Homeಮುಖಪುಟಸಿ.ಟಿ.ರವಿ, ಬೊಮ್ಮಾಯಿ, ಕಟೀಲ್‌ ಮನೆಗೂ 200 ಯುನಿಟ್ ವಿದ್ಯುತ್‌ ಫ್ರೀ: ಕಾಲೆಳೆದ ಕಾಂಗ್ರೆಸ್

ಸಿ.ಟಿ.ರವಿ, ಬೊಮ್ಮಾಯಿ, ಕಟೀಲ್‌ ಮನೆಗೂ 200 ಯುನಿಟ್ ವಿದ್ಯುತ್‌ ಫ್ರೀ: ಕಾಲೆಳೆದ ಕಾಂಗ್ರೆಸ್

ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ (ಪದವಿ ಪಡೆದಿದ್ದವರಿದ್ರೆ ಮಾತ್ರ)- ಕಾಂಗ್ರೆಸ್

- Advertisement -
- Advertisement -

ಐದು ಗ್ಯಾರಂಟಿಗಳ ಜಾರಿಯ ಸ್ಪಷ್ಟ ಚಿತ್ರಣವನ್ನು ಕಾಂಗ್ರೆಸ್‌ ನೀಡಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿಗಳ ಜಾರಿಯ ಕುರಿತು ವಿವರಣೆಗಳನ್ನು ನೀಡಿದ್ದಾರೆ.

ಅದರ ಬಳಿಕ ಕರ್ನಾಟಕ ಕಾಂಗ್ರೆಸ್‌ ಟ್ವೀಟ್ ಮಾಡಿ ರಾಜ್ಯ ಬಿಜೆಪಿ ನಾಯಕರನ್ನು ಕಾಲೆಳೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ.

“ಕಟೀಲ್ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ! ಬೊಮ್ಮಾಯಿಯವರೇ, ನಿಮ್ಮ ಮನೆಗೂ ಫ್ರೀ! ಶೋಭಾ ಕರಂದ್ಲಾಜೆ ಅವರೇ, ನಿಮಗೂ ಪ್ರಯಾಣ ಫ್ರೀ! ಸಿ.ಟಿ.ರವಿ ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ! ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

“ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ” ಎಂದು ಕಾಂಗ್ರೆಸ್ ತಿಳಿಸಿದೆ.

“ಕೈಲಾಗದವರು ಮೈ ಪರಚಿಕೊಂಡಂತಿದೆ ಕರ್ನಾಟಕ ಬಿಜೆಪಿಯ ಸ್ಥಿತಿ! 1 ಡಾಲರ್‌ಗೆ 15 ರೂಪಾಯಿ, ರೈತರ ಆದಾಯ ಡಬಲ್, 2022ರಲ್ಲಿ ಎಲ್ಲರಿಗೂ ವಸತಿ ಎಂದು ಸುಳ್ಳು ಭರವಸೆ ಕೊಟ್ಟು ವಂಚಿಸಿದವರಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆ ಇದೆಯೇ?” ಎಂದು ಪ್ರಶ್ನಿಸಿದೆ.

“ನಾವು ಪ್ರಶ್ನೆಗಳಿಗೆ ಹೆದರಿ ಓಡುವವರಲ್ಲ, ಬಿಜೆಪಿಗೆ ತಾಕತ್ತಿದ್ದರೆ ಮೋದಿಯವರಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಮಾಡಿಸಲಿ” ಎಂದು ಸವಾಲು ಹಾಕಿದೆ.

ಈ ಕುರಿತು ಬಿಜೆಪಿ ಪ್ರತಿಕ್ರಿಯಿಸಿ, “ಪ್ರತಿ ಮನೆಗೂ 200 ಯುನಿಟ್‌ ವಿದ್ಯುತ್‌ ಉಚಿತ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌,‍ ಕಾಂಗ್ರೆಸ್ ಅಭ್ಯರ್ಥಿಗಳು ಮನೆಮನೆಗೆ ಹೋಗಿ ಕೂಗಿದರು. ಈಗ ಒಂದು ವರ್ಷದ ಸರಾಸರಿ ವಿದ್ಯುತ್‌ ಬಳಕೆ ಎಷ್ಟಿತ್ತೋ, ಅದರ ಮೇಲೆ 10% ಅಷ್ಟು ‘ಮಾತ್ರ’ ಉಚಿತ ಎಂದು ಜನರಿಗೆ ಶಾಕ್‌ ನೀಡುತ್ತಿದ್ದಾರೆ. ಎರಡು ನಾಲಗೆಯ ಇಬ್ಬಂದಿ ಪಕ್ಷ ಕಾಂಗ್ರೆಸ್‌” ಎಂದು ಟ್ವೀಟ್ ಮಾಡಿದೆ.

ಜುಲೈ 1 ರಿಂದ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡಲಾಗುವುದು. ಆಗಸ್ಟ್ 15 ರಂದು ಮನೆಯೊಡತಿಯ ಖಾತೆಗೆ 2,000 ರೂ ಜಮಾ ಮಾಡಲಾಗುವುದು. ಜುಲೈ ಒಂದರಿಂದ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು. ಜೂನ್ 11 ರಂದು ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮೊದಲ ಗ್ಯಾರಂಟಿ – ಗೃಹ ಜ್ಯೋತಿ

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಎಲ್ಲರಿಗೂ ಕೊಡುತ್ತೇವೆ. ಇದನ್ನು ಜಾರಿ ಮಾಡಲು ತೀರ್ಮಾನಿಸಿದ್ದೇವೆ. 199 ಯೂನಿಟ್‌ವರೆಗೂ ಫ್ರಿ ವಿದ್ಯುತ್ ಕೊಡುತ್ತೇವೆ. 12 ತಿಂಗಳ ಸರಾಸರಿ ನೋಡುತ್ತೇವೆ. ಅದರ ಮೇಲೆ 10% ಉಚಿತವಾಗಿ ಕೊಡುತ್ತೇವೆ. ಈ ವರ್ಷದ ಜುಲೈ 1 ರಿಂದ ಫ್ರೀ ಜಾರಿಯಾಗುತ್ತದೆ ಎಂದರು. ಆದರೆ ಇದುವರೆಗೂ ಉಳಿಸಿಕೊಂಡಿರುವ ಬಾಕಿಯನ್ನು ಜನರೇ ಕಟ್ಟಬೇಕು ಎಂದರು.

ಎರಡನೇ ಗ್ಯಾರಂಟಿ – ಗೃಹ ಲಕ್ಷ್ಮೀ

ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುತ್ತೇವೆ. ಅದಕ್ಕಾಗಿ ಅರ್ಜಿ ಆಧಾರ್ ಕಾರ್ಡ್, ಬ್ಯಾಂಕ್ ಡಿಟೈಲ್ಸ್ ಕೊಡಬೇಕು. ಮನೆ ಯಜಮಾನಿಗೆ ಎಂದು ಹೇಳಿದ್ದೇವೆ. ಅವರ ಖಾತೆಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ. ಜೂನ್ 15 ರಿಂದ ಜುಲೈ 15ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜುಲೈ 15 ರಿಂದ ಆಗಸ್ಟ್ 15 ರೊಳಗೆ ಪ್ರಕ್ರಿಯೆ ಮಾಡಿ ಆಗಸ್ಟ್ 15ನೇ ತಾರೀಖು ಎಲ್ಲ ಮನೆಯೊಡತಿಯರ ಖಾತೆಗೆ ಹಣ ಜಮಾ ಮಾಡುತ್ತೇವೆ. ಬಿಪಿಎಲ್ ಮತ್ತು ಎಪಿಎಲ್ ಇಬ್ಬರೂ ಅರ್ಜಿ ಹಾಕಬಹುದು. ಎಲ್ಲರಿಗೂ ಕೊಡುತ್ತೇವೆ ಎಂದರು. ಅರ್ಜಿ ಸಲ್ಲಿಸುವಾಗ ಮನೆಯಲ್ಲಿ ಯಾರು ಯಜಮಾನಿ ಎಂದು ಸ್ಪಷ್ಟಪಡಿಸಬೇಕು ಎಂದರು.

ಇದುವರೆಗೂ ವಿಶೇಷ ಚೇತನರು, ಹಿರಿಯ ವಯಸ್ಸಿನವರು, ವಿಧವಾ ವೇತನ ಪಡೆಯುತ್ತಿರುವವರು ಸಹ ಈ ಗೃಹ ಲಕ್ಷ್ಮೀ ಯೋಜನೆಗೆ ಅರ್ಹರಾಗಿದ್ದಾರೆ. ಆ ಪಿಂಚಣಿ ಜೊತೆಗೆ ಈ 2,000 ರೂ ಸಹ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

10 ಕೆಜಿ ಅಕ್ಕಿ ಉಚಿತ

ಜುಲೈ 1ನೇ ತಾರೀಖಿನಿಂದ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು. ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ಸದ್ಯ 35 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಮುಂದೆ ಅವರಿಗೂ ತಲಾ 10 ಕೆಜಿ ಕೊಡಲಾಗುವುದು. ಸದ್ಯಕ್ಕೆ ಸ್ಟಾಕ್ ಇಲ್ಲ. ಒಂದು ತಿಂಗಳಲ್ಲಿ ಹೇಗಾದರೂ ಮಾಡಿ ಕೊಂಡುಕೊಂಡು ಜುಲೈ 1 ರಿಂದ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ.

4 ನೇ ಗ್ಯಾರಂಟಿ – ಶಕ್ತಿ

ಸಮಾಜದಲ್ಲಿ 50% ಮಹಿಳೆಯರು ಇದ್ದಾರೆ. ಎಲ್ಲಾ ಮಹಿಳೆಯರಿಗೆ ಅವರ ಆರ್ಥಿಕ ಸ್ಥಾನಮಾನ ಹೊರತು ಪಡಿಸಿ ಎಲ್ಲರಿಗೂ ಉಚಿತ ಬಸ್ ಪ್ರಯಾಣ ಘೋಷಿಸುತ್ತಿದ್ದೇವೆ. ಜೂನ್ 11 ರಂದು ಈ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.

ಇದನ್ನೂ ಓದಿರಿ: ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದು: ಡಾ.ಹೆಚ್.ಸಿ ಮಹದೇವಪ್ಪ

ನಮ್ಮ ರಾಜ್ಯದೊಳಗೆ, ಕರ್ನಾಟಕದವರಿಗೆ ಮಾತ್ರ ಉಚಿತ ಪ್ರಯಾಣ ಇರುತ್ತದೆ. ಎ.ಸಿ ಬಸ್ ಮತ್ತು ಸ್ಲೀಪರ್ ಬಸ್, ಲಕ್ಸುರಿ ಬಸ್ ಹೊರತುಪಡಿಸಿ ಉಳಿದ ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣವಿರುತ್ತದೆ. ಅಂದರೆ ಶೇ.90 ರಷ್ಟು ಬಸ್‌ಗಳಲ್ಲಿ ರಾಜ್ಯದ ಎಲ್ಲೆಡೆ ಉಚಿತ ಪ್ರಯಾಣ ಇರುತ್ತದೆ. ಇನ್ನು ಪುರುಷರಿಗೆ 50% ಆಸನ ಮೀಸಲು ಮಾಡಲಾಗುತ್ತದೆ.

5ನೇ ಗ್ಯಾರಂಟಿ ಯುವನಿಧಿ – ಯುವಜನರಿಗೆ 3000 ನಿರುದ್ಯೋಗ ಭತ್ಯೆ

2022-23 ರಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದವರಿಗೆ 24 ತಿಂಗಳುಗಳವರೆಗೆ ಪ್ರತಿ ತಿಂಗಳಿಗೆ 3000 ರೂ ನೀಡಲಾಗುವುದು. ಅರ್ಹರು ಅರ್ಜಿ ಸಲ್ಲಿಸಬೇಕು. ಎಲ್ಲಾ ಜಾತಿ ವರ್ಗದವರೂ, ಟ್ರಾನ್ಸ್‌ಜೆಂಡರ್‌ ಸಮುದಾಯದವರು ಸಹ ಇದಕ್ಕೆ ಅರ್ಹರು ಎಂದರು.

ಇದೇ ಸಂದರ್ಭದಲ್ಲಿ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಯವರು ಪ್ರತಿಯೊಬ್ಬರಿಗೂ 15 ಲಕ್ಷ ರೂ ಕೊಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ಅಚ್ಛೇದಿನ್ ತರುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅವುಗಳನ್ನು ಜಾರಿಗೆ ತಂದರೆ? ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ, ಮುಂದಿಯೂ ನುಡಿದಂತೆ ನಡೆಯುತ್ತೇವೆ ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...