Homeಸಾಹಿತ್ಯ-ಸಂಸ್ಕೃತಿಕಥೆ’ಹೀಗೊಂದು ಮಸೀದಿ ವ್ಯಾಜ್ಯದ ತೀರ್ಪು’:  ಹನಮಂತ ಹಾಲಿಗೇರಿಯವರ ಕಥೆ

’ಹೀಗೊಂದು ಮಸೀದಿ ವ್ಯಾಜ್ಯದ ತೀರ್ಪು’:  ಹನಮಂತ ಹಾಲಿಗೇರಿಯವರ ಕಥೆ

“ದರ್ಗಾದ ಜಾಗವೇನೋ ಸಾಬರಿಗೆ ಸಂಬಂಧಪಟ್ಟದ್ದು ಅವರಿಗೆ ಕೊಟ್ಟು ಬಿಡೋಣ” ಅಂಥಂದ ಒಬ್ಬ ಪಂಚ. ಅದ್ಹೇಗೆ ಆಗುತ್ತೆ “ಮೂಲದಲ್ಲಿ ಅದು ಜಾಗ ಹನುಮನೊಕ್ಕಲು ಗ್ರಾಮಕ್ಕೆ ಸಂಬಂಧಪಟ್ಟಿದ್ದರಿಂದ ಹನುಮನ ಭಕ್ತರಿಗೆ ಸೇರಿದ್ದು” ಅಂತ ಇನ್ನೊಬ್ಬ ಅದಕ್ಕೆ ಕೊಕ್ಕೆ ಹಾಕಿದ.

- Advertisement -
- Advertisement -

ಇವತ್ತು ತೀರ್ಪು ಬರುವ ದಿನ. ಈ ದಿನಕ್ಕಾಗಿ ಊರ ಎರಡು ಬಣಗಳ ಜನರು ಕಾತರದಿಂದ ಕಾಯುತ್ತಿದ್ದರು. ಇದೆಲ್ಲ ಒಮ್ಮೆ ಮುಗಿದರೆ ಸಾಕು. ಈ ಸಲ ಏನೋ ಒಂದು ತೀರ್ಪು ಬಂದು ಸಾಯಲಿ, ಮತ್ತೆ ನ್ಯಾಯ ಮುಂದುವರೆಸುವುದು ಬೇಡ. ಎಷ್ಟು ಅಂತ ಜಗಳಾಡುವುದು. ಇದು ತಲೆಮಾರಿಗೆ ಮುಗಿದು ಬಿಡಲಿ. ತೀರ್ಪು ಏನೆ ಬಂದ್ರೂ ನಾವು ಈ ಸಲ ತೆಪ್ಪಗಿದ್ದುಬಿಡೋಣ. ಮತ್ತೆ ತಗಾದೆ ತೆಗೆಯುವುದು ಬೇಡವೇ ಬೇಡ ಎಂದು ಎರಡೂ ಬಣಗಳ ಊರ ಜನರು ನಿರ್ಧರಿಸಿದ್ದರು.

ಹಾಗೆ ನೋಡಿದರೆ ಇದು ದಶಕಗಳ ಜಗಳ. ಹಾಗಂತ ಅಷ್ಟು ದಿನ ಊರ ಪಂಚರು ಸುಮ್ಮನಿದ್ದರು ಅಂಥ ಅರ್ಥವಲ್ಲ. ಅವರು ಆಗಾಗ ಜಗಳ ಬಗೆಹರಿಸಲು ಪ್ರಾಮಾಣಿಕರಾಗಿ ಪ್ರಯತ್ನಿಸುತ್ತಲೇ ಇದ್ರು. ಈಗಾಗಲೇ ಈ ನ್ಯಾಯದ ಬಗ್ಗೆ ನಾಲ್ಕಾರು ತೀರ್ಪುಗಳನ್ನು ಹೊರಡಿಸಲಾಗಿತ್ತು. ಆದಾಗ್ಯೂ ಕೂಡ ನ್ಯಾಯ ಸಿಕ್ಕಿಲ್ಲವೆಂದು ಒಂದು ಪಂಗಡದವರು ತಗಾದೆ ತೆಗೆಯುತ್ತಲೇ ಇದ್ದರು. ಹೀಗಾಗಿ ಈ ವ್ಯಾಜ್ಯದ ಕುರಿತು ಊರ ಪಂಚರಿಗೂ ಕೂಡ ತಲೆ ಚಿಟ್ಟು ಹಿಡಿದಿತ್ತು. ನಮ್ಮ ಮಾತಿಗೆ ಬೆಲೆಯಿಲ್ಲವೆಂದರೆ ನಾವೇಕೆ ತೀರ್ಪು ಕೊಡಬೇಕು ಎಂದು ಅವರು ಒಮ್ಮೊಮ್ಮೆ ಅಹಸನೆ ವ್ಯಕ್ತಪಡಿಸಿದ್ದು ಇದೆ. ಹೀಗಾಗಿ ಈ ಸಲ ನ್ಯಾಯ ಪಂಚಾಯಿತಿಕೆನ ಗೌರವಿಸೋದನ್ನ ಕಲಿರಿ, ನಂಬಿಕೆ ಇಡೋದನ್ನ ಕಲಿರಿ ಅಂತ ಊರ ಹಿರಿಕರು ಎರಡು ಪಂಗಡದವರನ್ನು ಕರೆದು ಬುದ್ಧಿ ಹೇಳಿದ್ದರು.

ಹಾಗೆ ನೋಡಿದರೆ ಈ ಜಗಳ ತುಂಬಾ ಸಿಂಪಲ್ಲು. ಯಾರದೋ ತಲೆ ಹೊಡೆದದ್ದೋ, ಕೊಲೆಯೋ, ಸುಲಿಗೆಯೋ, ಆಸ್ತಿ ಕಳ್ಳತನವೋ ಅತ್ಯಾಚಾರದ್ದೋ, ದೌರ್ಜನ್ಯಕ್ಕೆ ಸಂಬಂಧಪಟ್ಟದ್ದೋ ಆಗಿರಲಿಲ್ಲ. ಆದ್ರೂ ಇವೆಲ್ಲಕ್ಕೂ ಮಿಗಿಲಾದದ್ದು ಎಂದೇ ಹೇಳಬೇಕು. ಈ ವ್ಯಾಜ್ಯ ಎರಡು ದಶಕಗಳ ಹಿಂದಿನದ್ದಾದ್ದರಿಂದ ನಾವು ಆ ಕಾಲದ ಮೂಲಕ್ಕೆ ಹೋಗಿಯೇ ನೋಡಬೇಕು.
***

ಹನುಮನೊಕ್ಕಲು ಎಂಬ ಹಳ್ಳಿಯ ವ್ಯಾಜ್ಯದ ಕಥೆಯಿದು. ಈ ಹಳ್ಳಿ ಪುಟ್ಟುದಾದರೂ ಅಖಂಡ ಭಾರತದ ಪ್ರತಿಬಿಂಬದಂತಿತ್ತು. ಭಾರತದಲ್ಲಿರುವ, ಜಾತಿ ವ್ಯವಸ್ಥೆ, ಧರ್ಮ ಸಂಘರ್ಷ, ವರ್ಗ ಅಸಮಾನತೆ, ಮೌಡ್ಯ, ಕಂದಾಚಾರ ಇತ್ಯಾದಿಗಳೆಲ್ಲವೂ ಈ ಹಳ್ಳಿಯ ಸಂಸ್ಕೃತಿಯೊಂದಿಗೆ ಅಂತರ್ಗತವಾಗಿ ಬೆಸೆದುಕೊಂಡಿದ್ದವು. ಆದಾಗ್ಯೂ ಈ ಹಳ್ಳಿಯ ಬಗ್ಗೆ ಸರ್ವ ಜನಾಂಗದ ಶಾಂತಿಯ ತೋಟ, ಬಹುತ್ವ ಬಳ್ಳಿಗಳ ಸೌಹಾರ್ಧದ ಖನಿ ಎಂಬ ಲೇಖನಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವುದು ಈ ಹಳ್ಳಿಯ ಹೆಗ್ಗಳಿಕೆಯಾಗಿತ್ತು.

ಇಂತಿಪ್ಪ ಹಳ್ಳಿಯಲ್ಲಿ ಎರಡು ದಶಕಗಳ ಹಿಂದೆ ಧೀಡಿರ್ ಎಂದು ದರ್ಗಾ ಒಂದರ ಇರುವಿಕೆಯೊಂದು ಅರಿವಿಗೆ ಬಂದದ್ದೇ ಈ ಎಲ್ಲ ವ್ಯಾಜ್ಯಕ್ಕೆ ಮೂಲವಾಗಿತ್ತು. ಇದೆಲ್ಲ ದಾಡಿವಾಲಾ ಮಾಬುಸಾಬನಿಂದಲೇ ನಡೆದದ್ದು. ಹಾಗೆ ನೋಡಿದರೆ ಈ ಮಾಬುಸಾಬ ಆಡು ಕಾಯುವ ತುಂಬಾ ಆರ್ಡಿನರಿ ನರಪೇತಲು ವ್ಯಕ್ತಿಯೇ. ಮಾಬುಸಾಬನೆಂಬ ವ್ಯಕ್ತಿ ಬದುಕಿದ್ದಾನೆ ಅಂತ ಗೊತ್ತಾಗುತ್ತಿದ್ದುದೇ ವರ್ಷಕ್ಕೊಮ್ಮೆ ನಡೆಯುವ ಅಲೈಹಬ್ಬದಲ್ಲಿ. ಡೋಲಿ ಪಕ್ಕದ ಹಿರೇದೇವರು ಇವನ ಮೈ ಸವಾರಿ ಮಾಡುತ್ತಿದ್ದುದರಿಂದ ಆಲೈ ಹಬ್ಬದ ಐದು ದಿನ ಮಾತ್ರ ಈತ ಊರ ಜನರ ಸಂಕಷ್ಟಗಳನ್ನು ಪರಿಹರಿಸುವ ಸಾಕ್ಷಾತ್ ದೇವರಾಗಿ ಮಾರ್ಪಾಡುಗೊಳ್ಳುತ್ತಿದ್ದ. ಈತ ದೇವರ ಕೊರಳೊಳಗಿಂದ ಲಿಂಬಿಹಣ್ಣು ಹರಿದುಕೊಟ್ಟನೆಂದರೆ ಭಕುತನಿಗೆ ಎಂಥ ಕಷ್ಟವಿದ್ದರೂ ಪರಿಹಾರವಾಯಿತೆಂದೇ ಲೆಕ್ಕ. ಹೀಗಾಗಿ ಅಲೈಹಬ್ಬದ ದಿನಗಳಲ್ಲಿ ಎಲ್ಲ ದೇವರಗಳಿಗಿಂತ ಈ ಹಿರೇದೇವರಿಗೆ ಹನುಮನೊಕ್ಕಲಿನಲ್ಲಿ ದೊಡ್ಡ ಡಿಮ್ಯಾಂಡ್ ಇತ್ತು. ಊರ ಶ್ರೀಮಂತ ಭಕ್ತರು ಸಹ ಮಾಬುಸಾಬನ ಕಾಲಿಗೆ ಬೀಳುವುದಷ್ಟೇ ಅಲ್ಲದೇ, ಭಾರಿ ದುಬಾರಿಯ ಕಾಣಿಕೆಗಳನ್ನು ಕೊಡತೊಡಗಿದ್ದರು. ಕೆಲವರು ದೇವರಿಗೆ ಬೆಳ್ಳಿ, ಬಂಗಾರಗಳ ಕುದುರೆಗಳನ್ನು ಮಾಡಿಸಿಕೊಟ್ಟರೆ, ದೇವರಿರುವ ಮಾಬುಸಾಬನ ಮನೆ ಚನ್ನಾಗಿರಲೆಂದು, ಟಿವಿ, ಪ್ರಿಡ್ಜು, ಫ್ಯಾನು, ಮೊಬೈಲು ಇತ್ಯಾದಿ ಬೆಲೆ ಬಾಳುವ ಸಾಮಾನಗಳನ್ನು, ಜೊತೆಗೆ ದೇವರ ಖರ್ಚಿಗಿರಲೆಂದು ಒಂದಿಷ್ಟು ದುಡ್ಡನ್ನು ಕೊಟ್ಟವರೂ ಇದ್ದಾರೆ.
**

ಆದರೆ ಈ ವರ್ಷ ಅಲೈಹಬ್ಬ ಮುಗಿದು ತಿಂಗಳೊಪ್ಪತ್ತು ಆಗಿರಲಿಲ್ಲ. ಆದ್ರೆ ಒಂದು ಸಂಜೆ ಮಾಬುಸಾಬನ ಮೈಮೇಲೆ ದೇವರೊಂದು ಸವಾರಿ ಮಾಡಿತು. ಗಳಿಗೆಯೊಪ್ಪತ್ತಿನಲ್ಲಿ ನಾ ಕೂಡು ನೀ ಕೂಡು ಎಂದು ಊರ ಭಕ್ತರೆಲ್ಲ ಜಮೆಯಾದರು. ‘ಯಾಕ ದೇವರೇ ತಿಂಗಳ ಹಿಂದಷ್ಟೇ ನಡೆದ ಅಲೈ ಹಬ್ಬದಲ್ಲಿ ನಿನಗೆ ಕೊಡಬೇಕಾದ್ದನ್ನೆಲ್ಲ ಕೊಟ್ಟಿ ಕಳಿಸಿವಿ. ಮತ್ಯಾಕಯ್ಯ ಬಂದು ನರಮನುಷ್ಯರ ಜೀವ ತಿನ್ನಾಕತ್ತಿ? ಅಂತ ದೇವರನ್ನ ಜೋರಾಗಿಯೇ ತರಾಟೆಗೆ ತೆಗೆದುಕೊಂಡರು. “ಹ್ಹಾ ಹ್ಹು ಹ್ಹಾ ಹ್ಹು” ಅಂತ ನಾಲ್ಕಾರು ಸಲ ಹೂಂಕರಿಸಿದ ದೇವರು, ಆಮೇಲೆ ಸುಸ್ತು ಹೊಡೆದಂತಾಗಿ ನಾ ವರ್ಷಕ್ಕೊಮ್ಮೆ ಬರಾಂವ ಅಲ್ಲ. ಇನ್ಮುಂದ ನಿಮ್ಕೂಡ ಇಲ್ಲೆ ಇರಾಂವ. ನೀವು ಭಕ್ತರು ನನಗೊಂದು ದರ್ಗಾ ಕಟ್ಟಿಸಬೇಕು. ಹಿರೇದೇವರು ದೈನಾಸಬಿಟ್ಟು ಪರಿಪರಿಯಿಂದ ಬೇಡಿಕೊಂಡಿತ್ತು.
**

ದೇವರ ಮೇಲೆ ಮರುಕ ಹುಟ್ಟಿ ಎರಡ್ಮೂರು ತಿಂಗಳೊಪ್ಪತ್ತಿನಲ್ಲಿ ತಮ್ಮ ಸ್ಥಿತಿಗನುಗುಣವಾಗಿ ಕೈಲಾದಷ್ಟು ಪಟ್ಟಿ ಹಾಕಿದ್ದ ಭಕ್ತರು ಇಟ್ಟಂಗಿ ಗೋಡೆ ಎಬ್ಬಿಸಿ, ಮೇಲೆ ತಗಡಿನ ಸೀಟ್ ಹೊಚ್ಚಿ ದೇವರಿಗೆ ಅನುಕೂಲ ಮಾಡಿಕೊಟ್ಟಿದ್ದರು. ದರ್ಗಾ ರೆಡಿಯಾದ ಮೇಲೆ ಸಾಬರು ಅದರ ಮೇಲೆ ಒಂದೆರಡು ಹಸಿರು ದ್ವಜಗಳನ್ನು ತಂದು ನೆಟ್ಟರು. ಇತ್ತ ಹಿಂದೂ ಮಂದಿ ಕೂಡ ನಾವೇನು ಕಮ್ಮಿ ಎನ್ನುವಂತೆ ಒಂದೆರಡು ಕೇಸರಿ ದ್ವಜ ನೆಟ್ಟು ಭಕ್ತಿ ಮೆರೆದಿದ್ದರು.

ಮಸೀದಿಯಾದ ಮೇಲೆ ಮಾಬುಸಾಬ ಊರಲ್ಲಿ ದೊಡ್ಡ ಕುಳಾನೆ ಆಗಿಬಿಟ್ಟ. ಅವನು ಉರ್ದ್ವಮುಖಿಯಾಗಿ ದಾಡಿಯಲ್ಲಿ ಕೈಯಾಡಿಸುತ್ತಾ ಚಿಂತಕನ ಪೋಜು ಕೊಡುವುದೇನು, ಕಣ್ಣುಮುಚ್ಚಿ ತಡೆ ತಡೆದು ಕಾರಣಿಕವನ್ನು ನುಡಿದು ಲಿಂಬಿಹಣ್ಣು ಮಂತ್ರಿಸಿಕೊಡುವುದೇನು, ಆನಂದತುಂದಿಲನಾಗಿ ಬಂದ ಭಕುತಾದಿಗಳಿಗೆಲ್ಲ ನವಿಲುಗರಿಯಿಂದ ಆರ್ಶಿವಧಿಸುವುದೇನು. ಸಾಕ್ಷಾತ್ ಕೊಳ್ಳೆಗಾಲ ಭಾಗದ ಮಂತ್ರವಾದಿಯೇ ಹನುಮನೊಕ್ಕಲಿನಲ್ಲಿ ಅವತರಿಸಿದಂತೆ ಅವನಿರುವ ಮಸೀದಿ ಭಾಸವಾಗತೊಡಗಿತು. ಮಾಬುಸಾಬನ ಈ ದೈವಾಟಗಳಿಂದ ಆಕರ್ಷಿತರಾಗಿಯೋ, ಅಥವಾ ಅವನ ಹೇಳಿಕೆಗಳು ಖರೆ ಅನಿಸಿಯೋ ಹನುಮಕ್ಕೊಲಿನ ಸುತ್ತಲ ಹತ್ತು ಹಳ್ಳಿಗಳ ಜನರು ಅವನಲ್ಲಿ ದೇವರ ಹೇಳಿಕೆ ಕೇಳಲು ಶಕ್ತ್ಯಾನುಸಾರ ಕಾಣಿಕೆಗಳೊಂದಿಗೆ ದಾಂಗುಡಿಯಿಡತೊಡಗಿದರು. ಬೆಸ್ತವಾರವಂತೂ ಅವನ ಮಸೀದಿ ಮುಂದೆ ಕಿಲೋಮೀಟರಗಟ್ಲೆ ಭಕ್ತಾದಿಗಳು ಕ್ಯೂನಲ್ಲಿ ನಿಲ್ಲತೊಡಗಿದ್ದರು.
**

ಸ್ವಲ್ಪದಿನ ಇದೆಲ್ಲವೂ ಸಾಂಗವಾಗಿಯೇ ನಡೆಯಿತು. ತಮ್ಮ ತಮ್ಮ ದಿನದ ತುರ್ತುಗಳ ಬಗ್ಗೆ ತಲೆಕೆಡಿಸಿಕೊಂಡಿದ್ದ ಊರುಜನ ಇದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಹನುಮನಗುಡಿಯ ಪೂಜಾರಿ ಮಾನಪ್ಪನವರು ಈ ಮಾಬುಸಾಬ ಕಿರುತಿ ಹೆಚ್ಚಿದಂತೆಲ್ಲ ಕಂಗೆಡತೊಡಗಿದರು. ಅವರು ಕೂಡ ಊರಲ್ಲಿ ಒಬ್ಬ ಪ್ರಮುಖರೇ. ಮಾನಪ್ಪ ಶನಿವಾರಕ್ಕೊಮ್ಮೆ ಹನುಮದೇವರ ಪೌಳಿಯಲ್ಲಿ ಕುಳಿತು ಕಾರಣಿಕ ನುಡಿಯುವುದು ತಲೆತಲಾಂತರದಿಂದ ನಡೆದುಕೊಂಡ ಬಂದ ಪದ್ದತಿ. ಊರಿಗೊಬ್ಳೆ ಪದ್ಮಾವತಿ ಎನ್ನುವಂತೆ ತಲೆತಲಾಂತರದಿಂದಲೂ ಮಾನಪ್ಪಜ್ಜನ ಮನೆಯವರಷ್ಟೇ ಊರಲ್ಲಿ ಕಾರಣಿಕ ಹೇಳುತ್ತಿದ್ದರು.

ಹನುಮದೇವರು ಗ್ರಾಮದ ಆರಾದ್ಯ ದೈವವಾಗಿದ್ದ. ಊರಿನ ಅಸ್ಮಿತೆಯಾಗಿದ್ದ. ಸ್ವಾಭಿಮಾನವಾಗಿದ್ದ. ಹೇಳಿ ಕೇಳಿ ಊರಿನ ಹೆಸರು ಹನುಮನೊಕ್ಕಲು ತಾವೆಲ್ಲ ಹನುಮನ ದಾಸದಾಸಿಯರೆಂದು ಊರ ಜನರೆಲ್ಲ ಹನುಮನನ್ನೆ ತಲೆತಲಾಂತರದಿಂದ ಧ್ಯಾನಿಸುತಾ ಬಂದಿದ್ದರು. ಆದರೆ, ಡೋಂಗ್ರಿ ದರ್ಗಾ ಎಂಬ ಹೆಸರಿನಲ್ಲಿ ಮಸೀದಿಯೊಂದು ತಲೆಯೆತ್ತಿ ಊರೆಲ್ಲ ಆ ಕಡೆ ತಿರುಗುತ್ತಿದ್ದುದು ಮಾನಪ್ಪನ ಒಡಲೊಳಗೆ ಎಂಥದ್ದೋ ಹೇಳಲಿಕ್ಕಾಗದ ಸಂಕಟವೊಂದು ಮೊಟ್ಟೆಯೊಡೆದು ಬೆಳೆಯತೊಡಗಿತ್ತು. ಶನಿವಾರವಾದರೂ ಹನುಮನ ಗುಡಿ ಕಡೆ ಜನ ಬರುವರೇ ಎಂಬಂತೆ ಗುಡಿಯ ಪೌಳಿ ಹತ್ತಿ ಊರ ಕಡೆ ತದೇಕಚಿತ್ತನಾಗಿ ಕಾಯುವ ದುಸ್ಥಿತಿ ಬಂದಮೇಲಂತೂ ಮಾನಪ್ಪ ಕೆಂಡಮಂಡಲಾಗಿದ್ದ.

ಹೊಟ್ಟೆಯುರಿ ತಡೆದುಕೊಳ್ಳಲಿಕ್ಕಾಗದ ಮಾನಪ್ಪ ಕೆಲವು ಹನುಮನ ನಿಷ್ಠಾವಂತ ಭಕ್ತರ ಮುಂದೆ ಸಮಯ ಸಿಕ್ಕಾಗಲೆಲ್ಲ ಮಾಬುಸಾಬನ ವಿರುದ್ಧ ಇಲ್ಲಸಲ್ಲದ್ದನ್ನು ಹೇಳಿಕೊಂಡು ತಿರುಗಾಡತೊಡಗಿದ. “ಮೂಲದೇವರನ್ನು ಕಡೆಗಣಿಸಿ ಎಲ್ಲಿಂದಲೋ ಬಂದಿರುವ ಆ ಸಾಬಿಗ ದೇವರಿಗೆ ಮಣೆ ಹಾಕ್ತಿರಲ್ರಯ್ಯ? ಎಂದು ಹಕ್ಕಿನಿಂದಲೇ ಪ್ರಶ್ನಿಸತೊಡಗಿದ. ಇದು ಹನುಮನ ಒಕ್ಕಲು, ಹನುಮ ಜಾಗದಲ್ಲಿ ತುರಕರಿಗೆ ದರ್ಗಾ ಕಟ್ಟಲು ಬಿಟ್ಟಿದ್ರಲ್ಲಯ್ಯ ಎಂದು ಜನರ ಸ್ವಾಭಿಮಾನವನ್ನು ಕೆಣಕತೊಡಗಿದ್ದ. ಆ ಜಮೀನು ಸಹ ಆ ಸಾಬಿಗಳಿಗೆ ಸೇರಿದ್ದಲ್ಲ, ಊರಿನ ಗೋಮಾಳವದು. ನಿಮಗೆಲ್ಲ ಬುದ್ಧಿ ಇಲ್ಲ. ನಮ್ಮ ಧರ್ಮ, ದೇವರು, ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳುವಳಿಕೆ ಇಲ್ಲ ಎಂದು ತಿವಿಯತೊಡಗಿದ. ಸ್ವಲ್ಪ ದಿನಗಳಲ್ಲಿ ಅವನ ಈ ಕೆಣಕು ಮಾತುಗಳು ಫಲಿತಾಂಶ ನೀಡತೊಡಗಿದವು.

ಇದೆಲ್ಲದರ ಪರಿಣಾಮವಾಗಿ ಯುವಕರ ಗುಂಪೊಂದು ಒಂದಿನ ರಾತ್ರೋರಾತ್ರಿ ದರ್ಗಾವನ್ನು ನೆಲಸಮ ಮಾಡಿಯೇ ಬಿಟ್ಟಿತು. ಅಷ್ಟಕ್ಕೆ ಬಿಡದೇ ಅದೇ ದಿನ ತಮ್ಮ ತಮ್ಮ ಮನೆಗಳಲ್ಲಿ ನೆಮ್ಮದಿಯ ನಿದ್ರೆಯಲ್ಲಿದ್ದ ಮುಸ್ಲಿಮರನ್ನ ಹೊರಗೆಳೆದು ಹೊಡೆದು ಬಡಿದು ಮಾಡಿ, ಎದೆ ಮೇಲಿನ ಅಂಗಿ ಹಿಡಿದು ವಾರ್ನಿಂಗ್ ಕೊಟ್ಟು ಹೆದರಿಸಿ ವಿಜಯೋತ್ಸಾದಲ್ಲಿ ಕೇಕೆ ಹಾಕಿತ್ತು.
**

ಹೀಗೆ ದರ್ಗಾ ಕೆಡವಿ ವರ್ಷಗಳೇ ಉರುಳಿ ಹೋಗಿವೆ. ಅವತ್ತಿನಿಂದ ಊರಲ್ಲಿ ದರ್ಗಾ ಯಾರಿಗೆ ಸೇರಬೇಕು ಎಂಬುದರ ಕುರಿತು ಹತ್ತಾರು ನ್ಯಾಯ ಪಂಚಾಯಿತಿಕಗಳು ನಡೆದಿವೆ. ದರ್ಗಾ ಸಾಬರಿಗೆ ಸೇರಬೇಕು ಅಂತ ಒಮ್ಮೆ, ದರ್ಗಾ ಹಿಂದೂಗಳಿಗೆ ಸೇರಬೇಕು ಅಂತ ಇನ್ನೊಮ್ಮೆ. ಇಲ್ಲ, ಇಬ್ಬರಿಗೂ ಹರಿದು ಹಂಚಿಬಿಟ್ಟರಾಯಿತು ಅಂತ ಮಗದೊಮ್ಮೆ. ಹೀಗೆ ತರಾವರಿ ತೀರ್ಪುಗಳು ಬಂದಿವೆಯಾದರೂ ಪ್ರತಿ ಸಲ ತೀರ್ಪು ಬಂದಾಗಲೂ ಒಬ್ಬರಲ್ಲ ಒಬ್ಬರು ಅಸಹನೆ ವ್ಯಕ್ತಪಡಿಸುತ್ತಲೇ ಇದ್ರು.

ಪ್ರತಿ ಸಲ ಪಂಚಾಯಿತಿಕೆ ನಡೆದಾಗಲೂ ಆ ನಿಮ್ಮ ಜನ ನಮ್ಮ ದರ್ಗಾ ಕೆಡವಿದ್ದಾರೆ. ಈಗ ಕಟ್ಟಿಸಿಕೊಡಿ ಅಂತ ಸಾಬರು ಕೇಳೋದು, ಅದು ನಮ್ಮ ಹನುಮನ ಜಾಗ ಅಲ್ಲಿ ನಾವು ದರ್ಗಾ ಕಟ್ಟಲು ಬಿಡುವುದಿಲ್ಲ ಅಂತ ಹಿಂದೂಗಳು ಹಟ ಹಿಡಿಯೋದು ನಡೆಯುತ್ತಲೇ ಇತ್ತು.

ಇತ್ತೀಚೆಗೆ ಈ ವ್ಯಾಜ್ಯ ಮತ್ತೊಂದು ಹೆಚ್ಚುವರಿ ತಿರುವು ಪಡೆದುಕೊಂಡಿತ್ತು. ಕರಿಕಲ್ಲಿನ ಜೋಡಿ ಪಾದುಕೆಗಳನ್ನು ನ್ಯಾಯಪಂಚರ ಹತ್ತಿರ ಹೊತ್ತು ತಂದ ಯುವಕರ ಗುಂಪೊಂದು ಈ ಪಾದುಕೆಗಳು ಹನುಮ ದೇವರಿಗೆ ಸೇರಿದ್ದು. ಆ ದರ್ಗಾ ಇರುವ ಜಾಗದಲ್ಲಿಯೇ ಸಿಕ್ಕಿವೆ. ಹೀಗಾಗಿ ಆ ಜಾಗದಲ್ಲಿ ಪಾದಗಟ್ಟೆಯನ್ನು ಕಟ್ಟಬೇಕೆಂದು ವಾದ ಮಾಡತೊಡಗಿತ್ತು. ಇದ್ರಿಂದ ಊರಿನ ಎರಡು ಬಣಗಳು ಮತ್ತೆ ಕಾದಾಟಕ್ಕಿಳಿರುವ ಸ್ಪಷ್ಟ ಲಕ್ಷಣಗಳು ಗೋಚರವಾಗತೊಡಗಿದ್ದವು.

ಹೀಗಾಗಿ ಈ ಸಲ ನ್ಯಾಯ ನೀಡಲೇಬೇಕೆಂದು ಸಿರಿಯಸ್ಸಾದ ಊರ ಪಂಚರು, ಹಗಲಿರುಳೆನ್ನದೇ ವಾರಗಟ್ಟಲೇ ಕುಳಿತು ನ್ಯಾಯ ನೀಡುವು ಕುರಿತು ಚಿಂತನೆ ನಡೆಸಿದರು. ಚಿಂತನೆ ಆಳವಾದಂತೆಲ್ಲ ನ್ಯಾಯ ಎನ್ನುವ ಪದವೇ ಅವರಿಗೆ ಗೊಜಲುಗೊಜಲಾಗಿ ಕಾಣತೊಡಗಿತು. ನ್ಯಾಯ ಇನ್ನೊಂದು ಬದಿಯ ಮುಖದಲ್ಲಿ ಅನ್ಯಾಯ ಕಾಣತೊಡಗಿತು. ಒಬ್ಬರಿಗೆ ನೀಡುವ ನ್ಯಾಯ, ಇನ್ನೊಬ್ಬರಿಗೆ ಅನ್ಯಾಯ ಆಗಿ ಕಾಣ್ತದೆ. ಒಂದು ಬಣದ ಪರವಹಿಸಿ ಮಾತನಾಡಿದರೆ, ಇನ್ನೊಂದು ಬಣ ವಿರೋಧಿಸಿದಂತಾಗ್ತದೆ. ನ್ಯಾಯ ಅನ್ನುವುದು ಇನ್ನೊಬ್ಬರಿಗೆ ಅನ್ಯಾಯ ಮಾಡುವುದಕ್ಕಾಗಿಯೇ ಇರುವಂಥದ್ದೇ? ನ್ಯಾಯ ಮರಿಚಿಕೆಯೇ? ಎಂದೆಲ್ಲ ಪಂಚರು ದಿಗಿಲುಗೊಂಡರು. ಆದರೂ ನ್ಯಾಯವನ್ನು ಟೇಬಲ್ ಮೇಲಿಟ್ಟು ಚುಚ್ಚಿಚುಚ್ಚಿ ಎಳೆ ಎಳೆಯಾಗಿ ಬಿಡಿಸಿ ನೋಡಿ ಆಪರೇಶನ್ ಮಾಡಿದರು. ನ್ಯಾಯ ಸತ್ತಿತೋ, ಬದುಕಿತೋ ಅವರಿಗೂ ಗೊತ್ತಾಗಲಿಲ್ಲ.

“ದರ್ಗಾದ ಜಾಗವೇನೋ ಸಾಬರಿಗೆ ಸಂಬಂಧಪಟ್ಟದ್ದು ಅವರಿಗೆ ಕೊಟ್ಟು ಬಿಡೋಣ” ಅಂಥಂದ ಒಬ್ಬ ಪಂಚ.
ಅದ್ಹೇಗೆ ಆಗುತ್ತೆ “ಮೂಲದಲ್ಲಿ ಅದು ಜಾಗ ಹನುಮನೊಕ್ಕಲು ಗ್ರಾಮಕ್ಕೆ ಸಂಬಂಧಪಟ್ಟಿದ್ದರಿಂದ ಹನುಮನ ಭಕ್ತರಿಗೆ ಸೇರಿದ್ದು” ಅಂತ ಇನ್ನೊಬ್ಬ ಅದಕ್ಕೆ ಕೊಕ್ಕೆ ಹಾಕಿದ.

“ಅಲ್ರಯ್ಯ, ದರ್ಗಾ ಮೊದಲು ಅಲ್ಲೆ ಇತ್ತು ತಾನೆ? ಮತ್ತೆ ಅಲ್ಲೆ ಕಟ್ಟಿಕೊಳ್ಳಲಿ ಬಿಡಿ” ಅಂದ ಮತ್ತೊಬ್ಬ.
“ಮತ್ತೆ ಅಲ್ಲೆ ಈಗ ಹನುಮನ ಪಾದುಕೆಗಳು ಸಿಕ್ಕಿವೆಯಲ್ಲ” ಇದು ಮಗದೊಬ್ಬನ ಪ್ರಶ್ನೆ.
“ಪಾದುಕೆಗಳನ್ನು ಒಯ್ದು ಹನುಮಪ್ಪನ ಗುಡಿಯಲ್ಲಿ ಒಯ್ದು ಇಟ್ರಾತಪ್ಪ” ಒಬ್ಬ ಅಳುಕಿನಿಂದಲೇ ಹೇಳಿದ.
“ಅಯ್ಯ, ನಾವೇನು ಹಂಗೆ ನ್ಯಾಯ ಕೊಡ್ತಿವಿ ಖರೆ, ಆದ್ರೆ ಕೇಳಬೇಕಲ್ಲ ಅವರು, ಮೊದಲೇ ಊರಾಗಿರೋ ಉಡಾಳ ಹುಡುಗರ ಗುಂಪು ಆ ಪೂಜಾರಿ ಮಾನಪ್ಪನ ಕಡೆ ಐತೆ” ಮತ್ತೊಬ್ಬ ಇರೋ ವಾಸ್ತವ ನುಡಿದ.
“ಹೌದೌದು, ನಮ್ಮ ನ್ಯಾಯ ಪಂಚಾಯಿತಿ ಮೇಲೆ ಅವರಿಗೆಲ್ಲ ನಂಬಿಕೆ ಇದ್ರೆ ಹೀಗೆ ದರ್ಗಾ ಯಾಕೆ ನೆಲಸಮ ಮಾಡ್ತಿದ್ರು ಅವ್ರು? ಅವರಿಗೆ ನ್ಯಾಯ ಬೇಕು ಖರೆ. ಆದ್ರೆ, ಆ ನ್ಯಾಯ ಅವರ ಕಡೆನೇ ಇರಬೇಕು. ಇಲ್ಲದಿದ್ರೆ ಊರತುಂಬಾ ರಕ್ತ ಹರಿಸಿ, ಬೆಂಕಿಯಾಟಾ ಆಡ್ತಾರೆ ಆ ಹುಡ್ರು” ಎಂದು ಇನ್ನೊಬ್ಬ ಮೇಲಿನವನ ಮಾತಿಗೆ ಒಂದಿಷ್ಟು ಉಪ್ಪು ಕಾರ ಹಚ್ಚಿದ.
“ಹಂಗಂತ, ಅವರಿಗೆ ಹೆದರಿಕೊಂಡು ಪಂಚಾತಿಕೆ ಮಾಡಾಕಾಗುತ್ತೇನ್ರಿ. ಗದ್ಲ ಮಾಡಿದ್ರ ಪೊಲೀಸ್ ಠಾಣಾ, ಕೋರ್ಟು ಕಚೇರಿಗೆ ಒಯ್ದು ನಾಲ್ಕು ಒತ್ತಾ ಒದಿಸೋಣ ಅಷ್ಟೆ” ಒಬ್ಬ ಪಂಚ ದೈರ್ಯವಹಿಸಿ ಮುನ್ನುಗ್ಗುವ ಮಾತಾಡಿದ.
“ಒಹೋಹೋ, ಕೋರ್ಟು ಕಚೇರಿ ಅವರಿಗೆ ಹೊಸತೇನ್ರಿ. ಈಗ ಗ್ರಾಮ ಪಂಚಾಯತಿ ಅಧಿಕಾರ ಅವರ ಕೈಯಲ್ಲೆ ಐತೆ. ಮೇಲಾಧಿಕಾರಿಗಳೆಲ್ಲ ಅವರ ಬುಟ್ಯಾಗ ಅದಾರ. ಅದೆಲ್ಲ ಆಗೂದಲ್ಲ ಹೋಗೋದಲ್ಲ” ಇನ್ನೊಬ್ಬ ಮುನ್ನುಗ್ಗುತ್ತಿದ್ದವನಿಗೆ ಮೂಗುದಾರ ಹಾಕಿದ.
“ಏ ಬಿಡ್ರಯ್ಯ, ಇಬ್ಬರಿಗೂ ಅನ್ಯಾಯ ಮಾಡೋದು. ಇಬ್ರಿಗೂ ನ್ಯಾಯ ಕೊಡೋಣ. ಅದಕ್ಕ ನಾ ಒಂದು ಅಕಲು ಮಾಡೋಣ. ನೀವು ಹೇಳಿದಂಗೆ ಮಾನಪ್ಪನ ಉಡಾಳ ಹುಡ್ರು ಏನ್ ಹೇಳಿದ್ರು ಕೇಳಂಗಿಲ್ಲ ಅನ್ನೋದು ಖರೆ. ಅದಕ್ಕಂತ ಆ ಜಾಗಾ ಅವರಿಗೆ ಬಿಟ್ಟು ಕೊಡೋಣ. ಅವರು ಹನುಮಪ್ಪನಿಗೆ ಪಾದಗಟ್ಟಿ ಕಟ್ಟಿಸಲಿ. ಹೆಂಗೂ ಮುಸಲರ ಮನೆಗೊಳು ನಮ್ಮೂರಾಗ ಬಾಳ ಕಡಿಮಿ ಅದಾವು. ಅವರೇನು ಗಲಾಟೆ ಮಾಡೂದಿಲ್ಲ. ಹಂಗಂತ ಅವರಿಗೂ ಅನ್ಯಾಯ ಮಾಡೋದು ಬ್ಯಾಡ. ಅವರಿಗೆ ಬ್ಯಾರೆ ಕಡೆ ದರ್ಗಾ ಕಟ್ಟಿಸಿಕೊಳ್ಳಾಕ ಐದು ಗುಂಟಾ ಜಾಗ ಕೊಡೋಣು” ಎಂದು ಊರ ಹಿರಿತಲೆಯಾದ ಪಡೆದಯ್ಯಜ್ಜ ಅಂತಿಮವಾಗಿ ಎಂಬಂತೆ ಮಾತನಾಡಿದ. ಉಳಿದವ್ರಿಗೂ ಇದಕ್ಕಿಂತ ಬೇರೆ ದಾರಿ ಕಾಣಿಸಲಿಲ್ಲ.
**

ಈ ತಿರ್ಪು ಇನ್ನೇನು ಎರಡು ದಿನಗಳಲ್ಲಿ ಹೊರ ಬೀಳುವುದಿತ್ತು. ಅದಕ್ಕೂ ಮುನ್ನ ಊರ ಪಂಚರು ಹಲವಾರು ತರಹದ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು. “ನಾಡಿದ್ದು ಪಂಚರು ದರ್ಗಾದ್ದು ತೀರ್ಪು ಕೊಡ್ತರ‍್ರಿ. ತೀರ್ಪು ಕೊಡು ದಿನ ಯರ‍್ರೂ ಗದ್ದಲ ಮಾಡಬಾರದ್ರಿ. ಶಾಂತಿ ಕಾಪಾಡಕೋಬೇಕಂತ್ರೆಪೋ” ಅಂತ ಡಂಗುರ ಸಾರಿಸಿದ್ರು. ಪಕ್ಕದ ಟೌನ್ ಪೊಲೀಸ್ ಠಾಣಕ್ಕಾ ಹೋಗಿ ಅವತ್ತು ನಾಲ್ಕೂರು ಜನ ಪೊಲೀಸರನ್ನು ಹನುಮನೊಕ್ಕಲಿಗೆ ಡೂಟಿ ಹಾಕಬೇಕೆಂದು ಅರ್ಜಿ ಬರೆದುಕೊಟ್ಟು ಬಂದರು.

ಅಷ್ಟೆ ಅಲ್ಲದೇ ಈ ಸಲ ಊರ ಪಂಚರೆಲ್ಲ ಸೇರಿ ಎರಡು ಬಣಗಳಲ್ಲಿ ವಾದ ಮಾಡುತ್ತಿದ್ದ ಮುಖಂಡರನ್ನು ಕರೆಸಿ ಮೀಟಿಂಗ್ ಮಾಡಿದರು. ಈ ಹಿಂದೆಂದೂ ಕೊಡದೆ ಇರೋ ಒಂದೊಳ್ಳೆ ತೀರ್ಪುನ್ನು ಈ ಸಲ ಕೊಡ್ತಿವಿ. ಎರಡು ಬಣಕ್ಕೆ ಅನ್ಯಾಯವಾಗದಂತೆ ತೀರ್ಪುಕೊಡೂದು ನಮ್ಮ ಜವಾಬ್ಧಾರಿ. ಆದ್ರೆ ಒಂದು ವಿನಂತಿ. ತಿರ್ಪು ಬಂದ ಮೇಲೆ ಯಾರೂ ತಗಾದೆ ತೆಗಿಬಾರದು. ತಮ್ಮ ಅಸಹನೆಯನ್ನು ಅದುಮಿಟ್ಟುಕೊಂಡಿರಬೇಕು. ಏನೇ ಆದ್ರೂ ಈ ಸಲ ಈ ಜಗಳಕ್ಕೆ ಮಂಗಳ ಹಾಡಿ ಬಿಡೋಣ. ಎಷ್ಟು ಅಂತ ನಾವು ನೀವು ಜಗಳ ಮಾಡುವುದು? ನಮ್ಮ ತಲೆಮಾರಿಗೆ ಇದು ಮುಗಿದು ಹೋಗಲಿ. ನೀವೇ ನಿಮ್ಮ ನಿಮ್ಮ ಬಣಗಳಿಗೆ, ಸಮದಾಯಗಳಿಗೆ ತಿಳಿ ಹೇಳಿ ಶಾಂತಿ ಕಾಪಾಡಬೇಕು ಎಂದೆಲ್ಲ ವಾರ್ನಿಂಗ್ ಮಾಡಿ ಕಳಿಸಿದರು.
**

ತೀರ್ಪು ಕೊಡೋ ದಿನ ಬಂದೇ ಬಿಟ್ಟಿತು. ಸಾಬರು, ಹಿಂದೂಗಳು ಸೇರಿದಂತೆ ಊರ ಜನರೆಲ್ಲ ಪಂಚಾಯಿತಿ ಕಟ್ಟೆ ಮುಂದೆ ಸೇರಿದರು. ತೀರ್ಪು ಕೊಡುವ ಪಂಚರು ಅಲ್ಲೆ ಇದ್ದ ಹನುಮನ ಪಟಕ್ಕೆ ಪೂಜೆ ಸಲ್ಲಿಸಿದರು. ಸೂಜಿ ಬಿದ್ರು ಸಪ್ಪಳ ಆಗುವಂತ ಮೌನ. ಪಂಚರೊಳಗಿದ್ದ ಹಿರಿಯೊಬ್ಬರು ಮಾತಾಡತೊಡಗಿದರು. ನನ್ನೂರಿನ ಹಿಂದೂ ಮುಸ್ಲಿಂ ಅಣ್ಣತಮ್ಮಂದ್ರಾ, ಸಾವಿರಾರು ವರ್ಷಗಳಿಂದ ನಮ್ಮೂರಲ್ಲಿ ನಾವೆಲ್ಲ ಒಡಹುಟ್ಟಿದವರಂಗ ಹೊಂದಿಕೊಂಡು ಬದುಕುತ್ತಿದ್ದೇವೆ. ಖರೆ ಹೇಳಬೇಕಂದ್ರ ನೀವು ಮುಸಲರು ನಮ್ಮೂರವರು ಅಲ್ಲ. ಯಾವುದೋ ಕಾಲದಲ್ಲಿ ನಿಮ್ಮ ತಾತ ಮುತ್ತಾತರು ನಮ್ಮ ಊರಿಗೆ ಬದುಕನ್ನು ಅರಿಸಿಕೊಂಡು ಖಾಲಿ ಕೈಯಲ್ಲಿ ಬಂದ್ರು. ನಾವು ಬಂದವರಿಗೆ ಇರಲು ಜಾಗ ಕೊಟ್ಟೆವು. ಮಾಡಲು ಕೂಲಿ ಕೊಟ್ಟು ಹೊಟ್ಟೆಗೆ ಹಿಟ್ಟು ನೀಡಿದೇವು. ದಿನಗಳೆದಂತೆ ನೀವು ನಮ್ಮೂರಿನವರೇ ಆಗಿದ್ದಿರಿ. ಈಗ ಅದೆಲ್ಲ ಹೆಳಬಾರದು ಖರೆ. ಆದ್ರೂ ನಮ್ಮ ಇತಿಹಾಸವನ್ನು ನಾವೊಮ್ಮೆ ತಿರುಗಿ ನೋಡಬೇಕಾಗುತ್ತದೆ.

ಈಗ ಯಕಶ್ಚಿತ್ ದರ್ಗಾದಿಂದ ಜಗಳ ಶುರುವಾಗಿದೆ. ಇದಕ್ಕೆ ಈ ಹೊತ್ತು ಒಕ್ಕೋರಲಿನಿಂದ ಕೊನೆ ಹೇಳೊದಕ್ಕೆ ನಾವೆಲ್ಲ ಇಲ್ಲಿ ಸೇರಿದ್ದಿವಿ. ಮತ್ತೆ ನಾವು ನಮ್ಮ ಸೌಹಾರ್ಧಯುತ ಹಳೆ ಬದುಕಿಗೆ ಹಿಂದಿರುಗಬೇಕಿದೆ. ಈ ಜಗಳ ಎರಡೂ ಬಣಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ ಅನ್ನೋದು ನನಗೂ ಗೊತ್ತು. ಆದ್ದರಿಂದ ನಾವು ಪಂಚರು ಈ ಸಲ ಎರಡೂ ಬಣದವರಿಗೆ ಅನ್ಯಾಯವಾಗದಂತೆ ಒಂದೊಳ್ಳೆ ತೀರ್ಪು ನೀಡುತ್ತಿದ್ದೇವೆ. ಅದಕ್ಕೂ ಮೊದಲು ನಾವು ಒಂದು ಸಂಕಲ್ಪ ಮಾಡೋಣ. “ತೀರ್ಪು ಏನೇ ಬಂದರೂ ನಾವು ಉದ್ವೇಗಕ್ಕೆ ಒಳಗಾಗುವುದಿಲ್ಲ. ನಗುಮುಖದಿಂದಲೇ ಸ್ವೀಕರಿಸುತ್ತೇವೆ ಎಂದು ನಿಮ್ಮ ನಿಮ್ಮ ಎದೆ ಮೇಲೆ ಕೈಯಿಟ್ಟುಕೊಂಡು ಪ್ರಮಾಣ ಮಾಡಿ ಹೇಳಿ ಎಂದು ಸೇರಿದವರೆಲ್ಲರಿಂದಲೂ ಪ್ರಮಾಣ ಮಾಡಿಸಿದರು. ಆದರೆ, ಪ್ರಮಾಣ ಮಾಡುತ್ತಿದ್ದ ಸಂದರ್ಭಲ್ಲಿ ಕೆಲವರ ಮಾತಾಡುತ್ತಿದ್ದ ಗುಸು ಗುಸು ನಿಧಾನಕ್ಕೆ ತಾರಕಕ್ಕೇರತೊಡಗಿತು.

ಇನ್ನು ತಡ ಮಾಡೋದು ಬೇಡ ಎಂದುಕೊಂಡ ಹಿರಿಯರು ಮತ್ತೆ ಜೋರಾಗಿ “ಪಂಚರು ತಿರ್ಮಾನಿಸಿದ ತೀರ್ಪು ಏನಪಾ ಅಂದ್ರ, ಮುಸಲರು ಕಷ್ಟಪಟ್ಟು ಅಲ್ಲಿ ದರ್ಗಾ ಕಟ್ಟಿಕೊಂಡಿದ್ದಾರೆ. ಅವರ ಧಾರ್ಮಿಕ ನಂಬಿಕೆಯನ್ನು ನಾವು ಗೌರವಿಸಬೇಕು. ಆದರೆ, ದರ್ಗಾ ಕಟ್ಟಿರುವ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದ ಗೋಮಾಳ. ಅದ್ರಲ್ಲೂ ಅದು ಹನುಮನೊಕ್ಕಲ ಗ್ರಾಮಕ್ಕೆ ಸೇರಿದ್ದರಿಂದ ಹನುಮನಿಗೆ ಸೇರಿದ್ದು ಎಂಬ ನಂಬಿಕೆ ಊರ ಜನರಲ್ಲಿದೆ. ಹೀಗಾಗಿ ನಂಬಿಕೆಯನ್ನು ಗೌರವಿಸುವುದು ಮುಖ್ಯ. ಆ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡೇ ಆ ಜಾಗ ಹಿಂದೂಗಳಿಗೆ ಸೇರಿದ್ದು ಎಂಬ ಮಹತ್ವದ ಸೌಹಾರ್ಧಯುತ ತೀರ್ಪು ನೀಡಲಾಗಿದೆ. ಆ ಜಾಗವನ್ನು ಹನುಮನ ಭಕ್ತರಿಗಾಗಿ ಬಿಟ್ಟುಕೊಡಬೇಕು. ಊರ ಹೊರಗಿರುವ ಸ್ಮಶಾನದ ಪಕ್ಕದ ಮಡ್ಡಿಯಲ್ಲಿ ಮುಸಲರು ದರ್ಗಾ ಕಟ್ಟಿಕೊಳ್ಳಲು ಐದು ಗುಂಟೆ ಜಾಗವನ್ನು ಗ್ರಾಮಪಂಚಾಯತಿಯಿಂದ ನೀಡಬೇಕು. ಇದು ನಮ್ಮ ತೀರ್ಪು ಎಂದಾಗ ಜನರ ಹರ್ಷೋದ್ಘಾರಗಳು ಮುಗಿಲುಮುಟ್ಟಿದವು. ಜೈಹನುಮಾನ ಎಂಬ ಘೋಷನೆಗಳು ಕಿಕ್ಕಿರಿದವು. ಕೆಲವರು ಮುಸ್ಲಿಂ ಬಾಂಧವರನ್ನು ಎಳೆದು ತಕ್ಕೆಗೆ ತೆಗದುಕೊಂಡು ಸೆಲ್ಫಿ ತೆಗೆಸಿಕೊಳ್ಳತೊಡಗಿದರು. “ಸ್ಮೈಲ್ ಪ್ಲೀಸ್” ಎಂದೊಡನೆ ಬಿಳುಚಿಕೊಂಡಂತಿದ್ದ ಸಾಬರ ಮುಖಗಳು ವಿಕಾರವಾಗಿ ನಗುಸೂಸತೊಡಗಿದವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...