Homeಮುಖಪುಟಪ್ರಧಾನಿಯೇ ದಲ್ಲಾಳಿ ಕಥೆ

ಪ್ರಧಾನಿಯೇ ದಲ್ಲಾಳಿ ಕಥೆ

- Advertisement -
ನೀಲಗಾರ |
ಡಿಸೆಂಬರ್ 16ರಂದು ರಾಯ್‍ಬರೇಲಿಯಲ್ಲಿ ಪ್ರಧಾನಮಂತ್ರಿಯವರು ಸಾರ್ವಜನಿಕ ಸಭೆಯೊಂದರಲ್ಲಿ 45 ನಿಮಿಷ ಮಾತನಾಡಿದರು. ಅದರಲ್ಲಿ 30 ನಿಮಿಷ ರಫೇಲ್ ಡೀಲ್ ವಿಚಾರವನ್ನು ಮತ್ತು ಅದರಲ್ಲಿ ರಾಹುಲ್‍ಗಾಂಧಿ ಮಾಡುತ್ತಿರುವ ಆರೋಪಗಳ ಕುರಿತೇ ಇತ್ತು. ಆ ಮಾತುಗಳಲ್ಲಿ ಒಂದು ಎಲ್ಲರ ಗಮನ ಸೆಳೆಯಿತು. ನಾವು ರಫೇಲ್ ಡೀಲ್‍ಗೆ ಕ್ವಟ್ರೋಚಿ ಅಂಕಲ್ ಮತ್ತು ಮಿಷೆಲ್ ಮಾಮಾಗಳಂತಹ ದಲ್ಲಾಳಿಗಳನ್ನು ನಾವು ನೇಮಕ ಮಾಡಿಕೊಂಡಿಲ್ಲದಿರುವುದೇ ಕಾಂಗ್ರೆಸ್‍ನವರ ಕೋಪಕ್ಕೆ ಕಾರಣ ಎಂದು ನರೇಂದ್ರ ಮೋದಿ ವ್ಯಂಗ್ಯವಾಡಿದರು. ಈ ವ್ಯಂಗ್ಯಕ್ಕೊಂದು ಅರ್ಥವಿದೆ. ಬೋಫೋರ್ಸ್ ಕೇಸಿನಲ್ಲಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ಅಗಸ್ಟಾ ವೆಸ್ಟ್‍ಲ್ಯಾಂಡ್ ಕೇಸಿನಲ್ಲಿ ಕ್ರಿಶ್ಚಿಯನ್ ಮಿಷೆಲ್‍ಗಳು ದಲ್ಲಾಳಿಗಳಾಗಿ ಕೆಲಸ ಮಾಡಿದ್ದರು ಮತ್ತು ಅವರು ಕಾಂಗ್ರೆಸ್‍ನವರಿಗೆ ಲಂಚ ತಲುಪಲು ಕಾರಣರಾಗಿದ್ದರು ಎಂಬ ಆರೋಪಗಳಿವೆ. ಬೋಫೋರ್ಸ್‍ನಲ್ಲಿ ಆದಂತೆ ಮುಂದೊಂದು ದಿನ ಅಗಸ್ಟಾ ವೆಸ್ಟ್‍ಲ್ಯಾಂಡ್ ಕೇಸಿನಲ್ಲೂ ಎಲ್ಲರೂ ಖುಲಾಸೆ ಆಗಬಹುದು. ಆದರೆ, ಈ ರೀತಿಯ ದಲ್ಲಾಳಿಗಳು ಇದ್ದದ್ದಂತೂ ನಿಜ. ವಾಸ್ತವವೇನೆಂದರೆ, ಕಂಪೆನಿಗಳು ಮತ್ತು ಸರ್ಕಾರಗಳ ನಡುವೆ ಮಾತುಕತೆ ಕುದುರಿಸಲು ಅಧಿಕೃತವಾಗಿಯೇ ದಲ್ಲಾಳಿಗಳು ಇರುವ ಪರಿಪಾಠ ಹೆಚ್ಚಾಗುತ್ತಿದೆ. ಈ ದಲ್ಲಾಳಿಗಳಿಂದ ಕಾಂಗ್ರೆಸ್ ಮತ್ತು ಗಾಂಧಿ ಫ್ಯಾಮಿಲಿ ಏನು ಪಡೆದುಕೊಂಡರೋ ಅದು ಬೇರೆ ಮಾತು; ಆದರೆ, ಇದಕ್ಕೆ ಅವರು ದೀರ್ಘಕಾಲ ಉತ್ತರವನ್ನು ನೀಡಬೇಕಾಗುತ್ತದೆಂಬುದಂತೂ ಸ್ಪಷ.
ಇಂದು ನರೇಂದ್ರ ಮೋದಿಯವರೂ ಅದೇ ಪರಿಸ್ಥಿತಿಯಲ್ಲಿದ್ದಾರೆ. ಆದರೆ, ಒಂದು ವ್ಯತ್ಯಾಸವಿದೆ. ಅದೇನೆಂದರೆ, ಅವರೇ ರಾಯ್‍ಬರೇಲಿಯಲ್ಲಿ ಹೇಳಿದಂತೆ ರಫೇಲ್ ಡೀಲ್‍ನಲ್ಲಿ ಬೇರಾರೂ ದಲ್ಲಾಳಿಗಳಿರಲಿಲ್ಲ. ಬದಲಿಗೆ ಸ್ವತಃ ಪ್ರಧಾನಮಂತ್ರಿಯವರೇ ದಲ್ಲಾಳಿಗಳಾಗಿದ್ದರು. ಹೌದು, ರಫೇಲ್ ಡೀಲ್‍ನ ಅತ್ಯಂತ ವಿವಾದಾತ್ಮಕ ಭಾಗ ಇದೇ ಆಗಿದೆ. ಇಡೀ ಡೀಲ್‍ನ ವಿವರಗಳು ಈಗಾಗಲೇ ‘ಪತ್ರಿಕೆ’ಯಲ್ಲಿ ಬಂದಿದೆಯಾದ್ದರಿಂದ, ಆ ವಿವರಗಳಿಗೆ ಹೋಗುವುದಿಲ್ಲ. ಆದರೆ, ಪ್ರಧಾನಿಯವರ ಸಂಶಯಾಸ್ಪದ ಪಾತ್ರದ ಕುರಿತು ಬೆಳಕು ಚೆಲ್ಲುವ ನಾಲ್ಕೈದು ಅಂಶಗಳನ್ನು ಮಾತ್ರ ಇಲ್ಲಿ ಹೇಳಬಹುದು.
- Advertisement -

ಈಗ ಎಲ್ಲರಿಗೂ ತಿಳಿದಿರುವಂತೆ ರಫೇಲ್ ಜೊತೆಗಿನ ಒಪ್ಪಂದ ಯುಪಿಎ ಕಾಲದ್ದು ಮತ್ತು ಆಗ ಭಾರತದಲ್ಲೇ ಎಚ್‍ಎಎಲ್‍ನಲ್ಲಿ ಅದು ತಯಾರಾಗುವಂತೆ ಮತ್ತು ತಂತ್ರಜ್ಞಾನದ ವರ್ಗಾವಣೆಯೂ ಆಗುವಂತೆ ಒಪ್ಪಂದವಾಗಿತ್ತು. ಫ್ರಾನ್ಸ್‍ನ ಡಸಾಲ್ಟ್ ಕಂಪೆನಿಯು 126 ಯುದ್ಧವಿಮಾನಗಳಲ್ಲಿ 18ನ್ನು ಫ್ರಾನ್ಸ್‍ನಲ್ಲಿಯೇ ತಯಾರಿಸುತ್ತದೆ, ಉಳಿದ 108 ವಿಮಾನಗಳನ್ನು ಎಚ್.ಎ.ಎಲ್ ಕಂಪೆನಿಯಲ್ಲಿ ತಯಾರಾಗಬೇಕಿತ್ತು. ಈ ಒಪ್ಪಂದದ ಒಟ್ಟು ಮೊತ್ತ 10.2 ಬಿಲಿಯನ್ ಡಾಲರ್‍ಗಳಾಗಿತ್ತು. ಆದರೆ, ಮೋದಿಯವರು ಅಂತಿಮಗೊಳಿಸಿದ ಒಪ್ಪಂದದಲ್ಲಿ ಸಂಪೂರ್ಣ ಫ್ರಾನ್ಸ್‍ನಲ್ಲೇ ತಯಾರಾಗುವ 36 ಯುದ್ಧ ವಿಮಾನಗಳಿಗೆ 8.8 ಬಿಲಿಯನ್ ಡಾಲರ್‍ಗಳು ಮತ್ತು ಎಚ್.ಎ.ಎಲ್ ಸೀನ್‍ನಲ್ಲೇ ಇರುವುದಿಲ್ಲ, ಬದಲಿಗೆ ಆ ಜಾಗಕ್ಕೆ ಅನಿಲ್ ಅಂಬಾನಿ ಬಂದು ಕೂತಿದ್ದರು.

ಪ್ರಶ್ನೆಯಿರುವುದು ಇದರಲ್ಲಿ ಪ್ರಧಾನಿಯವರದ್ದು ಏನು ಪಾತ್ರ? ಮತ್ತು ಏನಾದರೂ ಪಾತ್ರವಿದ್ದರೆ ಅದು ಪ್ರಧಾನಿಯವರದ್ದೇ ಎಂದು ಹೇಗೆ ಹೇಳುವುದು? ಈ ಸರ್ಕಾರದಲ್ಲಿ ಬೇರೆ ಯಾರಿಗೂ ಯಾವುದೇ ಪಾತ್ರವಿಲ್ಲ; ಉಳಿದ ಸಚಿವರ ಹೆಸರುಗಳೇ ಕೇಳಿ ಬರುವುದಿಲ್ಲ; ಕೋಮು ಪ್ರಚೋದನಾತ್ಮಕ ಭಾಷಣ ಮಾಡಿದಾಗ ಮಾತ್ರ ಅವರುಗಳ ಹೆಸರು ಕೇಳಿ ಬರುತ್ತದೆಯೇ ಹೊರತು ಪ್ರಚಾರದಲ್ಲಿರುವುದು ಕೇವಲ ನರೇಂದ್ರ ಮೋದಿ ಎಂಬ ಕಾರಣಗಳಿಂದ, ಪ್ರಧಾನಿಯೇ ತಪ್ಪಿತಸ್ಥ ಎಂಬ ಆಪಾದನೆ ಬರುತ್ತಿಲ್ಲ.
ಇದಕ್ಕೆ ಮುಖ್ಯ ಕಾರಣ ಮೋದಿಯವರು ಮತ್ತು ಅವರ ಕಚೇರಿ ಈ ಡೀಲ್‍ನಲ್ಲಿ ವಹಿಸಿರುವ ಪಾತ್ರದ ವಿವರಗಳು. ದೇಶದ ರಕ್ಷಣೆಗೆ ಸಂಬಂಧಿಸಿದ ಇಂತಹ ಮಹತ್ವದ ನಿರ್ಧಾರ ಸ್ವತಃ ರಕ್ಷಣಾ ಸಚಿವರು ಮತ್ತು ರಕ್ಷಣಾ ಇಲಾಖೆಗೇ ಸರಿಯಾಗಿ ತಿಳಿದಿರಲಿಲ್ಲವೇ ಎಂಬ ಅನುಮಾನಗಳನ್ನು ಹಲವು ಸತ್ಯ ಸಂಗತಿಗಳು ಹುಟ್ಟುಹಾಕಿವೆ. ಮೋದಿಯವರು ಫ್ರಾನ್ಸ್‍ಗೆ ಪ್ರವಾಸ ಹೊರಡುವ ಕೇವಲ ಎರಡು ದಿನ ಮೊದಲು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್‍ರವರು ದೆಹಲಿಯಲ್ಲಿ ಮಾಧ್ಯಮದವರ ಮುಂದೆ ರಫೇಲ್ ಯುದ್ಧ ವಿಮಾನದ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್‍ನ ಡೆಸ್ಸಾಲ್ಟ್ ಕಂಪನಿ, ಎಚ್.ಎ.ಎಲ್ ಮತ್ತು ಭಾರತ ರಕ್ಷಣಾ ಸಚಿವಾಲಯದ ನಡುವೆ ಮಾತುಕತೆ ಮುಂದುವರೆದಿದೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೂ ಹದಿನೈದು ದಿನ ಮೊದಲು ಡೆಸ್ಸಾಲ್ಟ್ ಕಂಪನಿಯ ಸಿಇಒ ಸಭೆಯೊಂದರಲ್ಲಿ `ಜವಾಬ್ಧಾರಿಗಳ ಹಂಚಿಕೆಯ ಕುರಿತಂತೆ ನಮ್ಮ ನಡುವೆ ಒಪ್ಪಂದ ಏರ್ಪುಡುತ್ತಿರುವುದಾಗಿ ಎಚ್.ಎ.ಎಲ್ ಅಧ್ಯಕ್ಷರು ಹೇಳಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಆದಷ್ಟು ಬೇಗ ಒಡಂಬಡಿಕೆ ಅಂತಿಮಗೊಂಡು ಸಹಿ ಹಾಕುವ ವಿಶ್ವಾಸವಿದೆ’ ಎಂದು ಹೇಳಿಕೊಂಡಿದ್ದರು. ಈ ಎರಡೂ ಹೇಳಿಕೆಗಳು ಎಚ್.ಎ.ಎಲ್. ಅನ್ನು ಕೈಬಿಟ್ಟು ಅಂಬಾನಿಯ ಕಡೆಗೆ ಪ್ರಧಾನಿಯ ಒಲವು ಹರಿದಿದೆ ಎಂಬ ವಿಚಾರ ಸರ್ಕಾರದ ಮಟ್ಟದಲ್ಲಾಗಲಿ, ಪಾಲುದಾರ ಕಂಪನಿಯ ಜೊತೆಗಾಗಲಿ ಚರ್ಚಿಸಲ್ಪಟ್ಟಿಲ್ಲ ಎನ್ನುವುದನ್ನು ಪುಷ್ಠೀಕರಿಸುತ್ತವೆ. ಇನ್ನೂ ವಿಪರ್ಯಾಸವೆಂದರೆ, ಮೋದಿಯವರು ಫ್ರಾನ್ಸ್ ನೆಲದಲ್ಲಿ ನಿಂತು ಇಂತಹ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದ ಸಂದರ್ಭದಲ್ಲೇ ಇಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‍ರವರು `ಆ ಮಾತುಕತೆಯ ವಿವರಗಳ ಬಗ್ಗೆ ನನಗಿನ್ನೂ ತಿಳಿದಿಲ್ಲ’ ಎಂಬ ಹೇಳಿಕೆ ಕೊಟ್ಟಿದ್ದರು! ಅಂದರೆ ರಕ್ಷಣಾ ಸಚಿವರಿಗೇ ಸರಿಯಾದ ಮಾಹಿತಿಯಿಲ್ಲದೆ ಆ ಸಚಿವಾಲಯಕ್ಕೆ ಸಂಬಂಧಿಸಿದ ಸಾವಿರಾರು ಕೋಟಿ ಒಪ್ಪಂದವನ್ನು ತುರ್ತಾಗಿ ಅಂತಿಮಗೊಳಿಸಲಾಗಿತ್ತು. ಯಾವುದೇ ಸರ್ಕಾರ ಸಾರ್ವಜನಿಕ ಮತ್ತು ಸರ್ಕಾರಿ ಕ್ಷೇತ್ರಗಳಿಗೆ ಮೊದಲ ಆದ್ಯತೆಯನ್ನು ಕೊಡಬೇಕೆ ವಿನಃ ಖಾಸಗಿ ಕಂಪನಿಗಳ ಉದ್ಧಾರಕ್ಕಲ್ಲ. ಅದರಲ್ಲೂ ರಕ್ಷಣಾ ವ್ಯವಹಾರದಂತಹ ವಿಷಯ ಬಂದಾಗ ಸರ್ಕಾರಿ ಒಡೆತನದ ಸಂಸ್ಥೆಗಳಿಗೇ ಪ್ರಾಶಸ್ತ್ಯವಿರುತ್ತೆ. ಕೇವಲ ಹೆಚ್ಚು ಬಂಡವಾಳ ಹೂಡಿಕೆ ಹರಿದುಬರುತ್ತೆ ಎಂಬ ಕಾರಣಕ್ಕಲ್ಲ, ದೇಶದ ರಕ್ಷಣಾ ಗೌಪ್ಯತೆಯ ದೃಷ್ಟಿಯಿಂದಲೂ ಇದು ಕ್ಷೇಮ. ಖಾಸಗಿ ಕಂಪನಿಗಳ ಕೈಗೆ ದೇಶದ ಆಂತರಿಕ ರಕ್ಷಣಾ ರಹಸ್ಯಗಳ ಮಾಹಿತಿ ಲಭ್ಯವಾಗುವುದು ಯಾವ ರೀತಿಯಿಂದಲೂ ಒಳಿತಿಲ್ಲ. ಈ ಎಲ್ಲಾ ಕಾರಣದಿಂದಲೇ ಹಳೆಯ ಒಪ್ಪಂದದಲ್ಲಿ ಸರ್ಕಾರಿ ಸ್ವಾಮ್ಯದ ಎಚ್.ಎ.ಎಲ್ ಅನ್ನು ಸಹಭಾಗಿ ಸಂಸ್ಥೆಯನ್ನಾಗಿಸಲಾಗಿತ್ತು. ಆದರೆ ಮೋದಿ ಸರ್ಕಾರದ ಹೊಸ ಒಪ್ಪಂದ ಆ ಜಾಗಕ್ಕೆ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಎಂಬ ಖಾಸಗಿ ಕಂಪನಿಯನ್ನು ತಂದುಕೂರಿಸಿತು.
ರಫೇಲ್ ಒಪ್ಪಂದದ ಸುತ್ತ ಇಂತದ್ದೊಂದು ಪ್ರಶ್ನೆ ಸುಳಿದಾಡಲು ಶುರು ಮಾಡಿದಾಗ ಫೆಬ್ರವರಿ 2018ರಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ರಕ್ಷಣಾ ಸಚಿವಾಲಯ `ಡೆಸ್ಸಾಲ್ಟ್ ಕಂಪನಿ ಭಾರತದ ಯಾವ ಸಂಸ್ಥೆಯನ್ನು ತನ್ನ ಪಾಲುದಾರನನ್ನಾಗಿಸಿಕೊಂಡಿದೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ರಕ್ಷಣಾ ಒಪ್ಪಂದ ನಿಯಮಗಳ ಪ್ರಕಾರ ಯಾವುದೇ ವಿದೇಶಿ ಕಂಪನಿ ಯಾರನ್ನು ತನ್ನ ಭಾಗಿದಾರ ಸಂಸ್ಥೆಯನ್ನಾಗಿ (ಆಫ್‍ಸೆಟ್ ಪಾರ್ಟನರ್) ಆರಿಸಿಕೊಳ್ಳಬೇಕೆಂದು ನಿರ್ಧರಿಸುವ ಸ್ವಾತಂತ್ರ್ಯ ಹೊಂದಿದೆ. ಈ ವಿಚಾರವನ್ನು ಅದು ನಮಗೆ ಈಗಲೇ ತಿಳಿಸಬೇಕೆಂದೇನು ಇಲ್ಲ, ನಮ್ಮ ಸಾಧನಗಳನ್ನು ಪೂರೈಕೆ ಮಾಡುವ ಸಂದರ್ಭದಲ್ಲಿ ತಿಳಿಸುವಷ್ಟು ಕಾಲಾವಕಾಶವೂ ಆ ಕಂಪನಿಗಿರುತ್ತದೆ’ ಎಂಬ ಸ್ಪಷ್ಟನೆ ಕೊಟ್ಟಿತ್ತು. ಹೌದು, ತಾನು ಆಯ್ಕೆ ಮಾಡಿಕೊಳ್ಳುವ ಆಫ್‍ಸೆಟ್ ಪಾರ್ಟನರ್ ಬಗ್ಗೆ ಆರಂಭದಲ್ಲೇ ವಿದೇಶಿ ಕಂಪನಿ ತಿಳಿಸಬೇಕು ಎಂಬ ನಿರ್ಬಂಧವೇನೂ ಇಲ್ಲ, ಪೂರೈಕೆ ಮಾಡುವಾಗಲು ಬೇಕಾದರು ಅದು ತನ್ನ ಪಾರ್ಟನರ್ ಮಾಹಿತಿಯನ್ನು ಸರ್ಕಾರಕ್ಕೆ ನೀಡಬಹುದು ಎಂಬ ನಿಯಮ ಈಗ ಇದೆ.
ಆದರೆ ಅಸಲೀ ವಿಷಯ ಏನು ಅಂದ್ರೆ, 2015ರ ಆಗಸ್ಟ್‍ಗು ಮುನ್ನ ಇಂತದ್ದೊಂದು ನಿಯಮವೇ ಇರಲಿಲ್ಲ. ಯುಪಿಎ ಮಾಡಿಕೊಂಡಿದ್ದ ಹಳೆಯ ಒಡಂಬಡಿಕೆಯನ್ನು ಮೋದಿಯವರು ರದ್ದು ಮಾಡಿದ ಐದು ದಿನಗಳ ನಂತರ ತಿದ್ದುಪಡಿ ತಂದು ಈ ಹೊಸ ನಿಯಮವನ್ನು ಸೇರಿಸಲಾಗಿತ್ತು! ಈಗ ಕೇಂದ್ರ ಸರ್ಕಾರ ತಾನು ತಂದ ಹೊಸ ತಿದ್ದುಪಡಿಯ ನಿಯಮವನ್ನೇ ಮುಂದು ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿದೆ. ಅತ್ತ ಹೊಸ ಒಪ್ಪಂದ ಏರ್ಪಡುವುದಕ್ಕೂ ಇತ್ತ ಹಳೆಯ ನಿಯಮದಲ್ಲಿ ತಿದ್ದುಪಡಿ ಬರುವುದಕ್ಕೂ, just coincidence ಅಷ್ಟೆ ಅಂತ ಯಾರಾದರು ನಂಬಲು ಸಾಧ್ಯವೇ…? ವಿಪರ್ಯಾಸ ಏನು ಗೊತ್ತಾ, ರಕ್ಷಣಾ ಸಚಿವಾಲಯ ಇದುವರೆಗೆ ಡೆಸ್ಸಾಲ್ಟ್ ಕಂಪನಿ ಆಯ್ಕೆ ಮಾಡಿಕೊಂಡ ಆಫ್‍ಸೆಟ್ ಪಾರ್ಟನರ್ ಯಾರೆಂಬುದೇ ಗೊತ್ತಿಲ್ಲ ಅನ್ನುತ್ತಿದೆಯಾದರು ಆರ್‍ಟಿಐನಿಂದ ತಿಳಿದು ಬಂದ ಮಾಹಿತಿ ಪ್ರಕಾರ ಖರೀದಿ ಒಪ್ಪಂದ ಮಾಡಿಕೊಂಡ ದಿನವೇ (ಸೆಪ್ಟೆಂಬರ್ 2016) ರಿಲಾಯನ್ಸ್ ಡಿಫೆನ್ಸ್ ಜೊತೆ ಪಾರ್ಟನರ್ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು.
ಈ ವಿವಾದವು ಬಿಸಿಯೇರುತ್ತಿದ್ದ ಸಂದರ್ಭದಲ್ಲೇ ಫ್ರೆಂಚ್ ಮಾಧ್ಯಮ ಸಂಸ್ಥೆ ‘ಮೀಡಿಯಾಪಾರ್ಟ್’ಗೆ ಫ್ರಾನ್ಸ್‍ನ ಮಾಜಿ ಅಧ್ಯಕ್ಷ (ಮೋದಿಯವರೊಂದಿಗೆ ಒಪ್ಪಂದವಾದ ಸಂದರ್ಭದಲ್ಲಿ ಇದ್ದ ಅಧ್ಯಕ್ಷ) ಹೊಲ್ಯಾಂಡೆ ಹೀಗೆ ಹೇಳಿದರು ‘ಭಾರತ ಸರ್ಕಾರವೇ ನಮಗೆ ರಿಲೆಯನ್ಸ್ ಗುಂಪಿನ ಜೊತೆಗೆ ವ್ಯವಹಾರ ಕುದುರಿಸಿಕೊಳ್ಳಲು ಸೂಚಿಸಿತ್ತು. ನಮಗೆ ಬೇರೆ ಆಯ್ಕೆಯೇ ಇರಲಿಲ್ಲ, ನಮಗೆ ಯಾರನ್ನು ಕೊಟ್ಟರೋ ಅವರನ್ನು ತೆಗೆದುಕೊಂಡೆವು’. ನಂತರ ಫ್ರೆಂಚ್ ಸರ್ಕಾರ ಮತ್ತು ಡಸಾಲ್ಟ್ ಕಂಪೆನಿಗಳು ಇದನ್ನು ನಿರಾಕರಿಸಿದವು. ಆದರೆ, ಆ ನಿರಾಕರಣೆಗೆ ಅರ್ಥವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ಇವೆಲ್ಲದರ ಅರ್ಥ ಒಂದೇ. ಪ್ರಧಾನಿಯವರ ಕಚೇರಿಯೇ ಖುದ್ದಾಗಿ ಈ ಡೀಲ್‍ನಲ್ಲಿ ಪಾತ್ರ ವಹಿಸಿದೆ ಮತ್ತು ಸ್ವತಃ ಪ್ರಧಾನಿಯವರೇ ಇದರಲ್ಲಿ ಭಾಗಿಯಾಗಿದ್ದಾರೆನ್ನುವುದು ಸ್ಪಷ್ಟವಿದೆ. ಹಾಗಿದ್ದ ಮೇಲೆ ಇಲ್ಲಿ ಬೇರೆ ದಲ್ಲಾಳಿಯ ಅಗತ್ಯ ಬಿದ್ದೇ ಇಲ್ಲ.
ಕ್ರೋನೀ ಬಂಡವಾಳಶಾಹಿಗಳ ಪೋಸ್ಟರ್ ಬಾಯ್ ಮೋದಿ 
ನವೆಂಬರ್ 9ರಂದು ದೇಶದ ಬಹುತೇಕ ದೊಡ್ಡ ಪತ್ರಿಕೆಗಳ ಮುಖಪುಟದಲ್ಲಿ ಪೇಟಿಎಂ ಜಾಹೀರಾತು ಬಂದಿತ್ತು. ಎಟಿಎಂ ನಹೀ ಪೇಟಿಎಂ ಕರೋ ಎಂಬ ಅಡಿಶೀರ್ಷಿಕೆ ಇದ್ದ ಜಾಹೀರಾತಿನ ಮಧ್ಯಭಾಗದಲ್ಲಿ ನರೇಂದ್ರ ಮೋದಿಯವರ ದೊಡ್ಡ ಫೋಟೋ ಇತ್ತು. ‘ಭಾರತದ ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಕ್ರಮವನ್ನು ತೆಗೆದುಕೊಂಡಿದ್ದಕ್ಕಾಗಿ ಪ್ರಧಾನಿಯವರಿಗೆ ಅಭಿನಂದನೆಗಳನ್ನು’ ಪೇಟಿಎಂ ಸಲ್ಲಿಸಿತ್ತು. ಅದೇ ರೀತಿ ಅದೇ ವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಜಿಯೋ ಮೊಬೈಲ್ ಸರ್ವೀಸ್ ಲಾಂಚ್ ಮಾಡಿದಾಗಲೂ ಪ್ರಧಾನಿ ಮೋದಿಯವರ ಫೋಟೋವನ್ನು ಜಾಹೀರಾತಿನಲ್ಲಿ ದೊಡ್ಡದಾಗಿಯೇ ಬಳಸಲಾಗಿತ್ತು. ಇವೆರಡರ ಬಗ್ಗೆ ವಿರೋಧ ಬಂದಾಗ, ಎರಡೂ ಕಂಪೆನಿಗಳಿಗೆ ನೋಟಿಸು ಕೊಡಲಾಗಿತ್ತಾದರೂ, ಹೆಚ್ಚೆಂದರೆ ಅವರಿಗೆ 500 ರೂ. ದಂಡ ಹಾಕಬಹುದು ಅಷ್ಟೇ ಎಂದು ಹೇಳಲಾಗಿತ್ತು.
ಇದು ಕೇವಲ ಪ್ರಧಾನಿಯೊಬ್ಬರು ಜಾಹೀರಾತಿಗೆ ಬಳಕೆಯಾಗುವ ವಿಚಾರ ಅಲ್ಲ. ಈ ಕಂಪೆನಿಗಳಿಗೆ ಪ್ರಧಾನಿ ಮೋದಿ ಸಹಾಯ ಮಾಡುತ್ತಿರುವ ರೀತಿಯ ಪ್ರಶ್ನೆಯಾಗಿತ್ತು. ಹಿಂದಿನ ದಿನ ರಾತ್ರಿ 8 ಗಂಟೆಗೆ ನರೇಂದ್ರ ಮೋದಿ ಘೋಷಿಸಿದ ನೋಟು ರದ್ದತಿಯಿಂದ ತನಗೆ ಲಾಭವೆಂದು ಊಹಿಸಿ ರಾತ್ರೋರಾತ್ರಿ ಎಲ್ಲಾ ಪತ್ರಿಕೆಗಳಲ್ಲಿ ಪೇಟಿಎಂ ಜಾಹೀರಾತು ಬಂದಿರಲು ಸಾಧ್ಯವಿಲ್ಲ. ಹಾಗಾದರೆ ಅವರಿಗೆ ಮುಂಚೆಯೇ ಮಾಹಿತಿ ಇತ್ತು ಎಂದಾಯಿತಲ್ಲವೇ? ಈ ನೋಟು ರದ್ದತಿಯ ಪ್ರಮುಖ ಫಲಾನುಭವಿಗಳಲ್ಲಿ ಪೇಟಿಎಂ ಸಹಾ ಒಂದು. ಅಂದರೆ ನರೇಂದ್ರ ಮೋದಿ ಅದಕ್ಕೆ ಏಜೆಂಟರಾಗಿ ಕೆಲಸ ಮಾಡಿದ ಹಾಗೆ ಆಯಿತಲ್ಲವೇ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದರು.
ಕೇಂದ್ರ ಸರ್ಕಾರದ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ, ಮುದ್ರಾ, ಬೇಟಿ ಬಚಾವೋ ಬೇಟಿ ಪಡಾವೋ, ನಮಾಮಿ ಗಂಗಾ, ಸ್ಕಿಲ್ ಇಂಡಿಯಾ ಇವೆಲ್ಲವುಗಳಿಗೆ ಮೋದಿಯೇ ಜಾಹೀರಾತು ನೀಡುವುದು ಹೊಸದೇನಲ್ಲ. ಇವುಗಳಲ್ಲಿ ಹೆಚ್ಚಿನವು ಯುಪಿಎ ಸರ್ಕಾರದ ರೀಪ್ಯಾಕೇಜಿಂಗ್ ಯೋಜನೆಗಳೇ ಆಗಿದ್ದರೂ ಪರವಾಗಿಲ್ಲ. ಅದನ್ನು ಮತ್ತಷ್ಟು ಚೆನ್ನಾಗಿ ಜಾರಿ ಮಾಡಿ ಮೋದಿಯವರಿಗೇ ಹೆಚ್ಚಿನ ಕ್ರೆಡಿಟ್ ಹೋದರೆ ತಪ್ಪೇನಲ್ಲ. ಆದರೆ, ಇವುಗಳಲ್ಲಿ ಬಹುತೇಕ ಎಲ್ಲವೂ ವೈಫಲ್ಯತೆಯನ್ನೇ ಕಂಡವು. ಜಾಹೀರಾತಿಗೇ ಹೆಚ್ಚಿನ ಹಣ ಹರಿಯಿತು ಎಂಬ ಆರೋಪ ಮಾತ್ರ ಬಂದಿತು. ಅದೇ ಸಂದರ್ಭದಲ್ಲಿ ಖಾಸಗಿ ಕಂಪೆನಿಗಳಿಗೆ ಮಾತ್ರ ಲಾಭ ಹೆಚ್ಚಾಗುತ್ತಾ ಹೋಯಿತು. ಅಂದರೆ, ಪ್ರಧಾನ ಮಂತ್ರಿಯವರು ಯಾರ ಪರವಾಗಿ ಆಡಳಿತ ನಡೆಸುತ್ತಿದ್ದಾರೆಂಬ ವಾಸ್ತವ ಸತ್ಯ ಮಾತ್ರ ಇದರಿಂದ ಗೊತ್ತಾಗುತ್ತದೆ.
ಅಜಿತ ದೋವಲ್ ಪಾತ್ರ 
16ನೇ ಡಿಸೆಂಬರ್ 2018ರಂದು ಪ್ರಕಟವಾಗಿರುವ ಕ್ಯಾರವಾನ್ ಮ್ಯಾಗಜೀನ್‍ನ ವಿವರಗಳು ನಮ್ಮೆಲ್ಲರನ್ನೂ ಬೆಚ್ಚಿ ಬೀಳಿಸುತ್ತವೆ. ಕ್ಯಾರವಾನ್ ಪತ್ರಿಕೆಗೆ ಲಭ್ಯವಾದ ರಕ್ಷಣಾ ಇಲಾಖೆ ಮತ್ತು ಕಾನೂನು ಇಲಾಖೆಯ ನಡುವೆ ನಡೆದ ಪತ್ರ ವ್ಯವಹಾರವು ಕೆಲವು ವಿವರಗಳನ್ನು ಮುಂದಿಡುತ್ತವೆ. ಈ ಎರಡೂ ಇಲಾಖೆಗಳು ಮೋದಿಯವರು ಮುಂದಿಟ್ಟ ಹೊಸ ಪ್ರಸ್ತಾಪಗಳಿಗೆ ಹಲವು ಆಕ್ಷೇಪಣೆಗಳನ್ನು ಎತ್ತಿದ್ದವು. ಆ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‍ರ ಮಧ್ಯಪ್ರವೇಶವೂ ನಡೆಯಿತು ಮತ್ತು ಈ ಡೀಲ್‍ಅನ್ನು ಆಗಮಾಡುವುದರಲ್ಲಿ ಅವರ ಪಾತ್ರವೂ ಇತ್ತೆಂಬುದನ್ನು ಅವು ಸ್ಪಷ್ಟವಾಗಿ ಬಿಚ್ಚಿಡುತ್ತವೆ. ಇದರ ಭಾಗವಾಗಿ ಅಜಿತ್ ದೋವಲ್ 2016ರ ಜನವರಿ 12 & 13ರಂದು ಫ್ರಾನ್ಸ್‍ನ ರಾಜಧಾನಿ ಪ್ಯಾರಿಸ್‍ಗೂ ಹೋಗುತ್ತಾರೆ. ಅಲ್ಲಿ ಭಾರತ ಮತ್ತು ಫ್ರಾನ್ಸ್‍ನ ನಡುವೆ ನಡೆಯುವ ‘ಅಧಿಕೃತ’ ಮಾತುಕತೆ

ಯಲ್ಲಿ ‘ಅನಧಿಕೃತ’ವಾಗಿ ಭಾಗವಹಿಸುತ್ತಾರೆ.
The Defence Procurement Procedure 2013 ಇಂತಹ ವ್ಯವಹಾರಗಳಲ್ಲಿ ಮಾತುಕತೆ ನಡೆಸುವ ತಂಡದಲ್ಲಿ ಯಾರಿರಬೇಕೆಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಅದರ ಪ್ರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಈ ತಂಡದಲ್ಲಿ ಇರುವಂತಿಲ್ಲ. ಕ್ಯಾರವಾನ್ ಪತ್ರಿಕೆಗೆ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ ‘ಇಂತಹ ಮಾತುಕತೆಯ ತಂಡಗಳು ಬಹಳ ಗುಪ್ತವಾಗಿರಬೇಕು ಮತ್ತು ಅನಧಿಕೃತ ವ್ಯಕ್ತಿಗಳು ವಿದೇಶೀ ಪ್ರತಿನಿಧಿಗಳ ಜೊತೆಗಿನ ಮಾತುಕತೆಯ ವಿವರಗಳನ್ನು ಪಡೆಯಲು ಅವಕಾಶವಿರುವುದಿಲ್ಲ’. ಆದರೂ ಅಜಿತ್ ದೋವಲ್ ಇದ್ದರು. ಆದರೆ, 10ನೇ ಅಕ್ಟೋಬರ್ 2018ರಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ‘ಮಾತುಕತೆಯ ತಂಡ’ದ ಸದಸ್ಯರ ಪಟ್ಟಿಯಲ್ಲಿ ಅಜಿತ್ ದೋವಲ್ ಹೆಸರಿಲ್ಲ.
ಅಜಿತ್ ದೋವಲ್ ಮೋದಿಯವರೇ ಆಯ್ಕೆ ಮಾಡಿಕೊಂಡಿರುವ (ಅವರಿಗೆ) ವಿಶ್ವಾಸಾರ್ಹವಾದ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ. ಅಂದರೆ, ಸದರಿ ರಫೇಲ್ ವ್ಯವಹಾರವು ಸುಸೂತ್ರವಾಗಿ ನಡೆಯಲು ಪ್ರಧಾನಿಯವರು ತಮ್ಮ ಅತ್ಯಂತ ನಂಬಿಕಸ್ಥ ವ್ಯಕ್ತಿಗೇ ಸೂಚಿಸಿದ್ದರು ಮಾತ್ರವಲ್ಲಾ, ಅನಧಿಕೃತವಾಗಿಯೂ ಇದರಲ್ಲಿ ಕೈ ಆಡಿಸಲು ಅನುವು ಮಾಡಿಕೊಟ್ಟಿದ್ದರೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಎಲ್ಲವೂ ಏತಕ್ಕಾಗಿ? ಭಾರೀ ನಷ್ಟದಲ್ಲಿದ್ದ, ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಅನಿಲ್ ಅಂಬಾನಿಯ ಇನ್ನೂ ಹುಟ್ಟಿರದ ಕಂಪೆನಿಗೆ ಅನುಕೂಲ ಮಾಡಿಕೊಡಲಿಕ್ಕಾಗಿ. ಇದರಿಂದ ಪ್ರಧಾನಮಂತ್ರಿ ಕಚೇರಿಯೇ ದಲ್ಲಾಳಿ ಪಾತ್ರವನ್ನು ವಹಿಸಿತು ಎಂಬ ಆಪಾದನೆ ಬಂದರೆ, ಅದನ್ನು ನಂಬದೇ ಇರಲು ಹೇಗೆ ಸಾಧ್ಯ? ಅದೂ, ಜಂಟಿ ಸಂಸದೀಯ ಸಮಿತಿಯ ರಚನೆಗೆ ಸರ್ಕಾರವು ವಿರೋಧ ವ್ಯಕ್ತಪಡಿಸುತ್ತಿರುವಾಗ?
ಪ್ರಭುತ್ವವೇ ದಲ್ಲಾಳಿಯ ಸ್ಥಾನದಲ್ಲಿ ನಿಂತಾಗ
ವಾಸ್ತವದಲ್ಲಿ ಇದು ಬಿಜೆಪಿ ಪಕ್ಷದ ವಿಚಾರ ಮಾತ್ರವಲ್ಲ. ಎಲ್ಲಾ ಪಕ್ಷಗಳೂ ದೊಡ್ಡ ದೊಡ್ಡ ಕಂಪೆನಿಗಳ ಏಜೆಂಟರಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. 1991ರ ನಂತರ ಜಾರಿಗೆ ಬಂದ ಆರ್ಥಿಕ ನೀತಿ – ಜಾಗತೀಕರಣ, ಖಾಸಗೀಕರಣದ – ಯು ಅಧಿಕೃತವಾಗಿಯೇ ಸರ್ಕಾರವು ಖಾಸಗಿಯವರ ಪರವಾಗಿ ಕೈ ಜೋಡಿಸಬೇಕೆಂದು ಹೇಳುತ್ತದೆ ಮತ್ತು ಇದಕ್ಕೆ ಬಹುತೇಕ ಎಲ್ಲಾ ಪಕ್ಷಗಳೂ ಒಪ್ಪಿಗೆ ಸೂಚಿಸಿಯಾಗಿದೆ. ಸದರಿ ನೀತಿಯನ್ನು ಅಧಿಕೃತವಾಗಿ ದೇಶದಲ್ಲಿ ಉದ್ಘಾಟಿಸಿದಾಗ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದರೂ, 2004ರಲ್ಲಿ ಸೋನಿಯಾಗಾಂಧಿಯವರು ಪ್ರಧಾನಿ ಪಟ್ಟಕ್ಕೆ ಆಯ್ಕೆ ಮಾಡಿಕೊಂಡ ಮನಮೋಹನಸಿಂಗರೇ ಹಣಕಾಸು ಮಂತ್ರಿಯಾಗಿದ್ದರು.
ಅಲ್ಲಿಂದಾಚೆಗೆ ಅಂಬಾನಿಯಂತಹ ಉದ್ದಿಮೆದಾರರ ಸಂಪತ್ತು ನೆಗೆತಗಳಲ್ಲಿ ಏರುತ್ತಾ ಹೋಯಿತು. ದೇಶದ ನೈಸರ್ಗಿಕ ಸಂಪನ್ಮೂಲಗಳನ್ನೂ ಇಂತಹ ಕಂಪೆನಿಗಳಿಗೆ ಧಾರೆಯೆರೆದುಕೊಡಲಾಯಿತು. ಗಣಿ ರೆಡ್ಡಿಗಳು, ಖೋಡಾಗಳು, ವೇದಾಂತ, ಟಾಟಾ, ಪೋಸ್ಕೋದಂತಹ ಕಂಪೆನಿಗಳು ಜನರ ಭೂಮಿ, ಗಣಿ, ಅರಣ್ಯಗಳ ಲೂಟಿ ಮಾಡಲು ಯಥೇಚ್ಚ ಅವಕಾಶ ಮಾಡಿಕೊಡಲಾಯಿತು. ಹಾಗೆಯೇ ಟೆಲಿಕಾಂ ಕಂಪೆನಿಗಳಿಗೆ ಮತ್ತು ಕಲ್ಲಿದ್ದಲು ಖರೀದಿಯಲ್ಲೂ ವಿಪರೀತ ಭ್ರಷ್ಟಾಚಾರ ನಡೆಯಿತು. ಕೆಲವು ಕಂಪೆನಿಗಳಿಗೆ ಪಿ.ಚಿದಂಬರಂ ಅವರ ವಕ್ತಾರಿಕೆ ಇದ್ದರೆ, ಇನ್ನು ಕೆಲವಕ್ಕೆ ಅರುಣ್ ಜೇಟ್ಲಿಯದ್ದು.
ಇಂದು ಇಷ್ಟೆಲ್ಲಾ ಸುದ್ದಿ ಮಾಡುತ್ತಿರುವ ರಿಲೆಯನ್ಸ್‍ನ ಅನಿಲ್ ಅಂಬಾನಿ ಸಮಾಜವಾದಿ ಪಕ್ಷದ ಅತ್ಯಂತ ಖಾಸಾ ದೋಸ್ತ್ ಮಾತ್ರವಲ್ಲದೇ ಅವರ ಕೃಪೆಯಿಂದ ರಾಜ್ಯಸಭಾ ಸದಸ್ಯನೂ ಆಗಿದ್ದ. ಸುಪ್ರೀಂಕೋರ್ಟು ರಫೇಲ್ ಡೀಲ್‍ನಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲವೆಂದು ಹೇಳಿದ ಮೇಲೆ ಸುಮ್ಮನಿರಬೇಕು ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹೇಳುತ್ತಿರುವುದಕ್ಕೆ ಈ ಕಾರಣವೂ ಇz
ಇಂದು ಸಮಾಜಸುಧಾರಕನಂತೆ ಪೋಸು ಕೊಡುತ್ತಿರುವ ರಾಜೀವ್ ಚಂದ್ರಶೇಖರ್ ರಾಜ್ಯಸಭಾ ಸದಸ್ಯನಾಗಲು ಕರ್ನಾಟಕದಲ್ಲಿ ಮೂರೂ ಪಕ್ಷಗಳ ಶಾಸಕರ ಓಟನ್ನು ಖರೀದಿ ಮಾಡಲು ಆಯಾ ಪಕ್ಷಗಳು ಅವಕಾಶ ಮಾಡಿಕೊಟ್ಟಿದ್ದವು. ಹಾಗಾಗಿಯೇ ಯಾವ ಪಕ್ಷವೂ ತಾನು ಉದ್ದಿಮೆಪತಿಗಳ ದಲ್ಲಾಳಿಗಿರಿ ಮಾಡಿಲ್ಲ ಎಂದು ಹೇಳಿಕೊಳ್ಳುವ ಹಾಗಿಲ್ಲ. ಹೆಚ್ಚೆಂದರೆ ನರೇಂದ್ರ ಮೋದಿಯವರಷ್ಟು ದಲ್ಲಾಳಿಗಿರಿಯನ್ನು ಕೇವಲ 5 ವರ್ಷಗಳಲ್ಲಿ ಮಾಡಲು ಸಾಧ್ಯವಾಗಿಲ್ಲ ಎಂದಷ್ಟೇ ಹೇಳಬಹುದು.
ಮುಚ್ಚಿದ ಲಕೋಟೆಯೇ ಮುಳುವಾಯಿತು
ಏನಿದು ಮುಚ್ಚಿಟ್ಟ ಲಕೋಟೆ?
ಕೆಲವೊಮ್ಮೆ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗದ ಸಂಗತಿಗಳನ್ನು ಕೋರ್ಟು ಮುಚ್ಚಿದ ಲಕೋಟೆಯಲ್ಲಿ ಕೊಡಲು ಕೇಳುತ್ತದೆ. ಅಥವಾ ಸರ್ಕಾರ ಯಾ ಕೇಸು ದಾಖಲಿಸಿದ ವಾದಿಯೇ ಅಂತಹ ಮುಚ್ಚಿದ ಲಕೋಟೆಯನ್ನು ಕೋರ್ಟಿಗೆ ನೀಡುತ್ತದೆ. ಈ ವಿಧಾನವನ್ನು ಒಪ್ಪುವುದೂ ಕಷ್ಟ. ಏಕೆಂದರೆ, ಅದೇ ಕೇಸಿನಲ್ಲಿ ಇರುವ ಎದುರುದಾರರಿಗೂ ನಿರಾಕರಿಸಲ್ಪಟ್ಟ ದಾಖಲೆಗಳು ನ್ಯಾಯಾಧೀಶರಿಗೆ ಮಾತ್ರ ಲಭ್ಯವಾಗುತ್ತದೆ. ಅಂತಿಮವಾಗಿ ನ್ಯಾಯಾಧೀಶರಿಗೆ ಲಭ್ಯವಾಗಿರುವ ‘ಪುರಾವೆ’ಗಳು ಸುಳ್ಳೂ ಇರಬಹುದು. ಅದರ ಕುರಿತು ತಮ್ಮ ವಿವರಣೆ ಹೇಳುವ ಅವಕಾಶವೂ ಎದುರುದಾರರಿಗಿಲ್ಲದೇ ತಪ್ಪು ತೀರ್ಪೂ ಸಹಾ ಬರಬಹುದು.
ಈ ಪ್ರಕರಣವು ಹಾಗೆಯೇ ಆಗಿರುವ ಎಲ್ಲಾ ಲಕ್ಷಣಗಳೂ ಇವೆ. ರಫೇಲ್ ಡೀಲ್‍ನಲ್ಲಿ ಮೂರು ಅಂಶಗಳು ಕೋರ್ಟಿನ ಮುಂದೆ ಇದ್ದವು. ಮೂಲ ಒಪ್ಪಂದಕ್ಕಿಂತ ಮೂರು ಪಟ್ಟು ಹೆಚ್ಚು ದರ ನೀಡಿ ಖರೀದಿ ಮಾಡಲು ಮೋದಿ ಸರ್ಕಾರ ಹೊರಟಿರುವುದು, ಈ ಡೀಲ್‍ನಲ್ಲಿ ಆಫ್‍ಸೆಟ್ ಪಾಲುದಾರನನ್ನಾಗಿ 7 ದಿನಗಳ ಹಿಂದಷ್ಟೇ ಹುಟ್ಟಿಕೊಂಡ ಅನಿಲ್ ಅಂಬಾನಿಯ ಕಂಪೆನಿಯನ್ನು ಒಳಗೊಂಡಿರುವುದು ಮತ್ತು ಸೂಕ್ತ ಪ್ರಕ್ರಿಯೆ ಅಳವಡಿಸದೇ ಖರೀದಿ ವ್ಯವಹಾರ ಒಪ್ಪಂದ ಮಾಡಿಕೊಂಡಿರುವುದು. ಮೊದಲೆರಡು ಅಂಶಗಳು ಯಾವುದೇ ಸರ್ಕಾರ ಅಥವಾ ಕಂಪೆನಿಯ ಆಂತರಿಕ ವ್ಯವಹಾರದಂತೆಯೂ ತೋರಬಹುದಾದ್ದರಿಂದ ಆ ಕುರಿತು ತಾನೇನೂ ಹೇಳಲು ಇಲ್ಲ ಎಂದು ನ್ಯಾಯಾಲಯವು ಹೇಳಬಹುದು; ಹೇಳಿದೆ. ಆದರೂ, ನ್ಯಾಯಾಲಯವು ಈ ಬಗ್ಗೆ ಖಚಿತವಾಗಿರಲು ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಕೇಳಿತು. ಅದರಲ್ಲಿ ದರಗಳ ವಿವರದ ಜೊತೆಗೆ, ಸೂಕ್ತ ಪ್ರಕ್ರಿಯೆಯನ್ನು ಅಳವಡಿಸಿರುವ ಕುರಿತು ಸರ್ಕಾರವು ವಿವರಗಳನ್ನು ನೀಡಿತು.
ಅದರಲ್ಲೇ ಸಿಎಜಿಗೂ ವಿವರ ನೀಡಿದ್ದೇವೆ; ಸಿಎಜಿಯ ವರದಿಯನ್ನು ಪಿಎಸಿ (ಸಂಸತ್ತಿನ ಲೆಕ್ಕ ಪತ್ರಗಳ ಸಮಿತಿ)ಗೂ ಸಲ್ಲಿಸಲಾಗಿದೆ ಇತ್ಯಾದಿ ಸುಳ್ಳುಗಳನ್ನು ಸರ್ಕಾರವು ಹೇಳಿತು. ಬಹುಶಃ ಮುಚ್ಚಿದ ಲಕೋಟೆಯಲ್ಲಿನ ವಿವರಗಳನ್ನು ನ್ಯಾಯಾಲಯವು ತೀರ್ಪಿನಲ್ಲಿ ಉಲ್ಲೇಖಿಸಲಿಕ್ಕಿಲ್ಲ ಎಂದು ಸರ್ಕಾರದ ಆಲೋಚನೆಯಾಗಿರಬೇಕು. ಆದರೆ, ಸೂಕ್ತ ಪ್ರಕ್ರಿಯೆ ನಡೆದಿರುವುದು ತನಗೆ ಮನವರಿಕೆಯಾದ್ದರಿಂದಲೂ ‘ತಾನು ಮಧ್ಯಪ್ರವೇಶಿಸುವುದಿಲ್ಲ’ ಎಂದು ನ್ಯಾಯಾಲಯವು ಹೇಳಬಯಸಿತು. ಹಾಗಾಗಿ ಅದನ್ನು ತೀರ್ಪಿನಲ್ಲಿ ಉಲ್ಲೇಖಿಸಿಬಿಟ್ಟಿತು.
ಈ ಮೊಕದ್ದಮೆಯಲ್ಲಿ ಭಾಗಿಯಾಗಿರುವ ನ್ಯಾಯವಾದಿ ಪ್ರಶಾಂತ್‍ಭೂಷಣ್ ಅವರು ಮೊದಲಿಗೆ ಈ ವಿವರಗಳು ನಮಗೆ ಗೊತ್ತೇ ಇರಲಿಲ್ಲವಲ್ಲಾ ಎಂದು ಆಶ್ಚರ್ಯವ್ಯಕ್ತಪಡಿಸಿದರು. ನಂತರ ಆಶ್ಚರ್ಯವ್ಯಕ್ತಪಡಿಸುವ ಸರದಿ ಪಿಎಸಿ ಅಧ್ಯಕ್ಷರದ್ದಾಗಿತ್ತು. ಅಂತಹ ಯಾವ ವರದಿಯೂ ತಮಗೂ ಸಿಕ್ಕಿಲ್ಲವಲ್ಲಾ ಎಂದು ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಲ್ಲದೇ, ಸಿಎಜಿ ಮತ್ತು ಸುಪ್ರೀಂಕೋರ್ಟಿಗೆ ಸರ್ಕಾರದ ಪರವಾಗಿ ಸುಳ್ಳನ್ನು ಹೇಳಿದ ಅಟಾರ್ನಿ ಜನರಲ್ ಇಬ್ಬರನ್ನೂ ಪಿಎಸಿ ಕರೆಸುತ್ತದೆಂದು ಹೇಳಿದರು.
ಇಷ್ಟು ಸಣ್ಣ ವಿಚಾರ ಸರ್ಕಾರಕ್ಕೆ ಗೊತ್ತಿಲ್ಲದೇನಲ್ಲ. ಆದರೆ, ತಾನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟ ಅಂಶವು ಹೊರಗೆ ಬರಲಾರದು ಎಂಬ ತಪ್ಪು ಲೆಕ್ಕಾಚಾರ ಅದರದ್ದಾಗಿತ್ತು. ಈಗ ಬೇರೆ ದಾರಿಯೇ ಇಲ್ಲ. ಹಾಗಾಗಿ ಸಿಎಜಿ ವರದಿಯನ್ನು ಸಾಮಾನ್ಯವಾಗಿ ಪಿಎಸಿ ಪರಿಶೀಲಿಸುತ್ತದೆ ಎಂದು ತಾನು ಹೇಳಬಯಸಿದ್ದೆ, ಅದು ಈಗಾಗಲೇ ಪರಿಶೀಲಿಸಿದೆ ಎಂಬರ್ಥದಲ್ಲಿ ಟೈಪಿಂಗ್ ಎಡವಟ್ಟು ಅಷ್ಟೇ ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಹಾಕಿದೆ.
ಒಂದು ವೇಳೆ ಇದನ್ನು ಟೈಪಿಂಗ್ ಎಡವಟ್ಟು ಎಂದೇ ಇಟ್ಟುಕೊಂಡರೆ, ಸಿಎಜಿ ಹಾಗೂ ಪಿಎಸಿ ಪರಿಶೀಲಿಸಿದ ಮೇಲೆ ಪ್ರಕ್ರಿಯೆಯ ಕುರಿತು ಆಕ್ಷೇಪಣೆ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದ ಸುಪ್ರೀಂಕೋರ್ಟು, ಈಗ ಅದರಲ್ಲಿ ಲೋಪವನ್ನು ಕಾಣಲೇಬೇಕು. ಆಗ ಕೇಂದ್ರ ಸರ್ಕಾರದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ನಾವು ಕಾದು ನೋಡಬೇಕಷ್ಟೇ. ಅದೇನೇ ಇರಲಿ, ದೇಶದ ರಕ್ಷಣಾ ಇಲಾಖೆಗೆ ಸೇರಿದ ಇಂತಹ ದೊಡ್ಡ ಡೀಲ್‍ನ ಕುರಿತು ಇಷ್ಟೊಂದು ತಪ್ಪುಗಳ ನಡೆದಿರುವಾಗ, ಉನ್ನತ ಮಟ್ಟದ ತನಿಖೆ ಆಗದೇ ಹೋದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿರಲಾರದು.
ಜಂಟಿ ಸಂಸದೀಯ ಸಮಿತಿ: ಬಿಜೆಪಿಯ ದ್ವಂದ್ವ ನಿಲುವು
ಯುಪಿಎ ಅವಧಿಯ 2 ಜಿ ಸ್ಪೆಕ್ಟ್ರಂ ಹಗರಣ ಎಲ್ಲರಿಗೂ ಗೊತ್ತಿದೆ. ಆ ವಿಚಾರದಲ್ಲಿ ತನಿಖೆಯೂ ನಡೆಯಿತು; ಕೇಂದ್ರದಲ್ಲಿ ಮಂತ್ರಿಯಾಗಿದ್ದವರೊಬ್ಬರು ಜೈಲಿಗೂ ಹೋಗಿ ಬಂದರು. ಆ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯೇ ರಚನೆಯಾಗಬೇಕು ಎಂದು ಬಿಜೆಪಿಯು ಪಟ್ಟು ಹಿಡಿಯಿತು. ಆಗಿನ ಅದರ ಸರ್ವೋಚ್ಚ ನಾಯಕ ಎಲ್.ಕೆ.ಅಡ್ವಾಣಿಯವರ ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದವು.
ಅದರ ನಂತರ ಭ್ರಷ್ಟಾಚಾರವೇ ಪ್ರಮುಖ ಇಶ್ಯೂ ಎಂದು ಬಿಜೆಪಿಯು ಹೇಳಿತು. ಎಲ್.ಕೆ. ಅಡ್ವಾಣಿಯವರು ದೇಶಾದ್ಯಂತ ಪ್ರವಾಸ ಹೊರಟರು. ಅಂತಹ ಒಂದು ಪ್ರವಾಸದ ಭಾಗವಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲೂ ಒಂದು ಬೃಹತ್ ಸಭೆ ಆಯೋಜನೆಯಾಯಿತು. ಆ ಹೊತ್ತಿಗೆ ಜೈಲಿಗೆ ಹೋಗಿದ್ದ ಯಡಿಯೂರಪ್ಪನವರ ವಿಚಾರವನ್ನು ದೂರವಿಟ್ಟಿದ್ದಲ್ಲದೇ, ಯಡಿಯೂರಪ್ಪನವರ ಸಮೀಪವರ್ತಿಗಳನ್ನೂ ದೂರವಿಡಲಾಗಿತ್ತು.
ಅದೇನೇ ಇರಲಿ, ಜಂಟಿ ಸಂಸದೀಯ ಸಮಿತಿಯಿಂದ ಮಾತ್ರ ಇದರ ಸರಿಯಾದ ತನಿಖೆ ಸಾಧ್ಯ ಎಂದು ಆಗ ಬಿಜೆಪಿ ಹೇಳಿತ್ತು. ಈಗ ಖರ್ಗೆಯವರು ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಿಂದ ಪರಿಶೀಲನೆ ಆಗಿದೆ ಎಂದು ಆಗ ಯುಪಿಎ ಸರ್ಕಾರವು ಹೇಳಿತ್ತು. ಆದರೆ, ಇವೆರಡರ ಪಾತ್ರ ಬೇರೆ ಬೇರೆಯಾಗಿದ್ದು, ಜೆಪಿಸಿ (ಜಂಟಿ ಸಂಸದೀಯ ಸಮಿತಿ)ಯೇ ಇದಕ್ಕೆ ಸರಿ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.
‘ನಮ್ಮ ಬೇಡಿಕೆ – ಜೆಪಿಸಿ’ ಎಂದು ಹೇಳುವ ಪ್ಲೇಕಾರ್ಡ್‍ಗಳನ್ನು ಇಟ್ಟುಕೊಂಡು ಆಗ ಬಿಜೆಪಿ ದೊಡ್ಡ ಪ್ರತಿಭಟನೆ ನಡೆಸಿತ್ತು. ಈಗ ರಫೇಲ್ ಡೀಲ್‍ನ ವಿಚಾರದಲ್ಲಿ ಮಾತ್ರ ಜಂಟಿ ಸಂಸದೀಯ ಸಮಿತಿಯ ರಚನೆ ಸಾಧ್ಯವಿಲ್ಲ ಎಂದು ಆಡಳಿತ ಪಕ್ಷವಾದ ಬಿಜೆಪಿಯು ಪಟ್ಟು ಹಿಡಿದಿದೆ. ಅದರಲ್ಲೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಈ ಡೀಲ್‍ನಲ್ಲಿ ಭಾಗಿ ಎಂಬ ಆರೋಪವನ್ನು ಮಾಡಲಾಗಿದೆ ಹಾಗೂ ಮೇಲ್ನೋಟಕ್ಕೆ ಹಲವು ಅಂಶಗಳನ್ನು ಅದನ್ನು ಸಮರ್ಥಿಸುವಂತೆ ಇರುವಾಗ ಬಿಜೆಪಿಯ ಈ ಹಿಂದೇಟು ಅನುಮಾನಗಳನ್ನು ದೃಢೀಕರಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...