ಅತ್ಯಾಚಾರ ಪ್ರಕರಣದ ಅಪರಾಧಿ ಮತ್ತು ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುನ ಅಹಮದಾಬಾದ್‌ನ ಮೊಟೇರಾದಲ್ಲಿರುವ ಆಶ್ರಮದಿಂದ 45,000 ಚದರ ಮೀಟರ್‌ಗೂ ಹೆಚ್ಚು ಭೂಮಿಯನ್ನು ವಾಪಸ್ ಪಡೆಯಲು ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ನಂತರ ಈ ಆದೇಶ ಹೊರಡಿಸಲಾಗಿದೆ.
ಅಧಿಕಾರಿಗಳು ಅಂದಾಜು ಪ್ರಕಾರ 500 ಕೋಟಿ ರೂಪಾಯಿ ಮೌಲ್ಯದ ಆಶ್ರಮದ ಭೂಮಿ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದ ಬಳಿ ಇದೆ.
ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಹಲವು ದಶಕಗಳ ಹಿಂದೆ ಕೇವಲ ಸೀಮಿತ ಧಾರ್ಮಿಕ ಬಳಕೆಗಾಗಿ ಮಾತ್ರ ಆಶ್ರಮಕ್ಕೆ ಭೂಮಿ ಮಂಜೂರು ಮಾಡಲಾಗಿತ್ತು. ಈ ಮಂಜೂರಾತಿಯು ಕೆಲವು ಕಟ್ಟುನಿಟ್ಟಾದ ಷರತ್ತುಗಳಿಗೆ ಒಳಪಟ್ಟಿದ್ದು, ಅದರಂತೆ ಅಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ, ಅನಧಿಕೃತ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಮತ್ತು ಸರ್ಕಾರವು ನಿಗದಿಪಡಿಸಿದ ಪ್ರದೇಶವನ್ನು ಮೀರಿ ಜಾಗವನ್ನು ವಿಸ್ತರಣೆ ಮಾಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಷರತ್ತುಗಳನ್ನು ಕಾಲಾನಂತರದಲ್ಲಿ ಉಲ್ಲಂಘಿಸಲಾಗಿದೆ, ಮೂಲತಃ ಹಂಚಿಕೆಯಾಗಿದ್ದಕ್ಕಿಂತ ಹೆಚ್ಚಿನ ಭೂಮಿಯಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದಿದೆ.
ರಾಜ್ಯ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಪ್ರಮುಖ ಸರ್ಕಾರಿ ಅಭಿಯೋಜಕ. ಭೂಮಿಯನ್ನು ಮರಳಿ ಪಡೆಯುವ ಕ್ರಮವು ದೀರ್ಘ ಮತ್ತು ರಚನಾತ್ಮಕ ಆಡಳಿತ ಪ್ರಕ್ರಿಯೆಯ ಫಲಿತಾಂಶವಾಗಿದೆ ಎಂದು ತಿಳಿಸಿದ್ದಾರೆ. ಆಶ್ರಮಕ್ಕೆ ಅನೇಕ ಶಾಸನಬದ್ಧ ನೋಟಿಸ್‌ಗಳನ್ನು ನೀಡಲಾಗಿದೆ ಮತ್ತು ಪದೇ ಪದೇ ವಿಚಾರಣೆಗೆ ಅವಕಾಶಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಅನಧಿಕೃತ ನಿರ್ಮಾಣಗಳನ್ನು ಸಕ್ರಮಗೊಳಿಸುವಂತೆ ಕೋರಿ ಆಶ್ರಮವು ಹಲವಾರು ಅರ್ಜಿಗಳನ್ನು ಸಲ್ಲಿಸಿದೆ. ಈ ಅರ್ಜಿಗಳನ್ನು ಪುರಸ್ಕರಿಸಿದರೆ ಉಲ್ಲಂಘನೆಗಳನ್ನು ಒಪ್ಪಿಕೊಂಡಂತೆ ಎಂದು ಸರ್ಕಾರಿ ಅಭಿಯೋಜಕ ಹೇಳಿದ್ದಾರೆ.
ಆಶ್ರಮದ ಆವರಣದಲ್ಲಿರುವ ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸುವ ಅರ್ಜಿಗಳನ್ನು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಪರಿಶೀಲಿಸಿದೆ ಮತ್ತು ಅವುಗಳನ್ನು ತಿರಸ್ಕರಿಸಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
30ಕ್ಕೂ ಹೆಚ್ಚು ನಿರ್ಮಾಣಗಳು ಅನಧಿಕೃತವೆಂದು ಕಂಡುಬಂದಿವೆ. ಅಂತಹ ನಿರ್ಮಾಣಗಳನ್ನು ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಎಎಂಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಆಶ್ರಮದ ಶುಲ್ಕ ಅರ್ಜಿಯನ್ನು ತಿರಸ್ಕರಿಸಿ, ಈ ವಿಷಯವನ್ನು ಸೂಕ್ತ ಮೇಲ್ಮನವಿ ಪ್ರಾಧಿಕಾರದ ಮುಂದೆ ಇಡುವಂತೆ ನಿರ್ದೇಶಿಸಿದ ಎಎಂಸಿಯ ಜನವರಿ 21, 2026 ರ ನಿರ್ಧಾರವನ್ನು ನ್ಯಾಯಾಲಯದ ಮುಂದೆ ಉಲ್ಲೇಖಿಸಲಾಗಿದೆ.
ಸಲ್ಲಿಕೆಗಳು ಮತ್ತು ದಾಖಲೆಗಳಲ್ಲಿ ಇರಿಸಲಾದ ಸಾಮಗ್ರಿಗಳನ್ನು ಪರಿಗಣಿಸಿದ ನಂತರ, ನ್ಯಾಯಾಲಯವು ಭೂಮಿಯನ್ನು ಮರಳಿ ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ.
ಹಂಚಿಕೆ ಷರತ್ತುಗಳು ನಿರ್ದಿಷ್ಟ ಮತ್ತು ಬದ್ಧವಾಗಿವೆ. ದಾಖಲೆಯು ಅನುಮತಿಸಲಾದ ಮಿತಿಗಳನ್ನು ಮೀರಿ ವಿಸ್ತರಣೆ ಮತ್ತು ನಿರ್ಮಾಣ ಕಾರ್ಯ ಮಾಡಿರುವುದನ್ನು ತೋರಿಸಿದೆ ಎಂದು ನ್ಯಾಯಾಲಯ ಹೇಳಿದೆ. ಅಧಿಕಾರಿಗಳು ತೆಗೆದುಕೊಂಡ ಆಡಳಿತಾತ್ಮಕ ಕ್ರಮದಲ್ಲಿ ಯಾವುದೇ ಕಾನೂನುಬಾಹಿರತೆಯನ್ನು ಕಂಡುಕೊಂಡಿಲ್ಲ ಎಂದು ತಿಳಿಸಿದೆ.
ಸ್ವಯಂ ಘೋಷಿತ ದೇವಮಾನವ ಅಸಾರಾಂ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದು, ಪ್ರಸ್ತುತ ಆರು ತಿಂಗಳ ಅವಧಿಗೆ ಜಾಮೀನಿನ ಮೇಲೆ ಹೊರಗಿದ್ದಾನೆ.


