ಕ್ಷುಲ್ಲಕ ಕಾರಣಕ್ಕೆ ಇಬ್ಬರು ಹಿರಿಯ ವಯಸ್ಕರು ಸೇರಿದಂತೆ ಮೂವರು ಮುಸ್ಲಿಂ ವ್ಯಕ್ತಿಗಳ ಮೇಲೆ ದುಷ್ಕರ್ಮಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ.
ಫೆಬ್ರವರಿ 15ರಂದು ಜಿಲ್ಲೆಯ ರುದಾಯನ್ ಪಟ್ಟಣದಲ್ಲಿ ಸ್ಕೂಟರ್‌ಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಅಬ್ದುಲ್ ಸಲಾಂ, ಆರಿಫ್ ಮತ್ತು ಜಾವೇದ್ ಎಂಬವರ ಮೇಲೆ ಅಕ್ಷಯ್ ಕುಮಾರ್ (ಅಕ್ಷಯ್ ಠಾಕೂರ್ ಅಥವಾ ಛೋಟು) ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ಅಕ್ಷಯ್ ಮೂವರು ವ್ಯಕ್ತಿಗಳನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಆಧಾರ್ ಕಾರ್ಡ್ ತೋರಿಸುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ಅವರಲ್ಲೊಬ್ಬರ ಟೋಪಿಯನ್ನು ಬಲವಂತವಾಗಿ ತೆಗೆಸಿ, ಸುಮಾರು 200 ಮೀಟರ್‌ಗಳವರೆಗೆ ಬೆನ್ನಟ್ಟಿ ಹೊಡೆದಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಬದೌನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 115(2) (ಹಲ್ಲೆ), 353 (ಕಿಡಿಗೇಡಿತನ) ಮತ್ತು 351(3) (ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ವಿಡಿಯೋ ಆಧರಿಸಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬದೌನ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹೃದೇಶ್ ಕಟಾರಿಯಾ ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಹಲ್ಲೆಗೊಳಗಾದವರು ರಂಝಾನ್ ತಿಂಗಳಾದ ಕಾರಣ ಸ್ವದಖ (ಸಹಾಯ) ಯಾಚಿಸಿ ಮನೆ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ ಎಂದು ದೈನಿಕ್ ಜಾಗರಣ್ ವರದಿ ಹೇಳಿದೆ.


