Homeಸಂದರ್ಶನಪಿ.ಸಾಯಿನಾಥ್ ಅವರ ಸಂದರ್ಶನ

ಪಿ.ಸಾಯಿನಾಥ್ ಅವರ ಸಂದರ್ಶನ

- Advertisement -
 1. ಭಾರತ ಎದುರಿಸುತ್ತಿರುವ ವರ್ತಮಾನದ ಕೃಷಿ ಬಿಕ್ಕಟ್ಟನ್ನು ಹೇಗೆ ವಿಶ್ಲೇಷಿಸುತ್ತೀರಿ?
- Advertisement -

ಕೃಷಿ ಬಿಕ್ಕಟ್ಟು ಎಂದಾಕ್ಷಣ ರೈತರ ಆತ್ಮಹತ್ಯೆಗಳನ್ನು ಮಾತ್ರವೇ ಬಿಕ್ಕಟ್ಟು ಎಂದು ಬಿಂಬಿಸುವ ಒಂದು ಪರಿಪಾಠ ಬೆಳೆದಿದೆ. ಬಿಕ್ಕಟ್ಟು ಎಂದರೆ ರೈತರ ಆತ್ಮಹತ್ಯೆಗಳಷ್ಟೇ ಅಲ್ಲ; ಬದಲಿಗೆ ಅವು ತೀವ್ರವಾದ ಕೃಷಿ ಬಿಕ್ಕಟ್ಟಿನ ಸಿಂಪ್ಟಮ್ಸ್ ಮಾತ್ರ. ಆತ್ಮಹತ್ಯೆ ಎಂಬುದು ಒಂದು ರೋಗಸೂಚಕ ಲಕ್ಷಣವೇ ಹೊರತು ಅದೇ ರೋಗವಲ್ಲ. ಈ ಬಿಕ್ಕಟ್ಟಿನ ಪರಿಣಾಮವಾಗಿ ತೀವ್ರವಾದ ಆರ್ಥಿಕ, ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ; ಹಾಗೆಂದು ಆತ್ಮಹತ್ಯೆ ಮಾಡಿಕೊಳ್ಳದೆ ಇರುವ ರೈತರು ಆರಾಮಾಗಿದ್ದಾರೆ ಎಂದರ್ಥವಲ್ಲ.

ಈ ಕೃಷಿ ಬಿಕ್ಕಟ್ಟಿಗೆ ಒಂದು ಸರ್ವವ್ಯಾಪಿ ಆಯಾಮವಿದೆ. ಭೂಮಿಯ ಒಡೆತನ ಹಾಗೂ ನೇರವಾಗಿ ಉಳುಮೆ ಮಾಡುವುದನ್ನು ಹೊರತುಪಡಿಸಿ ಕೃಷಿ ಕ್ಷೇತ್ರದ ಸರ್ವಸ್ವವನ್ನೂ ಕಾರ್ಪೊರೇಟ್ ಕಂಪನಿಗಳೇ ನಿಯಂತ್ರಿಸುತ್ತವೆ. ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಎಲ್ಲವೂ ಇಂದು ಕಾರ್ಪೊರೇಟ್ ಕಂಪನಿಗಳ

ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವುದೇ ಈ ಬಿಕ್ಕಟ್ಟಿಗೆ ಪ್ರಧಾನ ಕಾರಣ.

 1. ಕಾರ್ಪೊರೇಟ್ ಕಂಪನಿಗಳ ನಿಯಂತ್ರಣವನ್ನು ಸ್ವಲ್ಪ ವಿವರಿಸಿ.

ಇಲ್ಲಿಗೆ ಸುಮಾರು 25 ವರ್ಷಗಳ ಹಿಂದೆ ಬಿತ್ತನೆ ಬೀಜದ ಉತ್ಪಾದನೆ ಸಂಪೂರ್ಣವಾಗಿ ರೈತರ ಕೈಯಲ್ಲಿತ್ತು. ಅವು ಸ್ವಾಭಾವಿಕ ಬೀಜಗಳಾಗಿದ್ದರಿಂದ ಸಹಜವಾಗಿಯೇ ಶಕ್ತಿಯುತವಾಗಿದ್ದವು. ಬೀಜಗಳ ಮರು ಉತ್ಪಾದನೆ ಹಾಗೂ ರೈತರ ನಡುವೆ ಬೀಜಗಳ ವಿನಿಮಯ ಕೂಡ ನಡೆಯುತ್ತಿತ್ತು.

ಆದರೆ ಇಂದು ವಾಣಿಜ್ಯ ಬೆಳೆಗಳ ಬಿತ್ತನೆ ಮಾತ್ರವಲ್ಲದೆ ಆಹಾರ ಬೆಳೆಗಳ ಬಿತ್ತನೆ ಬೀಜಗಳೂ ಸಹ ಕಾರ್ಪೊರೇಟ್ ಕಂಪನಿಗಳ ಹಿಡಿತದಲ್ಲಿವೆ. ಬೀಜ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲಿಕ್ಕಾಗಿ ಈ ಲೂಟಿಕೋರ ಕಂಪನಿಗಳು ಬೀಜಗಳ ಮರು ಉತ್ಪಾದನೆಯ ಸಾಮಥ್ರ್ಯವನ್ನೇ ನಾಶಪಡಿಸಿದ್ದಾರೆ. ಹಾಗಾಗಿ ಪ್ರತಿ ಬಾರಿ ಬಿತ್ತನೆ ಮಾಡಬೇಕಾದಾಗಲೂ ರೈತರು ಅನಿವಾರ್ಯವಾಗಿ ಈ ಬಹುರಾಷ್ಟ್ರೀಯ ಕಂಪನಿಗಳ ಬೀಜಗಳನ್ನೇ ಅವಲಂಬಿಸಬೇಕಾದ ದುಸ್ಥಿತಿ ಉಂಟಾಗಿದೆ.

ಈಗ ಪರಿಸ್ಥಿತಿ ಹೇಗಾಗಿದೆಯೆಂದರೆ ಕೇವಲ 3 ಅಥವಾ 4 ಕಂಪನಿಗಳು ಇಡೀ ಜಗತ್ತಿನ ಬೀಜ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಉದಾ: ಮೊನ್ಸಾಂಟೋ ಕಂಪನಿಯೊಂದೇ ಜಗತ್ತಿನ ಒಟ್ಟು ಬೀಜ ಮಾರುಕಟ್ಟೆಯ ಶೇಕಡ 30 ಭಾಗವನ್ನು ನಿಯಂತ್ರಿಸುತ್ತಿದೆ.

ಹಾಗೆಯೆ ಸ್ವಾಭಾವಿಕವಾದ ಕೀಟನಾಶಕ ವಿಧಾನವನ್ನು ನಾಶಗೊಳಿಸಿ ಕೆಮಿಕಲ್ ಕಂಪನಿಗಳ ಕೀಟನಾಶಕಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ. ಕೊಟ್ಟಿಗೆ ಗೊಬ್ಬರ ಬಳಕೆಯಂಥಾ ಸರಳ ಹಾಗೂ ಶಕ್ತಿಯುತ ವಿಧಾನಗಳ ಸ್ಥಾನವನ್ನು ಕೆಮಿಕಲ್ ಫರ್ಟಿಲೈಸರ್ಸ್‍ಗಳು ಆಕ್ರಮಿಸಿವೆ.  ಈ ಫರ್ಟಿಲೈಸರ್ಸ್ ತಯಾರಕರು ಯಾರು? ಟಾಟಾ, ಅಂಬಾನಿ, ಬಿರ್ಲಾ ಮುಂತಾದ ಭಾರೀ ಬಂಡವಾಳಿಗರು. ನೀರು, ವಿದ್ಯುತ್ ಎಲ್ಲವೂ ರೈತರಿಗೆ ದುಬಾರಿಯಾಗಿದೆ. ಹಾಗೆಯೇ ಕೃಷಿ ಮಾರುಕಟ್ಟೆಯ ಮೇಲೆ ರೈತರಿಗೆ ಯಾವುದೇ ಹಿಡಿತವಿಲ್ಲ; ಬದಲಿಗೆ ಕಾರ್ಪೊರೇಟ್ ಕಂಪನಿಗಳು ಕ್ರಮೇಣ ತಮ್ಮ ಹಿಡಿತ ಸಾಧಿಸುತ್ತಿವೆ. ಈ ಎಲ್ಲಾ ಕಾರ್ಪೊರೇಟ್ ಕಂಪನಿಗಳ ಲಾಭ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ; ಅವರ ಕಂಪನಿಗಳ ಶೇರುಗಳ ಮೌಲ್ಯ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ.

ಆದರೆ ಅದೇ ಸಂದರ್ಭದಲ್ಲಿ ಈ ದುಷ್ಟ ಕೂಟದ ಹಿಡಿತಕ್ಕೆ ಸಿಲುಕಿರುವ ಇಡೀ ರೈತಾಪಿಯ ಬದುಕು ಘೋರ ಸಂಕಷ್ಟಕ್ಕೆ ಸಿಲುಕಿದೆ; ರೈತರ ಆತ್ಮಹತ್ಯೆಗಳ ಸಂಖ್ಯೆಯೂ ಏರುತ್ತಲೇ ಇದೆ.

 

 1. ಹೈಬ್ರಿಡ್ ತಳಿಗಳನ್ನು ಒಳಗೊಂಡ ಹಸಿರು ಕ್ರಾಂತಿಯಿಂದ ಉತ್ಪಾದನೆ ಹೆಚ್ಚಾಗಿ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂಬ ಪ್ರಚಾರವಿದೆಯಲ್ಲಾ…?

ಈ ಹಸಿರು ಕ್ರಾಂತಿಯ ಪರಿಣಾಮವನ್ನು ಒಂದು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ.  ಸಮಾನ ಆರೋಗ್ಯವನ್ನು ಹೊಂದಿರುವ ಒಂದೇ ವಯಸ್ಸಿನ ಒಂದು ಜೋಡಿ ಅವಳಿ ಮಕ್ಕಳನ್ನು ತೆಗೆದುಕೊಳ್ಳಿ. ಹತ್ತು ವರ್ಷಗಳ ಕಾಲ ಒಂದು ಮಗುವಿಗೆ ಸ್ಟಿರಾಯಿಡ್ಸ್ ಕೊಟ್ಟು ಬೆಳೆಸಿ; ಮತ್ತೊಂದು ಮಗುವಿಗೆ ಸಾಮಾನ್ಯ ಆಹಾರದಲ್ಲೇ ಬೆಳೆಸಿ. ಹತ್ತು ವರ್ಷಗಳಲ್ಲಿ ಸ್ಟಿರಾಯಿಡ್ಸ್ ತೆಗೆದುಕೊಂಡ ಮಗು ಸಾಮಾನ್ಯ  ಮಗುವನ್ನು ಎಲ್ಲ ರೀತಿಯಿಂದಲೂ ಮೀರಿಸಿ ಬೆಳೆದಿರುತ್ತದೆ. ದಷ್ಟಪುಷ್ಟವಾಗಿ ಚಾಂಪಿಯನ್ ಆಗಿಬಿಟ್ಟಿರುತ್ತದೆ. ಆ ನಂತರದ ಹತ್ತು ವರ್ಷಗಳಲ್ಲಿ ಏನಾಗಿರುತ್ತದೆ? ಚಾಂಪಿಯನ್ ಆಗಿದ್ದ ಮಗು ದುರ್ಮರಣ ಹೊಂದಿರುತ್ತದೆ. ಆದರೆ ಸಾಮಾನ್ಯ ಆರೈಕೆಯಲ್ಲಿದ್ದ ಮಗು ಶಕ್ತಿಯುತವಾಗಿ ಆರೋಗ್ಯವಾಗಿ ಬೆಳೆದಿರುತ್ತದೆ.

ಹಸಿರು ಕ್ರಾಂತಿಯಲ್ಲಿ ಆಗಿದ್ದೂ ಇದೇ. ಹಾಗಾಗಿ ಕೃಷಿ ಕ್ಷೇತ್ರದಲ್ಲಿ ನಾವು ದೈತ್ಯಾಕಾರದ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ದೇಶದ ಒಟ್ಟಾರೆ ಕೃಷಿ ಭೂಮಿಯಲ್ಲಿ ಶೇಕಡ 25 ರಷ್ಟು ಮಣ್ಣಿನ ಫಲವತ್ತತೆ ನಾಶವಾಗಿದೆ. ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯೇ ಇದಕ್ಕೆ ಪ್ರಧಾನ ಕಾರಣ. ಫಲವತ್ತಾದ  ಭೂಮಿ ಬರಡಾಗಿದೆ. ಆಂಧ್ರದ ಗೋದಾವರಿ ಪ್ರದೇಶ ಇದಕ್ಕೆ ಉತ್ತಮ ಉದಾಹರಣೆ. ಇತಿ ಮಿತಿಯಿಲ್ಲದ ಕೊಳವೆ ಬಾವಿಗಳಿಂದಾಗಿ ಅಂತರ್ಜಲ ಕುಸಿದಿದೆ. ರಾಸಾಯನಿಕಗಳು ಅಂತರ್ಜಲಕ್ಕೆ ಬೆರೆತು ನೀರು ಕಲುಷಿತಗೊಂಡಿದೆ. ಹೀಗೆ ಭೂಮಿ-ನೀರು-ಗಾಳಿ-ಪರಿಸರ ಎಲ್ಲದರ ಮೇಲೆ ಈ ಕೃಷಿ ಪದ್ಧತಿ ತೀವ್ರ ದುಷ್ಪರಿಣಾಮವನ್ನುಂಟು ಮಾಡಿದೆ.

 

 1. ಆಹಾರದ ಸಮಸ್ಯೆಯನ್ನು ನಿವಾರಣೆ ಮಾಡಿದೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸರ್ಕಾರ ಕೊಡುತ್ತಿರುವ ಅಂಕಿಅಂಶಗಳನ್ನೇ ನೋಡಿ:  1950 ರಿಂದ 1990 ರವರೆಗೆ ಜನಸಂಖ್ಯಾ ಏರಿಕೆ ಪ್ರಮಾಣಕ್ಕಿಂತಲೂ ಆಹಾರ ಉತ್ಪಾದನೆಯ ಪ್ರಮಾಣ ಹೆಚ್ಚಾಗಿತ್ತು. ಈಗ ಜನಸಂಖ್ಯೆ ಏರಿಕೆಯ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ; ಆದರೆ ಆಹಾರ ಉತ್ಪಾದನೆಯ ಪ್ರಮಾಣ ಅದಕ್ಕಿಂತಲೂ ಕಡಿಮೆಯಾಗಿದೆ. ಹಾಗಾಗಿ ದೇಶದಲ್ಲಿ ಧಾನ್ಯಗಳು ಹಾಗೂ ಬೇಳೆಗಳ ತಲಾವಾರು ಲಭ್ಯತೆಯ ಪ್ರಮಾಣ ತೀವ್ರವಾಗಿ ಕುಸಿದಿದೆ. ನೀವು ಯಾವುದೇ ಬಜೆಟ್ ಅಥವ ಯೋಜನಾ ಆಯೋಗದ ವರದಿಯನ್ನು ತೆರೆದು ನೋಡಿದರೂ ಈ ಅಂಶಗಳೇ ಕಣ್ಣಿಗೆ ರಾಚುತ್ತವೆ. ಪರಿಣಾಮವಾಗಿ ಶೇಕಡ 50 ರಷ್ಟು ಗ್ರಾಮೀಣ ಮಕ್ಕಳು ಹಾಗೂ ಮಹಿಳೆಯರು  ಅಪೌಷ್ಟಿಕತೆಯಿಂದ ನರಳುತ್ತಿರುವ ವಾಸ್ತವ ಚಿತ್ರಣ ನಮ್ಮ ಕಣ್ಣೆದುರಿನಲ್ಲೇ ಇದೆ.

ಮತ್ತೊಂದು ಕಡೆ ಕಳೆದ 20 ವರ್ಷದಲ್ಲಿ ಕೃಷಿಯ ಉತ್ಪಾದನೆ ಆಹಾರ ಧಾನ್ಯಗಳ ಉತ್ಪಾದನೆಯಿಂದ ವಾಣಿಜ್ಯ ಬೆಳೆಗಳಿಗೆ ಪಲ್ಲಟಗೊಂಡಿದೆ. ನಮ್ಮ ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಲಾಬಿಯ ಪರಿಣಾಮವಾಗಿ ಅನುಸರಿಸುತ್ತಿರುವ ಕೃಷಿ ನೀತಿಗಳೇ ಇದಕ್ಕೆ ಕಾರಣ.

ಗ್ರಾಮೀಣ ಬಡಜನತೆಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಮತ್ತೊಂದು ಉದಾಹರಣೆ ನೋಡೋಣ. ಕರ್ನಾಟಕದ ಮಂಡ್ಯ ಜಿಲ್ಲೆಗೆ ನಾನು ಭೇಟಿ ನೀಡಿದಾಗ ಕಂಡುಬಂದ ಸಂಗತಿಯಿದು.  ಸರ್ಕಾರದ ಕೃಷಿ ನೀತಿಗಳಿಂದಾಗಿಯೇ ನಿರ್ಗತಿಕಳಾಗಿರುವ ಜಯಲಕ್ಷ್ಮಮ್ಮ ಎಂಬ ರೈತ ವಿಧವೆಗೆ ಆಹಾರ ಪಡಿತರದ ಮೂಲಕ ದಿನವೊಂದಕ್ಕೆ ಕೇವಲ 45 ಗ್ರಾಮ್ ಆಹಾರ ಧಾನ್ಯಗಳು ಸಿಗುತ್ತಿವೆ. ಆದರೆ ಪರಪ್ಪನ ಅಗ್ರಹಾರದಲ್ಲಿರುವ ಖೈದಿಗೆ ದಿನಂಪ್ರತಿ 750 ಗ್ರಾಮ್ ಆಹಾರ ಲಭ್ಯವಾಗುತ್ತಿದೆ! ಎಂಥಾ ವಿರೋಧಾಭಾಸ ಅಲ್ಲವೇ?

 1. ಚರಿತ್ರೆಯನ್ನು ಗಮನಿಸುವುದಾದರೆ ಸಾಮಾಜಿಕ ಬೇಗುದಿ ಹೆಚ್ಚಿದಾಗ ಬಂಡಾಯದ ರೂಪ ತಾಳುವುದು ಅನಿವಾರ್ಯವಾಗುತ್ತದಲ್ಲ?

ಅದೊಂದು ವಿಪರ್ಯಾಸದ ಸಂಗತಿ. 1940-50ರ ದಶಕದಲ್ಲಿ ನಡೆದ ತೆಲಂಗಾಣ ಚಳವಳಿ ಹಾಗೂ ಇತರ ಎಡಪಂಥೀಯ ಚಳವಳಿಗಳು ರಾಜಕೀಯ ಹಾಗೂ ಆರ್ಥಿಕ ನೀತಿಗಳನ್ನು ಬದಲಿಸುವಷ್ಟು ಪ್ರಬಲವಾಗಿದ್ದವು. 1960-70ರ ದಶಕಗಳಲ್ಲಿ ದೊಡ್ಡ ಪ್ರಮಾಣದ ಭೂ ಆಕ್ರಮಣ ಚಳವಳಿಗಳು ನಡೆದವು. ಅವು ಸರ್ಕಾರಗಳನ್ನೇ ಉರುಳಿಸುವಷ್ಟು ಪ್ರಭಾವಶಾಲಿಯಾಗಿದ್ದವು. ಆದರೆ ರೈತರ ಬೃಹತ್ ಚಳವಳಿಗಳ ಬದಲಿಗೆ ಇಂದು ದೊಡ್ಡ ಪ್ರಮಾಣದಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಿವೆ.

ಈಗಿನ ಕಾಲದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಅವು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ.

 

 1. ಇಷ್ಟೆಲ್ಲಾ ಗಂಭೀರ ಸಮಸ್ಯೆಗಳಿದ್ದರೂ ಬಲಿಷ್ಠ ಚಳವಳಿಗಳು ರೂಪುಗೊಳ್ಳುತ್ತಿಲ್ಲ. ಕಾರಣವೇನು?

ಮೊದಲನೆಯದಾಗಿ, 1947ರ ನಂತರ ನಾವು ಪರದೇಶಿ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿಲ್ಲ; ಬದಲಿಗೆ  ಸ್ವದೇಶಿ ಆಡಳಿತಗಾರರ ವಿರುದ್ಧ ಹೋರಾಡಬೇಕಾಗಿದೆ. ಹೀಗಾಗಿ ಜನರನ್ನು ಮೊಬಿಲೈಸ್ ಮಾಡುವುದು ಅಷ್ಟು ಸುಲಭದ ವಿಷಯವಲ್ಲ.

ಎರಡನೇಯದಾಗಿ, ನಾವು ಇಂದಿನ ಪ್ರಭುತ್ವದ ದಮನಕಾರಿ ಶಕ್ತಿಯನ್ನು ಕಡೆಗಣಿಸುವಂತಿಲ್ಲ.  ಆಧುನಿಕ ಪ್ರಭುತ್ವಗಳು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿವೆ. ಪೊಲೀಸ್ ಪಡೆಗಳು ಅತ್ಯಾಧುನಿಕವಾಗಿ ಸಜ್ಜಾಗಿವೆ. ಸಂಪರ್ಕ ಜಾಲ ಅತ್ಯಾಧುನಿಕಗೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಸರ್ಕಾರಗಳು ಜನರನ್ನು ಒಡೆದು ಆಳುವಲ್ಲಿ ಬ್ರಿಟಿಷರನ್ನೇ ಮೀರಿಸಿವೆ.

ಮತ್ತೊಂದು ಪ್ರಮುಖ ಅಂಶವನ್ನು ನಾವು ಗಮನಿಸಲೇಬೇಕು. ಅದೇನೆಂದರೆ ಭಾರತದ ಮಧ್ಯಮ ವರ್ಗ ಹೊಸ ಗುಣವನ್ನು ಮೈಗೂಡಿಸಿಕೊಂಡಿದೆ. 30 ವರ್ಷಗಳ ಹಿಂದೆ ಪ್ರತಿಯೊಬ್ಬ ಮಧ್ಯಮ ವರ್ಗದ ಭಾರತೀಯ ಒಂದಲ್ಲಾ ಒಂದು ಸಂಘಟನೆಯ ಸದಸ್ಯರಾಗಿರುತ್ತಿದ್ದರು. ಆಗ ಬಲಿಷ್ಟವಾದ ಪತ್ರಕರ್ತರ ಯೂನಿಯನ್‍ಗಳಿದ್ದವು. ಉದ್ಯೋಗ ಭದ್ರತೆಯಿತ್ತು. ಈಗ ನಾವು ಗುತ್ತಿಗೆ ಕಾರ್ಮಿಕರಾಗಿದ್ದೇವೆ. ಯೂನಿಯನ್‍ಗಳು ಒಡೆದು ಹಾಳಾಗಲಿ ಅಂತ ಬಯಸುವ ಮಿಡಲ್‍ಕ್ಲಾಸ್ ಮಂದಿಯೇ ಈಗ ಹೆಚ್ಚಾಗಿದ್ದಾರೆ. ಎಲ್ಲರೂ ಅಲ್ಲವಾದರೂ ಬಹುತೇಕ ಮಂದಿ ಇಂಥಾ ಗುಣವನ್ನು ರೂಡಿಸಿಕೊಂಡಿದ್ದಾರೆ. ಅವರ ಆರ್ಥಿಕತೆ ಮತ್ತು ದೃಷ್ಟಿಕೋನ ಎರಡೂ ಸಾಕಷ್ಟು ಬದಲಾಗಿವೆ. ಅವರು ಉದಾರೀಕರಣ, ಖಾಸಗೀಕರಣ, ನವ ಆರ್ಥಿಕ ನೀತಿಗಳಿಂದ ನಮಗೇನೋ ಭಾಗ್ಯ ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ…. ಇವು ಈ ಕಾಲಘಟ್ಟದ ಕಠಿಣ ಸವಾಲುಗಳು.

ಆದರೂ ನಿರಾಶರಾಗಬೇಕಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ನಾನಾ ರೂಪದಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ನರ್ಮದಾ ಚಳವಳಿ, ಪೋಸ್ಕೊ ವಿರುದ್ಧದ ಚಳವಳಿ, ಪೊಲಾವರಂ,  ಛತ್ತೀಸ್‍ಘಡ, ಎಸ್‍ಇಜಡ್ ವಿರೋಧಿ ಚಳವಳಿ, ಪರಿಸರ ಚಳವಳಿ, ಕಾರ್ಮಿಕ ಚಳವಳಿ ಹೀಗೆ ನಿರಂತರವಾಗಿ ಹೋರಾಟಗಳು ನಡೆಯುತ್ತಲೇ ಇವೆ. ಇಂಥಾ ಹೋರಾಟಗಳೇ ನಮ್ಮ ಭವಿಷ್ಯದ ಭರವಸೆಗಳು.

 

 1. ಅಬಿವೃದ್ಧಿಶೀಲ ದೇಶವಾಗಿ ನಮ್ಮ ದೇಶ ವೇಗವಾಗಿ ಮುನ್ನಡೆಯುತ್ತಿದೆ ಎಂಬ ಬಗ್ಗೆ…

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂಬ ಪ್ರಚಾರವಿದೆ. ಈ ಅಭಿವೃದ್ಧಿಯನ್ನು  ಅಳೆಯುವ ಮಾನದಂಡ ಯಾವುದು? ಒಂದು ಜಿಡಿಪಿ ಮತ್ತು ತಲಾವಾರು ಆದಾಯದ ಹೆಚ್ಚಳ; ಮತ್ತೊಂದು ಸೆನ್ಸೆಕ್ಸ್ ಏರಿಕೆ.

ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ಎಂದರೇನು? ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳೋಣ. 100 ಜನರ ಒಂದು ಗುಂಪನ್ನು ತೆಗೆದುಕೊಳ್ಳಿ. ಅದರಲ್ಲಿ 99 ಮಂದಿಯ ಆದಾಯ ತಲಾ 100 ರೂಪಾಯಿಯಂತೆ ಒಟ್ಟು 9900 ಆಗಿದ್ದರೆ, ಉಳಿದ ಒಬ್ಬರ ಆದಾಯ ಒಂದು ಲಕ್ಷ ಎಂದಿಟ್ಟುಕೊಳ್ಳಿ. ಆಗ ಆ ಗುಂಪಿನ ಒಟ್ಟು ಆದಾಯ 1,09,900 ರೂಪಾಯಿಯಾಗುತ್ತದೆ. ಈ ಜಿಡಿಪಿ ಲೆಕ್ಕಾಚಾರವೇ ಹೀಗೆ.  ಹಾಗೇ ಆ ಗುಂಪಿನ ತಲಾವಾರು ಆದಾಯ 1099 ರೂಪಾಯಿಯಾಗುತ್ತದೆ. ಅಂದರೆ ಈ ಲೆಕ್ಕ ಬಡತನದ ಸ್ಥಿತಿಗತಿಯನ್ನಾಗಲಿ, ಬಂಡವಾಳಿಗರ ಸ್ಥಿತಿಯನ್ನಾಗಲಿ ಸರಿಯಾಗಿ ತಿಳಿಸುವುದಿಲ್ಲ. ಇಂಥಾ ಜಿಡಿಪಿ ಲೆಕ್ಕಾಚಾರದ ಏರಿಕೆಯನ್ನೇ ಅಭಿವೃದ್ಧಿಯೆಂದು ಬಿಂಬಿಸಲಾಗುತ್ತದೆ. ಆದರೆ ದಿನೇದಿನೇ ಮಾನವ ಅಭಿವೃದ್ಧಿ ಕುಸಿಯುತ್ತಿದೆ. ಸಾಮಾಜಿಕ ಆರ್ಥಿಕ ಅಸಮಾನತೆ ಹಿಂದೆಂದೂ ಇಲ್ಲದಷ್ಟು ಅಗಾಧವಾಗಿ ಬೆಳೆಯುತ್ತಿದೆ.

ಇನ್ನು ಈ ಸೆನ್ಸೆಕ್ಸ್ ಲೆಕ್ಕಾಚಾರ ಮತ್ತಷ್ಟು ದಾರುಣವಾದುದು. ಒಂದು ಉದಾಹರಣೆ ನೋಡಿ. ಕೆಲ ವರ್ಷಗಳ ಹಿಂದೆ ಸುನಾಮಿಯಿಂದ 11 ದೇಶಗಳು ತತ್ತರಿಸಿ ಹೋದವು. ಸುಮಾರು 2 ಲಕ್ಷ ಜನ ಪ್ರಾಣ ಕಳೆದುಕೊಂಡರು. ಕೋಟ್ಯಾಂತರ ಮಂದಿ ಮನೆಮಠ ಕಳೆದು ಬಿಕಾರಿಗಳಾದರು. ಒಟ್ಟಾರೆ ಸುನಾಮಿ ಎಲ್ಲೆಡೆ ವಿಧ್ವಂಸವನ್ನು ಸೃಷ್ಟಿಸಿತ್ತು.

ಹೀಗೆ ವಿನಾಶಕ್ಕೀಡಾದ 11 ದೇಶಗಳಲ್ಲಿ ಭಾರತ, ಇಂಡೋನೇಷಿಯ, ಥಾಯ್‍ಲ್ಯಾಂಡ್, ಮಲೇಷಿಯ, ಶ್ರೀಲಂಕಾ ಈ 5 ದೇಶಗಳು ಪ್ರಮುಖ ಸ್ಟಾಕ್ ಎಕ್ಸ್‍ಚೇಂಜ್‍ಗಳನ್ನು ಹೊಂದಿವೆ. ಈ ಸುನಾಮಿ ಅಪ್ಪಳಿಸಿದ 72 ಗಂಟೆಗಳಲ್ಲಿ ಈ ಎಲ್ಲಾ 5 ಸ್ಟಾಕ್ ಎಕ್ಸ್‍ಚೇಂಜ್‍ಗಳ ಸೆನ್ಸೆಕ್ಸ್ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮಟ್ಟಕ್ಕೇರಿತು. ಹೀಗೆ ದಿಡೀರ್ ಏರಿಕೆಯ ಕಾರಣ, ವಿಧ್ವಂಸಗೊಂಡ ಆರ್ಥಿಕತೆಯ ಪುನರ್‍ನಿರ್ಮಾಣಕ್ಕಾಗಿ ಅಪಾರ ಪ್ರಮಾಣದಲ್ಲಿ ಡಾಲರ್ ಹರಿದುಬರುತ್ತದೆಯೆಂಬ ಲೆಕ್ಕಾಚಾರ. ಅಂದರೆ ಇಡೀ ದೇಶ ವಿಧ್ವಂಸಕ್ಕೀಡಾಗಿದ್ದ ಸಂದರ್ಭದಲ್ಲಿ ಉತ್ತುಂಗಕ್ಕೇರುವ ಸೂಚ್ಯಂಕವೇ ಇಂದು ಅಭಿವೃದ್ಧಿಯ ಮಾನದಂಡವಾಗಿದೆ.

ಆದರೆ 20 ವರ್ಷಗಳ ಹಿಂದೆ ಅಭಿವೃದ್ಧಿ ಎಂದರೆ ಬೇರೆಯೇ ಅರ್ಥವಿತ್ತು. ಹಣಕಾಸು ಕೊರತೆಯನ್ನು ಬೇರೆಯೇ ರೀತಿಯಲ್ಲಿ ಪರಿಗಣಿಸಲಾಗುತ್ತಿತ್ತು. ವಿದೇಶಿ ಬಂಡವಾಳ ಅಥವ ಸಾಲ ನಮ್ಮ ಆರ್ಥಿಕತೆಗೆ ಮಾರಕ ಎಂಬ ಚರ್ಚೆಗಳು ನಡೆಯುತ್ತಿದ್ದವು. ಈಗಿನ  ಮಾನದಂಡಗಳ ಪ್ರಕಾರ ಕರ್ನಾಟಕದ ಬಳ್ಳಾರಿ ಅತ್ಯಂತ ಅಬಿವೃದ್ಧಿ ಹೊಂದಿದ ಶ್ರೀಮಂತ ಜಿಲ್ಲೆಯೆನಿಸಿಕೊಳ್ಳುತ್ತದೆ. ಹಾಗಾದರೆ ಹೊಟ್ಟೆಪಾಡಿಗಾಗಿ ಬಳ್ಳಾರಿಯ ಜನರು ಯಾಕೆ ಗುಳೆ ಹೋಗುತ್ತಿದ್ದಾರೆ ಹೇಳಿ? ಇದು ಜಸ್ಟ್  ಕಾಮನ್‍ಸೆನ್ಸ್‍ನ ಪ್ರಶ್ನೆ.

ಸಂಪತ್ತಿನ ಹಂಚಿಕೆಯ ಪ್ರಶ್ನೆಯನ್ನು ಅಥವ ಸಮಾಜದ ಸರ್ವತೋಮುಖ ಬೆಳವಣಿಗೆಯನ್ನು ಕಡೆಗಣಿಸುವ ಇಂಥಾ ಅಭಿವೃದ್ಧಿಯ ಪ್ರತಿಪಾದಕರು ಯಾವಾಗಲು ತಡೆರಹಿತ ಬೆಳವಣಿಗೆಯನ್ನು ಬಯಸುತ್ತಾರೆ. ಹಾಗೆ ನೋಡಿದರೆ ಪ್ರಪಂಚದಲ್ಲಿ ಎರಡು ಶಕ್ತಿಗಳು ಮಾತ್ರ ನಿಯಂತ್ರಣರಹಿತ ಬೆಳವಣಿಗೆಯನ್ನು ಬಯಸುತ್ತವೆ. ಮೊದಲನೆಯದು ಮುಖ್ಯವಾಹಿನಿಯ ಆರ್ಥಿಕ ತಜ್ಞರು; ಎರಡನೆಯದು ಕ್ಯಾನ್ಸರ್ ರೋಗದ ಕೋಶಗಳು!

 

 1. ನಮ್ಮ ಪ್ರಜಾಪ್ರಭುತ್ವದಲ್ಲಿ ಇಂದು ಮಾದ್ಯಮಗಳ ಪಾತ್ರ ಏನಾಗಿದೆ?

ಪ್ರಜಾತಂತ್ರದಲ್ಲಿ ಮಾದ್ಯಮಗಳು ನಾಲ್ಕನೇ ಅಂಗ ಅಥವ ಫೋರ್ತ್ ಎಸ್ಟೇಟ್ ಎನ್ನಲಾಗಿತ್ತು. ಆದರೆ ಫೋರ್ತ್ ಎಸ್ಟೇಟ್ ಎಂಬುದು ರಿಯಲ್ ಎಸ್ಟೇಟ್ ಆಗಿಬಿಟ್ಟಿದೆ. ಅದೇ ಇಂದಿನ ದುರಂತ. ಸಾಮಾಜಿಕ ವಾಸ್ತವ ಹಾಗೂ ಸಮೂಹ ಮಾದ್ಯಮಗಳ ನಡುವಿನ ಕೊಂಡಿಯೇ ಕಳಚಿಬಿದ್ದಿದೆ. ಮಾದ್ಯಮಗಳು ವ್ಯಾಪಾರಿ ಸಂಸ್ಥೆಗಳ ಪರವಾಗಿವೆ ಎಂಬ ಮಾತೇ ಈಗ ಅರ್ಥಹೀನವಾಗಿದೆ. ಯಾಕೆಂದರೆ ಮಾದ್ಯಮಗಳೇ ಇಂದು ದೊಡ್ಡ ವ್ಯಾಪಾರಿ ಕೇಂದ್ರಗಳಾಗಿವೆ. ಕಳೆದ 10-12 ವರ್ಷಗಳಲ್ಲಿ ಭಾರತದ ಮಾದ್ಯಮಗಳು ದೊಡ್ಡ ಪ್ರಮಾಣದಲ್ಲಿ ಕಾರ್ಪೊರೇಟೀಕರಣಗೊಂಡಿವೆ.

ಒಂದು ಉದಾಹರಣೆ ನೋಡಿ, ಪಾರ್ಲಿಮೆಂಟಿನಲ್ಲಿ ಬಯೋಟೆಕ್ ರೆಗ್ಯುಲೇಟರಿ ಬಿಲ್ ಚರ್ಚೆಯಲ್ಲಿದ್ದ ಸಂದರ್ಭದಲ್ಲಿ ಕೆಲವು ಪತ್ರಿಕೆಗಳ ಪುಟಗಳಲ್ಲಿ ಬಿಟಿ ತಂತ್ರಜ್ಞಾನದಿಂದ ಹಲವು ಹಳ್ಳಿಗಳು ಉದ್ಧಾರವಾಗಿವೆ ಎಂಬ ಕಟ್ಟುಕತೆಗಳೇ ತುಂಬಿದ್ದವು.

ಇಂದು ಮಾದ್ಯಮಗಳು ರಾಜಕೀಯವಾಗಿ ಸ್ವತಂತ್ರವಾಗಿವೆ ಎಂಬುದೇನೋ ನಿಜ; ಆದರೆ ಲಾಭದ ದಾಹದಲ್ಲಿ ಸೆರೆಯಾಗಿವೆ. ಸಾಮಾಜಿಕ ಕಳಕಳಿ ಮೂಲೆಗುಂಪಾಗಿ ಟಿಆರ್‍ಪಿ ಯೊಂದೇ ಮಾದ್ಯಮಗಳ ಆದರ್ಶವಾಗಿದೆ.

 

 1. ರಾಜಕಾರಣಿಗಳೇ ನೇರವಾಗಿ ಮಾದ್ಯಮ ಸಂಸ್ಥೆಗಳ ಒಡೆಯರಾಗುತ್ತಿದ್ದಾರಲ್ಲಾ…?

ಹೌದು ನಿಜ. ರಾಜಕಾರಣಿಗಳು, ಉದ್ಯಮಪತಿಗಳು ಹಾಗೂ ಮಾದ್ಯಮಗಳು ಒಟ್ಟಾಗಿ ಒಂದೇ ಬಿಂದುವಿನಲ್ಲಿ ಕಲೆತು ಹೊಸರೀತಿಯ ಸಮೀಕರಣ ಏರ್ಪಡುತ್ತಿದೆ. ರಿಯಲ್ ಎಸ್ಟೇಟ್ ಕುಳಗಳು, ಗಣಿ ದಣಿಗಳು, ಕಾರ್ಪೊರೇಟ್ ಕಂಪನಿಗಳ ಮಾಲಿಕರು ಮಾದ್ಯಮ ಸಂಸ್ಥೆಗಳ ನಿರ್ದೇಶಕ ಮಂಡಳಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಮಾದ್ಯಮಗಳ ಷೇರುಗಳನ್ನು ಕೊಳ್ಳುತ್ತಿದ್ದಾರೆ. ಮಾದ್ಯಮ ಸಂಸ್ಥೆಗಳು ಕಾರ್ಪೊರೇಟ್ ಕಂಪನಿಗಳೊಂದಿಗೆ ನಾನಾರೀತಿಯ ಬ್ಯುಸಿನೆಸ್ ಟೈ ಅಪ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸುಳ್ಳು ವರದಿಗಳನ್ನು ಪ್ರಕಟಿಸಲೇಬೇಕಾದ ಸ್ಟ್ರಕ್ಚರಲ್ ಕಂಪಲ್ಷನ್‍ಗೆ ಮಾದ್ಯಮಗಳು ಸಿಲುಕಿವೆ.

ಮುಖೇಶ್ ಅಂಬಾನಿ 24 ಮಾದ್ಯಮ ಕಂಪನಿಗಳ ಮಾಲಿಕನಾಗಿದ್ದಾನೆ. ತಮಿಳುನಾಡಿನಲ್ಲಿ ಮಾರನ್ ಕುಟುಂಬ, ಆಂಧ್ರದ ವೈಎಸ್‍ಆರ್ ಕುಟುಂಬ, ಕರ್ನಾಟಕದ ರೆಡ್ಡಿ ಪಟಾಲಂ, ದೇವೇಗೌಡ ಕುಟುಂಬ, ರಾಜೀವ್ ಚಂದ್ರಶೇಖರ್, ಮುರುಗೇಶ್ ನಿರಾಣಿ ಮುಂತಾದವರು ಮಾದ್ಯಮ ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ. ಇದು ಪ್ರಜಾತಂತ್ರಕ್ಕೆ ಮಾರಕವಾದ ಅತ್ಯಂತ ಕೆಟ್ಟ ವಿದ್ಯಮಾನ.

 

 1. ಈ ದುಷ್ಟ ವರ್ತುಲದಿಂದ ಹೊರಬರುವ ಮಾರ್ಗವೇನು?

ಇಂಥಾ ವಿಷಮ ಸನ್ನಿವೇಶದಲ್ಲಿ ಸ್ಥಳೀಯ ಪತ್ರಿಕೆಗಳಿಗೆ ಬಹಳ ದೊಡ್ಡ ಪಾತ್ರವಿದೆ. ಅದೆಷ್ಟೇ ಕಡಿಮೆ ಪ್ರಸಾರವನ್ನು ಹೊಂದಿದ್ದರೂ ಕೂಡ ಅವು ಬಹಳ ಮಹತ್ವವನ್ನು ಹೊಂದಿವೆ ಎಂಬ ಸತ್ಯವನ್ನು ನಾವು ಮನಗಾಣಬೇಕು. ಸಾಮಾಜಿಕ ಬದ್ದತೆಯುಳ್ಳ ಪತ್ರಿಕೆಗಳನ್ನು ಬೆಂಬಲಿಸಬೇಕು.

 

 

 1. ಇಂದಿನ ಸಂದರ್ಭದಲ್ಲಿ ಪತ್ರಕರ್ತರಿಗೆ ನಿಮ್ಮ ಕಿವಿಮಾತೇನು?

ಮಾದ್ಯಮ ಸಂಸ್ಥೆಯೆಂಬುದು ಒಂದು ಬ್ಯುಸಿನೆಸ್ ಆಗಿದೆ ನಿಜ; ಆದರೆ ಜರ್ನಲಿಸಂ ಎಂಬುದು ಒಂದು ಬ್ಯುಸಿನೆಸ್ ಅಲ್ಲ ಎಂಬುದನ್ನು ನಾವು ಮನಗಾಣಬೇಕು. ಇದು ನೇರವಾಗಿ ಸಾಮಾಜಿಕ ಉತ್ತರದಾಯಿತ್ವದ ಪ್ರಶ್ನೆ. ಗಾಂಧಿ, ನೆಹರೂ, ಸರೋಜಿನಿ ನಾಯ್ಡು, ತಿಲಕ್ ಮುಂತಾದ ಸ್ವಾತಂತ್ರ ಯೋಧರು ಒಂದಲ್ಲಾ ಒಂದು ರೀತಿಯಲ್ಲಿ  ಪತ್ರಕರ್ತರಾಗಿ ಸೇವೆ ಸಲ್ಲಿಸಿದವರೇ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಭಾರತದ ಪತ್ರಿಕೋದ್ಯಮ ಸ್ವಾತಂತ್ರ್ಯ ಚಳುವಳಿಯ ಕೂಸು. ಭಾರತೀಯ ಭಾಷೆಗಳಲ್ಲಿ ಪತ್ರಿಕೆಗಳು ಹುಟ್ಟಿಕೊಂಡಿದ್ದೇ ರಾಷ್ಟ್ರೀಯ ಜಾಗೃತಿ ಮೂಡಿಸಲಿಕ್ಕಾಗಿ. ಈ ಪರಂಪರೆಯನ್ನು ಪತ್ರಕರ್ತರು ಎತ್ತಿಹಿಡಿಯಬೇಕು.

 

 1. ಕೊನೆಯದಾಗಿ ಒಂದು ವೈಯುಕ್ತಿಕ ಪ್ರಶ್ನೆ: ರೈತರ ಬಗ್ಗೆ, ಬಡಜನರ ಬಗ್ಗೆ ನಿಮ್ಮ ಅಚಲವಾದ ಕಾಳಜಿಯ ಹಿಂದಿನ ಪ್ರೇರಣೆ ಏನು?

ಸುಳ್ಳು ಪೊಳ್ಳುಗಳನ್ನು ಬದಿಗೊತ್ತಿ ಸಾಮಾಜಿಕ ವಾಸ್ತವಗಳನ್ನು ಚಿತ್ರಿಸಬೇಕಾದದ್ದು ಪತ್ರಕರ್ತನಾಗಿ ನನ್ನ ಕರ್ತವ್ಯ. ಮೇಲಾಗಿ ನಾನು ಸ್ವಾತಂತ್ರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಕೌಟುಂಬಿಕ ಹಿನ್ನೆಲೆಯಿಂದ ಬಂದವನು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮೆಲ್ಲರ ಮುಂದೆ ಒಂದು ಸವಾಲು ಇದ್ದೇ ಇರುತ್ತದೆ. ನೀವು ಸಮಸ್ಯೆಯ ಭಾಗವಾಗಿರುತ್ತೀರೋ ಅಥವಾ ಪರಿಹಾರದ ಭಾಗವಾಗಿರುತ್ತೀರೋ ಎಂಬುದೇ ಆ ಪ್ರಶ್ನೆ. ಆಯ್ಕೆ ನಿಮ್ಮದು.

–           ದೊಡ್ಡಿಪಾಳ್ಯ ನರಸಿಂಹಮೂರ್ತಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...