Homeದಲಿತ್ ಫೈಲ್ಸ್5 ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದ 11,000 ವಿದ್ಯಾರ್ಥಿಗಳು ಕೇಂದ್ರೀಯ ವಿವಿಗಳನ್ನು ತೊರೆದಿದ್ದಾರೆ: ಸರ್ಕಾರ

5 ವರ್ಷಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯದ 11,000 ವಿದ್ಯಾರ್ಥಿಗಳು ಕೇಂದ್ರೀಯ ವಿವಿಗಳನ್ನು ತೊರೆದಿದ್ದಾರೆ: ಸರ್ಕಾರ

- Advertisement -
- Advertisement -

ಇತರೆ ಹಿಂದುಳಿದ ವರ್ಗ (ಒಬಿಸಿ), ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿದ 11,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 2018 ರಿಂದ 2023ರ ಅವಧಿಯಲ್ಲಿ ಭಾರತದ 45 ಕೇಂದ್ರೀಯ ವಿಶ್ವವಿದ್ಯಾಲಯಗಳಿಂದ (ಸಿಯು) ಹೊರಗುಳಿದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ರಾಜ್ಯಸಭೆಯಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿರುವ ಸರ್ಕಾರ, “ಕಳೆದ ಐದು ವರ್ಷಗಳಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿಗೆ ಸೇರಿದ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಐಟಿಯಿಂದ ಹೊರಗುಳಿದರೆ, ಅದೇ ಅವಧಿಯಲ್ಲಿ ಈ ವರ್ಗಗಳಿಗೆ ಸೇರಿದ ಒಟ್ಟು 366 ವಿದ್ಯಾರ್ಥಿಗಳು ಐಐಎಂಗಳಿಂದ ಹೊರಗುಳಿದಿದ್ದಾರೆ” ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಡಾ.ಸುಭಾಸ್ ಸರ್ಕಾರ್ ಲಿಖಿತ ಉತ್ತರ ನೀಡಿದ್ದಾರೆ.

ಮಾಹಿತಿ ನೀಡಿದ ಸಚಿವರು, “6,901 ಒಬಿಸಿ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನು ತೊರೆದಿದ್ದಾರೆ, 3,596 ಎಸ್‌ಸಿ ವಿದ್ಯಾರ್ಥಿಗಳು ವ್ಯಾಸಂಗ ಬಿಟ್ಟಿದ್ದಾರೆ, 3949 ಎಸ್‌ಟಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಿಲ್ಲ” ಎಂದು ಮಾಹಿತಿ ನೀಡಿದ್ದಾರೆ.

“ಅದೇ ರೀತಿ ಐಐಟಿಗಳಲ್ಲಿ 2,544 ಒಬಿಸಿ ವಿದ್ಯಾರ್ಥಿಗಳು ಹೊರಗುಳಿದರೆ, 1,362 ಎಸ್‌ಸಿ ಮತ್ತು 538 ಎಸ್‌ಟಿ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಮುಂದುವರಿಸಿಲ್ಲ. ಐಐಎಂಗಳಲ್ಲಿ, 133 ಒಬಿಸಿ ವಿದ್ಯಾರ್ಥಿಗಳು, 143 ಎಸ್‌ಸಿ ಮತ್ತು 90 ಎಸ್‌ಟಿ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳಿಂದ ಹೊರಗುಳಿದಿದ್ದಾರೆ” ಎಂದಿದ್ದಾರೆ.

2018 ರಿಂದ 2023ರ ಅವಧಿಯಲ್ಲಿ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)ಗಳಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ಎಷ್ಟು ವಿದ್ಯಾರ್ಥಿಗಳು ಡ್ರಾಪ್ಔಟ್ ಆಗಿದ್ದಾರೆಂದು ತಮಿಳುನಾಡಿನ ಸಂಸದ ತಿರುಚಿ ಶಿವ ಅವರು ಕೇಳಿದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ. “ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳಿಗೆ ಬಹು ಆಯ್ಕೆಗಳಿವೆ” ಎಂದು ಸಚಿವ ಸರ್ಕಾರ್ ಸಮರ್ಥಿಸಿಕೊಂಡಿದ್ದಾರೆ.

ಈ ವಿದ್ಯಾರ್ಥಿಗಳು ಸದರಿ ಸಂಸ್ಥೆಗಳಲ್ಲಿಯೇ ಒಂದು ಕೋರ್ಸ್/ಪ್ರೋಗ್ರಾಂನಿಂದ ಇನ್ನೊಂದಕ್ಕೆ ವಲಸೆ ಹೋಗುತ್ತಾರೆ. ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಇತರ ವಿಭಾಗಗಳು/ಸಂಸ್ಥೆಗಳಲ್ಲಿ ಅಥವಾ ಯಾವುದೇ ವೈಯಕ್ತಿಕ ನೆಲೆಯಲ್ಲಿ ಸೀಟುಗಳನ್ನು ಪಡೆದುಕೊಳ್ಳುವುದರಿಂದಾಗಿ ವಲಸೆ/ ಹಿಂಪಡೆಯುವಿಕೆ ನಡೆಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಶೋಚನೀಯ ಆರ್ಥಿಕ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗುವಂತೆ ಶುಲ್ಕ ಕಡಿತ, ಹೆಚ್ಚಿನ ಸಂಸ್ಥೆಗಳ ಸ್ಥಾಪನೆ, ವಿದ್ಯಾರ್ಥಿವೇತನ, ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಕ್ಕೆ ಅವಕಾಶದಂತಹ ವಿವಿಧ ಕ್ರಮಗಳನ್ನು ಕೈಗೊಂಡಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತದೆ.

ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ, ‘ಐಐಟಿಗಳಲ್ಲಿ ಬೋಧನಾ ಶುಲ್ಕ ಮನ್ನಾ’, ಕೇಂದ್ರ ವಲಯದ ಯೋಜನೆಯಡಿ ರಾಷ್ಟ್ರೀಯ ವಿದ್ಯಾರ್ಥಿವೇತನದ ಅನುದಾನ, ಸಂಸ್ಥೆಗಳಲ್ಲಿ ವಿದ್ಯಾರ್ಥಿವೇತನ ಇತ್ಯಾದಿ ಯೋಜನೆಗಳೂ ಇವೆ ಎಂದು ಸರ್ಕಾರ ಹೇಳಿಕೊಂಡು ಬಂದಿದೆ.

ಕಳೆದ ಐದು ವರ್ಷಗಳಲ್ಲಿ ಐಐಟಿ, ಕೇಂದ್ರೀಯ ವಿವಿಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಜಾತಿ ತಾರತಮ್ಯ ಮತ್ತು ಪರಕೀಯತೆಯನ್ನು ಅನುಭವಿಸಿದ್ದಾರೆಯೇ ಎಂದು ತಮಿಳುನಾಡು ಸಂಸದ ವೈಕೊ ಅವರು ಕೇಳಿದ ಇನ್ನೊಂದು ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಮೇಲೆ ಯಾವುದೇ ಜಾತಿ ತಾರತಮ್ಯ ವರದಿಯಾಗಿಲ್ಲ” ಎಂದಿದ್ದಾರೆ ಡಾ.ಸರ್ಕಾರ್‌.

ಐಐಟಿಯಲ್ಲಿ 2018ರಲ್ಲಿ 2 ಎಸ್‌ಸಿ ವಿದ್ಯಾರ್ಥಿಗಳು, 2019ರಲ್ಲಿ 1 ಎಸ್‌ಸಿ ವಿದ್ಯಾರ್ಥಿ, 2022ರಲ್ಲಿ 1 ಎಸ್‌ಸಿ ವಿದ್ಯಾರ್ಥಿ ಮತ್ತು 1 ಎಸ್‌ಟಿ ವಿದ್ಯಾರ್ಥಿ ಮತ್ತು 2023 ರಲ್ಲಿ 2 ಎಸ್‌ಸಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿವೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರೀಯ ವಿವಿಗಳ ಪ್ರಕರಣದಲ್ಲಿ, 2017 ರಲ್ಲಿ 4 ಎಸ್‌ಸಿ ವಿದ್ಯಾರ್ಥಿಗಳು, 2018 ರಲ್ಲಿ 2 ಎಸ್‌ಸಿ ವಿದ್ಯಾರ್ಥಿಗಳು ಮತ್ತು 2021 ರಲ್ಲಿ 1 ಎಸ್‌ಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...