“ಸಂಪುಟದಲ್ಲಿರುವ ಹಲವು ಸಚಿವರು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸಮುದಾಯಗಳಿಗೆ ಉಪಮುಖ್ಯಮಂತ್ರಿಯಾಗುವ ಅವಕಾಶ ಸಿಗಬೇಕು. ಲೋಕಸಭೆ ಚುನಾವಣೆಯಿಂದಾಗಿ ಪ್ರಕ್ರಿಯೆ ವಿಳಂಬವಾಗಿದೆ” ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಮ್ಮ ಹಳೆ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ.
ಈ ಕುರಿತು ಸೋಮವಾರ ಮಾತನಾಡಿರುವ ಅವರು, “ಸಂಸತ್ ಚುನಾವಣೆಯಿಂದಾಗಿ ವಿಳಂಬವಾಗಿದೆ; ಪಕ್ಷದ ಹೈಕಮಾಂಡ್ ನನ್ನ ಮನವಿಯನ್ನು ಪರಿಗಣಿಸಬೇಕೆಂದು ನಾನು ಬಯಸುತ್ತೇನೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಅನೇಕ ಸಮುದಾಯಗಳಿಗೆ ಉಪ ಮುಖ್ಯಮಂತ್ರಿ ಪ್ರಾತಿನಿಧ್ಯ ನೀಡಬೇಕು. ಆದರೆ, ನಾನು ಮಹತ್ವಾಕಾಂಕ್ಷಿ ಅಲ್ಲ” ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಈ ಹಿಂದೆ ಇಂತಹ ಪ್ರಯೋಗ ಮಾಡಿದ ಉದಾಹರಣೆಗಳಿವೆ; ಡಿಸಿಎಂ ಮಾಡಿದ ತಕ್ಷಣ ಬೇರೆ ಯಾವ ಸೌಲಭ್ಯಗಳು ಸಿಗಲ್ಲ. ಆದರೆ, ಆಯಾ ಸಮುದಾಯದ ಜನರಲ್ಲಿ ಪ್ರಾತಿನಿಧ್ಯ ದೊರಕಿದೆಂಬ ಸಮಾಧಾನ ಇರುತ್ತದೆ. ಆ ಮೂಲಕ ಆ ಸಮುದಾಯಗಳ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಸಂಪುಟದ ಬಹುತೇಕ ಸಚಿವರ ಸಹಮತವಿದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ” ಎಂದರು.
ಗ್ಯಾರಂಟಿ ಯೋಜನೆಗಳಿಗೆ ಸಚಿವರಿಂದ ಅಪಸ್ವರ ಇಲ್ಲ
ಪಕ್ಷದ ಶಾಸಕರೇ ಗ್ಯಾರಂಟಿ ಯೋಜನೆಗಳಿಗೆ ಅಪಸ್ವರ ಆರಂಭಿಸಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, “ಇದೆಲ್ಲವು ಮಾಧ್ಯಮಗಳ ಸೃಷ್ಟಿ ಮಾತ್ರ. ಕ್ಯಾಬಿನೆಟ್‌ನಲ್ಲಿಯೂ ಸಹ ಈ ಕುರಿತು ಚರ್ಚೆಯಾಗಿಲ್ಲ. ಮುಖ್ಯಮಂತ್ರಿಗಳೆ ಸಹ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಬಡವರಿಗೆ ನೀಡಿದ ಸೌಲಭ್ಯಗಳು ಕಡಿತ ಆಗುವುದಿಲ್ಲ” ಎಂದು ತಿಳಿಸಿದರು.
ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರಿಂದ ಉಪಮುಖ್ಯಮಂತ್ರಿಗಳ ಬೇಡಿಕೆಯೂ ಕೇಳಿ ಬಂದಿತ್ತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಸಂಪುಟದ ಏಕೈಕ ಉಪಮುಖ್ಯಮಂತ್ರಿ ಎಂಬುದು ಗಮನಾರ್ಹ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿಯ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಕಿತ್ತೊಗೆಯಿತು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 66 ಸ್ಥಾನಗಳಿಗೆ ಕುಸಿದಿತ್ತು. ತ್ರಿಕೋನ ಸ್ಪರ್ಧೆಯಲ್ಲಿ ಪ್ರಾದೇಶಿಕ ಜೆಡಿಎಸ್ ಪಕ್ಷ ಕೇವಲ 19 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸ್ವತಂತ್ರ ಅಭ್ಯರ್ಥಿಗಳು ಎರಡು ಸ್ಥಾನಗಳಲ್ಲಿ ಜಯಗಳಿಸಿದರೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮತ್ತು ಸರ್ವೋದಯ ಕರ್ನಾಟಕ ಪಕ್ಷ ತಲಾ ಒಂದು ಸ್ಥಾನವನ್ನು ಗೆದ್ದಿದೆ.
ಇದನ್ನೂ ಓದಿ; ಅಂಗನವಾಡಿ ಕೇಂದ್ರಗಳಲ್ಲೆ ಪೂರ್ವ ಪ್ರಾಥಮಿಕ ಶಿಕ್ಷಣ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್


