಳಕೆಯಾಗುವಂತಿದ್ದರೆ ಮಾತ್ರ ಕಾನೂನನ್ನು ನಿರ್ವಚನೆ ಮಾಡುತ್ತದೆ; ಇಲ್ಲವಾದರೆ ಕಾನೂನನ್ನು ಗಾಳಿಗೇ ತೂರಿ ತನ್ನ ಅಜೆಂಡಾ ಪೂರೈಸುತ್ತದೆ ಎಂದು ಅರ್ಥ ತಾನೇ?

ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್-ಜೆಡಿಎಸ್ ನಾಯಕರು, ಶಾಸಕರ ಧರಣಿ

ರಾಜ್ಯಪಾಲರ ಕಾನೂನುಬಾಹಿರ ನಡೆಯನ್ನು ಪ್ರಶ್ನಿಸಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಪ್ರಿಂ ಕೋರ್ಟಿನ ಮೊರೆ ಹೋಗಿವೆ. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೂ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ಯಡ್ಯೂರಪ್ಪನವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಉಭಯ ಬಣದವರೂ ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರಗಳನ್ನು ಕೋರ್ಟಿಗೆ ಸಲ್ಲಿಸಬೇಕೆಂದು ಸೂಚಿಸಿ, ವಿಚಾರಣೆಯನ್ನು ಮರುದಿನಕ್ಕೆ ಮುಂದೂಡಿದೆ. ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಯಾವ ರೀತಿಯ ತೀರ್ಪು ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಭಂಡತನದ ಪರಮಾವಧಿ

ಇಡೀ ದೇಶಾದ್ಯಂತ ಇವರ ಷಡ್ಯಂತ್ರಕ್ಕೆ ಖಂಡನೆ ವ್ಯಕ್ತವಾಗುತ್ತಿದ್ದರೂ, ಇವರ್ಯಾರೂ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ತಾವು ನಡೆದಿದ್ದೇ ಹಾದಿ, ಮಾಡಿದ್ದೇ ಕಾನೂನು ಎಂಬಂತೆ ಬಿಜೆಪಿ ಕೂಟ ವರ್ತಿಸುತ್ತಿದೆ. ಇಷ್ಟೆಲ್ಲಾ ವಿರೋಧದ ನಡುವೆಯೂ ಯಡ್ಯೂರಪ್ಪನವರು 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಷ್ಟು ಮಾತ್ರವಲ್ಲ, ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲ ಮನ್ನಾಮಾಡಿಬಿಡುತ್ತೇನೆಂಬ ನಾಟಕವನ್ನೂ ನಡೆಸಿದ್ದಾರೆ. ಈ ಹಿಂದೆ ಇದೇ ಯಡ್ಯೂರಪ್ಪನವರು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ವಿಚಾರದಲ್ಲಿ “ರೈತರ ಸಾಲ ಮನ್ನಾ ಸಾಧ್ಯವೇ ಇಲ್ಲ; ನಾನು ನೋಟು ಪ್ರಿಂಟ್ ಮಾಡುವ ಮಿಷಿನ್ ಇಟ್ಟುಕೊಂಡಿಲ್ಲ” ಎಂದು ಹೇಳಿದ್ದನ್ನು ಕನ್ನಡ ನಾಡಿನ ಜನತೆ ಮರೆಯುವಂತಿಲ್ಲ.

ಹಾಗಿದ್ದರೆ ಈಗ ಈ ನಾಟಕ ಯಾಕೆಂದರೆ ಈಗಾಗಲೇ ಸಿದ್ದರಾಮಯ್ಯ ಸರ್ಕಾರ 50 ಸಾವಿರದವರೆಗಿನ ರೈತರ ಸಾಲವನ್ನು ಮನ್ನಾ ಮಾಡಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ ಬಿಜೆಪಿ ಪಕ್ಷ ರೈತರನ್ನು ಮರುಳು ಮಾಡಲಿಕ್ಕಾಗಿ ಇಂಥಾ ಗಿಮ್ಮಿಕ್ಕುಗಳಿಗೆ ಇಳಿದಿದೆ.

ತಮಗಿಲ್ಲದ ಬಹುಮತವನ್ನು ಸೇರಿಸಿಕೊಳ್ಳಲು ಹಿಮದಿನ ರೀತಿಯಲ್ಲೇ ಆಪರೇಷನ್ ಕ-ಮಲಕ್ಕೆ ಕೈಹಾಕಿದ್ದಾರೆ. “ನಮ್ಮ ಪಕ್ಷದ ಕೆಲವು ಶಾಸಕರಿಗೆ ತಲಾ 100 ಕೋಟಿ ಹಣ ಮತ್ತು ಸಚಿವ ಸ್ಥಾನ ಕೊಡುವುದಾಗಿ ಬಿಜೆಪಿಯವರು ಆಮಿಷ ಒಡ್ಡಿದ್ದಾರೆ” ಎಂದು ಕುಮಾರಸ್ವಾಮಿಯವರು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ‘ಪ್ರಧಾನಿ ಮೋದಿಯವರೆ, ತಾವು ಕೊಡುವ ತಲಾ 100 ಕೋಟಿ ಹಣ ವೈಟ್ ಮನಿಯೋ? ಬ್ಲಾಕ್ ಮನಿಯೋ ಸ್ಪಷ್ಟಪಡಿಸಿ’ ಎಂದು ನೇರವಾಗಿ ಪ್ರಧಾನಿ ಮೋದಿಗೆ ಸವಾಲೊಡ್ಡಿದ್ದಾರೆ. ಹಾಗೆಯೇ ಕಾಂಗ್ರೆಸ್‍ನವರು ತಮ್ಮ ಪಕ್ಷದ ಸುಮಾರು 15 ಶಾಸಕರಿಗೆ ಆಮಿಷ ಒಡ್ಡಿದ್ದಾರೆಂಬ ಮಾಹಿತಿ ನೀಡಿದ್ದಾರೆ. ಇಂಥಾ ಆಪರೇಷನ್‍ನ ಉಸ್ತುವಾರಿಯನ್ನು ಶ್ರೀರಾಮುಲು ಮತ್ತು ಗಣೀಧಣಿಗಳು ವಹಿಸಿಕೊಂಡಿದ್ದಾರೆಂದು ಮಾಧ್ಯಮಗಳು ಸಂಭ್ರಮದಿಂದಲೇ ಪ್ರಚುರಪಡಿಸುತ್ತಿವೆ. ಈ ಸಂಘಿ ಕೂಟದ ಆಳ್ವಿಕೆಯಲ್ಲಿ ಈ ದೇಶ ಎತ್ತ ಸಾಗುತ್ತಿದೆ?

ಇಲ್ಲಿ ನಾವು ಗಮನಿಸಬೇಕಾದ ಮತ್ತೊಂದು ಕುತೂಹಲಕಾರಿ ವಿಷಯವಿದೆ. ಈ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಮಿತ್ ಶಾ ಗೈರು ಹಾಜರಾಗಿದ್ದಾರೆ. ದಕ್ಷಿಣದ ದೊಡ್ಡ ರಾಜ್ಯದಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದೇವೆಂದು ಕೊಚ್ಚಿಕೊಳ್ಳುತಿರುವ ಈ ಮಂದಿ ಯಾಕೆ ಗೈರಾದರು? ವಿಷಯ ಸ್ಪಷ್ಟ.

ಕರ್ನಾಟಕದ ನೆಲದಲ್ಲಿ ತಾವು ಹೂಡುತ್ತಿರುವ ಷಡ್ಯಂತ್ರಗಳೆಲ್ಲವೂ ಫಲ ಕೊಡುತ್ತವೆ ಎಂಬ ಖಾತ್ರಿ ಇವರಿಗಿಲ್ಲ. ರೆಡ್ಡಿ ಭಂಟ ಶ್ರೀರಾಮುಲು ‘ನೀವೆಲ್ಲ ಆಶ್ಚರ್ಯ ಪಡುವಷ್ಟು ಬಹುಮತವನ್ನು ಸಾಬೀತು ಮಾಡುತ್ತೇವೆ’ ಎಂದು ಘೋಷಿಸಿದ್ದರೂ ಕೂಡ, ಇದುವರೆಗಿನ ವರದಿಗಳ ಪ್ರಕಾರ ಈ ಆಪರೇಷನ್ ಸಕ್ಸಸ್ ಆಗಿರುವ ಲಕ್ಷಣವಿಲ್ಲ. ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ತಮ್ಮ ಶಾಸಕರನ್ನು ರೆಸಾರ್ಟ ಯಾತ್ರೆಯಲ್ಲಿಟ್ಟಿದ್ದಾರೆ. ಕೆಲವು ಶಾಸಕರ ಮೇಲೆ ಐಟಿ ದಾಳಿ ನಡೆಸುವ, ಇಡಿ ದಾಳಿ ನಡೆಸುವ ಬೆದರಿಕೆ ಹಾಕುತ್ತಿದ್ದಾರೆಂಬುದು ಈಗ ಓಪನ್ ಸೀಕ್ರೆಟ್. ಆದರೆ ಅಷ್ಟಾಗಿ ವರ್ಕ್‍ಔಟ್ ಆಗುತ್ತಿಲ್ಲ. ಹೀಗಾಗಿ ಆಪರೇಷನ್ ಕ-ಮಲ ಮಕಾಡೆ ಬಿದ್ದರೂ ಬೀಳಬಹುದೆಂಬ ಭಯ ಮೋದಿ-ಶಾ ಜೋಡಿಯನ್ನು ಕಾಡುತ್ತಿದೆ. ಅಂತಿಮವಾಗಿ ಸುಪ್ರಿಂಕೋರ್ಟ್‍ನಲ್ಲಿ ತಮ್ಮ ಪರವಾಗಿ ತೀರ್ಪು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರಾದರೂ ಎಲ್ಲೋ ಏನೋ ಎಡವಟ್ಟಾಗಿ ಕರ್ನಾಟಕ ಕೈತಪ್ಪಿದರೆ ಭಾರೀ ಮುಖಭಂಗ ಎದುರಿಸಬೇಕಾಗುವುದನ್ನು ತಪ್ಪಿಸಿಕೊಳ್ಳಲು ತೆರೆಮರೆಯಲ್ಲಿ ಆಪರೇಟ್ ಮಾಡುತ್ತಿದ್ದಾರೆ, ಅಷ್ಟೆ.

ಕೊನೆಯದಾಗಿ ಒಂದೆರಡು ಮಾತು.

ಕರ್ನಾಟಕದಲ್ಲಿ ಬಿಜೆಪಿ ಹೂಡುತ್ತಿರುವ ರಾಜಕೀಯ ಷಡ್ಯಂತ್ರವನ್ನು ಇಡೀ ದೇಶ ಅತ್ಯಂತ ಆತಂಕದಿಂದ ಗಮನಿಸುತ್ತಿದೆ. ಚುನಾವಣೆ ನಡೆಯುತ್ತಿದ್ದ ವೇಳೆಯಲ್ಲೇ ನಡೆದ ಐಟಿ ದಾಳಿಗಳು, ಇಡಿ ಆಟಗಳು, ಸಿಬಿಐ ಭೂತದ ಭಯ, ಎಲ್ಲದಕ್ಕಿಂತಲೂ ಹೆಚ್ಚಾಗಿ ಚುನಾವಣಾ ಆಯೋಗವನ್ನು ತನ್ನ ಕೀಲಿಗೊಂಬೆಯಂತೆ ಕುಣಿಸಿದ ಬಿಜೆಪಿ ಪಕ್ಷದ ಆಟಗಳಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಅಧಿಕಾರ ಹಿಡಿಯಲಿಕ್ಕಾಗಿ ಈ ನೆಲದ ಕಾನೂನುಗಳನ್ನು, ಸಂವಿಧಾನವನ್ನು ಗಾಳಿಗೆ ತೂರಿ, ಸಂವಿಧಾನಿಕ ಹುದ್ದೆಗಳನ್ನು ಮನಸೋ ಇಚ್ಚೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನೂ ನೋಡುತ್ತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಷ್ಟೆಲ್ಲ ಅಪಾಯಕಾರಿಯಾಗಿರುತ್ತದೆ ಎಂಬ ಸ್ಯಾಂಪಲ್‍ನ ದಿಗ್ದರ್ಶನವಾಗಿದೆ. ಮುಖ್ಯವಾಗಿ ರಾಜಕೀಯ ಪಕ್ಷಗಳಿಗೆ ಕಲಿಯಲು ಸಾಕಷ್ಟು ಪಾಠಗಳನ್ನು ಈ ವಿದ್ಯಮಾನಗಳು ಒದಗಿಸಿವೆ.

ಒಂದಂತೂ ಸ್ಪಷ್ಟ. ದೇಶದ ವಿವಿದ ರಾಜ್ಯಗಳಲ್ಲಿ ಸಾಮ ದಾನ ಭೇದ ದಂಡ ತಂತ್ರಗಳ ಮೂಲಕ ಅಧಿಕಾರ ಕೈವಶ ಮಾಡಿಕೊಂಡು ಅದನ್ನೇ ಜನಾದೇಶ ಅಂತ ಬೊಬ್ಬೆ ಹಾಕುತ್ತಾ ಡಂಗೂರ ಸಾರುತ್ತಿದ್ದ ಬಿಜೆಪಿ ಪಕ್ಷಕ್ಕೆ ನಮ್ಮ ಕನ್ನಡ ನಾಡು ಸುಲಭದ ತುತ್ತಲ್ಲ ಎಂಬ ಕಡಕ್ ಸಂದೇಶ ಈ ಕೂಟಕ್ಕೆ ರವಾನೆಯಾಗಿದೆ. ಈ ಸಂದೇಶ ಚುನಾವಣಾ ಪೂರ್ವ ತಂತ್ರಗಳ ವಿಷಯದಲ್ಲೂ, ನಂತರದ ಈ ವಿದ್ಯಮಾನದಲ್ಲೂ ನಿಚ್ಚಳವಾಗಿ ಕಾಣುತ್ತಿದೆ.

ಸಂಘಿ’ವಾಲಾರಿಂದ ಸಂವಿಧಾನಕ್ಕೆ ಉಳಿಗಾಲವಿಲ್ಲ

ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ಕೇಂದ್ರ ಬಿಂದು ಈಗಿನ ರಾಜ್ಯಪಾಲ ವಜುಭಾಯ್ ವಾಲಾ. ಈತನ ಕರಾಮತ್ತುಗಳು ಅರ್ಥಮಾಡಿಕೊಳ್ಳಬೇಕೆಂದರೆ ಅವರ ಪೂರ್ವಾಪರ ತಿಳಿದುಕೊಳ್ಳಬೇಕಾಗುತ್ತೆ. ಈ ಆಸಾಮಿ ಈ ಹುದ್ದೆಗೆ ಬಂದಿದ್ದು 2014ರ ಸೆಪ್ಟೆಂಬರ್ 1 ರಂದು. ಅದರ ಮುಂಚಿನ ದಿನ ಅಂದರೆ 31 ಆಗಸ್ಟ್ 2014ರವರೆಗೆ ಗುಜರಾತ್ ವಿಧಾನಸಭೆಯ ಸ್ಪೀಕರ್ ಆಗಿದ್ದರು. 2014ರ ಮೇ ತಿಂಗಳಲ್ಲಿ ಮೋದಿ ಪ್ರಧಾನಿಯಾಗಿ ದೆಹಲಿ ಗದ್ದುಗೆ ಹಿಡಿದರು. ಆಯಕಟ್ಟಿನ ಹುದ್ದೆಗಳಿಗೆ ತಮ್ಮ ನೆಚ್ಚಿನ ಭಂಟರನ್ನು ಪ್ರತಿಷ್ಠಾಪಿಸಿ, ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಭಾಗವಾಗಿ ಸಂಘಿ ಯೋಜನೆಯ ಭಾಗವಾಗಿ ‘ವಾಲಾ’ ಕರ್ನಾಟಕ ರಾಜಭವನದ ಅಧಿಪತಿಯಾಗಿದ್ದಾರೆ.

ಬಾಲ್ಯದಲ್ಲೇ ಆರೆಸ್ಸೆಸ್ ಸೇರಿಕೊಂಡ ವಾಲಾ 1971ರಲ್ಲೇ ಬಿಜೆಪಿಯ ಹಿಂದಿನ ರೂಪವಾಗಿದ್ದ ಜನಸಂಘ ಸೇರಿದರು. ರಾಜಕೋಟ್‍ನ ಮೇಯರ್ ಆದರು. ನಂತರ ಶಾಸಕರಾಗಿ 7 ಬಾರಿ ಆಯ್ಕೆಯಾಗಿದ್ದ ದಾಖಲೆ ಮಾಡಿದರು. 1998ರಿಂದ 2012ರವರೆಗೆ ವಿವಿಧ ಇಲಾಖೆಗಳಲ್ಲಿ ಕ್ಯಾಬಿನೆಟ್ ಸಚಿವಾಗಿದ್ದರು. ಕೇಶುಭಾಯಿ ಪಟೇಲ್ ಬಣದಲ್ಲಿದ್ದ ವಜುಭಾಯಿ ನಂತರ ಗುಜರಾತಿನ ಸಿಎಂ ಗದ್ದುಗೆ ಮೋದಿ ಕೈವಶವಾಗುತ್ತಿದ್ದಂತೆ ಮೋದಿಗೆ ಸಮೀಪವಾದರು. ಮೋದಿಗಾಗಿ ತನ್ನ ಸ್ವಕ್ಷೇತ್ರ ರಾಜಕೋಟ್ ಅನ್ನು ಬಿಟ್ಟುಕೊಟ್ಟರು. ನಂತರ ಬಂದ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾದರು. ಸತತ ಮೂರು ಅವಧಿಗೆ ಗುಜರಾತ್ ಬಿಜೆಪಿಯ ಅಧ್ಯಕ್ಷರೂ ಆಗಿದ್ದರು. ಕೊನೆಯದಾಗಿ 23 ಜನವರಿ 2012ರಿಂದಲೂ ಗುಜರಾತ್‍ನ್ ಸ್ಪೀಕರ್ ಹುದ್ದೆಯಲ್ಲಿದ್ದವರು. ಮರುದಿನದಿಂದ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡರು. ಇದೆಲ್ಲ ರಾಜಕಾರಣವಾಯ್ತು. ಇನ್ನು ಈತನ ಬ್ಯುಸಿನೆಸ್‍ಗಳೂ ಕೂಡ ದೊಡ್ಡದೇ ಇದೆ. ರಾಜಕೋಟ್‍ನ ರಿಯಲ್ ಎಸ್ಟೇಟ್‍ನಲ್ಲಿ ಇವರು ದೊಡ್ಡ ಕುಳ. ಅದೇನೇ ಇದ್ದರೂ ಸಂಘಿ ಕೂಟದಲ್ಲಿ ಮಾತ್ರ ಇವರು ಸ್ವಾಮಿ ನಿಷ್ಠೆಗೆ ಹೆಸರಾಗಿದ್ದಾರಂತೆ. ಆ ನಿಷ್ಠೆ ಈ ದೇಶಕ್ಕೋ ಅಥವಾ ನಾವೆಲ್ಲ ನಂಬಿರುವ ಸಂವಿಧಾನಕ್ಕೋ ಅಲ್ಲವೇ ಅಲ್ಲ.

ಮಾರ್ಗದರ್ಶಿ ಸೂತ್ರ
ಅತಂತ್ರ ವಿಧಾನಸಭೆ ಏರ್ಪಟ್ಟ ಸನ್ನಿವೇಶದಲ್ಲಿ ರಾಜ್ಯಪಾಲರು ಏನು ಮಾಡಬೇಕು ಎಂಬುದನ್ನು ಸುಪ್ರಿಂ ಕೋರ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿದೆ. 1. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಪಕ್ಷಗಳಿಗೆ ಮೊದಲ ಆದ್ಯತೆ ಕೊಡಬೇಕು.
2. ಅತ್ಯಂತ ದೊಡ್ಡ ಸಂಖ್ಯೆಯನ್ನು ಹೊಂದಿರುವ ಪಕ್ಷಕ್ಕೆ ಅವಕಾಶ ಕೊಡಬೇಕು. 3. ಚುನಾವಣೋತ್ತರ ಮೈತ್ರಿ ಪಕ್ಷಗಳಿಗೆ ಅವಕಾಶ ಕೊಡಬೇಕು. ಆದರೆ ಇಲ್ಲಿ ಒಂದು ಪೂರ್ವ ನಿಬಂಧನೆಯೇನೆಂದರೆ ಹೀಗೆ ಆಹ್ವಾನಿತ ಪಕ್ಷಗಳು ಬಹುಮತ ಸಾಬೀತು ಮಾಡುವಂತಿರಬೇಕು. ಆ ಸಾಧ್ಯತೆಯಿಲ್ಲದೆ ಇದ್ದಲ್ಲಿ ಇತರೆ ಪಕ್ಷಗಳಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ. ಆದರೆ ಇದನ್ನೆಲ್ಲಾ ಮರೆಮಾಚಿ ಬಿಜೆಪಿ ಮತ್ತು ಅವರ ಮಿತ್ರರು ಭಂಡವಾದ ಮುಂದಿಡುತ್ತಿದ್ದಾರೆ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here