ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ದಲಿತ ಮುಖಂಡ ನರಸಿಂಹಮೂರ್ತಿ (ಕುರಿ ಮೂರ್ತಿ) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಪೊಲೀಸರು 13 ಜನರನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕ ರಾಹುಲ್ ಶಹಾಪುರ್‌ವಾಡ್ ತಿಳಿಸಿದ್ದಾರೆ.
ಜೂನ್ 15ರ ಬುಧವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಗುಬ್ಬಿ ಪಟ್ಟಣದ ಹೆದ್ದಾರಿ ಬದಿಯ ಅಂಗಡಿಯ ಬಳಿ ಟೀ ಕುಡಿಯುತ್ತ ಕುಳಿತ್ತಿದ್ದ ನರಸಿಂಹಮೂರ್ತಿಯವರನ್ನು ಏಳು ಮಂದಿ ಅಪರಿಚಿತರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದರು. ಹತ್ಯೆಗೆ ಸಂಬಂಧ ಕನಕಪುರದ ಹಾರೋಹಳ್ಳಿ ಸಮೀಪದ ಫಾರಂಹೌಸ್‌ನಲ್ಲಿ ಅಡಗಿದ್ದ 13 ಆರೋಪಿಗಳನ್ನು ಶುಕ್ರವಾರ ಮುಂಜಾನೆ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಿಟ್ಟೂರು ಹಾಗೂ ಗುಬ್ಬಿ ಹೊಸಳ್ಳಿಯ ಎರಡು ಜಮೀನು ವಿವಾದ ಹಾಗೂ ಹಿಂದಿನ ಕೆಲವು ಪ್ರಕರಣಗಳ ವೈಮನಸ್ಸುಗಳು ಕೊಲೆಗೆ ಕಾರಣ ಎಂದು ಪ್ರಾಥಮಿಕ ಹಂತದ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಎಸ್‌ಪಿ ತಿಳಿಸಿದ್ದು, “ಪೂರ್ಣ ಪ್ರಮಾಣದ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ” ಎಂದಿದ್ದಾರೆ.
ಗುಬ್ಬಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 148, 302, ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ಗುಬ್ಬಿ ಹೊಸಹಳ್ಳಿಯ ಎಚ್.ಸಿ.ಕಿರಣ್ ಬಿನ್ ರಾಜಣ್ಣ (33 ವರ್ಷ), ಮಂಡ್ಯ ತಾಲ್ಲೂಕಿನ ರಾಜ ಅಲಿಯಾಸ್ ಕ್ಯಾಟ್ ರಾಜ (35), ಪಾಂಡವಪುರದ ಮಂಜು ಅಲಿಯಾಸ್ ಮ್ಯಾಕ್ಷಿ (30), ಬಿಡದಿ ಬಳಿಯ ಅಭಿಷೇಕ್ ಅಲಿಯಾಸ್ ಕರಿಯ (30), ಗುಬ್ಬಿ ಪಟ್ಟಣದ ನಯಾಜ್ ಬಿನ್ ವಜೀರ್ (25), ಮೈಸೂರಿನ ವೆಂಕಟೇಶ್ (32) ಕೆಂಗೇರಿಯ ಕೀರ್ತಿ (23), ಬಿಡದಿ ಸಮೀಪದ ಚಂದ್ರಶೇಖರ್ ಎಚ್.ಎಸ್. ಅಲಿಯಾಸ್ ಚಂದು (29), ಗುಬ್ಬಿಯ ಭರತ್ ಕೆ.ಎನ್. (24), ಧೀರಜ್ ಜಿ.ಕೆ. (32), ವೆಂಕಟೇಶ್ ಬೆಂಗಳೂರು (30), ಬಿಲ್ಲೇ ಪಾಳ್ಯ ಬಸವರಾಜು (25), ನಾಗರಾಜು (20) ಬಿಲ್ಲೇಪಾಳ್ಯ ಬಂಧಿತ ಆರೋಪಿಗಳು.
ಶಿರಾ ಡಿವೈಎಸ್‌ಪಿ ಎಲ್.ಕುಮಾರಪ್ಪ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು ಸದರಿ ತಂಡವು 13 ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದೆ. ಕೊಲೆಯನ್ನು ಏಳು ಜನರು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರು ಜನರು ಕೊಲೆಗೆ ಸಹಕರಿಸಿದ್ದಾರೆ. ಆರೋಪಿಗಳಲ್ಲಿ ಆರು ಜನ ಆರೋಪಿಗಳು ಗುಬ್ಬಿ ಟೌನ್ ವಾಸಿಗಳಾಗಿದ್ದು ಇಬ್ಬರು ಮಂಡ್ಯ ವಾಸಿಗಳು, ಇಬ್ಬರು ಮೈಸೂರು ವಾಸಿಗಳು, ಇಬ್ಬರು ರಾಮನಗರ ಮತ್ತು ಒಬ್ಬ ಬೆಂಗಳೂರು ನಗರ ವಾಸಿಯಾಗಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ..
ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಡಿವೈಎಸ್‌ಪಿ ಎಲ್.ಕುಮಾರಪ್ಪ, ಅಧಿಕಾರಿಗಳಾದ ರವಿಕುಮಾರ್, ಎಫ್.ಕೆ.ನದಾಫ್, ಅವಿನಾಶ್, ಸಿಬ್ಬಂದಿ ಶಾಂತರಾಜು, ಸೈಮನ್, ವಿಕ್ಟರ್, ಇನಾಯತ್, ರಮೇಶ್, ಮಹೇಶ್, ಗೋಪಿನಾಥ, ಮಂಜುನಾಥ್‌ಸ್ವಾಮಿ, ನವೀನ್, ಮಾರುತೇಶ್, ಫಾರೂಖ್, ಗಿರೀಶ್ ಶ್ರಮವಹಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.
ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಕೆಲವು ವಾರಗಳ ಹಿಂದೆ ಇಬ್ಬರು ದಲಿತ ಯುವಕರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕರಿಶೆಟ್ಟಿ ಹಟ್ಟಿ ಬಳಿ ಎರಡು ವಾರಗಳ ಹಿಂದೆ ವ್ಯಕ್ತಿಯೊಬ್ಬರ ಕೊಲೆ ನಡೆದಿತ್ತು. ಈ ಘಟನೆಗಳ ಬೆನ್ನಲ್ಲೇ ಕುರಿಮೂರ್ತಿಯವರ ಕೊಲೆ ನಡೆದಿದ್ದು ಆತಂಕ ಸೃಷ್ಟಿಸಿತ್ತು.
ಇದನ್ನೂ ಓದಿರಿ: ಔಷಧಿ ಪ್ಯಾಕೇಜ್‌ನಲ್ಲಿ ‘ಭಾಜಪ’ ಹೆಸರು: ಪಕ್ಷದ ಪ್ರಚಾರಕ್ಕೆ ಜನರ ಹಣ ದುರ್ಬಳಕೆ?
ಪೆದ್ದನಹಳ್ಳಿ ಪ್ರಕರಣ
ಪೆದ್ದನಹಳ್ಳಿಯಲ್ಲಿ ಗ್ರಾಮದಲ್ಲಿ ಏಪ್ರಿಲ್ 21ರ ರಾತ್ರಿ ಪೆದ್ದನಹಳ್ಳಿ ಗ್ರಾಮದ ಗಿರೀಶ್ (ಮಾದಿಗ ಸಮುದಾಯ), ಮಂಚಲದೊರೆ ಗ್ರಾಮದ ಗಿರೀಶ್ (ನಾಯಕ ಸಮುದಾಯ) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸವರ್ಣೀಯರನ್ನು ಬಂಧಿಸಲಾಗಿದೆ. (ಪೆದ್ದನಹಳ್ಳಿ ಪ್ರಕರಣ ಕುರಿತು ಓದಿರಿ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!)
ತುಮಕೂರು: ಮತ್ತೊಂದು ಕೊಲೆ ಪ್ರಕರಣ
ತುಮಕೂರು ತಾಲ್ಲೂಕು ಕೋರಾ ಹೋಬಳಿ ಜಕ್ಕೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 29ನೇ ತಾರೀಕು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಊರಿನ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯ ಚಾನೆಲ್‌ನಲ್ಲಿ ಮಾದಿಗ ಸಮುದಾಯದ ಮುತ್ತುರಾಜ (26) ಎಂಬ ಯುವಕನ ಶವ ಪತ್ತೆಯಾಗಿದ್ದರು. ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆಂದೇ ಬಿಂಬಿಸಲಾಗಿತ್ತು. ಆದರೆ ಮೇ 17ರಂದು ಎಸ್.ಸಿ. ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸವರ್ಣೀಯ ವ್ಯಕ್ತಿಯನ್ನು ಆರೋಪಿ ಎಂದು ಗುರುತಿಸಲಾಗಿದೆ. (ಸಂಪೂರ್ಣ ಸುದ್ದಿ ಇಲ್ಲಿ ಓದಿರಿ: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?)