Homeಮುಖಪುಟಒಡಿಸ್ಸಾ ಭೀಕರ ರೈಲು ದುರಂತಕ್ಕೆ 233 ಮಂದಿ ಸಾವು, 900ಕ್ಕೂ ಅಧಿಕ ಮಂದಿಗೆ ಗಾಯ: ಮೂರು...

ಒಡಿಸ್ಸಾ ಭೀಕರ ರೈಲು ದುರಂತಕ್ಕೆ 233 ಮಂದಿ ಸಾವು, 900ಕ್ಕೂ ಅಧಿಕ ಮಂದಿಗೆ ಗಾಯ: ಮೂರು ರೈಲುಗಳು ಹಳಿತಪ್ಪಿದ್ದು ಹೇಗೆ?

- Advertisement -
- Advertisement -

ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 233 ಮಂದಿ ಮೃತಪಟ್ಟು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ತಮ್ಮದಲ್ಲದ ತಪ್ಪಿಗೆ ಸಾವನಪ್ಪಿದ ಈ ಜನರ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ.

ನಿನ್ನೆ ಸಂಜೆ 7 ಗಂಟೆ ಹೊತ್ತಿನಲ್ಲಿ ಒಡಿಶಾದ ಬಾಲಸೋರ್ ಬಳಿಯ ಬಹನಾಗ ರೈಲು ನಿಲ್ದಾಣದ ಬಳಿ ಮೂರು ರೈಲುಗಳು ಹಳಿ ತಪ್ಪಿದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ. ಟ್ರೈನ್‌ಗಳು ಡಿಕ್ಕಿ ಹೊಡೆದ ಪರಿಣಾಮ ರೈಲಿನ 3 ಸ್ಲೀಪರ್ ಕೋಚ್‌ಗಳನ್ನ ಹೊರತುಪಡಿಸಿ ಉಳಿದ 18 ಬೋಗಿಗಳು ಹಳಿ ತಪ್ಪಿ ಮತ್ತೊಂದು ಹಳಿಯ ಮೇಲೆ ಬಿದ್ದಿವೆ.

ಮೂರು ರೈಲುಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದು ಹೇಗೆ

ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹೌರಾಗೆ ತೆರಳುತ್ತಿದ್ದಾಗ ಹಲವಾರು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು.

ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಚೆನ್ನೈಗೆ ತೆರಳುತ್ತಿದ್ದಾಗ, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಹಳಿತಪ್ಪಿದ ಕೋಚ್‌ಗಳಿಗೆ ಡಿಕ್ಕಿ ಹೊಡೆದಿದೆ.

ಹಳಿತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ನ 10-12 ಬೋಗಿಗಳು ನಂತರ ಗೂಡ್ಸ್ ರೈಲಿನ ವ್ಯಾಗನ್‌ಗಳಿಗೆ ಡಿಕ್ಕಿ ಹೊಡೆದವು. ಹಾಗಾಗಿ ಭೀಕರ ದುರಂತ ಸಂಭವಿಸಿದೆ.

ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು, ಸೂಪರ್‌ಫಾಸ್ಟ್ ರೈಲಿನ ಪಲ್ಟಿಯಾದ ಕೋಚ್‌ಗಳಲ್ಲಿ ಹೆಚ್ಚಿನವರು ಸಿಕ್ಕಿಹಾಕಿಕೊಂಡಿದ್ದಾರೆ. ಕೋರಮಂಡಲ್‌ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

ಕೋಲ್ಕತ್ತಾ ಬಳಿಯ ಶಾಲಿಮಾರ್ ನಿಲ್ದಾಣದಿಂದ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ಈ ರೈಲು ತೆರಳುತ್ತಿದ್ದಾಗ ಬಹನಾಗಾ ಬಜಾರ್ ನಿಲ್ದಾಣದ ಬಳಿ ರಾತ್ರಿ 7.20ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಗಾಯಗೊಂಡ ಪ್ರಯಾಣಿಕರನ್ನು ಬಾಲಸೋರ್ ವೈದ್ಯಕೀಯ ಕಾಲೇಜು, ಸೊರೊದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಗೋಪಾಲಪುರ, ಖಾಂತಪಾದದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿದೆ.

ವಿಶೇಷ ಪರಿಹಾರ ಆಯುಕ್ತರ (ಎಸ್‌ಆರ್‌ಸಿ) ಕಚೇರಿಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಅಪಘಾತದ ಸ್ಥಳಕ್ಕೆ ತಂಡಗಳನ್ನು ಕಳುಹಿಸಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಅಗ್ನಿಶಾಮಕ ದಳವನ್ನು ನಿಯೋಜಿಸಿದ್ದಾರೆ. ಎಸ್‌ಆರ್‌ಸಿಯ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಒಡಿಶಾ ಸರ್ಕಾರವು ಕಾರ್ಯಾಚರಣೆಗೆ ಸಹಾಯ ಮಾಡಲು ಅಪಘಾತ ಸ್ಥಳದಲ್ಲಿ ಜನರೇಟರ್ ಮತ್ತು ಲೈಟ್‌ ವ್ಯವಸ್ಥೆ ಮಾಡಿದೆ.

ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಐದು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದೆ ಎಂದು ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಒಡಿಶಾ ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಹೆಚ್ಚುವರಿ ನಿರ್ದೇಶನಾಲಯ ಕೂಡ 15 ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಿದೆ.

ರೈಲ್ವೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರ ನಿನ್ನೆ ರಾತ್ರಿಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಾಳುಗಳಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. ಘಟನೆಯ ಮೂಲ ಕಾರಣವನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ಘೋಷಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಮುಂಜಾನೆ ಹೇಳಿದ್ದಾರೆ.

ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲು, ಅಪಘಾತ ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಲು ಮತ್ತು ರಾಜ್ಯ ಮಟ್ಟದಿಂದ ಯಾವುದೇ ಹೆಚ್ಚುವರಿ ಸಹಾಯದ ಅಗತ್ಯವಿದ್ದರೆ ಎಸ್‌ಆರ್‌ಸಿಗೆ ತಿಳಿಸಲು ಬಾಲಸೋರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸೂಚಿಸಲಾಗಿದೆ.

ಕೋರಮಂಡಲ್ ಎಕ್ಸ್‌ಪ್ರೆಸ್‌ ಎಂಜಿನ್, ಗೂಡ್ಸ್ ರೈಲಿನ ಮೇಲೆ ಹತ್ತಿರುವುದನ್ನು ಘಟನೆಯ ದೃಶ್ಯಾವಳಿಗಳು ತೋರಿಸಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಎರಡೂ ರೈಲುಗಳು ಒಂದೇ ರೈಲು ಹಳಿಯಲ್ಲಿದ್ದವು. ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.

ಸಹಾಯವಾಣಿ ಸಂಖ್ಯೆ 06782262286 ತೆರೆಯಲಾಗಿದ್ದು, ತುರ್ತು ಸೇವೆ ಒದಗಿಸಲಾಗಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರತಿಕ್ರಿಯಿಸಿದ್ದು, “ಘಟನೆ ತಿಳಿದು ಆಘಾತವಾಗಿದೆ. ಪಶ್ಚಿಮ ಬಂಗಾಳದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಶಾಲಿಮಾರ್-ಕೊರಮಂಡಲ್‌ ಎಕ್ಸ್‌ಪ್ರೆಸ್ ಇಂದು ಸಂಜೆ ಬಾಲಸೋರ್ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಜನರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಆಘಾತವಾಯಿತು” ಎಂದಿದ್ದಾರೆ.

“ನಮ್ಮ ಜನರ ಸಲುವಾಗಿ ನಾವು ಒಡಿಶಾ ಸರ್ಕಾರ ಮತ್ತು ಆಗ್ನೇಯ ರೈಲ್ವೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮ ತುರ್ತು ನಿಯಂತ್ರಣ ಕೊಠಡಿಯನ್ನು (033- 22143526/ 22535185) ಸಕ್ರಿಯಗೊಳಿಸಲಾಗಿದೆ. ಒಡಿಶಾ ಸರ್ಕಾರ ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಸಹಕರಿಸಲು, ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ನಾವು 5- 6 ಸದಸ್ಯರ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...