Homeಮುಖಪುಟಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

- Advertisement -
- Advertisement -

ಮಹಾತ್ಮಾ ಗಾಂಧಿ ಎಂಬ ಮನುಷ್ಯನನ್ನು ನಾಥುರಾಮ್ ಗೋಡ್ಸೆ ಎಂಬ ಹಿಂದೂ ಒಬ್ಬ ಕೊಲೆಮಾಡಿ (ಜನವರಿ 30, 1948) 73 ವರ್ಷಗಳಾಗಿವೆ. ಎಪ್ಪತ್ತೊಂಭತ್ತು ವರ್ಷತುಂಬಿದ್ದ ಹಣ್ಣು ಮುದುಕ ಗಾಂಧೀಜಿಯವರ ಎದೆಗೆ ಗುಂಡಿಕ್ಕುವ ಮುನ್ನ ಮೂವತ್ತೆಂಟರ ಹರೆಯದ ನಾಥೂರಾಮ್ ವಿನಾಯಕ ಗೋಡ್ಸೆ ಒಮ್ಮೆ ಅವರ ಕಾಲುಮುಟ್ಟಿ ನಮಸ್ಕರಿಸಿದ್ದನಂತೆ. ಅದು ನಟನೆಯಲ್ಲ, ನಿಜವಾದ ಗೌರವ ಸಲ್ಲಿಕೆ ಅಂತ ಗೋಡ್ಸೆ ತನ್ನ ’ನಾನೇಕೆ ಗಾಂಧಿಯನ್ನು ಕೊಂದೆ’ ಎಂಬ ಹೇಳಿಕೆಯಲ್ಲಿ ದಾಖಲಿಸುತ್ತಾನೆ. ಗುಂಡೇಟು ತಿಂದು ಕುಸಿಯುವ ಮುನ್ನ ಗಾಂಧಿ “ಹೇ ರಾಮ್ ಅಂತ ಉದ್ಗರಿಸಿದ್ದರಂತೆ. ಆ ಕುರಿತು ಭಿನ್ನಾಭಿಪ್ರಾಯಗಳಿವೆ. ಕೆಲವರ ಪ್ರಕಾರ ಗಾಂಧಿ ಮೌನವಾಗಿಯೇ ನೆಲಕ್ಕೆ ಕುಸಿದಿದ್ದರು. ಏನೇ ಇರಲಿ. ಒಂದು ವೇಳೆ ಅವರು ಹೇ ರಾಮ್ ಅಂತ ಹೇಳಿದ್ದು ನಿಜವೇ ಆಗಿದ್ದರೆ, ಗುಂಡು ಹಾರಿಸಿ ಕೈಚೆಲ್ಲಿ ನಿಂತಿದ್ದ ಗೋಡ್ಸೆಗೆ ಅದು ಗಾಂಧೀಜಿ ತನ್ನ ಹೆಸರು ಹಿಡಿದು ಪ್ರೀತಿಯಿಂದ ಕರೆದಂತೆ ಕೇಳಿಸಿರಬಹುದು.

1949ರ ನವಂಬರ್ ತಿಂಗಳ 15ನೇ ತಾರೀಖಿನಂದು ಅಂಬಾಲ ಜೈಲಿನಲ್ಲಿ ಗೋಡ್ಸೆ ಯಾವ ಭಾವ ವಿಕಾರವೂ ಇಲ್ಲದೆ ನೇಣುಗಂಬ ಏರಿದ್ದ ಅಂತ ಚರಿತ್ರೆ ದಾಖಲಿಸುತ್ತದೆ. ಗಾಂಧಿ ನಾವೆಲ್ಲ ಅಂದುಕೊಂಡಿರುವ ಗಾಂಧೀಜಿಯೇ ಆಗಿದ್ದಿದ್ದರೆ ಆ ದಿನ ಅವರ ಆತ್ಮ ಗೋರಿಯೊಳಗೆ ವಿಚಿತ್ರವಾಗಿ ಚಡಪಡಿಸಿರುತಿತ್ತು. ಗೋಡ್ಸೆಯನ್ನು ನೇಣಿಗೇರಿಸಬಾರದಿತ್ತು. ಆತನನ್ನು ಕೊಂದದ್ದು ಗಾಂಧೀಜಿಗೆ ಸಮ್ಮತವಾಗಿರುತ್ತಿರಲಿಲ್ಲ ಎನ್ನುವುದು ಅದಕ್ಕೆ ಒಂದು ಕಾರಣ. ಅದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣವಿದೆ. ತನ್ನ ಕೊನೆಯ ಹೇಳಿಕೆಯಲ್ಲಿ ಗೋಡ್ಸೆ ಹೇಳುತ್ತಾನೆ: “ನಾನು ಗಾಂಧೀಜಿಯನ್ನು ಕೊಂದದ್ದು ಒಂದು ಉದಾತ್ತವಾದ ಉದ್ದೇಶದಿಂದ. ಅದು ಏನೆಂದರೆ ಗಾಂಧೀಜಿ ಇಲ್ಲದ ಭಾರತದ ರಾಜಕೀಯ ಪ್ರಾಯೋಗಿಕವಾಗಿರುತ್ತದೆ, ಗಾಂಧೀಜಿ ಇಲ್ಲದ ಭಾರತದ ರಾಜಕೀಯಕ್ಕೆ ವೈರಿಗಳಿಗೆ ತಿರುಗೇಟು ನೀಡುವ ಶಕ್ತಿ ಬರುತ್ತದೆ. ಗಾಂಧೀಜಿ ಇಲ್ಲದ ಭಾರತ ತನ್ನ ಸೇನಾಬಲದಿಂದ ಸದೃಢವಾಗಿರುತ್ತದೆ. ಗಾಂಧೀಜಿ ಇಲ್ಲದ ಭಾರತದ ಜನ ಹೆಚ್ಚು ವಿವೇಕದಿಂದಲೂ, ವಿವೇಚನೆಯಿಂದಲೂ ವರ್ತಿಸುತ್ತಾರೆ ಎನ್ನುವ ಭರವಸೆ ನನಗಿದೆ.. ಅದಕ್ಕಾಗಿ ಗಾಂಧೀಜಿಯನ್ನು ಕೊಂದೆ..”. ಗೋಡ್ಸೆ ಬದುಕಿ ಗಾಂಧೀಜಿಯ ನಂತರದ ಭಾರತದಲ್ಲಿ ರಾಜಕೀಯ ತೋರಿದ ಪ್ರಾಯೋಗಿಕತೆ, ವಿವೇಕ, ವಿವೇಚನೆ ಇತ್ಯಾದಿಗಳನ್ನು ಕಣ್ಣಾರೆ ಕಾಣಬೇಕಿತ್ತು ಎನ್ನುವ ಕಾರಣಕ್ಕೆ ಆತನನ್ನು ನೇಣಿಗೇರಿಸಬಾರದಿತ್ತು.. ಗಾಂಧೀಜಿ ಇನ್ನೊಂದಷ್ಟು ದಿನ ಬದುಕಿ ಉಳಿದಿದ್ದರೂ ಭಾರತದಲ್ಲಿ ಮುಂದೆ ಏನೇನಾದವೋ ಅವೆಲ್ಲಾ ಆಗುತ್ತಿದ್ದವು. ಅದು ಬೇರೆ ವಿಚಾರ.

ಗಾಂಧೀಜಿಯವರನ್ನು ಕೊಂದ ನಂತರ ಸ್ವತಃ ಗೊಡ್ಸೆಗೆ ಬದುಕುವಾಸೆ ಇರಲಿಲ್ಲ. ಜೈಲಿನ ಬಾಗಿಲು ತೆರೆದಿರಿಸಿದ್ದರೂ ಆತ ಓಡಿ ಹೋಗುತ್ತಿರಲಿಲ್ಲ. ಗಾಂಧೀಜಿಯನ್ನು ನೆನೆದು, ಗಾಂಧೀವಾದಿಗಳ ಒತ್ತಾಯಕ್ಕೆ ಮಣಿದು ತನ್ನನ್ನು ಎಲ್ಲಿ ಕ್ಷಮಿಸಿಬಿಡುತ್ತಾರೋ ಎನ್ನುವ ಆತಂಕ ಗೋಡ್ಸೆಯನ್ನು ಕೊನೆಯತನಕವೂ ಕಾಡಿತ್ತಂತೆ. ಗಾಂಧೀಜಿಗೆ ನಾನು ತೋರದ ಕರುಣೆಯನ್ನು ಸರಕಾರದಿಂದ ನಾನು ಬಯಸುವುದಿಲ್ಲ ಅಂತ ಆತ ಸ್ಪಷ್ಟವಾಗಿ ಹೇಳಿದ್ದ. ಗಾಂಧೀಜಿಯವರ ಕೊಲೆಗಾರ ಎನ್ನುವ ಅವಮಾನವನ್ನು ಹೊತ್ತು ಬದುಕುವುದಕ್ಕಿಂತ ಸಾವು ಎಷ್ಟೋ ಮೇಲು ಅಂತ ಆತ ಗಾಂಧೀಜಿ ನೆಲಕ್ಕುರುಳಿದಾಕ್ಷಣ ನಿರ್ಧರಿಸಿದ್ದ. ಅಷ್ಟೇ ಆಸಕ್ತಿಯ ವಿಚಾರವೆಂದರೆ ಕೊನೆಯ ದಿನಗಳಲ್ಲಿ ಗಾಂಧೀಜಿ ಕೂಡಾ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದರು.

ಒಂದು ಕಾಲದಲ್ಲಿ ತಾನು 125 ವರ್ಷ ಬದುಕಬೇಕೆಂದು ಹೇಳಿದ್ದ ಗಾಂಧೀಜಿಗೆ ದೇಶ ವಿಭಜನೆಯಾಗುತ್ತಲೇ ಇನ್ನು ಶಾಶ್ವತವಾಗಿ ಹೊರಟುಬಿಡಬೇಕು ಎಂಬ ಮನೋಭಾವ ಆವರಿಕೊಂಡಿತ್ತು ಅಂತ ಆ ದಿನಗಳಲ್ಲಿ ಅವರ ಹತ್ತಿರವಿದ್ದ ಅನುಯಾಯಿಗಳು ದಾಖಲಿಸಿದ್ದಾರೆ. ಆದರೆ ಖಾಯಿಲೆ ಬಿದ್ದು ಸಾಯುವುದಕ್ಕಿಂತ ಕೊಲೆಯಾಗುವುದು ಮೇಲು ಎನ್ನುವುದಾಗಿತ್ತಂತೆ ಅವರ ನಿರ್ಧಾರ. “ಇಷ್ಟೆಲ್ಲಾ ಆಗಿ ಕಾಯಿಲೆಯಿಂದ ಸತ್ತರೆ ನಾನ್ಯಾವ ಸೀಮೆಯ ಮಹಾತ್ಮ? ಸತ್ತರೆ ಕೊಲೆಗಾರನ ಧಾಳಿಗೆ ಎದೆಯೊಡ್ಡಿ ರಾಮನಾಮ ಪಠಿಸುತ್ತಾ ಸಾಯಬೇಕು” ಅಂತ ತನ್ನ ಮೊಮ್ಮಗಳಾದ ಮನುಬೆನ್‌ಗೆ ಹೇಳಿದ್ದರಂತೆ. ಹಾಗೆಯೇ ಆಯಿತು. ಹೇಗೂ ಸಾಯಲು ತಯಾರಾಗಿದ್ದ ಗಾಂಧೀಜಿಯನ್ನು ಗೋಡ್ಸೆ ಕೊಂದ. ಜೀವಂತವಾಗಿ ಅಪ್ರಸ್ತುತನಾದ ತಾನು ಸತ್ತು ಪ್ರಸ್ತುತನಾಗಬೇಕೆಂದುಕೊಂಡಿರಬೇಕು ಗಾಂಧೀಜಿ – ಏಸುಕ್ರಿಸ್ತನಂತೆ, ಸಾಕ್ರೆಟಿಸನಂತೆ. ಅದನ್ನು ಪೂರೈಸಿಕೊಟ್ಟದ್ದು ಗೋಡ್ಸೆ.

PC : StarsUnfolded

ದೇಶ ವಿಭಜನೆಗೆ ಗಾಂಧೀಜಿ ಕಾರಣ ಎನ್ನುವುದಕ್ಕೋಸ್ಕರ ಕೊಂದೆ ಎನ್ನುತ್ತಾನೆ ಗೋಡ್ಸೆ. ಆದರೆ ಗಾಂಧೀಜಿಯ ಹತ್ಯೆಯ ಪ್ರಯತ್ನ ದೇಶ ವಿಭಜನೆಗೆ ಬಹಳಷ್ಟು ಮುಂದೆಯೇ ನಡೆದಿತ್ತು. ಒಂದಲ್ಲ, ಎರಡಲ್ಲ. ಮೂರು ಬಾರಿ ನಡೆದಿತ್ತು. ಮೊದಲ ಪ್ರಯತ್ನ ನಡೆದದ್ದು 1934ರಲ್ಲಿ. ಆಗ ವಿಭಜನೆ ನಡೆದಿರಲಿಲ್ಲ. ಆ ಮೊದಲ ಪ್ರಯತ್ನವೂ ನಡೆದದ್ದು ಗೋಡ್ಸೆ ಹುಟ್ಟಿದ ಪೂನಾದಲ್ಲಿಯೇ. ಆಗ ಅಲ್ಲಿ ಗಾಂಧೀಜಿ ಅಸ್ಪೃಶ್ಯತೆಯ ವಿರುದ್ಧ ಹೋರಾಡುತ್ತಿದ್ದರು!

ಸಾಮಾನ್ಯವಾಗಿ ರಾಜಕೀಯ ನಾಯಕರ ವಿರುದ್ಧ ಪ್ರತಿಭಟಿಸುವವರು “ಮುರ್ದಾಬಾದ್, “ಡೌನ್, ಡೌನ್ ಇತ್ಯಾದಿ ಘೋಷಣೆ ಕೂಗುತ್ತಾರೆ. ಆದರೆ ಗಾಂಧೀಜಿಯವರ ವಿರುದ್ಧ ಆ ಕಾಲದಲ್ಲಿ ಪ್ರತಿಭಟಿಸುವವರೆಲ್ಲಾ “ಗಾಂಧೀಜಿಯನ್ನು ಕೊಂದುಬಿಡಿ (death to Gandhiji)” ಎನ್ನುವ ಘೋಷಣೆಯನ್ನು ಮತ್ತೆ ಮತ್ತೆ ಕೂಗುತಿದ್ದರು.. ಅಂದಿಗೂ ಇಂದಿಗೂ ಇಂತಹದ್ದೊಂದು ಘೋಷಣೆಯ ದಾಳಿಗೆ ಒಳಗಾದವರಿಲ್ಲ ಎನ್ನಿಸುತ್ತದೆ. ಇದನ್ನು ಕೇಳಿ ಬೇಸತ್ತುಕೊಳ್ಳದ ಗಾಂಧೀಜಿ ಕೊನೆಗೆ ಅದನ್ನು ಒಪ್ಪಿಕೊಂಡು “ಆಗಲಿ ಕೊಂದುಬಿಡಿ” ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಗಾಂಧೀಜಿಯವರ ಮೇಲೆ ಭಾರಿ ಭಾರಿ ದಾಳಿಯಾಗುತ್ತಿದ್ದರೂ ಅದರ ಬಗ್ಗೆ ಯಾರಿಗೂ ಕಾಳಜಿ ಇರಲಿಲ್ಲ.

ಅಂದಿನ ಪೊಲೀಸರ ಮನಸ್ಥಿತಿ ಗೋಡ್ಸೆಯ ಮನಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಅವರಲ್ಲಿ ಹಲವರಿಗೆ ಹಿಂದೂ-ಮುಸ್ಲಿಂ ಸಂಘರ್ಷದ ಸಮಯದಲ್ಲಿ ಗಾಂಧೀಜಿ ಪಠಿಸುತಿದ್ದ ಶಾಂತಿ ಮಂತ್ರ ನಪುಂಸಕವಾದದಂತೆ ಕೇಳಿಸುತಿತ್ತು.. ಅವರೆಲ್ಲಾ ಹೇಳಿಕೇಳಿ ಬ್ರಿಟಿಷರ ಕೈಕೆಳಗೆ ಗಾಂಧೀಜಿಯ ವಿರುದ್ಧ ಕೆಲಸ ಮಾಡುತಿದ್ದವರು. ಸಾಲದ್ದಕ್ಕೆ ಹೆಚ್ಚಿನವರು ಯುದ್ಧಾಕಾಂಕ್ಷಿ ಕ್ಷತ್ರಿಯ ಜಾತಿಗಳಿಗೆ ಸೇರಿದವರು. ಗಾಂಧೀಜಿಯ ಕೊಲೆ ಸಂಚಿನ ಬಗ್ಗೆ ಬಂದ ಎಲ್ಲಾ ಗುಪ್ತ ಮಾಹಿತಿಗಳನ್ನೂ ಪೋಲಿಸರು ಕಡೆಗಣಿಸಿದ್ದರು. ಮುದುಕ ಬದುಕಿದರೆಷ್ಟು-ಸತ್ತರೆಷ್ಟು ಎನ್ನುವಂತಿತ್ತು ಅವರ ಮನೋಭಾವ. ಪೊಲೀಸರನ್ನು ನಿಯಂತ್ರಿಸುತಿದ್ದ ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಬಾಯಿ ಪಟೇಲರು ಗಾಂಧೀಜಿಯವರ ಆಪ್ತ ಶಿಷ್ಯ. ಉಕ್ಕಿನ ಮನುಷ್ಯ.

ಗಾಂಧೀಜಿಯ ಕೊನೆಯ ದಿನಗಳಲ್ಲಿ ನಡೆದ ಘಟನಾವಳಿಗಳನ್ನು ಗಮನಿಸಿದಾಗ ಆಯಕಟ್ಟಿನ ಜಾಗದಲ್ಲಿ ಇದ್ದವರೆಲ್ಲಾ ಸೇರಿ ಗಾಂಧೀಜಿಯನ್ನು ಎತ್ತಿಕೊಂಡು ಗೋಡ್ಸೆಯೆದುರು ನಿಲ್ಲಿಸಿದ್ದರೇನೋ ಎಂಬಂತೆ ಭಾಸವಾಗುತ್ತದೆ. ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ. ಇಂದಿಗೂ ಒಬ್ಬಂಟಿಯಲ್ಲ. ನೆಹರೂ ಗೋಡ್ಸೆಯನ್ನು ಹುಚ್ಚ ಅಂತ ಕರೆದರು. ಗೋಡ್ಸೆಗೆ ಗಾಂಧಿ ಹುಚ್ಚ ಅಂತ ಅನ್ನಿಸಿರಬೇಕು. ನಾವು ನಂಬಿದ್ದೇ ಸತ್ಯ ಅಂತ ಯೋಚಿಸುವುದೇ ಒಂದು ರೀತಿಯ ಹುಚ್ಚು. ನಮ್ಮ ಕಾಲದ ಶ್ರೇಷ್ಠ ರಾಜಕೀಯ ಮನಶಾಸ್ತ್ರಜ್ಞ ಅಶೀಶ್ ನಂದಿ ಹೇಳುವಂತೆ ಯಾವುದೇ ರಾಜಕೀಯ ಹತ್ಯೆ ನಡೆಸುವ ಒಬ್ಬಾತ ತಾನು ಎಂದೂ ಒಬ್ಬಂಟಿಯಾಗಿರುವುದಿಲ್ಲ. ಆತ ಸಮಾಜದ ಒಂದಷ್ಟು ಮಂದಿಯ ಯಾವುದೋ ರೀತಿಯ ಹುಚ್ಚನ್ನು ಪ್ರತಿನಿಧಿಸುತ್ತಾನೆ.

ನೇಣುಗಂಬದಿಂದ ಹೆಣವಾಗಿ ಇಳಿದ ಗೋಡ್ಸೆಯ ಅಂತ್ಯಕ್ರಿಯೆ ಅಂಬಾಲ ಜೈಲಿನ ಆವರಣದ ಹೊರಗೆ ನಡೆಯುತ್ತದೆ. ಅದು ಮುಗಿದ ತತ್‌ಕ್ಷಣ ಸರಕಾರ ಆ ಜಾಗವನ್ನು ನಿಷೇಧಿತ ಪ್ರದೇಶವನ್ನಾಗಿ ಮಾಡಿ ಸ್ಥಳವನ್ನು ಉತ್ತು ಇಡೀ ಪರಿಸರದಲ್ಲಿ ಹಸಿರು ಹುಲ್ಲು ನೆಡಿಸುತ್ತದೆ. ಆ ಜಾಗವನ್ನು ಯಾರೂ ಗುರುತಿಸದಂತೆ ಮಾರ್ಪಡಿಸುತ್ತದೆ. ಯಾರಾದರೂ ಗೋಡ್ಸೆಗೊಂದು ಗೋರಿ ಕಟ್ಟಿ ಅದನ್ನೊಂದು ಪವಿತ್ರ ಸ್ಥಳವನ್ನಾಗಿ ಮಾಡದಿರಲಿ ಎನ್ನುವ ಉದ್ದೇಶದಿಂದ ಸರಕಾರ ಹಾಗೆ ಮಾಡಿತ್ತು. ಗೋಡ್ಸೆ ಕೊಂದ ಗಾಂಧಿ ಮರಣಾನಂತರ ಉತ್ಕಟವಾಗಿ ಬದುಕಿದರು. ಗಾಂಧಿಯನ್ನು ಕೊಂದ ಗೋಡ್ಸೆಯೂ ಹಾಗೆಯೇ. ಅನಾಮಧೇಯನಾಗಿ ಅಳಿದು ಹೋಗುತಿದ್ದ ಗೋಡ್ಸೆ ಎಂಬ ಅಂಚೆ ಇಲಾಖೆ ನೌಕರನ ಮಗ ಚರಿತ್ರೆಯಲ್ಲಿ ಶಾಶ್ವತ ಸ್ಥಾನ ಪಡೆದುಬಿಟ್ಟ. ಗಾಂಧೀಜಿಯವರನ್ನು ಅರಿಯುವ ಪ್ರಯತ್ನದ ಜತೆಜತೆಗೆ ಗೋಡ್ಸೆಯನ್ನು ಅರಿಯುವ ಪ್ರಯತ್ನವೂ ನಡೆಯುತ್ತಲೇ ಇದೆ.

ಗಾಂಧೀಜಿಯವರನ್ನು ಸಾರ್ವಜನಿಕವಾಗಿ ಒಪ್ಪಿ ಅಂತರಂಗದಲ್ಲಿ ದ್ವೇಷಿಸುವರು ಹಲವರಿದ್ದಾರೆ. ಗೋಡ್ಸೆಯನ್ನು ಬಹಿರಂಗವಾಗಿ ಬಹಿಷ್ಕರಿಸಿ ಅಂತರಂಗದ ಅತಿಥಿಯನ್ನಾಗಿ ಮಾಡಿಕೊಂಡವರು ಅದಕ್ಕಿಂತ ಹೆಚ್ಚಿದ್ದಾರೆ. ಭಾರತದಲ್ಲಿ ಎಲ್ಲಾ ರೀತಿಯಲ್ಲೂ ಮುಕ್ತವಾಗಿ ಟೀಕಿಸಬಹುದಾದ ಒಬ್ಬ ರಾಜಕೀಯ ನಾಯಕ ಅಂತ ಇದ್ದರೆ ಅದು ಗಾಂಧೀಜಿ ಮಾತ್ರ. ಆದರೂ ಗಾಂಧೀಜಿಯವರ ಬಗ್ಗೆ ಬಾಲಿಶವಾಗಿ ಮಾತನಾಡುವವರು ಗಾಂಧೀಜಿ ಅವರನ್ನು ದ್ವೇಷಿಸುವರ ದೃಷ್ಟಿಯಲ್ಲೂ ತೀರ ಅಲ್ಪರಂತೆ ಕಾಣಿಸುತ್ತಾರೆ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


ಇದನ್ನೂ ಓದಿ: ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...