Homeರಾಜಕೀಯಮೋದಿ ಸರ್ಕಾರದ ಮತ್ತೊಂದು ವಿದ್ರೋಹ

ಮೋದಿ ಸರ್ಕಾರದ ಮತ್ತೊಂದು ವಿದ್ರೋಹ

- Advertisement -
- Advertisement -

2014ರ ಚುನಾವಣೆಯಲ್ಲಿ ಯುಪಿಎ ಸರ್ಕಾರ ಮಕಾಡೆ ಮಲಗಿದ್ದು ತಾನು ಮಾಡಿಕೊಂಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳಿಂದ. ಆ ಭ್ರಷ್ಟಾಚಾರಗಳು ಹೊರಬಂದದ್ದು, ಅದೇ ಯುಪಿಎ ತಂದಿದ್ದ ಆರ್‍ಟಿಐ ಕಾಯ್ದೆಯಿಂದ! ಯುಪಿಎದ ಲಫಡಾಗಳು ಅದೇನೆ ಇರಲಿ, ಆರ್‍ಟಿಐನಂತಹ ಕಾಯ್ದೆಯನ್ನು ಜಾರಿಗೆ ತಂದು ಭ್ರಷ್ಟಾಚಾರವನ್ನು ವಿರೋಧಿಸುವ ಭಾರತೀಯರ ಕೈಗೆ ಒಂದು ಮಹಾ ಅಸ್ತ್ರವನ್ನು ಕೊಟ್ಟುಹೋಗಿದೆ. ಸರ್ಕಾರಗಳನ್ನೆ ಬುಡಮೇಲು ಆಗಿಸುವಷ್ಟರ ಮಟ್ಟಿಗೆ ಪ್ರಬಲವಾದ ಕಾಯ್ದೆ ಆರ್‍ಟಿಐ. ಆದರೀಗ ಮೋದಿ ಸರ್ಕಾರ ಅಂತಹ ಜನಪರ ಕಾಯ್ದೆಯನ್ನೇ ರದ್ದು ಮಾಡುವ ಹುನ್ನಾರ ನಡೆಸುತ್ತಿದೆ. ದುರಂತವೆಂದರೆ, ಆರ್‍ಟಿಐ ಕಾಯ್ದೆ ರದ್ದು ಮಾಡಲು ಹೊರಟಿರುವ ಮೋದಿ ಅಧಿಕಾರಕ್ಕೇರಿದ್ದು, ತಾನು ಪ್ರಧಾನಿಯಾದರೆ ಭ್ರಷ್ಟಾಚಾರ ಮಟ್ಟ ಹಾಕುತ್ತೇನೆ, ಬ್ಲ್ಯಾಕ್ ಮನಿ ವಾಪಾಸ್ ತರುತ್ತೇನೆ, ಲಂಚಕೋರರ ಜನ್ಮ ಜಾಲಾಡುತ್ತೇನೆ ಎಂದೆಲ್ಲ ಬಲೂನು ಹಾರಿಸಿಯೇ!
ಆರ್‍ಟಿಐ, ನಿಜಕ್ಕೂ ಭ್ರಷ್ಟಾಚಾರಿಗಳನ್ನು ಕಾಡಿದ ಕಾಯ್ದೆ. ಆದರೆ ಭ್ರಷ್ಟಾಚಾರವನ್ನು ನಿಯಂತ್ರಿಸಲು ಕೇವಲ ಆರ್‍ಟಿಐ ಮಾತ್ರವೇ ಸಾಲದು, ಅದರ ಜೊತೆಗೆ ಲೋಕಪಾಲ್ ಬಿಲ್, ಪಿ ನೋಟ್ (ಪಾರ್ಟಿಸಿಪೇಟರಿ ನೋಟ್) ಪಾರದರ್ಶಕೀಕರಣದಂತಹ ಜಬರ್‍ದಸ್ತ್ ಕಾನೂನುಗಳೂ ಜಾರಿಯಾಗಬೇಕು ಅನ್ನೋದು ಭ್ರಷ್ಟಾಚಾರದ ವಿರುದ್ಧದ ಹೋರಾಡುತ್ತಿದ್ದವರ ಅಳಲಾಗಿತ್ತು. ಮೋದಿಯ ಆಶ್ವಾಸನೆಗಳನ್ನು ಕೇಳಿದ ಜನ, ಬಿಜೆಪಿ ಅಧಿಕಾರಕ್ಕೇರಿದರೆ ಇಂತಹ ಇನ್ನಷ್ಟು ಟಫ್ ಕಾನೂನುಗಳು ಜಾರಿಗೆ ಬಂದು ಭ್ರಷ್ಟರ ಹೆಡೆಮುರಿ ಕಟ್ಟಲಿವೆ ಎಂದು ನಂಬಿದ್ದರೇ ವಿನಾಃ ಇರೋ ಆರ್‍ಟಿಐ ಅಸ್ತ್ರವನ್ನೇ ಕಿತ್ತುಕೊಳ್ಳಲಿದ್ದಾರೆ ಅಂತ ಎಣಿಸಿರಲಿಲ್ಲ.
ವಾಸ್ತವದಲ್ಲಿ ಆರ್‍ಟಿಐ ಎಷ್ಟು ಪರಿಣಾಮಕಾರಿ ಅಸ್ತ್ರವಾಗಿತ್ತೆಂದರೆ, ಹಲವು ಆರ್‍ಟಿಐ ಕಾರ್ಯಕರ್ತರನ್ನು ಭ್ರಷ್ಟರು ಕೊಲೆಯನ್ನೇ ಮಾಡಿಸಿದ್ದಾರೆ. ಹೀಗಾಗಿ ‘ಭ್ರಷ್ಟಾಚಾರ ವಿರೋಧಿ ಹೋರಾಟಗಾರರನ್ನು ರಕ್ಷಿಸುವ ಕಾಯ್ದೆ (Whisಣಟebಟoತಿeಡಿ ಚಿಛಿಣ)’ ತರಬೇಕೆಂಬ ಒತ್ತಾಯ ಕೇಳಿಬಂದಿತು. ಆದರೆ, ಈಗ ಎಲ್ಲವೂ ಉಲ್ಟಾ ಹೊಡೆಯಲು ಶುರುವಾಗಿದೆ. ಆರ್‍ಟಿಐ ಅರ್ಜಿ ಹಾಕಿದ ವ್ಯಕ್ತಿ ಸತ್ತರೆ, ಆ ಅರ್ಜಿಯನ್ನೂ ಕೈ ಬಿಡಬೇಕೆಂಬ ತಿದ್ದುಪಡಿ ತರಲಾಗುತ್ತಿದೆಯೆಂಬ ಸುದ್ದಿ ಇದೆ. ಅಂದರೆ, ನಿಮ್ಮ ಭ್ರಷ್ಟಾಚಾರವನ್ನು ಬಯಲುಗೊಳಿಸಬಹುದಾದ ಅರ್ಜಿ ಬಂದರೆ, ಅರ್ಜಿದಾರನನ್ನೇ ಮುಗಿಸಿ ಎಂಬ ಸಂದೇಶ ಅದರಿಂದ ಹೊರಡುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಪ್ರಧಾನ ಆಪಾದಿತನಾಗಿರುವ ಕೇಸ್ ವಿಚಾರಣೆ ನಡೆಸುತ್ತಿದ್ದ ಸಿಬಿಐ ಜಡ್ಜ್ ಜಸ್ಟೀಸ್ ಲೋಯಾ ನಿಗೂಢವಾಗಿ ಸಾವನ್ನಪ್ಪಿದ್ದು, ಅದೇ ಪ್ರಕರಣದ ಮತ್ತೊಬ್ಬ ಇತ್ತೀಚೆಗೆ ಸಂಶಯಾಸ್ಪದವಾಗಿ ಸತ್ತದ್ದು, ಬಿಜೆಪಿ ಅಧಿಕಾರದಲ್ಲಿರುವ ಮಧ್ಯಪ್ರದೇಶದ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ನೂರಕ್ಕು ಹೆಚ್ಚು ಜನ ಸತ್ತು ಹೋದದ್ದನ್ನೆಲ್ಲ ಮೋದಿ ಸರ್ಕಾರ ನಗಣ್ಯವೆಂದು ಪರಿಗಣಿಸುತ್ತಿರೋದು ನೋಡಿದರೆ, ಇಂದು ಆರ್‍ಟಿಐ ಕಾಯ್ದೆಯೇ ಇಲ್ಲವಾಗುವಂತೆ ಅಥವಾ ದುರ್ಬಲವಾಗುವಂತೆ ಮಾಡಲು ಹೊರಟಿದ್ದಾರೆಂಬ ಆರೋಪವು ಗಂಭೀರವಾಗಿ ಕಾಡುತ್ತೆ. ಈ ಆರೋಪ ಮತ್ತು ಹೋರಾಟದ ಕುರಿತ ಕೆಲವು ವಿವರಗಳನ್ನು ನಮ್ಮ ಪತ್ರಿಕೆಯ ಓದುಗರಿಗೆ ತಲುಪಿಸಬೇಕಿದೆ.
ಜುಲೈ 18ರಿಂದ ಆರಂಭವಾಗಿರುವ ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ತಿದ್ದುಪಡಿಯ ನಿರ್ದಿಷ್ಟ ಅಂಶಗಳ ಬಗ್ಗೆ ಸಾರ್ವಜನಿಕವಾಗಿ ಯಾವ ಮಾಹಿತಿಯನ್ನು ಸಹ ಬಿಟ್ಟುಕೊಟ್ಟಿಲ್ಲ. ತಿದ್ದುಪಡಿಯ ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂಬ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ. ಮೇಲ್ನೋಟಕ್ಕೆ ಮುಖ್ಯ ಮಾಹಿತಿ ಆಯುಕ್ತರ ಸಂಬಳ ನೀಡುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವ ತಿದ್ದುಪಡಿ ಮಾತ್ರವೇ ಎಂದು ಹೇಳುತ್ತಿದ್ದರೂ, ಅಧಿಕೃತ ಪ್ರಕಟಣೆ ಮಾಡದೇ ಇಷ್ಟೊಂದು ಗೌಪ್ಯತೆ ಕಾಪಾಡುತ್ತಿರುವುದರಿಂದ ಸಹಜವಾಗಿಯೇ ಗುಮಾನಿ ಹೆಚ್ಚಾಗಿದೆ.
ಮಾಹಿತಿ ಹಕ್ಕು ಕಾಯ್ದೆ ನಿಸ್ಸಂಶಯವಾಗಿ ದೇಶದ ಪ್ರತಿಯೊಬ್ಬ ಜನರ ಪ್ರಶ್ನಿಸುವ ಹಕ್ಕನ್ನು ಸಶಕ್ತಗೊಳಿಸುವ ಜನಪರ ಕಾಯ್ದೆಯಾಗಿದೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಸುಮಾರು 6 ಮಿಲಿಯನ್ ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಪ್ರಪಂಚದಲ್ಲೇ ವ್ಯಾಪಕವಾದ ಪಾರದರ್ಶಕತೆಗೆ ಹೆಸರಾದ ಕಾಯ್ದೆ ಇದಾಗಿದೆ. ಬಡ ಗ್ರಾಮೀಣ ಮತ್ತು ನಗರ ನಿವಾಸಿಗಳು ತಮ್ಮ ಮೂಲಭೂತ ಅಧಿಕಾರವನ್ನು ತಿಳಿಯಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‍ಟಿಐ ಅರ್ಜಿ ಸಲ್ಲಿಸಿದ್ದಾರೆಂದು ರಾಷ್ಟ್ರೀಯ ಮೌಲ್ಯಮಾಪನ ಸರ್ವೇ ಗುರುತಿಸಿದೆ. ಗ್ರಾಮಪಂಚಾಯ್ತಿಯಿಂದ ಹಿಡಿದು ದೇಶದ ದೊಡ್ಡ ದೊಡ್ಡ ಸಂಸ್ಥೆಗಳನ್ನು ಪ್ರಶ್ನಿಸುವ, ಪಾರದರ್ಶಕತೆಯನ್ನು ಕೇಳುವ ಮತ್ತು ಯಾವುದೇ ಮಾಹಿತಿ ಪಡೆಯುವ ಅತ್ಯುತ್ತಮ ಕಾಯ್ದೆ ಇದಾಗಿದೆ.
ಮೊದಲ ಬಾರಿಗೆ 2017ರ ಏಪ್ರಿಲ್‍ನಲ್ಲಿ ಈ ಸರ್ಕಾರವು ತಿದ್ದುಪಡಿಯಾಗಬೇಕಿರುವ ಕರಡು ನಿಯಮಗಳನ್ನು ಮುಂದಿಟ್ಟಿತು. ಅದರಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿ ಒಂದು ವೇಳೆ ಮರಣ ಹೊಂದಿದ್ದಲ್ಲಿ ಆ ಅರ್ಜಿಯನ್ನು ವಜಾ ಮಾಡುವ ಅಧಿಕಾರವನ್ನು ನೀಡುವುದು ಒಂದಾಗಿದೆ. ಎರಡನೆಯದಾಗಿ, ಮಾಹಿತಿ ಆಯೋಗದ ಮುಖ್ಯಾಧಿಕಾರಿಗಳಿಗೆ ಸಂಬಳ ನೀಡುವ ನಿರ್ಧಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀಡಿದರೆ ಆಯೋಗದ ಸ್ವಾಯತ್ತತೆಗೆ ಧಕ್ಕೆ ಬರುವುದಲ್ಲದೇ ಅವರ ಸ್ವಾತಂತ್ರ್ಯವನ್ನು ನಿಯಂತ್ರಣದಲ್ಲಿಟ್ಟಂತಾಗುತ್ತದೆ. ಈಗಾಗಲೇ ರಾಷ್ಟ್ರೀಯ ಭದ್ರತೆ, ವೈಯಕ್ತಿಕ ಗೌಪ್ಯತೆ, ಕಾಪಿರೈಟ್ ಇತ್ಯಾದಿಗಳ ನೆಪದಲ್ಲಿ 2016-17ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ.35ರಷ್ಟು ಅರ್ಜಿಗಳನ್ನು ಮಾಹಿತಿ ನೀಡದೇ ವಜಾ ಮಾಡಲಾಗಿದೆ. ಇದೇ ರೀತಿಯ ತಿದ್ದುಪಡಿಗಳಾದಲ್ಲಿ ಶೇ.100ರಷ್ಟು ಅರ್ಜಿಗಳು ವಜಾಗೊಳ್ಳುವ ಕಾಲ ದೂರವಿಲ್ಲ.
ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಕಾರ್ಪೊರೇಟ್ ಕುಳಗಳ ದೊಡ್ಡ ದೊಡ್ಡ ಹಗರಣಗಳು ಬೆಳಕಿಗೆ ಬಾರದಂತೆ ತಡೆಯುವ ದುರುದ್ದೇಶದಿಂದಲೇ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಹಲವು ಸಂಘಟನೆಗಳು ಆರೋಪ ಮಾಡಿವೆ. ಜೊತೆಗೆ ದೇಶಾದ್ಯಂತ ನೂರಾರು ಭ್ರಷ್ಟಾಚಾರ ವಿರೋಧಿ ಮತ್ತು ಜನಪರ ಸಂಘಟನೆಗಳು ಈ ತಿದ್ದುಪಡಿಯ ವಿರುದ್ಧ ಹೋರಾಟಕ್ಕಿಳಿದಿವೆ. ಎನ್‍ಸಿಪಿಆರ್‍ಐ (ಜನರ ಮಾಹಿತಿ ಹಕ್ಕಿಗಾಗಿ ರಾಷ್ಟ್ರೀಯ ಆಂದೋಲನ) ಈ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದು ಎನ್‍ಎಪಿಎಂ, ಎಸಿಟಿ, ಎನ್‍ಆರ್‍ಪಿಸಿ, ಎನ್‍ಎಫ್‍ಐಡಬ್ಲೂ ಮುಂತಾದ ಸಂಘಟನೆಗಳು ಜುಲೈ 18ರಂದು ಅಧಿವೇಶನದ ಆರಂಭದ ದಿನವೇ ದೆಹಲಿಯಲ್ಲಿ ಬೃಹತ್ ರ್ಯಾಲಿ ಮತ್ತು ‘ಜನ್ ಮಂಚ್’ ಹೋರಾಟ ನಡೆಸಿವೆ.
ಉದ್ದೇಶಿತ ತಿದ್ದುಪಡಿಯನ್ನು ಕೈಬಿಡುವುದು ಮತ್ತು ವಿಶಲ್ ಬ್ಲೋಯರ್ಸ್ ಪ್ರೊಟೆಕ್ಷನ್ ಆಕ್ಟ್ ತಕ್ಷಣದಿಂದ ಜಾರಿಗೆ ತರುವುದು, ಚುನಾವಣಾ ಬಾಂಡ್ (ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಮಾಹಿತಿಯನ್ನು ಸಾರ್ವಜನಿಕಗೊಳಿಸದಿರುವುದು) ಪದ್ದತಿಯನ್ನು ಕೈಬಿಡುವುದು ಮತ್ತು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಕೂಡಲೇ ಮುಖ್ಯಸ್ಥರನ್ನು ನೇಮಿಸುವಂತೆ ಹಕ್ಕೊತ್ತಾಯಗಳನ್ನು ಮುಂದಿಟ್ಟಿದ್ದಾರೆ. ಈ ಹೋರಾಟದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ದುಡಿದು ಕೊಲೆಯಾದ ನೂರಾರು ಕುಟುಂಬಗಳ ಸದಸ್ಯರು ಭಾಗವಹಿಸುತ್ತಿರುವುದು ಮಹತ್ವದ ಸಂಗತಿಯಾಗಿದೆ. ಇತ್ತೀಚೆಗೆ ಬಿಹಾರದಲ್ಲಿ ಭ್ರಷ್ಟಾಚಾರವನ್ನು ಬಯಲುಗೊಳಿಸಿದ್ದಕ್ಕಾಗಿ ಕೊಲೆಗೀಡಾದ ರಾಜೇಂದರ್ ಸಿಂಗ್ ಮತ್ತು ವಾಲ್ಮೀಕಿ ಯಾದವ್‍ರವರ ಕುಟುಂಬ ಕೂಡ ಜನ್ ಮಂಚ್‍ನಲ್ಲಿ ಭಾಗವಹಿಸಿದೆ. ವ್ಯಾಪಂ ಹಗರಣವನ್ನು ಬೆಳಕಿಗೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದ ಆಶಿಶ್ ಚತುರ್ವೇದಿ ಕೂಡ ಹೋರಾಟದಲ್ಲಿದ್ದಾರೆ.
ಕರ್ನಾಟಕವೂ ಈ ನಿಟ್ಟಿನಲ್ಲಿ ಕ್ರಿಯಾಶೀಲಗೊಳ್ಳುವ ಅಗತ್ಯವಿದೆ.

– ಮುತ್ತುರಾಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...