ದುಬೈ: ‘ಅಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಬುಧವಾರ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಟ್ಜ್, ‘ಇಸ್ರೇಲ್ ಅನ್ನು ನಾಶಪಡಿಸುವ, ಅಮೆರಿಕ ಮತ್ತು ಇತರ ದೇಶಗಳಿಗೆ ಬೆದರಿಕೆ ಒಡ್ಡುವ, ತಮ್ಮದೇ ಜನರನ್ನು ಹತ್ತಿಕ್ಕುವ ಕಾರ್ಯವನ್ನು ಮುಂದುವರಿಸುವ ಇರಾನ್ ಭಯೋತ್ಪಾದಕ ಆಡಳಿತವು ಯಾರನ್ನೇ ನಾಯಕನನ್ನಾಗಿ ನೇಮಿಸಿದರೂ ಅವರನ್ನು ಸಂಹಾರ ಮಾಡುತ್ತೇವೆ’ ಎಂದು ಬರೆದುಕೊಂಡಿದ್ದಾನೆ.
ಈ ನಡುವೆ, ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊಂದಿರುವ ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ಗೆ ಸಂಬಂಧಿಸಿದ ಕಟ್ಟಡವೊಂದನ್ನು ಇಸ್ರೇಲ್ ಮಂಗಳವಾರ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಕಳೆದ ಶನಿವಾರ ಇಸ್ರೇಲ್–ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಉತ್ತರಾಧಿಕಾರಿಯಾಗಿ ಅವರ ಮಗ ಮೊಜತಬಾ ಖಮೇನಿ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ವರದಿಗಳಾಗಿವೆ. ಆದರೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ.


