Homeಕರ್ನಾಟಕಕರ್ನಾಟಕದಲ್ಲಿ ಹಿಂದುಳಿದಿರುವಿಕೆಯ ಪ್ರಶ್ನೆ: ಒಂದು ಐತಿಹಾಸಿಕ ಪರಿಶೀಲನೆ

ಕರ್ನಾಟಕದಲ್ಲಿ ಹಿಂದುಳಿದಿರುವಿಕೆಯ ಪ್ರಶ್ನೆ: ಒಂದು ಐತಿಹಾಸಿಕ ಪರಿಶೀಲನೆ

- Advertisement -
- Advertisement -

ಅಭಿವೃದ್ಧಿಹೀನತೆ ಅಥವಾ ಹಿಂದುಳಿದಿರುವಿಕೆಯ ಕುರಿತ ಯಾವುದೇ ಚರ್ಚೆಯಲ್ಲಿ ನಾವು ಯಾವಾಗಲೂ ಅಭಿವೃದ್ಧಿ ಬೆಳವಣಿಗೆ, ತಲಾ ಆದಾಯ, ಶಿಕ್ಷಣ, ಉದ್ಯೋಗ ಮುಂತಾದ ಮಾನವ ಅಭಿವೃದ್ಧಿ ಸೂಚ್ಯಂಕಗಳ ಸುತ್ತ ಇರುವ ಅಂಕಿಅಂಶಗಳ ಮೊರೆಹೋಗುತ್ತೇವೆ. ನಾವು ಒಂದು ಪ್ರದೇಶ, ಸಮುದಾಯ ಅಥವಾ ಯಾವುದೇ ಸಾಮಾಜಿಕ ಘಟಕವನ್ನು ಹಿಂದುಳಿದಿರುವಂಥದ್ದು ಎಂದು ವಿಂಗಡಿಸಲು ಈ ಸೂಚಕ ಅಥವಾ ಮಾಪಕಗಳನ್ನು ಬಳಸುತ್ತೇವೆ.

ಕರ್ನಾಟಕದ ವಿಷಯದಲ್ಲಿ ಪ್ರಾದೇಶಿಕ ಅಸಮತೋಲನದ ಕುರಿತ ಯಾವುದೇ ಚರ್ಚೆಯು ಉತ್ತರ ಕರ್ನಾಟಕದ ಹಿಂದುಳಿದಿರುವಿಕೆ ಮತ್ತು ಅದರ ಅಭಿವೃದ್ಧಿಹೀನತೆಯನ್ನು ಸಾಬೀತುಪಡಿಸಲು ಮೇಲೆ ಹೇಳಿದ ಸಂಖ್ಯಾತ್ಮಕ ಸಾಕ್ಷ್ಯಗಳನ್ನು ನೋಡಲಾಗುತ್ತದೆ. ಈ ಪ್ರಾದೇಶಿಕ ಅಸಮಾನತೆಯನ್ನು ಪರಿಶೀಲಿಸಲು ಹೆಚ್ಚಿನದನ್ನೇನಾದರೂ ಮಾಡುವಂತೆ ಪ್ರಭುತ್ವಕ್ಕೆ ಕರೆಕೊಡಲಾಗುತ್ತದೆ. ನಂಜುಂಡಪ್ಪ ಸಮಿತಿಯ ವರದಿ ಮತ್ತು ಶಿಫಾರಸುಗಳನ್ನು ಎತ್ತಿ ತೋರಿಸಲಾಗುತ್ತದೆ ಮತ್ತು ಸರಕಾರವು ಮಂಜೂರು ಮಾಡಿದ ಅತ್ಯಲ್ಪ ಅನುದಾನ ಹಾಗೂ ಸ್ಥಳೀಯ ಸರಕಾರಿ ಸಂಸ್ಥೆಗಳು ಅದನ್ನು ಕಳಪೆಯಾಗಿ ಬಳಕೆ ಮಾಡಿರುವುದರ ಕುರಿತು ಇತ್ತೀಚಿನ ಅಂಕಿಅಂಶಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಒಂದು ಅಭ್ಯಾಸ ಅಥವಾ ನಮಗೆಲ್ಲಾ ಪರಿಚಿತವಾಗಿರುವ ಈ ವಿನ್ಯಾಸ ರಾಜ್ಯ ಸರಕಾರಗಳೆಲ್ಲವೂ ನಿರಂತರವಾಗಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿವೆ ಎಂದು ವಾದಿಸಲು ಹೆಚ್ಚಾಗಿ ಬಳಸುವಂತದ್ದೇ.

ಹಿಂದುಳಿದಿರುವಿಕೆ ಕುರಿತ ಈ ಚರ್ಚೆಗಳು ಅಪರೂಪದಲ್ಲಿ ಅಭಿವೃದ್ಧಿಹೀನತೆಯ ’ಮೂಲ’ಗಳ ಬಗ್ಗೆ ಉಲ್ಲೇಖ ಮಾಡುವುದೂ ಉಂಟು. ಹೆಚ್ಚಾಗಿ ಸಾಕಷ್ಟು ಐತಿಹಾಸಿಕ ಸಾಕ್ಷ್ಯಗಳಿಲ್ಲದೆಯೇ ಇಂತಹ ಉಲ್ಲೇಖಗಳನ್ನು ಮಾಡಲಾಗುತ್ತದೆ. ಇಂತಹ ಚರ್ಚೆಗಳ ಪ್ರಾಥಮಿಕ ಗುರಿ ಹಿಂದುಳಿದಿರುವಿಕೆಯ ಹಿಂದಿನ ಇತಿಹಾಸವನ್ನು ಹುಡುಕುವುದಲ್ಲ ಎಂದು ಒಪ್ಪಿಕೊಳ್ಳೋಣ; ಆದರೆ, ಇಂಥ ಬಿಡುಬೀಸಾದ ಉಲ್ಲೇಖಗಳನ್ನು ನಾವು ಹತ್ತಿರದಿಂದ ಗಮನಿಸಿದರೆ, ಅವು ವ್ಯಾಪಕವಾಗಿ ಒಪ್ಪಿತವಾದ ಜನಪ್ರಿಯ ಕಥಾನಕಗಳನ್ನು ಬಹಿರಂಗಪಡಿಸುತ್ತವೆ- ಈ ಕಥಾನಕಗಳು ಐತಿಹಾಸಿಕ ಪರಿಶೀಲನೆಯ ಪರೀಕ್ಷೆಯ ಎದುರು ಗಟ್ಟಿಯಾಗಿ ನಿಲ್ಲುವುದಿಲ್ಲ.

ಈ ಐತಿಹಾಸಿಕವಾದ ಸಾಮಾನ್ಯ ಜ್ಞಾನವು ಹೈದರಾಬಾದ್ ಕರ್ನಾಟಕ (ಅಥವಾ ಈಗ ಕರೆಯಲಾಗುತ್ತಿರುವಂತೆ ಕಲ್ಯಾಣ ಕರ್ನಾಟಕ)ದ ಪ್ರಾದೇಶಿಕ ಹಿಂದುಳಿದಿರುವಿಕೆಯ ಮೂಲವು ಹೈದರಾಬಾದ್- ದಖ್ಖನ್‌ದಲ್ಲಿ ನಿಜಾಮರ ’ಪಾಳೆಯಗಾರಿ’, ’ಊಳಿಗಮಾನ್ಯ’, ’ಇಸ್ಲಾಮಿಕ್’ ಆಡಳಿತವಾಗಿದೆ ಎಂದು ಹೇಳಿಕೊಳ್ಳುತ್ತದೆ. ಉದಾಹರಣೆಗೆ ಪ್ರಾದೇಶಿಕ ಅಭಿವೃದ್ಧಿ ಕುರಿತ ಒಂದು ಪ್ರಬಂಧದಲ್ಲಿ ನಿಜಾಮ ರಾಜ್ಯದ ಪಾಳೆಯಗಾರಿ ಸ್ವರೂಪವು ಹೈದರಾಬಾದ್ ಕರ್ನಾಟಕದ ಜನರ ’ಉದ್ಯಮಶೀಲ ಚೈತನ್ಯ’ವನ್ನು ಕೊಂದುಹಾಕಿದೆ; ಹಾಗಾಗಿ ಅಲ್ಲಿ ಅಭಿವೃದ್ಧಿ ನಡೆದಿಲ್ಲ ಎಂದು ವಾದಿಸುತ್ತದೆ. ವಿದ್ವಾಂಸರ ಇನ್ನೊಂದು ಗುಂಪು ’ಮೈಸೂರು ಮಹಾರಾಜರಿಗೆ ವ್ಯತಿರಿಕ್ತವಾಗಿ’ ನಿಜಾಮರ ಆಡಳಿತವು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರಲೇ ಇಲ್ಲ ಎಂದು ವಾದಿಸುತ್ತದೆ.

ಈ ಪ್ರಬಂಧದಲ್ಲಿ ನಾನು ಈ ವಾದಗಳ ಸತ್ಯಾಸತ್ಯತೆಗಳ ಕುರಿತು ಹೆಚ್ಚು ಗಮನ ಹರಿಸುವುದಿಲ್ಲ- ಆದರೆ ಕೃಷಿ, ಕೈಗಾರಿಕೆ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ನಿಜಾಮ ರಾಜ್ಯವು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಆಗಿನ ಉಳಿದ ರಾಜಾಡಳಿತಗಳು ಮತ್ತು ಬ್ರಿಟಿಷ್ ಭಾರತದಲ್ಲಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾರ್ಯಗಳಿಗೆ ಸಮನಾಗಿದ್ದವು ಎಂದು ಹೇಳುವುದರ ಹೊರತಾಗಿ; ಅಸಫ್ ಜಾಹಿ ರಾಜ್ಯದಲ್ಲಿ ಕೃಷಿ ಸಾಲಗಳನ್ನು ನಿಭಾಯಿಸಲು, ಕೃಷಿ ಉತ್ಪಾದಕತೆಯನ್ನು ಹೆಚ್ಚು ಮಾಡಲು, ಶೈಕ್ಷಣಿಕ ಸೌಲಭ್ಯಗಳನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಮತ್ತು ಈ ಪ್ರತಿಪಾದನೆಯನ್ನು ಸಾಬೀತುಪಡಿಸಲು ಸಾಕಷ್ಟು ದಾಖಲೆಗಳಿವೆ. ಹೈದರಾಬಾದ್-ದಖ್ಖನ್‌ದಲ್ಲಿ ಅಭಿವೃದ್ಧಿ ರಾಜ್ಯ ಸಾಧ್ಯವಾಗಿತ್ತು ಎಂದು ತಿಳಿಸುವ ಸಾಕ್ಷ್ಯಗಳು ಇರುವಾಗಲೂ ಅವು ಯಾಕೆ ವ್ಯಾಪಕವಾಗಿ ಜನರಿಗೆ ಗೊತ್ತಾಗಿಲ್ಲ?

ಇದು ಇತಿಹಾಸದ ಬರವಣಿಗೆಯ ರಾಜಕೀಯ. ಯಾವ ಕಥಾನಕಗಳು ಪ್ರಚಾರ ಗಿಟ್ಟಿಸಿಕೊಳ್ಳುತ್ತವೆ, ಯಾವುವು ಮರೆತುಹೋಗುತ್ತವೆ, ಅಸಡ್ಡೆಗೆ ಒಳಗಾಗುತ್ತವೆ, ಯಾವನ್ನು ಒಳಗೊಳ್ಳಲಾಗುತ್ತದೆ ಎಂಬುದು ವರ್ತಮಾನವನ್ನು ರೂಪಿಸುವುದಕ್ಕೆ ನಿರ್ಣಾಯಕ. ಕರ್ನಾಟಕದ ಸಂದರ್ಭದಲ್ಲಿ ಪ್ರಾದೇಶಿಕ ಅಸಮತೋಲನದ ಈ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲು ನಾವು- ಹೇಗೆ ಮತ್ತು ಯಾವ ಹಂತದಲ್ಲಿ ಉತ್ತರ ಕರ್ನಾಟಕವನ್ನು ಹಿಂದುಳಿದ ಪ್ರದೇಶವೆಂದು ವಿಂಗಡಿಸಲಾಯಿತು ಅಥವಾ ಶ್ರೇಣೀಕರಣ ಮಾಡಲು ಆರಂಭವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನಾವು ಈ ‘ಹಿಂದುಳಿದ ಕಥಾನಕ’ಗಳ ಇತಿಹಾಸ ನೋಡಬೇಕಾಗಿದೆ; ಏಕೆಂದರೆ, ಈ ಪ್ರದೇಶಗಳ ಹಿಂದುಳಿದಿರುವಿಕೆಯ ಕುರಿತ ಈ ವಾದಗಳೇ ಕರ್ನಾಟಕವು ಈ ಪ್ರದೇಶವನ್ನು ಈಗಲೂ ಹೇಗೆ ನೋಡುತ್ತಿದೆ ಮತ್ತು ನಡೆಸಿಕೊಳ್ಳುತ್ತಿದೆ ಎಂಬುದನ್ನು ಪ್ರಭಾವಿಸುತ್ತಿದೆ..

ಈ ಐತಿಹಾಸೀಕರಣಕ್ಕೆ ನಾನು 1956ರಲ್ಲಿ ಕರ್ನಾಟಕದ ರಚನೆಯಾಗುವದಕ್ಕೆ ಎಡೆಮಾಡಿಕೊಟ್ಟ ಅವಧಿಯನ್ನು ಪರಿಶೀಲಿಸುತ್ತೇನೆ. ವಿಶೇಷವಾಗಿ ನಾವು ಹಳೆಯ ಮೈಸೂರಿನ ಒಳಗೆ ಈ ಕಲ್ಪನೆ ಮತ್ತು ಕರ್ನಾಟಕದ ಸ್ಥಾಪನೆಯ ಸಾಧ್ಯತೆಯ ಕುರಿತು ನಡೆದ ಚರ್ಚೆಗಳು ಮತ್ತು ಹೇಗೆ ರಾಜಪ್ರಭುತ್ವಗಳ ಮುಖಂಡರು ಈ ಉತ್ತರ ಕರ್ನಾಟಕ ಪ್ರದೇಶವನ್ನು ಹೇಗೆ ಪರಿಕಲ್ಪಿಸಿದ್ದರು ಎಂಬುದಕ್ಕೆ ಮರಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಳೆ ಮೈಸೂರಿನ ಪ್ರಭಾವವಿರುವ ಕಾರಣ ಅಲ್ಲಿ ನಡೆದ ಚರ್ಚೆಗಳನ್ನು ಗಮನಿಸಲಾಗಿದೆ. ರಾಜ್ಯದ ಇತಿಹಾಸಗಳು, ನಡೆದಿರುವ ಆಡಳಿತ ಮತ್ತು ಆಳ್ವಿಕೆಗಳಿಂದ ಹಿಡಿದು ಇತರ ಪ್ರದೇಶಗಳನ್ನು ಹೊರಗಿಡುವಿಕೆಯವರೆಗೂ ದಿಕ್ಕುದೆಸೆ ಬದಲಿಸಲು ಈ ಪ್ರದೇಶವು ಪ್ರಭಾವ ಬೀರಿದೆ.

ಉದಾಹರಣೆಗೆ: ವ್ಯಾಪಕವಾಗಿ ಚಾಲ್ತಿಯಲ್ಲಿರುವ ಐತಿಹಾಸಿಕ ದಾವೆಗಳಲ್ಲಿ ಒಂದಾದ- ಕರ್ನಾಟಕವು ತನ್ನ ಪರಂಪರೆಯನ್ನು ಮೈಸೂರಿನ ಒಡೆಯರ್‌ಗಳಿಂದ ಪಡೆದಿದೆ ಎಂದಾದರೆ, ಅದು ಹಾಗಾದುದು ಯಾಕೆ? ಯಾಕೆ ವಸಾಹತುಶಾಹಿ ಮತ್ತು ಅಸಫ್ ಜಾಹಿ ಪ್ರಭುತ್ವಗಳು ಅಷ್ಟೇ ಸಮಾನವಾಗಿ ಕರ್ನಾಟಕದ ಇತಿಹಾಸದ ಭಾಗಗಳಾಗಲಿಲ್ಲ? ಯಾಕೆ ಆ ಇತಿಹಾಸಗಳನ್ನು ಕೇವಲ ಜಿಲ್ಲಾ ಗೆಜೆಟಿಯರ್‌ಗಳ ಹಿನ್ನೆಲೆಗೆ ಸರಿಸಲಾಯಿತು? ಈ ಹೊರತುಪಡಿಸುವಿಕೆ ಕೇವಲ ಆಕಸ್ಮಿಕವಲ್ಲ; ಬದಲಾಗಿ ಅದರ ಆರಂಭವು ಹಳೆ ಮೈಸೂರಿನ ಒಳಗೆ ನಡೆದ ಚರ್ಚೆಗಳು ಮತ್ತು ಕರ್ನಾಟಕದ ಅನಿವಾರ್ಯ ಆಗಮನವನ್ನು ಅದರ ನಾಯಕರು ಹೇಗೆ ಅರ್ಥಮಾಡಿಕೊಂಡರು ಎಂಬುದರಲ್ಲಿ ಅಡಗಿದೆ.

ಇಲ್ಲಿ ನಾನು ಉತ್ತರ ಕರ್ನಾಟಕ ಅಂದರೆ ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳ ಕನ್ನಡ ಮಾತನಾಡುವ ಪ್ರದೇಶಗಳನ್ನು ಉಲ್ಲೇಖಿಸುತ್ತೇನೆ- ಇವು ಕರ್ನಾಟಕದ ರಚನೆಯ ಸುತ್ತಲಿನ ನಿಜವಾದ ಐತಿಹಾಸಿಕ ಕಥಾನಕಗಳಲ್ಲಿ ಸ್ಥಾನ ಪಡೆದಿವೆ ಮಾತ್ರವಲ್ಲದೇ, ಈ ಸ್ಥಳಗಳಲ್ಲಿಯೇ ಪ್ರತ್ಯೇಕ ಕರ್ನಾಟಕದ ಬೇಡಿಕೆಯನ್ನು ಮೊದಲಿಗೆ ಮುಂದಿಡಲಾಯಿತು ಎಂಬುದನ್ನು ಗುರುತಿಸಲಾಗಿದೆ. ಆದರೆ, ಈ ಪ್ರಸ್ತಾಪಿತ ಕರ್ನಾಟಕ ಎಂಬ ಘಟಕದ ಬಾಹ್ಯ ಗುರುತುಗಳೇನಾಗಿದ್ದವು? 1948ರ ಹೊತ್ತಿಗೆ ಈ ಬೇಡಿಕೆಯು ಮೈಸೂರು ರಾಜ್ಯವನ್ನು ಒಳಗೊಂಡಿರಲಿಲ್ಲ ಮತ್ತು ಕೆಲವು ಸಲ ಅದು ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳ ಕನ್ನಡ ಮಾತನಾಡುವ ಪ್ರದೇಶಗಳು ಮತ್ತು ಕೂರ್ಗ್ (ಕೊಡಗು) ಪ್ರದೇಶಗಳನ್ನು ಮಾತ್ರವೇ ಮತ್ತು ಇನ್ನು ಕೆಲವು ಸಲ ರಾಜಾಡಳಿತಗಳಾಗಿದ್ದ ಜಮಖಂಡಿ ಮತ್ತು ಮುಧೋಳಗಳನ್ನು ಕೂಡಾ ಒಳಗೊಂಡಿತ್ತು.

ಯು.ಎಂ. ಮಾದಪ್ಪ

“ಏಕೀಕರಣ”ದ ಬೇಡಿಕೆ ಮುಂದಿಟ್ಟ ಸಂಘಟನೆಗಳ ಪ್ರಕಟಣೆಗಳಲ್ಲಿ ಇದ್ದ ವಾದವೆಂದರೆ, ಮೇಲೆ ಪ್ರಸ್ತಾಪಿಸಿದ ಈ ಪ್ರದೇಶವು ಒಂದು ಪ್ರತ್ಯೇಕ ಆಡಳಿತಾತ್ಮಕ ಅಸ್ತಿತ್ವಕ್ಕೆ ಅರ್ಹವಾಗುವಷ್ಟು ಸಂಪತ್ತು, ಸಂಪನ್ಮೂಲಗಳು ಮತ್ತು ಭಾಷಾ ಏಕರೂಪತೆಯನ್ನು ಹೊಂದಿದೆ ಎಂಬುದಾಗಿತ್ತು. ಒಂದು ಪ್ರತ್ಯೇಕ ಕರ್ನಾಟಕ್ ರಾಜ್ಯವು ಈ ತನಕ ಅವಗಣಿಸಲಾದ ಈ ಪ್ರದೇಶದ ಸಾಮರ್ಥ್ಯವನ್ನು ಹೊರಗೆಡಹುತ್ತದೆ ಎಂದು ಅವರು ವಾದಿಸಿದ್ದರು. ಮೈಸೂರನ್ನೂ ಒಳಗೊಂಡ ಅಖಿಲ ಕರ್ನಾಟಕ್ ಪ್ರಾಂತ್ಯವು ಭವಿಷ್ಯದಲ್ಲಿ ಮೂಡಿಬರಬಹುದಾದರೂ, ಅದರ ಅರ್ಥ- ಈಗ ಪ್ರತ್ಯೇಕ ಪ್ರಾಂತ್ಯದ ಸ್ಥಾಪನೆ ಸಾಧ್ಯವಿಲ್ಲ ಎಂದಲ್ಲ. 1928ರ ನೆಹರೂ ಸಮಿತಿಯ ವರದಿಯು ಕೂಡಾ ಕರ್ನಾಟಕ್ ಪ್ರಾಂತ್ಯದ ಕಾರ್ಯಸಾಧ್ಯತೆ ಮತ್ತು ಸ್ವಯಂಪೂರ್ಣತೆಯನ್ನು ಒಪ್ಪಿಕೊಂಡಿತ್ತು.

ಆದರೆ, 1950ರ ದಶಕದಲ್ಲಿ ಇದು ಬದಲಾಗಲು ಆರಂಭಿಸಿ, ಮೈಸೂರನ್ನು ಕೂಡಾ ಒಳಗೊಂಡಂತಹ ಕರ್ನಾಟಕದ ಕಲ್ಪನೆಯು ಹೆಚ್ಚುಹೆಚ್ಚು ನೆಲೆಯನ್ನು ಕಂಡುಕೊಳ್ಳಲು ಆರಂಭಿಸಿತು. ಈ ಹಂತದಲ್ಲಿಯೇ ಶೇಷಾದ್ರಿ ಸಮಿತಿ ಎಂದು ಕರೆಯಲಾಗುವ ಸತ್ಯಶೋಧನಾ ಸಮಿತಿಯೊಂದನ್ನು “ಮೈಸೂರಿಗೆ ಸೇರಿಸಲಾಗುವ” ಪ್ರದೇಶಗಳು ಎಷ್ಟರಮಟ್ಟಿಗೆ “ಮೈಸೂರಿನ ಮಾನದಂಡಗಳಿಗೆ” ಹೊಂದಿಕೊಳ್ಳಲು ವಿಫಲವಾಗುತ್ತವೆ ಎಂಬುದನ್ನು ಕಂಡುಕೊಳ್ಳುವ ಸಲುವಾಗಿಯೇ ನೇಮಿಸಲಾಗಿತ್ತು. ಈ ಸತ್ಯಶೋಧನಾ ಸಮಿತಿಯ ಸ್ಥಾಪನೆಯ ಹಿಂದಿದ್ದ ಪೂರ್ವಚಿಂತನೆಯೆಂದರೆ, ಖಂಡಿತವಾಗಿಯೂ ಮೈಸೂರು ಅಭಿವೃದ್ಧಿ ಹೊಂದಿದೆ- ಒಂದು ಮಾದರಿ ರಾಜ್ಯ ಕೂಡಾ ಆಗಿದೆ ಮತ್ತು ಒಂದುವೇಳೆ ಹೊಸ ಕರ್ನಾಟಕವು ನನಸಾದರೆ ತನಗೆ ಎಷ್ಟರಮಟ್ಟಿನ ಹೊರೆ ಬೀಳುತ್ತದೆ ಎಂಬುದನ್ನು ಅದು ತಿಳಿದುಕೊಳ್ಳುವ ಅಗತ್ಯವಿದೆ ಎಂಬುದಾಗಿತ್ತು.

ಇದನ್ನೂ ಓದಿ: ಸುವರ್ಣ ಸಂಭ್ರಮದಲ್ಲಿ ’ಕರ್ನಾಟಕ ಹೆಸರಿನ ನಾಮಕರಣ’; ಅಧಿಕೃತ ನಾಮಕರಣದ ಬಗ್ಗೆ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮಾಡಿದ…

ವಾಸ್ತವವಾಗಿ ಕರ್ನಾಟಕದ ಸ್ಥಾಪನೆ ಆಗುವುದಕ್ಕೆ ಮೊದಲಿನಿಂದಲೇ ಕರ್ನಾಟಕ ಕುರಿತು ಮೈಸೂರಿನ ದೃಷ್ಟಿಕೋನದ ಪ್ರಾಬಲ್ಯವನ್ನು ನಾವು ನೋಡಬಹುದು. ಕೆಲವು ಆಯಾಮಗಳಲ್ಲಿ ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಗಳು ಮೈಸೂರಿಗಿಂತ ತುಂಬಾ ಮುಂದಿವೆ ಎಂದು ವರದಿ ತೋರಿಸಿದ್ದರೂ ಕೂಡಾ, ಈ ವರದಿಯಿಂದ ಮಾಡಿಕೊಳ್ಳಲಾದ ತೀರ್ಮಾನ ಎಂದರೆ, ಕರ್ನಾಟಕದ ಭಾಗವಾಗುವುದು ಮೈಸೂರಿಗೆ ಲಾಭರಹಿತ ಎಂಬುದಾಗಿತ್ತು. ಈ ಒಗ್ಗೂಡುವಿಕೆಯ ವಿರೋಧಿಗಳು ಮೈಸೂರು ಈ ಹಿಂದುಳಿದ ಪ್ರದೇಶಗಳನ್ನು ತೆಗೆದುಕೊಂಡು, ತಾನು ಸಾಧಿಸಿದ ಪ್ರಗತಿ ಮತ್ತು ತಾನು ಬೆಳೆಸಿದ ಮೈಸೂರು ಸಂಸ್ಕೃತಿ ಕುಂಠಿತವಾಗುವುದನ್ನು ಕಾಣುವುದು ಅಗತ್ಯವಿಲ್ಲ ಮತ್ತು ಅರ್ಹವೂ ಅಲ್ಲ ಎಂದು ವಾದಿಸಿದ್ದರು. ಹೊಸ ಪ್ರಾಂತ್ಯವು ದೊಡ್ಡದಾಗಿದ್ದು, ವಿಲಕ್ಷಣವಾಗಿರುತ್ತದೆ ಎಂಬ ನೆಲೆಯಲ್ಲಿ ಕೂಡಾ ಅವರು ವಿರೋಧಿಸಿದ್ದರು. ಮೈಸೂರು ಚಿಕ್ಕದು ಮತ್ತು ಚೊಕ್ಕವಾಗಿ ಇರುವ ಕಾರಣದಿಂದಾಗಿಯೇ ತಾನು ಸಾಧಿಸಿರುವ ಪ್ರಗತಿಯನ್ನು ಸಾಧಿಸಿದೆ ಎಂದೂ ಅವರು ಹೇಳಿದ್ದರು.

ಕರ್ನಾಟಕದ ಸ್ಥಾಪನೆಯನ್ನು ಬೆಂಬಲಿಸಿದವರು ಕೂಡಾ ಒಂದು ರೀತಿಯ ಉಪಕಾರ ಮಾಡುವ ಔದಾರ್ಯದ ಭಾವದಿಂದಲೇ ಅದನ್ನು ಮಾಡಿದ್ದರು. ಉದಾಹರಣೆಗೆ ಯು.ಎಂ. ಮಾದಪ್ಪ ಆವರು ಮೈಸೂರಿನ ಕೈಗಾರಿಕಾ ಪ್ರಗತಿಯನ್ನು ಉಲ್ಲೇಖಿಸಿ, ಉತ್ತಮ ಆಡಳಿತಗಾರರಿಂದಾಗಿಯೇ ಅದು ಸಾಧ್ಯವಾಗಿದೆ ಎಂದು ವಾದಿಸಿದ್ದರು. “ನಾವು ಕುಶಲ ಆಡಳಿತಗಾರರ ಕಾರಣದಿಂದ ಇಲ್ಲಿ ಇಷ್ಟು ಚೆನ್ನಾಗಿ ಆಳಬಹುದಾಗಿದ್ದರೆ, ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾಕೆ ಹಿಂಜರಿಯಬೇಕು ಮತ್ತು ನಮಗೆ ಆಳುವ ಸಾಮರ್ಥ್ಯ ಇಲ್ಲವೆಂದು ಯಾಕೆ ಹೇಳಬೇಕು? ಕನ್ನಡಿಗರಲ್ಲಿ ಅಂತಹ ಹೇಡಿಗಳು ಯಾರೂ ಇಲ್ಲ!” ಎಂದು ಮಾದಪ್ಪ ಘೋಷಿಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಮತ್ತು ಕರ್ನಾಟಕದ ರಚನೆಯ ಬೆಂಬಲಿಗರೂ ಆಗಿದ್ದ ಕೆಂಗಲ್ ಹನುಮಂತಯ್ಯ ಅವರು ಕರ್ನಾಟಕ ಎಂಬ ಹೆಸರನ್ನು ವಿರೋಧಿಸಿ, “ಮೈಸೂರು ಹೆಚ್ಚುಕಡಿಮೆ 90 ಲಕ್ಷ ಜನರನ್ನು ನಮ್ಮ ಜೊತೆ ಒಂದು ಆಡಳಿತಾತ್ಮಕ ಘಟಕವಾಗಿ ಸೇರಿಸಿಕೊಳ್ಳುವ ಕಲ್ಪನೆಯೊಂದಿಗೆ ರಾಜಿ ಮಾಡಿಕೊಂಡಿದೆ” ಎಂದು ವಾದಿಸಿದ್ದರು.

ಹೊಸ ಕನ್ನಡ ರಾಜ್ಯಕ್ಕೆ ಮೈಸೂರನ್ನು ಪೂರ್ವಾಧಿಕಾರಿ ಎಂದು ನಿರೂಪಿಸುವ ಹನುಮಂತಯ್ಯ ಅವರ ನಿಲುವನ್ನೇ ವಿಧಾನಸಭೆಯಲ್ಲಿ ಅವರ ಹೆಚ್ಚಿನ ಸಹೋದ್ಯೋಗಿಗಳು ಹೊಂದಿದ್ದರು. ಒಬ್ಬರ ನಂತರ ಒಬ್ಬರು ಭಾಷಣಕಾರರು- ಇತರ ಭಾಗಗಳನ್ನು ಮೈಸೂರಿಗೆ ಸೇರಿಸುವ ಮೂಲಕ ಮೈಸೂರನ್ನು ವಿಸ್ತರಿಸಿದಂತಾಗುತ್ತದೆ ಎಂದು ಪುನರ್‌ರಚನೆಯ ವ್ಯಾಖ್ಯಾನವನ್ನು ಮಾಡಿದ್ದರು. ಕರ್ನಾಟಕದ ರಚನೆಯೆಂದರೆ, ಈತನಕದ ಇತಿಹಾಸದಲ್ಲಿ ಉದಾಹರಣೆಯೇ ಇಲ್ಲದ, ಕೇವಲ ಭಾಷೆಯೊಂದರ ಏಕೈಕ ಆಧಾರದಲ್ಲಿ ಪ್ರಾದೇಶಿಕ ಆಡಳಿತ ಘಟಕವನ್ನು ರಚನೆ ಮಾಡುವುದು ಎಂಬುದರ ಕುರಿತು ಮೈಸೂರಿನ ಒಳಗೆ ಯಾರೂ ಗುರುತಿಸಲು ಸಿದ್ಧರಿರಲಿಲ್ಲ ಆಥವಾ ಕೆಲವೇ ಕೆಲವರು ಅದನ್ನು ಮಾಡಿದ್ದರು. ಈ ತಥಾಕಥಿತ ಮೈಸೂರಿನ ವಿಸ್ತರಣೆಯ ಪರವಾದ ವಾದಗಳು, ಹೆಚ್ಚಾಗಿ ವಸಾಹತೀಕರಣದ ಮನೋಭಾವವನ್ನೇ ತೋರಿಸುತ್ತಿದ್ದವು. ಉದಾಹರಣೆಗೆ ರಾಜ್ಯ ಪುನರ್‌ರಚನಾ ಸಮಿತಿ (ಎಸ್‌ಆರ್‌ಸಿ)ಯ ವರದಿಯ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಹನುಮಂತಯ್ಯ ಅವರು ತಮ್ಮ ಭಾಷಣದಲ್ಲಿ “ಬಿಜಾಪುರದ ಸುಲ್ತಾನರು ಹಿಂದೆ ಮೈಸೂರಿನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದರು ಮತ್ತು ತಮ್ಮ ಆಳ್ವಿಕೆಯನ್ನು ಬೆಂಗಳೂರಿನ ತನಕ ವಿಸ್ತರಿಸಿದ್ದರು. ಈಗ ಬೆಂಗಳೂರಿನ ಸುಲ್ತಾನ ರಾಜ್ಯವು ಬಿಜಾಪುರಕ್ಕೆ ವಿಸ್ತರಿಸಲಿದೆ” ಎಂದು ಹೇಳಿದ್ದರು.

ಕೆಂಗಲ್ ಹನುಮಂತಯ್ಯ

ಇನ್ನೊಬ್ಬ ಶಾಸಕ ಎ.ಎನ್. ರಾಮರಾವ್ ಅವರು, ಮೈಸೂರು ಟಿಪ್ಪು ಸುಲ್ತಾನ್ ಪತನದನಂತರ ಕಳೆದುಕೊಂಡದ್ದನ್ನು ಮರಳಿ ಪಡೆಯುತ್ತಿದೆ ಅಷ್ಟೇ ಎಂದು ಪ್ರತಿಪಾದಿಸಿದರು. “ಟಿಪ್ಪುವಿನ ನಂತರ ಕೈಬಿಟ್ಟು ಹೋದ ಭಾಗಗಳನ್ನು ಮರಳಿ ಪಡೆಯಲು ದಿವಾನರ ನಂತರ ದಿವಾನರು ಪ್ರಯತ್ನ ಮಾಡಿದರು… ನಮಗೆ ಒಂದೇ ಒಂದು ಬಂದರನ್ನು ಪಡೆಯಲಾಗಲಿಲ್ಲ. ಈಗ ಟಿಪ್ಪುವಿನ ಪತನದ ನಂತರ ಕಳೆದುಕೊಂಡ ರಾಯದುರ್ಗ, ಬಳ್ಳಾರಿ, ಮಡಕ್ಷಿರ, ಕೊಳ್ಳೆಗಾಲ, ಮಂಗಳೂರು ಮತ್ತಿತರ ಕೆಲವು ಭಾಗಗಳು ಮೈಸೂರಿಗೆ ಮರಳಿ ಬರುತ್ತಿವೆ” ಎಂದು ಅವರು ಹೇಳಿದ್ದರು. ಅವರ ಮಟ್ಟಿಗೆ “ಅವರಿಗೆ (ಸೇರ್ಪಡೆ ಆಗಲಿರುವವರಿಗೆ) ಶಿಕ್ಷಣ ನೀಡುವುದು, ಅವರನ್ನು ತಿದ್ದುವುದು, ನಮಗೆ ಸಾಧ್ಯವಾಗುವ ಮಟ್ಟಿಗೆ ಅವರಿಗೆ ನೆರವಾಗುವುದು, ಅವರನ್ನು ನಮ್ಮಂತೆಯೇ ಸುಸಂಸ್ಕೃತರಾಗುವಂತೆ ನೋಡಿಕೊಳ್ಳುವುದು ಮೈಸೂರಿನ ಜವಾಬ್ದಾರಿಯಾಗಿದೆ” ಎಂದಿದ್ದರು.

ಸುಶಿಕ್ಷಿತರಾದ ಮತ್ತು ಕಲೆ, ಕರಕುಶಲತೆ ಹಾಗೂ ವಿಜ್ಞಾನಗಳಲ್ಲಿ ತರಬೇತಿ ಹೊಂದಿದ ಮೈಸೂರಿನ ಯುವಕರು ಈಗ ಈ ಪ್ರದೇಶಗಳಿಗೆ ಹೋಗಬಹುದು- ಉದ್ಯೋಗ ಪಡೆಯಲು ಮಾತ್ರವಲ್ಲ; ಈ ಪ್ರದೇಶಗಳನ್ನು ಅಭಿವೃದ್ಧಿ ಮಾಡುವ ಸಲುವಾಗಿ ಕೆಲಸ ಮಾಡಲು ಕೂಡ ಎಂದೂ ಅವರು ವಾದಿಸಿದ್ದರು. ಈ ವಸಾಹತೀಕರಣದ ದೃಷ್ಟಿಕೋನದಿಂದ ಈ ಕನ್ನಡ ಮಾತನಾಡುವ ಪ್ರದೇಶಗಳು, ಮೈಸೂರಿಗೆ ಬಂಡವಾಳಶಾಹಿ ವಿಸ್ತರಣೆಗೆ ಅಗಾಧವಾದ ಸಾಧ್ಯತೆಗಳನ್ನು ನೀಡುತ್ತಿದ್ದವು ಮತ್ತು ಮೈಸೂರಿನ ಯುವಜನರಿಗೆ ಉದ್ಯೋಗಾವಕಾಶಗಳನ್ನೂ ತೆರೆಯುತ್ತಿದ್ದವು.

ಹೀಗಿದ್ದರೂ ತಮ್ಮನ್ನು ತಾವೇ ವೈಭವೀಕರಿಸುವ ಇಂತಹ ಹೇಳಿಕೆಗಳಿಗೆ ಪ್ರತಿರೋಧವಿಲ್ಲದೇ ಇರಲಿಲ್ಲ ಎಂಬುದನ್ನು ಸೂಚಿಸುವುದು ಇಲ್ಲಿ ಸೂಕ್ತ. ಕೆಲವು ಶಾಸಕರು ಮೈಸೂರು ಕೂಡಾ ಕೆಲವು ಹಿಂದುಳಿದ ಪ್ರದೇಶಗಳನ್ನು ಹೊಂದಿವೆ ಎಂದು ಮಲೆನಾಡು ಮತ್ತು ಚಾಮರಾಜನಗರ ಪ್ರದೇಶಗಳ ಕಡೆಗೆ ಬೊಟ್ಟುಮಾಡಿ ತೋರಿಸಿದ್ದರು. ಗುಲ್ಬರ್ಗಾ ಮತ್ತು ರಾಯಚೂರು ಕೃಷಿಯಲ್ಲಿ ಎಷ್ಟು ಶ್ರೀಮಂತವಾಗಿವೆ ಎಂದರೆ, ಮೈಸೂರಿನ ನಿರಂತರವಾದ ಆಹಾರ ಬಿಕ್ಕಟ್ಟನ್ನು ಅವು ಸುಲಭದಲ್ಲಿ ನಿವಾರಿಸಬಹುದು; ಈ ಪ್ರದೇಶಗಳಿಂದ ರಾಜ್ಯವು ಗಳಿಸಬಹುದಾದ ಆದಾಯವು ಒಪ್ಪಿಕೊಳ್ಳಲಾಗುತ್ತಿರುವುದಕ್ಕಿಂತ ಬಹಳಷ್ಟು ಹೆಚ್ಚಾಗಿದೆ ಎಂದು ಅವರು ವಾದಿಸಿದ್ದರು. ಈ ಗುಂಪಿನ ಶಾಸಕರ ಮಟ್ಟಿಗೆ ಮೈಸೂರು ಮತ್ತು ಕರ್ನಾಟಕ್ ಎರಡೂ ವಿಭಿನ್ನ ಕ್ಷೇತ್ರಗಳಲ್ಲಿಯೇ ಆಗಿದ್ದರೂ ಸಾಕಷ್ಟು ಪ್ರಗತಿ ಸಾಧಿಸಿದ್ದವು; ಸರಕಾರ ಅಥವಾ ಪ್ರಭುತ್ವದ ನಿರ್ಲಕ್ಷ್ಯ ಜನರ ಹಿಂದುಳಿಯುವಿಕೆಗೆ ಕೊಡುಗೆ ನೀಡಿರಲಿಲ್ಲ.

ಕರ್ನಾಟಕದ ರಚನೆಯೆಂದರೆ ಮೈಸೂರಿನ ವಿಸ್ತರಣೆ ಎಂಬ ಕಲ್ಪನೆಯನ್ನು ಬಾಂಬೆ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ಪ್ರದೇಶಗಳ ಕನ್ನಡ ಮಾತನಾಡುವ ಜನರು ವಿರೋಧಿಸಿದ್ದರು. ಕರ್ನಾಟಕವು ಮೈಸೂರಿನಿಂದ ಮೂಡಿಬರುತ್ತಿದೆ ಎಂಬ ವ್ಯಾಖ್ಯಾನಗಳು ಮತ್ತು ಅವುಗಳಿಗಿದ್ದ ವಿರೋಧಗಳು, ಮೈಸೂರನ್ನು ಹೊರಪಡಿಸಿಯಾದರೂ ಒಂದು ಕನ್ನಡ ರಾಜ್ಯವನ್ನು ರಚಿಸಬೇಕೆಂಬ ಹಲವು ಕರೆಗಳನ್ನು ಮುನ್ನಲೆಗೆ ತಂದವು. ಕರ್ನಾಟಕ ರಾಜ್ಯವನ್ನು ರೂಪಿಸಲಾಗುತ್ತಿದ್ದ ವಿಧಾನಗಳು- ಅಂದರೆ, ಮೈಸೂರನ್ನು ಕೇಂದ್ರವಾಗಿರಿಸಿಕೊಂಡು, ಇತರ ಭಾಗಗಳು ಮೈಸೂರಿನ ಜೊತೆಗೆ ವಿಲೀನ ಹೊಂದಿ, ಒಂದು ವಿಸ್ತರಿತ ಮೈಸೂರು ರಾಜ್ಯ ಅಥವಾ ವಿಶಾಲ ಮೈಸೂರು ರಚನೆಯ ಕುರಿತು ಚಿಂತನಾಶೀಲ ಹೇಳಿಕೆಯೊಂದನ್ನು ರಾಯಚೂರಿನ ವಕೀಲ ಮಾಣಿಕ್ ರಾವ್ ಅವರು ನೀಡಿದ್ದರು: “ವಿಲೀನವನ್ನು ತಳ್ಳಿಹಾಕಬೇಕು… ನಮಗೆ ಇನ್ನಷ್ಟು ದೊಡ್ಡದಾದ ಕರ್ನಾಟಕ್ ಬೇಕು; ಎಲ್ಲಾ ಘಟಕಗಳನ್ನು ಹಾಗೂ ಭಾಗಗಳನ್ನು ಹೊಂದಿರುವಂತಹ ಒಂದು ಆರೋಗ್ಯಕರ ಮತ್ತು ಪ್ರಬಲವಾದ ಕರ್ನಾಟಕ್ ಬೇಕು; ಅದರಲ್ಲಿ ಮೈಸೂರೂ ಒಂದಾಗಿ ಸೇರ್ಪಡೆಗೊಳ್ಳುವಂತಾಗಬೇಕು. ನಾವು ಬಹಳ ಕಾಲದಿಂದ ಹಾರೈಸಿದ್ದಂತಹ ಒಂದು ಪ್ರಾಂತ್ಯವನ್ನು ಕಟ್ಟುವಲ್ಲಿ ನಾವು ಗೌರವಾರ್ಹ ಪಾತ್ರವನ್ನು ವಹಿಸಲು ಬಯಸುತ್ತೇವೆ ಮತ್ತು ಅದರ ರಚನೆಗೆ ನಾವು ಐತಿಹಾಸಿಕ ಮತ್ತು ರಾಜಕೀಯ ಹಕ್ಕು ಹೊಂದಿದ್ದೇವೆ. ಹೈದರಾಬಾದ್ ಚಿಕ್ಕದಾಗುವುದೆಂದರೆ, ಪರಿಕಲ್ಪನೆ ಮತ್ತು ರಚನೆಯಲ್ಲಿ ಸಂಪೂರ್ಣ ಕರ್ನಾಟಕ್ ಆಗದ ಇನ್ನೊಂದು ರಾಜ್ಯದ ವಿಸ್ತರಣೆ ಎಂದು ಅರ್ಥವಲ್ಲ ಎಂಬುದು ಸ್ಪಷ್ಟವಾಗಿರಬೇಕು” ಎಂದು.

ಹೀಗಿದ್ದೂ, ಪರಸ್ಪರ ಗೌರವ ಹಾಗೂ ಸಂಪನ್ಮೂಲ ಮತ್ತು ಅಭಿವೃದ್ಧಿ ಪ್ರಯತ್ನಗಳ ನ್ಯಾಯಸಮ್ಮತ ಹಂಚಿಕೆಯ ಸಾಧ್ಯತೆಗಳನ್ನು ಹೊಂದಿದ್ದ ಈ ಎಲ್ಲಾ ದೃಷ್ಟಿಕೋನಗಳು ರಾಜ್ಯವು ರೂಪುಗೊಳ್ಳಲು ಆರಂಭವಾದಾಗ ಹೆಚ್ಚಿನ ಚಾಲನೆಯನ್ನು ಪಡೆದುಕೊಳ್ಳಲಿಲ್ಲ. ಇತರ ಕನ್ನಡ ಮಾತನಾಡುವ ಪ್ರದೇಶಗಳ ಹಿಂದುಳಿದಿರುವಿಕೆಯ ಚಿಂತನೆಯು ರಾಜ್ಯ ಪುನರ್‌ರಚನಾ ಸಮಿತಿಯ ಕಾಲದಲ್ಲಿ ಎಷ್ಟೊಂದು ಪ್ರಬಲವಾಗಿತ್ತೆಂದರೆ, ಕರ್ನಾಟಕ್ ಪ್ರದೇಶವು ಸ್ವಯಂಪೂರ್ಣವಾಗಿದೆ ಮತ್ತು ಕಾರ್ಯಸಾಧ್ಯವೆಂದು ಆಗಿನ ಹೊತ್ತಿಗೆ ಭಾವಿಸಲಾಗಲಿಲ್ಲ. ಕರ್ನಾಟಕ್ ಪ್ರಾಂತ್ಯವು ಒಂದು ಸ್ವಯಂಪೂರ್ಣ, ಆದರೆ ನಿರ್ಲಕ್ಷಿತ ಪ್ರಾಂತ್ಯ ಎಂಬುದರ ಸುತ್ತಲಿದ್ದ ಚಿಂತನೆಯು, ಅದೊಂದು ಬಡ ಮತ್ತು ಅಭಿವೃದ್ಧಿ ಹೊಂದದ ಪ್ರದೇಶ ಎಂಬ ಚಿಂತನೆಯತ್ತ ಪಲ್ಲಟಗೊಳ್ಳಲು, ಮೂಲಭೂತವಾಗಿ ತನ್ನದೇ ಅಭಿವೃದ್ಧಿ ಹೊಂದಿದ ಸ್ಥಾನಮಾನ ಮತ್ತು ಈ ಹಿಂದುಳಿದ ಪ್ರದೇಶಗಳ ’ಹೊರೆ’ಯನ್ನು ಹೊತ್ತು, ಅವುಗಳನ್ನು ’ಮೈಸೂರಿನ ಗುಣಮಟ್ಟ’ಕ್ಕೆ ಏರಿಸಬೇಕಾಗುತ್ತದೆ ಎಂಬ ಮೈಸೂರಿನವರ ಭ್ರಮೆಯೇ ಕಾರಣ. ರಾಜ್ಯವನ್ನು ಮುಂದೆ ಆಳುವವರು ಯಾರು ಎಂಬ ನಿರ್ಧಾರ ಮಾಡುವ ವಿಷಯ ಬಂದಾಗ, ಈ ಚಿಂತನೆಗಳು ಬಹಳ ಗಂಭೀರವಾದ ಪರಿಣಾಮಗಳನ್ನು ಹೊಂದಿದ್ದವು. ವಿವಿಧ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದು ರಾಜ್ಯವಾಗುವಂತೆ ಮಾಡುವುದನ್ನು ಕಾರ್ಯಗತಗೊಳಿಸಲು ಸ್ಥಾಪಿಸಲಾದ ಅಂತರ ರಾಜ್ಯ ಸಚಿವ ಸಮಿತಿಯು- ಕಾರ್ಯದರ್ಶಿಗಳು ಮತ್ತು ವಿಭಾಗೀಯ ಕಮೀಷನರ್‌ಗಳಂತಹ ಉನ್ನತ ಹುದ್ದೆಗಳಿಗೆ ಮೈಸೂರಿನ ಅಧಿಕಾರಿಗಳನ್ನೇ ಆಯ್ಕೆ ಮಾಡಿತ್ತು.

ಈ ನಡೆಯು ಮೈಸೂರಿನ ಹೊರಗಿನ ಕಾಂಗ್ರೆಸ್ಸಿಗರ ಅತೃಪ್ತಿಗೂ, ಟೀಕೆಗಳಿಗೂ ಕಾರಣವಾಗಿತ್ತು. ಯಾಕೆಂದರೆ, ಹಿಂದೆ ರಾಜಾಡಳಿತವಾಗಿದ್ದ ಮೈಸೂರಿನ ಆಡಳಿತಾತ್ಮಕ ವ್ಯವಸ್ಥೆಯನ್ನು ಇಡಿಯಾಗಿ ಉಳಿಸಿಕೊಂಡು, ಹೊರಗಿನ ಐಸಿಎಸ್ ಮತ್ತು ಐಎಎಸ್ ಅಧಿಕಾರಿಗಳಿಗೆ ಯಾವುದೇ ಅವಕಾಶ ಒದಗಿಸದಿರುವ ಹುನ್ನಾರವಾಗಿ ಅವರು ಇದನ್ನು ಕಂಡರು. ಬಾಂಬೆ ಪ್ರೆಸಿಡೆನ್ಸಿಯ ಕನ್ನಡ ಮಾತನಾಡುವ ಭಾಗಗಳ ವಕೀಲರುಗಳ ನಿರಂತರವಾಗಿದ್ದ ದೂರುಗಳನ್ನು ಹೇಳುವುದರಲ್ಲಿ ಒಂದುಗುಡಿದಕ್ಕೆ ಕಾರಣ, ತಮ್ಮ ಭಾಗದ ಜನರು ಆಡಳಿತದಲ್ಲಿ ಇರದಿದ್ದುದು. ಇದನ್ನು ಗಮನಿಸಿದರೆ, ಮೇಲಿನ ಸಂಗತಿಯನ್ನು ಅವರು ಇನ್ನೊಂದು ದ್ರೋಹ ಎಂದು ಪರಿಗಣಿಸಿರಬೇಕು. ಹೊಸ ರಾಜ್ಯದ ಅಧಿಕಾರಿಗಳ ವೇತನಶ್ರೇಣಿಯನ್ನು ಹೆಚ್ಚಿಸದೇ ಹಿಂದಿನ ಮೈಸೂರು ರಾಜ್ಯದ ವೇತನ ವ್ಯವಸ್ಥೆಯನ್ನೇ (ಅದು ಆಗ ದೇಶದಲ್ಲಿಯೇ ಅತ್ಯಂತ ಕಡಿಮೆಯಾಗಿತ್ತು) ಉಳಿಸಿಕೊಳ್ಳುವ ನಿರ್ಧಾರವು ಅಧಿಕಾರಿಗಳು ಹೊಸ ರಾಜ್ಯದ ಸೇವೆಗೆ ಬರದಂತೆ ಮಾಡಿತು ಎಂದು ನಂಬಲಾಗಿದೆ.

ಒಂದು ಪತ್ರಿಕಾವರದಿಯು ತೋರಿಸುವಂತೆ, ಒಂದು ವರ್ಷಕ್ಕೂ ಹೆಚ್ಚು ಕಾಲದ ನಂತರವೂ ಈ ಅಸಮಾಧಾನ ಇನ್ನೂ ಉಳಿದಿತ್ತು. ಹಳೆ ಮೈಸೂರಿನ ಆಡಳಿತವು ಏಕೀಕರಣದ ಕಾರ್ಯಭಾರವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿಲ್ಲ ಎಂಬುದು ಕರ್ನಾಟಕ್ ಪ್ರದೇಶದ ಜನರ ನಡುವಿದ್ದ ಅಭಿಪ್ರಾಯವಾಗಿತ್ತು ಮತ್ತು ಅವರಿಗೆ “ಹೊರಗಿನವರು” ಎಂಬ ಭಾವನೆ ಬರುವಂತೆ ಮಾಡಲಾಗುತ್ತಿತ್ತು ಹಾಗೂ ತಮ್ಮನ್ನು ಕಳಪೆ ಮತ್ತು ಹಳತಾಗಿರುವ ಆಡಳಿತ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಒತ್ತಾಯಿಸಲಾಗುತ್ತಿರುವ ಭಾವನೆ ಅವರಲ್ಲಿ ಉಂಟಾಗುವಂತೆ ಮಾಡಿತು.

ಹಳೆ ಮೈಸೂರಿನ ಅಧಿಕಾರಿಗಳಿಗೆ ಕರ್ನಾಟಕ್ ಪ್ರದೇಶಗಳಿಂದ ಬಂದವರು- ತಮ್ಮ ಸ್ಥಾನಮಾನ, ಅಧಿಕಾರ ಹಾಗೂ ಪ್ರತಿಷ್ಠೆಯನ್ನು ಹಾಳುಗೆಡಹುವ “ಹೊರಗಿನವರು, ಅತಿಕ್ರಮಿಸುತ್ತಿರುವವರು” ಎಂಬಂತೆ ಕಂಡರು. ಈ ಆಡಳಿತಾತ್ಮಕ ಹಗ್ಗ ಜಗ್ಗಾಟ ಮತ್ತು ಅಧಿಕಾರಿಗಳ ನಡುವಿನ ಹಿರಿತನದ ಕಿತ್ತಾಟವು ಎಷ್ಟು ಅತೃಪ್ತಿಯ ಮಟ್ಟಕ್ಕೆ ಬೆಳೆಯಿತು ಎಂದರೆ, ಬಾಂಬೆ ಕರ್ನಾಟಕದ ಬಹುತೇಕ ಎಲ್ಲಾ ಹಿರಿಯ ಅಧಿಕಾರಿಗಳು ತಮ್ಮನ್ನು ಬಾಂಬೆ ಪ್ರಾಂತ್ಯಕ್ಕೆ ಮರಳಿ ವರ್ಗಾವಣೆ ಮಾಡುವಂತೆ ಕೇಳಿಕೊಳ್ಳುವಷ್ಟು.

1980ರಲ್ಲಿ ಕೂಡಾ ಕರ್ನಾಟಕ ವಿಧಾನಸಭೆಯು ನೇಮಿಸಿದ್ದ ಸಮಿತಿಯೊಂದು ಅಧಿಕಾರಿಗಳ ನೇಮಕಾತಿಗಳು ತೀರಾ ಹಳೆ ಮೈಸೂರು ಪ್ರಾಂತ್ಯದವರ, ಅದರಲ್ಲೂ ಬೆಂಗಳೂರು ಜಿಲ್ಲೆಯವರ ಪರವಾಗಿದೆ ಎಂದು ಕಂಡುಕೊಂಡಿತು. ರಾಜ್ಯ ಸರಕಾರಿ ಸೇವೆಗಳಲ್ಲಿ (ಅವಿಭಜಿತ) ಬೀದರ್, ಬೆಳಗಾವಿ, ಬಿಜಾಪುರ, ಕೊಡಗು, ಧಾರವಾಡ, ಗುಲ್ಬರ್ಗಾ, ಉತ್ತರಕನ್ನಡ, ರಾಯಚೂರು ಮತ್ತು ದಕ್ಷಿಣ ಕನ್ನಡಕ್ಕೆ “ಸೂಕ್ತ ಪ್ರಾತಿನಿಧ್ಯ” ಇರಲಿಲ್ಲ. 2002ರಲ್ಲಿ ಕೂಡಾ ನಂಜುಂಡಪ್ಪ ಸಮಿತಿಯು ಹೈದರಾಬಾದ್ ಕರ್ನಾಟಕಕ್ಕೆ ಸರಕಾರಿ ಸೇವೆಗಳಲ್ಲಿ ತೀರಾ ಕಡಿಮೆ ಪ್ರಾತಿನಿಧ್ಯವಿದೆ ಎಂದು ಹೇಳಿತ್ತು- ಗೆಜೆಟೆಡ್ ಹುದ್ದೆಗಳಿಗೆ ನೇಮಕವಾದವರಲ್ಲಿ ಅದಕ್ಕೆ ಕೇವಲ 12 ಶೇಕಡಾ ಮತ್ತು ನಾನ್ ಗೆಜೆಟೆಡ್ ಹುದ್ದೆಗಳಲ್ಲಿ ಕೇವಲ ಎಂಟು ಶೇಕಡಾ ಪ್ರಾತಿನಿಧ್ಯ ಇತ್ತು. ಇದೇ ಹೊತ್ತಿಗೆ ಬೆಂಗಳೂರು ವಿಭಾಗವು ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ಹುದ್ದೆಗಳಲ್ಲಿ ಕ್ರಮವಾಗಿ 47 ಮತ್ತು 45 ಶೇಕಡಾ ಪ್ರಾತಿನಿಧ್ಯ ಹೊಂದಿತ್ತು. ಇನ್ನು ಮುಂದಕ್ಕೆ ಹೇಳಬೇಕೆಂದರೆ, 1960 ಮತ್ತು 1999ರ ನಡುವಿನ ವರ್ಷಗಳಲ್ಲಿ ಬೇರೆಬೇರೆ ಜಿಲ್ಲೆಗಳಲ್ಲಿ ಬೆಳವಣಿಗೆಯ ಪಥಗಳ ಕುರಿತು ಸಮಿತಿಯ ವಿಶ್ಲೇಷಣೆಯ ಪ್ರಕಾರ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಬೆಳವಣಿಗೆಯು ಕುಂಠಿತ ಅಥವಾ ಸ್ಥಗಿತಗೊಂಡ ಸ್ಥಿತಿಯಲ್ಲಿ ಇದ್ದರೆ, ಬೆಂಗಳೂರಿನ ಪ್ರದೇಶದಲ್ಲಿ ಹೆಚ್ಚಿನ ಸುಧಾರಣೆಯಾಗಿದೆ.

ಇವೆಲ್ಲವೂ, ಇತಿಹಾಸ ಬರವಣಿಗೆಯ ರಾಜಕೀಯ, ಯಾವೆಲ್ಲಾ ಕಥಾನಕಗಳು ಮೌನ ತಾಳುತ್ತವೆ, ಯಾವೆಲ್ಲವನ್ನು ಬದಿಗೆ ಸರಿಸಲಾಗುತ್ತದೆ ಎಂಬ ಪ್ರಶ್ನೆಗೆ ನಮ್ಮನ್ನು ಮರಳಿ ಕರೆತರುತ್ತದೆ. ಕರ್ನಾಟಕದ ಸಂದರ್ಭದಲ್ಲಿ- ಕರ್ನಾಟಕದ ರಚನೆಯನ್ನು ವಿಘಟನೆಗೊಂಡ ದೇಶದಲ್ಲಿ ಕೊನೆಗೂ ಸಾಧಿಸಲಾದ ಏಕೀಕರಣ ಎಂದು- ಟೀಕೆಯೇ ಇಲ್ಲದೇ ವ್ಯಾಪಕವಾಗಿ ಸ್ವೀಕರಿಸಲಾಗಿರುವುದು 1950ರ ದಶಕದಲ್ಲಿ ನಡೆಯುತ್ತಿದ್ದ ಬೇರೆ ಎಲ್ಲವನ್ನೂ ಮರೆಗೆ ಸರಿಯುವಂತೆ ಮಾಡಿದೆ. ನಿರ್ದಿಷ್ಟವಾಗಿ ಮೈಸೂರಿನ ಒಳಗೆಯೇ ಬಾಂಬೆ ಮತ್ತು ಹೈದರಾಬಾದ್ ಕರ್ನಾಟಕವನ್ನು ಹೇಗೆ ನೋಡಲಾಗುತ್ತಿತ್ತು ಎಂಬುದರ ಸುತ್ತಲಿನ ಚರ್ಚೆಗಳು, ಹೊಸ ರಾಜ್ಯದಲ್ಲಿ ತಾವೇ ನಾಯಕತ್ವ ವಹಿಸಬೇಕು ಎಂಬ ಮೈಸೂರಿಗರ ಕಲ್ಪನೆ ಹಾಗೂ ಮೈಸೂರಿಗರ ಅಧಿಕಾರಶಾಹಿಯ ಪ್ರಾಬಲ್ಯ ಇತ್ಯಾದಿಗಳು ಪರಿಶೀಲನೆಗೆ ಒಳಗಾಗಬೇಕಾದ ಗಂಭೀರ ಪ್ರಶ್ನೆಗಳು ಎಂದು ಪರಿಗಣಿಸಲಾಗಿಯೇ ಇಲ್ಲ. ತಮ್ಮ ಪ್ರದೇಶಗಳನ್ನು ಇನ್ನೂ ಕಡೆಗಣಿಸಲಾಗುತ್ತಿದೆ ಮತ್ತು ಇತರ ಪ್ರದೇಶಗಳ ಕುರಿತ ಸರಕಾರದ ಮತ್ತು ಅದರ ಅಧಿಕಾರಿವರ್ಗದ “ಮನೋಭಾವ”ದ ಕಾರಣದಿಂದ ತಮ್ಮ ಪ್ರದೇಶಗಳು ಹಿಂದುಳಿದಿವೆ ಎಂದು ಹಳೆ ಮೈಸೂರೇತರ ಪ್ರದೇಶಗಳ ಕಾರ್ಯಕರ್ತರು ಮತ್ತೆ ಮತ್ತೆ ಬೊಟ್ಟುಮಾಡಿ ತೋರಿಸುತ್ತಲೇ ಇದ್ದಾರೆ. ಇದನ್ನು ಹೆಚ್ಚಿನ ಅನುದಾನ, ಹೆಚ್ಚು ಅಭಿವೃದ್ಧಿ ನಿಗಮ, ಮಂಡಳಿಗಳು ಮತ್ತು ಯೋಜನೆಗಳ ಘೋಷಣೆಗಳಿಂದ ಸರಳವಾಗಿ ಬದಲಾಗಬಹುದಾದ “ಮನೋಭಾವ” ಎಂದು ಬದಿಗೆ ಸರಿಸುವುದಕ್ಕೆ ಬದಲಾಗಿ, ಇಂತಹ ಚಿಂತನೆಗಳು ಹೇಗೆ ಅಭಿವೃದ್ಧಿ ಕುರಿತ ರಾಜಕೀಯ ಕಲ್ಪನೆಗಳ ಮೇಲೆಯೇ ಗಾಢ ಪ್ರಭಾವ ಬೀರಿವೆ ಎಂದು ನಾವು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ಮುಂದಿರುವ ಪ್ರಶ್ನೆ ಎಂದರೆ, ಒಂದು ಭಾಷಾಧಾರಿತ ರಾಜ್ಯದ ಒಳಗೆಯೇ “ಒಳಗೊಳ್ಳುವಿಕೆ”ಯ ಅಭಿವೃದ್ಧಿಯ ಭರವಸೆಯು ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು. ನಾವು 67 ವರ್ಷಗಳ ನಂತರವೂ ಇನ್ನೂ ಪ್ರಾದೇಶಿಕ ಅಸಮತೋಲನದ ಪ್ರಶ್ನೆಯ ಕುರಿತೇ ಚರ್ಚೆ ಮಾಡುತ್ತಿದ್ದೇವೆ ಎಂದಾದರೆ, ಬಹುಶಃ ಇಲ್ಲಿ ಸ್ವಲ್ಪ ನಿಂತುಬಿಟ್ಟು, ಯಾಕೆ ಈ ಭಾಷಾಧಾರಿತ ರಾಜ್ಯವು ತನ್ನ ಸ್ಥಾಪನೆಯ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂಬುದನ್ನು ಯೋಚಿಸಲು ಇದು ಸಕಾಲ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಸ್ವಾತಿ ಶಿವಾನಂದ್
ಸಹಾಯಕ ಪ್ರಾಧ್ಯಾಪಕರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ – ಬೆಂಗಳೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...