Homeಮುಖಪುಟಬಿಜೆಪಿಯೇ ದುರ್ಬಲವಾಗಿ ಕಾಣುತ್ತಿರುವುದಕ್ಕೆ ನಾಲ್ಕು ಸಾಕ್ಷಿಗಳು

ಬಿಜೆಪಿಯೇ ದುರ್ಬಲವಾಗಿ ಕಾಣುತ್ತಿರುವುದಕ್ಕೆ ನಾಲ್ಕು ಸಾಕ್ಷಿಗಳು

- Advertisement -
- Advertisement -

ದೇಶದೆಲ್ಲೆಡೆ ಪಕ್ಷಗಳನ್ನೇ ಗುಡಿಸಿ ಗುಂಡಾಂತರ ಮಾಡುತ್ತಿರುವ ಬಿಜೆಪಿಯು, ಕರ್ನಾಟಕದಲ್ಲಿ 28ರಲ್ಲಿ 25+1 ಕ್ಷೇತ್ರಗಳನ್ನು ಗೆದ್ದ ಮೇಲೂ ಪ್ರಬಲವಾಗಿ ಕಾಣುತ್ತಿಲ್ಲ ಏಕೆ? ಲೋಕಸಭಾ ಚುನಾವಣೆಯನ್ನೇ ಆಧಾರವಾಗಿಟ್ಟುಕೊಳ್ಳುವುದಾದರೆ ಬಿಜೆಪಿಯು ಈಗ ಚುನಾವಣೆ ನಡೆದರೂ, 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಸುಲಭದಲ್ಲಿ ಗೆಲ್ಲಬೇಕು. ಆದರೆ, ವಿಧಾನಸಭಾ ಚುನಾವಣೆ ಕಡೆಗೆ ಹೋಗುವ ಬದಲು, ಈಗಲೇ ಸರ್ಕಾರ ರಚನೆ ಮಾಡುವ ಆತುರಕ್ಕೆ ಬಿದ್ದಿದೆ. ಅಷ್ಟೇ ಅಲ್ಲದೇ, ಸುಮಾರು 16 ಜನ ಶಾಸಕರು ರಾಜೀನಾಮೆ ಕೊಟ್ಟ ನಂತರವೂ ದುರ್ಬಲವಾಗಿಯೇ ಕಾಣುತ್ತಿದೆ. ಆ ದೌರ್ಬಲ್ಯದ ಲಕ್ಷಣಗಳನ್ನು ನೋಡಿದರೆ ಯಾರಿಗಾದರೂ ಅದು ಮನವರಿಕೆಯಾಗುತ್ತದೆ.

1. ಮೊದಲನೆಯದಾಗಿ ರಾಜೀನಾಮೆ ಕೊಟ್ಟವರನ್ನು ಸ್ವತಂತ್ರವಾಗಿ ಬಿಟ್ಟರೆ ಅವರು ವಾಪಸ್ಸು ಹೋಗುತ್ತಾರೆ ಎಂದೆನಿಸಿ ಅವರನ್ನು ಕೂಡಲೇ ಬಿಜೆಪಿಯೇ ಅಧಿಕಾರದಲ್ಲಿರುವ ಮಹಾರಾಷ್ಟ್ರಕ್ಕೆ ರವಾನೆ ಮಾಡಲಾಯಿತು. ರಾಜೀನಾಮೆ ಕೊಟ್ಟವರು ವೀರಾವೇಶದಿಂದ ಸಮ್ಮಿಶ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು ಮತ್ತು 2-3 ಜನರನ್ನು ಬಿಟ್ಟರೆ ಮಿಕ್ಕವರೆಲ್ಲರೂ ಘಟಾನುಘಟಿ ಶಾಸಕರೇ. ಹಾಗಿದ್ದೂ ಮುಂಬೈಗೆ ಬಿಜೆಪಿಯೇ ವ್ಯವಸ್ಥೆ ಮಾಡಿದ ವಿಮಾನದಲ್ಲಿ ಹೊರಟು, ಬಿಜೆಪಿಗೆ ಆಪ್ತವಾದ ಉದ್ಯಮಿಯ ಹೋಟೆಲ್‍ನಲ್ಲೇ ಇರುವಂತೆ ನೋಡಿಕೊಳ್ಳಲಾಯಿತು.


2. ಅಲ್ಲಿಗೆ ಹೋದ ಮರುದಿನ ಡಿ.ಕೆ.ಶಿವಕುಮಾರ್ ‘ಮುಂಬೈಗೆ ಹೋಗಿ ಅವರ ಮನವೊಲಿಸಿ ಕರೆತರುತ್ತೇನೆ’ ಎಂದು ಘೋಷಿಸಿದ್ದರು. ಯಾರೇ ಬಂದರೂ, ಈ ಶಾಸಕರು ಜಗ್ಗಲ್ಲ ಎಂಬ ವಿಶ್ವಾಸ ಇರುವುದು ಹೋಗಲಿ, ತಾವೂ ಇದ್ದು (ಅದೇ ಹೋಟೆಲ್‍ನಲ್ಲಿ ಬಿಜೆಪಿ ನಾಯಕರೂ ಇದ್ದರು) ನಿಭಾಯಿಸಬಹುದು ಎಂಬ ಧೈರ್ಯವೂ ಬಿಜೆಪಿಗಿರಲಿಲ್ಲ. ಬದಲಿಗೆ ಡಿ.ಕೆ.ಶಿ ಅಥವಾ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದರೆ, ಇವರೆಲ್ಲರೂ ಓಡಿ ಹೋಗುತ್ತಾರೆಂದು ಬಿಜೆಪಿಯು ಭಾವಿಸಿತು. ಹಾಗಾಗಿ ಮಧ್ಯರಾತ್ರಿ 10 ಜನ ಶಾಸಕರಿಂದ ಪತ್ರ ಬರೆಸಿಕೊಂಡು ಮುಂಬೈನ ಪೊಲೀಸ್ ಕಮೀಷನರ್, ಸ್ಥಳೀಯ ಡಿಸಿಪಿ ಮತ್ತು ಪೊಲೀಸ್ ಠಾಣೆಗೆ ನೀಡಿದರು. ಆ ಪತ್ರವು ಡಿ.ಕೆ.ಶಿ ಮತ್ತು ಎಚ್.ಡಿ.ಕೆ ತಮ್ಮನ್ನು ಮಾತಾಡಿಸದಂತೆ ತಡೆಯಬೇಕು ಎಂಬಂತೆ ಧ್ವನಿಸಿತು. ತಾವು ಮರಳಿ ಹೋಗುವುದಿಲ್ಲ ಎಂದು ಖಚಿತವಿದ್ದು ಪೊಲೀಸರಿಗೇ ದೂರು ಸಲ್ಲಿಸುವವರು, ಎದುರಿಗೆ ಇವರಿಬ್ಬರು ಬಂದರೆ ಯಾಕೆ ಹೆದರಬೇಕು? ಹಾಗಾಗಿ ಈ ಪತ್ರವನ್ನು ಬಿಜೆಪಿಯೇ ಬರೆಸಿಕೊಂಡಿತ್ತು ಎಂದು ನಂಬಲು ಕಾರಣಗಳಿವೆ.


3. ಅಧಿವೇಶನ ಶುರುವಾದ ದಿನ ‘ವಿಶ್ವಾಸಮತ ಯಾಚನೆ ಮಾಡಲು ಸಿದ್ಧ’ ಎಂದು ಕುಮಾರಸ್ವಾಮಿ ಘೋಷಿಸಿದ ತಕ್ಷಣ ಬೆಚ್ಚಿಬಿದ್ದಿದ್ದು ಬಿಜೆಪಿ. ತೃಪ್ತರಲ್ಲದ ಜೆಡಿಎಸ್, ಕಾಂಗ್ರೆಸ್ ಶಾಸಕರ ಕುರಿತಲ್ಲ, ತನ್ನ ಶಾಸಕರ ಕುರಿತಂತೆ. ಕೂಡಲೇ ತನ್ನೆಲ್ಲಾ ಶಾಸಕರನ್ನು ರೆಸಾರ್ಟ್‍ಗೆ ಸ್ಥಳಾಂತರಿಸಿತು. ಸದ್ಯ, ಇನ್ನೂ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸಿಲ್ಲ ಅಷ್ಟೇ.


4. ನಾಲ್ಕನೆಯದಾಗಿ, ಮುಂಬೈನಲ್ಲಿದ್ದ 12 ಜನ ತೃಪ್ತರಲ್ಲದ ಶಾಸಕರು ಇಂದು ಶಿರಡಿಗೆ ಹೋಗಿ ಬಂದರು. ಸುದ್ದಿಯೇನೆಂದರೆ ಅಲ್ಲಿ ಈ ಶಾಸಕರಿಂದ ಆಣೆ ಪ್ರಮಾಣ ಮಾಡಿಸಿ ನಾವು ಮರಳಿ ನಮ್ಮ ಪಕ್ಷಗಳಿಗೆ ಹೋಗುವುದಿಲ್ಲ, ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿಸಲಾಗಿದೆ!!

ಹಾಗೆ ನೋಡಿದರೆ, ಬೆಂಗಳೂರಿನಲ್ಲೇ ಇರುವ ರಾಮಲಿಂಗಾರೆಡ್ಡಿ ತನ್ನ ನಿರ್ಧಾರಗಳನ್ನು ತಾನು ತೆಗೆದುಕೊಳ್ಳುತ್ತಿದ್ದಾರೆ. ಅವರ ಮನೆಗೆ ಪದೇ ಪದೇ ಕಾಂಗ್ರೆಸ್ ನಾಯಕರೂ ಹೋಗುತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ತನ್ನ ಮನೆಯಲ್ಲಿ ಕೂತಿದ್ದರೆಂದು ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಬಂದವರು ಅಜ್ಞಾತ ಸ್ಥಳಕ್ಕೆ ಹೋದರೆಂದು ಹೇಳಲಾಗಿದೆ.
ಅಂದರೆ ವಿಚಾರ ಸ್ಪಷ್ಟವಿದೆ. ಬಿಜೆಪಿ ಆತ್ಮವಿಶ್ವಾಸದಿಂದಿಲ್ಲ. ಈ ಎಲ್ಲಾ ಅಂಶಗಳೂ ಅದರ ದೌರ್ಬಲ್ಯವನ್ನಷ್ಟೇ ತೋರಿಸುತ್ತಿವೆ. ಈಗಾಗಲೇ ತನ್ನ 13 ಶಾಸಕರು ರಾಜೀನಾಮೆ ನೀಡಿದ್ದರೂ ಕಾಂಗ್ರೆಸ್ ತನ್ನ ಇತರ ಶಾಸಕರನ್ನು ರೆಸಾರ್ಟ್‍ಗೆ ಒಯ್ದಿಲ್ಲ. ಇದರ ಅರ್ಥವೇನು?
ಬಿಜೆಪಿಯು ಈ ಸಾರಿಯೂ ಅಧಿಕಾರ ಪಡೆದುಕೊಳ್ಳುವುದಿಲ್ಲವಾ? ಮತ್ತೊಂದು ಠುಸ್ ಪಟಾಕಿಯಾ? ಮುಂದಿನ ಮೂರ್ನಾಲ್ಕು ದಿನಗಳು ಈ ಕುರಿತು ಸ್ಪಷ್ಟ ಚಿತ್ರಣ ನೀಡುತ್ತವಾದರೂ, ಈ ಸದ್ಯ ಬಿಜೆಪಿ ದುರ್ಬಲವಾಗಿದೆ ಎಂಬುದು ಎದ್ದು ಕಾಣುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...