Homeರಾಜಕೀಯಹೈದರಾಬಾದ್ ಕರ್ನಾಟಕ: ಮುಕ್ಕಾಗದು ಕಾಂಗ್ರೆಸ್ ಪಾರುಪತ್ಯ

ಹೈದರಾಬಾದ್ ಕರ್ನಾಟಕ: ಮುಕ್ಕಾಗದು ಕಾಂಗ್ರೆಸ್ ಪಾರುಪತ್ಯ

- Advertisement -
- Advertisement -
  • ಡಿ.ಪಿ.ಗೌತಮ್ |

ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸಮೀಪದ ಸ್ಪರ್ಧಿಗಳಿಗಿಂತ ಮುಂದಿದೆ. ಒಂದು ಕಾಲಕ್ಕೆ ಕಾಂಗ್ರೆಸ್‍ನ ಭದ್ರಕೋಟಿ. ಇಡೀ ಕರ್ನಾಟಕವು ಕಾಂಗ್ರೆಸ್ಸೇತರ ಪಕ್ಷಗಳಿಗೆ ಮತ ಹಾಕಿದರೂ ಗುಲ್ಬರ್ಗ ವಿಭಾಗ ಮಾತ್ರ ಕಾಂಗ್ರೆಸ್‍ನ ಪರವಾದ ನಿಲುವು ತಳೆಯುತ್ತಲೇ ಬಂದಿತ್ತು. ಅದಕ್ಕೆ ಸಾಮಾಜಿಕ, ಐತಿಹಾಸಿಕ ಕಾರಣಗಳೂ ಇವೆ. ಕಳೆದ ಒಂದು ದಶಕದ ಅವಧಿಯಲ್ಲಿ ಬಳ್ಳಾರಿ ರಿಪಬ್ಲಿಕ್‍ನ ಬೆಳವಣಿಗೆಗೆ ಕಾರಣವಾದ ಗಣಿಗಾರಿಕೆಯು `ಮಾಫಿಯಾ’ ಹಂತಕ್ಕೆ ಬೆಳೆದು ನಿಂತು ರಾಜ್ಯ ರಾಜಕಾರಣದ ದಿಕ್ಕುದೆಸೆಗಳನ್ನೇ ಬದಲಾಯಿಸಿತು. ಆ ದಿನಗಳಲ್ಲಿಯೂ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ದಯನೀಯವಾದ ಸಾಧನೆಯನ್ನೇನೂ ಮಾಡಿರಲಿಲ್ಲ.

ಹೈಕದಲ್ಲಿ ಒಟ್ಟು ಆರು ಜಿಲ್ಲೆಗಳು ಮತ್ತು 40 ವಿಧಾನಸಭಾ ಕ್ಷೇತ್ರಗಳಿವೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ. ಕಾಂಗ್ರೆಸ್ ಪ್ರಬಲವಾಗಿರುವ ಕಾರಣಕ್ಕಾಗಿ ಇಲ್ಲಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ಸೇತರ ಎಂಬ ವಿಭಜನೆ ಸಹಜ. ಬಿಜೆಪಿಯು ತನ್ನ ಹಳೆಯ ಹುಲಿಗಳನ್ನು ಕೈಬಿಟ್ಟು ಹೊಸ ಪ್ರಯೋಗಕ್ಕೆ ಕೈಹಾಕುವ ಎಡವಟ್ಟು ಮಾಡಿಕೊಂಡಿದೆ. ಅದಕ್ಕೆ ಕೆಜೆಪಿಯ ಹಳೆ ಸಂಗಡಿಗರತ್ತ ರಾಜ್ಯ ಬಿಜೆಪಿ ಅಧ್ಯಕ್ಷ ಒಲವು ತೋರಿದ್ದೇ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತದೆ. ಅವರೀಗ ಬಂಡಾಯದ ಬಾವುಟ ಬೀಸಿ ಜೆಡಿಎಸ್‍ನಿಂದ ಕಣಕ್ಕೆ ಇಳಿದಿದ್ದಾರೆ. ಅದು ಜೆಡಿಎಸ್‍ಗೆ ಪ್ಲಸ್ ಪಾಯಿಂಟ್.

ಬೀದರ್

ಸಿಂಧ್ಯಾ

ಬೀದರ್ ಜಿಲ್ಲೆಯಲ್ಲಿ ಒಂದು ಪರಿಶಿಷ್ಟ ಜಾತಿಗೆ ಸೇರಿದ ಸ್ಥಾನವೂ ಸೇರಿದಂತೆ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿವೆ. ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ ಚಳವಳಿಗೆ ನೆಲೆ-ನೆಲ ಒದಗಿಸಿದ ಬಸವಕಲ್ಯಾಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಚುನಾಯಿತರಾಗಿದ್ದ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಸೇರಿ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಬಿಜೆಪಿಯ ಪ್ರಮುಖ ಮತಬ್ಯಾಂಕ್ ಎಂದು ಪರಿಗಣಿಸಲಾಗುವ ಮರಾಠ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಪಿ.ಜಿ,ಆರ್. ಸಿಂಧ್ಯಾ ಅವರ ಸ್ಪರ್ಧೆಯಿಂದ ಚುನಾವಣಾ ಕಣಕ್ಕೆ ರಂಗು ಬಂದಿದೆ. ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರು, ಮಾಜಿ ಶಾಸಕ ಮಾರುತಿರಾವ್ ಮೂಳೆ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಕಾಂಗ್ರೆಸ್‍ನಿಂದ ಎರಡನೇ ಬಾರಿಗೆ ಕಣಕ್ಕೆ ಇಳಿದಿರುವ ಕೋಲಿ-ಕಬ್ಬಲಿಗೆ ಸಮುದಾಯಕ್ಕೆ ಸೇರಿದ ಬಿ. ನಾರಾಯಣ್ ಅವರಿಗೆ ಸಾಂಪ್ರದಾಯಿಕ ಮತ ಬ್ಯಾಂಕ್ ಕೈಬಿಡದಿದ್ದರೆ ಗೆಲುವು ನಿಶ್ಚಿತ. ಲಿಂಗಾಯತ-ವೀರಶೈವ ವಿವಾದ, ಖೂಬಾ ಕಾರ್ಯವೈಖರಿ ಬಗೆಗಿನ ಅಸಮಾಧಾನ, ಅಲ್ಪಸಂಖ್ಯಾತರ ಮತಗಳ ಪ್ರಮಾಣ ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಲಿದೆ.

ಭಾಲ್ಕಿಯಲ್ಲಿ ಸಚಿವ ಈಶ್ವರ ಖಂಡ್ರೆ ಕಾಂಗ್ರೆಸ್‍ನಿಂದ ಕಣದಲ್ಲಿದ್ದಾರೆ. ಅವರಿಗೆ ಪ್ರಬಲ ಎದುರಾಳಿಯಾಗಿದ್ದ ಬಿಜೆಪಿಯ ಪ್ರಕಾಶ್ ಖಂಡ್ರೆ ಅವರಿಗೆ ಟಿಕೆಟ್ ನಿರಾಕರಿಸಿರುವುದರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಡಿ.ಕೆ. ಸಿದ್ರಾಮ ಈ ಬಾರಿ ಬಿಜೆಪಿ ಅಭ್ಯರ್ಥಿ. ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್‍ನ ಪ್ರಕಾಶ್ ಖಂಡ್ರೆ ಅವರು ತೆಗೆದುಕೊಳ್ಳಲಿರುವ ಮರಾಠ ಮತಗಳು ಬಿಜೆಪಿಯ ಓಟಕ್ಕೆ ಅಡ್ಡಿಯನ್ನುಂಟುಮಾಡಲಿವೆ. ಅಲ್ಪಸಂಖ್ಯಾತರ ಮತಗಳನ್ನು ತನ್ನ ಜೊತೆಗೆ ಇಟ್ಟುಕೊಳ್ಳಲು ಕಾಂಗ್ರೆಸ್‍ಗೆ ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಮಾತ್ರ ಸಂಕಷ್ಟಕ್ಕೆ ಸಿಲುಕಲಿದೆ.

ಖಂಡ್ರೆ

ಹುಮನಾಬಾದ್ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಜಶೇಖರ ಪಾಟೀಲ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ. ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಿನ ರುಚಿ ಉಣಿಸಿದ್ದು ನಂತರ ಜೆಡಿಎಸ್‍ನ ರಾಜ್ಯ ಅಧ್ಯಕ್ಷರೂ ಆದ ಮಾಜಿ ಸಚಿವ ಮಿರಾಜುದ್ದೀನ್ ಪಟೇಲ್. ಅವರ ಸಹೋದರ ನಸೀಮ್ ಪಟೇಲ್ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯಿಂದ ಅಷ್ಟೇನೂ ಪ್ರಬಲವಲ್ಲದ ಸುಭಾಷ ಕಲ್ಲೂರು ಕಣದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಅದರ ಲಾಭ ಜೆಡಿಎಸ್‍ಗೆ ದೊರೆಯುತ್ತದೆ. ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಅನ್ನು ಮಣಿಸುವುದು ಕಷ್ಟ.

ಸತತ ಎರಡು ಬಾರಿ ಶಾಸಕರಾಗಿ ಔರಾದ್ ಮೀಸಲು ಕ್ಷೇತ್ರದಿಂದ ಆಯ್ಕೆ ಆಗಿರುವ ಪ್ರಭು ಚವ್ಹಾಣ್ ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಅವರ ಗೆಲುವಿನ ಓಟಕ್ಕೆ ತಡೆ ಒಡ್ಡಲು ಇದ್ದ ಅವಕಾಶವನ್ನು ಹಿರಿಯ ನಿವೃತ್ತ ಅಧಿಕಾರಿ ಭೀಮಸೇನರಾವ್ ಶಿಂಧೆ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಕಾಂಗ್ರೆಸ್ ಕೈಚೆಲ್ಲಿದೆ. ಇಲ್ಲಿ ಜೆಡಿಎಸ್‍ನದ್ದು ನಾಮಕಾವಸ್ತೆ ಸ್ಪರ್ಧೆ.

ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ನಿಧನದ ನಂತರ ತೆರವಾಗಿದ್ದ ಬೀದರ್ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ರಹೀಮ್ ಖಾನ್ ಚುನಾಯಿತರಾಗಿದ್ದರು. ಉಪಚುನಾವಣೆಯಲ್ಲಿ ಸ್ಪರ್ಧಾ ಕಣಕ್ಕೆ ಇಳಿಯಲು ಹಿಂದೇಟು ಹಾಕಿದ್ದ ಗುರುಪಾದಪ್ಪ ಪುತ್ರ ಈಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿ ಇರುವಂತೆ ಕಾಣಿಸುವುದಕ್ಕೆ ಕಾರಣ ಈ ಕ್ಷೇತ್ರದಲ್ಲಿ ಇರುವ `ಅಹಿಂದ’ ಮತಗಳೇ ಕಾರಣ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅಶೋಕ ಖೇಣಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಅವರ ಎದುರಾಳಿಯಾಗಿ ಜೆಡಿಎಸ್‍ನ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಕಣದಲ್ಲಿದ್ದಾರೆ. ಈ ಉಭಯರ ನಡುವ ನಡೆದ ಕಳೆದ ಚುನಾವಣೆಯ ಕದನದಲ್ಲಿ ಕಾಂಗ್ರೆಸ್, ಬಿಜೆಪಿ, ಕೆಜೆಪಿಗಳು ದಿಕ್ಕಾಪಾಲಾಗಿ ಹೋಗಿದ್ದವು. ಸಂಪನ್ಮೂಲದ ಕೊರತೆ ಬಿಟ್ಟರೆ ಬಂಡೆಪ್ಪ ಕಾಶೆಂಪೂರ್ ಅವರಿಗೆ ಹಿನ್ನಡೆಯಾಗಲು ಕಾರಣಗಳೇ ಇಲ್ಲ. ಸಜ್ಜನ ರಾಜಕಾರಣಿ ಬಂಡೆಪ್ಪ ಕಾಶೆಂಪೂರ್ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಬೇಕು.

ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಮೂರು ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಗಳು ಸೇರಿದಂತೆ ಒಂಬತ್ತು ಸ್ಥಾನಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಸೇಡಂನಿಂದ ಪುನರಾಯ್ಕೆ ಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರ ಎದುರಾಳಿಯಾಗಿ ಬಿಜೆಪಿಯ ರಾಜಕುಮಾರ್ ತೇಲ್ಕೂರ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಮುಕ್ರಂಖಾನ್ ಈ ಬಾರಿ ಕಾಂಗ್ರೆಸ್ ಸೇರಿ ಶರಣಪ್ರಕಾಶ್ ಪರ ಕೆಲಸ ಮಾಡುತ್ತಿದ್ದಾರೆ. ಒಂದು ಕಾಲಕ್ಕೆ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿದ್ದ ಬಸವರಾಜ ಪಾಟೀಲ್ ಸೇಡಂ ಅವರ `ಮೌನ’ ಕಾಂಗ್ರೆಸ್‍ಗೆ ವರದಾನ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿಂಚೋಳಿ ಮೀಸಲು ಕ್ಷೇತ್ರದಲ್ಲಿ ಡಾ. ಉಮೇಶ್ ಜಾಧವ ಅವರು ಪುನರಾಯ್ಕೆ ಬಯಸಿ ಕಾಂಗ್ರೆಸ್‍ನಿಂದ ಕಣಕ್ಕೆ ಇಳಿದಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಉಮೇಶ್ ಅವರು ತಮ್ಮ ಜನಪರ ಕಾಳಜಿ ಮತ್ತು ಕೆಲಸಗಳಿಂದಾಗಿ ಕ್ಷೇತ್ರದಲ್ಲಿ ಜನಪ್ರಿಯರಾಗಿರುವವರು. ಬಿಜೆಪಿಯಿಂದ ಸ್ಪರ್ಧಿಸಿರುವ ಸುನೀಲ್ ವಲ್ಯಾಪುರೆ ಅವರು ಉಮೇಶ್ ಜಾಧವ ಅವರ ಜನಪ್ರಿಯತೆಯ ಮುಂದೆ ಎಷ್ಟು ಕಾಲ ಟೀಕಾಯಿಸುತ್ತಾರೋ ನೋಡಬೇಕು.

ಪ್ರಿಯಾಂಕ್

ಮತ್ತೊಂದು ಮೀಸಲು ಕ್ಷೇತ್ರ ಚಿತ್ತಾಪುರ. ಹಾಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಕಾಂಗ್ರೆಸ್‍ನಿಂದ ಸ್ಪರ್ಧಾಕಣದಲ್ಲಿದ್ದಾರೆ. ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ತೆರವಾದ ಸ್ಥಾನವನ್ನು ಯಶಸ್ವಿಯಾಗಿ ತುಂಬಿರುವ ಪ್ರಿಯಾಂಕ ಅವರು ಕಳೆದ ಐದು ವರ್ಷದ ಅವಧಿಯಲ್ಲಿ ಚಿತ್ತಾಪುರ ಕಂಡುಕೇಳರಿಯದಷ್ಟು ಅನುದಾನ ಹರಿದುಬರುವಂತೆ ಮಾಡಿದ್ದಾರೆ. ಕೇವಲ ಅಷ್ಟು ಮಾತ್ರವಲ್ಲದೆ ಅದು ಸದುಪಯೋಗ ಆಗುವಂತೆಯೂ ನೋಡಿಕೊಂಡಿದ್ದಾರೆ. ಪ್ರಿಯಾಂಕ ಅವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ವಾಲ್ಮೀಕಿ ನಾಯಕ್ ಕಣಕ್ಕೆ ಇಳಿದಿದ್ದಾರೆ. ತೀವ್ರ ಹಣಾಹಣಿ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ ಅವರನ್ನು ಹಣಿದಿದ್ದ ವಾಲ್ಮೀಕಿ ನಾಯಕ್ ಅವರು ಮೊದಲಿನ ವರ್ಚಸ್ಸು ಉಳಿಸಿಕೊಂಡಿಲ್ಲ.

ಗುಲ್ಬರ್ಗ ಗ್ರಾಮೀಣ ಕೂಡ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ. ಬಿಜೆಪಿಯ ಪ್ರಮುಖ ನಾಯಕ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಅವರಿಗೆ ಟಿಕೆಟ್ ನಿರಾಕರಿಸಿರುವುದರಿಂದ ಅವರು ಜೆಡಿಎಸ್‍ನಿಂದ ಕಣಕ್ಕೆ ಇಳಿದಿದ್ದಾರೆ. ಸಂಪನ್ಮೂಲದ ಥೈಲಿ ಹಿಡಿದುಕೊಂಡು `ಮೇಡಂ’ ಅವರ ಮೂಲಕ ಟಿಕೆಟ್ ಪಡೆದು ಬಂದಿರುವ ಬಿಜೆಪಿಯ ಬಸವರಾಜ ಮತ್ತಿಮೂಡ ಬಿಜೆಪಿ ಅಭ್ಯರ್ಥಿ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿ. ರಾಮಕೃಷ್ಣ ಅವರ ಪುತ್ರ ವಿಜಯಕುಮಾರ ಕಾಂಗ್ರೆಸ್ ಅಭ್ಯರ್ಥಿ. ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರದಲ್ಲಿ ಟಿಕೆಟ್ ವಂಚಿತನಾಗಿರುವ ಕಾರಣಕ್ಕೆ ರೇವುನಾಯಕ್ ಅವರು ತಮಗಿರುವ ಸಿಂಪಥಿ ಮತ್ತು ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿಯಿಂದ ಮುಂಚೂಣಿಯಲ್ಲಿದ್ದಾರೆ.

ಗುಲ್ಬರ್ಗ ಉತ್ತರ ಕ್ಷೇತ್ರದಲ್ಲಿ ಮಾಜಿ ಸಚಿವ ಖಮರುಲ್ ಇಸ್ಲಾಮ್ ಅವರ ಪತ್ನಿ ಕೆ. ಫಾತಿಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‍ನಿಂದ ನಾಸೀರ್ ಹುಸೇನ್, ಬಿಜೆಪಿಯಿಂದ ಚಂದ್ರಕಾಂತ ಪಾಟೀಲ್ ಸ್ಪರ್ಧಾಕಣದಲ್ಲಿದ್ದಾರೆ. ಅನುಕಂಪದ ಅಲೆ ಮತ್ತು ಖಮರುಲ್ ಮತಬ್ಯಾಂಕ್ ಫಾತಿಮಾ ಅವರ ಬೆಂಬಲಕ್ಕೆ ಇದೆ. 49 ರಷ್ಟು ಮತದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ ಇರುವುದು ಈ ಕ್ಷೇತ್ರದ ವಿಶೇಷ.

ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್‍ನಿಂದ ಅಲ್ಲಮಪ್ರಭು ಪಾಟೀಲ್ ಸ್ಪರ್ಧಿಸಿದ್ದಾರೆ. ಜೆಡಿಎಸ್‍ನಿಂದ ಬಸವರಾಜ ದಿಗ್ಗಾವಿ ಕಣದಲ್ಲಿದ್ದಾರೆ. ಜೆಡಿಎಸ್ ತೆಗೆದುಕೊಳ್ಳುವ ಮತಗಳು ಬಿಜೆಪಿಯ ಗೆಲುವಿಗೆ ಅಡ್ಡಿಯುಂಟುಮಾಡಬಲ್ಲವು.

ಜೇವರ್ಗಿ ಮತಕ್ಷೇತ್ರದಲ್ಲಿ ಹಾಲಿ ಶಾಸಕ ಅಜಯ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಾಕಣದಲ್ಲಿದ್ದಾರೆ. ಇದು ಅವರ ಎರಡನೇ ಪ್ರಯತ್ನ. ಅವರಿಗೆ ಪ್ರಬಲ ಎದುರಾಳಿಯಾಗಿ ಜೆಡಿಎಸ್‍ನ ಕೇದಾರಲಿಂಗಯ್ಯ ಹಿರೇಮಠ ಅವರು ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಬಿಜೆಪಿಯ ಮಾಜಿ ಶಾಸಕ ದೊಡ್ಡಪ್ಪಗೌಡ ನರಬೋಳಿ ಅವರು ಕೂಡ ಸ್ಪರ್ಧೆಯಲ್ಲಿದ್ದಾರೆ. ಪೈಪೋಟಿ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ. ಸಂಪನ್ಮೂಲ ಹರಿದಾಡುವ ಕಾರಣಕ್ಕಾಗಿ `ಸೂಕ್ಷ್ಮ’ ಕ್ಷೇತ್ರ ಪರಿಗಣಿಸಲಾಗುವ ಜೇವರ್ಗಿಯಲ್ಲಿ `ಅದು’ ನಿರ್ಣಾಯಕ ಪಾತ್ರ ವಹಿಸಿದರೆ `ಕಾಂಗ್ರೆಸ್’ನ ಗೆಲುವಿನ ಓಟವನ್ನು ತಡೆಯಲು ಸಾಧ್ಯವಿಲ್ಲ.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಅಫಜಲಪುರ ಮತಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಂ.ವೈ. ಪಾಟೀಲ್ ಎದುರಾಳಿ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ಸ್ಪರ್ಧೆಯೇ ಮುಖ್ಯ. ಉಭಯರ ನಡುವೆ ನೇರ ಹಣಾಹಣಿ. ಎಂ.ವೈ. ಪಾಟೀಲ್ ತಮ್ಮ ಸಮುದಾಯದ ಮತಗಳ ಜೊತೆಗೆ ಪಾರಂಪರಿಕ ಕಾಂಗ್ರೆಸ್ ಮತ ಬ್ಯಾಂಕ್ ಸೇರಿರುವುದರಿಂದ ಮೇಲುಗೈ ಸಾಧಿಸಿದ್ದಾರೆ. ಖರ್ಗೆ ಅವರು ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗುತ್ತಿದೆ.

ಅಳಂದ ಕ್ಷೇತ್ರದಲ್ಲಿ ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ಆರ್. ಪಾಟೀಲ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಅವರ ಪ್ರಬಲ ಎದುರಾಳಿ ಸುಭಾಷ ಗುತ್ತೇದಾರ ಅವರು ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಾಕಣಕ್ಕೆ ಇಳಿದಿದ್ದಾರೆ. ಪಾಟೀಲ್ ಅವರಿಗೆ ಕಾಂಗ್ರೆಸ್ ಮತಗಳು ಸೇರ್ಪಡೆ ಆಗಿರುವುದು ಪ್ಲಸ್ ಪಾಯಿಂಟ್.

ಯಾದಗಿರಿ

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಗುರು ಪಾಟೀಲ್ ಶಿರವಾಳ ಈ ಬಾರಿ ಬಿಜೆಪಿ ಅಭ್ಯರ್ಥಿ. ಕೆಜೆಪಿಯ ಕಾರಣಕ್ಕಾಗಿ ಗುರುಪಾಟೀಲ್ ಪಡೆದಿದ್ದ ಅಲ್ಪಸಂಖ್ಯಾತರ ಮತಗಳು ಮತ್ತು ತಂದೆಯ ಸಾವಿನ ಕಾರಣದಿಂದ ಉಂಟಾಗಿದ್ದ `ಅನುಕಂಪ’ ಗೆಲುವಿನ ದಡ ಸೇರಿಸಿದ್ದವು. ಈಗ ಅವೆರಡೂ ಇಲ್ಲದಿರುವುದು ಗುರುಪಾಟೀಲ್ ಅವರ ಸ್ಪರ್ಧೆಯನ್ನು ಕಠಿಣಗೊಳಿಸಿದೆ. ಶರಣಬಸಪ್ಪ ದರ್ಶನಾಪುರ ಮತ್ತೊಮ್ಮೆ ಗೆಲುವಿನ ನಗೆ ಬೀರಿದರೆ ಅಚ್ಚರಿಯೇನಿಲ್ಲ.

ಚಿಂಚನಸೂರ

ಗುರುಮಿಟಕಲ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಾಬುರಾವ ಚಿಂಚನಸೂರು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಚಿಂಚನಸೂರು ಅವರ ಕೋಲಿ-ಕಬ್ಬಲಿಗೆ ಸಮುದಾಯಕ್ಕೆ ಸೇರಿದ ಸಾಯಿಬಣ್ಣ ಬೋರಬಂಡ ಕಣದಲ್ಲಿದ್ದಾರೆ. ಜೆಡಿಎಸ್‍ನಿಂದ ನಾಗಣಗೌಡ ಕಂದಕೂರ ಕಾಂಗ್ರೆಸ್- ಬಿಜೆಪಿಗೆ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸುವ ಸಾಧ್ಯತೆಗಳೇ ಹೆಚ್ಚು.

ಯಾದಗಿರಿ ಕ್ಷೇತ್ರದಿಂದ ಮಾಜಿ ಸಚಿವ ಡಾ. ಮಲಕರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ ಅವರ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿಯಾಗಿ ವೆಂಕಟರೆಡ್ಡಿ ಮುದ್ನಾಳ ಕಣದಲ್ಲಿದ್ದಾರೆ. ನೇರ ಹಣಾಹಣಿ ಇರುವ ಕ್ಷೇತ್ರದಲ್ಲಿ `ವಯಸ್ಸು’ ಮಲಕರೆಡ್ಡಿ ಅವರಿಗಿರುವ ಸಮಸ್ಯೆ. ಉಭಯರೂ ಒಂದೇ ಸಮುದಾಯಕ್ಕೆ ಸೇರಿದವರು. ಬಿಜೆಪಿಯಿಂದ ವೀರಬಸವಂತರೆಡ್ಡಿ ಅವರಿಗೆ ಟಿಕೆಟ್ ನಿರಾಕರಿಸಿರುವುದು ಅಚ್ಚರಿ ಮೂಡಿಸಿದೆ. ಅದರ ಲಾಭ ಕಾಂಗ್ರೆಸ್ ಪಡೆಯಬಹುದೇ?

ಸುರಪುರ ಮತಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟಪ್ಪ ನಾಯಕ್ ಅವರಿಗೆ ಬಿಜೆಪಿಯ ನರಸಿಂಹ ನಾಯಕ (ರಾಜುಗೌಡ) ಎದುರಾಳಿಯಾಗಿದ್ದಾರೆ. ಜೆಡಿಎಸ್‍ನಿಂದ ಸುರಪುರ ಅರಸು ಮನೆತನಕ್ಕೆ ಸೇರಿದ ಕೃಷ್ಣಪ್ಪ ನಾಯಕ ಸ್ಪರ್ಧಿಸಿದ್ದಾರೆ. ಸಮಬಲರ ನಡುವಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವಂತೆ ಭಾಸವಾಗುತ್ತದೆ.

ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಂದು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಎರಡು ಕ್ಷೇತ್ರಗಳು ಸೇರಿದಂತೆ ಒಟ್ಟು ಏಳು ಸ್ಥಾನಗಳಿವೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ ತಿಪ್ಪರಾಜು ಹವಾಲ್ದಾರ ಕಾಂಗ್ರೆಸ್‍ನಿಂದ ಬಸನಗೌಡ ದದ್ದಲ ಮತ್ತು ಜೆಡಿಎಸ್‍ನಿಂದ ರವಿ ಪಾಟೀಲ್ ಸ್ಪರ್ಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಲ್ಲಿ ಬಸನಗೌಡರಿಗೆ ಹಿನ್ನಡೆಯಾಗುವ ಸಾಧ್ಯತೆಗಳು ತೀರಾ ಕಡಿಮೆ.

ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸೈಯದ್ ಯಾಸೀನ್ ಮತ್ತು ಬಿಜೆಪಿಯಿಂದ ಶಿವರಾಜ್ ಪಾಟೀಲ್ ಸ್ಪರ್ಧಿಸಿದ್ದಾರೆ. ಜೆಡಿಎಸ್‍ನ ಮಹಾಂತೇಶ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿಯ ಓಟಕ್ಕೆ ಅಡ್ಡಗಾಲು ಹಾಕಲಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಹಂಪಯ್ಯ ನಾಯಕ್, ಬಿಜೆಪಿಯಿಂದ ಶರಣಯ್ಯ ಗುಡದಿನ್ನಿ ಸ್ಪರ್ಧಿಸಿದ್ದಾರೆ. ಜೆಡಿಎಸ್‍ನ ರಾಜಾ ವೆಂಕಟಪ್ಪ ನಾಯಕ ಉಭಯರಿಗೂ ಪೈಪೋಟಿ ಒಡ್ಡಲಿದ್ದಾರೆ. ಗೆಲುವಿನ ನಗೆ ಬೀರುವ ಅವಕಾಶ ಇರುವುದು ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾತ್ರ.

ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಶಿವನಗೌಡ ನಾಯಕ್ ಮತ್ತು ಅವರಿಗೆ ಎದುರಾಳಿಯಾಗಿ ಸೋದರ ಮಾವ ರಾಜಶೇಖರ ನಾಯಕ್ ಸ್ಪರ್ಧೆಯಲ್ಲಿದ್ದಾರೆ. ಮಾವ ಅಳಿಯರಿಬ್ಬರೂ ಪರಸ್ಪರ ಸೋಲು-ಗೆಲುವಿನ ರುಚಿ ಅನುಭವಿಸಿದ್ದಾರೆ. ಈ ಬಾರಿ ಗೆಲುವು ಸಾಧಿಸುವುದಕ್ಕಾಗಿ ಉಭಯರಿಗೂ ಜೆಡಿಎಸ್‍ನ ವೆಂಕಟೇಶ್ ಪೂಜಾರ ಅಡ್ಡಿಯಾಗಿದ್ದಾರೆ. ಶಿವನಗೌಡ ಮತ್ತೆ ವಿಧಾನಸಭೆಯ ಮೆಟ್ಟಿಲು ಹತ್ತಿದರೆ ಅಚ್ಚರಿಯೇನಿಲ್ಲ.

ವಜ್ಜಲ್

ಎಸ್‍ಸಿ ಮೀಸಲು ಕ್ಷೇತ್ರವಾಗಿರುವ ಲಿಂಗಸೂರಿನಲ್ಲಿ ಜೆಡಿಎಸ್‍ನಿಂದ ಚುನಾಯಿತರಾಗಿ ಪಕ್ಷ ತೊರೆದು ಬಿಜೆಪಿ ಸೇರಿರುವ ಮಾನಪ್ಪ ವಜ್ಜಲ್ ಕಣದಲ್ಲಿದ್ದಾರೆ. ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ದುರ್ಗಪ್ಪ ಹೊಳಗೇರಿ ಮತ್ತು ಜೆಡಿಎಸ್‍ನ ಸಿದ್ದು ಬಂಡಿ ಕಣದಲ್ಲಿದ್ದಾರೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾನಪ್ಪ ವಜ್ಜಲ್ ಎದುರಿಸುತ್ತಿರುವ ಪ್ರತಿರೋಧ ನೋಡಿದರೆ ಅವರ ಹಾದಿ ದುರ್ಗಮವಾಗಿರುವುದು ಅರಿವಿಗೆ ಬರುತ್ತದೆ.

ಸಿಂಧನೂರು ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಂಪನಗೌಡ ಬಾದರ್ಲಿ ಮತ್ತು ಬಿಜೆಪಿಯ ಶೇಷಗಿರಿರಾವ್, ಜೆಡಿಎಸ್‍ನ ವೆಂಕಟರಾವ್ ನಾಡಗೌಡ ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿರುವುದು ಕಂಡುಬರುತ್ತಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಮಸ್ಕಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಾಪಗೌಡ ಪಾಟೀಲ್, ಬಿಜೆಪಿಯಿಂದ ಬಸನಗೌಡ ತುರುವೀಹಾಳ್ ಮತ್ತು ಜೆಡಿಎಸ್ ನಿಂದ ರಾಜಾ ಸೋಮನಾಥ ನಾಯಕ್ ಸ್ಪರ್ಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಸ್ಪರ್ಧೆಯಲ್ಲಿ ಕಾಂಗ್ರೆಸ್‍ನ ಅಭ್ಯರ್ಥಿಯ ಪರವಾದ ಮಾತುಗಳು ಕೇಳಿಬರುತ್ತಿವೆ.

ಕೊಪ್ಪಳ

ಕೊಪ್ಪಳ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಕುಷ್ಟಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಮರೇಗೌಡ ಬಯ್ಯಾಪುರ, ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್ ಮತ್ತು ಜೆಡಿಎಸ್‍ನಿಂದ ಹೆಚ್.ಸಿ. ನೀರಾವರಿ ಸ್ಪರ್ಧಿಸಿದ್ದಾರೆ. ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಪ್ರಚಾರ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗೆ ಎದುರಾಗುತ್ತಿರುವ ಪ್ರತಿರೋಧವು ಅವರನ್ನು ಅಸಹಾಯಗೊಳಿಸಿದೆ.

ಕನಕಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ಮತ್ತು ಬಿಜೆಪಿಯಿಂದ ಬಸವರಾಜ ದಡೇಸೂಗುರು ಸ್ಪರ್ಧಿಸಿದ್ದಾರೆ. ನೇರ ಹಣಾಹಣಿಯಲ್ಲಿ ಬಿಜೆಪಿಯು ತಂಗಡಗಿಯನ್ನು ಹಣಿಯುವ ಹಂಬಲದಲ್ಲಿದೆ.

ಅನ್ಸಾರಿ

ಗಂಗಾವತಿಯಿಂದ ಜೆಡಿಎಸ್ ತೊರೆದುಬಂದ ಶಾಸಕ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರಿಗೆ ಎದುರಾಳಿಯಾಗಿ ಬಿಜೆಪಿಯ ಪರಣ್ಣ ಮುನವಳ್ಳಿ ಕಣದಲ್ಲಿದ್ದಾರೆ. ಹಿಂದು-ಮುಸ್ಲಿಮ್ ಎಂಬ ವಿಭಜನೆಗೆ ಬಿಜೆಪಿಯು ಶಕ್ತಿಮೀರಿ ಪ್ರಯತ್ನಿಸುತ್ತದೆ. ಅದಕ್ಕಾಗಿ ಕೋಮುದ್ವೇಷ ಹರಡುವ, ಬೆಂಕಿಯುಗುಳುವ ಬಾಯ್ಬಡುಕರನ್ನು ಬಿಜೆಪಿ ಬಳಸುತ್ತಿದೆ. ಅದು ಅನ್ಸಾರಿಯವರ ದಾರಿಯನ್ನು ಕಷ್ಟಗೊಳಿಸಲು ಕಾರಣವಾಗಿದೆ. ಬಿಜೆಪಿಗೆ ಅದೇ ತಿರುಗುಬಾಣವೂ ಆಗಬಹುದು.

ಯಲಬುರ್ಗಾ ಕ್ಷೇತ್ರದಿಂದ ಸಚಿವ ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾದರೆ ಬಿಜೆಪಿಯಿಂದ ಹಾಲಪ್ಪ ಆಚಾರ್, ಜೆಡಿಎಸ್‍ನಿಂದ ವೀರಣಗೌಡ ಪಾಟೀಲ್ ಕಣದಲ್ಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ರಾಯರೆಡ್ಡಿ ಅವರ ಗೆಲುವು ಕಷ್ಟವಾಗಲಿಕ್ಕಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಮರೇಶ ಕರಡಿ ಸ್ಪರ್ಧೆಗಿಳಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಘವೇಂದ್ರ ಹಿಟ್ನಾಳ್ ಸ್ಪರ್ಧಿಸಿದ್ದಾರೆ. ನೇರ ಹಣಾಹಣಿಯಲ್ಲಿ ಬಿಜೆಪಿಯು ಮುಂಚೂಣಿಯಲ್ಲಿ ಇರುವಂತೆ ಭಾಸವಾಗುತ್ತದೆ.

ಬಳ್ಳಾರಿ

ಆನಂದ್ ಸಿಂಗ್

ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೂರು ಕ್ಷೇತ್ರಗಳು ಸೇರಿದಂತೆ ಒಟ್ಟು ಒಂಬತ್ತು ವಿಧಾನಸಭಾ ಕ್ಷೇತ್ರಗಳಿವೆ. ಈ ಬಾರಿ ಬಿಜೆಪಿಗೆ ಸುಲಭದ ತುತ್ತೇನಲ್ಲ. ಬಿಜೆಪಿಯ ಮಡಿಲಿನಲ್ಲಿಯೇ ಇದ್ದವರನ್ನು ತನ್ನೆಡೆಗೆ ಸೆಳೆದುಕೊಂಡಿರುವ ಕಾಂಗ್ರೆಸ್‍ಗೆ ಲಾಭದ ಲೆಕ್ಕಾಚಾರದಲ್ಲಿ ನಿರತವಾಗಿದೆ. ಕಾಂಗ್ರೆಸ್ ಹಿಂದೆಂದಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜಯನಗರ ಕ್ಷೇತ್ರದಲ್ಲಿ ಆನಂದಸಿಂಗ್ ಅವರು ಕಾಂಗ್ರೆಸ್‍ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಅವರಿಗೆ ಎದುರಾಳಿಯಾಗಿರುವ ಬಿಜೆಪಿಯ ಗವಿಯಪ್ಪ ಪೈಪೋಟಿ ನೀಡುತ್ತಿರುವರಾದರೂ ಅದು ಸಾಕಾಗುತ್ತಿಲ್ಲ. ಕಂಪ್ಲಿಯಲ್ಲಿ ಬಿಜೆಪಿಯ ಸುರೇಶಬಾಬು ಅವರಿಗೆ ಕಾಂಗ್ರೆಸ್‍ನ ಜಿ.ಎನ್. ಗಣೇಶ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಹಡಗಲಿಯಲ್ಲಿ ಕಾಂಗ್ರೆಸ್‍ನ ಪರಮೇಶ್ವರ ನಾಯಕ್ ಮತ್ತು ಬಿಜೆಪಿಯ ಚಂದ್ರಾನಾಯಕ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ.

ಶಿರಗುಪ್ಪದಲ್ಲಿ ಬಿಜೆಪಿಯ ಸೋಮಲಿಂಗಪ್ಪ ಅವರು ಕಾಂಗ್ರೆಸ್‍ನ ಎಸ್.ಟಿ. ಮುರಳಿಕೃಷ್ಣ ಅವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ. ಹಗರಿಬೊಮ್ಮನಹಳ್ಳಿ ಬಿಜೆಪಿಯ ನೇಮಿರಾಜ್ ನಾಯಕ್ ಮತ್ತು ಕಾಂಗ್ರೆಸ್ ಭೀಮಾ ನಾಯಕ ನಡುವಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಬಳ್ಳಾರಿ ಗ್ರಾಮೀಣ (ಎಸ್ ಟಿ) ಮಾಜಿ ಸಂಸದ ಸಣ್ಣಫಕೀರಪ್ಪ ಬಿಜೆಪಿ ಅಭ್ಯರ್ಥಿಯಾದರೆ ಕಾಂಗ್ರೆಸ್‍ನಿಂದ ನಾಗೇಂದ್ರ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಸೋಮಶೇಖರರೆಡ್ಡಿ ಅವರಿಗೆ ಎದುರಾಳಿಯಾಗಿರುವ ಕಾಂಗ್ರೆಸ್‍ನ ಅನಿಲ್ ಲಾಡ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಗೆಲುವು ಮಾತ್ರ ಕಾಂಗ್ರೆಸ್ ಅಭ್ಯರ್ಥಿಯದೇ ಎನ್ನಲಾಗುತ್ತಿದೆ. ಸಂಡೂರು (ಎಸ್ ಟಿ) ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿ. ರಾಘವೇಂದ್ರ ಮತ್ತು ಕಾಂಗ್ರೆಸ್‍ನಿಂದ ತುಕಾರಾಂ ಕಣದಲ್ಲಿದ್ದಾರೆ. ತುಕಾರಾಂ ಪುನರಾಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚು. ಕೂಡ್ಲಿಗಿ (ಎಸ್ ಟಿ) ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ರಘು ಗುಜ್ಜಲ್ ಮತ್ತು ಬಿಜೆಪಿಯಿಂದ ಎನ್.ವೈ. ಗೋಪಾಲಕೃಷ್ಣ ಸ್ಪರ್ಧಾ ಕಣದಲ್ಲಿದ್ದಾರೆ. ರಘು ಗುಜ್ಜಲ್ ಅವರಿಗೆ ಗೆಲುವಿನ ನಗೆ ಬೀರುವುದು ಕಷ್ಟವಾಗಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...