ಎಮ್ಮೆಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನಿಗೆ ಥಳಿಸಿ, ಸೆಗಣಿ ತಿನ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ವಘೋಷಿತ ಗೋರಕ್ಷಕರನ್ನು ಮಹಾರಾಷ್ಟ್ರದ ಪುಣೆ ನಗರ ಪೊಲೀಸರು ಬಂಧಿಸಿದ್ದಾರೆ.
ಬಿಪಾಶಾ ಅಲಿಯಾಸ್ ಆಕಾಶ್ ಮಾಣಿಕಂ ಮತ್ತು ಹೇಮಂತ್ ಗಾಯಕ್ವಾಡ್ ಬಂಧಿತರು. ಆರೋಪಿಗಳ ವಿರುದ್ಧ ಪುಣೆಯ ಅಂಬೇಗಾಂವ್ ಪೊಲೀಸ್ ಠಾಣೆಯಲ್ಲಿ ಭಾನುವಾರ (ಮಾ.8) ಎಫ್‌ಐಆರ್ ದಾಖಲಾಗಿತ್ತು.
“ನ್ಯಾಯಾಲಯ ಇಬ್ಬರನ್ನೂ ಮಾರ್ಚ್ 10ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಬೇಕಾಗಿದೆ” ಎಂದು ಅಂಬೇಗಾಂವ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಶರದ್ ಜೈನ್ ಹೇಳಿದ್ದಾರೆ.
ಪೊಲೀಸರ ಪ್ರಕಾರ, ಸ್ವಯಂ ಘೋಷಿತ ಗೋರಕ್ಷಕರ ಗುಂಪೊಂದು ಮಾರ್ಚ್ 6ರಂದು ಎಮ್ಮೆಗಳನ್ನು ಸಾಗಿಸುತ್ತಿದ್ದ ಟ್ರಕ್‌ನೊಂದಿಗೆ ಚಾಲಕನನ್ನು ಅಂಬೇಗಾಂವ್ ಪೊಲೀಸ್ ಠಾಣೆಗೆ ಕರೆತಂದಿತ್ತು.
ಪರಿಶೀಲನೆಯ ನಂತರ, ಪೊಲೀಸರು ಟ್ರಕ್ ಚಾಲಕನ ವಿರುದ್ಧ ಎಮ್ಮೆಗಳನ್ನು ಹಿಂಸಾತ್ಮಕವಾಗಿ ಸಾಗಿಸಿದ ಆರೋಪದ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು. ಜೊತೆಗೆ, ಟ್ರಕ್ ಚಾಲಕ ಸಲ್ಲಿಸಿದ್ದ ದೂರಿನ ಮೇರೆಗೆ ಸ್ವಘೋಷಿತ ಗೋರಕ್ಷಕರ ವಿರುದ್ದ ಟ್ರಕ್ ಚಾಲಕನಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಸ್ವಘೋಷಿತ ಗೋರಕ್ಷಕರು ಟ್ರಕ್ ಚಾಲಕನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ, ಆತನನ್ನು ಥಳಿಸಿ, ಸೆಗಣಿ ತಿನ್ನಿಸಿದ ವಿಡಿಯೋವನ್ನು ಭಾನುವಾರ ನೋಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಟ್ರಕ್ ಚಾಲಕ ತನ್ನ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.
ಆದರೂ, ವಿಡಿಯೋ ಪರಿಗಣಿಸಿ ಸ್ವಘೋಷಿತ ಗೋರಕ್ಷಕರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 196 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು), 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು), 115 (2) (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 3(5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.


