ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ
PC: [email protected] Isaac

ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಪುಲ್ ಪಟೇಲ್‌ರವರ ಕೊರೊನಾ ನಿರ್ವಹಣೆ ಟೀಕಿಸಿದ್ದ ಮತ್ತು ಕೇಂದ್ರವು “ಜೈವಿಕ ಶಸ್ತ್ರಾಸ್ತ್ರ” ವನ್ನು ಬಳಸಿದೆ ಎಂದು ಆರೋಪಿಸಿದ್ದ ಲಕ್ಷದ್ವೀಪ ಚಲನಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದಕ್ಕೆ ಬಿಜೆಪಿಯಲ್ಲಿಯೇ ಆಕ್ರೋಶ ಭುಗಿಲೆದ್ದಿದೆ. ಈ ಕುರಿತು ಪ್ರತಿಭಟನೆಯ ಭಾಗವಾಗಿ 15 ಬಿಜೆಪಿ ನಾಯಕರು ತಮ್ಮ ರಾಜೀನಾಮೆ ಸಲ್ಲಿಸಿದ್ದು, ಬಿಜೆಪಿ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ.

12 ಜನ ಬಿಜೆಪಿ ನಾಯಕರು ಮತ್ತು ಇತರ ಕಾರ್ಯಕರ್ತರು ದೂರಿನ ಪ್ರತಿಗೆ ಸಹಿ ಮಾಡಿದ್ದು, ಲಕ್ಷದ್ವೀಪದ ಬಿಜೆಪಿ ಮುಖ್ಯಸ್ಥ ಸಿ ಅಬ್ದುಲ್ ಖಾದರ್ ಹಾಜಿಯವರಿಗೆ ಸಲ್ಲಿಸಿದ್ದಾರೆ. “ಲಕ್ಷದ್ವೀಪದ ಆಡಳಿತಾಧಿಕಾರಿಯವರ ಜನವಿರೋಧಿ ಕ್ರಮಗಳು, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ದೂರಿನಲ್ಲಿ ಹೇಳಲಾಗಿದೆ.

ನಿರ್ಮಾಪಕಿ ಆಯಿಷಾ ಸುಲ್ತಾನ ಅವರನ್ನು ಈ ಬಿಜೆಪಿ ನಾಯಕರು ಬೆಂಬಲಿಸಿದ್ದಾರೆ. “ಚೆಟ್ಲಾಟ್ ನಿವಾಸಿ ಆಯಿಷಾ ಸುಲ್ತಾನಾ ಕೂಡ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪದಲ್ಲಿ ಮೊದಲು ಯಾವುದೇ ಕೋವಿಡ್‌ ಪ್ರಕರಣಗಳಿರಲಿಲ್ಲ. ಆದರೆ ಹೊಸ ಆಡಳಿತಾಧಿಕಾರಿಯ ಆಗಮನದೊಂದಿಗೆ, ಅವರ ಅವೈಜ್ಞಾನಿಕ, ಬೇಜವಾಬ್ದಾರಿಯುತ ನಿರ್ಧಾರಗಳಿಂದ ಕೋವಿಡ್‌ ಪ್ರಕರಣಗಳು ದಿಢೀರನೆ ಹೆಚ್ಚಾಗಿವೆ ಎಂದು ವಾಸ್ತವವನ್ನು ಅವರು ಮಾತನಾಡಿದ್ದಾರೆ. ಅಷ್ಟಕ್ಕೆ ಪೊಲೀಸರಿಗೆ ನೀವು ನೀಡಿದ ದೂರಿನ ಆಧಾರದ ಮೇಲೆ, ಆಯಿಷಾ ಸುಲ್ತಾನಾ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಸರಿಯಲ್ಲ” ಎಂದು ಬಿಜೆಪಿ ನಾಯಕರು ದೂರಿದ್ದಾರೆ.

ನೀವು ಆ ಸಹೋದರಿಯ ವಿರುದ್ಧ ತಪ್ಪು ಮತ್ತು ಅನ್ಯಾಯಯುತ ದೂರು ನೀಡಿದ್ದೀರಿ. ಅವರ ಕುಟುಂಬ ಮತ್ತು ಆಕೆಯ ಭವಿಷ್ಯವನ್ನು ಹಾಳುಮಾಡುತ್ತಿದ್ದೀರಿ. ಹಾಗಾಗಿ ನಾವು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಲ್ಲಿಫುಝ ತಿಳಿಸಿದ್ದಾರೆ.

“ಲಕ್ಷದ್ವೀಪದಲ್ಲಿ ಕೊರೊನಾ ಪ್ರಕರಣಗಳು ಶೂನ್ಯವಾಗಿದ್ದವು. ಈಗ ಪ್ರತಿದಿನ 100 ಪ್ರಕರಣಗಳನ್ನು ವರದಿ ಮಾಡುತ್ತಿದೆ. ಕೇಂದ್ರ ಸರ್ಕಾರವು “ಜೈವಿಕ ಶಸ್ತ್ರಾಸ್ತ್ರ” ಬಳಸುತ್ತಿದೆ ಎಂದು ನಾನು ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ” ಎಂದು ಆಯಿಷಾ ಸುಲ್ತಾನಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹಾಗಾಗಿ ಅವರ ವಿರುದ್ಧ ಲಕ್ಷದ್ವೀಪದ ಬಿಜೆಪಿ ಮುಖ್ಯಸ್ಥ ಸಿ ಅಬ್ದುಲ್ ಖಾದರ್ ಹಾಜಿ ದೇಶದ್ರೋಹದ ದೂರು ನೀಡಿದ್ದರು. ಅದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಕವರತ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.


ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

LEAVE A REPLY

Please enter your comment!
Please enter your name here