ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
“ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ ಟ್ರಂಪ್ ಈ ಯುದ್ಧವನ್ನು ಪ್ರಾರಂಭಿಸಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನ್ನ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಈ ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಜೋ ಕೆಂಟ್, ಮಂಗಳವಾರ (ಮಾ. 17) ತಮ್ಮ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಲ್ಲಿಸಿದ್ದಾರೆ.
ಅಮೆರಿಕದ ಪ್ರಮುಖ ಗುಪ್ತಚರ ಸಂಸ್ಥೆಯ ಮುಖ್ಯಸ್ಥರೊಬ್ಬರು ಯುದ್ಧದ ನೀತಿಯನ್ನು ವಿರೋಧಿಸಿ ಅಧಿಕಾರದಿಂದ ಕೆಳಗಿಳಿದಿರುವುದು ಈಗ ಜಾಗತಿಕ ಚರ್ಚೆಯ ವಿಷಯವಾಗಿದೆ. ಇದು ಡೊನಾಲ್ಡ್ ಟ್ರಂಪ್‌ಗೆ ತೀವ್ರ ಮುಖಭಂಗ ಉಂಟು ಮಾಡಿದೆ ಎಂದು ಕೆಲ ವರದಿಗಳು ಹೇಳಿವೆ.
ಜೋ ಕೆಂಟ್ ತಮ್ಮ ರಾಜೀನಾಮೆ ಪತ್ರದ ಪ್ರತಿಯನ್ನು ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ರಂಪ್ ಅವರನ್ನು ಉದ್ದೇಶಿಸಿ ಬರೆದ ಈ ಪತ್ರದಲ್ಲಿ, ಇರಾನ್ ವಿರುದ್ಧದ ಯುದ್ಧದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ಯುದ್ಧವು ನೈತಿಕವಾಗಿ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ತಪ್ಪು” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಇರಾನ್ ಜೊತೆಗಿನ ಯುದ್ದ ನನ್ನ ಆತ್ಮ ಸಾಕ್ಷಿ ಒಪ್ಪುವುದಿಲ್ಲ. ಇರಾನ್‌ನಿಂದ ನಮಗೆ ತಕ್ಷಣಕ್ಕೆ ಯಾವುದೇ ಬೆದರಿಕೆ ಇರಲಿಲ್ಲ. ಇಸ್ರೇಲ್‌ನ ಒತ್ತಡಕ್ಕೆ ಮಣಿದು ಈ ಯುದ್ಧ ಪ್ರಾರಂಭಿಸಲಾಗಿದೆ” ಎಂದಿದ್ದಾರೆ.
ಯಾರು ಈ ಜೋ ಕೆಂಟ್?
ಜೋ ಕೆಂಟ್ (45 ವರ್ಷ) ಅವರು ಈ ಹಿಂದೆ ರಾಜಕೀಯ ಅಭ್ಯರ್ಥಿಯಾಗಿದ್ದವರು ಮತ್ತು ತೀವ್ರ ಬಲಪಂಥೀಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದವರು. ಸೇನೆಯಲ್ಲಿ ‘ಗ್ರೀನ್ ಬೆರೆಟ್’ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಅವರು, 2022 ಮತ್ತು 2024ರಲ್ಲಿ ವಾಷಿಂಗ್ಟನ್ ರಾಜ್ಯದಿಂದ ಕಾಂಗ್ರೆಸ್‌ಗೆ ಸ್ಪರ್ಧಿಸಿ ಸೋತಿದ್ದರು. ಅವರ ಬಲಪಂಥೀಯ ಒಲವು ಮತ್ತು ಕೆಲವು ವಿವಾದಾತ್ಮಕ ಗುಂಪುಗಳೊಂದಿಗಿನ ಸಂಬಂಧವು ಅವರ ರಾಜಕೀಯ ಜೀವನದಲ್ಲಿ ಸದಾ ಚರ್ಚೆಯ ವಿಷಯವಾಗಿತ್ತು.
ಅಮೆರಿಕ ಸೇನೆಯ ವಿಶೇಷ ಪಡೆಗಳ ಮಾಜಿ ಸೈನಿಕರಾಗಿರುವ ಕೆಂಟ್, ಇರಾಕ್ ಯುದ್ಧ ಸೇರಿದಂತೆ ಒಟ್ಟು 11 ಬಾರಿ ಸಕ್ರಿಯ ಯುದ್ಧ ಭೂಮಿಗಳಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 20 ವರ್ಷಗಳ ಕಾಲ ಸೈನ್ಯದಲ್ಲಿದ್ದ ಅವರು ‘ಚೀಫ್ ವಾರಂಟ್ ಆಫೀಸರ್’ ಆಗಿ ನಿವೃತ್ತರಾದರು. ಇರಾಕ್ ಮಾತ್ರವಲ್ಲದೆ ಯೆಮನ್ ಮತ್ತು ಉತ್ತರ ಆಫ್ರಿಕಾದಲ್ಲೂ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಸೈನ್ಯದಿಂದ ನಿವೃತ್ತರಾದ ನಂತರ, ಅವರು ಸಿಐಎನಲ್ಲಿ ಪ್ಯಾರಾಮಿಲಿಟರಿ ಅಧಿಕಾರಿಯಾಗಿ ಕೆಲಸ ಮಾಡಿದ್ದರು.
ಕೆಂಟ್ ಅವರ ಮೊದಲ ಪತ್ನಿ ಶಾನನ್ ಕೆಂಟ್ ಅಮೆರಿಕ ನೌಕಾಪಡೆಯ ಕ್ರಿಪ್ಟೋಲಾಜಿಕ್ ಟೆಕ್ನಿಷಿಯನ್ ಆಗಿದ್ದರು. ಅವರು 2019ರಲ್ಲಿ ಸಿರಿಯಾದ ಮನ್ಬಿಜ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದರು.
ಶಾನನ್ ಅವರು ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದರು. ಈ ಘಟನೆಯು ಜೋ ಕೆಂಟ್ ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರಿದ್ದು, ಅವರು ಇರಾನ್ ವಿರುದ್ಧದ ಯುದ್ಧವನ್ನು ವಿರೋಧಿಸಿ ರಾಜೀನಾಮೆ ನೀಡಲು ಒಂದು ಮುಖ್ಯ ಕಾರಣ ಎನ್ನಲಾಗ್ತಿದೆ.
ಸೇನೆಯಿಂದ ಹೊರಬಂದ ನಂತರ, ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಕೆಂಟ್ ಕೇಂದ್ರ ಗುಪ್ತಚರ ಸಂಸ್ಥೆಯಲ್ಲಿ (ಸಿಐಎ) ಪ್ಯಾರಾಮಿಲಿಟರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 20 ವರ್ಷಗಳ ಕಾಲ ಸೈನ್ಯದಲ್ಲಿ ‘ಗ್ರೀನ್ ಬೆರೆಟ್’ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದ ಅವರು, ಸಿಐಎನಲ್ಲಿನ ತಮ್ಮ ವೃತ್ತಿಜೀವನದ ನಂತರ ವಾಷಿಂಗ್ಟನ್ ರಾಜ್ಯದಿಂದ ಕಾಂಗ್ರೆಸ್‌ಗೆ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು.
ಕಾಂಗ್ರೆಸ್‌ನಲ್ಲಿ ನೈಋತ್ಯ ವಾಷಿಂಗ್ಟನ್ ರಾಜ್ಯವನ್ನು ಪ್ರತಿನಿಧಿಸಲು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಎರಡು ಬಾರಿ ಕೆಂಟ್ ಪ್ರಚಾರ ನಡೆಸಿದ್ದರು. ಆದರೆ 2022 ಮತ್ತು 2024 ಎರಡೂ ಬಾರಿಯೂ ಅವರು ಸೆಂಟ್ರಿಸ್ಟ್ ಡೆಮೋಕ್ರಾಟ್ ಅಭ್ಯರ್ಥಿ ಮೇರಿ ಗ್ಲುಸೆನ್‌ಕ್ಯಾಂಪ್ ಪೆರೆಜ್ ವಿರುದ್ಧ ಸೋಲನುಭವಿಸಿದರು.
ಜೋ ಕೆಂಟ್ ಅವರು ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದಾಗಲೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲ ಗಳಿಸಿದ್ದರು. ಆದಾಗ್ಯೂ, ಅವರು ಹಲವು ವಿವಾದಗಳಿಗೆ ಸಿಲುಕಿದ್ದರು. ವಿಶೇಷವಾಗಿ, ತೀವ್ರ ಬಲಪಂಥೀಯ ಗುಂಪಾದ ‘ಪ್ರೌಡ್ ಬಾಯ್ಸ್’ ಸದಸ್ಯರೊಬ್ಬರಿಗೆ ಕನ್ಸಲ್ಟಿಂಗ್ ಫೀಸ್ ಪಾವತಿಸಿದ್ದು ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿತ್ತು.
ಕಟ್ಟರ್ ಬಲಪಂಥೀಯ ಜೋ ಕೆಂಟ್
ಜೋ ಕೆಂಟ್ ಅವರನ್ನು ರಾಜಕೀಯ ವಿಶ್ಲೇಷಕರು ಮತ್ತು ವಿರೋಧಿಗಳು ಸಾಮಾನ್ಯವಾಗಿ ‘ಕಟ್ಟರ್ ಬಲಪಂಥೀಯ’ ಎಂದೇ ಗುರುತಿಸುತ್ತಾರೆ.
ಏಕೆಂದರೆ, ಅವರು ಈ ಹಿಂದೆ ‘ಪ್ರೌಡ್ ಬಾಯ್ಸ್’ ನಂತಹ ತೀವ್ರಗಾಮಿ ಬಲಪಂಥೀಯ ಗುಂಪಿನ ಸದಸ್ಯರಿಗೆ ಕನ್ಸಲ್ಟಿಂಗ್ ಶುಲ್ಕ ಪಾವತಿಸಿದ್ದು ದೊಡ್ಡ ವಿವಾದವಾಗಿತ್ತು.
ಕೆಂಟ್ ಅಮೆರಿಕದ ‘MAGA’ (Make America Great Again) ಆಂದೋಲನದ ಪ್ರಬಲ ಬೆಂಬಲಿಗರು. ಅವರ ವಿಚಾರಧಾರೆಗಳು ವಲಸೆ ವಿರೋಧಿ ಮತ್ತು ಅಮೆರಿಕದ ಹಿತಾಸಕ್ತಿಗೆ ಮಾತ್ರ ಒತ್ತು ನೀಡುವ ರಾಷ್ಟ್ರೀಯತೆಯನ್ನು ಒಳಗೊಂಡಿವೆ.
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ವಾದವನ್ನು ಅವರು ಬೆಂಬಲಿಸಿದ್ದರು. ಶ್ವೇತವರ್ಣೀಯ ರಾಷ್ಟ್ರೀಯವಾದಿ ನಿಕ್ ಫ್ಯುಯೆಂಟೆಸ್ ಅವರೊಂದಿಗೆ ಅವರು ನಡೆಸಿದ ಸಂಭಾಷಣೆಯ ಬಗ್ಗೆಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಕೆಂಟ್ ಅವರು ತಾವು ಕೇವಲ ‘ಅಮೆರಿಕ ಫಸ್ಟ್’ ನೀತಿಯನ್ನು ಬೆಂಬಲಿಸುವ ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುತ್ತಾರೆ. ಈಗ ಅವರು ಇರಾನ್ ಯುದ್ಧದ ವಿರುದ್ಧ ರಾಜೀನಾಮೆ ನೀಡಿರುವುದು ಅವರ ಬಲಪಂಥೀಯ ನಿಲುವಿನಲ್ಲೇ ಇರುವ ‘ಹೊರದೇಶದ ಯುದ್ಧಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಬಾರದು’ ಎಂಬ ಸಿದ್ಧಾಂತದ ಭಾಗವಾಗಿದೆ ಎಂದು ವರದಿಗಳು ಹೇಳುತ್ತವೆ.


