Homeಮುಖಪುಟಪತ್ರಕರ್ತ ನಿಖಿಲ್ ವಾಗ್ಲೆ ಮೇಲೆ ದಾಳಿ: 10 ಬಿಜೆಪಿ ಕಾರ್ಯಕರ್ತರ ಬಂಧನ

ಪತ್ರಕರ್ತ ನಿಖಿಲ್ ವಾಗ್ಲೆ ಮೇಲೆ ದಾಳಿ: 10 ಬಿಜೆಪಿ ಕಾರ್ಯಕರ್ತರ ಬಂಧನ

- Advertisement -
- Advertisement -

ಪುಣೆ ನಗರದಲ್ಲಿ ಹಿರಿಯ ಮರಾಠಿ ಪತ್ರಕರ್ತ ನಿಖಿಲ್ ವಾಗ್ಲೆ ಅವರ ಕಾರಿನ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂಧಿತ ಬಿಜೆಪಿ ಕಾರ್ಯಕರ್ತರನ್ನು ದೀಪಕ್ ಪೋಟೆ, ಗಣೇಶ್ ಘೋಷ್, ಗಣೇಶ್ ಶೆರ್ಲಾ, ರಾಘವೇಂದ್ರ ಮಾನಕರ್, ಸ್ವಪ್ನಿಲ್ ನಾಯ್ಕ್, ಪ್ರತೀಕ್ ದೇಸರ್ದಾ, ದುಶ್ಯಂತ್ ಮೊಹೋಲ್, ದತ್ತಾ ಸಾಗ್ರೆ, ಗಿರೀಶ್ ಮಾನ್ಕರ್ ಮತ್ತು ರಾಹುಲ್ ಪಾಯ್ಗುಡೆ ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆ), 324, 336, 427 ಸೇರಿದಂತೆ ವಿವಿಧ ಸೆಕ್ಸನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಸಭೆಗೆ ವಾಗ್ಲೆ ಮತ್ತು ಇತರರು ಪೊಲೀಸ್‌ ರಕ್ಷಣೆಯಲ್ಲಿ ತೆರಳುತ್ತಿರುವಾಗ ಕಾರಿನ ಮೇಲೆ ದಾಳಿ ನಡೆದ ಒಂದು ದಿನದ ನಂತರ ನಗರದ ಪಾರ್ವತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್‌ ದಾಖಲಿಸಲಾಗಿತ್ತು.

ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರಿಗೆ ನರೇಂದ್ರ ಮೋದಿ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಗೌರವ `ಭಾರತ ರತ್ನ’ ನೀಡಿ ಗೌರವಿಸುತ್ತಿರುವ ಕುರಿತು ಹಿರಿಯ ಪತ್ರಕರ್ತ ನಿಖಿಲ್ ವಾಗ್ಲೆ ಟೀಕಿಸಿದ್ದರು ಇದರಿಂದಾಗಿ ಬಿಜೆಪಿ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸಿಂಘಾಡ್ ರಸ್ತೆ ಪ್ರದೇಶದಲ್ಲಿ ರಾಷ್ಟ್ರ ಸೇವಾದಳ ಆಯೋಜಿಸಿದ್ದ ‘ನಿರ್ಭಯ್ ಬಾನೋ’ ಕಾರ್ಯಕ್ರಮಕ್ಕೆ ನಿಖಿಲ್ ವಾಗ್ಲೆ, ಅಸೀಮ್ ಸರೋದೆ ಮತ್ತು ವಿಶ್ವಂಭರ ಚೌಧರಿ ಪೊಲೀಸ್ ರಕ್ಷಣೆಯಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಶಾಯಿ ಎರಚಿ ಕಾರಿನ ವಿಂಡ್‌ಸ್ಕ್ರೀನ್ ಒಡೆದು ಹಾಕಿದ್ದಾರೆ.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ನಿಖಿಲ್ ವಾಗ್ಲೆ (64) ವಿರುದ್ಧ  ಬಿಜೆಪಿಯ ಹಿರಿಯ ನಾಯಕ ಸುನೀಲ್ ದೇವಧರ್ ಪುಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಿಖಿಲ್ ವಾಗ್ಲೆ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 500 (ಮಾನನಷ್ಟ) ಮತ್ತು 505ರಡಿಯಲ್ಲಿ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದಲ್ಲದೆ ಸೆಕ್ಷನ್ 144ನ್ನು ಉಲ್ಲಂಘಿಸಿದ ಆರೋಪದಲ್ಲಿ ವಾಗ್ಲೆ, ಬಿಜೆಪಿ, ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್‌ನ ಪುಣೆ ನಗರ ಘಟಕದ ಅಧ್ಯಕ್ಷರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಅನುಮತಿಯಿಲ್ಲದೆ `ನಿರ್ಭಯ್ ಬಾನೊ’ ಸಾರ್ವಜನಿಕ ಸಭೆ ನಡೆಯುತ್ತಿದ್ದರಿಂದ ಅವರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಂಭಾಜಿ ಕದಂ ಹೇಳಿದ್ದಾರೆ.

ಖಂಡೋಜಿ ಬಾಬಾ ಚೌಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ನಿಖಿಲ್ ವಾಗ್ಲೆ ಅವರ ಕಾರನ್ನು ಗುಂಪುಗೂಡಿ  ಧ್ವಂಸಗೊಳಿಸುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದಾಳಿಯಿಂದ ಕಾರಿನ ವಿಂಡ್‌ಸ್ಕ್ರೀನ್ ಮತ್ತು ಸೈಡ್ ಪ್ಯಾನ್‌ಗಳಿಗೆ ಹಾನಿಯಾಗಿದೆ. ನಿಖಿಲ್ ವಾಗ್ಲೆ ಪೊಲೀಸ್ ರಕ್ಷಣೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ತೆರಳುವಲ್ಲಿ ಯಶಸ್ವಿಯಾಗಿದ್ದರು.

‘ನಿರ್ಭಯ್ ಬಾನೋ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ವಾಗ್ಲೆ, ನನ್ನ ಮೇಲೆ ಹಲ್ಲೆ ನಡೆಸಿದ ಎಲ್ಲರನ್ನೂ ನಾನು ಕ್ಷಮಿಸುತ್ತೇನೆ. ಈ ಹಿಂದೆ ಆರು ಬಾರಿ ನನ್ನ ಮೇಲೆ ದಾಳಿ ಮಾಡಲಾಗಿದೆ ಮತ್ತು ಇದು ಏಳನೆಯದು ಎಂದು ಹೇಳಿದ್ದರು.

ಪತ್ರಕರ್ತ ನಿಖಿಲ್ ವಾಗ್ಲೆ ವಿರುದ್ಧದ ದಾಳಿಯನ್ನು ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪುಣೆಯ ಆಡಳಿತ ಮತ್ತು ಮಹಾರಾಷ್ಟ್ರ ಸರ್ಕಾರ ತಪ್ಪಿತಸ್ಥರನ್ನು ಬಂಧಿಸುವಂತೆ ಎಡಿಟರ್ಸ್ ಗಿಲ್ಡ್ ಆಗ್ರಹಿಸಿದೆ. ವಾಗ್ಲೆ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಗಮನಿಸಿದೆ ಮತ್ತು ಪತ್ರಕರ್ತರನ್ನು ಬೆದರಿಸುವ ಮತ್ತು ಕಿರುಕುಳ ನೀಡುವ ಪ್ರಯತ್ನದಲ್ಲಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಕಾನೂನುಗಳ ದುರುಪಯೋಗದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಪತ್ರಕರ್ತರ ವಿರುದ್ಧದ ದೂರುಗಳಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಕಾನೂನು ಜಾರಿ ಸಂಸ್ಥೆಗಳು ಸಂಯಮದಿಂದ ವರ್ತಿಸುವಂತೆ ನಾವು ಒತ್ತಾಯಿಸುತ್ತೇವೆ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.

‘ಸ್ವತಂತ್ರ ಪತ್ರಕರ್ತನ’ ಮೇಲಿನ ದಾಳಿಯು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುಸಿತವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಕೂಡ ಆರೋಪಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯು ಜನಾದೇಶ ಕದಿಯುವ ಮೂಲಕ ರಚಿಸಲಾದ ಮಹಾರಾಷ್ಟ್ರ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಫೇಸ್ ಬುಕ್ ಲೈವ್‌ನಲ್ಲಿ ರಾಜಕಾರಣಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಬಿಜೆಪಿ-ಆರೆಸ್ಸೆಸ್‌ನ ಗೂಂಡಾಗಳಿಂದ ಬಹಿರಂಗವಾಗಿ ಮಾತನಾಡುವ ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಮತ್ತೊಬ್ಬ ರಾಜಕಾರಣಿ ಮೇಲೆ ಗುಂಡು ಹಾರಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ಮುಂಬೈನಲ್ಲಿ ಶಿವಸೇನಾ (ಯುಬಿಟಿ) ನಾಯಕ ಅಭಿಷೇಕ್ ಘೋಸಲ್ಕರ್ ಹತ್ಯೆ ಮತ್ತು ಈ ತಿಂಗಳ ಆರಂಭದಲ್ಲಿ ಥಾಣೆ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್‌ ಪೊಲೀಸ್ ಠಾಣೆಯೊಳಗೆ ಗುಂಡು ಹಾರಿಸಿ ಶಿವಸೇನೆಯ ಕಾರ್ಯಕರ್ತನನ್ನು ಗಾಯಗೊಳಿಸಿದ ಘಟನೆಯನ್ನು ಅವರು ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಲೋಕಸಭೆ ಚುನಾವಣೆ: ಅಸಂವಿಧಾನಿಕ ‘CAA’ ಅಬ್ಬರ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...