ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂದೇಶ್ ಬಿ.ಜಿ ವಿರುದ್ಧ ಮಹಿಳೆಯರಿಗೆ ಲೈಂಗಿಕ, ಮಾನಸಿಕ ಕಿರುಕುಳ ನೀಡಿದ್ದಲ್ಲದೆ, ಹಣ ಕೊಡುವಂತೆ ಪೀಡಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಇಲಾಖಾ ತನಿಖೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಉತ್ತರ ಉಪ ವಿಭಾಗದ ಎಸಿಪಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.
ಮಹಿಳೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದನ್ನು ಗಮನಿಸಿದ ರಾಜ್ಯ ಮಹಿಳಾ ಆಯೋಗ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕಮಿಷನರ್‌ಗೆ ಸೂಚಿಸಿತ್ತು ಎಂದು ವರದಿ ಉಲ್ಲೇಖಿಸಿದೆ.
“ನನ್ನ ಗಂಡನ ವಿರುದ್ಧ ಸುಳ್ಳು ಪ್ರಕರಣವೊಂದು ದಾಖಲಾಗಿತ್ತು. ಆ ಸಂಬಂಧ ಪೊಲೀಸರು ಅವರನ್ನು ಬಂಧಿಸಿದ್ದರು. ಗಂಡನನ್ನು ಬಿಡುಗಡೆ ಮಾಡಬೇಕಾದರೆ ತನ್ನ ಜೊತೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಇನ್‌ಸ್ಪೆಕ್ಟರ್ ಸಂದೇಶ್ ಒತ್ತಾಯಿಸಿದ್ದಾರೆ. 25 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಒಪ್ಪದಿದ್ದರೆ ನನ್ನ ಗಂಡನ ವಿರುದ್ದ ರೌಡಿ ಶೀಟ್ ತೆರೆಯುವುದಾಗಿ ಬೆದರಿಕೆ ಒಡ್ಡಿದ್ದಾರೆ” ಎಂದು ಮಹಿಳೆಯೊಬ್ಬರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
“ಇನ್‌ಸ್ಪೆಕ್ಟರ್ ಸಂದೇಶ್ ನನಗೆ ಮಾತ್ರವಲ್ಲದೆ ಇತರ ಹಲವು ಮಹಿಳೆಯರಿಗೆ ಲೈಂಗಿಕ, ಮಾನಸಿಕ ಕಿರುಕುಳ ನೀಡಿದ್ದಾರೆ. ನಾನು ಪೊಲೀಸ್ ಠಾಣೆಗೆ ಹೋದಾಗ ವಾಹನ ನಿಲುಗಡೆ ಜಾಗದಲ್ಲಿ ನನಗೆ ಬೆದರಿಕೆ ಹಾಕಿದ್ದಾರೆ. ಅವರು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಲಂಚ ಕೊಟ್ಟು ಪೊಲೀಸ್ ಹುದ್ದೆ ಗಿಟ್ಟಿಸಿಕೊಂಡಿದ್ದಾಗಿ ಹೇಳಿದ್ದಾರೆ. ನೀನು ಯಾರಿಗೆ ದೂರು ಕೊಟ್ಟರೂ ನನಗೆ ಏನೂ ಆಗುವುದಿಲ್ಲ ಎಂದು ಬೆದರಿಸಿದ್ದಾರೆ” ಎಂದು ಮಹಿಳೆ ಟಿವಿ ವಾಹಿನಿಗಳಲ್ಲಿ ಆರೋಪ ಮಾಡಿದ್ದಾರೆ.
ಇನ್‌ಸ್ಪೆಕ್ಟರ್ ಸಂದೇಶ್ ಮೊಬೈಲ್‌ನಲ್ಲಿ ಹಾಡು ಹಾಕಿ ಮಹಿಯೊಬ್ಬರೊಂದಿಗೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸುವ, ಅವರ ಕೈಯನ್ನು ಬಲವಂತವಾಗಿ ಹಿಡಿದು ಡ್ಯಾನ್ಸ್ ಮಾಡುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮಾಧ್ಯಮಗಳು ಪ್ರಕಟಿಸಿರುವ ಮತ್ತೊಂದು ಸಿಸಿಟಿವಿ ವಿಡಿಯೋದಲ್ಲಿ ಸಂದೇಶ್ ಅವರು ರಾತ್ರಿ ಹೊತ್ತು ಮನೆಯೊಂದರ ಗೇಟ್ ಹಾರಿ ಒಳ ಹೋಗುವ ದೃಶ್ಯವಿದೆ. ಇವೆಲ್ಲವೂ ಸಂತ್ರಸ್ತ ಮಹಿಳೆಯರು ಸಂಗ್ರಹಿಸಿದ ಸಾಕ್ಷ್ಯಗಳು ಎಂದು ಮಹಿಳೆ ತಿಳಿಸಿದ್ದಾರೆ.
“ನನಗೆ ಇನ್‌ಸ್ಪೆಕ್ಟರ್ ಸಂದೇಶ್ ಕಿರುಕುಳ ನೀಡುತ್ತಿದ್ದ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರಿಗೆ ಪತ್ರ ಬರೆದು ಹೇಳಿಕೊಂಡಿದ್ದೇನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೊಲೀಸ್ ಆಯುಕ್ತರಿಗೆ ಬರೆದ ಪತ್ರಕ್ಕೆ ವಿಷಯವನ್ನು ವಿಲೇ ಮಾಡಲಾಗಿದೆ ಎಂದು ಹಿಂಬರಹ ಕೊಟ್ಟಿದ್ದಾರೆ. ಆದರೆ, ಒಮ್ಮೆಯೂ ನನ್ನನ್ನು ವಿಚಾರಣೆ ಮಾಡಿಲ್ಲ” ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಇನ್‌ಸ್ಪೆಕ್ಟರ್ ಸಂದೇಶ್‌ಗೆ ಸಂಬಂಧಪಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆತನ ವಿರುದ್ದ ಕಠಿಣ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿ ಬಂದಿದೆ.
ಮಹಿಳೆ ದೂರು ನೀಡಿಲ್ಲ : ಕಮಿಷನರ್
“ಇನ್‌ಸ್ಪೆಕ್ಟರ್ ಸಂದೇಶ್ ಬಿ.ಜಿ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಮಹಿಳೆ ನನಗೆ ಯಾವುದೇ ದೂರು ನೀಡಿಲ್ಲ. ಯಾವುದೇ ಸಂತ್ರಸ್ತ ವ್ಯಕ್ತಿ ಬಂದು ದೂರು ನೀಡಿದರೂ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಇನ್‌ಸ್ಪೆಕ್ಟರ್ ವಿರುದ್ದ ಮಾಡಲಾದ ಆರೋಪಗಳ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ನಗರ ಉತ್ತರ ಉಪವಿಭಾಗ ಎಸಿಪಿಯವರಿಗೆ ಸೂಚಿಸಿದ್ದೇನೆ. ಎಸಿಪಿಯಿಂದ ವರದಿ ಬಂದ ಬಳಿಕ ಸೂಕ್ತ ಕ್ರಮಕೈಗೊಳ್ಳಲಾಗುವುದು” ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿರುವುದಾಗಿ ವರದಿಯಾಗಿದೆ.


