ಬಳ್ಳಾರಿ ನಗರದ ‘ಗುರುಕುಲ ವಸತಿ ಶಾಲೆ’ಯಲ್ಲಿ ಶನಿವಾರ (ಮಾ.7) ರಾತ್ರಿ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಗಳ ಮೇಲೆ ರಾಡ್, ಸ್ಕ್ರೂ ಡ್ರೈವರ್‌ನಿಂದ ದಾಳಿ ನಡೆಸಿದ್ದು, ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಎಂಟು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಆಂಧ್ರ ಪ್ರದೇಶದ ಅದವಾನಿ ಮೂಲದ ಹೇಮಂತ್ ಮೃತ ಬಾಲಕ ಎಂದು ತಿಳಿದು ಬಂದಿದೆ. ಮೃತದೇಹವನ್ನು ವಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.
ರಾತ್ರಿ ಊಟದ ಬಳಿಕ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಮಲಗಿದ್ದರು. ಈ ವೇಳೆ ಆರೋಪಿ ವಿದ್ಯಾರ್ಥಿ ಮಂಚದ ರಾಡ್, ಸ್ಕ್ರೂ ಡ್ರೈವರ್ ಸೇರಿದಂತೆ ವಿವಿಧ ವಸ್ತುಗಳಿಂದ ಸಹಪಾಠಿಗಳ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿ ಹೇಮಂತ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ವರದಿಗಳು ಹೇಳಿವೆ.
ತಡೆಯಲು ಬಂದ ಹಾಸ್ಟೆಲ್ ವಾರ್ಡನ್ ಮೇಲೂ ವಿದ್ಯಾರ್ಥಿ ದಾಳಿ ನಡೆಸಿದ್ದಾನೆ. ಇದರಿಂದ ಅವರೂ ಗಾಯಗೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು 9 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ವರದಿಗಳು ವಿವರಿಸಿವೆ.


