ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ.
ಇದಕ್ಕೂ ಕೆಲ ಗಂಟೆಗಳ ಮೊದಲು, ಟ್ರಂಪ್ ವಿಧಿಸಿದ್ದ ವ್ಯಾಪಕ ಆಮದು ಸುಂಕಗಳನ್ನು ಅಥವಾ ಪ್ರತಿ ಸುಂಕಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಈಗ ಹೊಸದಾಗಿ ಘೋಷಿಸಿರುವ ಸುಂಕಗಳು ಫೆಬ್ರವರಿ 24ರಂದು ಭಾರತೀಯ ಕಾಲಮಾನ ಬೆಳಿಗ್ಗೆ 10:31ಕ್ಕೆ ಜಾರಿಗೆ ಬರಲಿವೆ.
“ನಾನು ಇದೀಗ ಓವಲ್ ಆಫೀಸ್‌ನಿಂದ ಎಲ್ಲಾ ದೇಶಗಳ ಮೇಲೆ ಜಾಗತಿಕ ಶೇಕಡ 10 ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಿರುವುದು ನನ್ನ ಪಾಲಿನ ದೊಡ್ಡ ಗೌರವವಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ” ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ಶ್ವೇತ ಭವನವು ತನ್ನ ಮಾಹಿತಿ ಪತ್ರದಲ್ಲಿ ಅಮೆರಿಕವು ಕಾನೂನುಬದ್ಧವಾಗಿರುವ ಪರಸ್ಪರ ವ್ಯಾಪಾರ ಒಪ್ಪಂದಗಳನ್ನು ಮುಂದುವರಿಸುವುದಾಗಿ ತಿಳಿಸಿದೆ. ಅಲ್ಲದೆ, ತನ್ನ ವ್ಯಾಪಾರ ಪಾಲುದಾರ ರಾಷ್ಟ್ರಗಳು ಸಹ ಇದೇ ಮಟ್ಟದ ಬದ್ಧತೆಯನ್ನು ಪ್ರದರ್ಶಿಸಲಿವೆ ಎಂದು ನಿರೀಕ್ಷಿಸುವುದಾಗಿ ಹೇಳಿದೆ.
ಇದಕ್ಕೂ ಮುನ್ನ, “ಇಂದು ನಾನು ಸೆಕ್ಷನ್ 122ರ ಅಡಿಯಲ್ಲಿ ಶೇಕಡ 10 ಜಾಗತಿಕ ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಲಿದ್ದೇನೆ. ಇದು ಈಗಾಗಲೇ ವಿಧಿಸಲಾಗುತ್ತಿರುವ ಸಾಮಾನ್ಯ ಸುಂಕಗಳಿಗಿಂತ ಹೆಚ್ಚುವರಿಯಾಗಿರಲಿದೆ. ನಾನು ಇದಕ್ಕಿಂತ ಹೆಚ್ಚಿನ ಸುಂಕ ವಿಧಿಸಲು ಸಮರ್ಥನಿದ್ದೇನೆ” ಎಂದು ಟ್ರಂಪ್ ಘೋಷಿಸಿದ್ದರು.
ಹೊಸ ಸುಂಕ ತಕ್ಷಣವೇ ಜಾರಿಗೆ ಬರಲಿದ್ದು, 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಸುಮಾರು ಐದು ತಿಂಗಳ ಕಾಲ ಜಾರಿಯಲ್ಲಿರುತ್ತದೆ ಎಂದು ವರದಿಗಳು ಹೇಳಿವೆ.
“ಐದು ತಿಂಗಳ ಅವಧಿಯಲ್ಲಿ ಇತರ ದೇಶಗಳ ಮೇಲೆ ನ್ಯಾಯಯುತವಾದ ಸುಂಕಗಳನ್ನು ಅಥವಾ ಹೆಚ್ಚಿನ ಸುಂಕಗಳನ್ನು ವಿಧಿಸಲು ಅಗತ್ಯವಿರುವ ವಿವಿಧ ಮಾರ್ಗಗಳನ್ನು ನಾವು ಕಂಡುಕೊಳ್ಳಲಿದ್ದೇವೆ” ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹೊಸ ಸುಂಕ 150 ದಿನಗಳಿಗಿಂತ ಹೆಚ್ಚು ಅವಧಿಗೆ ಮುಂದುವರಿಯಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನಮಗೆ ಬೇಕಾದುದನ್ನು ಮಾಡುವ ಪೂರ್ಣ ಹಕ್ಕು ನಮಗಿದೆ. ನಾವು ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಬದಲಾಯಿಸಲಿದ್ದೇವೆ. ಇದು ಇಂದಿನಿಂದ ಮೂರು ದಿನಗಳ ನಂತರ ಜಾರಿಗೆ ಬರಲಿದೆ ಎಂದು ನಾನು ಭಾವಿಸುತ್ತೇನೆ” ಎಂಬುವುದಾಗಿ ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೇತೃತ್ವದ ಅಮೆರಿಕ ಸುಪ್ರೀಂ ಕೋರ್ಟ್ ಪೀಠವು 6-3 ಬಹುಮತದೊಂದಿಗೆ ಟ್ರಂಪ್ ವಿವಿಧ ರಾಷ್ಟ್ರಗಳ ಮೇಲೆ ವಿಧಿಸಿದ್ದ ಪ್ರತಿ ಸುಂಕವನ್ನು ರದ್ದುಗೊಳಿಸಿದೆ. ಕಾಂಗ್ರೆಸ್ (ಸಂಸತ್) ಅನುಮತಿಯಿಲ್ಲದೆ ಸುಂಕಗಳನ್ನು ವಿಧಿಸಲು ಟ್ರಂಪ್ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಬಳಸಿಕೊಂಡಿರುವುದು ಅಸಿಂಧು ಎಂದು ನ್ಯಾಯಾಲಯ ಘೋಷಿಸಿದೆ.
ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿರುವ ಟ್ರಂಪ್, ಇದು ‘ತೀವ್ರ ನಿರಾಶಾದಾಯಕ’ ಎಂದು ಕರೆದಿದ್ದಲ್ಲದೆ, ನ್ಯಾಯಾಲಯದ ಕೆಲವು ಸದಸ್ಯರ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ನ್ಯಾಯಾಲಯದ ತೀರ್ಪು ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ ಅಡಿಯಲ್ಲಿ ಸುಂಕ ವಿಧಿಸುವುದನ್ನು ನಿರ್ಬಂಧಿಸುತ್ತದೆಯೇ ಹೊರತು, ಇತರ ಕಾರ್ಯನಿರ್ವಾಹಕ ಅಧಿಕಾರಗಳನ್ನಲ್ಲ ಎಂದು ಟ್ರಂಪ್ ವಾದಿಸಿದ್ದಾರೆ.
“ನಾನು ವ್ಯಾಪಾರವನ್ನು ಧ್ವಂಸ ಮಾಡಬಲ್ಲೆ, ದೇಶವನ್ನೇ ನಾಶಮಾಡಬಲ್ಲೆ. ಅನ್ಯ ದೇಶವನ್ನೇ ಸರ್ವನಾಶ ಮಾಡಬಲ್ಲ ವಿದೇಶಿ ದಿಗ್ಬಂಧನ ಹೇರುವ ಸಾಮರ್ಥ್ಯ ಕೂಡ ನನಗಿದೆ. ನನಗೆ ಬೇಕಾದ್ದನ್ನು ನಾನು ಮಾಡಬಲ್ಲೆ, ಹೀಗಿರುವಾಗ ಕೇವಲ 1 ಡಾಲರ್ ಸುಂಕ ವಿಧಿಸಲು ಸಾಧ್ಯವಿಲ್ಲ ಎನ್ನುವುದು ಎಷ್ಟು ಹಾಸ್ಯಾಸ್ಪದ” ಎಂದು ನ್ಯಾಯಾಲಯದ ಆದೇಶವನ್ನು ಟ್ರಂಪ್ ವ್ಯಂಗ್ಯವಾಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬ್ರೆಟ್ ಕ್ಯಾವನಾ ಅವರ ಭಿನ್ನ ಅಭಿಪ್ರಾಯ ಉಲ್ಲೇಖಿಸಿದ ಟ್ರಂಪ್, “ಈ ತೀರ್ಪು ಭವಿಷ್ಯದಲ್ಲಿ ಅಧ್ಯಕ್ಷರ ಸುಂಕ ವಿಧಿಸುವ ಅಧಿಕಾರವನ್ನು ಗಮನಾರ್ಹವಾಗಿ ನಿರ್ಬಂಧಿಸುವುದಿಲ್ಲ” ಎಂಬ ಅಂಶವನ್ನು ಎತ್ತಿ ತೋರಿಸಿದ್ದಾರೆ.
“ಅವರು ಸರಿಯಾಗಿಯೇ ಹೇಳಿದ್ದಾರೆ. ವಾಸ್ತವವಾಗಿ, ನಾನು ಈ ಮೊದಲು ವಿಧಿಸುತ್ತಿದ್ದ ಸುಂಕಕ್ಕಿಂತಲೂ ಹೆಚ್ಚಿನದನ್ನು ಈಗ ವಿಧಿಸಬಲ್ಲೆ” ಎಂದಿದ್ದಾರೆ.
“ನಮ್ಮ ಬಳಿ ಪರ್ಯಾಯಗಳಿವೆ, ಅತ್ಯುತ್ತಮವಾದ ಪರ್ಯಾಯ ಮಾರ್ಗಗಳಿವೆ” ಎಂದಿರುವ ಟ್ರಂಪ್, ಅದು ಹೆಚ್ಚಿನ ಹಣವಾಗಿರಬಹುದು. ನಾವು ಹೆಚ್ಚು ಹಣವನ್ನು ಸಂಗ್ರಹಿಸುತ್ತೇವೆ ಮತ್ತು ಇದರಿಂದ ನಾವು ಇನ್ನಷ್ಟು ಪ್ರಬಲವಾಗುತ್ತೇವೆ” ಎಂದು ಹೇಳಿದ್ದಾರೆ.
“ನಮ್ಮ ದೇಶವನ್ನು ಇತರ ದೇಶಗಳ ಮತ್ತು ಕಂಪನಿಗಳ ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ರಕ್ಷಿಸಲು, ನಾವು ‘ಸೆಕ್ಷನ್ 301 ಅಡಿಯಲ್ಲಿ ಹಲವಾರು ಅನ್ಯಾಯದ ವ್ಯಾಪಾರ ತನಿಖೆಗಳನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಟ್ರಂಪ್ ತಿಳಿಸಿದ್ದಾರೆ.
ಸೆಕ್ಷನ್ 122ರ ಅಡಿಯಲ್ಲಿ ವಿಧಿಸಲಾದ ಹೊಸ ಸುಂಕಗಳ ಗರಿಷ್ಠ ಮಿತಿ 150 ದಿನಗಳು ಮತ್ತು ಶೇಕಡ 15ಕ್ಕೆ ಸೀಮಿತವಾಗಿದ್ದರೂ, ಟ್ರಂಪ್ ಮುಂದೆ ಇನ್ನೂ ವ್ಯಾಪಕವಾದ ಕ್ರಮಗಳನ್ನು ಕೈಗೊಳ್ಳುವ ಸೂಚನೆ ನೀಡಿದ್ದಾರೆ.
ಸೆಕ್ಷನ್ 232ರ ರಾಷ್ಟ್ರೀಯ ಭದ್ರತಾ ತನಿಖೆಗಳು ಅಥವಾ ಸೆಕ್ಷನ್ 301ರ ಅಡಿಯಲ್ಲಿ ಸುಂಕದ ದರಗಳು ಇನ್ನು ಹೆಚ್ಚಾಗಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ, ಅದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ನಾವು ಅವು ಎಷ್ಟಿರಬೇಕೆಂದು ಬಯಸುತ್ತೇವೆಯೋ ಅಷ್ಟನ್ನು ವಿಧಿಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
“ವರ್ಷಗಳಿಂದ ನಮ್ಮನ್ನು ನಿಜವಾಗಿಯೂ ಕೆಟ್ಟದಾಗಿ ನಡೆಸಿಕೊಂಡಿರುವ” ಕೆಲವು ದೇಶಗಳು ಕಠಿಣವಾದ ಸುಂಕಗಳನ್ನು ಎದುರಿಸಬೇಕಾಗಬಹುದು, ಆದರೆ ಇತರ ದೇಶಗಳು ಅತ್ಯಂತ ಸಮಂಜಸವಾದ ಪರಿಣಾಮವನ್ನು ಕಾಣಲಿವೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಜೇಮಿಸನ್ ಗ್ರೀರ್ ಅವರು, ಮುಂಬರುವ ದಿನಗಳಲ್ಲಿ ‘ಸೆಕ್ಷನ್ 301’ ಅಡಿಯಲ್ಲಿ ನಡೆಸಲಾಗುವ ಹೊಸ ತನಿಖೆಗಳ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಕ್ರಮಗಳನ್ನು ಅವರು “ಕಾನೂನುಬದ್ಧವಾಗಿ ಅತ್ಯಂತ ಬಲವಾದವು” ಎಂದು ಬಣ್ಣಿಸಿದ್ದಾರೆ.


