Homeಮುಖಪುಟಹುದ್ದೆ ತೊರೆಯುವ ಬಗ್ಗೆಯೂ ಯೋಚಿಸಿದೆ..ರಾಜ್ಯಸಭೆ ಅಧಿವೇಶನದ ವೇಳೆ ಕೆರಳಿದ ಸ್ಪೀಕರ್‌

ಹುದ್ದೆ ತೊರೆಯುವ ಬಗ್ಗೆಯೂ ಯೋಚಿಸಿದೆ..ರಾಜ್ಯಸಭೆ ಅಧಿವೇಶನದ ವೇಳೆ ಕೆರಳಿದ ಸ್ಪೀಕರ್‌

- Advertisement -
- Advertisement -

ನಿನ್ನೆ ರಾಜ್ಯಸಭೆ ಅಧಿವೇಶನದ ವೇಳೆ ಹೈಡ್ರಾಮವೇ ನಡೆದಿದೆ. ಚರಣ್‌ ಸಿಂಗ್‌ ಅವರನ್ನು ‘ಭಾರತ ರತ್ನ’ ಗೌರವಕ್ಕೆ ಆಯ್ಕೆ ಮಾಡಿರುವುದರ ಬಗ್ಗೆ ಮಾತನಾಡಲು ಅವರ ಮೊಮ್ಮಗ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಸಿಂಗ್‌ ಅವರಿಗೆ ಸ್ಪೀಕರ್‌ ಅವಕಾಶ ನೀಡಿದ್ದರು, ಇದಕ್ಕೆ ಕಾಂಗ್ರೆಸ್‌ ಸಂಸದರು ಆಕ್ಷೇಪಿಸಿದ್ದಕ್ಕೆ ಕೆರಳಿದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಾನು ರಾಜೀನಾಮೆ ನೀಡಲು ಯೋಚಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ಈ ಬೆಳವಣಿಗೆಯು ತನ್ನ ಚಿಕ್ಕ ಮಗನ ಸಾವಿಗಿಂತ ಹೆಚ್ಚು ನೋವುಂಟುಮಾಡಿದೆ ಎಂದ ಧಂಖರ್, ರಮೇಶ್ ಅವರು ‘ಸ್ಮಶಾನದಲ್ಲಿ ಹಬ್ಬ ಮಾಡುವ ವ್ಯಕ್ತಿ’ ಮತ್ತು ಈ ದುರ್ವರ್ತನೆಯಿಂದಾಗಿ ಅವರು ಮೇಲ್ಮನೆ ಸದಸ್ಯರಾಗಿರಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.

ಜಯಂತ್ ಸಿಂಗ್ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುವಾಗ ಸಭಾಪತಿ ಸೂಚಿಸಿಲ್ಲ ಅಥವಾ ಭಾರತ ರತ್ನ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡುವ ಬಗ್ಗೆ ಸದನದ ವ್ಯವಹಾರ ಪತ್ರಗಳಲ್ಲಿ ಪಟ್ಟಿ ಮಾಡಿಲ್ಲ ಎಂಬುದು ಜೈರಾಮ್‌ ರಮೇಶ್‌ ವಾದವಾಗಿತ್ತು. ಜೈರಾಮ್ ರಮೇಶ್ ಅವರು ರಾಷ್ಟ್ರೀಯ ಲೋಕದಳದ ಜಯಂತ್ ಸಿಂಗ್ ಅವರಿಗೆ ನೀವು ಎಲ್ಲಿಗೆ ಹೋಗಲು ಬಯಸಿದ್ದೀರಿ? ಸುಳಿವು ಪ್ರಕಾರ ನೀವು ಲೋಕಸಭೆ ಚುನಾಣೆಯಲ್ಲಿ ಪ್ರತಿಪಕ್ಷಗಳೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲು ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಲು ಮುಂದಾಗಿದ್ದೀರಿ ಎಂದು ಹೇಳಿದ್ದಾರೆ.

ಇದು ಧಂಖರ್ ಅವರನ್ನು ಕೆರಳಿಸಿದ್ದು, ರಮೇಶ್ ಅವರು ಸದನದಲ್ಲಿ ಇರಲು ಅನರ್ಹರು ಎಂದರು. ನಂತರ ಆರ್ಥಿಕತೆ ಕುರಿತ ಸರ್ಕಾರದ ಶ್ವೇತಪತ್ರದ ಮೇಲಿನ ಚರ್ಚೆಯ ನಂತರ ಸಭಾಪತಿ ಮತ್ತೆ ಜೈರಾಮ್‌ ರಮೇಶ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಜಯಂತ್‌ಗೆ ಜೈರಾಮ್ ರಮೇಶ್ ಹೇಳಿದ್ದನ್ನು ನಾನು ಕೇಳಿದೆ. ನೀವು (ರಮೇಶ್) ಸ್ಮಶಾನದಲ್ಲಿ ಔತಣ ಮಾಡುವ ವ್ಯಕ್ತಿ. ಈ ದುರ್ನಡತೆಗಾಗಿ ನೀವು (ರಮೇಶ್) ಈ ಸದನದ ಭಾಗವಾಗಲು ಅರ್ಹರಲ್ಲ ಎಂಬುದು ಸತ್ಯ ಎಂದು ಸ್ಪೀಕರ್‌ ಹೇಳಿದ್ದಾರೆ, ಈ ಬಗ್ಗೆ ಕಾಂಗ್ರೆಸ್ ಸಂಸದರು ಪ್ರತಿಭಟಿಸುತ್ತಿದ್ದಂತೆ ಧಂಖರ್ ಅವರು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದರು.

ಈ ವೇಳೆ ಮಾತನಾಡಿದ ಖರ್ಗೆ, ನಾಯಕರಿಗೆ ಭಾರತ ರತ್ನ ನೀಡಿ ಗೌರವಿಸುವ ಸರ್ಕಾರದ ನಿರ್ಧಾರದ ಬಗ್ಗೆ ಯಾವುದೇ ಚರ್ಚೆ ಇಲ್ಲ. ನಾನು ಎಲ್ಲರಿಗೂ ವಂದಿಸುತ್ತೇನೆ. ಆದರೆ ಸದಸ್ಯರು ಸಮಸ್ಯೆಯನ್ನು ಪ್ರಸ್ತಾಪಿಸಲು ಬಯಸಿದರೆ, ನೀವು (ಅಧ್ಯಕ್ಷರು) ‘ಯಾವ ನಿಯಮದ ಅಡಿಯಲ್ಲಿ’ ಎಂದು ಕೇಳುತ್ತೀರಿ. ಯಾವ ನಿಯಮದ ಅಡಿಯಲ್ಲಿ ಅವರಿಗೆ (ಜಯಂತ್ ಸಿಂಗ್) ಮಾತನಾಡಲು ಅವಕಾಶ ನೀಡಿದ್ದೀರಿ ಎಂದು (ನಾನು ತಿಳಿಯ ಬಯಸುತ್ತೇನೆ). ನಮಗೂ ಅನುಮತಿ ಕೊಡಿ. ಒಂದು ಕಡೆ ನೀವು ನಿಯಮಗಳ ಬಗ್ಗೆ ಮಾತನಾಡುತ್ತೀರಿ, ನಿಮಗೆ ವಿವೇಚನೆ ಇದೆ, ಆ ವಿವೇಚನೆಯನ್ನು ವಿವೇಚನೆಯಿಂದ ಬಳಸಬೇಕೇ ಹೊರತು ನಿಮಗೆ ಬೇಕಾದಾಗ ಅಲ್ಲ ಎಂದು ಖರ್ಗೆ ಹೇಳಿದರು. ಸಭಾಪತಿ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಪ್ರತಿಪಾದಿಸಿದ ಅವರು, ಸದನದ ಅಜೆಂಡಾದಲ್ಲಿ ಭಾರತ ರತ್ನದ ಬಗ್ಗೆ ಚರ್ಚೆಯನ್ನು ಸೇರಿಸಿದ್ದರೆ, ಎಲ್ಲರೂ ಅದರಲ್ಲಿ ಭಾಗವಹಿಸುತ್ತಿದ್ದರು ಎಂದು ಹೇಳಿದರು.

ಖರ್ಗೆಯವರು ಎತ್ತಿರುವ ಆಕ್ಷೇಪಗಳಿಗೆ ಧಂಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಕಾಂಗ್ರೆಸ್ ನಾಯಕರು ಚರಣ್ ಸಿಂಗ್ ಮತ್ತು ಅವರ ಪರಂಪರೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಅಧ್ಯಕ್ಷರಿಗೆ ಸವಾಲು ಹಾಕುತ್ತಿದ್ದಾರೆ ಮತ್ತು ಅದೂ ಇಂತಹ ಸಂದರ್ಭದಲ್ಲಿ, ಇದು ಕಾಂಗ್ರೆಸ್‌ನ ಅಸಲಿ ಮುಖ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಖರ್ಗೆಯವರು ಪೀಠಕ್ಕೆ ಅಗೌರವ ತೋರಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಧಂಖರ್ ಅವರು ಜಯಂತ್ ಸಿಂಗ್ ಅವರಿಂದ ಒಂದೆರಡು ನಿಮಿಷಗಳ ಕಾಲ ಮಾತನಾಡುವ ಬಗ್ಗೆ ಸ್ವೀಕರಿಸಿದ ಮನವಿಯನ್ನು ಓದಿದ್ದಾರೆ.

ಶ್ವೇತಪತ್ರದ ಮೇಲಿನ ಚರ್ಚೆಯ ನಂತರ ಧಂಖರ್ ಮತ್ತೆ ಮಾತನಾಡಿ, ಇಂದು ನನಗೆ ನೋವಿನ ದಿನವಾಗಿತ್ತು.  ನೋವಿನಿಂದ ನಾನು ನಿಮ್ಮ ಗಮನಕ್ಕೆ ಒಂದು ವಿಷಯವನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಬಯಸುತ್ತೇನೆ. ಅವರ ವರ್ತನೆಯು ‘ಅನಿರೀಕ್ಷಿತ’, ‘ನಾಚಿಕೆಗೇಡಿನ’ ಮತ್ತು ‘ನೋವು’ ತಂದಿದೆ ಎಂದು ಹೇಳಿದ್ದಾರೆ. ಇದು ನಮ್ಮ ಘನತೆಗೆ ವಿರುದ್ಧವಾಗಿತ್ತು. ಈ ಅವಧಿಯಲ್ಲಿ ನಮ್ಮ ನಡುವಳಿಕೆ ತೀರಾ ಕೆಳಮಟ್ಟದ್ದಾಗಿದ್ದು, ನನಗೆ ನಾಚಿಕೆಯಾಗುತ್ತಿದೆ. ನನ್ನ ಮನಸ್ಸಿನಲ್ಲಿ ವಿವಿಧ ಆಲೋಚನೆಗಳು ಬಂದವು, ನಾನು ಹುದ್ದೆಯನ್ನು ತೊರೆಯುವ ಬಗ್ಗೆಯೂ ಯೋಚಿಸಿದೆ, ರೈತನ ಮಗನಾಗಿ ಕಷ್ಟದ ದಿನಗಳನ್ನು ಕಂಡಿದ್ದೇನೆ. ನನ್ನ ಬೆಳೆದ ಮಗನನ್ನು ಕಳೆದುಕೊಂಡೆ. ಆದರೆ ಇಂದಿನ ನೋವು ಅದಕ್ಕಿಂತ ಹೆಚ್ಚು ಇತ್ತು. ಜಯಂತ್ ಚೌಧರಿ ಮಾತನಾಡುವಾಗ ಜೈರಾಮ್ ರಮೇಶ್ ಹೇಳಿದ್ದೇನು? ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ನೀವು ಸ್ಮಶಾನದಲ್ಲಿ ಹಬ್ಬ ಮಾಡಬೇಡಿ, ಇದನ್ನು ನಿರ್ಲಕ್ಷಿಸಲಾಗುವುದಿಲ್ಲ.  ರಾಜಕೀಯ ವಾದಗಳನ್ನು ಬದಿಗಿಟ್ಟು, ನಾಯಕರ ಗೌರವದ ವಿಚಾರದಲ್ಲಿ ನಾವು ಸಂವೇದನಾಶೀಲರಾಗಿರಬೇಕು ಎಂದು ಹೇಳಿದರು. ನನಗೆ ತುಂಬಾ ದುಃಖವಾಗಿದೆ, ನಾವು ಒಂದೇ ಧ್ವನಿಯಲ್ಲಿ ಅದನ್ನು ಖಂಡಿಸಬೇಕು. ವೈಯಕ್ತಿಕವಾಗಿ ನಾನು ಇದನ್ನು ಖಂಡಿಸುತ್ತೇನೆ ಮತ್ತು ನೀವೆಲ್ಲರೂ ಇದನ್ನು ಖಂಡಿಸಬೇಕೆಂದು ನಾನು ವಿನಂತಿಸುತ್ತೇನೆ. ಸದನದಲ್ಲಿ ನಾವು ಅತ್ಯಂತ ಕೆಳಮಟ್ಟಕ್ಕೆ ತಲುಪಿದ್ದೇವೆ, ಅದನ್ನು ಮತ್ತಷ್ಟು ಕೆಳಗಿಳಿಯಲು ಬಿಡಬಾರದು ಎಂದು ಹೇಳಿದ್ದಾರೆ.

ಇದನ್ನು ಓದಿ: ಪತ್ರಕರ್ತ ನಿಖಿಲ್ ವಾಗ್ಲೆ ಮೇಲೆ ದಾಳಿ: 10 ಬಿಜೆಪಿ ಕಾರ್ಯಕರ್ತರ ಬಂಧನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read