Homeಮುಖಪುಟಮೋದಿ ಸರ್ಕಾರ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೇರಿದೆಯೇ? ಸಂಸತ್ತಿನಲ್ಲಿ ಓವೈಸಿ ಪ್ರಶ್ನೆ

ಮೋದಿ ಸರ್ಕಾರ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೇರಿದೆಯೇ? ಸಂಸತ್ತಿನಲ್ಲಿ ಓವೈಸಿ ಪ್ರಶ್ನೆ

- Advertisement -
- Advertisement -

ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾದಿಯಾಗಿ ಇಡೀ ಆಡಳಿತ ಯಂತ್ರವೇ ಭಾಗವಹಿಸಿದ್ದನ್ನು ಪ್ರಶ್ನಿಸಿದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ, ನರೇಂದ್ರ ಮೋದಿ ಸರ್ಕಾರ ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೇರಿದೆಯೇ ಎಂದು ಪ್ರಶ್ನಿಸಿದ್ದಾರೆ.

ಜನವರಿ 22ರಂದು ನಡೆದ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು  ಸಕ್ರಿಯ ವಾಗಿದ್ದ ಬಗ್ಗೆ ಪ್ರಶ್ನಿಸಿದ ಅಸಾದುದ್ದೀನ್ ಓವೈಸಿ, ರಾಜ್ಯ ಮತ್ತು ಧರ್ಮದ ನಡುವಿನ ಗೆರೆಗಳು ಮಸುಕಾಗಿವೆ. ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಉಳಿಯಬೇಕಿರುವ ಭಾರತೀಯ ವಾಯುಸೇನೆ ಕಾರ್ಯಕ್ರಮದ ವೇಳೆ ದೇವಸ್ಥಾನದ ಆವರಣದಲ್ಲಿ ಅಭೂತಪೂರ್ವ ರೀತಿಯಲ್ಲಿ ಹೂವಿನ ದಳಗಳನ್ನು ಸುರಿಸಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಶನಿವಾರ ಲೋಕಸಭೆಯಲ್ಲಿ ರಾಮಮಂದಿರ ಕುರಿತ ವಂದನಾ ನಿರ್ಣಯವನ್ನು ಮಂಡಿಸಿದೆ. ಈ ವೇಳೆ ಮಾತನಾಡಿದ ಹೈದರಾಬಾದ್ ಸಂಸದ ಒವೈಸಿ, ಸರಕಾರಕ್ಕೆ ಧರ್ಮವಿದೆಯೇ? ಈ ದೇಶಕ್ಕೆ ಧರ್ಮವಿಲ್ಲ ಎಂದು ನಾನು ನಂಬುತ್ತೇನೆ. ಜನವರಿ 22ರ ಮೂಲಕ ಈ ಸರ್ಕಾರವು ಒಂದು ಧರ್ಮದ ಮೇಲೆ ಇನ್ನೊಂದು ಧರ್ಮವನ್ನು ಗೆದ್ದಿದೆ ಎಂಬ ಸಂದೇಶವನ್ನು ನೀಡಲು ಬಯಸುತ್ತದೆಯೇ? ದೇಶದಲ್ಲಿರುವ 17 ಕೋಟಿ ಮುಸ್ಲಿಮರಿಗೆ ಏನು ಸಂದೇಶ ನೀಡುತ್ತೀರಿ. ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ನೇತೃತ್ವದಲ್ಲಿ ರಾಮ ಜನ್ಮಭೂಮಿ ಅಭಿಯಾನದ ನಂತರ 1992ರಲ್ಲಿ ಕರಸೇವಕರಿಂದ ಧ್ವಂಸಗೊಂಡ 16ನೇ ಶತಮಾನದ ಬಾಬ್ರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ಬಾಬರ್‌ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಒವೈಸಿ, ನಾನು ಬಾಬರ್, ಜಿನ್ನಾ ಅಥವಾ ಔರಂಗಜೇಬ್‌ನ ವಕ್ತಾರನೇ? ನಾನು ಭಗವಾನ್ ರಾಮನನ್ನು ಗೌರವಿಸುತ್ತೇನೆ ಆದರೆ ನಾನು ನಾಥೂರಾಂ ಗೋಡ್ಸೆಯನ್ನು ದ್ವೇಷಿಸುತ್ತೇನೆ ಏಕೆಂದರೆ ಅವನು ‘ಹೇ ರಾಮ್’ ಎಂದು ಕೊನೆಯ ಮಾತುಗಳನ್ನು ಹೇಳಿದ್ದ ವ್ಯಕ್ತಿಯನ್ನು ಕೊಂದಿದ್ದಾನೆ ಎಂದು ಓವೈಸಿ ಹೇಳಿದ್ದಾರೆ.

ಪ್ರಧಾನಿ ಪಕ್ಷಪಾತಿ ಎಂದು ಆರೋಪಿಸಿದ ಓವೈಸಿ, ಪ್ರಧಾನಿ 140 ಕೋಟಿ ಭಾರತೀಯರ ಪರವಾಗಿ ಮಾತನಾಡುತ್ತಾರೆಯೇ ಅಥವಾ ಹಿಂದುತ್ವವನ್ನು ಬೆಂಬಲಿಸುವವರ ಪರವಾಗಿ ಮಾತ್ರ ಮಾತನಾಡುತ್ತಾರೆಯೇ ಎಂದು ಕೇಳಿದ್ದಾರೆ. ಗುಪ್ತಚರ ವರದಿಗಳ ಹೊರತಾಗಿಯೂ ಮಸೀದಿ ಬಳಿ ಕರಸೇವಕರಿಗೆ ಸೇರಲು ಅವಕಾಶ ನೀಡಿದ ಅಡ್ವಾಣಿ ಮತ್ತು ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ಓವೈಸಿ, ಇದು ನ್ಯಾಯವೇ ಅಥವಾ ಅನ್ಯಾಯವೇ ಎಂದು ಪ್ರಶ್ನಿಸಿದರು.

ಹೈದರಾಬಾದ್ ಸಂಸದರು ಡಿಸೆಂಬರ್ 6, 1992ರಂದು ಬಾಬರಿ ಮಸೀದಿಯ ಧ್ವಂಸವನ್ನು ಖಂಡಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಉಲ್ಲೇಖಿಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿದ ಅಯೋಧ್ಯೆಯ ಮೌಲಾನಾ ಅಮೀರ್ ಅಲಿ ಮತ್ತು ಬಾಬಾ ರಾಮಚರಣ್ ದಾಸ್ ಅವರಂತಹ ಜನರು ಪ್ರಸ್ತುತ ಭಾರತಕ್ಕೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಮೊಘಲ್ ಚಕ್ರವರ್ತಿ ಬಾಬರನ ಕಮಾಂಡರ್ ಮೀರ್ ಬಾಕಿ 1528ರಲ್ಲಿ ನಿರ್ಮಿಸಿದ ಬಾಬರಿ ಮಸೀದಿಯನ್ನು ಹಿಂದುತ್ವ ಸಂಘಟನೆಗಳಿಗೆ ಸೇರಿದ ಕರಸೇವಕರು ಡಿಸೆಂಬರ್ 6, 1992 ರಂದು ಕೆಡವಿದರು. ಆ ಬಳಿಕ ತಿಂಗಳುಗಳ ಕಾಲ ನಡೆದ ಕೋಮು ಗಲಭೆಗಳಿಂದ 2,000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಯಿತು.

2019ರಲ್ಲಿ ಅಂದಿನ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್‌.ಎ ಬೊಬ್ಡೆ, ಡಿ.ವೈ. ಚಂದ್ರಚೂಡ್‌, ಅಶೋಕ್‌ ಭೂಷಣ್‌ ಹಾಗೂ ಅಬ್ದುಲ್ ನಜೀರ್‌ ಅವರನ್ನೊಳಗೊಂಡ ಪೀಠ ಅಯೋಧ್ಯೆ ಭೂ ವಿವಾದದ ಕುರಿತು ತೀರ್ಪು ನೀಡಿತ್ತು. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್‌ ನೀಡಿತ್ತು. ಸುಪ್ರೀಂಕೋರ್ಟ್ 2.77 ಎಕರೆ ವಿವಾದಿತ ಭೂಮಿಯನ್ನು ರಾಮ್ ಲಲ್ಲಾಗೆ ನೀಡಿತು ಮತ್ತು ಮಸೀದಿ ನಿರ್ಮಿಸಲು ಮುಸ್ಲಿಮರಿಗೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಮಸೀದಿಯ ಧ್ವಂಸವನ್ನು ಕಾನೂನಿನ ನಿಯಮದ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ಉಲ್ಲೇಖಿಸಿದ್ದರೂ, ವಾಸ್ತವಕ್ಕಿಂತ ನಂಬಿಕೆ ಆಧಾರದಲ್ಲಿ ತೀರ್ಪನ್ನು ನೀಡಲಾಗಿದೆ ಎಂದು ಟೀಕೆ ವ್ಯಕ್ತವಾಗಿತ್ತು.

ಇದನ್ನು ಓದಿ: ಲೋಕಸಭೆ ಚುನಾವಣೆ: ಅಸಂವಿಧಾನಿಕ ‘CAA’ ಅಬ್ಬರ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...