Homeಮುಖಪುಟಮಹಿಳಾ ದಿನಾಚರಣೆ: ಇತಿಹಾಸ ಮರೆತ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಮಹಾತಾಯಿ 'ಬೀ ಅಮ್ಮಾ'

ಮಹಿಳಾ ದಿನಾಚರಣೆ: ಇತಿಹಾಸ ಮರೆತ ಭಾರತ ಸ್ವಾತಂತ್ರ‍್ಯ ಸಂಗ್ರಾಮದ ಮಹಾತಾಯಿ ‘ಬೀ ಅಮ್ಮಾ’

ಬೀ ಅಮ್ಮಾರ ಮತೀಯ ಸೌಹಾರ್ದತೆಯ ಪರ ಕಾಳಜಿ, ಸ್ವಾತಂತ್ರ್ಯ ವಾಂಛೆ ಅವರ ಬೀರ ಪುತ್ರರಾದ ಮುಹಮ್ಮದ್ ಅಲೀ, ಶೌಕತ್ ಅಲೀಯವರ ಹೃದಯಗಳಲ್ಲಿ ಭದ್ರವಾಗಿ ಬೇರೂರಿ ಕಾರ್ಯತತ್ಪರವಾಗಿದೆ

- Advertisement -
- Advertisement -

ರಷ್ಯನ್ ಕ್ರಾಂತಿಯಾಧಾರಿತವಾಗಿ ಮ್ಯಾಕ್ಸಿಂ ಗಾರ್ಕಿ ಬರೆದ ಕಾದಂಬರಿ ‘ತಾಯಿ’ ಜಾಗತಿಕ ಸಾಹಿತ್ಯದ ಸರ್ವ ಶ್ರೇಷ್ಠ ಕಾದಂಬರಿಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ಆ ಕಾದಂಬರಿಯ ಕಥಾನಾಯಕ ಪಾವೆಲ್‌ನ ತಾಯಿ ಪೆಲಗೇಯ ನೀಲೋವ್ನಳ ಪಾತ್ರ ಪ್ರತಿಯೋರ್ವ ಓದುಗನನ್ನೂ ರೋಮಾಂಚನಗೊಳಿಸುವುದು ಸಹಜ. ಪಾವೆಲ್ ಮತ್ತು ಆತನ ಸಂಗಾತಿಗಳ ಹೋರಾಟದ ಕುರಿತಂತೆ ಮೊದಮೊದಲು ಪೆಲಗೇಯ ನೀಲೋವ್ನಳಿಗೆ ಏನೇನೂ ತಿಳಿದಿರುವುದಿಲ್ಲ. ಅವರ ಮಾತುಕತೆ, ನಡವಳಿಕೆ ಇತ್ಯಾದಿಗಳಿಂದ ತನ್ನ ಮಗ ಮತ್ತು ಆತನ ಸಂಗಾತಿಗಳು ದುಡಿವ ವರ್ಗವನ್ನು ನಿತ್ಯ ಶೋಷಿಸುತ್ತಿರುವ ಬಂಡವಾಳ ಶಾಹಿಗಳು ಮತ್ತು ಪ್ರಭುತ್ವದ ವಿರುದ್ಧ ಒಂದು ನ್ಯಾಯಯುತ ಚಳವಳಿ ರೂಪಿಸುತ್ತಿದ್ದಾರೆಂದು ಆಕೆ ಅರಿತುಕೊಳ್ಳುತ್ತಾಳೆ. ಮುಂದೆ ಆಕೆ ಅವರ ಹೋರಾಟದ ಒಂದು ಅವಿಭಾಜ್ಯ ಅಂಗವಾಗಿ ಬಿಡುತ್ತಾಳೆ. ತನ್ನ ಮಗ ಜೈಲಿನಲ್ಲಿದ್ದಾಗ ಆತನ ಚಳವಳಿಯ ಕೆಲಸಗಳನ್ನು ಆಕೆ ಮುಂದುವರಿಸುತ್ತಾಳೆ. ಕಟ್ಟ ಕಡೆಗೆ ಶೋಷಕ ಪ್ರಭುತ್ವದ ಕೈಗೆ ಸೆರೆ ಬೀಳುತ್ತಾಳೆ. ಆಕೆಯ ಧೀ ರೋದಾತ್ತ ಹೋರಾಟಗಳಿಂದಾಗಿ ಆಕೆ ರಷ್ಯನ್ ಎಡ ಪಂಥೀಯರ ಪಾಲಿಗೆ ಮಾತ್ರವಲ್ಲ ಜಗತ್ತಿನಾದ್ಯಂತ ಎಡಪಂಥೀಯ ಚಳವಳಿಕಾರರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿ ಎಂದೆಂದಿಗೂ ಉಳಿಯುತ್ತಾಳೆ.

ಇಂತಹದ್ದೇ ಓರ್ವ ಮಹಾತಾಯಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿದ್ದರು. ದುರದೃಷ್ಟವಶಾತ್ ಇತಿಹಾಸದ ಪುಟಗಳಲ್ಲಿ ಆಕೆಗೆ ನಿಜಕ್ಕೂ ಸಲ್ಲಬೇಕಾದಷ್ಟು ಮಣ್ಣನೆ ಸಲ್ಲಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ವೀರ ಕಥಾನಕದ ಪುಟಗಳಲ್ಲಿ ಆಕೆಯ ಹೆಸರನ್ನು ಬದಿಗೆ ತಳ್ಳಲಾಗಿದೆ. ಸ್ವಾತಂತ್ರ ನಂತರದಲ್ಲೂ ಆಕೆಯ ಹೆಸರನ್ನು ಚಿರಸ್ಥಾಯಿಯಾಗಿಸುವ ವಿಶೇಷ ಪ್ರಯತ್ನವೂ ಸಲ್ಲಲಿಲ್ಲ. ಆ ಮಹಾಮಾತೆ ಇನ್ನಾರೂ ಅಲ್ಲ. ಸ್ವಾತಂತ್ರ್ಯ ಸಂಗ್ರಾಮದ ರತ್ನ (ಜೌಹರ್) ಮೌಲಾನಾ ಮುಹಮ್ಮದ್ ಅಲೀ ಜೌಹರ್‌ರವರ ತಾಯಿ ಆಬಾದಿ ಬೇಗಂ ಅಥವಾ ಹೋರಾಟಗಾರರೆಲ್ಲರ ಪ್ರೀತಿಯ, ಬೀ ಅಮ್ಮಾ….. ರಷ್ಯನ್ ಕ್ರಾಂತಿಯ ಕಾಲದ ‘ತಾಯಿ’ ಯವರಷ್ಟೆ ಸತ್ವಶಾಲಿ, ಶಕ್ತಿಶಾಲಿ ಹೋರಾಟಗಾರ್ತಿ ಬೀ ಅಮ್ಮಾರ ದೇಶಾಭಿಮಾನ ಅನುಪಮವಾದುದಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಹಿಂದೂ-ಮುಸ್ಲಿಂ ಐಕ್ಯತೆಯ ಕುರಿತಂತೆ ಆಕೆಗಿದ್ದ ಮಹಾತ್ವಾಕಾಂಕ್ಷೆ ಪದಗಳಿಗೂ ನಿಲುಕದ್ದು.

ಬೀ ಅಮ್ಮಾ ಮರಣ ಹೊಂದಿದಾಗ ಗಾಂಧೀಜಿಯವರು ಯಂಗ್ ಇಂಡಿಯಾದ ತನ್ನ ಸಂಪಾದಕೀಯದಲ್ಲಿ “ಬೀ ಅಮ್ಮಾ ಇನ್ನಿಲ್ಲವೆಂಬುವುದನ್ನು ನಂಬಲಾಗುತ್ತಿಲ್ಲ. ಅವರ ವ್ಯಕ್ತಿತ್ವ ಮತ್ತು ಸಾರ್ವಜನಿಕ ಭಾಷಣ ನನ್ನನ್ನು ಬಹುವಾಗಿ ಪ್ರಭಾವಿಸಿದೆ. ಅವರು ಇಹಲೋಕ ತ್ಯಜಿಸುವ ಸಂದರ್ಭ ಆ ಮಹಾಮಾತೆಯ ಸನಿಹವಿದ್ದುದು ನನ್ನ ಪಾಲಿನ ಬಹುದೊಡ್ಡ ಸೌಭಾಗ್ಯ” ಎಂದು ಬರೆದಿದ್ದಾರೆ.

ಬೀ ಅಮ್ಮಾರವರಿಗೆ ದೆಹಲಿಯ ಪಟೌಡಿ ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಸ್ವಾಮಿ ಶ್ರದ್ಧಾನಂದ ಸರಸ್ವತಿಯವರು “ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಬೀ ಅಮ್ಮಾರಲ್ಲಿದ್ದ ಉತ್ಕಟ ಅಭಿಲಾಷೆಗೆ ಸಾಟಿಯಿಲ್ಲ. ಸ್ವಾತಂತ್ರ್ಯ ಪ್ರಾಪ್ತಿಯ ಮಹಾಧ್ಯೇಯಕ್ಕಾಗಿ ಅವರು ಸಲ್ಲಿಸಿದ ಸೇವೆ, ತೋರಿದ ಸಾಹಸ ಮತ್ತು ಧೈರ್ಯ ಯಾವುದೇ ರಾಜಕೀಯ ಮುಖಂಡರಿಗಿಂತಲೂ ಕಡಿಮೆಯದ್ದಾಗಿರಲಿಲ್ಲ. ಬೀ ಅಮ್ಮಾರ ಮತೀಯ ಸೌಹಾರ್ದತೆಯ ಪರ ಕಾಳಜಿ, ಸ್ವಾತಂತ್ರ್ಯ ವಾಂಛೆ ಅವರ ಬೀರ ಪುತ್ರರಾದ ಮುಹಮ್ಮದ್ ಅಲೀ, ಶೌಕತ್ ಅಲೀಯವರ ಹೃದಯಗಳಲ್ಲಿ ಭದ್ರವಾಗಿ ಬೇರೂರಿ ಕಾರ್ಯತತ್ಪರವಾಗಿದೆ” ಎಂದು ಹೇಳಿದ್ದರು.

ಆ್ಯನಿ ಬೆಸೆಂಟ್ ಅವರು ತಮ್ಮ ಶೋಕ ಸಂದೇಶದಲ್ಲಿ “ನಾನೂ ಸಹ ಎಲ್ಲರಂತೆ ಈ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗುತ್ತಿದ್ದೇನೆ. ಈ ಧರ್ಮನಿಷ್ಠ ಸಿಂಹಿಣಿ ಯಾವುದೇ ಸಂದರ್ಭದಲ್ಲೂ ಎದೆಗುಂದಿದ್ದಿಲ್ಲ. ತಾನು ನಂಬಿದ ಆದರ್ಶಕ್ಕಿಂತ ಮಿಗಿಲಾಗಿ ಜಗತ್ತಿನ ಯಾವ ವಸ್ತುವಿಗೂ ಅವರು ಪ್ರಾಧಾನ್ಯತೆ ನೀಡಿದ್ದಿಲ್ಲ. ಇಂತಹ ಆತ್ಮಗಳು ಬೇರೆಯವರನ್ನು ಪ್ರತಿಷ್ಠಾಪಿಸಿ ಉದಾಹರಣೆಗಳಾಗುತ್ತವೆ. ಸ್ವಾತಂತ್ರ್ಯ ಮಾರ್ಗಕ್ಕೆ ದಾರಿದೀಪವಾಗಿ ಆ ಮಾರ್ಗವನ್ನು ಸುಗಮಗೊಳಿಸುತ್ತವೆ. ತಮ್ಮ ಹೆಜ್ಜೆಗಳಿಂದ ಇತರರಿಗೆ ಆದರ್ಶದ ದಾರಿ ತೋರುತ್ತದೆ” ಎಂದರು.
ಬೀ ಅಮ್ಮಾ ತನ್ನ ಮಕ್ಕಳಿಗೆ ಮಾತ್ರವಲ್ಲ, ವಿಮೋಚನಾ ಹೋರಾಟದ ಸಂಗಾತಿಗಳಿಗೆಲ್ಲಾ ಸ್ಪೂರ್ತಿಯ ಚಿಲುಮೆಯಾಗಿದ್ದರು. ಸ್ವಾತಂತ್ರ್ಯ ಪ್ರಾಪ್ತಿಯ ದಿಶೆಯಲ್ಲಿ ತನ್ನ ಮಕ್ಕಳು ಜೈಲು ಪಾಲಾದಾಗ ಆಕೆ ಖೇದಕ್ಕೆ ಬದಲಾಗಿ ಆನಂದ ತುಂದಿಲಳಾಗುತ್ತಿದ್ದರು. ಆ ಕುರಿತಂತೆ ಅನೇಕ ಲಾವಣಿಗಳೂ ಆ ಕಾಲದಲ್ಲಿ ಹುಟ್ಟಿಕೊಂಡಿತ್ತು. 1921 ರಲ್ಲಿ ಅಲಿ ಸಹೋದರರ ವಿಚಾರಣೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅಜ್ಞಾತ ಕವಿಯೊಬ್ಬರು ಸದಾಯೆ ಖಾತೂನ್ (ಮಹಿಳೆಯ ಧ್ವನಿ) ಎಂಬ ಶೀರ್ಷಿಕೆಯಡಿ ಒಂದು ಕವನ ರಚಿಸಿದ್ದರು. ಆ ಕವನ ಕೇವಲ ಬೆರಳೆಣಿಕೆಯ ದಿನಗಳಲ್ಲೇ ಅಪಾರ ಪ್ರಸಿದ್ಧಿ ಪಡೆಯಿತು. ಇಂದಿಗೂ ಉರ್ದು ಸಾಹಿತ್ಯದಲ್ಲಿ ಆ ಕವನ ತನ್ನ ಛಾಪನ್ನು ಉಳಿಸಿಕೊಂಡಿದೆ. ಆ ಕವನ ಜನರ ಬಾಯಲ್ಲಿ ಲಾವಣಿಯಂತೆ ಹಾಡಲ್ಪಡುತ್ತಿತ್ತು.

ಬೋಲಿ ಅಮ್ಮಾ ಮುಹಮ್ಮದ್ ಅಲೀ ಕೀ
ಸಾಥ್ ತೇರೇ ಹೈ ಶೌಕತ್ ಅಲೀ ಬೀ
ಜಾನ್ ಬೇಟಾ ಖಿಲಾಫತ್ ಪೆ ದೇ ದೋ
ಜಾನ್ ಬೇಟಾ ಖಿಲಾಫತ್ ಪೆ ದೇ ದೋ
ಸಬರ್ ಸೆ ಜೈಲ್ ಖಾನೆ ಮೆ ರೆಹನಾ
ಕುಚ್ ಯೂ ಅಪ್ನೀ ಅಮ್ಮಾ ಕಾ ಕೆಹನಾ
ಜೋ ಮುಸೀಬತ್ ಪಡೆ ಉಸ್‌ಕೋ ಸಹನಾ
ಜಾನ್ ಬೇಟಾ ಖಿಲಾಫತ್ ಪೆ ದೇ ದೋ
ಫಾಂಸಿ ಆಯೆ ಅಗರ್ ತುಮ್‌ಕೋ ಜಾನಿ
ಕಲಿಮಾ ಪಡ್‌ಪಡ್‌ಕೆ ಫಾಂಸಿ ಪೆ ಚಡ್‌ನಾ
ಮಾಂಗ್‌ನಾ ಮತ್ ಹುಕೂಮತ್ ಸೆ ಪಾನಿ
ಜಾನ್ ಬೇಟಾ ಖಿಲಾಫತ್ ಪೆ ದೇ ದೋ……

ಬೀ ಅಮ್ಮಾರ ಹೋರಾಟ ಇತರೆಲ್ಲಾ ಮಹಿಳಾ ಹೋರಾಟಗಾರ್ತಿಯರಿಗಿಂತ ಯಾಕೆ ಹೆಚ್ಚು ತೂಕ ಪಡೆದುಕೊಳ್ಳುತ್ತದೆಯೆಂದರೆ ಆಕೆ ಸ್ವಯಂ ಹೋರಾಡಿದ್ದಲ್ಲದೇ ತನ್ನ ಮುದ್ದಿನ ಕಂದಮ್ಮಗಳನ್ನು ಬ್ರಿಟಿಷ್ ಪ್ರಭುತ್ವದ ಫಾಂಸಿಗೆ ಕೊಡುವ ಸಂದರ್ಭ ಬಂದರೂ ಹಿಂದಡಿಯಿಡಲಾರೆ. ನನ್ನ ನೆಲದ ವಿಮೋಚನೆ ನನಗೆ ಎಲ್ಲಕ್ಕಿಂತಲೂ ಮಿಗಿಲಾದುದು, ಇದು ನನ್ನ ಧಾರ್ಮಿಕ ಕರ್ತವ್ಯವೆಂದು ಘೋಷಿಸಿದ್ದರು.

ತನ್ನ 27ನೇ ವಯಸ್ಸಿಗೆ ಅಂದರೆ ಕಿರಿಯ ಪುತ್ರ ಮುಹಮ್ಮದ್ ಅಲೀ ಇನ್ನೂ ಎರಡರ ಹರೆಯದವರಿರುವಾಗಲೇ ವೈಧವ್ಯಕ್ಕೆ ಕಾಲಿರಿಸಿದ ಬೀ ಅಮ್ಮಾ ಆರು ಮಕ್ಕಳ ಪೋಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕಾಯಿತು. ಆ ಕಾಲದ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬ ಹೇಗಿರಬಹುದು. ಓರ್ವ ಮುಸ್ಲಿಂ ವಿಧವೆ ಬದುಕನ್ನು ಹೇಗೆ ನಿಭಾಯಿಸಬಲ್ಲಳು ಎಂದು ಊಹಿಸಿ ನೋಡಿ. ಬೀ ಅಮ್ಮಾರ ಸಾರ್ವಜನಿಕ ಹೋರಾಟಕ್ಕೆ ಮುನ್ನುಡಿ ಬರೆದಿದ್ದು ಆಕೆಯ ಬದುಕಿನ ಹೋರಾಟ ಎಂದರೆ ಉತ್ಪ್ರೆಕ್ಷೆಯಾಗದು. ಹತ್ತೊಂಬತ್ತನೇ ಶತಮಾನದ ಕಟ್ಟರ್ ಸಂಪ್ರದಾಯಸ್ಥ ಮುಸ್ಲಿಂ ಸಮಾಜವನ್ನು ಗಮನಿಸಿದರೆ ಒಬ್ಬ ಮುಸ್ಲಿಂ ಮಹಿಳೆ ಪರದೆಯಲ್ಲಿದ್ದುಕೊಂಡೇ ಸಂಸಾರವನ್ನು ನಿರ್ವಹಿಸುತ್ತಾ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿದ ಪರಿ ಅನನ್ಯವಾದುದು. ಇದು ಸಂಪ್ರದಾಯದ ವಿರುದ್ಧದ ಬಂಡಾಯವೂ ಹೌದು. ಒಮ್ಮೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನ ಪೂರ್ವಜರಿಂದ ಮತ್ತು ಪತಿಯಿಂದ ಬಂದಿದ್ದ ಆಸ್ತಿಯನ್ನು ಮಾರಬೇಕಾದಂತಹ ಪ್ರಸಂಗ ಎದುರಾಗಿತ್ತು. ಆಗ ಆಕೆಯ ಮೈದುನರು ಆಸ್ತಿಯನ್ನು ಮಾರುವಂತೆ ಒತ್ತಡ ಹೇರಿದ್ದರು. ಆದರೆ ಬೀ ಅಮ್ಮಾ ಅದಕ್ಕೆ ಸಮ್ಮತಿಸದೇ ತಮ್ಮ ಒಡವೆಗಳನ್ನು ಹಿಂದೂ ಬ್ಯಾಂಕರ್ ಓರ್ವರ ಬಳಿ ಅಡವಿಟ್ಟು ತನ್ನ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದರು.

ಬೀ ಅಮ್ಮಾರ ಬದುಕು ಮತ್ತು ಹೋರಾಟದಲ್ಲಿ ನಮಗೆ ಅನೇಕ ಪಾಠಗಳಿವೆ. ಒಂದನೆಯದಾಗಿ ಆಕೆ ಓರ್ವ ವಿಧವೆಯಾಗಿ ಬದುಕನ್ನು ಎದುರಿಸಿದ ರೀತಿ. ಎರಡನೆಯದಾಗಿ ಎಲ್ಲಾ ಕಷ್ಟನಷ್ಟಗಳ ಮಧ್ಯೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕುಂದುಂಟಾಗದಂತೆ ನೋಡಿದ್ದು ಮೂರನೆಯದಾಗಿ ತನ್ನ ಇಳಿ ವಯಸ್ಸಿನಲ್ಲೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡದ್ದು, ನಾಲ್ಕನೆಯದಾಗಿ ತನ್ನ ಮಕ್ಕಳನ್ನು ನಿರ್ಭೀತಿಯಿಂದ ಹೋರಾಟದ ರಂಗಕ್ಕಿಳಿಸಿದ್ದು ಅಲ್ಲದೇ ಅವರು ಜೈಲು ಸೇರಿಕೊಂಡಾಗ ದುಃಖಿಸದೇ ತನ್ನ ಮಕ್ಕಳ ಹೋರಾಟದ ಕೆಚ್ಚನ್ನು ನೂರ್ಮಡಿಗೊಳಿಸಿ ಇತರರಿಗೂ ಹುರಿದುಂಬಿಸಿದ್ದು…… ಅವರಂತಹ ಶ್ರೇಷ್ಠ ಮಹಿಳಾಮಣಿಗಳು ಆಧುನಿಕ ಇತಿಹಾಸದಲ್ಲೇ ವಿರಳ. ಝಾನ್ಸಿ ರಾಣಿ ಲಕ್ಷ್ಮಿಬಾಯಿಗೆ ರಾಜ್ಯ ಉಳಿಸುವ ಜರೂರತ್ತಿತ್ತು. ಬೀ ಅಮ್ಮಾ ಅವರಿಗೆ ದೇಶ ವಿಮೋಚನೆ ಎಲ್ಲಕ್ಕಿಂತಲೂ ಹೆಚ್ಚಿನ ಜರೂರತ್ತಾಗಿತ್ತು.

ಮೊದಲನೇ ಜಾಗತಿಕ ಮಹಾಯುದ್ಧದ ನಂತರ ಬೀ ಅಮ್ಮಾರ ಸಕ್ರಿಯ ರಾಜಕೀಯ ಜೀವನ ಪ್ರಾರಂಭವಾಯಿತು. ಭಾರತ ರಕ್ಷಣಾ ವಿಧಾನ ಜಾರಿಗೆ ಬಂದದ್ದು ಆ ಕಾಲದಲ್ಲಿ. ಇದು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಪಾಲಿಗೆ ಅತೀ ದೊಡ್ಡ ಹಿನ್ನಡೆಯಂತೆ ಕಂಡಿತ್ತು. ಪರಂಗಿ ಬ್ರಿಟಿಷರು ಭಾರತ ರಕ್ಷಣೆಯ ನೆಪದಲ್ಲಿ ದೇಶದಾದ್ಯಂತ ಸಹಸ್ರಾರು ಸ್ವಾತಂತ್ರ್ಯ ಯೋಧರನ್ನು ಜೈಲಿಗಟ್ಟಿದರು. ಕಾನೂನು ಸುವ್ಯವಸ್ಥೆ, ಸಾಂವಿಧಾನಿಕ ಶಿಸ್ತುಗಳನ್ನು ಗಾಳಿಗೆ ತೂರಲಾಗಿತ್ತು. ಭಾರತದಲ್ಲಿ ಈ ಕಾನೂನು ಜಾರಿಯಾಗಿ ಇನ್ನೂ ಎರಡು ತಿಂಗಳಾಗುವಾಗಲೇ ಅದನ್ನು ಸಮರ್ಥಿಸಿ ಲಂಡನ್ ಟೈಮ್ಸ್‌ನಲ್ಲಿ ಲೇಖನವೊಂದು ಪ್ರಕಟವಾಯಿತು. ಕ್ರಾಂತಿವೀರ ಮುಹಮ್ಮದ್ ಅಲೀಗೆ ಅದನ್ನು ಓದಿ ಸಹಿಸಲಾಗಲಿಲ್ಲ. ಅದನ್ನು ವಿರೋಧಿಸಿ ಮೌಲಾನಾ ಮುಹಮ್ಮದ್ ಅಲೀ ಪ್ರಚೋದನಾತ್ಮಕ ಲೇಖನ ಬರೆದರು. ಅದನ್ನು ವಿದ್ರೋಹಿ ಕೃತ್ಯವೆಂದು ಪರಿಗಣಿಸಿ ಮುಹಮ್ಮದ್ ಅಲೀಯವರನ್ನು ಜೈಲಿಗೆ ತಳ್ಳಲಾಯಿತು. ಮುಹಮ್ಮದ್ ಅಲೀರವರೊಂದಿಗೆ ಅವರ ಸಹೋದರ ಶೌಕತ್ ಅಲೀಯವರನ್ನು ಛಿದ್‌ವಾಡ ಜೈಲಿನಲ್ಲಿಡಲಾಯಿತು. ಆಗ ತನ್ನ ಮಕ್ಕಳ ಬಂಧನಕ್ಕೆ ಹೆಮ್ಮೆಪಡುತ್ತಾ ಆ ಮಹಾತಾಯಿ ಹೀಗಂದರು.

“ಸೃಷ್ಟಿಕರ್ತನು ಆರಿಸಿದ ಅದೃಷ್ಟವಂತರಿಗೆ ಮಾತ್ರ ದೇಶ ಹಾಗೂ ಧರ್ಮಕ್ಕಾಗಿ ಕಷ್ಟಗಳನ್ನು ಸಹಿಸುವ ಭಾಗ್ಯ ಲಭಿಸುವುದು”.

ಬೀ ಅಮ್ಮಾ ಸಂಗ್ರಾಮದ ಅಂಗವಾಗಿ ದೇಶದ ಮೂಲೆಮೂಲೆಗೆ ತಿರುಗಾಡಿ ಸಾರ್ವಜನಿಕ ಭಾಷಣ ಮಾಡುತ್ತಿದ್ದರು. ಅಪ್ಪಟ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ವೃದ್ಧ ಮಹಿಳೆಯ ಪ್ರಭಾವಪೂರ್ಣ ಭಾಷಣಗಳನ್ನು ಆಲಿಸಲು ಜನ ಸಮರೋಪಾದಿಯಲ್ಲಿ ಸೇರುತ್ತಿದ್ದರು. ಬೀ ಅಮ್ಮಾರವರ ಕೆಚ್ಚು, ಸ್ವಾತಂತ್ರ್ಯ ವಾಂಛೆ ಅಸಂಖ್ಯ ಮುಸ್ಲಿಂ ಯುವ ಜನತೆಯನ್ನು ಸಂಗ್ರಾಮದ ಕಣಕ್ಕೆ ಧುಮುಕುವಂತೆ ಪ್ರೇರೇಪಿಸಿತ್ತು. ಬೀ ಅಮ್ಮಾ ಭಾಷಣಕ್ಕೆ ಹೋದಲ್ಲೆಲ್ಲಾ ಮುಸ್ಲಿಂ ಮಹಿಳೆಯರೂ ಸಂಗ್ರಾಮದ ಕಣಕ್ಕಿಳಿದರು. ಇದು ಬೀ ಅಮ್ಮಾ ಅವರ ಪ್ರಭಾವ ಅನ್ನುವುದಕ್ಕೆ ಬೇರೆ ಸಾಕ್ಷ್ಯ ಬೇಕಾಗಿಲ್ಲ.

ಬೀ ಅಮ್ಮಾರ ಹೋರಾಟದ ಕೆಚ್ಚಿನ ಕುರಿತಂತೆ ಗಾಂಧೀಜಿ ಯಂಗ್ ಇಂಡಿಯಾದ ತನ್ನ ಲೇಖನವೊಂದರಲ್ಲಿ ಹೀಗೆ ಬರೆಯುತ್ತಾರೆ. “ಅವರು ವೃದ್ಧೆಯಾಗಿದ್ದರು ನಿಜ, ಆದರೆ ಅವರಲ್ಲಿ ಯುವಕರ ಹುಮ್ಮಸ್ಸಿತ್ತು. ಅವರು ಖಿಲಾಫತ್ ಮತ್ತು ಸ್ವರಾಜ್ಯಕ್ಕಾಗಿ ನಿರಂತರ ಪ್ರಯಾಣಿಸಿದರು. ಅವರು ಇಸ್ಲಾಮಿನ ಕಟ್ಟಾ ಅನುಯಾಯಿಯಾಗಿದ್ದರು. ಹಿಂದೂ-ಮುಸ್ಲಿಂ ಒಗ್ಗಟ್ಟು ಮತ್ತು ಖಾದಿಧಾರಣೆ ಸ್ವಾತಂತ್ರ್ಯ ಪ್ರಾಪ್ತಿಯ ಹಾದಿಯಲ್ಲಿ ಅತಿ ಮುಖ್ಯ ಅಸ್ತ್ರ ಎಂದು ಅವರು ಘೋಷಿಸಿದ್ದರು. ಸ್ವಾತಂತ್ರ್ಯಕ್ಕಾಗಿನ ಹೋರಾಟ ಅವರ ಪಾಲಿಗೆ ಅವರ ಧಾರ್ಮಿಕ ವಿಶ್ವಾಸದ ಅವಿಭಾಜ್ಯ ಅಂಗವಾಗಿತ್ತು”.

ಐದು ವರ್ಷಗಳು ಸೆರೆವಾಸದಿಂದ 1919ರಲ್ಲಿ ಪ್ರಭುತ್ವವು ಅಲೀ ಸಹೋದರರನ್ನು

ಅಲಿ ಸಹೋದರರು

ಬಿಡುಗಡೆಗೊಳಿಸಿತು. ತಮ್ಮ ನಾಯಕರ ಬಿಡುಗಡೆಗೆ ಸ್ವಾತಂತ್ರಾಪೇಕ್ಷಿ ಜನತೆ ಹರ್ಷವ್ಯಕ್ತಪಡಿಸಿ ಅಲೀ ಸಹೋದರರನ್ನು ದಿಲ್ಲಿ, ಲಾಹೋರ್, ಬೊಂಬಾಯಿಯಲ್ಲಿ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ದಿದ್ದರು. ಮಾತೃ ಹೃದಯದ ಸಹಜ ಇರಾದೆಯಂತೆ ಬೀ ಅಮ್ಮಾ ಸ್ವಲ್ಪ ಕಾಲ ಮಕ್ಕಳನ್ನು ತನ್ನ ಬಳಿ ಇರಿಸಬಯಸಿದ್ದರು. ಆದರೆ ಚಳವಳಿಗೆ ಅವರ ಅಗತ್ಯ ಹಿಂದೆಂದಿಗಿಂತಲೂ ಅಧಿಕವಿತ್ತು. ಆ ಸಂದರ್ಭ ಸ್ವಲ್ಪವೂ ಬೇಸರಗೊಳ್ಳದೇ ಪುನಃ ತನ್ನ ಮಕ್ಕಳನ್ನು ಬೀ ಅಮ್ಮಾ ಹೋರಾಟದ ಕಣಕ್ಕೆ ಕಳುಹಿಸಿಕೊಟ್ಟರು. ಈ ಕುರಿತಂತೆ ಬೀ ಅಮ್ಮಾ ಹೀಗೆ ಪ್ರತಿಕ್ರಿಯಿಸಿದ್ದರು.

“ಈಗ ನನ್ನ ಮಕ್ಕಳು ಮರಳಿ ಬಂದಿದ್ದಾರೆ. ನನ್ನ ಮಾತೃ ಹೃದಯ ಸಹಜವಾಗಿಯೇ ಸ್ವಲ್ಪ ಕಾಲ ಮಕ್ಕಳನ್ನು ನನ್ನೊಂದಿಗಿರಿಸಲು ಬಯಸಿತ್ತು. ಆದರೆ ಅವರು ನನ್ನೊಂದಿಗೆ ಹಾಗೂ ಕುಟುಂಬದೊಂದಿಗೆ ಕಾಲ ಕಳೆಯುವುದಕ್ಕಿಂತ ಅವರು ತಮ್ಮನ್ನು ಸಮರ್ಪಿಸಿಕೊಂಡಿರುವ ಪವಿತ್ರ ಕಾರ್ಯಕ್ಕೆ ಬದ್ಧರಾಗಬೇಕಿರುವುದು ಬಹು ಅಗತ್ಯ. ಅದಕ್ಕಾಗಿ ಮತ್ತೆ ನಾನವರಿಂದ ಅಗಲಿರಬೇಕಾಗಿದೆ. ದೇಶಕ್ಕಾಗಿ ಮಕ್ಕಳ ಅಗಲಿಕೆಯನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ”. ಬೀ ಅಮ್ಮಾ ಅವರ ಈ ಪ್ರತಿಕ್ರಿಯೆ ಅಂದು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ದೇಶವಾಸಿಗಳಿಗೆ ಈ ಮಹಾಮಾತೆಯ ಮೇಲಿನ ಅಭಿಮಾನ ಇಮ್ಮಡಿಗೊಂಡಿತ್ತು.

1919ರಲ್ಲಿ ಮುರಾದಾಬಾದ್‌ನಲ್ಲಿ ಡಾ| ಭಗವಾನ್‌ದಾಸ್‌ರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಪೊಲಿಟಿಕಲ್ ಕಾನ್ಫರೆನ್ಸ್‌ನಲ್ಲಿ  ಭಗವಾನ್‌ದಾಸರು ಅಸಹಕಾರ ಚಳವಳಿಯ ನಿರ್ಣಯವನ್ನು ಮಾಡಿಸಿದ್ದರು. ಗಾಂಧೀಜಿಯವರ ಉಪಸ್ಥಿತಿಯಲ್ಲಿಯೂ ಕೆಲವು ನಾಯಕರು ನಿರ್ಣಯವನ್ನು ವಿರೋಧಿಸಿದರು. ಸುಮಾರು ಮೂರು ದಿನಗಳ ಸುದೀರ್ಘ ಚರ್ಚೆಯ ಬಳಿಕವೂ ಸಭೆ ಒಂದು ತೀರ್ಮಾನಕ್ಕೆ ಬರಲು ವಿಫಲವಾಯಿತು. ಆಗ ಅಲ್ಲಿಗೆ ಬಂದ ಬೀ ಅಮ್ಮಾ ಕೆಲವೇ ನಿಮಿಷಗಳಲ್ಲಿ ಅಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದ ನಾಯಕರ ಮನವೊಲಿಸುವಲ್ಲಿ ಯಶಸ್ಸು ಕಂಡರು. ಆ ಕುರಿತಂತೆ ಡಾ| ಭಗವಾನ್‌ದಾಸ್ ನಿರ್ಣಯ ಪಾಸು ಮಾಡುವಾಗ “ಭಾರತ ಮಾತೇ ಬೀ ಅಮ್ಮಾ ರೂಪದಲ್ಲಿ ಬಂದಿದ್ದಾಳೆ” ಎಂದರು.

1921ರ ಸೆಪ್ಟೆಂಬರ್‌ನಲ್ಲಿ ಮುಹಮ್ಮದ್ ಅಲೀಯವರು ಕರಾಚಿಯಲ್ಲಿ ಮಾಡಿದ ಭಾಷಣವೊಂದರಲ್ಲಿ ಬ್ರಿಟಿಷರ ವಿರುದ್ಧ ಪ್ರಚೋದನಾತ್ಮಕವಾಗಿ ಮಾತನಾಡಿದರು. ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯರಿಗೆ “ಫರಂಗಿ ಸೈನ್ಯದ ಕೆಲಸ ತೊರೆದು ಹೊರಬನ್ನಿ” ಎಂದು ಕರೆಕೊಟ್ಟರು. ಪರಿಣಾಮ ಪುನಃ ಶೌಕತ್ ಅಲೀ ಮತ್ತು ಮುಹಮ್ಮದ್ ಅಲೀ 2 ವರ್ಷಗಳ ಸೆರೆವಾಸ ಅನುಭವಿಸಬೇಕಾಗಿ ಬಂತು. ಆಗ ಮಹಾಮಾತೆ ಬೀ ಅಮ್ಮಾರ ಪ್ರತಿಕ್ರಿಯೆ ಹೀಗಿತ್ತು. “ನನ್ನ ಮಕ್ಕಳ ಬಂಧನದ ಸುದ್ದಿ ತಿಳಿಯಿತು. ಸೃಷ್ಟಿಕರ್ತ ಅವರ ಸೇವೆಯನ್ನು ಸ್ವೀಕರಿಸಿದ್ದಕ್ಕೆ ನಾನು ಅವನಿಗೆ ಧನ್ಯವಾದವನ್ನು ಅರ್ಪಿಸಿದೆ. ನನ್ನ ಮಕ್ಕಳ ಬಂಧನದ ಸುದ್ದಿ ಕೇಳಿ ನಾನು ಶುಕ್ರ‍್ನ (ಕೃತಜ್ಞತೆ) ನಮಾಝ್ ಮಾಡಿದೆ”.

ಬೀ ಅಮ್ಮಾರ ವಯಸ್ಸು ಮೀರುತ್ತಿತ್ತು. ಆದರೆ ಚಳವಳಿಯಲ್ಲಿನ ಅವರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಅವರ ಪ್ರಾಯ ಅಡ್ಡಿ ಬರಲಿಲ್ಲ. ಅತ್ತ ಮಕ್ಕಳು ಜೈಲಿನ ಕತ್ತಲ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದರೆ ಇತ್ತ ಈ ಮಹಾಮಾತೆ ಆಂದೋಲನದ ಕೆಲಸಗಳಿಗಾಗಿ ದೇಶ ಸುತ್ತುತ್ತಿದ್ದರು. ಬೀ ಅಮ್ಮಾರ ಭಾಷಣ ಕೇಳಲು ಜನ ಸಮರೋಪಾದಿಯಲ್ಲಿ ಬರುತ್ತಿದ್ದರು. ಅಂದೋಲನದ ನಿಧಿಗಾಗಿ ಸಹಾಯ ಮಾಡಿ ಎಂಬ ಬೀ ಅಮ್ಮಾರ ಒಂದು ಕರೆಗೆ ಜನ ಹಿಂದೆ-ಮುಂದೆ ನೋಡದೇ ದಾನ ಮಾಡುತ್ತಿದ್ದರು. ಇದು ಬ್ರಿಟಿಷ್ ಪ್ರಭುತ್ವಕ್ಕೆ ಬಹು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

1923ರಲ್ಲಿ ಅಲೀ ಸಹೋದರರು ಜೈಲಿಂದ ಬಿಡುಗಡೆಯಾಗಿ ಬಂದ ಬಳಿಕ ಬಾಂಬೆ, ಬಿಜಾಪುರ, ಕಾಕಿನಾಡ ಮುಂತಾದ ಕಡೆ ಚಳವಳಿಯ ಕೆಲಸಗಳಿಗಾಗಿ ಪ್ರಯಾಣಿಸಿದರು. ಆಗ ಬೀ ಅಮ್ಮಾ ಅವರೂ ಮಕ್ಕಳೊಂದಿಗೆ ಪ್ರಯಾಣಿಸಿದರು. ವಯಸ್ಸು, ಅನಾರೋಗ್ಯವನ್ನು ಲೆಕ್ಕಿಸದೇ ಅವರು ಇಷ್ಟೊಂದು ಅವಿರತವಾಗಿ ಚಳವಳಿಗಳಲ್ಲಿ ಭಾಗವಹಿಸುವುದು, ಭಾಷಣ ಮಾಡುವುದು ಇತ್ಯಾದಿಗಳನ್ನು ತಡೆಯುವ ಪ್ರಯತ್ನವನ್ನೊಮ್ಮೆ ಮುಹಮ್ಮದ್ ಅಲೀ ಮಾಡಿದರು.
“(ಬುವಾ) ಅಮ್ಮಾ ನಾವೀಗ ಸೆರೆವಾಸದಿಂದ ಹೊರಬಂದಾಗಿದೆ. ನಾವು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತೇವೆ. ಸದ್ಯ ನೀವು ಹಗಲು ರಾತ್ರಿ ಪ್ರಯಾಣ ಮಾಡುವ ಅವಶ್ಯಕತೆಯಿಲ್ಲ. ನೀವು ಶಾಂತಿಯಿಂದ ಆರಾಮಾಗಿರಿ. ದೇಶದ ಜವಾಬ್ದಾರಿ ನಮಗೆ ಬಿಡಿ………” ಅದಕ್ಕುತ್ತರವಾಗಿ ಬೀ ಅಮ್ಮಾ, “ಈ ಮುದುಕಿಗೆ ನಿಮ್ಮ ಹಾಗೆ ದೇಶ ಸೇವೆ ಮಾಡಲು ಸಾಧ್ಯವಿಲ್ಲ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿದೆಯೇ? ನಾನು ಸುಮ್ಮನೆ ಮನೆಯಲ್ಲಿ ಬಿದ್ದಿರಲಾರೆ. ನನ್ನ ದೇಶ ಹಾಗೂ ಧರ್ಮದ ಸೇವೆ ಮಾಡದೇ ಸುಮ್ಮನಿರಲು ನನ್ನಿಂದಾಗದು” ಎಂದಿದ್ದರು (ಹಮ್‌ದರ್ದ್ ಪತ್ರಿಕೆಯ 1924 ನವೆಂಬರ್ 11 ರ ಸಂಚಿಕೆಯಲ್ಲಿ ಈ ಮಾತುಕತೆ ಪ್ರಕಟವಾಗಿತ್ತು).

ಒಮ್ಮೆ ಬಂಧನದಲ್ಲಿರುವ ಅಲೀ ಸಹೋದರರನ್ನು ಬಿಡುಗಡೆಗೊಳಿಸಬೇಕಾದರೆ ಅವರು ಬ್ರಿಟಿಷ್ ಪ್ರಭುತ್ವದ ಷರತ್ತುಗಳಿಗೆ ಒಪ್ಪಬೇಕು ಎಂದು ಚಾರ್ಟ್ಸ್ ಕ್ಲೈವ್ ಲಾಯ್ಡ್ ಬ್ರಿಟಿಷ್ ಪ್ರಭುತ್ವದ ಅಡಿ ಕೆಲಸ ಮಾಡುತ್ತಿದ್ದ ಭಾರತೀಯ ಪೋಲೀಸ್ ಅಧಿಕಾರಿ ಅಬ್ದುಲ್ ಮಜೀದ್ ಮುಖಾಂತರ ಪತ್ರವೊಂದನ್ನು ರವಾನಿಸಿದ್ದ. ಅದಕ್ಕುತ್ತರವಾಗಿ ಅಲೀ ಸಹೋದರರು “ನಾವು ಅಲ್ಲಾಹನನ್ನು ನಂಬುವ ಮುಸಲ್ಮಾನರು. ಪವಿತ್ರ ಖುರ್‌ಆನ್ ಮತ್ತು ಮುಹಮ್ಮದ್ ಪೈಗಂಬರ್ (ಸ) ರ ಆದೇಶಗಳಿಗೆ ಬದ್ಧರಾಗಿ ಬದುಕುವವರು. ನಾವು ಹೀಗೇ ಇರಲು ಬಯಸುತ್ತೇವೆ. ನಾವು ನಂಬಿದ ಆದರ್ಶಗಳಿಗಾಗಿ ಎಂತಹದ್ದೇ ತ್ಯಾಗಕ್ಕೂ ನಾವು ಸಿದ್ದರಿದ್ದೇವೆ” ಎಂದು ಬರೆದಿದ್ದರು.
ಆ ಕಾಲದಲ್ಲಿ ಅಲೀ ಸಹೋದರರು ಬ್ರಿಟಿಷರ ಷರತ್ತುಗಳಿಗೆ ಒಪ್ಪಿದ್ದಾರೆ ಎಂಬ ಪುಕಾರು ಹಬ್ಬಿತ್ತು. ಆಗ ಮಹಾಮಾತೆ ಬೀ ಅಮ್ಮಾ “ನನ್ನ ಮಕ್ಕಳು ಇಸ್ಲಾಮಿನ ವೀರಪುತ್ರರು. ಅವರು ಬ್ರಿಟಿಷ್ ಪ್ರಭುತ್ವದ ಷರತ್ತುಗಳನ್ನು ಒಪ್ಪುವುದು ಬಿಡಿ ಹಾಗೆ ಯೋಚಿಸಲೂ ಸಾಧ್ಯವಿಲ್ಲ. ಒಂದು ವೇಳೆ ಅವರು ಬ್ರಿಟಿಷ್ ಪ್ರಭುತ್ವಕ್ಕೆ ಶಿರಬಾಗಿದ್ದರೆ ಅಂತಹ ಹೇಡಿ ಮಕ್ಕಳ ಕತ್ತು ಹಿಚುಕಿ ಕೊಲ್ಲಲು ಈ ವೃದ್ಧ ಕೈಗಳು ಶಕ್ತವಿರುವುದು”.

ರಾಜ್ಯಕ್ಕಾಗಿ, ಅಧಿಕಾರಕ್ಕಾಗಿ ಹೋರಾಡಿದವರು ಈ ದೇಶದ ಚರಿತ್ರೆಯ ಪುಟಗಳಲ್ಲಿ ರಾರಾಜಿಸುತ್ತಿರಬೇಕಾದರೆ ಸ್ವಾತಂತ್ರ್ಯ ಎಂಬ ಏಕಮಾತ್ರ ಧ್ಯೇಯಕ್ಕಾಗಿ ಹೋರಾಡಿದ ಅದೆಷ್ಟೋ ವೀರ-ವೀರೆಯರು ಇತಿಹಾಸದ ಪುಟಗಳಿಂದ ಕಣ್ಮರೆಯಾಗಿದ್ದಾರೆ. ಅಂತಹವರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಾತಾಯಿ ಬೀ ಅಮ್ಮಾ ಓರ್ವ ಪ್ರಮುಖರು. ಬೀ ಅಮ್ಮಾ 1924 ನವೆಂಬರ್ 12ರ ಮಧ್ಯರಾತ್ರಿ ಇಹದ ಬದುಕಿಗೆ ವಿದಾಯ ಹೇಳಿದರು. ಈ ನೆಲದ ಮಣ್ಣಿನ ಕಣಕಣಗಳಲ್ಲಿಯೂ ಅವರ ಸಾಹಸಗಾಥೆಗೆ ಸಾಕ್ಷಿಯಿದೆ. ಅವರಿಗೆ ದೇಶದ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳಿದ್ದರು, ಅನುಯಾಯಿಗಳಿದ್ದರು.

ಅವರ ಮರಣಾನಂತರ ಓರ್ವ ಪಂಜಾಬಿ ಹೆಣ್ಣುಮಗಳು ಅವರ ಮಕ್ಕಳಾದ ಅಲೀ ಸಹೋದರರಿಗೆ ಒಂದು ಶೋಕಸಂದೇಶದ ಪತ್ರ ಬರೆಯುತ್ತಾರೆ. ಅದರೊಂದಿಗೆ 10 ರೂಪಾಯಿಗಳನ್ನು ಕಳುಹಿಸಿ ಹೀಗೆ ಬರೆಯುತ್ತಾರೆ………. “ಈಗ ನಾನು ಅವರ ಸಮಾಧಿಗೆ ನನ್ನ ಶ್ರದ್ಧಾಭಕ್ತಿಯ ಪುಷ್ಪಗಳನ್ನು ಅರ್ಪಿಸಬಯಸುತ್ತೇನೆ. ಅಲಹಾಬಾದಿಗೆ ಬರುವಾಗ ದೆಹಲಿಗೆ ಬಂದು ನನ್ನ ಆಸೆಯನ್ನು ಪೂರೈಸಿಕೊಳ್ಳುತ್ತೇನೆ. ನಾನು ಖುದ್ದಾಗಿ ಅವರ ಸಮಾಧಿಯ ಬಳಿ ತೆರಳಿ ಸಮಾಧಿಯ ಮಣ್ಣಿನ ತಿಲಕವನ್ನಿಟ್ಟುಕೊಂಡು ಬರುತ್ತೇನೆ. ಈಗ ನಾನು ಹತ್ತು ರೂಪಾಯಿಗಳನ್ನು ಕಳುಹಿಸುತ್ತಿದ್ದೇನೆ. ಈ ಕಾಣಿಕೆಯ ಐದು ರೂಪಾಯಿಗಳ ಹೂವನ್ನು ಖರೀದಿಸಿ ಅವರ ಸಮಾಧಿಯ ಮೇಲೆ ಹಾಕಿ ಮತ್ತು ಉಳಿದ ಐದು ರೂಪಾಯಿಗಳಿಂದ ಬೀ ಅಮ್ಮಾರ ಹೆಸರಿನಲ್ಲಿ ಬಡಮಕ್ಕಳಿಗೆ ಹಣ್ಣುಗಳನ್ನು ಹಂಚಿರಿ…..”

ಬೀ ಅಮ್ಮಾರ ಹೋರಾಟದ ವೀರ ಕಥಾನಕಕ್ಕೆ ಜನಸಾಮಾನ್ಯರಿಂದ ಸಂದ ಇಂತಹ ಹೃದಯಾಂತರಾಳದ ಶ್ರದ್ಧಾಂಜಲಿಗಿಂತ ಮಿಗಿಲಾದ ಕೃತಜ್ಞತೆ ಅವರ ಹೋರಾಟದ ಸಾರ್ಥಕ ಬದುಕಿಗೆ ಬೇಕಾಗಿಲ್ಲ.

ಆಧಾರ:
1. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಮರ ಕೊಡುಗೆ – ಶಾಂತಿ ಮೈ ರಾಯ್
2. ಅಂಡರ್‌ಸ್ಟ್ಯಾಂಡಿಗ್ ದ ಮುಸ್ಲಿಂ ಮೈಂಡ್ಸ್ – ರಾಜ್ ಮೋಹನ್ ಗಾಂಧಿ
3. ಭಾರತದ ಸ್ವಾತಂತ್ರ್ಯ ಚಳುವಳಿಗೆ ಮುಸ್ಲಿಂ ಮಹಿಳೆಯರ ಕೊಡುಗೆ –ಡಾ|| ಆಬಿದಾ ಸಮೀವುದ್ದೀನ್

  • ಇಸ್ಮತ್ ಪಜೀರ್

ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ಬರವಣಿಗೆಯಲ್ಲಿ ತೀವ್ರ ಆಸಕ್ತಿಯಿರುವ ಇವರು ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.


ಇದನ್ನೂ ಓದಿ: 20ನೆ ಶತಮಾನದ ಭಾರತದ ಮುಸ್ಲಿಂ ಮಹಿಳೆಯರ ಅನನ್ಯ ಸಾಧನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...